ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್Image Credit source: PTI
ನವದೆಹಲಿ, ಜುಲೈ 13: ಅಮೆರಿಕ (US) ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ದೃಢ ನಿಲುವು ತಳೆದಿದೆ. ವ್ಯಾಪಾರ ಮಾತುಕತೆಗಳಲ್ಲಿ ಭಾರತವು ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತಹ ಯಾವುದೇ “ಕೆಟ್ಟ ಒಪ್ಪಂದ” (Bad Deal) ಮಾಡಿಕೊಳ್ಳಲು ಸಿದ್ಧವಿಲ್ಲ. ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರಲು (No Deal) ಭಾರತ ನಿರ್ಧರಿಸಿದೆ ಎಂದು ಸರ್ಕಾರಿ ಅಧಿಕಾರಿಗಳ ಅಭಿಪ್ರಾಯ ಕೇಳಿ ನ್ಯೂಸ್18 ಮತ್ತು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿವೆ.
ಭಾರತದ ಕೃಷಿ ಕ್ಷೇತ್ರ, ಸಣ್ಣ ಕೈಗಾರಿಕೆಗಳು ಮತ್ತು ದೇಶೀಯ ಮಾರುಕಟ್ಟೆಯನ್ನು ರಕ್ಷಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಅಮೆರಿಕದ ದೊಡ್ಡ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯನ್ನು ಮುಕ್ತವಾಗಿ ಬಿಟ್ಟುಕೊಡುವ ಮುನ್ನ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಭಾರತ ಹೇಳಿದೆ.
ಇದನ್ನೂ ಓದಿ: ಬೆಂಗಳೂರಿಗೆ ಎರಡು ಬುಲೆಟ್ ರೈಲುಗಳು; ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲುಗಳ ಪಟ್ಟಿ
ಬೌದ್ಧಿಕ ಆಸ್ತಿ ಮತ್ತು ಡೇಟಾ ಸುರಕ್ಷತೆ: ತಂತ್ರಜ್ಞಾನ, ಡೇಟಾ ಸ್ಥಳೀಕರಣ (Data Localisation) ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ (IPR) ವಿಷಯಗಳಲ್ಲಿ ಅಮೆರಿಕದ ಕಠಿಣ ನಿಬಂಧನೆಗಳಿಗೆ ಭಾರತವು ಒಪ್ಪಿಗೆ ಸೂಚಿಸಿಲ್ಲ. ಭಾರತೀಯ ಗ್ರಾಹಕರ ಡೇಟಾ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೃಷಿ ಕ್ಷೇತ್ರದ ರಕ್ಷಣೆ: ಅಮೆರಿಕದ ಡೈರಿ ಉತ್ಪನ್ನಗಳು ಮತ್ತು ಕೃಷಿ ಸರಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ನೀಡಬೇಕೆಂಬ ಅಮೆರಿಕದ ಬೇಡಿಕೆಗೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಇದು ದೇಶದ ಕೋಟ್ಯಂತರ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಭಾರತದ ಆತಂಕವಾಗಿದೆ.
ಸಮತೋಲಿತ ಒಪ್ಪಂದಕ್ಕೆ ಆಗ್ರಹ: ಒಪ್ಪಂದವು ಕೇವಲ ಒಂದು ದೇಶಕ್ಕೆ ಲಾಭದಾಯಕವಾಗಿರದೆ, ಎರಡೂ ದೇಶಗಳಿಗೆ ಸಮಾನವಾಗಿ ಪ್ರಯೋಜನ ತರುವಂತಿರಬೇಕು (Win-Win Situation) ಎಂಬುದು ಭಾರತದ ಪ್ರತಿಪಾದನೆ. ಒತ್ತಡ ಹೇರಿ ಒಪ್ಪಂದ ಮಾಡಿಕೊಳ್ಳುವ ತಂತ್ರಗಳಿಗೆ ಭಾರತ ಮಣಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದ್ಯತೆ ಬಯಸುತ್ತಿದೆ ಭಾರತ: ಅಮೆರಿಕ ವಿವಿಧ ದೇಶಗಳ ಮೇಲೆ ವಿವಿಧ ಟ್ಯಾರಿಫ್ಗಳನ್ನು ಹಾಕುತ್ತಿದೆ. ಅಮೆರಿಕಕ್ಕೆ ರಫ್ತು ಮಾಡಲು ಭಾರತಕ್ಕೆ ಹಲವು ಪ್ರತಿಸ್ಪರ್ಧಿ ದೇಶಗಳಿವೆ. ಈ ದೇಶಗಳಿಗಿಂತ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಭಾರತ ಮಾಡುತ್ತಿರುವ ಒತ್ತಾಯ. ಇದಕ್ಕೆ ಅಮೆರಿಕ ಒಪ್ಪದೇ ಇರುವುದು ವ್ಯಾಪಾರ ಒಪ್ಪಂದ ಅಂತಿಮಗೊಳ್ಳದೇ ಉಳಿಯಲು ಮುಖ್ಯ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ
ಭಾರತದ ಸರಕುಗಳ ಮೇಲೆ ಸದ್ಯ ಅಮೆರಿಕ ಶೇ. 10ರಷ್ಟು ಟ್ಯಾರಿಫ್ ಹಾಕುತ್ತಿದೆ. ಸದ್ಯದಲ್ಲೇ ಬಲವಂತದ ಕಾರ್ಮಿಕ ವ್ಯವಸ್ಥೆ ಇರುವ ದೇಶಗಳಿಗೆ ಹೆಚ್ಚುವರಿ ಶೇ. 12.5ರಷ್ಟು ಟ್ಯಾರಿಫ್ ಹಾಕಲು ಅಮೆರಿಕ ಯೋಜಿಸಿದೆ. ಈ ದೇಶಗಳಲ್ಲಿ ಭಾರತವೂ ಇದೆ. ಏನಾದರೂ ನೆವಗಳನ್ನು ಹುಡುಕಿ ಈ ಮೊದಲು ಇದ್ದ ಅಧಿಕ ಟ್ಯಾರಿಫ್ ಮಟ್ಟಕ್ಕೆ ತರಲು ಅಮೆರಿಕ ಪ್ರಯತ್ನಿಸುತ್ತಿರುವಂತಿದೆ. ಹಾಗೆಯೇ, ಹೆಚ್ಚುವರಿ ಸುಂಕ ಜಾರಿಯಾಗುವ ಮುನ್ನ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಡ ತಂತ್ರವನ್ನೂ ಭಾರತದ ಮೇಲೆ ಅದು ಹಾಕುತ್ತಿದೆ. ಆದರೆ, ಭಾರತ ಯಾವುದೇ ತರಾತುರಿ ತೋರದೆ ಉತ್ತಮ ಒಪ್ಪಂದಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ಅದರಲ್ಲಿ ಭಾಗಿಯಾದವರು ಹೇಳುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ