ಕಾಶ್ಮೀರಿ ಭದ್ರತಾ ಪಡೆ ಸಿಬ್ಬಂದಿImage Credit source: PTI
ಶ್ರೀನಗರ, ಆಗಸ್ಟ್ 9: ಮೂರ್ನಾಲ್ಕು ದಶಕದ ಹಿಂದೆ ಕಾಶ್ಮೀರದಲ್ಲಿ ಪಂಡಿತ (Kashmiri Pandit) ಸಮುದಾಯದವರು ತಮ್ಮ ಊರು, ರಾಜ್ಯ ತೊರೆದು ವಲಸೆ ಹೋಗುವಂತೆ ಮಾಡಿದ ರೀತಿಯ ವಿದ್ಯಮಾನಗಳು ನಡೆಯುತ್ತಿರುಂತೆ ತೋರುತ್ತಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಆನ್‌ಲೈನ್ ಮೂಲಕ ಹೊಸದಾಗಿ ಉಗ್ರರ ಬೆದರಿಕೆಗಳು ಬಂದಿದ್ದು, ಭದ್ರತಾ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.
‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಮತ್ತು ‘ಕಾಶ್ಮೀರ್ ಫೈಟ್’ (Kashmir Fight) ಎಂಬ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಪ್ಲಾಟ್ಫಾರ್ಮ್ಗಳು ಈ ಬೆದರಿಕೆ ಸಂದೇಶಗಳನ್ನು ಹಾಗೂ ಉದ್ಯೋಗಿಗಳ ವಿವರಗಳನ್ನು ಹಂಚಿಕೊಂಡಿವೆ ಎಂದು ಝೀನ್ಯೂಸ್ನಲ್ಲಿ ವರದಿಯಾಗಿದೆ.
ವೈಯಕ್ತಿಕ ವಿವರಗಳ ಸೋರಿಕೆ: ಉಗ್ರರ ಚಾನಲ್‌ಗಳು ಕೆಲ ಕಾಶ್ಮೀರಿ ಪಂಡಿತ್ ಉದ್ಯೋಗಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ಅವರ ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಅವರ ಆಸ್ತಿ ಹಾಗೂ ಮನೆಗಳನ್ನು ಗುರಿಯಾಗಿಸುವಂತೆ ಉಗ್ರರ ಬೆಂಬಲಿಗರಿಗೆ ಕರೆ ನೀಡಿವೆ.
ಇದನ್ನೂ ಓದಿ: ಕೇರಳದಲ್ಲಿ ವಿವಾದ ಸೃಷ್ಟಿಸಿದ ಕ್ವಿಜ್ನಲ್ಲಿ ಸಾವರ್ಕರ್ ಕುರಿತ ಪ್ರಶ್ನೆ: ತನಿಖೆಗೆ ಆದೇಶ
ವರ್ಕ್ ಫ್ರಮ್ ಹೋಮ್ ಸೂಚನೆ: ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿ ಕೆಲವು ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಆಗಸ್ಟ್ 20 ರವರೆಗೆ ಮನೆಯಿಂದಲೇ ಕೆಲಸ ಮಾಡಲು (Work from Home) ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಆದೇಶವನ್ನು ಭದ್ರತಾ ಪಡೆಗಳು ಅಧಿಕೃತವಾಗಿ ಇನ್ನೂ ದೃಢಪಡಿಸಬೇಕಿದೆ.
ಯುಎಲ್‌ಸಿ ಮೇಲೆ ಭದ್ರತಾ ಪಡೆಗಳ ಕಣ್ಣು
‘ಯುನೈಟೆಡ್ ಲಿಬರೇಶನ್ ಕೌನ್ಸಿಲ್’ (ULC) ಎಂಬ ಹೊಸ ಸಂಘಟನೆ ಕೂಡ ಭದ್ರತಾ ಸಂಸ್ಥೆಗಳ ನಿಗಾದಲ್ಲಿದೆ. ಜುಲೈನಲ್ಲಿ ಅನಂತನಾಗ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಒಬ್ಬರ ಹತ್ಯೆಯ ಹೊಣೆಯನ್ನು ಈ ಗುಂಪು ವಹಿಸಿಕೊಂಡಿತ್ತು. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಮತ್ತೊಂದು ಮುಖವಾಣಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್
ತನಿಖೆ ತೀವ್ರ: ಆನ್‌ಲೈನ್‌ನಲ್ಲಿ ಭೀತಿ ಹುಟ್ಟಿಸುವ ಮತ್ತು ಕಾಶ್ಮೀರಿ ಪಂಡಿತರ ಪುನರ್ವಸತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗುತ್ತಿದೆ. ಭದ್ರತಾ ಪಡೆಗಳು ಮತ್ತು ರಾಜ್ಯ ತನಿಖಾ ಸಂಸ್ಥೆ (SIA) ಡಿಜಿಟಲ್ ನೆಟ್‌ವರ್ಕ್‌ಗಳ ಮೇಲೆ ನಿಗಾ ವಹಿಸಿದ್ದು, ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಚುರುಕುಗೊಳಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
