ಮಕ್ಕಳ ಪಾಲಿಗೆ ತಂದೆಯೇ (Father) ಮೊದಲ ಸೂಪರ್ ಹೀರೋ. ತಂದೆಯಂದಿರು ತಮ್ಮ ಮಕ್ಕಳ ಜೀವನವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೌದು ಮಕ್ಕಳು ಹುಟ್ಟಿ ಅವರು ದೊಡ್ಡವರಾಗುವವರೆಗೂ ಅವರ ಒಳಿತಿಗಾಗಿ, ಏಳಿಗೆಗಾಗಿ ಜೀವ ತೇಯುತ್ತಾರೆ. ಕುಟುಂಬದ ಜವಾಬ್ದಾರಿಗಳನ್ನು ಹೊರುವುದಲ್ಲದೆ ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಾರೆ. ಆದರೆ ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಪ್ಪಂದಿರ ಪ್ರೀತಿ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 3 ನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್ 21 ರಂದು ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ.
ವಿಶ್ವ ಅಪ್ಪಂದಿರ ದಿನದ ಇತಿಹಾಸವೇನು?
ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆ ಮೊದಲು ಅಮೆರಿಕದಲ್ಲಿ ಪ್ರಾರಂಭವಾಯಿತು. ತಂದೆಯ ದಿನವನ್ನು ಪ್ರಾರಂಭಿಸಿದ ಕೀರ್ತಿ ಅಮೆರಿಕದ ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಗೆ ಸಲ್ಲುತ್ತದೆ. ಅವರ ತಂದೆ ಸೈನಿಕರಾಗಿದ್ದರು, ಡಾಡ್ ಮತ್ತು ಅವರ ಐವರು ಒಡಹುಟ್ಟಿದವರ ತಾಯಿ ಹೆರಿಗೆಯ ಸಮಯದಲ್ಲಿ ಮರಣ ಹೊಂದಿದಾಗ ಅವರನ್ನು ತಂದೆಯೇ ಬೆಳೆಸಿದರು. ಹಾಗಾಗಿ ಡಾಡ್ 1909 ರಲ್ಲಿ ತಾಯಂದಿರ ದಿನದ ಸಂದರ್ಭದಲ್ಲಿ ತಾಯಂದಿರ ದಿನವನ್ನು ಆಚರಿಸುವಂತೆಯೇ, ತಂದೆಯ ದಿನವನ್ನು ಸಹ ಅದೇ ರೀತಿಯಲ್ಲಿ ಏಕೆ ಆಚರಿಸಬಾರದು ಎಂಬ ಕಲ್ಪನೆ ಅವರಲ್ಲಿ ಮೂಡಿತು. ನಂತರ ಸ್ಥಳೀಯ ಮುಖಂಡರು ಡಾಡ್ ಅವರ ಕಲ್ಪನೆಯನ್ನು ಬೆಂಬಲಿಸಿದರು. ಬಳಿಕ ಮೊದಲ ಬಾರಿಗೆ ತಂದೆಯಂದಿರ ದಿನವನ್ನು ಜೂನ್ 19, 1910 ರಂದು ಆಚರಿಸಲಾಯಿತು. ನಂತರ 1924 ರಲ್ಲಿ, ಯುಎಸ್ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಕೂಡ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದರು. 1966 ರಲ್ಲಿ, ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಈ ದಿನವನ್ನು ಗುರುತಿಸುವ ಘೋಷಣೆಯನ್ನು ಮಾಡಿದರು. 1972 ರಲ್ಲಿ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಗೊತ್ತುಪಡಿಸುವ ಕಾನೂನಿಗೆ ಸಹಿ ಹಾಕಿದರು. ಅಂದಿನಿಂದ ಪ್ರತಿವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್
ತಂದೆಯ ದಿನದ ಮಹತ್ವವೇನು?
- ತಂದೆಯ ದಿನವು ಕೇವಲ ಆಚರಣೆಯಲ್ಲ, ತಂದೆಯ ಪ್ರೀತಿ, ತ್ಯಾಗ, ಕಠಿಣ ಪರಿಶ್ರಮ ಮತ್ತು ಹೋರಾಟವನ್ನು ನೆನಪಿಸಿಕೊಳ್ಳುವ ಅವಕಾಶವೂ ಆಗಿದೆ. ಈ ದಿನವು ನಮ್ಮ ತಂದೆಯವರಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಸ್ಫೂರ್ತಿ ನೀಡುತ್ತದೆ.
- ತಂದೆಯಂದಿರ ದಿನವು ತಂದೆಯ ಸಮರ್ಪಣೆ ಮತ್ತು ಪ್ರೀತಿಯನ್ನು ಗೌರವಿಸುವ ಮತ್ತು ಆಚರಿಸುವ ದಿನವಾಗಿದೆ. ಈ ಸಂದರ್ಭದಲ್ಲಿ, ಜನರು ತಮ್ಮ ತಂದೆಯ ಮುಖದಲ್ಲಿ ನಗುವನ್ನು ತರಲು ವಿವಿಧ ರೀತಿಯಲ್ಲಿ ಶ್ರಮಿಸುತ್ತಾರೆ. ಉಡುಗೊರೆಗಳನ್ನು ನೀಡುವುದರಿಂದ ಹಿಡಿದು ಅವರೊಂದಿಗೆ ಸಮಯ ಕಳೆಯುವವರೆಗೆ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ