ಲಕ್ನೋ, ಏಪ್ರಿಲ್ 12: ವಿಚ್ಛೇದನ ಪ್ರಕರಣದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿನ ಜತೆ ಲಕ್ನೋ ಹೈಕೋರ್ಟ್ನ 5ನೇ ಮಹಡಿಯಿಂದ ಹಾರಲು ಯತ್ನಿಸಿರುವ ಘಟನೆ ನಡೆದಿದೆ. ಎಸ್‌ಐ ಧೈರ್ಯದಿಂದ ಮಧ್ಯಪ್ರವೇಶಿಸಿ ಎರಡೂ ಜೀವಗಳನ್ನು ಉಳಿಸಿದ್ದಾರೆ. ಮಹಿಳೆಯೊಬ್ಬರು ಕೋರ್ಟ್ನ ಐದನೇ ಮಹಡಿಯ ತುದಿಯಲ್ಲಿ ಮಗುವನ್ನು ಕೈಯಲ್ಲಿ ಎತ್ತಿಕೊಂಡು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಲ್ಲರೂ ಮನವೊಲಿಸಲು ಯತ್ನಿಸಿರುವುದನ್ನು ನೊಡಬಹುದು.
ಶಿವಮೊಗ್ಗ, ಏಪ್ರಿಲ್ 12: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಉಂಟಾದ ಹಿನ್ನೆಲೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ರಸ್ತೆಯು ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಘಾಟ್ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿಯೂ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೂ ಇದು ಅನ್ವಯವಾಗಲಿದೆ. ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು
ತೀರ್ಥಹಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು, ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ತೆರಳಬೇಕು.
ತೀರ್ಥಹಳ್ಳಿಯಿಂದ ಯಡೂರು, ಹುಲಿಕಲ್ ಮಾರ್ಗವಾಗಿ ತೆರಳುವವರು ತೀರ್ಥಹಳ್ಳಿ-ಯಡೂರು, ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ ತೆರಳುವವರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿ ಭಟ್ಕಳ-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬೇಕು.
ಹುಲಿಕಲ್ ಘಾಟ್ನಲ್ಲಿ ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿದು ಓರ್ವ ಹೊರ ರಾಜ್ಯದ ಕಾರ್ಮಿಕ ಸೇರಿ ಮೂವರು ಮೃತಪಟ್ಟಿರುವ ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿತ್ತು. ಅವಘಡದಲ್ಲಿ ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಮೃತಪಟ್ಟಿದ್ದರು. ಸುಮಂತ ಮತ್ತು ಪರಮೇಶ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ರಸ್ತೆಯ ಕೆಲವೆಡೆ ಅಪಾಯದ ಮುನ್ಸೂಚನೆ ಸಿಕ್ಕ ಹಿನ್ನೆಲೆ ಜಿಲ್ಲಅಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ.
IPL 2026: ಐಪಿಎಲ್ ಎಂದರೆ ಕೇವಲ ಸಿಕ್ಸರ್-ಬೌಂಡರಿಗಳ ಅಬ್ಬರವಲ್ಲ, ಅಲ್ಲಿ ಆಟಗಾರರ ನಡವಳಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸಕ್ತ 2026ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ತಮ್ಮ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಸಮಾಧಾನದ ಗುಣದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇತ್ತೀಚಿನ ಪಂದ್ಯವೊಂದರ ಮುಕ್ತಾಯದ ನಂತರ, ಟಿಮ್ ಡೇವಿಡ್ ಮೈದಾನದಿಂದ ಹೊರಹೋಗುತ್ತಿದ್ದಾಗ ಅಭಿಮಾನಿಯೊಬ್ಬರು ಅತೀ ಉತ್ಸಾಹದಿಂದ ಅವರ ಬಳಿ ಬಂದು ಸೆಲ್ಫಿಗಾಗಿ ವಿನಂತಿಸಿದರು. ಈ ವೇಳೆ ಆ ಅಭಿಮಾನಿ ಡೇವಿಡ್ ಅವರಿಗೆ ತೀರಾ ಹತ್ತಿರ ಬಂದಿದ್ದರೂ, ಅವರು ಕಿರಿಕಿರಿ ಮಾಡಿಕೊಳ್ಳದೆ ಬಹಳ ಶಾಂತವಾಗಿ ಆತನ ಮೊಬೈಲ್ ಫೋನ್ ಪಡೆದು, ಅದನ್ನು ಹಿಂತಿರುಗಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ನಿಜವಾದ ಕ್ರೀಡಾ ಮನೋಭಾವ” ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಮೈದಾನದಲ್ಲಿ ದೈತ್ಯ ಸಿಕ್ಸರ್‌ಗಳನ್ನು ಹೊಡೆಯುವ ಈ ಆಟಗಾರ, ಮೈದಾನದ ಹೊರಗೆ ಕಿರಿ ಕಿರಿ ಅನುಭವಿಸಿದರೂ ಎಷ್ಟೊಂದು ವಿನಯವಾಗಿ ವರ್ತಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಮುಂಬೈನಲ್ಲಿರುವ ಟಿಮ್ ಡೇವಿಡ್ ಅ್ಯಂಡ್ ಆರ್ಸಿಬಿ ಪಡೆ ಇಂದು (ಏ.12) ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.
ಏಪ್ರಿಲ್ 11, 2026 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸಲು ಸಿಎಸ್ಕೆ ತಂಡ ವಿಫಲವಾಯಿತು. ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಕನಿಷ್ಠ ಓವರ್ ರೇಟ್ ಅಪರಾಧವೆಂದು ಪರಿಗಣಿಸಲಾಗಿದೆ. ಹೀಗಾಗಿ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಅಲ್ಲದೆ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ (ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ) ಎಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.
ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕನಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.
ಚಿಕ್ಕಮಗಳೂರು, ಏಪ್ರಿಲ್ 12: ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕೇರಳ ಮೂಲದ ಬಾಲಕಿ ಪ್ರಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸೋಲಾರಣ್ಯ ಪ್ರದೇಶ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಸುತ್ತಮುತ್ತ ಪ್ರವಾಸಿಗರು ಅಪಾಯಕಾರಿ ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಬಂಧವಿಲ್ಲದೆ ಸಂಚರಿಸುತ್ತಿದ್ದಾರೆ. ಪ್ರಪಾತಗಳ ಅಂಚಿನಲ್ಲಿ ಸೆಲ್ಫಿ, ಫೋಟೋಶೂಟ್ ಹುಚ್ಚಿನಿಂದ ಅಪಾಯವನ್ನು ಲೆಕ್ಕಿಸದೆ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದ ಹೊರಗಿನಿಂದ ಸಹ ಸಾವಿರಾರು ಮಂದಿ ಪ್ರತಿದಿನ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪ್ರವಾಸಿ ತಾಣದ ಭದ್ರತೆಗೆ ಕಪ್ಪು ಚುಕ್ಕಿ ಬೀಳುವ ಸಾಧ್ಯತೆ ಇದೆ.
ಬೆಂಗಳೂರು, ಏಪ್ರಿಲ್ 12: ಚಿನ್ನದ ಬೆಲೆ ಅಕ್ಷರಶಃ ಡೋಲಾಯಮಾನ ಸ್ಥಿತಿಯಲ್ಲಿದ್ದು ಅತ್ತಿಂದಿತ್ತ ಓಲಾಡುತ್ತಿದೆ. ಕಳೆದ ಎರಡು ವಾರದಿಂದಲೂ ಇದರ ಬೆಲೆಯಲ್ಲಿ ಏರಿಳಿತ ನಿರಂತರವಾಗಿ ಆಗುತ್ತಿದೆ. ಈ ಮಧ್ಯೆ ಕಳೆದ 10 ದಿನದಲ್ಲಿ ಚಿನ್ನದ ಬೆಲೆ (Gold Rates) ಗ್ರಾಮ್ಗೆ 355 ರೂಗಳಷ್ಟು ಏರಿಕೆ ಹೊಂದಿದೆ. ವಿದೇಶಗಳಲ್ಲೂ ಕಳೆದ ಕೆಲ ವಾರಗಳಿಂದ ಅಲ್ಪ ಏರಿಳಿತಗಳೇ ಹೆಚ್ಚಿವೆ. ಬೆಳ್ಳಿ ಬೆಲೆಯೂ ಬಹುತೇಕ ಇದೇ ವರ್ತನೆ ತೋರುತ್ತಿದೆ. ಕಳೆದ 10 ದಿನದಲ್ಲಿ ಇದರ ಬೆಲೆಯಲ್ಲಿ 10 ರೂ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,52,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,40,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,463 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಕಗ್ಗದಾಸಪುರದಲ್ಲಿ ಅಮಾನವೀಯವಾಗಿ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸಿದ ಆರೋಪ ಕೇಳಿಬಂದಿದೆ. ಡಿಆರ್‌ಡಿಒ ಸಂಕೀರ್ಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಅದರ ಬೆನ್ನಲ್ಲೇ, ಬೀದಿ ನಾಯಿಗಳ (Stray Dogs) ಮೇಲಿನ ಕ್ರೌರ್ಯ ಖಂಡಿಸಿ ಪ್ರತಿಭಟನೆ ಮಾಡಲಾಗಿದೆ. ಇದರಲ್ಲಿ ನಟಿ ರಮ್ಯಾ ಕೂಡ ಭಾಗಿ ಆಗಿದ್ದಾರೆ. ಏಪ್ರಿಲ್ 11ರಂದು ಶ್ವಾನ ಪ್ರಿಯರು ಫ್ರೀಡಂ ಪಾರ್ಕ್‌ನಲ್ಲಿ ಒಗ್ಗೂಡಿ ತಮ್ಮ ಆಕ್ರೋಶ ಹೊರಹಾಕಿದರು. ಈ ಹೋರಾಟಕ್ಕೆ ಧ್ವನಿಯಾದ ರಮ್ಯಾ (Ramya Divya Spandana) ಅವರು ಶ್ವಾನಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಕಂಡು ಭಾವುಕರಾದರು.
‘ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಈ ರೀತಿ ಆಗಿದೆ ಎಂಬುದು ಗೊತ್ತಾಗಾದ ನನಗೆ ಆಘಾತ ಆಯಿತು’ ಎಂದು ರಮ್ಯಾ ಅವರು ಪ್ರತಿಭಟನೆ ವೇಳೆ ಕಣ್ಣೀರು ಹಾಕಿದ್ದಾರೆ. ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಮ್ಯಾ ಕಣ್ಣೀರು ಹಾಕಿದ ವಿಡಿಯೋ:
‘ನಾಪತ್ತೆಯಾಗಿರುವ ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಿ’ ಎಂದು ರಮ್ಯಾ ಆಗ್ರಹಿಸಿದರು. ಸುಮಾರು 20ಕ್ಕೂ ಹೆಚ್ಚು ನಾಯಿಗಳು ನಾಪತ್ತೆ ಆಗಿವೆ. Animal Birth Control ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆಗ್ರಹ ಮಾಡಲಾಗಿದೆ. ಸಿ.ವಿ. ರಾಮನ್ ನಗರ ಅನಿಮಲ್ ಸ್ಕ್ವಾಡ್ ಮತ್ತು ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಈ ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಏಪ್ರಿಲ್ 16ರಂದು ಮುಂದಿನ ವಿಚಾರಣೆ ಇದೆ.
ರಮ್ಯಾ ಅವರು ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರು ನಾಯಿಗಳ ರಕ್ಷಣೆ ಬಗ್ಗೆ ಧ್ವನಿ ಎತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರು ಇಂಥ ಘಟನೆಗಳು ನಡೆದಾಗಿ ಮಾಧ್ಯಮಗಳ ಎದುರು ಬಂದು ಮಾತನಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರು ಇಂಥ ಕೃತ್ಯಗಳನ್ನು ಖಂಡಿಸಿದ್ದಾರೆ.
ಮಂಡ್ಯ, ಏಪ್ರಿಲ್ 12: ಸಚಿವ ಸಂಪುಟ ಪುನರ್‌ರಚನೆ ಕುರಿತು ಶಾಸಕ ರವಿಕುಮಾರ್ ಗಣಿಗ ಮಂಡ್ಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ಸಿಕ್ಕು ರಾಜ್ಯಕ್ಕೆ ಸೇವೆ ಸಲ್ಲಿಸಲಿ. ಈ ಸಂಬಂಧ ತಾವು ಸೇರಿದಂತೆ 38 ಶಾಸಕರು ಪತ್ರ ಬರೆದಿದ್ದು, ಐದು ಮಂದಿ ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ಕೋರಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್ ಗಣಿಗ ತಿಳಿಸಿದ್ದಾರೆ. ಹಾಲಿ ಇರುವ ಕೆಲವು ಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸದಿರುವುದು ಮತ್ತು ಜನರಿಗೆ ಲಭ್ಯವಿಲ್ಲದಿರುವುದು ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಇಂತಹ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡುವುದು ಉತ್ತಮ. ಹೀಗಿದ್ದರೂ ಈ ನಿರ್ಧಾರ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.
ಉಡುಪಿ, ಏಪ್ರಿಲ್ 12: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ (Sudeep Rai Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸೌಮ್ಯ ಶೆಟ್ಟಿ ಮೇಲೆ ಹತ್ತು ಹಲವು ಆರೋಪಗಳು ಕೇಳಿ ಬಂದಿದ್ದವು. ಸುದೀಪ್ ಜೊತೆಗೆ ಎರಡನೇ ಮದುವೆಯಾಗಿದ್ದ ಆಕೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆಂದು ಆತನ ತಂದೆ ದಾಮೋದರ ಶೆಟ್ಟಿ ಕೇಸ್ ದಾಖಲಿಸಿದ್ದರು. ತನ್ನ ಮೇಲಿನ ಆರೋಪಗಳನ್ನು ಸೌಮ್ಯ ಅಲ್ಲಗಳೆದರೂ ಇದೀಗ ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಸೌಮ್ಯಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪತಿಗೆ ಬೆದರಿಕೆ ಹಾಕಿದ್ದ ಸೌಮ್ಯ
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ ಫೆಬ್ರವರಿ 17ರಂದು ಕಾರ್ಕಳ ಮೂಲದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುದೀಪ್ ರೈ ಅವರು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ತಾಯಿಯೊಂದಿಗೆ ಕಾರಿನಲ್ಲಿ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ವೇಳೆ, ಸೌಮ್ಯ ಶೆಟ್ಟಿ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಸುದೀಪ್ ಅವರ ಪೋಷಕರು ಆರೋಪಿಸಿದ್ದರು.
ಈ ಘಟನೆಯ ಬಳಿಕ ಮಾರ್ಚ್ 22ರಂದು ಸುದೀಪ್ ರೈ ಅವರು ವಿಷ ಸೇವಿಸಿರುವುದಾಗಿ ಸೌಮ್ಯ ಶೆಟ್ಟಿ ಸಂಬಂಧಿಕರಿಗೆ ಕರೆಮಾಡಿ ತಿಳಿಸಿದ್ದಳು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಮೃತಪಟ್ಟಿದ್ದರು. ಆ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೃತನ ತಂದೆ ಸೊಸೆ ಸೌಮ್ಯಳೇ ಮಗನಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ ಎಂದು ದೂರು ನೀಡಿದ್ದರು.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಸೌಮ್ಯ ಶೆಟ್ಟಿ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಹಿಂದೂ ಸಂಪ್ರದಾಯದಲ್ಲಿ ಯಾವುದೇ ಸ್ಥಳಕ್ಕೆ ಪ್ರವೇಶಿಸುವಾಗ ಬಲಗಾಲು ಅಥವಾ ಎಡಗಾಲು ಇಡುವಿಕೆಗೆ ವಿಶೇಷ ಮಹತ್ವವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ನಾವು ಯಾವುದೇ ಕೆಲಸಕ್ಕೆ ಹೊರಟಾಗ ಅಥವಾ ಹೊಸ ಸ್ಥಳಕ್ಕೆ ಪ್ರವೇಶಿಸುವಾಗ ಯಾವ ಕಾಲು ಇಡಬೇಕು ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವ ಪಡೆದಿದೆ. ಉದಾಹರಣೆಗೆ, ಮದುವೆಯಾದ ಕನ್ಯೆ ಅತ್ತೆಯ ಮನೆಗೆ ಪ್ರವೇಶಿಸುವಾಗ ಬಲಗಾಲಿಟ್ಟು ಬಾರಮ್ಮ ಎಂದು ಹೇಳುವುದು ರೂಢಿ. ಈ ಬಲಗಾಲು ಮತ್ತು ಎಡಗಾಲಿನ ಮಹತ್ವವೇನೆಂದರೆ, ನಮ್ಮ ದೇಹದ ಬಲಭಾಗವನ್ನು ಸೂರ್ಯ ಭಾಗ ಎಂದೂ, ಎಡಭಾಗವನ್ನು ಚಂದ್ರ ಭಾಗ ಎಂದೂ ಕರೆಯಲಾಗುತ್ತದೆ. ಬಲಗಾಲು ಸೂರ್ಯ ಭಾಗವನ್ನು ಪ್ರತಿನಿಧಿಸುವುದರಿಂದ, ಇದನ್ನು ಸುಪ್ರೋವೃದ್ಧಿ ಮತ್ತು ಅಭಿವೃದ್ಧಿಯ ಚಿಹ್ನೆ ಎಂದು ನಂಬಲಾಗುತ್ತದೆ. ಬಲಗಾಲು ಇಟ್ಟು ಬಂದಾಗ ಮನೆಯಲ್ಲಿ ಸಕಲ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯನ್ನು ಕೆಲವರು ಗೇಲಿ ಮಾಡಬಹುದು, ಆದರೆ ನಮ್ಮ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಮಾತಿದೆ.
ಹನುಮಂತನ ಲಂಕಾ ಪ್ರವೇಶದ ಕಥೆ ಇದಕ್ಕೆ ಉತ್ತಮ ಉದಾಹರಣೆ. ಹನುಮಂತನು ಸೀತಾನ್ವೇಷಣೆಗಾಗಿ ಲಂಕಾನಗರದ ಮುಖ್ಯ ದ್ವಾರಕ್ಕೆ ಬಂದಾಗ, ರಾವಣನು ಸೀತೆಯನ್ನು ಅಪಹರಿಸಿ ನಮ್ಮ ಶತ್ರುವಾಗಿದ್ದಾನೆಂದು ಭಾವಿಸಿ, ಆತನಿಗೆ ಕೆಟ್ಟದ್ದಾಗಲಿ ಎಂಬ ಉದ್ದೇಶದಿಂದ ಎಡಗಾಲನ್ನು ಇಟ್ಟು ಲಂಕೆಯನ್ನು ಪ್ರವೇಶಿಸುತ್ತಾನೆ. ಇದು ನಮಗೆ ಒಂದು ಪಾಠವನ್ನು ಕಲಿಸುತ್ತದೆ: ಶತ್ರುಗಳು, ಕ್ರೂರಿಗಳು, ಭ್ರಷ್ಟರು ಅಥವಾ ಸಮಾಜ ಘಾತಕರ ಮನೆಗಳಿಗೆ ಪ್ರವೇಶಿಸುವಾಗ ಬಲಗಾಲು ಇಡಬೇಕೆಂಬ ನಿಯಮವಿಲ್ಲ, ಎಡಗಾಲು ಇಟ್ಟು ಕೂಡ ಹೋಗಬಹುದು. ಹನುಮಂತನ ಈ ಕಾರ್ಯವೇ ಇದಕ್ಕೆ ಪ್ರಬಲ ನಿದರ್ಶನ.
ವೇದಶಾಸ್ತ್ರಗಳ ಪ್ರಕಾರ, ಶುಭ ಕಾರ್ಯಗಳಿಗೆ ಮತ್ತು ಶುಭ ಸ್ಥಳಗಳಿಗೆ ಬಲಗಾಲು ಇಟ್ಟು ಪ್ರವೇಶಿಸುವುದು ಶ್ರೇಯಸ್ಕರ. ದೇವಾಲಯಗಳ ಮುಖ್ಯ ದ್ವಾರದಲ್ಲಿ, ಮಠಮಾನ್ಯಗಳಿಗೆ ಹೋದಾಗ, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದಾಗ, ವಿಶೇಷವಾಗಿ ಅತ್ತೆಯ ಮನೆಗೆ ಹೋದಾಗ ಬಲಗಾಲು ಇಡುವುದು ಶಾಸ್ತ್ರ ಹೇಳುತ್ತದೆ. ಸಾಮಾನ್ಯವಾಗಿ ಶುಭ ಜಾಗಗಳಿಗೆ ಬಲಗಾಲು ಇಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆಸ್ಪತ್ರೆಗೆ ಹೋದಾಗಲೂ ಬಲಗಾಲು ಇಡಬೇಕು ಎಂದು ಶಾಸ್ತ್ರ ಹೇಳುತ್ತದೆ. ರೋಗಿಗಳು ಇರುವ ಕಡೆ ಬಲಗಾಲು ಇಟ್ಟು ಹೋಗುವುದರಿಂದ ಅವರಿಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಇತರರಿಗೆ ಶುಭವನ್ನು ಹಾರೈಸಿದಾಗ, ಆ ಶುಭ ಫಲ ನಮಗೂ ದೊರೆಯುತ್ತದೆ ಎಂಬ ಭಾವನೆಯಿದೆ. ಒಳ್ಳೆಯ ಮನಸ್ಸಿನಿಂದ ಬಲಗಾಲು ಇಟ್ಟು ಹೋಗುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ