ಭಾರತದಲ್ಲಿ ಸಿನಿಮಾ (Cinema) ಬ್ಯಾನ್ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಸಣ್ಣ-ಪುಟ್ಟ ವಿಷಯಕ್ಕೂ ಸಿನಿಮಾಗಳ ಮೇಲೆ ಕೆಲ ಸಂಘಟನೆಯವರು, ನೆಟ್ಟಿಗರು ಆಗಾಗ್ಗೆ ಬ್ಯಾನ್ ಹೇರುತ್ತಲೇ ಇರುತ್ತಾರೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿಬಿಎಫ್ಸಿ ಪ್ರಮಾಣ ಪತ್ರ ಪಡೆದ ಯಾವ ಸಿನಿಮಾ ಸಹ ಬಿಡುಗಡೆ ಆಗದೇ ಇರುವುದಿಲ್ಲ. ಆದರೆ ಇಲ್ಲೊಂದು ಸಿನಿಮಾ ಕಳೆದ ಮೂರು ವರ್ಷಗಳಿಂದಲೂ ಸಿಬಿಎಫ್ಸಿಯ ಪ್ರಮಾಣ ಪತ್ರಕ್ಕಾಗಿ ಹೋರಾಡಿ, ಕೊನೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲವೆಂದು ಕೈಚೆಲ್ಲಿ, ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿದ ಎರಡನೇ ದಿನಕ್ಕೆ ಸಿನಿಮಾವನ್ನು ಅಲ್ಲಿಂದಲೂ ಹೊರಗಟ್ಟಲಾಗಿದೆ.
ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೊಸ್ಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸಟ್ಲುಜ್’ ಸಿನಿಮಾ ಮೇಲೆ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದಲ ಕಾನೂನು ಹೋರಾಟ ನಡೆಸಿದ ಚಿತ್ರತಂಡ ಬೇರೆ ದಾರಿ ಕಾಣದೆ, ಜೀ5ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಜೀ5 ನಲ್ಲಿ ಎರಡು ದಿನಗಳ ಹಿಂದಷ್ಟೆ ‘ಸಟ್ಲುಜ್’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಎರಡೇ ದಿನಕ್ಕೆ ಸಿನಿಮಾವನ್ನು ಜೀ5ನಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜೀ5, ಆದಷ್ಟು ಬೇಗ ಸಿನಿಮಾವನ್ನು ಮತ್ತೆ ಒಟಿಟಿಗೆ ತರುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ:ಉಚಿತವಾಗಿ ನೋಡಿ ಪ್ರಭಾಸ್, ಅಕ್ಷಯ್, ಮೋಹನ್ಲಾಲ್, ವಿಷ್ಣು ಸಿನಿಮಾ: ಎಲ್ಲಿ?
‘ಸಟ್ಲುಜ್’ ಸಿನಿಮಾ ಪಂಜಾಬಿನ ಹೋರಾಟಗಾರ ಜಸ್ವಂತ್ ಸಿಂಗ್ ಕಾಲ್ರಾ ಅವರ ಜೀವನ ಆಧರಿಸಿದ ಸಿನಿಮಾ. 1980 ರಿಂದ 90ರ ವರೆಗೆ ಪಂಜಾಬಿನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಜಸ್ವಂತ್ ಸಿಂಗ್ ಹೋರಾಟ ಮಾಡಿದ್ದರು. ಒಂದು ದಶಕದ ಅವಧಿಯಲ್ಲಿ ನೂರಾರು ಮಂದಿ ಸಿಖ್ಖರನ್ನು ಪೊಲೀಸರು ಕೊಲೆ ಮಾಡಿ ಸಾಮೂಹಿಕವಾಗಿ ಹೂತಿದ್ದಾರೆ ಎಂದು ಜಸ್ವಂತ್ ಸಿಂಗ್ ಹೇಳಿದ್ದರು. ಅದರ ಬಗ್ಗೆ ತನಿಖೆ ಮಾಡಿದ್ದರು. ಅದೇ ಕತೆಯನ್ನು ಆಧರಿಸಿ ಇದೀಗ ಸಿನಿಮಾ ಮಾಡಲಾಗಿದೆ.
ಈ ಸಿನಿಮಾದ ಕತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಿಎಫ್ಸಿ ಬರೋಬ್ಬರಿ 127 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಸಿನಿಮಾದ ನಾಯಕನ ಹೆಸರು ಬದಲಾಯಿಸುವಂತೆ, ಸಿನಿಮಾನಲ್ಲಿ ಬಳಸಲಾಗಿರುವ ಸ್ಥಳಗಳ ಹೆಸರು ಬದಲಾಯಿಸುವಂತೆ ಸೂಚಿಸಿತ್ತು. ಆದರೆ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರು ಇದಕ್ಕೆ ಒಪ್ಪಲಿಲ್ಲ. ಬದಲಿಗೆ ಜೀ5ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಆದರೆ ಅಲ್ಲಿಂದಲೂ ಈಗ ಸಿನಿಮಾವನ್ನು ಹಿಂಪಡೆಯಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ