ಶಾಸಕರ ಮನೆಗೆ ಕೊಳೆತ ತರಕಾರಿ ಹಿಡಿದುಬಂದ ವಿದ್ಯಾರ್ಥಿಗಳುImage Credit source: Tv9 Kannada
ಬೀದರ್, ಜೂನ್ 04: ಶಿಕ್ಷಣಕ್ಕಾಗಿ ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಸರ್ಕಾರ ವೆಚ್ಚ ಮಾಡುತ್ತೆ. ಹೀಗಿದ್ದರೂ ಅವುಗಳು ಮಾತ್ರ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ತಲುಪುತ್ತೆ ಎಂಬುದನ್ನು ಮಾತ್ರ ಆ ಭಗವಂತನೇ ಬಲ್ಲ. ಮಳೆ ಬಂದರೆ ಸೋರುವ ಶಾಲಾ ಕಟ್ಟಡಗಳು, ಸುಣ್ಣ-ಬಣ್ಣವಿಲ್ಲದ ಗೋಡೆಗಳು ಹೀಗೆ ಕೆಲ ಶಾಲೆ-ಕಾಲೇಜುಗಳ ದುಃಸ್ಥಿತಿ ಹೇಳತೀರದು. ಹಾಸ್ಟೆಲ್ಗಳ ಅವ್ಯವಸ್ಥೆಯೂ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳಿಗೆ ತೀರಾ ಕಳಪೆ ಮಟ್ಟದ ಆಹಾರ ಒದಗಿಸುತ್ತಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಅಷ್ಟಕ್ಕೂ ಯಾವುದೋ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಈ ವಿಚಾರ ಬಯಲಾಗಿದ್ದಲ್ಲ. ಬದಲಾಗಿ ಆಹಾರ, ಕೊಳೆತ ತರಕಾರಿಗಳನ್ನು ಹಿಡಿದು ವಿದ್ಯಾರ್ಥಿಗಳೇ ಶಾಸಕರ ಮನೆ ಬಾಗಿಲು ತಟ್ಟಿದ್ದಾರೆ.
ವಾರ್ಡನ್ ಮತ್ತು ಅಧಿಕಾರಿಗಳ ಮೇಲೆ ಶಾಸಕರು ಗರಂ
ವಿದ್ಯಾರ್ಥಿಗಳು ತಂದಿದ್ದ ಕಳಪೆ ಗುಣಮಟ್ಟದ ಆಹಾರ ಮತ್ತು ತರಕಾರಿಗಳನ್ನು ಕಂಡು ಗರಂ ಆದ ಬಸವಕಲ್ಯಾಣ ಶಾಸಕ ಶಾಸಕ ಶರಣು ಸಲಗರ್, ದೂರವಾಣಿ ಕರೆ ಮಾಡಿ ವಾರ್ಡನ್ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಮಕ್ಕಳಿಗೂ ಇದೇ ರೀತಿ ಊಟ ಕೋಡ್ತಿರಾ ಎಂದು ವಾರ್ಡನ್ರನ್ನು ಪ್ರಶ್ನಿಸಿರುವ ಶಾಸಕರು, ಮಕ್ಕಳಿಗೆ ಚೆನ್ನಾಗಿರುವ ಊಟ ಕೊಡಿ ಅಂತಾ ಸರ್ಕಾರ ಹಣ ಕೊಡುತ್ತೆ, ಆದರೆ ನೀವೇನು ಮಾಡುತ್ತಿದ್ದೀರಾ ಎಂದು ತರಾಟೆಗೆ ಪಡೆದಿದ್ದಾರೆ.
ಇದನ್ನೂ ಓದಿ: ಹರಿದ ಬಟ್ಟೆಯ ಗುಡಿಸಲೇ ಇವರ ಅರಮನೆ; ಕತ್ತಲ ಕೂಪದಲ್ಲಿ ಹಕ್ಕಿಪಿಕ್ಕಿ ಸಮುದಾಯ
ಶಾಸಕರ ಮನೆಯಲ್ಲಿಯೇ ಊಟ ಸವಿದ ವಿದ್ಯಾರ್ಥಿಗಳು
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಬಳಿಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಊಟ ನೀಡುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳೂ ಸಾಲಾಗಿ ಕೂತು ಭೋಜನ ಸವಿದಿದ್ದಾರೆ. ಇನ್ನುಮುಂದೆ ಈ ರೀತಿ ಸಮಸ್ಯೆ ಆಗದಂತೆ ಕ್ರಮ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ವಿದ್ಯಾರ್ಥಿಗಳಿಗೆ ಶಾಸಕ ಶರಣು ಸಲಗರ್ ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:15 am, Thu, 4 June 26