ಕಲಬುರಗಿ/ಚಿತ್ರದುರ್ಗ, ಜುಲೈ 17: 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಪಿಪಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಸಂಗ ನಡೆದಿದೆ. ಕರಣವೊಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ಹೈದರಾಬಾದ್ ಮೂಲದ ದೂರುದಾರ ರಾಹುಲ್ರಿಂದ 5ನೇ ಜೆಎಂಎಫ್ಸಿ ಕೋರ್ಟ್ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಕೋರ್ಟ್ ಆವರಣದಲ್ಲಿಯೇ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 10 ಸಾವಿರ ನಗದು, 9 ಸೀರೆ, 4 ಶರ್ಟ್, 4 ಲಂಡನ್ ಜೀನ್ಸ್ ಪ್ಯಾಂಟ್, 1 ಜೊತೆ ಶೂ, ಮಹಿಳೆಯರ 4 ಡ್ರೆಸ್ ಮತ್ತು 6 ಜೊತೆ ಚಪ್ಪಲಿಗೆ ಸಂತೋಷ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ವಶಕ್ಕೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಅವರನ್ನು ಖೆಡ್ಡಾಗೆ ಕೆಡವಿದ್ದಾರೆ. ಹೊಸಪೇಟೆಯ ಗುತ್ತಿಗೆದಾರ ಲಕ್ಷ್ಮೀಕಾಂತ್ ಎಂಬವರು ಮಾಡಿದ್ದ 48 ಲಕ್ಷದ ಕಾಮಗಾರಿ ಬಗ್ಗೆ ತನಿಖೆ ಮಾಡಿಸುತ್ತೇನೆಂದು ತಿಪ್ಪೇಸ್ವಾಮಿ ಬೆದರಿಸಿದ್ದರು. ಅಲ್ಲದೆ 10 ಲಕ್ಷ ರೂ. ಲಂಚ ನೀಡಿದರೆ ತನಿಖೆ ಮಾಡಲ್ಲ ಎಂದು ತಿಳಿಸಿದ್ದರು. ಈ ಸಂಬಂಧ ಹಿರಿಯೂರು ಬಳಿ 5 ಲಕ್ಷ ಲಂಚ ಸ್ವೀಕಾರ ವೇಳೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಶಿರಾ ನಗರಸಭೆ ಕಚೇರಿಯ ಮೇಲೆಯೂ ದಾಳಿ
ಇ-ಖಾತೆ, ಹಕ್ಕುಪತ್ರ ವರ್ಗಾವಣೆ, ಇ-ಸ್ವತ್ತು, ಯುಜಿಡಿ, ಕಟ್ಟಡ ಪರವಾನಿಗೆ ಕೊಡಲು ಭ್ರಷ್ಟಾಚಾರ ಆರೋಪ ಹಿನ್ನೆಲೆ ಶಿರಾ ನಗರಸಭೆ ಕಚೇರಿಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರಸಭೆ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗಿದ್ದು, ತುಮಕೂರು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಇಬ್ಬರು DySP, ನಾಲ್ವರು ಇನ್ಸ್ಪೆಕ್ಟರ್, 10ಕ್ಕೂ ಹೆಚ್ಚು ಸಿಬ್ಬಂದಿಯಿಂದ ರೇಡ್ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:02 pm, Fri, 17 July 26