ಬೀಡ್, ಏಪ್ರಿಲ್ 12: ಯಶಸ್ಸು ಯಾವಾಗಲೂ ಸಿಹಿಯಾಗಿರುತ್ತದೆ, ಆದರೆ ಈ ಯಶಸ್ಸನ್ನು ನಾವು ಪ್ರೀತಿಸುವವರೊಂದಿಗೆ ಹಂಚಿಕೊಂಡಾಗ ಅದು ಮರೆಯಲಾಗದ ನೆನಪಾಗುತ್ತದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಯುವತಿ ಸುಮೇಧಾ ಶೇಖ್ ಅವರು ಮಹಾರಾಷ್ಟ್ರ ಪೊಲೀಸ್ ಪಡೆಗೆ ಆಯ್ಕೆಯಾದ ನಂತರ ಆಚರಿಸಿದ ರೀತಿ ಈಗ ಇಡೀ ದೇಶದ ಗಮನ ಸೆಳೆದಿದೆ. ಅವರು ತನ್ನ ಯಶಸ್ಸಿಗೆ ಕಾರಣರಾದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುವ ಮೂಲಕ ಸಂಭ್ರಮಪಟ್ಟಿದ್ದಾರೆ.
ಇದು ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಬದಲಿಗೆ ತನ್ನನ್ನು ಬೆಳೆಸಲು ತಂದೆ ಅನುಭವಿಸಿದ ಕಷ್ಟಕ್ಕೆ ಮಗಳು ನೀಡಿದ ಅತ್ಯುನ್ನತ ಗೌರವವಾಗಿತ್ತು. ಮಹಾರಾಷ್ಟ್ರ ಪೊಲೀಸ್ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಕಠಿಣವಾದುದು. ಕೇವಲ ಲಿಖಿತ ಪರೀಕ್ಷೆಯಲ್ಲದೆ, ಕಠಿಣ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಮೌಲ್ಯಮಾಪನಗಳನ್ನು ಎದುರಿಸಬೇಕಾಗುತ್ತದೆ. ಸುಮೇಧಾ ಅವರ ಈ ದೈಹಿಕ ಸಾಮರ್ಥ್ಯ ಮತ್ತು ದೃಢಸಂಕಲ್ಪವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದು ಜನರು ಸಂತಸ ಪಟ್ಟಿದ್ದಾರೆ.
ಏಪ್ರಿಲ್ 12 ಎಂದರೆ ಡಾ. ರಾಜ್‌ಕುಮಾರ್ (Dr. Rajkumar) ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಕರಾಳ ದಿನ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಅಣ್ಣಾವ್ರು ಕೊನೆಯುಸಿರು ಎಳೆದ ದಿನವಿದು. ಡಾ. ರಾಜ್‌ಕುಮಾರ್ ಅವರು ನಿಧನರಾಗಿದ್ದು 2006ರ ಏಪ್ರಿಲ್ 12ರಂದು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲಿದೇ ಈಗ 20 ವರ್ಷಗಳು ಕಳೆದಿವೆ. ಎಷ್ಟೇ ವರ್ಷ ಉರುಳಿದರೂ ಮೇರುನಟನ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಹಳೇ ಕಾಲದ ಮಂದಿ ಮಾತ್ರವಲ್ಲದೇ ಈಗ ಕಾಲದ ಜೆನ್-ಜಿ ಪ್ರೇಕ್ಷಕರು ಕೂಡ ಡಾ. ರಾಜ್ ಸಿನಿಮಾಗಳನ್ನು (Dr. Rajkumar Movies) ನೋಡಿ ಫಿದಾ ಆಗುತ್ತಿದ್ದಾರೆ.
ಚಿತ್ರರಂಗದಲ್ಲಿ ನೂರಾರು ಮಂದಿ ಸ್ಟಾರ್ ಕಲಾವಿದರು ಬಂದು ಹೋಗಿದ್ದಾರೆ. ಆದರೆ ಡಾ. ರಾಜ್‌ಕುಮಾರ್ ರೀತಿ ಇನ್ನೊಬ್ಬ ವ್ಯಕ್ತಿ ಇಲ್ಲ. ಸಿನಿಮಾಗಳ ಆಯ್ಕೆ, ಅಭಿನಯ, ಗಾಯನ, ನಡವಳಿಕೆ, ಸರಳತೆ ಇತ್ಯಾದಿ ವಿಷಯಗಳಲ್ಲಿ ಅಣ್ಣಾವ್ರರನ್ನು ಮೀರಿಸುವಂತಹ ಸ್ಟಾರ್ ಯಾರೂ ಇಲ್ಲ. ಅವರಿಗೆ ಅವರೇ ಸಾಟಿ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜಿನ್-ಜಿ ಪ್ರೇಕ್ಷಕರು ಕೂಡ ಅಣ್ಣಾವ್ರ ಗುಣಗಾನ ಮಾಡುತ್ತಿದ್ದಾರೆ. ಡಾ. ರಾಜ್‌ಕುಮಾರ್ ಎಂದೆಂದಿಗೂ ಪ್ರಸ್ತುತ ಎಂಬುದಕ್ಕೆ ಇದೇ ಸಾಕ್ಷಿ.
ಸಾಮಾಜಿಕ, ಪೌರಾಣಿಕ, ಐತಿಹಾಸಿಕ.. ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್. ತಮ್ಮ ಸಿನಿಮಾಗಳ ಮೂಲಕ ಜೀವನ ಮೌಲ್ಯವನ್ನು ತಿಳಿಸಿಕೊಟ್ಟರು. ಗಾಯನದಲ್ಲೂ ರಾಷ್ಟ್ರ ಪ್ರಶಸ್ತಿ ಪಡೆದರು. ಎಷ್ಟೇ ಜನಪ್ರಿಯತೆ ಬಂದರೂ ಕೊನೇ ತನಕ ಕನ್ನಡ ಚಿತ್ರರಂಗಲ್ಲೇ ಉಳಿದುಕೊಂಡರು. ಕನ್ನಡಪರ ಹೋರಾಟಕ್ಕೆ ಬಲ ತಂದರು. ಲಕ್ಷಾಂತರ ನಟ-ನಟಿಯರಿಗೆ ಸ್ಫೂರ್ತಿಯಾದರು. ನೇತ್ರದಾನ ಮಾಡಿ ಎಲ್ಲರಿಗೂ ಮಾದರಿಯಾದರು. ಇಂಥ ಗುಣಗಳ ಕಾರಣದಿಂದ ಅಣ್ಣಾವ್ರನ್ನು ಪ್ರತಿ ದಿನ ಸ್ಮರಿಸಲಾಗುತ್ತದೆ.
ಪುಣ್ಯಸ್ಪರಣೆ ಅಥವಾ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ, ಪ್ರತಿದಿನ ಅಭಿಮಾನಿಗಳು ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹೊಸ ತಲೆಮಾರಿದ ಪ್ರೇಕ್ಷಕರು ಬಂದು ನಮಸ್ಕರಿಸುತ್ತಾರೆ. ಅಭಿಮಾನಿಗಳು ಹೊಸ ಕೆಲಸಗಳನ್ನು ಆರಂಭಿಸುವುದಕ್ಕೂ ಮುನ್ನ ಸಮಾಧಿ ಎದುರು ನಿಂತು ಆಶೀರ್ವಾದ ಪಡೆಯುತ್ತಾರೆ. ಜನರಿಗೆ ಆ ರೀತಿಯ ಭಾವನಾತ್ಮಕ ನಂಟು ಅಣ್ಣಾವ್ರೊಂದಿಗೆ ಬೆಸೆದಿದೆ.
ಇಂದು ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳು ಡಾ. ರಾಜ್‌ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕುಟುಂಬದವರು ಬಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೌಲ್ಯ, ಆದರ್ಶಗಳ ಮೂಲಕ, ಸಿನಿಮಾಗಳ ಮೂಲಕ ರಾಜ್‌ಕುಮಾರ್ ಅವರು ಎಂದೆಂದಿಗೂ ಅಮರ.
ಬೆಂಗಳೂರು, ಏಪ್ರಿಲ್ 12:ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳನ್ನು ನೀಡುವ ಬದಲು ಗ್ರೇಡ್ ನೀಡುವ ನಿರ್ಧಾರ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಇದೇ ವಿಚಾರ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ ಮೌಲ್ಯಮಾಪನ ಕುರಿತ ಕರಡು ಅಧಿಸೂಚನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ ಹಾಗೂ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಪರಿಗಣಿಸಲಲು ನಿರ್ಧರಿಸಿರುವ ಬಗ್ಗೆ ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದರು.
ಕರಡು ಅಧಿಸೂಚನೆಯ ಪ್ರಕಾರ, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ A, B ಮತ್ತು C ಗ್ರೇಡ್‌ಗಳನ್ನು ನೀಡಲಾಗುತ್ತದೆ. ಅಧಿಸೂಚನೆಯಂತೆ, 80ರಿಂದ 100 ಅಂಕ ಗಳಿಸಿದವರಿಗೆ A ಗ್ರೇಡ್, 50ರಿಂದ 79 ಅಂಕಗಳಿಗೆ B ಗ್ರೇಡ್ ಮತ್ತು 49ರವರೆಗೆ ಅಂಕ ಪಡೆದವರಿಗೆ C ಗ್ರೇಡ್ ಸಿಗಲಿದೆ. ಹೀಗಿದ್ದರೂ ಈ ಗ್ರೇಡ್‌ಗಳು ವಿದ್ಯಾರ್ಥಿಗಳ ಪಾಸ್ ಅಥವಾ ಫೇಲ್ ಬಗ್ಗೆ ಸೂಚಿಸುವುದಿಲ್ಲ. ಈಗಾಗಲೇ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದ್ದು, ಫಲಿತಾಂಶವನ್ನು ಏಪ್ರಿಲ್ 24ರಂದು ಪ್ರಕಟಿಸುವ ಸಾಧ್ಯತೆ ಇದೆ. ಕರಡು ಅಧಿಸೂಚನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ತಮ್ಮ ಆಕ್ಷೇಪಣೆಗಳನ್ನು ಏಳು ದಿನಗಳೊಳಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್ ಈಗ ಬಿಗ್ ಶಾಕ್ ಕೊಟ್ಟಿತ್ತು. ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್ ಸಲ್ಲಿಕೆ ಮಾಡಿರುವವರು, ಸರ್ಕಾರದ ಆದೇಶದ ವಿವರ ಒದಗಿಸದೇ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್, ಪಿಐಎಲ್ ವಜಾಗೊಳಿಸಿ ಆದೇಶಿಸಿತ್ತು.
ಮಿರ್ಜಾಪುರ, ಏಪ್ರಿಲ್ 12: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಶನಿವಾರ ಬೆಳಗ್ಗೆ ರಕ್ತಪಾತ ನಡೆದಿದೆ. ಹಿರಿಯ ವಕೀಲರೊಬ್ಬರನ್ನು ಗುರಿಯಾಗಿಸಿಕೊಂಡು ಬಂದ ಇಬ್ಬರು ಹಂತಕರು, ಸಾರ್ವಜನಿಕರ ಕಣ್ಣೆದುರೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಆದರೆ, ಈ ಕೊಲೆಯ ನಂತರ ಹಂತಕರು ಅಲ್ಲಿಂದ ತಪ್ಪಿಸಿಕೊಳ್ಳಲು ನಡೆಸಿದ ಹರಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
40 ವರ್ಷದ ಹಿರಿಯ ವಕೀಲ ರಾಜೀವ್ ಸಿಂಗ್ ಅವರು ಪ್ರತಿದಿನದಂತೆ ಶನಿವಾರ ಬೆಳಿಗ್ಗೆ ಕೂಡ ವಾಯುವಿಹಾರಕ್ಕೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಇಳಿದು ಬಂದು, ಅತೀ ಸಮೀಪದಿಂದ ರಾಜೀವ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಸಿಂಗ್ ಅವರು ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಕೊಲೆ ಮಾಡಿದ ನಂತರ ಹಂತಕನು ಓಡಿಹೋಗಿ ಬೈಕ್ ಹತ್ತಿದ್ದಾನೆ. ಆದರೆ, ವಿಧಿಯಾಟ ಎನ್ನುವಂತೆ ಹಂತಕರು ತಪ್ಪಿಸಿಕೊಳ್ಳಬೇಕಿದ್ದ ಆ ಮೋಟಾರ್ ಸೈಕಲ್ ಸರಿಯಾದ ಸಮಯಕ್ಕೆ ಸ್ಟಾರ್ಟ್ ಆಗಲೇ ಇಲ್ಲ. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಗಾಡಿಯನ್ನು ಸ್ಟಾರ್ಟ್ ಮಾಡಲು ನಿರಂತರವಾಗಿ ಪೆಡಲ್ ಅನ್ನು ಒದೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಗುಂಡಿನ ಸದ್ದು ಕೇಳಿ ಸ್ಥಳೀಯರು ಹಂತಕರತ್ತ ಧಾವಿಸಲು ಪ್ರಯತ್ನಿಸಿದಾಗ , ಮತ್ತೊಬ್ಬ ಹಂತಕ ತನ್ನ ಪಿಸ್ತೂಲ್ ಅನ್ನು ಜನರತ್ತ ತೋರಿಸಿ ಬೆದರಿಸಿದ್ದಾನೆ. ಇದರಿಂದ ಭಯಭೀತರಾದ ಜನ ದೂರ ಉಳಿಯಬೇಕಾಯಿತು.
IPL 2026: ಐಪಿಎಲ್ 2026ರ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ ಪಂದ್ಯದಲ್ಲಿ ವೇಳೆ ಅಂಪೈರ್ ತೆಗೆದುಕೊಂಡ ನಿರ್ಧಾರವು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 212 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್ಗಳಲ್ಲಿ 181 ರನ್ ಗಳಿಸಿದ್ದರು. ಅದರಂತೆ ಕೊನೆಯ 12 ಎಸೆತಗಳಲ್ಲಿ 31 ರನ್ಗಳು ಬೇಕಿದ್ದವು. ಈ ವೇಳೆ ಕ್ರೀಸ್ನಲ್ಲಿದ್ದ ಟ್ರಿಸ್ಟನ್ ಸ್ಟಬ್ಸ್ ಗ್ಲೌಸ್ ಬದಲಿಸಲು ಮನವಿ ಮಾಡಿದ್ದರು.
ಚೆನ್ನೈನ ವಿಪರೀತ ಸೆಕೆಯಿಂದಾಗಿ ಬೆವರುತ್ತಿದ್ದ ಕಾರಣ ತಮ್ಮ ‘ಗ್ಲೌಸ್’ ಬದಲಿಸಲು ಸ್ಟಬ್ಸ್, ಅಂಪೈರ್ ಬಳಿ ಅನುಮತಿ ಕೇಳಿದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಇದಕ್ಕೆ ನಿರಾಕರಿಸಿದ್ದಾರೆ.
ಅಂಪೈರ್ ನಿರ್ಧಾರದಿಂದ ಅಸಮಾಧಾನಗೊಂಡ ಸ್ಟಬ್ಸ್, ಹಳೆಯ ಗ್ಲೌಸ್‌ನಲ್ಲೇ ಆಟ ಮುಂದುವರಿಸಿದರು. ಆದರೆ, ದುರಾದೃಷ್ಟವಶಾತ್ ಅದರ ಮುಂದಿನ ಎಸೆತದಲ್ಲೇ ಕ್ಯಾಚ್ ನೀಡಿ ಔಟಾದರು. ಇದರಿಂದ ಸ್ಟಬ್ಸ್ ತಾಳ್ಮೆ ಕಳೆದುಕೊಂಡರು.
ಇತ್ತ ಟ್ರಿಸ್ಟನ್ ಸ್ಟಬ್ಸ್ ಔಟಾಗಿ ಪೆವಿಲಿಯನ್ಗೆ ಮರಳುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್ ಬಳಿ ಇದ್ದ ಅಂಪೈರ್ ಜೊತೆ ಸುದೀರ್ಘವಾಗಿ ವಾಗ್ವಾದ ನಡೆಸಿದರು.
“ಬೇರೆ ತಂಡಗಳಿಗೆ ಅವಕಾಶ ನೀಡುವಾಗ ನಮಗೆ ಯಾಕಿಲ್ಲ?” ಎಂದು ರಾಣಾ ಪ್ರಶ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಂಪೈರ್ ನಡೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಸಿಎಸ್ಕೆ ತಂಡ ನೀಡಿದ 213 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 189 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 23 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ವಾಷಿಂಗ್ಟನ್, ಏಪ್ರಿಲ್ 12: ಅಮೆರಿಕ ಮತ್ತು ಇರಾನ್(Iran) ನಡುವಿನ ದೀರ್ಘಕಾಲದ ವೈಮನಸ್ಸು ಶಮನಗೊಳಿಸಲು ಪಾಕಿಸ್ತಾನದ ಮಣ್ಣಿನಲ್ಲಿ ನಡೆದ ಐತಿಹಾಸಿಕ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸತತ 21 ಗಂಟೆಗಳ ಕಾಲ ಎರಡೂ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗಿ ಚರ್ಚಿಸಿದರೂ, ಅಂತಿಮವಾಗಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಘೋಷಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮಾತುಕತೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿ ವ್ಯಾನ್ಸ್, ತಮ್ಮ ನಿರಾಶೆಯನ್ನು ಮರೆಮಾಚಲಿಲ್ಲ.
ನಾವು ಸತತ 21 ಗಂಟೆಗಳ ಕಾಲ ಮಾತುಕತೆಯಲ್ಲಿ ತೊಡಗಿದ್ದೆವು. ಆದರೆ ದುರದೃಷ್ಟವಶಾತ್ ನಾವು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದು ಕೆಟ್ಟ ಸುದ್ದಿ. ನಾವು ಇರಾನ್‌ಗೆ ಅತ್ಯುತ್ತಮ ಆಫರ್‌ಗಳನ್ನು ನೀಡಿದ್ದೆವು, ಆದರೂ ಅವರು ಒಪ್ಪಂದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮ್ಮ ನಿಯೋಗ ಈಗ ಪಾಕಿಸ್ತಾನದಿಂದ ಅಮೆರಿಕಕ್ಕೆ ಹಿಂದಿರುಗುತ್ತಿದೆ ಎಂದು ಅವರು ತಿಳಿಸಿದರು. ಮಾತುಕತೆಯ ಸಮಯದಲ್ಲಿ ವಾಷಿಂಗ್ಟನ್ ತನ್ನ ನಿರ್ಣಾಯಕ ಶರತ್ತುಗಳನ್ನು ಸ್ಪಷ್ಟವಾಗಿ ವಿವರಿಸಿದೆ ಎಂದು ವ್ಯಾನ್ಸ್ ಹೇಳಿದರು.
ಅಮೆರಿಕದ ಪಟ್ಟು
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಮತ್ತು ಅಂತಹ ಶಸ್ತ್ರಾಸ್ತ್ರಗಳನ್ನು ಸಾಧಿಸಲು ಅನುವು ಮಾಡಿಕೊಡುವ ಸಾಧನಗಳನ್ನು ಹುಡುಕುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನೀಡಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆಯಾಗಿತ್ತು.
ಟ್ರಂಪ್ ಗುರಿ
ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಗುರಿಯಾಗಿದೆ. ಆದರೆ ಇರಾನ್ ಈ ಷರತ್ತುಗಳಿಗೆ ಪೂರ್ಣವಾಗಿ ಒಪ್ಪದ ಕಾರಣ ಮಾತುಕತೆ ಹಳಿ ತಪ್ಪಿದೆ.
ಪಾಕಿಸ್ತಾನದ ಪಾತ್ರಕ್ಕೆ ಮೆಚ್ಚುಗೆ
ಮಾತುಕತೆಗಳು ವಿಫಲವಾದರೂ ಸಹ, ಈ ಕಠಿಣ ಸಂಧಾನ ಪ್ರಕ್ರಿಯೆಯನ್ನು ಸುಗಮಗೊಳಿಸಿದ ಪಾಕಿಸ್ತಾನದ ಪ್ರಯತ್ನವನ್ನು ಜೆಡಿ ವ್ಯಾನ್ಸ್ ಶ್ಲಾಘಿಸಿದರು. ಮಾತುಕತೆಯಲ್ಲಿ ಏನೇ ನ್ಯೂನತೆಗಳಿದ್ದರೂ, ಅದಕ್ಕೆ ಪಾಕಿಸ್ತಾನ ಕಾರಣವಲ್ಲ. ಅವರು ಅದ್ಭುತ ಕೆಲಸ ಮಾಡಿದ್ದಾರೆ, ಎಂದು ಅವರು ಹೇಳಿದರು.
ಮುಂದೇನು?
ಈ ಅಪರೂಪದ ನೇರ ಮಾತುಕತೆಗಳು ವಿಫಲವಾಗಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚುವ ಮುನ್ಸೂಚನೆ ನೀಡಿದೆ. ಈ ವಿಫಲತೆಯು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ವಿಶ್ವಾಸದ ಕೊರತೆಯನ್ನು ಎತ್ತಿ ತೋರಿಸಿದೆ, ಲೆಬನಾನ್‌ನಲ್ಲಿನ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಈ ಮಾತುಕತೆ ವಿಫಲವಾಗಿರುವುದು ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಪೆಟ್ಟು ನೀಡಿದೆ.
ಅಮೆರಿಕವು ಇರಾನ್‌ಗೆ ನೀಡಿದ್ದ ಅಂತಿಮ ಆಫರ್‌ಗಳನ್ನು ಇರಾನ್ ತಿರಸ್ಕರಿಸುವ ಮೂಲಕ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಅಮೆರಿಕ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರುವ ಅಥವಾ ಮಿಲಿಟರಿ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಗಳು ದಟ್ಟವಾಗಿವೆ.
ಮಂಗಳೂರು, ಏಪ್ರಿಲ್ 12: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಹಲವು ವಿಚಾರಗಳಿಗೆ ಗಮನಸೆಳೆದಿದೆ. ಒಟ್ಟಿಗೆ ಪರೀಕ್ಚೆ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೈಕಂಬದ ತಾಯಿ-ಮಗಳು ಉತ್ತೀರ್ಣವಾಗಿರುವ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ ಮಂಗಳೂರು ಕೊಳ್ಯ ನಿವಾಸಿಯಾದ 57 ವರ್ಷದ ಮೋಹನ್ ರಾಜ್ ಅವರು ತಮ್ಮ ಮಗ ಕ್ಷಿತಿಜ್ ರಾಜ್ ಜೊತೆಗೂಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರುವ ವಿಚಾರ ಗೊತ್ತಾಗಿದೆ. ಶೇ.52 ಅಂಕಗಳೊಂದಿಗೆ ಅವರು ತೇರ್ಗಡೆ ಹೊಂದಿದ್ದಾರೆ.
ಚಿಟ್ ಫಂಡ್ ವ್ಯವಹಾರದಲ್ಲಿ ತೊಡಗಿರುವ ಮೋಹನ್ ರಾಜ್ ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಥಮ ಪಿಯುಸಿ ಪೂರ್ಣಗೊಳಿಸಿದ್ದರು. ಆದರೆ ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಜವಾಬ್ದಾರಿಗಳ ಕಾರಣದಿಂದ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಕುರಿತ ಕೊರಗು ಅವರನ್ನು ಹಲವು ವರ್ಷಗಳಿಂದ ಕಾಡುತ್ತಿತ್ತು. ಈ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಮಗ ಸಿದ್ಧತೆ ನಡೆಸುತ್ತಿದ್ದ ಸಂದರ್ಭ, ಆತನಿಂದ ಮೋಹನ್ ರಾಜ್ ಪ್ರೇರಿತರಾಗಿದ್ದರು. ಅಪೂರ್ಣವಾಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಮತ್ತೆ ಪುನಾರಂಭಿಸಲು ನಿರ್ಧರಿಸಿದ್ದರು.
ಕೆಲಸ ಹಾಗೂ ಓದು ಎರಡನ್ನೂ ಸಮತೋಲನದಲ್ಲಿಟ್ಟುಕೊಂಡಿದ್ದ ಮೋಹನ್ ರಾಜ್, ತೊಕ್ಕೊಟ್ಟಿನಲ್ಲಿರುವ ಟ್ಯುಟೋರಿಯಲ್ಗೆ ದಾಖಲಾಗಿದ್ದರು. ಬೆಳಿಗ್ಗೆ 8ರಿಂದ 11ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 4ರವರೆಗೆ ಅಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದರು. ಮತ್ತೊಂದೆಡೆ ಪರೀಕ್ಷೆ ಬರೆಯಲು ಹೊರಟ ತಂದೆಗೆ ಮಕ್ಕಳಾದ ಪೃಥ್ವಿ, ಪ್ರಕೃತಿ ಹಾಗೂ ಕ್ಷಿತಿಜ್ ರಾಜ್ ನೋಟ್‌ಗಳನ್ನು ನೀಡಿ, ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯ ಮಾಡಿದ್ದರು. 40 ವರ್ಷಗಳ ಬಳಿಕ ಮತ್ತೆ ಓದನ್ನು ಆರಂಭಿಸುವುದು ಸುಲಭವಾಗಿರಲಿಲ್ಲವಾದರೂ ಅಂತಿಮವಾಗಿ ಅವರ ಪರಿಶ್ರಮ ಫಲಿಸಿದೆ. ಮೊದಲ ಪ್ರಯತ್ನದಲ್ಲೇ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿ, ಕಲಾ ವಿಭಾಗದಲ್ಲಿ ಶೇ. 52 ಅಂಕಗಳನ್ನು ಗಳಿಸಿದ್ದಾರೆ. ಇನ್ನು ಅವರ ಮಗ ವಾಣಿಜ್ಯ ವಿಭಾಗದಲ್ಲಿ ಶೇ. 67 ಅಂಕಗಳನ್ನು ಪಡೆದಿದ್ದಾನೆ. ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಮೋಹನ್, ತಮ್ಮ ಬಹುಕಾಲದ ಕನಸಾದ ಕಾನೂನು ವಿದ್ಯಾಭ್ಯಾಸವನ್ನು ದೂರ ಶಿಕ್ಷಣದ ಮೂಲಕ ಮುಂದುವರಿಸಲು ಬಯಸಿರೋದಾಗಿ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೆಂಗಳೂರು, ಏಪ್ರಿಲ್ 12: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ (Weather Forecast) ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಹೀಟ್ ವೇವ್, ಒಣ ಹವೆ?
ಕರಾವಳಿಯಲ್ಲಿಂದು ಬಿಸಿ ವಾತಾವರಣದ ಜೊತೆ ಒಣ ಹವೆಯೂ ಇರಲಿದೆ. ಉತ್ತರ ಕನ್ನಡ ಮತ್ತುದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.
ಉಷ್ಣಾಘಾತದಿಂದ ರಕ್ಷಣೆ ಹೇಗೆ?
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದ ಮೇಲೆ ಅಲ್ಲಿ ದಾಖಲೆಗಳಿಗೆ ಕೊರತೆಯಿಲ್ಲ. ದಾಖಲೆಗಳ ನಡುವೆ ಸಂಜು ಸ್ಯಾಮ್ಸನ್ (Sanju Samson) ಅಪರೂಪದ ರೆಕಾರ್ಡ್ವೊಂದನ್ನು ನಿರ್ಮಿಸಿದ್ದಾರೆ. ಅದು ಸಹ ನಾಲ್ಕು ವಿಭಿನ್ನ ಸೀಸನ್ಗಳಲ್ಲಿ 'ಸೀಸನ್ನ ಮೊದಲ ಶತಕ' ಸಿಡಿಸುವ ಮೂಲಕ ಎಂಬುದು ವಿಶೇಷ.
ಸಾಮಾನ್ಯವಾಗಿ ಒಂದು ಸೀಸನ್ನಲ್ಲಿ ಶತಕ ಸಿಡಿಸುವುದೇ ದೊಡ್ಡ ಸಾಧನೆ. ಆದರೆ ಸಂಜು ಸ್ಯಾಮ್ಸನ್ ಅವರು ಲೀಗ್ ಆರಂಭದ ಹಂತದಲ್ಲೇ ಅಬ್ಬರಿಸಿ, ಆ ಸೀಸನ್ನ ಚೊಚ್ಚಲ ಶತಕವನ್ನು ತಮ್ಮದಾಗಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈ ಹವ್ಯಾಸದೊಂದಿಗೆ ಇದೀಗ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅಂದರೆ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಸೀಸನ್ಗಳಲ್ಲಿ ಸಂಜು ಸ್ಯಾಮ್ಸನ್ ಮೊದಲ ಶತಕ ಬಾರಿಸಿದ್ದಾರೆ. 2017 ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಕಣಕ್ಕಿಳಿದಿದ್ದ ಸಂಜು ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ವಿರುದ್ಧ 102 ರನ್ ಗಳಿಸುವ ಮೂಲಕ ಆ ಸೀಸನ್ನ ಮೊದಲ ಶತಕ ದಾಖಲಿಸಿದ್ದರು. 2019 ಹಾಗೂ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ ಸೀಸನ್ನ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೀಗ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಚೊಚ್ಚಲ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ನಾಲ್ಕು ಸೀಸನ್ಗಳಲ್ಲಿ ಮೊದಲ ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬ್ರೆಂಡನ್ ಮೆಕಲಮ್ (2008 ಮತ್ತು 2015) ಎರಡು ಸೀಸನ್ಗಳಲ್ಲಿ ಮೊದಲ ಸೆಂಚುರಿ ಸಿಡಿಸಿ ಮಿಂಚಿದ್ದರು. ಆದರೆ ಸಂಜು ಸ್ಯಾಮ್ಸನ್ ನಾಲ್ಕು ಸೀಸನ್ಗಳಲ್ಲಿ ಮೊದಲ ಶತಕ ಬಾರಿಸುವ ಮೂಲಕ ಐಪಿಎಲ್ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 12: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ನೌಕರು ಮಾತ್ರ ಅನ್ನ ತಿಂದ ಮನೆಗೆ ಕನ್ನ ಹಾಕೋ ಕೆಲಸ ಮಾಡುತ್ತಿದ್ದಾರೆ. ಕನ್ನಡ ಬಾರದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡಿ ದುಡ್ಡು ಮಾಡ್ತಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ಯುಪಿಐ ಕ್ಯೂಆರ್ ಕೋಡ್ಗಳನ್ನು ಅಳವಡಿಸಿದೆ. ಇದನ್ನು ಸ್ಕ್ಯಾನ್ ಮಾಡಿ ಟಿಕೆಟ್ ಹಣ ಪಾವತಿಸುವಂತೆ ಪ್ರಯಾಣಿಕರಿಗೆ ಸೂಚಿವ ಬದಲು, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಮಾಹಿತಿ ನೀಡಿ ದುಡ್ಡು ಪೀಕುವ ಕೆಲಸಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆ ನಿಗಮಕ್ಕೆ ಸೇರಬೇಕಿದ್ದ ಲಕ್ಷ ಲಕ್ಷ ಹಣ ತಮ್ಮ ಜೇಬಿಗೆ ಇಳಿಸಿಕೊಂಡಿದ್ದ ನಾಲ್ಕು ಜನ ಕಿಲಾಡಿ ಕಂಡಕ್ಟರ್ಗಳನ್ನೀಗ ಮನೆಗೆ ಕಳುಹಿಸಲಾಗಿದೆ.
ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ ನೀಡ್ತಿದ್ದಿದ್ದು ಹೇಗೆ?
ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಅವರಿಗೆ ಟಿಕೆಟ್ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.
ಇನ್ನು ಈ ಕಿಲಾಡಿ ಕಂಡಕ್ಟರ್ಗಳು ಡಿಪೋದಿಂದ ಬಸ್ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್ ಕೋಡ್ಗಳನ್ನು ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕೇಳಿದಾಗ, ತಮ್ಮ ಮೊಬೈಲ್ನಲ್ಲಿರುವ ಸ್ವಂತ ಅಕೌಂಟ್ನ ಕ್ಯೂಆರ್ ಕೋಡ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ಗಳು ತಗ್ಲಾಕೊಂಡಿದ್ದು, ಪ್ರತಿಯೊಬ್ಬರ ಅಕೌಂಟ್ ನಲ್ಲಿ 10ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರೋದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮನೆಗೆ ಹೋಗೋದು ಫಿಕ್ಸ್ ಎನ್ನಲಾಗಿದೆ. ಇಂತಹುದೇ ಘಟನೆ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.