ತೇಜಸ್ವಿ ಸೂರ್ಯ, ಡಿಕೆ ಶಿವಕುಮಾರ್Image Credit source: tv9 kannada
ಬೆಂಗಳೂರು, ಆಗಸ್ಟ್ 12: ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗೆ ಬಿಡಿಎ ಮುಂದಾಗಿದೆ. ಇತ್ತೀಚೆಗೆ ಸುರಂಗ ಮಾರ್ಗದ ಕಾಮಗಾರಿಗಳಿಗೆ ಪ್ರಾಥಮಿಕವಾಗಿ ಚಾಲನೆ ನೀಡಲಾಗಿತ್ತು. ಸದ್ಯ ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya), ಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಪತ್ರ ಬರೆದಿದ್ದು, ‘1,140 ಕೋಟಿ ರೂ ಅಂದಾಜು ವೆಚ್ಚದ ಈ ಯೋಜನೆಯನ್ನು ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಮುಂದುವರಿಸಬಾರದು’ ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬರೆದ ಪತ್ರದಲ್ಲಿ ಏನಿದೆ?
‘ಹೆಬ್ಬಾಳ ಶಾರ್ಟ್ ಟನಲ್ ಯೋಜನೆಯು ಹೆಬ್ಬಾಳ ಕೆರೆಯ ಜಮೀನಿನ ಮೂಲಕ ಹಾದುಹೋಗಲಿದ್ದು, ಯೋಜನಾ ಕಾಮಗಾರಿಗಾಗಿ ಸುಮಾರು 3.45 ಎಕರೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ, ಇದು ಪ್ರಸ್ತಾವಿತ ಮೆಟ್ರೋ ರೆಡ್ ಲೈನ್ ಹಾಗೂ ಸಬ್ ಅರ್ಬನ್ ರೈಲು ಯೋಜನೆಗಳೊಂದಿಗೆ ಸಂಘರ್ಷಿಸುವ ಸಾಧ್ಯತೆಯಿದೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
The ₹1,140 crore Hebbal Short Tunnel project should not proceed without a scientific assessment.
Experts have raised serious concerns over the project’s design, safety, and integration with Bengaluru’s long-term mobility network. The project also passes through Hebbal Lake… pic.twitter.com/TDXohEo8KY
— Tejasvi Surya (@Tejasvi_Surya) August 12, 2026
‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಅನುಮೋದನೆಯನ್ನೇ ಪಡೆಯದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವಾರು ನಾಗರಿಕ ಸಂಘಟನೆಗಳು ಈ ಬಗ್ಗೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅವರೊಂದಿಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಕಾಮಗಾರಿಯನ್ನು ಆರಂಭಿಸಲಾಗಿದೆ’ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ
‘ಇನ್ನು ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಸಮಗ್ರ ಸಂಚಾರ ಸಿಮ್ಯುಲೇಷನ್ ಅಧ್ಯಯನ ನಡೆಸಬೇಕು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ಮಾಡಿಸಬೇಕು. ಇದರ ಜೊತೆಗೆ, ಯೋಜನೆಯ ಕುರಿತು ನಗರಾಡಳಿತ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಸಂಸ್ಥೆಗಳ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಡೆಯಬೇಕು’ ಎಂದು ಪತ್ರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ಗೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:02 pm, Wed, 12 August 26