ಇತ್ತೀಚೆಗಿನ ನಟ, ನಟಿಯರು ಕೇವಲ ನಟನಾ ವೃತ್ತಿಗೆ ಸೀಮಿತವಾಗಿಲ್ಲ. ಉದ್ಯಮಿಗಳು ಸಹ ಹೌದು. ಅದರಲ್ಲೂ ಬಾಲಿವುಡ್ (Bollywood) ನಟಿಯರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕೆಲವರು ಸ್ವಂತದ ಸಂಸ್ಥೆಗಳನ್ನು ಕಟ್ಟಿ ಬಲು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ಆಸ್ತಿ ಮೌಲ್ಯ ಅಥವಾ ಬ್ರ್ಯಾಂಡ್ ಮೌಲ್ಯ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ವೃತ್ತಿ ಹಾಗೂ ಉದ್ಯಮದಲ್ಲಿ ಹೆಚ್ಚು ಹೆಚ್ಚು ಯಶಸ್ಸು ಗಳಿಸುತ್ತಲೂ ಈ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತಲೇ ಸಾಗುತ್ತದೆ. ಕೆಲ ವರ್ಷಗಳ ಹಿಂದೆ ತಮ್ಮ ಬುದ್ಧಿಪತ್ತೆಯಿಂದಾಗಿ ‘ಪೆದ್ದಿ’ ಎನಿಸಿಕೊಂಡಿದ್ದ ಆಲಿಯಾ ಭಟ್ ಈಗ ಮೌಲ್ಯದಲ್ಲಿ ಹಲವು ಸ್ಟಾರ್ ನಟ, ನಟಿಯರನ್ನೇ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದ್ದಾರೆ.
ಕ್ರೋಲ್ ಹೆಸರಿನ ಸಂಸ್ಥೆ ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಮೌಲ್ಯಗಳ ಕುರಿತು ಮಾಹಿತಿ ಪ್ರಕಟಿಸಿದೆ. 2025 ರ ಮಾಹಿತಿ ಆಧರಿಸಿದ ಪಟ್ಟಿ ಇದಾಗಿದ್ದು ನಟ ಶಾರುಖ್ ಖಾನ್ ನಂ. 1 ಸ್ಥಾನವನ್ನು ಪಡೆದುಕೊಂಡಿದ್ದರೆ, ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿ ಭಾರತದ ಅತಿ ಹೆಚ್ಚು ಮೌಲ್ಯಯುತ ಮಹಿಳಾ ಸೆಲೆಬ್ರಿಟಿ ಬ್ರ್ಯಾಂಡ್ ಆಗಿ ಆಲಿಯಾ ಹೊರಹೊಮ್ಮಿದ್ದಾರೆ. ಕ್ರೋಲ್‌ನ ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ವರದಿ 2025 ರ ಪ್ರಕಾರ, ಆಲಿಯಾ ಭಟ್ ಅವರು 93.9 ಮಿಲಿಯನ್ ಡಾಲರ್ (ಸುಮಾರು 892 ಕೋಟಿ ರೂ.) ಬ್ರ್ಯಾಂಡ್ ಮೌಲ್ಯದೊಂದಿಗೆ ಶ್ರೇಯಾಂಕದಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಎಲ್ಲಾ ಸೆಲೆಬ್ರಿಟಿಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಮಹಿಳೆಯಾಗಿ ಅವರು ಹೊರಹೊಮ್ಮಿದ್ದಾರೆ. ಅಲ್ಲದೆ, 80 ಮಿಲಿಯನ್ ಡಾಲರ್ (ಸುಮಾರು 761 ಕೋಟಿ ರೂ.) ಮೌಲ್ಯದೊಂದಿಗೆ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿರುವ ತಮ್ಮ ಪತಿ ರಣಬೀರ್ ಕಪೂರ್ ಸೇರಿದಂತೆ ಹಲವು ಪುರುಷ ನಟರಿಗಿಂತಲೂ ಉನ್ನತ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿರುವ ಮತ್ತೊಬ್ಬ ಏಕೈಕ ಮಹಿಳಾ ಸೆಲೆಬ್ರಿಟಿ ಎಂದರೆ 89.2 ಮಿಲಿಯನ್ ಡಾಲರ್ (ಸುಮಾರು 849.35 ಕೋಟಿ ರೂ) ಬ್ರ್ಯಾಂಡ್ ಮೌಲ್ಯದೊಂದಿಗೆ ಏಳನೇ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ.
ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ಜೊತೆ ಗುಟ್ಟಾಗಿ ಮದುವೆ ಆಗಿದ್ದರು ಬಾಲಿವುಡ್ ಸ್ಟಾರ್ ನಟಿ
ಆಲಿಯಾ ಭಟ್ ಅವರ ಈ ಹೆಚ್ಚಿದ ಬ್ರ್ಯಾಂಡ್ ಮೌಲ್ಯಕ್ಕೆ ಅವರ ಉದ್ಯಮವೇ ಕಾರಣ ಎನ್ನಲಾಗುತ್ತಿದೆ. ಆಲಿಯಾ ಭಟ್ ಅವರ ಇತ್ತೀಚೆಗಿನ ಎರಡು ಸಿನಿಮಾಗಳಾದ ‘ಆಲ್ಫಾ’ ಮತ್ತು ‘ಜಿಗ್ರಾ’ ಎರಡೂ ದೊಡ್ಡ ಯಶಸ್ಸು ಕಂಡಿಲ್ಲ ಆದರೂ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಒಪ್ಪಂದಗಳ ಪೋರ್ಟ್‌ಫೋಲಿಯೊವನ್ನು ಯಶಸ್ವಿಯಾಗಿ ಬಿಲ್ಡ್ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಫ್ಯಾಷನ್ ಉತ್ಸವಗಳು, ಇವೆಂಟ್ಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದಾರೆ. ಇದೆಲ್ಲದರ ಕಾರಣಕ್ಕೆ ಅವರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ.
ಆಲಿಯಾ ಭಟ್ ಪ್ರಸ್ತುತ ಪತಿ ರಣ್ಬೀರ್ ಕಪೂರ್ ಜೊತೆಗೆ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಅನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಒಂದು ತೆಲುಗು ಸಿನಿಮಾನಲ್ಲಿ ಆಲಿಯಾ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇವುಗಳ ಜೊತೆಗೆ ‘ತುಂಬಾಡ್ 2’ ಸಿನಿಮಾನಲ್ಲಿ ಸಹ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
