ಏಕದಿನ ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 11 ಎಸೆತಗಳಲ್ಲಿ ಎಂಬುದು ವಿಶೇಷ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಒದಗಿಸಿದ್ದಾರೆ.
ಅದರಲ್ಲೂ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಶ್ರೀಲಂಕಾ ಬೌಲರ್ಗಳನ್ನು ಚೆಂಡಾಡಿದರು. ಪರಿಣಾಮ ಮೊದಲ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳು ಮೂಡಿಬಂದವು. ಈ ಮೂಲಕ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸಿಡಿಲಬ್ಬರದ ಅರ್ಧಶತಕದೊಂದಿಗೆ ಶ್ರೀಲಂಕಾದ ಕೌಶಲ್ಯ ವೀರರತ್ನೆ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
- 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ (ಏಕದಿನ) ಪಂದ್ಯದಲ್ಲಿ ಕೌಶಲ್ಯ ವೀರರತ್ನೆ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
- ಈ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಶ್ರೀಲಂಕಾ ಎ ವಿರುದ್ಧ ಕೇವಲ 11 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಎಬಿ ಡಿವಿಲಿಯರ್ಸ್ ದಾಖಲೆ ಉಡೀಸ್:
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಇದೀಗ ಲಿಸ್ಟ್ ಎ ಪಂದ್ಯದ ಮೂಲಕ ಈ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ಉಡೀಸ್ ಮಾಡಿದ್ದಾರೆ.
- 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
- 2025 ರಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ನ ಮ್ಯಾಥ್ಯೂ ಫೋರ್ಡ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಎಬಿಡಿ ದಾಖಲೆಯನ್ನು ಸರಿಗಟ್ಟಿದ್ದರು.
ಇದೀಗ ಈ ಇಬ್ಬರ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಹಿಂದಿಕ್ಕಿದ್ದಾರೆ. ಅಂದರೆ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ್ ಎ ನಡುವಣ ಟೂರ್ನಿಯು ಅಂತಾರಾಷ್ಟ್ರೀಯ ಪಂದ್ಯಾವಳಿ. ಇದರೊಂದಿಗೆ ದ್ವಿರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ.
ಇದನ್ನೂ ಓದಿ: 13 ಸಿಕ್ಸ್, 11 ಫೋರ್: ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ ಮಿಚೆಲ್ ಓವನ್
ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 7 ಓವರ್ಗಳ ಮುಕ್ತಾಯದ ವೇಳೆಗೆ 116 ರನ್ ಕಲೆಹಾಕಿದೆ.