All posts by nagaraj11081993

ಆಂಬ್ಯುಲೆನ್ಸ್ ನಲ್ಲಿ ಬಂದು ಎಸ್ಎಸ್ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಆರ್ಥಿಕ ನೆರವು! – Kannada News | Kolar Girl Who Lost Leg in Accident Writes SSLC Exam: Gets Financial Aid from Suresh Kumar

ಆಂಬ್ಯುಲೆನ್ಸ್ ನಲ್ಲಿ ಬಂದು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಆರ್ಥಿಕ ನೆರವು!

ಕೋಲಾರ, ಏಪ್ರಿಲ್ 21: ಜಿಲ್ಲೆಯ ಕೆಜಿಎಫ್ (Kolar) ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಎಲ್ಲರ ಗಮನ ಸೆಳೆದಿತ್ತು. ಈ ಮೂಲಕ ಮನಸ್ಥೈರ್ಯ ಇದ್ದರೆ ಯಾವುದೂ ಅಸಾಧ್ಯವಲ್ಲವೆಂದು ಬಾಲಕಿ ತೋರಿಸಿಕೊಟ್ಟಿದ್ದಳು. ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಳು. ಆದರೆ ಈಗ ಅದೇ ಬಾಲಕಿಯ ಚಿಕಿತ್ಸೆಗೆ ಆಕೆಯ ತಂದೆ ಹರಸಾಹಸ ಪಡುತ್ತಿರುವುದನ್ನು ತಿಳಿದ ಮಾಜಿ ಸಚಿವ ಸುರೇಶ್ ಕುಮಾರ್, ಬಾಲಕಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.

ಸ್ಟ್ರೆಚರ್​ನಲ್ಲಿ ಮಲಗಿಕೊಂಡೇ ಪರೀಕ್ಷೆ ಬರೆದಿದ್ದ ಬಾಲಕಿ

ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿಯಾದ ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ 16 ವರ್ಷದ ಕುಸುಮಾ, ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಳು. ನಂತರ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿದ್ದರೂ, ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದ ಕುಸುಮಾ, ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೇಂದ್ರದಲ್ಲಿ ಸ್ಟ್ರೆಚರ್ ಬೆಡ್ ಮೇಲೆ ಮಲಗಿಕೊಂಡೇ ಆಕೆ ಪರೀಕ್ಷೆ ಬರೆದಿದ್ದು, ಆಕೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.. ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಗಮನಿಸಿ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡಿದ್ದರು.

ಸುರೇಶ್ ಕುಮಾರ್ ಹೇಳಿದ್ದೇನು?

ಇದನ್ನೂ ಓದಿ ಆಂಬ್ಯುಲೆನ್ಸ್‌ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ

ವಿಷಯ ತಿಳಿದು ತಕ್ಷಣ ನೆರವಿಗೆ ಬಂದ ಸುರೇಶ್ ಕುಮಾರ್!

ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರಿನ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಅಗತ್ಯವಿದ್ದ ಹಣದ ಕೊರತೆಯಿಂದ ತಂದೆ ಶಂಕರಪ್ಪ ಸಂಕಷ್ಟಕ್ಕೀಡಾಗಿ, ತನ್ನ ಕಿಡ್ನಿ ಮಾರಾಟ ಮಾಡುವ ನಿರ್ಧಾರಕ್ಕೂ ಬಂದಿದ್ದರು. ವಿಷಯ ತಿಳಿದು ಮಾಜಿ ಸಚಿವ ಸುರೇಶ್ ಕುಮಾರ್ ತಕ್ಷಣ ಸ್ಪಂದಿಸಿ ನೆರವಿಗೆ ಬಂದಿದ್ದಾರೆ. ಅವರು ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರಿಗೆ ಮಾಹಿತಿ ನೀಡಿ, ಮುಖ್ಯಮಂತ್ರಿ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸುವ ವ್ಯವಸ್ಥೆ ಮಾಡಲು ಮುಂದಾಗಿದ್ದು, ಈ ಭರವಸೆಯಿಂದ ಕುಟುಂಬಕ್ಕೆ ಜೀವ ಬಂದಂತಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ವಿಷಯ ಹಂಚಿಕೊಂಡ ಸುರೇಶ್ ಕುಮಾರ್ ಅವರ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತರಕಾರಿ ದರ ದಿಢೀರ್ ಏರಿಕೆ: 100ರ ಗಡಿ ದಾಟಿದ ಬೀನ್ಸ್, ಕಂಗಾಲಾದ ಗ್ರಾಹಕ! ಯಾವ ತರಿಕಾರಿಗೆ ಎಷ್ಟು? ಇಲ್ಲಿದೆ ಲಿಸ್ಟ್ – Kannada News | Karnataka Vegetable Prices Surge: Beans Reach Rs 100 per KG Amid Rising Summer Temperatures in Bengaluru

ಬೆಂಗಳೂರು, ಏಪ್ರಿಲ್ 21: ಒಂದು ಕಡೆ ಸುಡುತ್ತಿರುವ ಬಿಸಿಲು ಹಾಗೂ ತಾಪಮಾನ ಏರಿಕೆ ಜನರನ್ನು ಹೈರಾಣಾಗಿಸುತ್ತಿದ್ದರೆ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ತರಕಾರಿ ದರಗಳು (Vegetable Price) ಗಗನಕ್ಕೇರುತ್ತಿವೆ. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಪ್ರತಿ ಕೆಜಿ ತರಕಾರಿ ದರದಲ್ಲಿ 10 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗಿರುವುದರಿಂದ ತರಕಾರಿ ಇಳುವರಿ ಕುಸಿದಿದೆ. ಮಾರುಕಟ್ಟೆಗೆ ಬರುತ್ತಿರುವ ತರಕಾರಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಹೋಟೆಲ್ ಮತ್ತು ಸಮಾರಂಭಗಳಿಗೆ ಬೇಡಿಕೆ ಹೆಚ್ಚಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಪಲಾವ್ ಮತ್ತು ಸಾಂಬಾರ್‌ಗೆ ಬಳಸುವ ಬೀನ್ಸ್ ದರ ಈಗ ಕೆಜಿಗೆ 100 ರೂಪಾಯಿ ತಲುಪಿದ್ದು, ಸಾಮಾನ್ಯರ ಕೈಗೆ ಎಟುಕದಂತಾಗಿದೆ.

ಮಾರುಕಟ್ಟೆ ದರ ಪಟ್ಟಿ (ಪ್ರತಿ ಕೆಜಿಗೆ ರೂ.ಗಳಲ್ಲಿ)

ಪ್ರಸ್ತುತ ಮಾರುಕಟ್ಟೆಯಲ್ಲಿನ ದರಗಳು ಮತ್ತು ಕಳೆದ ವಾರದ ದರಗಳ ವ್ಯತ್ಯಾಸ ಹೀಗಿದೆ:

ತರಕಾರಿಗಳು – ಪ್ರಸ್ತುತ ದರ – ಒಂದು ವಾರದ ಹಿಂದಿನ ದರ

  • ಟೊಮೆಟೊ – 35 – 20
  • ಕ್ಯಾರೆಟ್ – 80 – 40
    ಹೂಕೋಸು 1ಕ್ಕೆ – 20 – 10
  • ಗೆಡ್ಡೆಕೋಸು – 60 – 30
  • ಮೂಲಂಗಿ – 60 – 40
  • ಬೀನ್ಸ್ – 100 – 50
  • ಬದನೆಕಾಯಿ – 50 – 40
  • ಆಲೂಗಡ್ಡೆ – 50 – 30
  • ಹಾಗಲಕಾಯಿ – 60 – 40
  • ಹೀರೆಕಾಯಿ – 50 – 30
  • ದಪ್ಪಮೆಣಸಿನಕಾಯಿ – 60 – 40
  • ಬೀಟ್ರೂಟ್ – 60 – 40

ವ್ಯಾಪಾರಿಗಳ ಕಳವಳ

ದರ ಏರಿಕೆಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕ್ಷೀಣಿಸುತ್ತಿದೆ. ಬೆಲೆ ಹೆಚ್ಚಾದಂತೆ ಜನರು ತರಕಾರಿ ಖರೀದಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ, ಇದರಿಂದ ನಮಗೆ ವ್ಯಾಪಾರ ಮಾಡುವುದೇ ಕಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಉಷ್ಣ ಅಲೆ ಇನ್ನೂ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಹಲ್ಗಾಮ್ ಪ್ರವಾಸಿಗರಿಗೆ ಈಗ ‘QR’ ಕವಚ: ಸುರಕ್ಷತೆಗಾಗಿ ಜಮ್ಮು-ಕಾಶ್ಮೀರ ಸರ್ಕಾರದ ಹೈಟೆಕ್ ಹೆಜ್ಜೆ – Kannada News | Pahalgam: Scan for Safety, New QR Initiative Aims to Protect Tourists

ತಂತ್ರಜ್ಞಾನ ಮತ್ತು ಭದ್ರತೆಯ ಸಮ್ಮಿಲನ: ಪ್ರತಿಯೊಬ್ಬರ ಕೊರಳಲ್ಲಿ ರಾರಾಜಿಸುತ್ತಿರುವ ಈ QR ಕೋಡ್ ಆಧಾರಿತ ಐಡಿ ಕಾರ್ಡ್‌ಗಳು, ಪ್ರವಾಸಿಗರಿಗೆ ನೀಡಲಿವೆ ‘ತ್ವರಿತ ಗುರುತಿಸುವಿಕೆ’ಯ ಭರವಸೆ. ಪಹಲ್ಗಾಮ್‌ನ ಅತ್ಯಂತ ಸುಂದರ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಇನ್ನು ಮುಂದೆ ಯಾರೂ ಅನಾಮಧೇಯರಾಗಿ ಓಡಾಡುವಂತಿಲ್ಲ. ಕುದುರೆ ಸವಾರರು, ಗೈಡ್‌ಗಳು ಅಥವಾ ಸಣ್ಣ ವ್ಯಾಪಾರಿಗಳಾಗಲಿ – ಪ್ರತಿಯೊಬ್ಬರ ಕೊರಳಲ್ಲೂ ಈಗ ಒಂದು ವಿಶಿಷ್ಟ ಕ್ಯೂ ಆರ್ ಕೋಡ್ ಇರಲಿದೆ.

Source link

Operation Mahadev:ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ – Kannada News | Operation Mahadev: Inside the Hunt That Ended Pahalgam Attack Plotters

ಪಹಲ್ಗಾಮ್, ಏಪ್ರಿಲ್ 21: ಪಹಲ್ಗಾಮ್‌(Pahalgam)ನ ಆ ರಕ್ತಸಿಕ್ತ ಏಪ್ರಿಲ್ 22ರ ಕರಾಳ ನೆನಪುಗಳು ಇನ್ನೂ ಮಾಸಿಲ್ಲ. ಅಮಾಯಕ ಪ್ರವಾಸಿಗರ ಹತ್ಯೆ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಆದರೆ, ಆ ನೋವಿನ ಹಿಂದೆಯೇ ಭಾರತೀಯ ಸೇನೆಯು ಎಪ್ಪತ್ತೇಳು ಚದರ ಕಿಲೋಮೀಟರ್‌ಗಳ ದಟ್ಟ ಅರಣ್ಯದಲ್ಲಿ ಬರೆದ ಶೌರ್ಯದ ಗಾಥೆಯ ಹೆಸರೇ ‘ಆಪರೇಷನ್ ಮಹಾದೇವ್’. ಇದು ಕೇವಲ ಒಂದು ಕಾರ್ಯಾಚರಣೆಯಲ್ಲ, ಅನ್ಯಾಯದ ವಿರುದ್ಧ ಭಾರತೀಯ ಪಡೆಗಳು ನಡೆಸಿದ 93 ದಿನಗಳ ಮಹಾಬೇಟೆ. ಈ ರೋಚಕ ಕಥೆ ಇಲ್ಲಿದೆ.

ಏಪ್ರಿಲ್ 22ರಂದು ಪಹಲ್ಗಾಮ್ ಸುಂದರ ಪ್ರವಾಸಿ ತಾಣವಾಗಿ ಉಳಿದಿರಲಿಲ್ಲ. ಲಷ್ಕರ್-ಎ-ತೈಬಾದ ಸುಲೈಮಾನ್ ಶಾ, ಹಮ್ಜಾ ಅಫ್ಘಾನಿ ಮತ್ತು ಜಿಬ್ರಾನ್ ಭಾಯ್ ಎಂಬ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುರುತಿನ ಆಧಾರದ ಮೇಲೆ ಹತ್ಯೆ ಮಾಡಿದ್ದರು. ಈ ಕ್ರೂರ ಹತ್ಯಾಕಾಂಡ ದೇಶದ ಆತ್ಮಸಾಕ್ಷಿಯನ್ನೇ ನಡುಗಿಸಿತ್ತು. ಆದರೆ, ಈ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ತನ್ನ ‘ಸೇಡಿನ ಯೋಜನೆ’ಗೆ ನಾಂದಿ ಹಾಡಿತ್ತು.

ಪರಾರಿಯಾಗಲು ಬಿಡದ ಭದ್ರಕೋಟೆ
ಭಯೋತ್ಪಾದಕರು ಹಪತ್ನರ್ ಮತ್ತು ಬಗ್ಮಾರ್ ಮಾರ್ಗವಾಗಿ ಡಚ್ಚಿಗಮ್‌ನ ದಟ್ಟ ಕಾಡುಗಳಿಗೆ ಓಡಿಹೋದ ಮಾಹಿತಿ ಲಭಿಸಿತು. ಆರಂಭಿಕ ಹಂತದಲ್ಲಿ ಸೇನೆಯ ಗುರಿ ಸ್ಪಷ್ಟವಾಗಿತ್ತು, “ಉಗ್ರರನ್ನು ಕಣಿವೆಯಿಂದ ಹೊರಹೋಗಲು ಬಿಡಬಾರದು.” ಹ್ಯೂಮನ್ ಇಂಟೆಲಿಜೆನ್ಸ್ (HUMINT) ಮತ್ತು ಹೈಟೆಕ್ ತಾಂತ್ರಿಕ ಮಾಹಿತಿ (TECHINT) ಬಳಸಿ ಸೇನೆಯು ಉಗ್ರರ ಚಲನವಲನದ ಪ್ರತಿಯೊಂದು ಹೆಜ್ಜೆಯನ್ನೂ ಪತ್ತೆಹಚ್ಚಿತು.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ, 26/11 ಮುಂಬೈ ದಾಳಿಯಂತೆಯೇ ಎಲ್​ಇಟಿ-ಐಎಸ್​ಐ ಜಂಟಿ ಯೋಜನೆಯಾಗಿತ್ತು

ಮಹಾದೇವ್ ರಿಡ್ಜ್ ಮೇಲೆ ಹದ್ದಿನ ಕಣ್ಣು
ಮೇ ತಿಂಗಳು ಬಂದಾಗ ಕಾರ್ಯಾಚರಣೆಗೆ ಹೊಸ ಆಯಾಮ ದೊರೆಯಿತು. ಸೇನೆಯ ಗಣ್ಯ PARA (ವಿಶೇಷ ಪಡೆಗಳು) ಘಟಕ ರಂಗಕ್ಕಿಳಿಯಿತು. 300 ಚದರ ಕಿಲೋಮೀಟರ್‌ಗಳ ವಿಶಾಲ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದವು. ಆಧುನಿಕ ಡ್ರೋನ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್‌ಗಳು ಮತ್ತು ರಿಮೋಟ್ ಪೈಲಟ್ ವಿಮಾನಗಳು ಕಾಡಿನ ಪ್ರತಿ ಮರದ ನಡುವೆ ಉಗ್ರರಿಗಾಗಿ ಹುಡುಕಾಟ ನಡೆಸಿದವು. ಸೇನೆಯ ಈ ನಿರಂತರ ಒತ್ತಡ ಉಗ್ರರನ್ನು ಇಲಿಗಳಂತೆ ಬಿಲ ಸೇರುವಂತೆ ಮಾಡಿತು.

ನಿರ್ಣಾಯಕ ಹಂತ: 25 ಚದರ ಕಿಲೋಮೀಟರ್‌ನ ಮೃತ್ಯುಕೂ
ಜುಲೈ 10, 2025 ರಂದು ಆಪರೇಷನ್ ಮಹಾದೇವ್ ತನ್ನ ಅಂತಿಮ ಘಟ್ಟಕ್ಕೆ ತಲುಪಿತು. ಲಿಡ್ವಾಸ್ ಮತ್ತು ಹರ್ವಾನ್ ಪ್ರದೇಶಗಳಲ್ಲಿ ಉಗ್ರರು ಸಿಕ್ಕಿಬಿದ್ದರು. 93 ದಿನಗಳ ಸುದೀರ್ಘ ಕಾಯುವಿಕೆಯ ನಂತರ, ಸೇನೆಯು ಉಗ್ರರ ಅಡಗುದಾಣವನ್ನು ಕೇವಲ 25 ಚದರ ಕಿಲೋಮೀಟರ್ ಪ್ರದೇಶಕ್ಕೆ ಸೀಮಿತಗೊಳಿಸಿತ್ತು.

ಅಂತಿಮ ಪ್ರಹಾರ: PARA ಪಡೆಯ ಸಾಹಸ
ಆ ಕಡಿದಾದ ಪರ್ವತ ಹಾದಿಯಲ್ಲಿ PARA ತಂಡವು ಕೇವಲ 10 ಗಂಟೆಗಳಲ್ಲಿ 3 ಕಿಲೋಮೀಟರ್‌ಗಳ ಅತ್ಯಂತ ಕಠಿಣ ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿತು. ಉಗ್ರರಿಗೆ ಸುಳಿವು ಸಿಗುವ ಮೊದಲೇ ಭಾರತೀಯ ಸೈನಿಕರು ಸಾವುವಾಗಿ ಎದುರು ನಿಂತಿದ್ದರು. ತೀವ್ರ ಗುಂಡಿನ ಚಕಮಕಿಯ ನಂತರ, ಪಹಲ್ಗಾಮ್‌ನಲ್ಲಿ ರಕ್ತ ಚೆಲ್ಲಿದ್ದ ಆ ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದರು.

ನ್ಯಾಯ ಸಿಕ್ಕಿತು, ನಂಬಿಕೆ ಉಳಿಯಿತು
ಆಪರೇಷನ್ ಮಹಾದೇವ್ ಕೇವಲ ಉಗ್ರರನ್ನು ಕೊಂದ ಕಾರ್ಯಾಚರಣೆಯಲ್ಲ, ಇದು ಭಾರತದ ತಾಂತ್ರಿಕ ಶಕ್ತಿ, ಯುದ್ಧತಂತ್ರದ ತಾಳ್ಮೆ ಮತ್ತು ಸೈನಿಕರ ಅಪ್ರತಿಮ ಶೌರ್ಯಕ್ಕೆ ಸಾಕ್ಷಿ. ಬೈಸರನ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ಸೇನೆಯು ಗನ್ ಮುಖಾಂತರವೇ ನ್ಯಾಯ ಒದಗಿಸಿತ್ತು. ಭಾರತದ ಮಣ್ಣಿನಲ್ಲಿ ರಕ್ತ ಚೆಲ್ಲುವ ಪ್ರತಿಯೊಬ್ಬರಿಗೂ ‘ಮಹಾದೇವ್’ ರೂಪದ ಸಂಹಾರ ಕಾದಿದೆ.

ಏಪ್ರಿಲ್ 22, 2025 ರಂದು ಪಹಲ್ಗಾಮ್ ಭಯಾನಕ ಸ್ಥಳವಾಗಿ ಮಾರ್ಪಟ್ಟಿತು. ಸಶಸ್ತ್ರ ಉಗ್ರಗಾಮಿಗಳು ಈ ಪ್ರದೇಶಕ್ಕೆ ನುಗ್ಗಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು, 26 ಜನರು ಸಾವನ್ನಪ್ಪಿದ್ದರು. ಏಪ್ರಿಲ್ 22, 2025 ರಂದು, ಮಧ್ಯಾಹ್ನ 1 ರಿಂದ 2.45 ರ ನಡುವೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಿಂದ ಸುಮಾರು 7 ಕಿಮೀ (4.3 ಮೈಲುಗಳು) ದೂರದಲ್ಲಿರುವ ಬೈಸರನ್ ಕಣಿವೆಯನ್ನು ಪ್ರವೇಶಿಸಿದರು. ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಈ ಕಣಿವೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಬಹುದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gurus Guidance: ಒಬ್ಬ ವ್ಯಕ್ತಿಯ ಜೀವನದುದ್ದಕ್ಕೂ ಗುರುವಿನ ಅನುಗ್ರಹ ಏಕೆ ಮುಖ್ಯ? – Kannada News | Why a Gurus Guidance is Essential for Human Existence; Checkout the details here

ಮಾನವನ ಜೀವನದಲ್ಲಿ ದೈವಾನುಗ್ರಹ ಮತ್ತು ತಂದೆ-ತಾಯಿಗಳ ಆಶೀರ್ವಾದ ಎಷ್ಟು ಮುಖ್ಯವೋ, ಅಷ್ಟೇ ಪ್ರಮುಖವಾದದ್ದು ಗುರುವಿನ ಅನುಗ್ರಹ. ಹುಟ್ಟಿದಾಗಿನಿಂದ ಸಾವಿನ ತನಕ, ಅಂದರೆ ಉಸಿರು ಪ್ರಾರಂಭವಾದಾಗಿನಿಂದ ನಿಲ್ಲುವವರೆಗೂ ಗುರುವಿನ ಮಾರ್ಗದರ್ಶನ ಅನಿವಾರ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, “ಹರ ಮುನಿದರೂ ಗುರು ಕಾಯುವನು” ಎಂಬ ಮಾತು ಗುರುವಿನ ಮಹತ್ವವನ್ನು ಸಾರುತ್ತದೆ. ದೇವರುಗಳ ಅನುಗ್ರಹ ಸಿಗದೆ ಇದ್ದರೂ, ಗುರುವು ನಮ್ಮನ್ನು ಕಾಯುತ್ತಾನೆ ಎಂಬುದು ನಮ್ಮ ಹಿಂದೂ ಸನಾತನ ಸಂಪ್ರದಾಯದ ನಂಬಿಕೆ. ನಾವು ಹುಟ್ಟಿದಾಗ ತಂದೆ-ತಾಯಿಗಳೇ ಮೊದಲ ಗುರುಗಳು. ನಂತರ, ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರು, ಮತ್ತು ಉದ್ಯೋಗ ಅಥವಾ ಜೀವನ ನಿರ್ವಹಣೆಯ ಕಾಲದಲ್ಲಿ ಮಾರ್ಗದರ್ಶನ ನೀಡುವವರು ಗುರುಗಳಾಗಿರುತ್ತಾರೆ. ಯಾರು ಗುರುಗಳ ಆಶ್ರಯವನ್ನು ಪಡೆಯುತ್ತಾರೋ ಅವರ ಜೀವನವು ಪರಿಪೂರ್ಣ ಮತ್ತು ಸಮಾಧಾನವಾಗಿರುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ. ಜೀವಂತ ಗುರುಗಳು ಇರಬಹುದು, ಇಲ್ಲವೇ ದೈವಾಧೀನರಾಗಿದ್ದರೂ ಅವರ ದೈವಾಂಶವನ್ನು ಪಡೆದು ನಮ್ಮ ಜೊತೆ ಇರುವ ಮಹಾತ್ಮರು ಇರಬಹುದು.

ವೇದವ್ಯಾಸರು, ದತ್ತಾತ್ರೇಯರು, ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಣ್ಣನವರು, ಸಾಯಿಬಾಬಾ, ಶ್ರೀಧರ ಸ್ವಾಮಿಗಳು, ರಾಘವೇಂದ್ರ ಸ್ವಾಮಿಗಳು, ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ವಿವೇಕಾನಂದರು, ಅರವಿಂದ ಸ್ವಾಮಿಗಳು, ಹಾಗೂ ದಾಸವರೇಣ್ಯರಾದ ಪುರಂದರದಾಸರು ಮತ್ತು ಕನಕದಾಸರು-ಇವರೆಲ್ಲರೂ ನಮ್ಮ ಆಧ್ಯಾತ್ಮಿಕ ಗುರುಗಳೇ. ನಿಮಗೆ ಇಷ್ಟವಾದ ಗುರುವಿನ ತತ್ವಗಳನ್ನು ಅನುಸರಿಸಿದಾಗ ಜೀವನದ ಯಾವ ಕಷ್ಟಗಳೂ ನಿಮ್ಮ ಬಳಿಗೆ ಬರುವುದಿಲ್ಲ. ಗುರುವಿನ ಕೃಪೆ ಇದ್ದರೆ ನವಗ್ರಹ ದೋಷಗಳು ಬಾಧಿಸುವುದಿಲ್ಲ ಮತ್ತು ಯಾವುದೇ ವಿಚಿತ್ರ ಪೂಜೆ-ಪುನಸ್ಕಾರಗಳ ಅವಶ್ಯಕತೆಯೂ ಇರುವುದಿಲ್ಲ.

ಗುರು ಎಂಬ ಪದಕ್ಕೆ “ಗು” ಎಂದರೆ ಅಂಧಕಾರ, “ಋ” ಎಂದರೆ ಅದನ್ನು ಹೋಗಲಾಡಿಸುವವನು ಎಂಬ ಅರ್ಥವಿದೆ. ಗುರುಪೂರ್ಣಿಮೆಯನ್ನು ವರ್ಷಕ್ಕೊಮ್ಮೆ ಆಚರಿಸುವುದರ ಜೊತೆಗೆ, ಪ್ರತಿನಿತ್ಯವೂ ಗುರುವಿನ ಸ್ಮರಣೆ ಮಾಡುವುದು ಮುಖ್ಯ. ಗುರು ದರ್ಶನ, ನಂತರ ಇಷ್ಟದೇವರ ದರ್ಶನ, ಮತ್ತು ಜೀವಂತ ತಂದೆ-ತಾಯಿಗಳ ಅಥವಾ ಅವರ ನೆನಪಿನ ಸ್ಮರಣೆ, ದೈವ ಸ್ಮರಣೆ ಮಾಡಿಕೊಂಡ ವ್ಯಕ್ತಿಗೆ ಅಪಮೃತ್ಯು ಹತ್ತಿರ ಬರುವುದಿಲ್ಲ. ಕಷ್ಟಗಳಿಂದ ಪಾರಾಗಲು ಅನುಗ್ರಹ ಸಿಗುತ್ತದೆ. “ಗುರು ಬ್ರಹ್ಮ ಗುರು ವಿಷ್ಣು ಗುರುರ್ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಎಂಬ ಶ್ಲೋಕವು ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮಾನನಾಗಿ ಚಿತ್ರಿಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಗುರುಗಳು, ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಅವರ ಗದ್ದುಗೆಗಳ ಮೂಲಕವೂ ಪ್ರಭಾವ ಬೀರುತ್ತಾರೆ. ಈ ಗದ್ದುಗೆಗಳ ಸುತ್ತಲೂ ಒಂದು ಪ್ರಭಾವಳಿ, ವಿಶೇಷ ಆಕರ್ಷಣ ಶಕ್ತಿ ಇರುತ್ತದೆ, ಅದು ಋಣಾತ್ಮಕ ಶಕ್ತಿಗಳನ್ನು ಹೋಗಲಾಡಿಸುತ್ತದೆ. ಪ್ರತಿನಿತ್ಯ ಐದು ನಿಮಿಷಗಳ ಕಾಲ ಗುರುವಿನ ಸ್ಮರಣೆ ಮಾಡಿಕೊಂಡರೆ ಎಲ್ಲವೂ ಶುಭವಾಗುತ್ತದೆ. ಪರಮಹಂಸರು ಮತ್ತು ರಮಣ ಮಹರ್ಷಿಗಳಂತಹ ಮಹನೀಯರನ್ನು ಸ್ಮರಿಸಿದಾಗ ಅವರ ಅನುಗ್ರಹ ದೊರೆಯುತ್ತದೆ. ರಾಮಕೃಷ್ಣ ಮಠದ ಸ್ವಾಮಿಗಳ ಮುಖದಲ್ಲಿ ಕಾಣುವ ತೇಜಸ್ಸು ಗುರುವಿನ ಅನುಗ್ರಹದ ಫಲವೇ. “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” – ಆತ್ಮದ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ ಪ್ರಯತ್ನಿಸುವವರು ಭಗವಂತನಿಗೆ ಪ್ರಿಯರು. ಆದ್ದರಿಂದ, ನಮ್ಮ ಜೀವನದಲ್ಲಿ ಗುರುವಿನ ಅನುಗ್ರಹವನ್ನು ಪಡೆದು, ಸರಿಯಾದ ಮಾರ್ಗವನ್ನು ಅನುಸರಿಸಿದರೆ ಜೀವನದಲ್ಲಿ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು! ಕಳ್ಳರ ಕೈ ಚಳಕದ ಹಿಂದಿದ್ಯಾ ಬೇರೆ ದಂಧೆ? – Kannada News | Electronic City Cow Theft: Rs 1.5 Lakh worth Cow Theft captured in CCTV

ಆನೆಕಲ್, ಏಪ್ರಿಲ್ 21: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಸು ಕಳ್ಳತನದ ಪ್ರಕರಣ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಆಗ್ಸ್ಟೈನ್ ಮತ್ತು ಪ್ರಸಾದ್ ಎಂಬ ಹಸು ಸಾಕಾಣಿಕಾರರ ಮನೆ ಪಾರ್ಕಿಂಗ್ ಪ್ರದೇಶದಿಂದ ಮೂರು ಹಸುಗಳು ಹಾಗೂ ಒಂದು ಕರು ಕಳ್ಳತನವಾಗಿವೆ. ಜರ್ಸಿ ಮತ್ತು ಎರಡು ಹೆಚ್‌ಎಫ್ ತಳಿಯ ಹಸುಗಳನ್ನು ರಾತ್ರಿ ವೇಳೆ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದ ಮಾಲೀಕರು ಬೆಳಿಗ್ಗೆ ನೋಡಿದಾಗ ಅವು ಕಾಣೆಯಾಗಿದ್ದು ಶಾಕ್ ಆಗಿದ್ದಾರೆ. ಕಳ್ಳರು ಹಸುಗಳನ್ನು ಬೇರೆಡೆ ಮಾರಾಟಕ್ಕೆ ಅಥವಾ ಕಸಾಯಿಖಾನೆಗೆ ಕೊಂಡೊಯ್ದಿರಬಹುದು ಎನ್ನಲಾಗಿದೆ. ಒಟ್ಟಾರೆ ಕದ್ದೊಯ್ದ ಹಸುಗಳ ಬೆಲೆ ಒಂದೂ ವರೆ ಲಕ್ಷಗಳಗಳಷ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ? – Kannada News | Kashmir’s Resilience: Pahalgam Recovers from Terror, Welcomes Tourists Back with Enhanced Security

ಪಹಲ್ಗಾಮ್, ಏಪ್ರಿಲ್ 21: ಒಂದು ವರ್ಷದ ಹಿಂದೆ, ಪಹಲ್ಗಾಮ್‌(Pahalgam)ನ ಬೀದಿಗಳು ಸ್ತಬ್ಧವಾಗಿದ್ದವು. ಪ್ರವಾಸಿಗರ ಗದ್ದಲದ ಬದಲು ಸೈರನ್ ಸದ್ದು ಮತ್ತು ಆತಂಕ ಮನೆಮಾಡಿತ್ತು. ದಾಳಿಯ ನಂತರದ ತಿಂಗಳುಗಳಲ್ಲಿ ಹೋಟೆಲ್‌ಗಳು ಖಾಲಿ ಬಿದ್ದಿದ್ದವು, ಕುದುರೆ ಸವಾರರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಆದರೆ, ಕಾಶ್ಮೀರದ ಜನರ ಅದಮ್ಯ ಚೇತರಿಕೆ ಶಕ್ತಿ ಮತ್ತು ಬದಲಾದ ಭದ್ರತಾ ವ್ಯವಸ್ಥೆ ಇಂದು ಪಹಲ್ಗಾಮ್ ಅನ್ನು ಮತ್ತೆ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಿದೆ.

ಭದ್ರತೆಯೇ ಪ್ರವಾಸಿಗರ ಭರವಸೆ
ದಾಳಿಯ ನಂತರ, ಪ್ರವಾಸಿಗರ ವಿಶ್ವಾಸವನ್ನು ಮರಳಿ ಗಳಿಸುವುದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಸರ್ಕಾರ ಮತ್ತು ಭದ್ರತಾ ಪಡೆಗಳು ‘ಮಲ್ಟಿ-ಲೇಯರ್’ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿವೆ.ಬೆಟ್ಟದ ತಪ್ಪಲುಗಳಲ್ಲಿ ಹಗಲಿರುಳು ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ. ಪ್ರವಾಸಿಗರಿಗೆ ನೆರವಾಗಲೆಂದೇ ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಇದು ಅತಿಥಿಗಳಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಿದೆ.

ಸ್ಥಳೀಯರ ಒಗ್ಗಟ್ಟು ಮತ್ತು ಆತಿಥ್ಯ
“ನಮಗೆ ವ್ಯಾಪಾರಕ್ಕಿಂತ ಹೆಚ್ಚಾಗಿ, ನಮ್ಮ ಊರಿಗೆ ಬರುವ ಅತಿಥಿಗಳ ಸುರಕ್ಷತೆ ಮುಖ್ಯ” ಎನ್ನುತ್ತಾರೆ ಇಲ್ಲಿನ ಸ್ಥಳೀಯ ವ್ಯಾಪಾರಿಗಳು. ದಾಳಿಯ ನಂತರ ಸ್ಥಳೀಯ ಸಮುದಾಯವು ಪ್ರವಾಸಿಗರನ್ನು ಸ್ವಾಗತಿಸಲು ಹೆಚ್ಚಿನ ಉತ್ಸಾಹ ತೋರುತ್ತಿದೆ. ಹೋಂ ಸ್ಟೇಗಳು ಮತ್ತು ಸಣ್ಣ ಕೆಫೆಗಳು ಪ್ರವಾಸಿಗರಿಗೆ ಕಾಶ್ಮೀರದ ನೈಜ ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ಭಯವನ್ನು ಹೋಗಲಾಡಿಸುತ್ತಿವೆ.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ ಹಿಂದೆ ಮೂವರು ಪಾಕಿಸ್ತಾನಿ ಉಗ್ರರ ಕೈವಾಡ; ಎನ್​ಐಎ ತನಿಖೆಯಲ್ಲಿ ಬಹಿರಂಗ

ಬದಲಾದ ಪ್ರವಾಸೋದ್ಯಮ ನೀತಿ
ಕೇವಲ ಸೌಂದರ್ಯವನ್ನಷ್ಟೇ ನಂಬಿ ಕೂರದೇ, ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುವ ಪ್ರವಾಸಿಗರನ್ನು ಆಕರ್ಷಿಸಲು ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕಣಿವೆಯ ಆಯಕಟ್ಟಿನ ಜಾಗಗಳಲ್ಲಿ ಸುಧಾರಿತ ಇಂಟರ್ನೆಟ್ ಸೌಲಭ್ಯವು ‘ವರ್ಕ್ ಫ್ರಮ್ ಎನಿವೇರ್’ ಎನ್ನುವ ಐಟಿ ಉದ್ಯೋಗಿಗಳನ್ನು ಪಹಲ್ಗಾಮ್‌ಗೆ ಸೆಳೆಯುತ್ತಿದೆ.

ಅಂಕಿ-ಅಂಶಗಳು ಹೇಳುವ ಸತ್ಯ
ಕಳೆದ ಆರು ತಿಂಗಳಲ್ಲಿ ಪಹಲ್ಗಾಮ್‌ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೋಟೆಲ್ ಬುಕ್ಕಿಂಗ್‌ಗಳು ಈಗ 80% ದಾಟಿದ್ದು, ಇದು ಈ ಭಾಗದ ಆರ್ಥಿಕತೆಗೆ ಮರುಜೀವ ನೀಡಿದೆ.

ಪಹಲ್ಗಾಮ್ ಕೇವಲ ಒಂದು ಪ್ರವಾಸಿ ತಾಣವಲ್ಲ, ಅದು ಸಂಘರ್ಷದ ಮೇಲಿನ ಶಾಂತಿಯ ಗೆಲುವು. ಭಯೋತ್ಪಾದನೆಯ ಕಪ್ಪು ಚುಕ್ಕೆಯನ್ನು ಮರೆಸಿ, ಪ್ರಕೃತಿಯ ಹಸಿರು ಮತ್ತು ಜನರ ಪ್ರೀತಿ ಇಲ್ಲಿ ಮತ್ತೆ ಗೆದ್ದಿದೆ. ಇಂದು ಪಹಲ್ಗಾಮ್‌ಗೆ ಹೋದರೆ ನಿಮಗೆ ಕಾಣುವುದು ಭಯವಲ್ಲ, ಬದಲಾಗಿ ಕಾಶ್ಮೀರದ ಬೆಚ್ಚಗಿನ ಆತಿಥ್ಯ.

2025ರ ಏಪ್ರಿಲ್ 22 ರಂದು ಏನಾಗಿತ್ತು?
ಏಪ್ರಿಲ್ 22, 2025 ರಂದು ಭಯಾನಕ ಸ್ಥಳವಾಗಿ ಮಾರ್ಪಟ್ಟಿತು. ಸಶಸ್ತ್ರ ಉಗ್ರಗಾಮಿಗಳು ಈ ಪ್ರದೇಶಕ್ಕೆ ನುಗ್ಗಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು, 26 ಜನರು ಸಾವನ್ನಪ್ಪಿದ್ದರು. ಏಪ್ರಿಲ್ 22, 2025 ರಂದು, ಮಧ್ಯಾಹ್ನ 1 ರಿಂದ 2.45 ರ ನಡುವೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಿಂದ ಸುಮಾರು 7 ಕಿಮೀ (4.3 ಮೈಲುಗಳು) ದೂರದಲ್ಲಿರುವ ಬೈಸರನ್ ಕಣಿವೆಯನ್ನು ಪ್ರವೇಶಿಸಿದರು. ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಈ ಕಣಿವೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಬಹುದು.

ಸರಿಸುಮಾರು 200 ಮೀಟರ್ ಅಗಲ ಮತ್ತು 800 ಮೀಟರ್ ಉದ್ದವನ್ನು ಹೊಂದಿರುವ ಈ ಸ್ಥಳದಲ್ಲಿ ಯಾವುದೇ ಸಶಸ್ತ್ರ ಭದ್ರತಾ ಉಪಸ್ಥಿತಿ ಇರಲಿಲ್ಲ. ಆಗ ಜನರ ಬಳಿ ಯಾವ ಧರ್ಮ ಎಂದು ಕೇಳಿ ಗಂಡು ಹಾರಿಸಿದ್ದರು. ಆ ಸಮಯದಲ್ಲಿ ಝಿಪ್ ಲೈನ್‌ನಲ್ಲಿದ್ದ ಅಹಮದಾಬಾದ್‌ನ ಪ್ರವಾಸಿಗರೊಬ್ಬರು ಆಕಸ್ಮಿಕವಾಗಿ ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರನಿಗೆ ಒಂದು ವರ್ಷ ಬ್ಯಾನ್ – Kannada News | Dasun Shanaka Banned for 1 Year by PCB Over IPL Move: Rajasthan Royals Player’s Controversial Exit

ರಾಜಸ್ಥಾನ ರಾಯಲ್ಸ್​​ನ ಈ ಬಾರಿಯ ಐಪಿಎಲ್​​ನಲ್ಲಿ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಹೀಗಿರುವಾಗಲೇ ಈ ತಂಡದ ಸ್ಟಾರ್ ಆಟಗಾರನಿಗೆ ಒಂದು ವರ್ಷದ ಬ್ಯಾನ್ ಬಿಸಿ ತಟ್ಟಿದೆ. ಹಾಗಂತ ಈ ಬ್ಯಾನ್ ಹೇರಿರುವುದು ಬಿಸಿಸಿಐ ಅಲ್ಲ, ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಪಾಕಿಸ್ತಾನ ಸೂಪರ್ ಲೀಗ್ ಆಡುವ ಭರವಸೆ ನೀಡಿ ನಂತರ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಸೇರ್ಪಡೆ ಆಗಿದ್ದೇ ಈ ಬ್ಯಾನ್​​ಗೆ ಕಾರಣ. ಅಷ್ಟಕ್ಕೂ ಬ್ಯಾನ್​​ಗೆ ಒಳಗಾದ ಆಟಗಾರು ಯಾರು? ದಸುನ್ ಶಾನಕ .

ದಸುನ್ ಶಾನಕ ಅವರು ಶ್ರೀಲಂಕಾ ತಂಡದ ಕ್ಯಾಪ್ಟನ್. ಅವರನ್ನು ಈ ಬಾರಿ ಐಪಿಎಲ್​​ನ ಯಾವ ತಂಡವೂ ಹರಾಜಿನಲ್ಲಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಅವರು ಪಾಕಿಸ್ತಾನ ಸೂಪರ್ ಲೀಗ್ ಆಕ್ಷನ್​​ಗೆ ಹೆಸರು ನೋಂದಾಯಿಸಿದರು. ಅವರು ಲಾಹೋರ್ ತಂಡ ಸೇರಿದರು. 75 ಲಕ್ಷ ಪಾಕಿಸ್ತಾನಿ ರೂಪಾಯಿಗೆ (ಭಾರತದಲ್ಲಿ 25 ಲಕ್ಷ ರೂಪಾಯಿ) ಅವರನ್ನು ಖರೀದಿಸಲಾಯಿತು. ಇತ್ತ ಆರ್​​ಆರ್​ ತಂಡದಲ್ಲಿ ಸ್ಯಾಮ್ ಕರನ್ ಅವರು ಇಂಜೂರಿಯಿಂದ ಹೊರಗುಳಿದಿದ್ದರಿಂದ, ಅವರ ಬದಲಿಗೆ ದಸುನ್ ಅವರಿಗೆ ಆಫರ್ ನೀಡಲಾಯಿತು.

ದಸುನ್ ಅವರು ಮರು ಯೋಚಿಸದೇ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅರ್ಧಕ್ಕೆ ಬಿಟ್ಟು, ಐಪಿಎಲ್ ಸೇರಿದರು. ಇದರಿಂದ ಸಿಟ್ಟಾಗಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿ ದಸುನ್​ಗೆ ಒಂದು ವರ್ಷ ಬ್ಯಾನ್ ವಿಧಿಸಿದೆ. ಅಂದರೆ, 2027ರ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅವರು ಆಡುವಂತಿಲ್ಲ.

ಇನ್ನು, ದಸುನ್​​ಗೆ ಪಾಕಿಸ್ತಾನ ನೀಡುತ್ತಿದ್ದ ಹಣಕ್ಕಿಂತ 800 ಪರ್ಸೆಂಟ್ ಹೆಚ್ಚು ಹಣ ಐಪಿಎಲ್​​ನಿಂದ ಸಿಕ್ಕಿದೆ! ಹೌದು, ಆರ್​​ಆರ್​ ತಂಡ ದಸುನ್ ಅವರನ್ನು 2 ಕೋಟಿ ರೂಪಾಯಿ ಕೊಟ್ಟು ತೆಗೆದುಕೊಂಡಿದೆ. ಪಾಕಿಸ್ತಾನದ ಮೊತ್ತಕ್ಕೆ ಇದನ್ನು ಕನ್ವರ್ಟ್ ಮಾಡಿದರೆ 6 ಕೋಟಿ ರೂಪಾಯಿ ಆಗಲಿದೆ. ಪಾಕಿಸ್ತಾನ ಕ್ರಿಕೆಟ್ ಲೀಗ್​​​ನಿಂದ ಅವರಿಗೆ ಸಿಗುತ್ತಿದ್ದದು ಕೇವಲ 75 ಲಕ್ಷ ಪಾಕಿಸ್ತಾನಿ ರೂಪಾಯಿ.

Dasun

ದಸುನ್ ಅವರು ಈ ವಿಷಯವಾಗಿ ಕ್ಷಮೆ ಕೇಳಿದ್ದಾರೆ. ‘ಪಾಕಿಸ್ತಾನ ಸೂಪರ್ ಲೀಗ್​ನಿಂದ ಹಿಂದೆ ಸರಿಯುವ ನನ್ನ ನಿರ್ಧಾರಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಪಾಕ್ ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಈ ಲೀಗ್​ನಿಂದ ಹಿಂದೆ ಸರಿಯುವ ಸಮಯದಲ್ಲಿ ನನಗೆ ಬೇರೆ ಯಾವುದೇ ಪಂದ್ಯಾವಳಿಗೆ ಸೇರುವ ಉದ್ದೇಶವಿರಲಿಲ್ಲ. ನನಗೆ ಪಾಕಿಸ್ತಾನಿ ಅಭಿಮಾನಿಗಳ ಬಗ್ಗೆ ಅಪಾರ ಗೌರವವಿದೆ. ಮುಂದಿನ ದಿನಗಳಲ್ಲಿ ಅಲ್ಲಿಗೆ ಮರಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ದಸುನ್ ಶಾನಕ ಮಾಡಿದ ಸಣ್ಣ ತಪ್ಪಿನಿಂದ ಗೆದ್ದ ಟೀಮ್ ಇಂಡಿಯಾ

ವಿಚಿತ್ರ ಎಂದರೆ, ಈ ಮೊದಲು ಜಿಂಬ್ವಾಬ್ವೆ ಆಟಗಾರ ಮುಝರಬಾನಿ ಅವರು ಪಿಎಸ್​ಎಲ್​ ತೊರೆದು ಐಪಿಎಲ್ ಸೇರಿದ್ದರು. ಅವರಿಗೆ ಎರಡು ವರ್ಷ ಬ್ಯಾನ್ ಹೇರಲಾಗಿದೆ. ಇದೇ ತಪ್ಪು ಮಾಡಿದ ದಸುನ್​​ಗೆ ಏಕೆ ಒಂದು ವರ್ಷ ಶಿಕ್ಷೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೀರೆ ಎಳೆದ್ರು, ಮೈ-ಕೈ ಮುಟ್ಟಿದ್ರು, ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯ ನರಕಯಾತನೆ – Kannada News | TCS Workplace Harassment: Newlywed’s Ordeal, Corporate Jihad Claims Spark Outrage

ಮುಂಬೈ, ಏಪ್ರಿಲ್ 21: ಅದು ಜೂನ್ ತಿಂಗಳು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ ಯುವತಿ, ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾದ ಟಿಸಿಎಸ್‌(TCS)ನ ನಾಸಿಕ್ ಘಟಕಕ್ಕೆ ಅಸೋಸಿಯೇಟ್ ಆಗಿ ಆಯ್ಕೆಯಾದಾಗ ಆಕೆಯ ಕಣ್ಣುಗಳಲ್ಲಿ ನೂರಾರು ಕನಸುಗಳಿದ್ದವು. ಆದರೆ, ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆ ಪವಿತ್ರ ಆವರಣವು ಆಕೆಗೆ ಹಿಂಸೆಯ ತಾಣವಾಗಿ ಬದಲಾಗುತ್ತದೆ ಎಂದು ಆಕೆ ಊಹಿಸಿರಲಿಲ್ಲ.

ತರಬೇತಿಯ ಹೆಸರಲ್ಲಿ ವೈಯಕ್ತಿಕ ಜೀವನಕ್ಕೆ ಲಗ್ಗೆ
ತರಬೇತಿ ಆರಂಭವಾದ ಮೊದಲ ದಿನಗಳಿಂದಲೇ ಆಕೆಗೆ ಕಿರುಕುಳ ಶುರುವಾಗಿತ್ತು. ಸಾಲ ಶಾಖೆಯ ತಂಡದ ನಾಯಕಿ ರಜಾ ಮೆನನ್ ಎಂಬುವವರು ತರಬೇತಿಗೂ ಕೆಲಸಕ್ಕೂ ಸಂಬಂಧವಿಲ್ಲದ ವೈಯಕ್ತಿಕ ಪ್ರಶ್ನೆಗಳಿಂದ ಆಕೆಯನ್ನು ಪೀಡಿಸುತ್ತಿದ್ದರು. “ಗಂಡ ದೂರ ಇದ್ದಾರೆ, ಹೇಗೆ ಮ್ಯಾನೇಜ್ ಮಾಡ್ತೀಯಾ? ಹನಿಮೂನ್‌ಗೆ ಎಲ್ಲಿಗೆ ಹೋಗಿದ್ರಿ? ಅಲ್ಲಿ ಏನು ಮಾಡಿದ್ರಿ?” ಎಂಬ ಅಶ್ಲೀಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಇವೆಲ್ಲವನ್ನೂ ಆಕೆಯ ತರಬೇತಿ ನಾಯಕ ಶಾರುಖ್ ಖುರೇಷಿ ಪ್ರೋತ್ಸಾಹಿಸುತ್ತಿದ್ದ ಎನ್ನುವುದು ಆಕೆಯ ದೂರು.

ಅಷ್ಟಕ್ಕೇ ನಿಲ್ಲದ ರಜಾ ಮೆನನ್, ಆಕೆಗೆ ಪ್ಲೇಯರ್ ಎಂಬ ಅಡ್ಡಹೆಸರು ಇಟ್ಟು ಕಚೇರಿಯಲ್ಲಿ ಎಲ್ಲರೆದುರು ಮೂದಲಿಸುತ್ತಿದ್ದಳು. ಗಂಡನ ಜೊತೆ ಹೊಂದಾಣಿಕೆ ಆಗದಿದ್ದರೆ ಹೇಳು, ನಾವೇ ಯಾರನ್ನಾದರೂ ಹುಡುಕಿಕೊಡುತ್ತೇವೆ ಎಂದೆಲ್ಲಾ ಕೆಟ್ಟದಾಗಿ ಮಾತನಾಡುತ್ತಿದ್ದರು.

ಗೌರವಕ್ಕೆ ಧಕ್ಕೆ: ಸೀರೆ ಎಳೆದ ಘಟನೆ
ಈ ವರ್ಷದ ಗುಡಿ ಪಾಡ್ವಾ ಹಬ್ಬದ ದಿನ ಆಕೆ ಸೀರೆ ಧರಿಸಿ ಬಂದಾಗ ನಡೆದ ಘಟನೆ ಅತ್ಯಂತ ಘೋರವಾದದ್ದು. ಕಚೇರಿಯ ಲಾಬಿಯಲ್ಲಿ ನಡೆಯುತ್ತಿದ್ದಾಗ ಆಕೆಯ ಸೀರೆಯ ಪಲ್ಲುವನ್ನು ರಜಾ ಎಳೆದಿದ್ದರು. ಆಕೆ ಬೆಚ್ಚಿಬಿದ್ದು ತಿರುಗಿ ನೋಡಿದಾಗ ಅಸಭ್ಯವಾಗಿ ನೋಡಿ ನಕ್ಕಿದ್ದ ಅಲ್ಲಿದ್ದ  ಆ ವ್ಯಕ್ತಿಯ ನೋಟ ಆಕೆಯನ್ನು ಇಂದಿಗೂ ಕಾಡುತ್ತಿದೆ.

ಮತ್ತಷ್ಟು ಓದಿ: ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ತರಬೇತಿ ಮುಗಿದ ನಂತರ ಆಸಿಫ್ ಅನ್ಸಾರಿ ಎಂಬ ಸಹೋದ್ಯೋಗಿಯಿಂದ ಆಕೆಗೆ ಮತ್ತಷ್ಟು ಕಾಟ ಶುರುವಾಯಿತು. ಆಕೆ ಕುಳಿತಲ್ಲೇ ಬಂದು ಕುಳಿತುಕೊಳ್ಳುವುದು, ಉದ್ದೇಶಪೂರ್ವಕವಾಗಿ ಮೈ ಮುಟ್ಟುವುದು, ತೊಡೆ ಹಾಗೂ ಭುಜದ ಮೇಲೆ ಕೈ ಹಾಕುವುದು ನಿರಂತರವಾಯಿತು.ಒಮ್ಮೆ ಸಾರ್ವಜನಿಕವಾಗಿಯೇ ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದ. ಭಯಗೊಂಡ ಆಕೆ ಅಲ್ಲಿಂದ ಓಡಿ ಹೋಗಿದ್ದಳು.

ಪೊಲೀಸ್ ಕಾರ್ಯಾಚರಣೆ ಮತ್ತು ‘ಕಾರ್ಪೊರೇಟ್ ಜಿಹಾದ್’
ಈ ಪ್ರಕರಣವು ಕೇವಲ ಒಬ್ಬ ಮಹಿಳೆಯದ್ದಲ್ಲ. ಸುಮಾರು ಆರು ಮಹಿಳೆಯರು ಇಂತಹದ್ದೇ ಕಿರುಕುಳ ಮತ್ತು ಬಲವಂತದ ಮತಾಂತರದ ಆರೋಪಗಳನ್ನು ಹೊರಿಸಿದ್ದಾರೆ. ನಾಸಿಕ್ ಪೊಲೀಸರು ಈವರೆಗೆ 9 ಎಫ್‌ಐಆರ್ ದಾಖಲಿಸಿಕೊಂಡು, ಎಂಟು ಜನರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರು ಈ ಘಟನೆಯನ್ನು “ಕಾರ್ಪೊರೇಟ್ ಜಿಹಾದ್” ಎಂದು ಕರೆದಿದ್ದು, ಗಂಭೀರ ತನಿಖೆಗೆ ಆದೇಶಿಸಿದ್ದಾರೆ.

ಕಂಪನಿಯ ನಿಲುವು ಮತ್ತು ಕುಟುಂಬದ ಪ್ರತಿರೋಧ
ಟಿಸಿಎಸ್ ಸಂಸ್ಥೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ ಮತ್ತು ತನಿಖೆಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಆದರೆ, ಬಂಧಿತ ರಜಾ ಮೆಮನ್ ಕುಟುಂಬವು ಇದು ಕಚೇರಿ ರಾಜಕೀಯದ ಭಾಗವಾಗಿ ನಡೆದ ಪಿತೂರಿ ಎಂದು ಆರೋಪಿಸಿದೆ.

ಕೆಲಸ ಕಳೆದುಕೊಳ್ಳುವ ಭಯ ಮತ್ತು ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯಿಂದಾಗಿ ಇಷ್ಟು ದಿನ ಮೌನವಾಗಿದ್ದ ಆ ಮಹಿಳೆ, ಇಂದು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಈ ಕಥೆಯು ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ನೈತಿಕತೆಯ ಪ್ರಶ್ನೆಯನ್ನು ಬಲವಾಗಿ ಮುಂದಿಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಾಲ ಮಾಡಿ ತಂದಿದ್ದ ‘ಕನಸಿನ ಬೈಕ್’ ಕೊಂಡ ರಾತ್ರಿಯೇ ಕಳ್ಳತನ! ಕೆಟಿಎಂ ಬೈಕ್ ಕಳವಿನ ಕೃತ್ಯ ಸಿಸಿಟಿವಿಲಿ ಸೆರೆ – Kannada News | Nelamangala: Youth’s Dream KTM Bike Stolen on First Night of Purchase; Theft Caught on CCTV

ನೆಲಮಂಗಲ, ಏಪ್ರಿಲ್ 21: ಯುವಕನೊಬ್ಬ ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ (KTM) ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ ಮಾಡಿದೆ. ಅತ್ಯಂತ ಸುಲಭವಾಗಿ ಐಷಾರಾಮಿ ಬೈಕ್ ಅನ್ನು ಎಗರಿಸಿ ಪರಾರಿಯಾಗಿದೆ.

ಕಳ್ಳರು ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹ್ಯಾಂಡಲ್ ಲಾಕ್ ಇದ್ದರೂ ಸಹ ಕಳ್ಳರು ಅದನ್ನು ಮುರಿದು ಬೈಕ್ ಒಯ್ಯುತ್ತಿರುವ ವಿಧಾನ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link