ಹೋಮ, ಹವನಗಳಲ್ಲಿ ಸಮಿತ್ತುಗಳ ಮಹತ್ವImage Credit source: Pinterest
ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಯಜ್ಞ, ಯಾಗಾದಿ ಹೋಮ ಹವನಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ನಮ್ಮ ಪಾಪ ಕರ್ಮಗಳನ್ನು ನಿವಾರಿಸಲು, ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು, ದೇವತಾರಾಧನೆಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು, ಹಾಗೂ ಇಷ್ಟಾರ್ಥ ಸಿದ್ಧಿಗಳಿಗಾಗಿ ಇಂತಹ ಪವಿತ್ರ ಕ್ರಿಯೆಗಳನ್ನು ಆಚರಿಸಲಾಗುತ್ತದೆ. ಈ ಯಜ್ಞಗಳಲ್ಲಿ ಸಮಿತ್ತುಗಳ ಬಳಕೆಯು ಅವಿಭಾಜ್ಯ ಅಂಗವಾಗಿದೆ. ಸಮಿತ್ತುಗಳು ಎಂದರೆ ಅಗ್ನಿಯಲ್ಲಿ ಅರ್ಪಿಸುವ ಪವಿತ್ರ ಮರದ ತುಂಡುಗಳು ಅಥವಾ ಉರವಲುಗಳು. ಈ ಸಮಿತ್ತುಗಳು ಯಜ್ಞದ ಫಲವನ್ನು ಪರಿಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಶಾಸ್ತ್ರಗಳ ಪ್ರಕಾರ, ಯಜ್ಞವನ್ನು ನಡೆಸುವ ಕರ್ತನು, ಅಂದರೆ ಯಾರು ಸಂಕಲ್ಪ ಮಾಡಿ ಹೋಮವನ್ನು ಮಾಡಿಸುತ್ತಾರೋ, ಅವರು ಕನಿಷ್ಠ ಒಂದೆರಡು ಸಮಿತ್ತುಗಳನ್ನಾದರೂ ಸ್ವತಃ ತಮ್ಮ ಕೈಯಾರೆ, ಶ್ರಮ ವಹಿಸಿ ಸಂಗ್ರಹಿಸಿ ಹೋಮಕ್ಕೆ ಅರ್ಪಿಸಬೇಕು ಎಂದು ಹೇಳಲಾಗಿದೆ. ಅನೇಕ ಬಾರಿ ನಾವು ಎಲ್ಲ ಹೋಮದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ತರುತ್ತೇವೆ ಅಥವಾ ಪುರೋಹಿತರಿಗೆ ವಹಿಸಿ ಅವರೇ ಎಲ್ಲವನ್ನೂ ತಂದು ಮಾಡಿಸಲಿ ಎಂದು ಹೇಳುತ್ತೇವೆ. ಆದರೆ, ಶಾಸ್ತ್ರಗಳು, ಯಜ್ಞದ ನಿಜವಾದ ಫಲಕ್ಕಾಗಿ, ಕರ್ತನು ಸ್ವತಃ ಒಂದಷ್ಟು ಶಾರೀರಿಕ ಶ್ರಮವನ್ನು ವಹಿಸಬೇಕು ಎಂದು ಒತ್ತಿಹೇಳುತ್ತವೆ.
ವಿವಿಧ ದೇವತೆಗಳು ಮತ್ತು ನವಗ್ರಹಗಳಿಗೆ ನಿರ್ದಿಷ್ಟ ಸಮಿತ್ತುಗಳನ್ನು ಅರ್ಪಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. ಉದಾಹರಣೆಗೆ:
- ಸೂರ್ಯನಿಗೆ – ಮದರ (ಎಕ್ಕದ ಕಡ್ಡಿ)
- ಚಂದ್ರನಿಗೆ – ಪಲಾಶ (ಮುತ್ತುಗದ ಕಡ್ಡಿ)
- ಮಂಗಳನಿಗೆ – ಕಗ್ಗಲಿ
- ಬುಧನಿಗೆ – ಉತ್ತರಾಣಿ
- ಗುರುವಿಗೆ – ಅರಳಿಮರ
- ಶುಕ್ರನಿಗೆ – ಅತ್ತಿಮರ
- ಶನಿಗೆ – ಶಮಿಮರ
- ರಾಹುವಿಗೆ – ದೂರ್ವಾ (ಗರಿಕೆ)
- ಕೇತುವಿಗೆ – ಕುಶ (ದರ್ಬೆ)
ಅಶ್ವತ್ಥ ವೃಕ್ಷ (ಅರಳಿ), ತುಳಸಿ, ಬಿಲ್ವ, ಗಂಧ, ಹೊಂಗೆಯಂತಹ ಮರಗಳ ಸಮಿತ್ತುಗಳೂ ಕೂಡ ಯಜ್ಞದಲ್ಲಿ ಬಳಸಲ್ಪಡುತ್ತವೆ. ನಮ್ಮ ಕೈಯಲ್ಲಿ ಲಭ್ಯವಿರುವ, ಉದಾಹರಣೆಗೆ ಅರಳಿ ಮರ ಅಥವಾ ಬಿಲ್ವ ಮರದ ಸಮಿತ್ತುಗಳನ್ನಾದರೂ, ಒಂದು ದಿನ ಮುಂಚಿತವಾಗಿ ನಾವೇ ಹೋಗಿ ಸಂಗ್ರಹಿಸಿ ತರುವುದು ಹೆಚ್ಚು ಫಲಕಾರಿಯೆಂದು ಹೇಳಲಾಗಿದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಇದಕ್ಕೆ ಒಂದು ಐತಿಹಾಸಿಕ ಉದಾಹರಣೆಯೆಂದರೆ ನಮ್ಮ ಪುರಾತನ ಋಷಿಮುನಿಗಳು. ಅವರು ಯಜ್ಞಕ್ಕೆ ಬೇಕಾಗುವ ದರ್ಬೆಗಳು, ಸಮಿತ್ತುಗಳು, ಮತ್ತು ಇತರ ಸಾಮಗ್ರಿಗಳಿಗಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಉಪವಾಸವಿದ್ದು, ಅವುಗಳನ್ನು ಹುಡುಕುತ್ತಿದ್ದರು. ಅಷ್ಟೇ ಅಲ್ಲದೆ, ಸಂಗ್ರಹಿಸಿದ ವಸ್ತುಗಳು ಭೂಮಿಗೆ ಸ್ಪರ್ಶಿಸದಂತೆ ಬಹಳ ಎಚ್ಚರಿಕೆಯಿಂದ ತಂದು ಯಜ್ಞ ಯಾಗಾದಿಗಳನ್ನು ನಿರ್ವಹಿಸಿ, ಪರಿಪೂರ್ಣ ಫಲವನ್ನು ಪಡೆಯುತ್ತಿದ್ದರು. ಇದು ಯಜ್ಞದ ಕಡೆಗೆ ಅವರಿದ್ದ ಅಚಲ ಶ್ರದ್ಧೆ ಮತ್ತು ಸಮರ್ಪಣೆಯನ್ನು ತೋರಿಸುತ್ತದೆ.
ಇಂದು ಯಾವುದೇ ವೃತ್ತಿಯಲ್ಲಿದ್ದರೂ, ರೈತರಾಗಿರಲಿ, ಅಧಿಕಾರಿಗಳಾಗಿರಲಿ, ಅಥವಾ ಯಾವುದೇ ವೃತ್ತಿ ಮಾಡುವವರಾಗಿರಲಿ, ಯಜ್ಞ ಯಾಗಾದಿ ಹೋಮ ಹವನಗಳನ್ನು ಮಾಡಿಸುವಾಗ, ಕೇವಲ ಎಲ್ಲವನ್ನೂ ದುಡ್ಡು ಕೊಟ್ಟು ಮಾಡಿಸುವುದು ಯಜ್ಞದ ಪರಿಪೂರ್ಣತೆಯನ್ನು ಸೂಚಿಸುವುದಿಲ್ಲ. ಬದಲಾಗಿ, ನಾವೇ ಒಂದಷ್ಟು ಶ್ರಮ ವಹಿಸಿ, ನಮ್ಮ ಕೈಯಾರೆ ಒಂದೆರಡು ಸಮಿತ್ತುಗಳನ್ನು ತಂದು ಅರ್ಪಿಸಿದಾಗ, ಆ ಅಗ್ನಿ ಯಜ್ಞವು ಹೆಚ್ಚು ಪರಿಪೂರ್ಣವಾಗಿ, ಬೇಗನೆ ಇಷ್ಟಾರ್ಥ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ. ಇದು ಕೇವಲ ನಂಬಿಕೆ ಆಧಾರಿತವಲ್ಲದೆ, ನಮ್ಮ ಭಕ್ತಿ ಮತ್ತು ಕರ್ತವ್ಯ ನಿಷ್ಠೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ