ಗುವಾಹಟಿ, ಜೂನ್ 5: ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೇತೃತ್ವದ ಎನ್ಡಿಎ (NDA) ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಅಶ್ವಿನಿ ರಾಯ್ ಸರ್ಕಾರ್, ನಿಲಿಮಾ ದೇವಿ ಮತ್ತು ಸುಶಾಂತ ಬೊರ್ಗೊಹೈನ್ ಅವರಂತಹ ಹೊಸ ಮುಖಗಳಿಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಅಸ್ಸಾಂ ವಿಧಾನಸಭೆಯ ಮಾಜಿ ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಕೂಡ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಜೆಪಿಯ ಪ್ರಬಲ ಮೈತ್ರಿ ಪಕ್ಷವಾದ ಅಸೋಂ ಗಣ ಪರಿಷತ್ (AGP) ನಾಯಕ ಕೇಶಬ್ ಮಹಾಂತ ಅವರು ಮರಳಿ ಸಂಪುಟ ಸೇರಿದ್ದಾರೆ. 126 ಸದಸ್ಯರ ಬಲ ಹೊಂದಿರುವ ಅಸ್ಸಾಂ ವಿಧಾನಸಭೆಯಲ್ಲಿ ನಿಯಮಾವಳಿಗಳ ಪ್ರಕಾರ ಗರಿಷ್ಠ 19 ಸಚಿವರನ್ನು ಹೊಂದಲು ಅವಕಾಶವಿದೆ. ಮೇ 12ರಂದು ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಮತ್ತು ಇತರ ನಾಲ್ವರು ಸಚಿವರಾದ ಅತುಲ್ ಬೋರಾ, ಚರಣ್ ಬೋರೋ, ಅಜಂತಾ ನಿಯೋಗ್ ಮತ್ತು ರಾಮೇಶ್ವರ್ ತೇಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದಿನ 12 ಸಚಿವರ ಸೇರ್ಪಡೆಯೊಂದಿಗೆ ಸಂಪುಟದ ಒಟ್ಟು ಬಲ 17ಕ್ಕೆ ತಲುಪಿದ್ದು, ಇನ್ನೂ 2 ಸ್ಥಾನಗಳು ಬಾಕಿ ಉಳಿದಿವೆ.
ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್ ಪ್ರಮಾಣ: ಸತತ ಎರಡು ಅವಧಿಗೆ ಕಾಂಗ್ರೆಸೇತರ ಮೊದಲ ಸಿಎಂ ಎಂಬ ಹೆಗ್ಗಳಿಕೆ
ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು 102 ಸ್ಥಾನಗಳನ್ನು (ಬಿಜೆಪಿ 82, ಎಜಿಪಿ 10, ಬಿಪಿಎಫ್ 10) ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ