ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಕುರಿತ ಚರ್ಚೆ ಮತ್ತೊಮ್ಮೆ ಜೋರಾಗಿರುವ ನಡುವೆಯೇ, ಗುರುವಾರ ರಾತ್ರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬೆಂಬಲಿಗ ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉನ್ನತ ಮಟ್ಟದ ಔತಣಕೂಟ ಸಭೆ ನಡೆಸಿದ್ದಾರೆ. ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಸಭೆ ನಡೆದಿದ್ದರೂ, ನಾಯಕತ್ವದ ಬದಲಾವಣೆ ಕುರಿತ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಬೆಂಬಲಿಗರು ಒಟ್ಟು ಸುಮಾರು 60ಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿದ್ದರು. ಇವರಲ್ಲಿ ಬರೋಬ್ಬರಿ 40 ಮಂದಿ ಶಾಸಕರು ಔತಣಕೂಟದಲ್ಲಿ ಭಾಗವಹಿಸಿದ್ದಾರೆ. ಸುಮಾರು 20 ಮಂದಿ ಶಾಸಕರು ಮದುವೆ, ವಿದೇಶ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಂದ ಗೈರಾಗಿದ್ದಾರೆ ಎನ್ನಲಾಗಿದೆ. ಗೈರಾದ ಶಾಸಕರನ್ನು ಮುಂದಿನ ಸಭೆಗೆ ಸೇರಿಸಲು ಬೆಂಬಲಿಗರು ಯೋಜನೆ ರೂಪಿಸಲಾಗುತ್ತಿದೆ.
ಸಿಎಂ ಗಾದಿ ಕುರಿತು ಗಂಭೀರ ಚರ್ಚೆ
ಔತಣಕೂಟ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತಂತೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ನಾಯಕರು ನಿರ್ಧಾರಕ್ಕೆ ಮುಂದಾಗದಿದ್ದರೆ ಗಟ್ಟಿಯಾದ ಹೆಜ್ಜೆ ಇಡುವ ಬಗ್ಗೆ ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಗೊಂದಲಕ್ಕೆ ಅಂತಿಮ ತೆರೆ ಎಳೆಯಬೇಕು. ಈ ಗೊಂದಲದ ವಾತಾವರಣದಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀಳುತ್ತಿದ್ದು, ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತಿದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದಿವೆ. ಮಾತು ಕೊಟ್ಟಿದ್ದರೆ, ಆ ಮಾತು ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ.
ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ
ಸಭೆಯಲ್ಲಿ ಮುಂದಿನ ರಾಜಕೀಯ ಹೆಜ್ಜೆಗಳ ಕುರಿತು ವಿಶ್ಲೇಷಣಾತ್ಮಕ ಚರ್ಚೆ ನಡೆದಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯೂ ರೂಪಿಸಲಾಗಿದೆ ಎನ್ನಲಾಗಿದೆ. ದೆಹಲಿಯ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊಳ್ಳಲೇಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.
ಅಧಿವೇಶನದ ಸಂದರ್ಭದಲ್ಲೇ ಶಕ್ತಿಪ್ರದರ್ಶನ ನಡೆಸುವ ಸಾಧ್ಯತೆಯೂ ತಳ್ಳಿಹಾಕಲಾಗದು ಎಂದು ಮೂಲಗಳು ತಿಳಿಸಿವೆ. ಬಜೆಟ್ ಅಧಿವೇಶನದ ವೇಳೆಯೇ ಮತ್ತೆ ಸಭೆ ಸೇರಲು ಯೋಜಿಸಲಾಗಿದೆ.
ದೆಹಲಿ ಯಾತ್ರೆಗೆ ಶಾಸಕರ ಸಿದ್ಧತೆ
ಡಿಕೆ ಶಿವಕುಮಾರ್ ಬೆಂಬಲಿಗರು ಶೀಘ್ರದಲ್ಲೇ ದೆಹಲಿ ಭೇಟಿ ಮಾಡುವ ಸಾಧ್ಯತೆ ಇದೆ. 70ಕ್ಕೂ ಹೆಚ್ಚು ಶಾಸಕರು ಒಟ್ಟಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನ ಕುರಿತ ನಿರ್ಧಾರಕ್ಕೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮೊದಲು ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಡೆಸಿ ನಂತರ ದೆಹಲಿ ಪ್ರವಾಸಕ್ಕೆ ಮುಹೂರ್ತ ನಿಗದಿಪಡಿಸುವ ಯೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ಮತ್ತೊಮ್ಮೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತಷ್ಟು ಚುರುಕುಗೊಳ್ಳುವ ಸೂಚನೆಗಳು ಕಂಡುಬರುತ್ತಿವೆ.
