‘ಜೋಡಿ ನಂಬರ್ 1’ ಕಾರ್ಯಕ್ರಮದಲ್ಲಿ ಧನರಾಜ್ ಹಾಗೂ ಪ್ರಜ್ಞಾ ದಂಪತಿ ಗಮನ ಸೆಳೆಯಲಿದ್ದಾರೆ. ಇಂದಿನಿಂದದ (ಏಪ್ರಿಲ್ 4) ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ವೇದಿಕೆ ಮೇಲೂ ಇವರು ವ್ಲಾಗ್ ಮಾಡಿದ್ದಾರೆ. ಇವರ ಹಾಸ್ಯಪ್ರಜ್ಞೆ ನೋಡಿ ಜಡ್ಜ್ಗಳು ಕೂಡ ಖುಷಿ ಆಗಿದ್ದಾರೆ. ನೆನಪಿರಲಿ ಪ್ರೇಮ್, ಮಾಳವಿಕಾ ಅವಿನಾಶ್, ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ‘ಜೋಡಿ ನಂಬರ್ 1’ ಶೋನಲ್ಲಿ ಜಡ್ಜ್ ಆಗಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ನಡುವಿನ “ಸೋಷಿಯಲ್ ಮೀಡಿಯಾ ವಾರ್” ಹೊಸದೇನಲ್ಲ. ಈ ವ್ಯಂಗ್ಯದ ವಾರ್ ಈ ಬಾರಿ ಕೂಡ ಮುಂದುವರೆದಿದೆ. ಆದರೆ, ಈ ಸಲ ರಾಯುಡು “72 ವರ್ಷಗಳ” ಲೆಕ್ಕಾಚಾರದೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಏನಿದು 72 ವರ್ಷಗಳ ಲೆಕ್ಕಚಾರ?
ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿದೆ. ಈ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಂತಹ ಭರ್ಜರಿ ನಿರೀಕ್ಷೆಯನ್ನು ಸಹ ಮೊದಲ ಪಂದ್ಯದಲ್ಲೇ ಹುಟ್ಟುಹಾಕಿದ್ದಾರೆ. ಇದಾಗ್ಯೂ ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನು ಗೆಲ್ಲುವುದು ಅನುಮಾನ ಎಂದಿದ್ದಾರೆ ಅಂಬಾಟಿ ರಾಯುಡು.
ಈ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು “ಆರ್‌ಸಿಬಿ ತನ್ನ ಮೊದಲ ಟ್ರೋಫಿ ಗೆಲ್ಲಲು 18 ವರ್ಷ ತೆಗೆದುಕೊಂಡಿದೆ. ಇದೇ ವೇಗದಲ್ಲಿ ಹೋದರೆ, ಮುಂಬೈ ಇಂಡಿಯನ್ಸ್ ಅಥವಾ ಸಿಎಸ್‌ಕೆ ಮಾಡಿದಂತೆ 5 ಟ್ರೋಫಿಗಳನ್ನು ಗೆಲ್ಲಲು ಆರ್‌ಸಿಬಿಗೆ ಇನ್ನೂ 72 ವರ್ಷಗಳು ಬೇಕಾಗುತ್ತವೆ!” ಎಂದು ವ್ಯಂಗ್ಯವಾಡಿದ್ದಾರೆ.
ಅಂದರೆ ಮೊದಲ ಟ್ರೋಫಿ ಗೆಲ್ಲಲು 18 ವರ್ಷಗಳನನ್ನು ತೆಗೆದುಕೊಂಡಿರುವ ಆರ್‌ಸಿಬಿ, ಪ್ರತಿ 18 ವರ್ಷಗಳಿಗೊಮ್ಮೆ ಪ್ರಶಸ್ತಿ ಗೆಲ್ಲಬಹುದು ಎಂದು ಕಾಲೆಳೆದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ನ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಅಣಕಿಸಿದ್ದಾರೆ.
ಇದಕ್ಕೂ ಮುನ್ನ, ಅಂದರೆ ಕಳೆದ ಸೀಸನ್ನಲ್ಲಿ ಅಂಬಾಟಿ ರಾಯುಡು, ಆರ್‌ಸಿಬಿ ಆಟಗಾರರು ತಂಡದ ಗೆಲುವಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ದಾಖಲೆಗಳ ಮೇಲೆ ಗಮನ ಹರಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಅಲ್ಲದೆ ಟ್ರೋಫಿ ಗೆಲ್ಲುವ ಮೊದಲೇ ಅತಿಯಾದ ಸಂಭ್ರಮಾಚರಣೆ ಮಾಡುವುದು ಆರ್‌ಸಿಬಿ ತಂಡಕ್ಕೆ ಮುಳುವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ದೊಡ್ಡ ಪಂದ್ಯಗಳಲ್ಲಿ ಆರ್‌ಸಿಬಿ ಒತ್ತಡಕ್ಕೆ ಮಣಿಯುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಒತ್ತಡವನ್ನು ನಿಭಾಯಿಸಲು ಬರಲ್ಲ ಎಂದು ಹೀಯಾಳಿಸಿದ್ದರು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದಿದ್ದರೂ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದು ಅಣಕಿಸಿದ್ದಾರೆ.
ರಾಯುಡು ಸಾಧನೆ:
ಅಂಬಾಟಿ ರಾಯುಡು ಅವರು ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಲು ಕಾರಣ ಅವರ ಟ್ರೋಫಿ ದಾಖಲೆ. ಅವರು ಐಪಿಎಲ್ ಇತಿಹಾಸದಲ್ಲಿ 6 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ತಲಾ 3 ಬಾರಿ ಟ್ರೋಫಿ ಎತ್ತಿ ಹಿಡಿದ್ದರು. ಹೀಗಾಗಿಯೇ ಟ್ರೋಫಿ ವಿಷಯದಲ್ಲಿ ಅಂಬಾಟಿ ರಾಯುಡು ಆರ್‌ಸಿಬಿ ತಂಡವನ್ನು ಅಣಕಿಸುತ್ತಾ ಬಂದಿದ್ದಾರೆ.
ಇನ್ನು ಅಂಬಾಟಿ ರಾಯುಡು ಅವರ ಈ ವ್ಯಂಗ್ಯ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿದ್ದರೂ, 2025ರ ಟ್ರೋಫಿ ಗೆಲುವಿನ ನಂತರ ಆರ್‌ಸಿಬಿ ಹೊಸ ಹಾದಿಯಲ್ಲಿದೆ. 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತೆ ಪ್ರಶಸ್ತಿ ಗೆಲ್ಲುವ ಮೂಲಕ ರಾಯುಡು ಅವರ 72 ವರ್ಷಗಳ ಲೆಕ್ಕಾಚಾರವನ್ನು ತಪ್ಪು ಎಂದು ನಿರೂಪಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಹುಬ್ಬಳ್ಳಿ, ಏಪ್ರಿಲ್ 4: ಹುಬ್ಬಳ್ಳಿಯಲ್ಲಿನ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸಮೀರ್ ತನ್ನ ಮೇಲಿನ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾನೆ. ಪ್ರಕರಣದ ಮಧ್ಯೆ ವೈರಲ್ ಆಗಿರುವ ವಿಡಿಯೋದ ಬಗ್ಗೆ ಮಾತನಾಡಿದ ಸಮೀರ್, ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ತಾನು ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ತನ್ನ ಮತ್ತು ಆರೋಪಿಯಾದ ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಸಮೀರ್ ಆಗ್ರಹಿಸಿದ್ದಾನೆ. ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ, ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ, ನಿಜವಾಗಿ ಪ್ರಜ್ಞೆ ಕಳೆದುಕೊಂಡಿದ್ದು ನಾನೇ, ಹುಡುಗಿಯಲ್ಲ ಎಂದು ಸಮೀರ್ ಹೇಳಿಕೆ ನೀಡಿದ್ದಾನೆ. ವಿಡಿಯೋವನ್ನು ಆ ಹುಡುಗಿಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಸಮೀರ್ ಆರೋಪಿಸಿದ್ದಾನೆ.
ರಾಧಾ ಭಗವತಿ ಹಾಗೂ ರಾಣವ್ ಗೌಡ (Ranav Gowda) ಅವರು ವಿವಾಹ ಆಗಲು ರೆಡಿ ಆಗಿರುವುದು ಗೊತ್ತೇ ಇದೆ. ಇತ್ತೀಚೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಆ ಫೋಟೋ ವೈರಲ್ ಆಗಿ ಗಮನ ಸೆಳೆಯಿತು. ರಾಣವ್ ಬಗ್ಗೆ ಇತ್ತೀಚೆಗೆ ರಾಧಾ ಭಗವತಿ ಅವರು ಮಾತನಾಡಿದರು. ಸಿನಿಮಾ ಒಂದರ ಶೋಗೆ ಬಂದಾಗ ರಾಧಾ ಅವರು ರಾಣವ್ ಬಗ್ಗೆ ಮಾತನಾಡಿದ್ದಾರೆ. ಆ ವಿಷಯ ಇಲ್ಲಿದೆ.
ರಾಧಾ ಹಾಗೂ ರಾಣವ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದು ಗೊತ್ತೇ ಇದೆ. ರಾಣವ್ ಅವರು ಜೆಡಿ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಧಾ ಅವರು ಆ ಸಂದರ್ಭದಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದರು. ಆ ಬಳಿಕ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಆಫರ್ ಸಿಕ್ಕ ಬಳಿಕ ಅವರು ಈ ಸೀರಿಯಲ್ ತೊರೆದರು ಮತ್ತು ಭಾರ್ಗವಿ ಎಲ್ಎಲ್ಬಿಯ ಭಾಗ ಆದರು. ಈಗ ರಾಧಾ ಹಾಗೂ ರಾಣವ್ ನಿಶ್ಚಿತಾರ್ಥ ಮಾಡಿಕೊಂಡರು.
ರಾಣವ್ ಅವರು ಮೊದಲು ಮಾತನಾಡಿದರು. ‘ಅವಳನ್ನು ಇಷ್ಟಪಡ್ತೀನಿ, ಮದುವೆ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಅರ್ಥ ಮಾಡಿಕೊಳ್ಳಯವವರು ಸ್ಟ್ರಾಂಗ್ ಆಗಿರಬೇಕು. ಇವರು ಮೇಲಿನಿಂದ ಸಾಫ್ಟ್ ಅನಿಸಿದರೂ, ಒಳಗಿನಿಂದ ಸ್ಟ್ರಾಂಗ್. ಮೈನಸ್ ಇದ್ರೆ ಬಿಟ್ಟು ಹೋಗುವವರು ಬೇರೆ. ಆದರೆ, ಅದನ್ನು ಅರ್ಥ ಮಾಡಿಕೊಂಡು, ತಿದ್ದಿ ಇರುವವರು ಬೇರೆ’ ಎಂದಿದ್ದಾರೆ ಅವರು.
‘ನಾನೇ ಅವರಿಗೆ ಪ್ರಪೋಸ್ ಮಾಡಿದ್ದು. ಅವರ ಅಭಿಮಾನಿ ನಾನು’ ಎಂದು ರಾಧಾ ಭಗವತಿ ಹೇಳಿದರು. ಇನ್ನು ಮದುವೆ ಯಾವಾಗ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ‘ಅಧಿಕ ಮಾಸ ಇದೆ, ಆಶಾಢ ಇದೆ.. ಆ ಬಳಿಕ ಶ್ರಾವಣ. ಹೀಗಾಗಿ ಮದುವೆ ಮುಂದಕ್ಕೆ ಹೋಗಿದೆ’ ಯಾರ ಕಣ್ಣು ಬಿದ್ದಿದೆಯೋ ಏನೋ’ ಎಂದು ಅವರು ಹೇಳಿದರು. ಆ ವಿಡಿಯೋ ಕೂಡ ಗಮನ ಸೆಳೆದಿದೆ.
ಬೆಂಗಳೂರು, ಏಪ್ರಿಲ್ 04: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರಿನ ವಾಯುಗುಣಮಟ್ಟವೂ (Bengaluru Air Quality) ಹದಗೆಟ್ಟಿತ್ತು. ಆದರೆ ಇಂದು ಸ್ವಲ್ಪ ಮಟ್ಟಿಗೆ ಏರ್ ಕ್ವಾಲಿಟಿ ಸುಧಾರಿಸಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಆದರೂ ವಾಯು ಗುಣಮಟ್ಟ ಎಲ್ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 124ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹವಾದರು. ಈ ವಿವಾಹದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಿವಾಹ ಸಮಾರಂಭಕ್ಕೆ ಅವರು ಅಲಂಕಾರ ಮತ್ತು ಉಡುಗೆ ತೊಡುಗೆಗಾಗಿ ಆಯ್ಕೆ ಮಾಡಿದ ವಿಷಯ ದೇಶಾದ್ಯಂತ ಚರ್ಚೆಯಾಯಿತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹ ಸಮಾರಂಭದಲ್ಲಿ ರಾಜ ಮತ್ತು ರಾಣಿಯಂತೆ ಕಾಣುತ್ತಿದ್ದರು. ಅತ್ಯಂತ ರಾಜ ವೈಭವದಲ್ಲಿ ನಡೆದ ಈ ವಿವಾಹದ ಚರ್ಚೆಯ ನಂತರ, ಈಗ ಈ ಜೋಡಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗಿದೆ. ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಪೋಸ್ಟ್‌ನಿಂದಾಗಿ ಅವರು ತಾಯಿಯಾಗಲಿದ್ದಾರೆ ಎಂದು ಊಹಿಸಲಾಗುತ್ತಿದೆ.
ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗ್ರಾಫಿಕ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರನ್ನು ಹೋಲುವ ದಂಪತಿಗಳು ಇದ್ದಾರೆ. ಈ ವಿಡಿಯೋದಲ್ಲಿ ಸುಂದರವಾದ ಹಳದಿ ಹೂವು ಇದೆ. ಈ ಹೂವು ರಶ್ಮಿಕಾ ಜೊತೆ ಆಟವಾಡುತ್ತಿರುವುದನ್ನು ತೋರಿಸಲಾಗಿದೆ. ಇದರ ಜೊತೆಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಈ ವಿಡಿಯೋದಲ್ಲಿ ತುಂಬಾ ಸಂತೋಷವಾಗಿದ್ದಾರೆ.
ಕುತೂಹಲಕಾರಿಯಾಗಿ, ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ ರಶ್ಮಿಕಾ ಮಂದಣ್ಣ ವಿಶೇಷ ಶೀರ್ಷಿಕೆ ನೀಡಿದ್ದಾರೆ. ‘ಈಗ ನಾವು ಮೂವರು’ ಎಂದು ಸೂಚಿಸುವ ಶೀರ್ಷಿಕೆಯನ್ನು ನೀಡಿದ್ದಾರೆ. ಇದರಿಂದಾಗಿ, ಅವರು ತಾಯಿಯಾಗಲಿದ್ದಾರೆ ಎಂಬ ಚರ್ಚೆಯೂ ಹೆಚ್ಚಾಗಿದೆ. ಅವರು ತಾಯಿಯಾಗಲಿದ್ದಾರೆ ಎಂದು ವೀಡಿಯೊದಲ್ಲಿ ಎಲ್ಲಿಯೂ ಹೇಳಿಲ್ಲ. ಅದಕ್ಕಾಗಿಯೇ ಅವರ ಪೋಸ್ಟ್‌ನ ಸಸ್ಪೆನ್ಸ್ ಹೆಚ್ಚಾಗಿದೆ.
ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ, ಅವರು ಇನ್‌ಸ್ಟಾಗ್ರಾಮ್ ಖಾತೆಯನ್ನು ‘ಟೆರಿಬ್ಲಿ ಟೈನಿ ಪೋಸ್ಟ್’ ಎಂದು ಟ್ಯಾಗ್ ಮಾಡಿದ್ದಾರೆ. ಆದ್ದರಿಂದ, ಈಗ ರಶ್ಮಿಕಾ ನಿಜವಾಗಿಯೂ ತಾಯಿಯಾಗುತ್ತಾರೆಯೇ? ಈ ಪ್ರಶ್ನೆಯನ್ನು ಅವರ ಅಭಿಮಾನಿಗಳು ಎತ್ತುತ್ತಿದ್ದಾರೆ. ಈ ಪ್ರಶ್ನೆಗೆ ಭವಿಷ್ಯದಲ್ಲಿ ಉತ್ತರ ಸಿಗುತ್ತದೆ. ಇದು ಪ್ರಮೋಷನ್ ಭಾಗವೂ ಕೂಡ ಆಗಿರಬಹುದು ಎನ್ನಲಾಗಿದೆ.
ಬೆಂಗಳೂರು, ಏಪ್ರಿಲ್ 4: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಕಟ್ಟಡ ಉಪವಿಧಿಗಳ ಕುರಿತು ಮಹತ್ವದ ಕರಡು ಅಧಿಸೂಚನೆ ಪ್ರಕಟಗೊಂಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ (Bangalore) ಮನೆ ಕಟ್ಟುವವರಿಗೆ ಸರ್ಕಾರದಿಂದ ಅತಿ ದೊಡ್ಡ ಪರಿಹಾರ ಒದಗಿಸಿದಂತಾಗಿದೆ. ಹೊಸ ಪ್ರಸ್ತಾವನೆಯಲ್ಲಿ ಸೆಟ್ ಬ್ಯಾಕ್ ಉಲ್ಲಂಘನೆ ವಿನಾಯಿತಿ ಮಿತಿಯನ್ನು ಶೇಕಡ 5ರಿಂದ ಶೇಕಡ 15ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಈ ಹಿಂದೆ, ಕಟ್ಟಡ ನಿರ್ಮಾಣದಲ್ಲಿ ಶೇಕಡ 5ರಷ್ಟು ಮಾತ್ರ ಸೆಟ್ ಬ್ಯಾಕ್ ಉಲ್ಲಂಘನೆಗಳನ್ನು ಸಕ್ರಮಗೊಳಿಸಲು ಅವಕಾಶವಿತ್ತು. ಹೆಚ್ಚಿನ ಕಟ್ಟಡಗಳು ಈ ಮಿತಿಯನ್ನು ಮೀರಿ ನಿರ್ಮಾಣಗೊಂಡಿದ್ದರಿಂದ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡು, ಸರ್ಕಾರವು 2003ರ ಉಪವಿಧಿ ಆರಕ್ಕೆ ತಿದ್ದುಪಡಿ ತರಲು ನಿರ್ಧರಿಸಿದೆ.
ಈ ಹೊಸ ನಿಯಮ ಜಾರಿಗೆ ಬಂದರೆ, ಶೇಕಡ 15ರಷ್ಟು ಜಾಗವನ್ನು ಒತ್ತುವರಿ ಮಾಡಿ ಮನೆ ಕಟ್ಟಿದರೂ, ನಿಗದಿತ ದಂಡವನ್ನು ಪಾವತಿಸಿ ಅದನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಲಭಿಸಲಿದೆ. ಸಾರ್ವಜನಿಕರು ಈ ಕರಡು ಅಧಿಸೂಚನೆ ಕುರಿತು ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ನೀಡಲು ಆಹ್ವಾನಿಸಲಾಗಿದೆ.
ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು?
ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು ಎಂಬುದನ್ನು ಸರಳವಾಗಿ ಹೇಳುವುದಾದರೆ, ನಿಮ್ಮ ಜಾಗದಲ್ಲಿ ಮನೆ ಕಟ್ಟುವಾಗ ಕಟ್ಟಡದ ಸುತ್ತಲೂ ನಿರ್ದಿಷ್ಟ ಪ್ರಮಾಣದ ಖಾಲಿ ಜಾಗವನ್ನು ಬಿಡಬೇಕು ಎಂಬುದು ನಿಯಮ. ಉದಾಹರಣೆಗೆ, 30×40 ಅಳತೆಯ ನಿವೇಶನದಲ್ಲಿ ಮನೆ ಕಟ್ಟುವಾಗ ರಸ್ತೆಯ ಕಡೆಗೆ ಅಥವಾ ಅಕ್ಕಪಕ್ಕದ ಮನೆಗಳ ಗೋಡೆಗಳಿಗೆ ತಾಗದಂತೆ ಮೂರು ಅಥವಾ ನಾಲ್ಕು ಅಡಿಗಳಷ್ಟು ಜಾಗವನ್ನು ಖಾಲಿ ಬಿಡಬೇಕು. ಹಳೆಯ ನಿಯಮದ ಪ್ರಕಾರ, ಈ ರೀತಿ ಬಿಡಬೇಕಾದ ಜಾಗದಲ್ಲಿ ಶೇಕಡ 5ರಷ್ಟು ಮಾತ್ರ ವ್ಯತ್ಯಾಸ (ಉಲ್ಲಂಘನೆ) ಆಗಲು ಅವಕಾಶವಿತ್ತು. ಅದಕ್ಕಿಂತ ಹೆಚ್ಚು ಜಾಗವನ್ನು ಒತ್ತುವರಿ ಮಾಡಿ ಕಟ್ಟಿದರೆ ಅದು ಅಕ್ರಮ ಕಟ್ಟಡವೆಂದು ಪರಿಗಣಿಸಲ್ಪಟ್ಟು ಪಾಲಿಕೆಯು ದಂಡ ವಿಧಿಸುತ್ತಿತ್ತು ಅಥವಾ ಅದನ್ನು ತೆರವುಗೊಳಿಸುತ್ತಿತ್ತು. ಈಗಿನ ಹೊಸ ಪ್ರಸ್ತಾವನೆಯು ಈ ಮಿತಿಯನ್ನು ಶೇಕಡ 15ಕ್ಕೆ ಏರಿಸಿರುವುದರಿಂದ, ಸಣ್ಣ ಪ್ರಮಾಣದ ಉಲ್ಲಂಘನೆಗಳಿಗೆ ಕಾನೂನುಬದ್ಧ ಪರಿಹಾರ ಸಿಗಲಿದೆ.
ಕಟ್ಟಡ ಉಪವಿಧಿಗಳ ತಿದ್ದುಪಡಿಯ ಜೊತೆಗೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಬಿಎ ಮತ್ತು ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಹೊಸ ಲೋಗೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಪಾಲಿಕೆಗೂ ಒಂದೊಂದು ವಿಶಿಷ್ಟ ಬಣ್ಣದ ಥೀಮ್ ನೀಡಲಾಗಿದೆ. ಜಿಬಿಎ ಲಾಂಛನದಲ್ಲಿ ಬೆಂಗಳೂರಿನ ಗಡಿಗೋಪುರದ ಚಿತ್ರದ ಜೊತೆಗೆ ಕೆಂಪೇಗೌಡರ ಚಿತ್ರವನ್ನು ಸೇರಿಸಲಾಗಿದೆ.
ಬೆಂಗಳೂರು ಕೇಂದ್ರ ಪಾಲಿಕೆಯ ಲೋಗೋಗೆ ನೀಲಿ ಬಣ್ಣ, ಬೆಂಗಳೂರು ಉತ್ತರ ಪಾಲಿಕೆಯ ಲೋಗೋಗೆ ಗುಲಾಬಿ ಬಣ್ಣ, ಬೆಂಗಳೂರು ದಕ್ಷಿಣ ಪಾಲಿಕೆಯ ಲೋಗೋಗೆ ತಿಳಿ ಹಸಿರು ಬಣ್ಣ, ಬೆಂಗಳೂರು ಪೂರ್ವ ಪಾಲಿಕೆಯ ಲೋಗೋಗೆ ನವಿಲು ಹಸಿರು ಬಣ್ಣ, ಹಾಗೂ ಬೆಂಗಳೂರು ಪಶ್ಚಿಮ ಪಾಲಿಕೆಯ ಲೋಗೋಗೆ ಕಂದು ಬಣ್ಣದ ಥೀಮ್ ನೀಡಲಾಗಿದೆ.
ಪ್ರತಿಯೊಂದು ಲೋಗೋದಲ್ಲಿಯೂ ಕೆಂಪೇಗೌಡ ಗೋಪುರ ಸಾಮಾನ್ಯ ಅಂಶವಾಗಿದ್ದು, ಅವುಗಳನ್ನು ವಿಭಿನ್ನ ಬಣ್ಣಗಳಲ್ಲಿ ರಚಿಸಿರುವುದು ವಿಶೇಷ. ಈ ಮೂಲಕ ಜಿಬಿಎ ತನ್ನ ಕಾರ್ಯಾಚರಣೆಗಳನ್ನು ಹೊಸದಾಗಿ ಗುರುತಿಸಿಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಟಿ20 ಕ್ರಿಕೆಟ್ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವು ಹೊಸ ವಿಶ್ವ ದಾಖಲೆ ಬರೆದಿದೆ. ಅದು ಸಹ ಆಸ್ಟ್ರೇಲಿಯಾ (Australia) ಬರೆದಿಟ್ಟಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.
210 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯರ್ (50) ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್ಗಳಲ್ಲಿ 210 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 200+ ಸ್ಕೋರ್ ಚೇಸ್ ಮಾಡಿ ಗೆದ್ದ ತಂಡವೆಂಬ ವಿಶ್ವ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು.
ಆಸ್ಟ್ರೇಲಿಯಾ ತಂಡವು ಟಿ20 ಕ್ರಿಕೆಟ್ನಲ್ಲಿ ಬರೋಬ್ಬರಿ 7 ಬಾರಿ 200+ ಸ್ಕೋರ್ಗಳನ್ನು ಚೇಸ್ ಮಾಡಿದ್ದರು. ಈ ಮೂಲಕ ಟಿ20 ಪಂದ್ಯದಲ್ಲಿ ಅತೀ ಹೆಚ್ಚು ಬಾರಿ 200 ಕ್ಕಿಂತ ಹೆಚ್ಚಿನ ಸ್ಕೋರ್ ಬೆನ್ನತ್ತಿದ ಗೆದ್ದ ತಂಡವೆಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.
ಇದೀಗ ಈ ವಿಶ್ವ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಪಂಜಾಬ್ ಕಿಂಗ್ಸ್ ತಂಡ ಯಶಸ್ವಿಯಾಗಿದೆ. ಪಂಜಾಬ್ ಪಡೆಯು ಈವರೆಗೆ 9 ಬಾರಿ 200+ ಸ್ಕೋರ್ಗಳನ್ನು ಚೇಸ್ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 200+ ಸ್ಕೋರ್ ಬೆನ್ನತ್ತಿ ಗೆದ್ದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗಿಲ್ಲಿ ನಟ ಅವರು (Gilli Nata) ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆದ್ದ ಬಳಿಕ ಅಪಾರ ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್ಗೆ ಬಂದು ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ಇದೇ ಮೊದಲು. ಈಗ ಗಿಲ್ಲಿ ನಟ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ. ಏಕೆಂದರೆ ಅವರು ಜಿಮ್ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.
ಗಿಲ್ಲಿ ನಟ ಅವರು ತಮ್ಮ ಫಿಟ್ನೆಸ್ಗೆ ಎಂದಿಗೂ ಪ್ರಾಮುಖ್ಯತೆ ಕೊಟ್ಟವರಲ್ಲ. ಅದೇ ರೀತಿ ಸ್ಟೈಲ್ ಬಗ್ಗೆಯೂ ಅವರು ಗಮನ ಹರಿಸಿದವರಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರು ಕೇವಲ ಒಂದು ಶಾರ್ಟ್ಸ್, ಬನಿಯನ್ ಹಾಕಿ ಓಡಾಡುತ್ತಿದ್ದರು. ತಲೆಕೂದಲು ಬಾಚಿಕೊಳ್ಳುತ್ತಾ ಇರಲಿಲ್ಲ. ಹೊರಗೆ ಯಾವ ರೀತಿ ಇದ್ದೀನೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲೂ ಇದ್ಧೇನೆ ಎಂದು ಗಿಲ್ಲಿ ಹೇಳುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ಅವರು ಜಿಮ್ ಅಲ್ಲಿ ವರ್ಕೌಟ್ ಮಾಡುವ ಪ್ರಯತ್ನ ಮಾಡಿದ್ದರು. ‘ವರ್ಕೌಟ್ ಮಾಡೋ. ಫಿಟ್ ಆಗಿರ್ತೀಯಾ’ ಎಂದು ರಘು ಅವರು ಅನೇಕ ಬಾರಿ ಗಿಲ್ಲಿಗೆ ಹೇಳಿದ್ದು ಇದೆ. ಇದನ್ನು ಗಿಲ್ಲಿ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಈ ವಿಷಯದಲ್ಲಿ ಸೀರಿಯಸ್ ಆದಂತೆ ಇದೆ.
ಈಗ ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಗಿಲ್ಲಿಗೆ ಫಿಟ್ನೆಸ್ ಬಗ್ಗೆ ಕಾಳಜಿ ಬಂದಿದ್ದು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ‘ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಗಿಲ್ಲಿ ವರ್ಕೌಟ್ ಆರಂಭಿಸಿದ್ದು ನೋಡಿ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎನ್ನುವ ಕುತೂಹಲವೂ ಮೂಡಿದೆ. ಅವರಿಗೆ ಹೀರೋ ಆಗುವುದಕ್ಕಿಂತ, ನಿರ್ದೇಶನದಲ್ಲಿ ಸಾಕಷ್ಟು ಆಸಕ್ತಿ ಇದೆ.
ಬೆಂಗಳೂರು, ಏಪ್ರಿಲ್ 04: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ (Weather Forecast) ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ವಿಜಯನಗರ, ಬಳ್ಳಾರಿ, ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ವಿಜಯಪುರ, ಕಲ್ಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.