ನವದೆಹಲಿ, ಜುಲೈ 16: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 9ನೇ ತರಗತಿಯಿಂದ ಜಾರಿಗೆ ತರಲು ಉದ್ದೇಶಿಸಿರುವ ಮೂರು ಭಾಷಾ ನೀತಿಯನ್ನು (ತ್ರಿಭಾಷಾ ನೀತಿ) ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದು ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ ಎಂದಿರುವ ಸುಪ್ರೀಂ ಕೋರ್ಟ್ ಈ ನೀತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 9ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಈಗಾಗಲೇ ಬೋರ್ಡ್ ಪರೀಕ್ಷೆಗಳ (ಎಸ್ಎಸ್ಎಲ್ಸಿ) ಸಿದ್ಧತೆಯಲ್ಲಿರುತ್ತಾರೆ. ಗಣಿತ, ವಿಜ್ಞಾನದಂತಹ ಕಠಿಣ ವಿಷಯಗಳ ಒತ್ತಡದಲ್ಲಿರುತ್ತಾರೆ. ಇಂತಹ ಹಂತದಲ್ಲಿ ದಿಢೀರನೆ ಸಿಬಿಎಸ್‌ಇ ಮೂರನೇ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡುವುದು ಎಷ್ಟು ಸಮಂಜಸ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಈ ನೀತಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಮೂರನೇ ಭಾಷೆಯನ್ನು 9ನೇ ತರಗತಿಯ ಬದಲಿಗೆ 6ನೇ ತರಗತಿಯಿಂದಲೇ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಸಿಬಿಎಸ್‌ಇಯ ನಿರ್ಧಾರವನ್ನು ಪ್ರಶ್ನಿಸಿದ್ದು, “10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಹಿನ್ನೆಲೆಯಲ್ಲಿ 8ನೇ ತರಗತಿಯ ಮುಕ್ತಾಯದಿಂದಲೇ ವಿದ್ಯಾರ್ಥಿಗಳ ಮೇಲೆ ಒತ್ತಡ ಆರಂಭವಾಗಿರುತ್ತದೆ. ಇಂತಹ ಸಂದರ್ಭದಲ್ಲಿ 9ನೇ ತರಗತಿಯಲ್ಲಿ ಹೊಸ ಭಾಷೆಯನ್ನು ಹೇರುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ಲೋಖಂಡೆ ಸೀತಾರಾಮ್ ನೇಮಕ
“ವಿದ್ಯಾರ್ಥಿಗಳು 3 ಭಾಷೆಗಳನ್ನು ಕಲಿಯುವುದು ಒಳ್ಳೆಯದೇ. ಆದರೆ ಅದನ್ನು 9ನೇ ತರಗತಿಯಿಂದಲೇ ಏಕೆ ಆರಂಭಿಸಬೇಕು? ಪ್ರಾಥಮಿಕ ಅಥವಾ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳು ಹೊಸ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲರು. 9ನೇ ತರಗತಿಯಲ್ಲಿ 3ನೇ ಭಾಷೆಯನ್ನು ಹೇರಿದರೆ ವಿದ್ಯಾರ್ಥಿಗಳಿಗೆ ಇದು ಅತಿಯಾದ ಒತ್ತಡ ಉಂಟುಮಾಡುತ್ತದೆ” ಎಂದಿದ್ದಾರೆ.
ಏನಿದು ಸಿಬಿಎಸ್‌ಇಯ ತ್ರಿಭಾಷಾ ನೀತಿ?:
ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಸಿಬಿಎಸ್‌ಇ ಹೊಸ ಬದಲಾವಣೆಯನ್ನು ತರಲು ಮುಂದಾಗಿತ್ತು. ಇದರ ಪ್ರಕಾರ, 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಒಟ್ಟು 3 ಭಾಷೆಗಳನ್ನು ಕಲಿಯಬೇಕಾಗುತ್ತದೆ. ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಭಾಷೆಗಳಾಗಿರಬೇಕು. (ಉದಾಹರಣೆಗೆ: ಹಿಂದಿ, ಸಂಸ್ಕೃತ, ಕನ್ನಡ, ತಮಿಳು ಇತ್ಯಾದಿ).
#SupremeCourt voices concern over the introduction of a third language in Class 9 under #CBSE curriculum, observing it would increase the stress level of students.
Apex Court suggests that it be introduced in Class 5 or Class 6 so that students can cope with it. pic.twitter.com/T6azB69bAE
— All India Radio News (@airnewsalerts) July 16, 2026
2026-27ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಹಳೆಯ ನಿಯಮವೇ ಮುಂದುವರಿಯಲಿದ್ದು, ಕೇವಲ ಎರಡು ಭಾಷೆಗಳನ್ನು ಮಾತ್ರ ಓದುತ್ತಾರೆ. ಇವರಿಗೆ ಮೂರನೇ ಭಾಷೆಯ ನಿಯಮ ಅನ್ವಯಿಸುವುದಿಲ್ಲ. ಆದರೆ, 9ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಇವರು ಮುಂದಿನ ವರ್ಷ (೨೦೨೭-೨೮ರಲ್ಲಿ) 10ನೇ ತರಗತಿಗೆ ಹೋದಾಗ ಈ ಮೂರನೇ ಭಾಷೆಗೆ ಯಾವುದೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ, ಕೇವಲ ಶಾಲಾ ಮಟ್ಟದ ಮೌಲ್ಯಮಾಪನವಿರುತ್ತದೆ.
ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!
ಈಗಾಗಲೇ ಗಣಿತ, ಸಮಾಜ ವಿಜ್ಞಾನ, ಮತ್ತು ವಿಜ್ಞಾನ ವಿಷಯಗಳ ಹೊರೆ ಇರುವಾಗ, ಮತ್ತೊಂದು ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯುವುದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿಢೀರನೆ ಹೊಸ ಭಾಷೆಯನ್ನು ಕಲಿಯುವುದು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟವಾಗಬಹುದು ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ಸೂಚನೆ ಏನು?:
ಈ ತ್ರಿಭಾಷಾ ನೀತಿಯು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ತಡೆಯಲು, ಇದರ ಪ್ರಾಯೋಗಿಕತೆ ಮತ್ತು ಸಮಯದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಭಾಷಾ ಕಲಿಕೆಯನ್ನು ಪ್ರಾಥಮಿಕ ಹಂತದಿಂದಲೇ ಹಂತಹಂತವಾಗಿ ಜಾರಿಗೆ ತರುವುದು ಹೆಚ್ಚು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
