Headlines

ಬಾಲ್ಯದಲ್ಲಿ ಎನ್​ಸೈಕ್ಲೊಪಿಡಿಯಾ, ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪಿಕ್ಸೆಲ್ ಮ್ಯಾನ್; ಇದು ಕನ್ನಡಿಗ ಅವೈಸ್​ನ ರೋಚಕ ಕಥೆ – Kannada News | Pixxel founder’s journey, From a village in Chikmagaluru to collab with NASA, Awais Ahmed inspiring story

ಅವೈಸ್ ಅಹ್ಮದ್ ಎನ್ ಎImage Credit source: X @awaisahmedna

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗ್ರಾಮವೊಂದರಿಂದ ಬಂದ ಯುವಕ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಅವೈಸ್ ಅಹ್ಮದ್ (Awais Ahmed) ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇವರು ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ (Pixxel) ಸಂಸ್ಥೆಯ ಸಹ-ಸ್ಥಾಪಕರು. ಭೂಮಿಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಲು ನೆರವಾಗುವಂತಹ ಬಲಿಷ್ಠ ಸೆಟಿಲೈಟ್​ಗಳನ್ನು ನಿರ್ಮಿಸುತ್ತಿದೆ ಇವರ ಪಿಕ್ಸೆಲ್ ಕಂಪನಿ.

ಅವೈಸ್ ಅಹ್ಮದ್ ಅವರು ಚಿಕ್ಕಮಗಳೂರಿನ ಆಲ್ದೂರು ಗ್ರಾಮದವರು. ಬಾಲ್ಯದಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದಾಗ, ತಂದೆ ತರುತ್ತಿದ್ದ ವಿಶ್ವಕೋಶಗಳನ್ನು (Encyclopaedias) ಓದುವ ಮೂಲಕ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಆ ಆಸಕ್ತಿಯೇ ಅವರನ್ನು ಹೊಸ ಸಾಧನೆಗಳ ಎತ್ತರಕ್ಕೆ ಎಳೆದೊಯ್ಯುತ್ತಿದೆ.

ಪಿಕ್ಸೆಲ್ ಆರಂಭಿಸಿದ್ದು ಮತ್ತು ಹೂಡಿಕೆದಾರರನ್ನು ಆಕರ್ಷಿಸಿದ್ದು…

ಅವೈಸ್ ಅಹ್ಮದ್ ಅವರು ಐಐಟಿ ಮದ್ರಾಸ್​ನಲ್ಲಿ ಓದಿದವರು. ಸ್ಟಾರ್ಟಪ್​ಗಳಿಗೆ ಅತಿಹೆಚ್ಚು ಉತ್ತೇಜನ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ಇದೂ ಒಂದು. ಇಲ್ಲಿ ಅವೈಸ್ ಅವರು 2019ರಲ್ಲಿ ತಮ್ಮ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಸೇರಿ ಪಿಕ್ಸೆಲ್ ಸ್ಟಾರ್ಟಪ್‌ನ್ನು ಆರಂಭಿಸಿದರು. ಪ್ರಾರಂಭದಲ್ಲಿ ತಂದೆಯಿಂದ ಸಾಲ ಪಡೆದು ಕೇವಲ ತಿಂಗಳಿಗೆ ₹10,000 ಖರ್ಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

ಪಿಕ್ಸೆಲ್ ಸಂಸ್ಥೆಯು ಗೂಗಲ್, ರಾಡಿಕಲ್ ವೆಂಚರ್ಸ್ ಮತ್ತು ಲೈಟ್‌ಸ್ಪೀಡ್‌ನಂತಹ ಜಾಗತಿಕ ಹೂಡಿಕೆದಾರರಿಂದ ಸುಮಾರು ₹900 ಕೋಟಿಗೂ ($95 ಮಿಲಿಯನ್) ಹೆಚ್ಚು ಬಂಡವಾಳವನ್ನು ಸಂಗ್ರಹಿಸಿದೆ. ಇದು ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ನಿಧಿ ಪಡೆದ ಕಂಪನಿಗಳಲ್ಲಿ ಒಂದಾಗಿದೆ.

ಪಿಕ್ಸೆಲ್ ಸಂಸ್ಥೆ ಏನು ಮಾಡುತ್ತದೆ?

ಇದು ಹೈಪರ್‌ಸ್ಪೆಕ್ಟ್ರಲ್ (Hyperspectral) ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಉಪಗ್ರಹಗಳನ್ನು ನಿರ್ಮಿಸುತ್ತದೆ.

ಇವು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಭೂಮಿಯ ಮೇಲಿನ ಅತಿಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಹಚ್ಚಬಲ್ಲವು.

ರೈತರಿಗೆ ಬೆಳೆಗಳ ಆರೋಗ್ಯ ಪತ್ತೆ, ಪರಿಸರದಲ್ಲಿನ ಮೀಥೇನ್ ಅನಿಲ ಸೋರಿಕೆ ಗುರುತಿಸುವುದು, ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದು ಮತ್ತು ಜಲಮಾಲಿನ್ಯದಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಉಪಗ್ರಹಗಳು ನೆರವಾಗುತ್ತವೆ.

2025 ರಲ್ಲಿ ಸಂಸ್ಥೆಯು ತನ್ನ ಆರು ‘ಫೈರ್ ಫ್ಲೈ’ (Firefly) ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಇದನ್ನೂ ಓದಿ: ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್

ಪಿಕ್ಸೆಲ್​ಗೆ ಜಾಗತಿಕ ಮನ್ನಣೆ, ನಾಸಾ ಒಪ್ಪಂದ

ಪಿಕ್ಸೆಲ್ ಸಂಸ್ಥೆಯು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ನ್ಯಾಷನಲ್ ರಿಕಾನ್ನೈಸನ್ಸ್ ಆಫೀಸ್ (NRO) ಜೊತೆಗೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಈ ಸಂಸ್ಥೆಯನ್ನು ಟೈಮ್ (TIME) ನಿಯತಕಾಲಿಕೆಯು 2023ರ ‘100 ಅತ್ಯುತ್ತಮ ಆವಿಷ್ಕಾರಗಳಲ್ಲಿ’ ಒಂದೆಂದು ಗುರುತಿಸಿದೆ ಮತ್ತು ವಿಶ್ವ ಆರ್ಥಿಕ ವೇದಿಕೆಯು (WEF) ‘ಟೆಕ್ನಾಲಜಿ ಪಯೋನೀರ್’ ಎಂದು ಗೌರವಿಸಿದೆ.

ಅವೈಸ್ ಅಹ್ಮದ್ ಅವರ ಈ ಪಯಣ, ತಂತ್ರಜ್ಞಾನದ ಸೌಲಭ್ಯಗಳಿಲ್ಲದಿದ್ದರೂ ಕೇವಲ ಕುತೂಹಲ ಮತ್ತು ಓದಿನ ಹಸಿವಿನಿಂದ ಜಗತ್ತೇ ಬೆರಗಾಗುವ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *