ಮಂಡ್ಯ, ಮೇ 06: ಸರ್ಕಾರದ ಸಾಕಷ್ಟು ಕಠಿಮ ನಿಯಮಗಳ ನಡುವೆಯೂ ಕಳೆದ ಒಂದು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ 40 ಬಾಲಕಾರ್ಮಿಕರನ್ನು ಗುರುತಿಸಲಾಗಿದ್ದು, ಈ ಸಂಬಂಧ 14 ಎಫ್ಐಆರ್ಗಳು ದಾಖಲಾಗಿವೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಗ್ಯಾರೇಜ್, ಹೋಟೆಲ್ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಗುರುತಿಸಿ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
- ಬಾಲ ಕಾರ್ಮಿಕರ ನಿರ್ಮೂಲನೆಗೆ ಮಂಡ್ಯದಲ್ಲಿ ದಿಟ್ಟ ಹೆಜ್ಜೆ
- ಒಂದೇ ವರ್ಷದಲ್ಲಿ 40 ಬಾಲಕಾರ್ಮಿಕರ ಪತ್ತೆ, 14 ಎಫ್ಐಆರ್
- ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರಿಂದ ಈ ಬಗ್ಗೆ ಮಾಹಿತಿ
ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ; ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು!
2025ರ ಏಪ್ರಿಲ್ನಿಂದ 2026ರ ಮಾರ್ಚ್ವರೆಗೆ ಜಿಲ್ಲೆಯಲ್ಲಿ ಒಟ್ಟು 951 ತಪಾಸಣೆಗಳನ್ನು ನಡೆಸಲಾಗಿದ್ದು, ಈ ವೇಳೆ 40 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ 14 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ಉಳಿದ 26 ಪ್ರಕರಣಗಳು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ತಾಲೂಕು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬಾಲಕಾರ್ಮಿಕರಿಗೆ ಸಲಹೆ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚಿಸಿದ್ದಾರೆ. 2025-26ರಲ್ಲಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹ ನಿರ್ಮೂಲನೆ ಕುರಿತು 9 ಬೀದಿ ನಾಟಕಗಳು, 7,000 ಪಾಂಪ್ಲೆಟ್ಗಳ ವಿತರಣೆ, 22 ಗೋಡೆ ಬರಹಗಳು ಹಾಗೂ 6 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಾಗಿ ಮಾಲೀಕರಿಗೆ ಶಿಕ್ಷೆ ಆಗಲಿದ್ದು, 6 ತಿಂಗಳಿಂದ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 20,000 ದಿಂದ 50,000 ವರೆಗೆ ದಂಡ ಕೂಡ ಬೀಳಲಿದೆ. ಅಥವಾ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ಒಟ್ಟಿಗೆ ವಿಧಿಸುವ ಅಧಿಕಾರ ಹೊಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.