ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಫ್ರೀಲ್ಯಾನ್ಸ್ ಹೆಚ್.ಆರ್ ಕನ್ಸಲ್ಟೆಂಟ್ ಒಬ್ಬರು ಮನೆಗೆಲಸದವರ ಸಂಬಳದ ಬಗ್ಗೆ ನೀಡಿದ “ಅಮಾನವೀಯ” ಹೇಳಿಕೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮನೆಗೆಲಸದವರಿಗೆ ನೀಡುವ ಸಂಬಳವನ್ನು “ಎಂಜಿನಿಯರಿಂಗ್ ಪದವೀಧರರ” ಸಂಬಳಕ್ಕೆ ಹೋಲಿಸಿದ ಇವರ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ವಸತಿ ಸಮುಚ್ಚಯದ (Apartment) ಆ್ಯಪ್‌ನಲ್ಲಿ ಪೋಸ್ಟ್ ಹಾಕಿದ್ದ ಈ ವ್ಯಕ್ತಿ, ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ಬರಲು ಮನೆಗೆಲಸದವರು ಬೇಕಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಎರಡು ಬಾರಿ ಕೆಲಸಕ್ಕೆ ಬರುವವರಿಗೆ ತಾವು ಕೇವಲ 3,500 ರೂ. ನೀಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ, “ಒಂದು ಹೊತ್ತಿನ ಕೆಲಸಕ್ಕೆ 3,500 ರೂ. ಕೇಳುವವರನ್ನು ನನ್ನ ಬಳಿ ಕಳುಹಿಸಬೇಡಿ, 2,500 ರೂ. ಸರಿಯಾದ ದರ” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದೆ.
ಈ ಕಮ್ಮಿ ಸಂಬಳದ ದರವನ್ನು ಸಮರ್ಥಿಸಿಕೊಳ್ಳಲು ಅವರು ವಿಚಿತ್ರ ಲೆಕ್ಕಾಚಾರ ನೀಡಿದ್ದರು. “ಒಂದು ವೇಳೆ ಮನೆಗೆಲಸದವರು ದಿನಕ್ಕೆ 10 ಮನೆಗಳಲ್ಲಿ ಕೆಲಸ ಮಾಡಿದರೆ ಅವರಿಗೆ ತಿಂಗಳಿಗೆ 25,000 ರೂ. ಸಿಗುತ್ತದೆ. ಇದು ಬಿಪಿಒ (BPO) ನೌಕರರು ಅಥವಾ ಎಂಜಿನಿಯರಿಂಗ್ ಪದವೀಧರರು ಪಡೆಯುವ ಸಂಬಳಕ್ಕಿಂತ ಹೆಚ್ಚು. ಆದ್ದರಿಂದ ನಾವು ರೇಟ್ ಕಂಟ್ರೋಲ್ ಮಾಡಬೇಕು,” ಎಂದು ನಿವಾಸಿಗಳಿಗೆ ಕರೆ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!
ಈ ಪೋಸ್ಟ್ ರೆಡಿಟ್ (Reddit) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಜನರು ಇವರ ನಡೆಯನ್ನು “ಕೀಳುಮಟ್ಟದ್ದು” ಎಂದು ಟೀಕಿಸಿದ್ದಾರೆ. “70 ಸಾವಿರ ಬಾಡಿಗೆ ಇರುವ ಫ್ಲಾಟ್‌ನಲ್ಲಿ ವಾಸಿಸುವ ಇವರು, ಬಡವರ ಹೊಟ್ಟೆ ಮೇಲೆ ಹೊಡೆಯುವ ಲೆಕ್ಕಾಚಾರ ಮಾಡುತ್ತಿದ್ದಾರೆ” ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:51 pm, Fri, 15 May 26
