ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಕಳೆದ ವರ್ಷ ಸಿನಿಮಾ ಚಿತ್ರೀಕರಣದ ವೇಳೆ ‘ನಾನು ದಿನಕ್ಕೆ 8 ಗಂಟೆಗಳು ಮಾತ್ರ ಕೆಲಸ ಮಾಡೋದು’ ಎಂದು ಖಡಕ್ ಆಗಿ ಬೇಡಿಕೆ ಇಟ್ಟಿದ್ದರಿಂದ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಈಗ ಈ ವಿಷಯದ ಕುರಿತು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ದೀಪಿಕಾ ಪರವಾಗಿ ಧ್ವನಿ ಎತ್ತಿದ್ದಾರೆ. ಇತ್ತೀಚಿನ ಒಂದು ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಕಂಗನಾ ರಣಾವತ್ ಅವರು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವು ಅನುಭವದೊಂದಿಗೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಪ್ರಭಾಸ್ ನಟನೆಯ ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಿಂದ ದೀಪಿಕಾ ಹೊರಬಂದಿದ್ದರು. ತಾವು ತಾಯಿ ಆಗಿರುವುದರಿಂದ ಮಗುವಿನ ಆರೈಕೆಗಾಗಿ ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಅವರು ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್ನಿಂದಲೂ ಹಿಂದೆ ಸರಿದಿದ್ದರು ಎಂಬ ಸುದ್ದಿ ಇದೆ. ದೀಪಿಕಾ ಅವರ ಈ ಬೇಡಿಕೆಯನ್ನು ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಸಿನಿಮಾ ಕ್ಷೇತ್ರದಲ್ಲಿ ಇದು ಅಸಾಧ್ಯ ಎಂದು ಟೀಕಿಸಿದ್ದರು.
ಆ ಬಗ್ಗೆ ಕಂಗನಾ ಈಗ ಪ್ರತಿಕ್ರಿಯಿಸಿದ್ದಾರೆ. ‘ಇದನ್ನೊಂದು ವಿವಾದ ಮಾಡುವ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ. ದೀಪಿಕಾ ಪಡುಕೋಣೆ ಅವರು ಇಂದು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ನಾವು ನೋಡಬೇಕು. ಆಕೆ ಅಂತಹ ಬೇಡಿಕೆಯನ್ನು ಇಡುವ ಹಕ್ಕನ್ನು ಸಂಪಾದಿಸಿದ್ದಾರೆ. ಆಕೆ ಒಬ್ಬ ತಾಯಿ ಮತ್ತು ದೇಶದ ನಂಬರ್ ಒನ್ ನಟಿ. ಇಂದು ಆಕೆ 8 ಗಂಟೆ ಕೆಲಸ ಮಾಡಲು ಬಯಸಿದರೆ ಅದರಲ್ಲಿ ತಪ್ಪೇನಿಲ್ಲ’ ಎಂದು ಕಂಗನಾ ಹೇಳಿದ್ದಾರೆ.
ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಕಂಗನಾ, ‘ನಾನು ಮತ್ತು ದೀಪಿಕಾ ವೃತ್ತಿಜೀವನದ ಆರಂಭದಲ್ಲಿದ್ದಾಗ ದಿನಕ್ಕೆ 12-14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆವು. ಆಗ ನಮಗೆ ಯಶಸ್ಸಿನ ಹಸಿವಿತ್ತು ಮತ್ತು ನಾವು ಯಾರಿಗೂ ಅನಿವಾರ್ಯವಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ದೀಪಿಕಾ ಇಂದು ಒಬ್ಬ ತಾಯಿ, ಆಕೆಗೆ ಮಗು ಮತ್ತು ಕುಟುಂಬದ ಜವಾಬ್ದಾರಿ ಇದೆ. ಆ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಬೇಡಿಕೆ ನ್ಯಾಯಯುತವಾಗಿದೆ’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ
ಕೆಲಸದ ಅವಧಿಯ ವಿವಾದದ ನಡುವೆಯೂ ದೀಪಿಕಾ ಪಡುಕೋಣೆ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ದೀಪಿಕಾ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಅಭಿನಯದ ‘ಕಿಂಗ್’ ಚಿತ್ರದಲ್ಲೂ ದೀಪಿಕಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಇರುವ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.