Headlines

20 ವರ್ಷವಾದ್ರೂ ಕೊಡದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕದ ಬಿಲ್: ಸರ್ಕಾರಿ ಕಚೇರಿ ಜಪ್ತಿ – Kannada News | 20 Year Old Gommateshwara Mahamastakabhisheka Dues: Government Office Attached Over Unpaid Bills

ಹಾಸನ, ಜುಲೈ 05: ಅದು 2006ರಲ್ಲಿ ನಡೆದಿದ್ದ 87ನೇ ಮಹಾಮಸ್ತಕಾಭಿಷೇಕ (Mahamastakabhisheka) ಕಾರ್ಯಕ್ರಮ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷ ಲಕ್ಷ ಭಕ್ತರು ವೈರಾಗ್ಯ ಮೂರ್ತಿಗೆ ಮಹಾ ಮಜ್ಜನ ಮಾಡಿದರು. ವರ್ಣರಂಜಿತ ಬಾಹುಬಲಿಯ ಮಸ್ತಕಾಭಿಷೇಕವನ್ನ ಕಣ್ತುಂಬಿಕೊಂಡಿದ್ದರು. ಇದೀಗ ಮಹಾಮಸ್ತಕಾಭಿಷೇಕ ಮುಗಿದು 9 ವರ್ಷಗಳಾಗುತ್ತಾ ಬಂದಿದ್ದು, ಇನ್ನೊಂದು ವರ್ಷ ಕಳೆದರೆ ಮತ್ತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ತಯಾರಿ ಆರಂಭಿಸಬೇಕು. ಆದರೆ ದುರಂತ ಎಂದರೆ 2006ರಲ್ಲಿ ಮಹಾಮಸ್ತಕಾಭಿಷೇಕಕ್ಕೆ ಬೆಟ್ಟದ ಮೇಲೆ ಅಟ್ಟಣಿಗೆ ನಿರ್ಮಾಣಕ್ಕೆ ಐದು ಕೋಟಿ ರೂ ವೆಚ್ಚದ ಕಾಮಗಾರಿ ಮಾಡಿದ್ದ ಗುತ್ತಿಗೆದಾರನಿಗೆ ಸರ್ಕಾರ ಇನ್ನೂ ಹಣವನ್ನು ಕೊಟ್ಟಿಲ್ಲವಂತೆ. ಬಡ್ಡಿ ಸಹಿತ ಆರು ಕೋಟಿ ರೂ ಹಣ ಪಾವತಿಗೆ ಕೋರ್ಟ್ ಆದೇಶ ಮಾಡಿದ್ದರು ಹಣ ಕೊಡುತ್ತಿಲ್ಲವೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಕಾರು ಸಹಿತ ಕಚೆರಿಯನ್ನೇ ಜಪ್ತಿ ಮಾಡಿದ್ದಾರೆ.

ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಪಿಡಬ್ಲ್ಯೂಡಿ ಅಧಿಕಾರಿಗಳು

ಮಹಾಮಸ್ತಕಾಭಿಷೇಕ ಎಂದರೆ ಇಡೀ ದೇಶದ ಮೂಲೆಮೂಲೆಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಿಂದ್ಯಗಿರಿಯಲ್ಲಿ ನೆಲೆನಿಂತಿರುವ ವೈರಾಗ್ಯ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಜ್ಜನ ನೆರವೇರುತ್ತೆ. ಇದಕ್ಕಾಗಿ ನೂರಾರು ಕೋಟಿ ರೂ ವೆಚ್ಚವು ತಗುಲುತ್ತದೆ. ಬಾಬುಬಲಿ ಮೂರ್ತಿಗೆ ಮಜ್ಜನ ಮಾಡಲು 52 ಅಡಿ ಎತ್ತರದ ಮೂರ್ತಿಗೆ 50 ಅಡಿ ಎತ್ತರದ ಅಟ್ಟಣಿಗೆ ನಿರ್ಮಾಣ ಮಾಡಲಾಗುತ್ತೆ. ಇದಕ್ಕಾಗಿ 87ನೇ ಮಹಾಮಸ್ತಕಾಭಿಷೇಕದಲ್ಲಿ 5 ಕೋಟಿ ರೂ ಟೆಂಡರ್ ಕರೆಯಲಾಗಿತಂತೆ. ಗುತ್ತಿಗೆ ಪಡೆದ ಜಗನ್ನಾಥ ಎಂಬುವವರು ಕಾಮಗಾರಿ ಮುಗಿಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೂ ಕಾರಣವಾಗಿದ್ದರು.

ಇದನ್ನೂ ಓದಿ: 28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್: ಸಚಿವ ರಾಮಲಿಂಗಾರೆಡ್ಡಿ ಎದುರೇ ಶಾಸಕರಾದ ಶಿವಲಿಂಗೇಗೌಡ – ಹೆಚ್.ಕೆ. ಸುರೇಶ್ ಜಟಾಪಟಿ

87ನೇ ಮಹಾಮಸ್ತಕಾಭಿಷೇಕ ಮುಗಿದು 9 ವರ್ಷವಾಗುತ್ತಾ ಬಂದಿದೆ, ಆದರೆ 87ನೇ ಮಹಾಮಸ್ತಕಾಭಿಷೇಕದ 5 ಕೋಟಿ ರೂಪಾಯಿಗಾಗಿ ಗುತ್ತಿಗೆದಾರನ ಹೋರಾಟ ಮಾತ್ರ ಇನ್ನೂ ನಿಂತಿಲ್ಲ. ಲೋಕೋಪಯೋಗಿ ಇಲಾಖೆ ತಮಗೆ ಹಣ ಪಾವತಿ ಮಾಡ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರ ಹಾಸನದ ಜಿಲ್ಲಾ ಪ್ರದಾನ ನ್ಯಾಯಾಲಯದಿಂದ ಬಡ್ಡಿ ಸಮೇತ 6 ಕೋಟಿ ರೂ ಪಡೆಯಲು ಆದೇಶ ಪಡೆದಿದ್ದಾರೆ, ಆದರೆ ಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಹೀಗಾಗಿ ಕಚೇರಿ ಜಪ್ತಿಗೆ ಆದೇಶಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಾರು ಹಾಗೂ ಕಚೇರಿಯನ್ನ ಜಪ್ತಿ ಮಾಡಲಾಗಿದ್ದು, ತಮಗೆ ಸೇರಬೇಕಾದ ಹಣವನ್ನ ಕೂಡಲೇ ನೀಡಿ ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

6 ಕೋಟಿ ರೂ ಬಾಕಿ

ಒಂದು ಮಹಾಮಸ್ತಕಾಭಿಷೇಕ ನಡೆಯಬೇಕು ಎಂದರೆ ವರ್ಷಾನುಗಟ್ಟಲೆ ಕೆಲಸ ಕಾರ್ಯ ಆರಂಭಗೊಳ್ಳುತ್ತವೆ. 2018ರಲ್ಲಿ 88ನೇ ಮಹಾಮಸ್ತಕಾಭಿಷೇಕ ನೆರವೇರಿದ್ದು, 89ನೇ ಮಹಾಮಸ್ತಕಾಭಿಷೇಕ 2030ಕ್ಕೆ ನೆರವೇರಲಿದ್ದು, ಇದಕ್ಕಾಗಿ ತಯಾರಿ ಕಾರ್ಯ ಮುಂದಿನ ವರ್ಷದಿಂದಲೇ ಶುರುವಾಗಬೇಕಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಎಂದರೆ ಎಲ್ಲರಿಗೂ ನೆನಪಾಗುವುದು ಗೊಮ್ಮಟೇಶ್ವರನ ಏಕ ಶಿಲಾ ಮೂರ್ತಿ. ಜೀವನದ ಎಲ್ಲಾ ವೈಭೋಗ ತೊರೆದು ವೈರಾಗ್ಯಮೂರ್ತಿಯಾಗಿ ನೆಲೆ ನಿಂತಿರುವ ಬಾಹುಬಲಿ. ಇಂತಹ ವಿಶ್ವವಿಖ್ಯಾತ ಬಾಹುಬಲಿಯ ಮಹಾಮಸ್ತಕಾಭಿಷೇಕದ ಕಾಮಗಾರಿಯ ಹಣ ನೀಡಿಲ್ಲವಂತೆ. 20 ವರ್ಷಗಳ ಹಿಂದೆ ನಡೆದ ಮಹಾಮಸ್ತಕಾಭಿಷೇಕದ ಕಾಮಗಾರಿ ಬಿಲ್ ಇನ್ನು ಪಾವತಿ ಆಗಿಲ್ಲ ಎನ್ನುವುದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದೆ. ಗುತ್ತಿಗೆದಾರನ ಪ್ರಕಾರ 5 ಕೋಟಿ ಕಾಮಗಾರಿ ವೆಚ್ಚ ಹಾಗೂ 20 ವರ್ಷ ಹಣ ನೀಡದ ಕಾರಣ ಬಡ್ಡಿ ಸೇರಿಸಿ 6 ಕೋಟಿ ಕೊಡಬೇಕು ಎನ್ನುವುದು ಅವರ ವಾದ.

ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜಯಣ್ಣ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಯಣ್ಣ ಪ್ರತಿಕ್ರಿಯಿಸಿದ್ದು, ಕಾಮಗಾರಿ ಮೊತ್ತ 5 ಕೋಟಿಯನ್ನ ಈಗಾಗಲೇ ಪಾವತಿ ಮಾಡಲಾಗಿದೆ. ಆದರೆ ಅವರು ಕಾಮಗಾರಿಗೆ ಬಿಡ್ಡಿಂಗ್ ಮಾಡುವಾಗ ನೀಡಿದ್ದ ಡೆಪಾಸಿಟ್ ಹಣ 27 ಲಕ್ಷ ರೂ ಮಾತ್ರ ನಾವು ಪಾವತಿ ಮಾಡಬೇಕಿದೆ. ಅವರು ಹೆಚ್ಚುವರಿ ಕಾಮಗಾರಿ ಮಾಡಿಸಲಾಗಿದೆ ಎಂದು ಹೇಳಿ ಬಿಲ್ ಕೇಳುತ್ತಿದ್ದಾರೆ. ಜನರ ಹಣ, 6 ಕೋಟಿ ರೂ ಕೊಡಲು ಸಾಧ್ಯವಿಲ್ಲ. ಅದೂ ಕೂಡ ನಮ್ಮ ಗಮನಕ್ಕೆ ಬರದಂತೆ ಕೋರ್ಟ್​ನಲ್ಲಿ ಕೇಸ್ ಹಾಕಿ ನಮಗೆ ನೋಟಿಸ್ ಕೂಡ ಜಾರಿಯಾಗದಂತೆ ಮಾಡಿ ಏಕಪಕ್ಷೀಯ ತೀರ್ಪು ಪಡೆದುಕೊಂಡಿದ್ದಾರೆ. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿ ಮಾಡಿದ್ದಾರೆ. ಕಾರ್ ಜಪ್ತಿ ಮಾಡಿದ್ದಾರೆ ಕೋರ್ಟ್ ಆದೇಶ ಪಾಲನೆ ಅವರು ಮಾಡಲಿ, ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣ, ಜನರ ಹಣ ಅದನ್ನ ಸುಮ್ಮನೇ ಕೊಡಲು ಆಗಲ್ಲ. ಈ ತೀರ್ಪಿನ ವಿರುದ್ಧ ಹೈಕೋರ್ಟ್​ನಲ್ಲಿ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎನ್ನುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾದ.

ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಬೇಕಿದ್ವಿ, ಈಗ ಬೇಡವಾದ್ವಾ?; ಹಾಸನದಲ್ಲಿ ಗ್ರೂಪ್ ಡಿ ನೌಕರರ ಕಣ್ಣೀರು: 20 ಸ್ವಚ್ಛತಾ ಸಿಬ್ಬಂದಿ ಏಕಾಏಕಿ ವಜಾ

ಒಟ್ಟಿನಲ್ಲಿ 20 ವರ್ಷದ ಹಿಂದೆ ನಾವು 5 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಿದ್ದೇವೆ. ಬಾಹುಬಲಿಯ ಮಹಾ ಮಜ್ಜನ ಸಕ್ಸಸ್ ಆಗಲು ಹಣ ಖರ್ಚು ಮಾಡಿದ್ಧೇವೆ. ಆದರೆ ಹಣ ಪಾವತಿ ಮಾಡಬೇಕಾದ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವುದು ಗುತ್ತಿಗೆದಾರನ ವಾದವಾದರೆ, ಕೊಡುವುದನ್ನೆಲ್ಲಾ ಕೊಟ್ಟಾಗಿದೆ. ಸುಳ್ಳು ಮಾಹಿತಿ ನೀಡಿ ಕೋರ್ಟ್​ನಿಂದ ಆದೇಶ ಪಡೆದಿದ್ದಾರೆ ಎನ್ನೋದು ಅಧಿಕಾರಿಗಳ ವಾದ. ಇಬ್ಬರ ನಡುವಿನ ಜಟಾಪಟಿ ಈಗ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *