All posts by nagaraj11081993

ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ: ಸಿಡಿದೆದ್ದ ಕರವೇ

ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ: ಸಿಡಿದೆದ್ದ ಕರವೇ

ಹುಬ್ಬಳ್ಳಿ, ಮಾರ್ಚ್​​ 17: ರೈಲ್ವೆ ಪರೀಕ್ಷೆಗಳಲ್ಲಿ (Railway Exam) ಮೇಲಿಂದ ಮೇಲೆ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ಈ ಹಿಂದೆ ಅನೇಕ ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡುವಂತೆ ಹೋರಾಟ ಮಾಡಿ ಅವಕಾಶ ಪಡೆಯಲಾಗಿತ್ತು. ಇದೀಗ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆ ರೈಲ್ವೆ ನೇಮಕಾತಿ ಕಚೇರಿಗೆ ಮುತ್ತಿಗೆ ಹಾಕಿತ್ತು. ಹೋರಾಟಕ್ಕೆ ಮಣಿದ ಇಲಾಖೆ, ಪರೀಕ್ಷೆಯನ್ನು ಮುಂದೂಡಿದೆ.

ರೈಲ್ವೆ ಇಲಾಖೆ ಕನ್ನಡಿಗರನ್ನು ತಾತ್ಸಾರದಿಂದ ನೋಡುತ್ತಿರುವು ಮುಂದುವರಿಸಿದೆ. ಈ ಹಿಂದೆ ನಡೆದ ಅನೇಕ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್​​ನಲ್ಲಿ ನಡೆಸಿ ಕನ್ನಡಿಗರ ಕೆಂಗಣ್ಣಿಗೆ ಇಲಾಖೆ ಗುರಿಯಾಗಿತ್ತು. ಹೀಗಾಗಿ ರೈಲ್ವೆ ಇಲಾಖೆ ವಿರುದ್ಧ ಅನೇಕ ಹೋರಾಟಗಳು ನಡೆದಿದ್ದವು. ಹೋರಾಟಕ್ಕೆ ಮಣಿದು ವಿವಿಧ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನೈರುತ್ಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಕೆಲಸ ಮಾಡ್ತಿರುವ ಗ್ರೂಪ್ ಡಿ ಮತ್ತು ಸಿ ದರ್ಜೆಯ ನೌಕರರಿಗೆ ಮುಂಬಡ್ತಿ ನೀಡಲು ಇಲಾಖಾವಾರು ಪರೀಕ್ಷೆಗಳನ್ನು ರೈಲ್ವೆ ನೇಮಕಾತಿ ಕೋಶ ಇಂದು ನಿಗದಿ ಮಾಡಿತ್ತು.

ಇದನ್ನೂ ಓದಿ: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ

ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕೋಶದ ಕಚೇರಿಯಲ್ಲಿ ಕಂಪ್ಯೂಟರ್ ಮೂಲಕ ಪರೀಕ್ಷೆಗೆ ತಯಾರಿ ನಡೆದಿತ್ತು. ಅನೇಕರು ಪರೀಕ್ಷಾ ಕೇಂದ್ರಕ್ಕೆ ಕೂಡ ಆಗಮಿಸಿದ್ದರು. ಆದರೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿರಲಿಲ್ಲ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಇಂದು ಹುಬ್ಬಳ್ಳಿಯಲ್ಲಿರುವ ರೈಲ್ವೆ ನೇಮಕಾತಿ ಕೋಶದ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದರು.

ರೈಲ್ವೆ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಲು ಅವಕಾಶ ನೀಡಲ್ಲ. ಪದೋನ್ನತಿ ಪರೀಕ್ಷೆಯನ್ನು ಮುಂದೂಡಬೇಕು. ಅದನ್ನು ಕನ್ನಡದಲ್ಲಿಯೇ ನಡೆಸಬೇಕು ಅಂತ ಕರವೇ ಹೋರಾಟಗಾರ ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.

ಪರೀಕ್ಷೆ ಮಂದೂಡಿಕೆ

ಬೇರೆ ಬೇರೆ ಕಡೆಗಳಿಂದ ಬಂದಿದ್ದ ನೂರಾರು ಅಭ್ಯರ್ಥಿಗಳ ಪೈಕಿ ಕೆಲವರು ಪರೀಕ್ಷಾ ಕೇಂದ್ರದೊಳಗೆ ಹೋದರೆ ಕೆಲವರು ಪರೀಕ್ಷಾ ಕೇಂದ್ರದ ಹೊರಗೆ ನಿಂತಿದ್ದರು. ಕೆಲಹೊತ್ತು ಪರೀಕ್ಷಾ ಕೇಂದ್ರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಆರ್​ಪಿಎಫ್ ಪೊಲೀಸರ ಮತ್ತು ನಗರದ ವಿವಿಧ ಠಾಣೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಚೇರಿಯ ಪ್ರವೇಶ ದ್ವಾರದ ಮುಂದೆಯೇ ಹೋರಾಟ ಮಾಡುತ್ತಿದ್ದ ಕರವೇ ಕಾರ್ಯಕರ್ತರು, ತಮ್ಮ ಪಟ್ಟು ಸಡಿಲಿಸದೇ ಇದ್ದಿದ್ದರಿಂದ, ನೇಮಕಾತಿ ಕೋಶದ ಅಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಮಾತನಾಡಿ, ಪರೀಕ್ಷೆಯನ್ನು ಮಂದೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅಭ್ಯರ್ಥಿಗಳನ್ನು ಮರಳಿ ಕಳುಹಿಸಿದರು. ಇಂದಿನ ಪರೀಕ್ಷೆ ಮುಂದೂಡಿದ್ದೇವೆ ಅಂತ ಅಭ್ಯರ್ಥಿಗಳಿಗೆ ಕೂಡ ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲಿ ರೆಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

ಸದ್ಯ ರೈಲ್ವೆ ಇಲಾಖೆ, ಪದೋನ್ನತಿ ಪರೀಕ್ಷೆಯನ್ನು ಮುಂದೂಡಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸೋದಾಗಿ ಅಭ್ಯರ್ಥಿಗಳಿಗೆ ಹೇಳಿದೆ. ಆದರೆ ಮುಂದೂಡಿಕೆ ಆಗಿರುವ ಪರೀಕ್ಷೆಯನ್ನು ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿಯೇ ಬರೆಯಲು ತೀರ್ಮಾನವನ್ನು ಆದಷ್ಟು ಬೇಗನೆ ಮೇಲಾಧಿಕಾರಿಗಳು ಕೈಗೊಳ್ಳಬೇಕಿದೆ. ಜೊತೆಗೆ ಮುಂದೆ ಈ ರೀತಿಯ ಭಾಷಾ ತಾರತಮ್ಯವಾಗದಂತೆ ರೈಲ್ವೆ ಇಲಾಖೆ ಕಟ್ಟೆಚ್ಚರ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಗಲಕೋಟೆ ಬೈ ಎಲೆಕ್ಷನ್: ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​​.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ

ಬಾಗಲಕೋಟೆ, ಮಾರ್ಚ್​ 17: ಹೆಚ್​.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ ಎಂದು ಆಯೋಗ ಘೋಷಿಸಿದ ಬೆನ್ನಲ್ಲೇ ಟಿಕೆಟ್​​ ಆಕಾಂಕ್ಷಿಗಳ ನಡುವಿನ ಪೈಪೋಟಿ ಜೋರಾಗಿದೆ. ಕಾಂಗ್ರೆಸ್​​ ಮತ್ತು ಬಿಜೆಪಿ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್​​ಗಾಗಿ ಲಾಬಿಯೂ ಜೋರಾಗಿದೆ. ಕಾಂಗ್ರೆಸ್​​ನಿಂದ ಸ್ಫರ್ಧೆಗಾಗಿ ದಿವಂಗತ ಶಾಸಕ ಮೇಟಿ ಕುಟುಂಬದಲ್ಲಿಯೇ ಗುದ್ದಾಟ ನಡೆಯುತ್ತಿದ್ದರೆ, ಇತ್ತ ಬಿಜೆಪಿಯಲ್ಲಿ ವಿವಿಧ ಸಮುದಾಯಗಳ ಮುಖಂಡರು ನಮಗೊಂದು ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಕಾಂಗ್ರೆಸ್​​ ಟಿಕೆಟ್​​ಗಾಗಿ ಮೇಟಿ ಮಗಳ ಪಟ್ಟು

ತಂದೆಯ ನಿಧನದ ಹಿನ್ನೆಲೆ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಕಾರಣ ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​. ವೈ. ಮೇಟಿ ಅವರ ಕಿರಿಯ ಮಗಳು ಮಹಾದೇವಿ ಮೇಟಿ ಪಟ್ಟು ಹಿಡಿದ್ದಾರೆ. ಈ ನಡುವೆ ಕುಟುಂಬದ ನಡುವೆಯೇ ನಡೆಯುತ್ತಿರುವ ಟಿಕೆಟ್ ಫೈಟ್ ವಿಚಾರವಾಗಿ ಮಾತುಕತೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಮೇಟಿ‌ ಮಕ್ಕಳನ್ನು ಕರೆದಿದ್ದಾರೆ.  ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮೇಟಿ, ಉಮೇಶ್ ಮೇಟಿ ಸೇರಿದಂತೆ ಮಹಾದೇವಿ ಮೇಟಿ ಮುಖ್ಯಮಂತ್ರಿಗಳನ್ನು ನಾಳೆ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈ ನಡುವೆಯೂ ಪ್ರತಿಕ್ರಿಯಿಸಿರುವ ಮಹಾದೇವಿ ಮೇಟಿ, ನನಗೆ ಟಿಕೆಟ್​​ ಕೊಟ್ಟರೆ ಕಾಂಗ್ರೆಸ್​​ನಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಬಂಡಾಯ ಸ್ಪರ್ಧೆ ಖಚಿತವಾಗಿದ್ದು, ಮಾರ್ಚ್​​ 20ರಂದು ನಾಮಪತ್ರ ಸಲ್ಲಿಸೋದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆಗೆ ಈಗಿಂದಲೇ ತಂತ್ರ, ಪ್ರತಿತಂತ್ರ ಶುರು; ಯಾರೆಲ್ಲಾ ಆಕಾಂಕ್ಷಿಗಳು ಗೊತ್ತಾ?

ಸಿಎಂ ಹಾಗೂ ಮೇಟಿ ಅವರ ಆಪ್ತ ಹೊಳೆಬಸು ಶೆಟ್ಟರ್ ಹೆಸರು ಹೇಳದೇ, ನಮ್ಮ ತಂದೆಯವರ ಆಪ್ತನಿಂದ ಕ್ಷೇತ್ರ ಹಾಳಾಗಿದೆ. ಆ ಆಪ್ತನನ್ನು ಮಟ್ಟ ಹಾಕಲು ನನ್ನಿಂದ ಸಾಧ್ಯ. ಆತ ನನ್ನ ಹೆಸರು ಕಡೆಗಣಿಸಿ ಮೇಟಿಯವರಿಗೆ ಮೂರು ಜನ ಮಕ್ಕಳು ಎಂದು ಸಿಎಂ ಸಿದ್ಧರಾಮಯ್ಯನವರಿಗೆ ಮಾಹಿತಿ ನೀಡಿದ್ದಾನೆ. ಕ್ಷೇತ್ರದಲ್ಲಿ ಆತನ ‌ಹಸ್ತಕ್ಷೇಪ ಅತಿಯಾಗಿದ್ದು, ಆ ಕಾರಣ ನಾನು ಅಖಾಡಕ್ಕೆ ಇಳಿಯುತ್ತಿದ್ದೇನೆ. ಮೊನ್ನೆ ಸಿಎಂ ಮತ್ತು ಡಿಸಿಎಂ ಬಾಗಲಕೋಟೆಗೆ ಬಂದಾಗಲೂ ಅವರ ಜೊತೆ ಮಾತಾಡಿದ್ದೇನೆ. ನಾನು ಆಕಾಂಕ್ಷಿ ಎಂಬ ವಿಚಾರ ಅವರಿಗೆ ಅದಾಗಲೇ ತಿಳಿಸಿರೋದಾಗಿ ಮಹಾದೇವಿ ಮೇಟಿ ಹೇಳಿದ್ದಾರೆ.

ಬಿಜೆಪಿ ಟಿಕೆಟ್​​ಗೆ ಡಾ. ಶೇಖರ್ ಮಾನೆ ಡಿಮ್ಯಾಂಡ್​

ಇತ್ತ ಬಿಜೆಪಿಯಲ್ಲೂ ಟಿಕೆಟ್​​ಗಾಗಿ ಪೈಪೋಟಿ ಜೋರಾಗಿದ್ದು, ಮರಾಠಾ ಸಮಾಜದ ರಾಜ್ಯ ಉಪಾಧ್ಯಕ್ಷ ಡಾ. ಶೇಖರ್ ಮಾನೆ ತಾನು ಕೂಡ ಆಕಾಂಕ್ಷಿ ಎಂದು ಘೋಷಿಸಿದ್ದಾರೆ. ಮರಾಠಾ ಸಮಾಜ ಬಿಜೆಪಿ ಪರ ಸದಾ ನಿಂತಿದೆ. ಹೀಗಾಗಿ ಈ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ ತನಗೆ ಟಿಕೆಟ್ ಕೊಡಬೇಕು. ಈ ಬಗ್ಗೆ ಹೈಕಮಾಂಡ್​​ ಮಟ್ಟದಲ್ಲಿ ಮಾತನಾಡಿದ್ದೇನೆ. ಒಂದೊಮ್ಮೆ ತನಗೆ ಅವಕಾಶ ಸಿಗದಿದ್ದರೆ ಪಕ್ಷ ನಿರ್ಧರಿಸುವ ಅಭ್ಯರ್ಥಿ ಪರ ಪ್ರಚಾರ ಮಾಡಿ, ಗೆಲುವಿಗೆ ಶ್ರಮಿಸೋದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್​ಗೆ ಬೋರ್ ಆಯ್ತಾ? ವಿಡಿಯೋ ವೈರಲ್

ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif) ಕೂಡ ಇದ್ದಾರೆ. ಪರಸ್ಪರರ ಮೇಲಿರುವ ಗೌರವ ಮತ್ತು ಪ್ರೀತಿಯಿಂದಲೇ ಈ ಜೋಡಿ ಅಭಿಮಾನಿಗಳ ಮನ ಗೆದ್ದಿದೆ. ಆದರೆ, ಇತ್ತೀಚೆಗೆ ವಿಕ್ಕಿ ಕೌಶಲ್ ಅವರು ಮದುವೆ ಸಮಾರಂಭವೊಂದರಲ್ಲಿ ಮಾಡಿದ ಹಾಸ್ಯವು ವಿವಾದಕ್ಕೆ ಈಡಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಇಷ್ಟು ದಿನ ಉತ್ತಮ ನಡವಳಿಕೆಗಳ ಕಾರಣದಿಂದ ಮೆಚ್ಚುಗೆ ಪಡೆಯುತ್ತಿದ್ದ ವಿಕ್ಕಿ ಕೌಶಲ್ (Vicky Kaushal) ಅವರು ಈಗ ವಿವಾದಾತ್ಮಕ ಜೋಕ್ ಮಾಡಿ ಜನರಿಂದ ಟೀಕೆ ಎದುರಿಸುವಂತಾಗಿದೆ.

ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವಿಕ್ಕಿ ಕೌಶಲ್ ಅವರು ವರನ ತಂದೆಯ ಬಳಿ ಮಾತನಾಡುತ್ತಾ, ವರನಿಗೆ ‘How’s the josh?’ (ಜೋಶ್ ಹೇಗಿದೆ?) ಎಂದು ಕೇಳುವಂತೆ ತಿಳಿಸುತ್ತಾರೆ. ಇದಕ್ಕೆ ನೆರೆದಿದ್ದವರು ‘High, sir’ ಎಂದು ಕೂಗಿದಾಗ, ವಿಕ್ಕಿ ಕೌಶಲ್ ಅವರು ಜೋಕ್ ಮಾಡಿದರು. ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿದೆ.

‘ಮದುವೆ ಆಗದೇ ಇರುವವರಿಗೆ ಯಾವಾಗಲೂ ಹೆಚ್ಚಿನ ಜೋಶ್ ಇರುತ್ತದೆ ಎಂಬುದನ್ನು ನಾನು ಗಮನಿಸಿದ್ದೇನೆ. ಆದರೆ ನಮ್ಮಂತಹ ವಿವಾಹಿತರಲ್ಲಿ, ಆ ಜೋಶ್ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಹೋಗುತ್ತದೆ. ಆದರೆ ಚಿಂತಿಸಬೇಡಿ, ಕೇವಲ ನಾಲ್ಕು ದಿನಗಳಲ್ಲಿ ಜೋಶ್ ಮಾಯವಾಗುವುದಿಲ್ಲ’ ಎಂದು ವಿಕ್ಕಿ ತಮಾಷೆ ಮಾಡಿದ್ದರು. ಅವರ ಈ ಮಾತಿಗೆ ವಿರೋಧ ವ್ಯಕ್ತವಾಗಿದೆ.

Vicky is turning into the wife jokes guy
by
u/yours_truly_Davina in
BollyBlindsNGossip

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಹೆಂಡತಿ ಅಥವಾ ಮದುವೆ ಬಗ್ಗೆ ವಿಕ್ಕಿ ಕೌಶಲ್ ಅವರು ಈ ರೀತಿ ಜೋಕ್ ಮಾಡಿದ್ದು ಅನೇಕರಿಗೆ ಸರಿ ಎನಿಸಿಲ್ಲ. ‘2026ರಲ್ಲೂ ನಾವು ಇಂತಹ ಸ್ತ್ರೀದ್ವೇಷದ ಮದುವೆ ಜೋಕ್‌ಗಳನ್ನು ಮಾಡುತ್ತಿದ್ದೇವಾ? ಇವುಗಳನ್ನು 2016ರಲ್ಲೇ ಬಿಡಬೇಕಿತ್ತು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಕ್ಕಿ ಕೌಶಲ್ ಜೊತೆ ರುಕ್ಮಿಣಿ ವಸಂತ್ ಬರ್ತ್​ಡೇ ಸಂಭ್ರಮ

‘ಪುರುಷರು ಸಾರ್ವಜನಿಕವಾಗಿ ತಮ್ಮ ವೈವಾಹಿಕ ಜೀವನವನ್ನು ಲೇವಡಿ ಮಾಡುವುದು ನನಗೆ ಇಷ್ಟವಿಲ್ಲ. ಇದು ಪರೋಕ್ಷವಾಗಿ ಹೆಂಡತಿಗೆ ಮಾಡುವ ಅವಮಾನ’ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ‘ಜೋಶ್ ಕಡಿಮೆ ಆಗಿದೆ ಎಂದರೆ ಕತ್ರಿನಾ ಕೈಫ್ ಜೊತೆಗಿನ ಸಂಸಾರ ವಿಕ್ಕಿ ಕೌಶಲ್ ಅವರಿಗೆ ಬೇಸರ ಆಗಿದೆಯಾ’ ಎಂದು ಕೂಡ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿಕ್ಕಿ ಏನು ಉತ್ತರ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್

ಬೆಂಗಳೂರು, ಮಾ.17: “ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ” ಎಂಬ ಮಾತನ್ನು ಕೇವಲ ಮಾತಾಗಿ ಉಳಿಸದೆ, ಪ್ರಾಯೋಗಿಕವಾಗಿ ಅಮೂಲ್ಯ ಜೀವವೊಂದನ್ನು ಉಳಿಸುವ ಮೂಲಕ ಯಲಹಂಕ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಮೂರ್ತಿ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಶಾನ್ಯ ವಿಭಾಗದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಮೇಲೆ ವ್ಯಕ್ತಿಯೊಬ್ಬರು ಮಲಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ತುರ್ತು ಕರೆ ಪೊಲೀಸ್ ನಿಯಂತ್ರಣ ಕೊಠಡಿಗೆ (Namma 112) ಬಂದಿತ್ತು. ಈ ಮಾಹಿತಿಯನ್ನು ಸ್ವೀಕರಿಸಿದ ಕೂಡಲೇ ಗಸ್ತು ವಾಹನದಲ್ಲಿದ್ದ ಶ್ರೀ ಶ್ರೀಧರ್ ಮೂರ್ತಿ (HC-13669) ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ರೈಲು ಬರುವ ಮುನ್ನವೇ ಹಳಿಯ ಬಳಿಗೆ ತಲುಪಿದ ಶ್ರೀಧರ್ ಮೂರ್ತಿ ವ್ಯಕ್ತಿಯನ್ನು ಸುರಕ್ಷಿತವಾಗಿ ಅಲ್ಲಿಂದ ಪಾರು ಮಾಡಿದರು. ಕೇವಲ ರಕ್ಷಣೆ ಮಾಡುವುದಕ್ಕೆ ಸೀಮಿತವಾಗದ ಅವರು, ಆ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸಿದರು. ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ಆತ್ಮಹತ್ಯೆ ಅಂತಿಮ ನಿರ್ಧಾರವಲ್ಲ ಎಂದು ಮನವರಿಕೆ ಮಾಡಿಕೊಟ್ಟು, ಆತನಲ್ಲಿ ಧೈರ್ಯ ತುಂಬಿದರು.ಬಳಿಕ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಿ, ನಡೆದ ಘಟನೆಯ ಬಗ್ಗೆ ವಿವರಿಸಿ ಸುರಕ್ಷಿತವಾಗಿ ಕುಟುಂಬಸ್ಥರ ಒಪ್ಪಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿಯಿಂದ ಬಿಜೆಪಿ ದೂರ ಉಳಿದಿದ್ದು ಯಾಕೆ? ರಜನೀ ವಿರುದ್ಧ ಟಿವಿಕೆ ಆಡಿದ ಆ ಒಂದು ಮಾತು ಕಾರಣವಾ?

ಚೆನ್ನೈ, ಮಾರ್ಚ್ 17: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಕಟ್ಟಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಎನ್​ಡಿಎ ಮೈತ್ರಿ ಮಾಡಿಕೊಳ್ಳಬಹುದು ಎಂದು ಹಲವು ದಿನಗಳ ಕಾಲ ಹರಿದಾಡಿದ್ದ ಸುದ್ದಿ, ಹಾಗೆಯೇ, ತಣ್ಣಗಾಗಿ ಹೋಗಿದೆ. ಯಾಕೆ ಈ ಮೈತ್ರಿ ಸಾಧ್ಯತೆಯ ಸುದ್ದಿ ನಿಂತು ಹೋಯಿತು ಎನ್ನುವುದು ಕುತೂಹಲದ ಸಂಗತಿ ಎನಿಸಿದೆ. ವರದಿಗಳ ಪ್ರಕಾರ, ಟಿವಿಕೆ ಪಕ್ಷದ ಮುಖಂಡರೊಬ್ಬರು ಸೂಪರ್​ಸ್ಟಾರ್ ರಜನೀಕಾಂತ್ ವಿಚಾರದಲ್ಲಿ ಆಡಿದ ಆ ಒಂದು ಮಾತು ಎನ್​ಡಿಎ ಪಾಳಯಕ್ಕೆ ಅಸಮಾಧಾನ ತಂದಿತು ಎನ್ನಲಾಗಿದೆ.

ರಜನೀಕಾಂತ್ ಬಗ್ಗೆ ಟಿವಿಕೆ ಮುಖಂಡ ಹೇಳಿದ್ದಿದು…

ಕೆಲ ದಿನಗಳ ಹಿಂದೆ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರು ರಜನೀಕಾಂತ್ ರಾಜಕೀಯ ಪ್ರಯತ್ನವನ್ನು ಲೇವಡಿ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಡಿಎಂಕೆ ಬಲಿಷ್ಠರಿಂದ ಬೆದರಿಕೆ ಬಂದಿದ್ದರಿಂದ ರಜನೀಕಾಂತ್ ಅವರು ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು ಎಂದು ಟಿವಿಕೆ ಮುಖಂಡ ಹೇಳಿದ್ದರು. ಡಿಎಂಕೆಯ ಬೆದರಿಕೆಗೆ ರಜನೀಕಾಂತ್ ಬಗ್ಗಿದರೂ, ತಮ್ಮ ನಾಯಕ ದಳಪತಿ ವಿಜಯ್ ಬಗ್ಗಿಲ್ಲ ಎಂಬಂತೆ ಆ ಹೇಳಿಕೆ ಬಿಂಬಿತವಾಗಿತ್ತು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರ, ಒಡಿಶಾದಲ್ಲಿ ಎನ್​ಡಿಎಗೆ ಭರ್ಜರಿ ಗೆಲುವು; ಕಾಂಗ್ರೆಸ್​ಗೆ ಮುಖಭಂಗ

ದಳಪತಿ ವಿಜಯ್ ಅವರನ್ನು ಹೊಗಳುವ ಭರದಲ್ಲಿ ರಜನೀಕಾಂತ್​ಗೆ ಅವಹೇಳನ ಮಾಡಲಾಗಿದೆ ಎಂಬುದು ಎನ್​ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಎಐಎಡಿಎಂ ಪಕ್ಷಗಳ ಮುಖಂಡರ ಅಸಮಾಧಾನ. ‘ರಜನೀಕಾಂತ್ ಬಹಳ ಗೌರವ ಪಡೆದಿರುವ ವ್ಯಕ್ತಿ. ಅವರ ಘನತೆಗೆ ಕುಂದು ತರುವ ರೀತಿಯಲ್ಲಿ ಮಾತನಾಡಿರುವುದನ್ನು ಸ್ವೀಕರಿಸಲು ಆಗುವುದಿಲ್ಲ. ರಾಜಕೀಯ ಪ್ರವೇಶಿಸುವುದು ಒಬ್ಬ ವ್ಯಕ್ತಿಯ ಹಕ್ಕು. ರಾಜಕೀಯ ಪ್ರವೇಶ ಮಾಡದಿರುವುದೂ ಕೂಡ ಅವರ ಹಕ್ಕೇ. ಅವರು ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ. ಅದನ್ನು ಗೌರವಿಸಬೇಕು’ ಎಂದು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.

ಬಿಜೆಪಿ ನಾಯಕ ಕೆ ಅಣ್ಣಾಮಲೈ ಕೂಡ ಟಿವಿಕೆ ಮುಖಂಡನ ಹೇಳಿಕೆಯನ್ನು ಖಂಡಿಸಿದ್ದಾರೆ. ಒಬ್ಬ ಸೂಪರ್​​ಸ್ಟಾರ್ 50ಕ್ಕೂ ಹೆಚ್ಚು ವರ್ಷ ತನ್ನ ಸ್ಟಾರ್ ಪಟ್ಟವನ್ನು ಉಳಿಸಿಕೊಳ್ಳುತ್ತಿರುವುದು ಆತನ ಮಾನಸಿಕ ಸ್ಥೈರ್ಯವನ್ನು ತೋರಿಸುತ್ತದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ

ರಜನೀಕಾಂತ್ ಅವರು ಕೆಲ ವರ್ಷಗಳ ಹಿಂದೆ ಸಕ್ರಿಯ ರಾಜಕಾರಣ ಪ್ರವೇಶ ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ, ಕೆಲ ದಿನಗಳ ನಂತರ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಲ್ಲು ತಂದೆ ಸಲೀಂ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಹಾಗೂ ಹಿರಿಯ ಕಥೆ ಬರಹಗಾರ ಸಲೀಮ್ ಖಾನ್ (Salim Khan) ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ತಿಂಗಳು ಮಿದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಅವರು ಆಸ್ಪತ್ರೆ ಸೇರಿದ್ದರು. ಇಂದು ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದ ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

ಸಲೀಮ್ ಖಾನ್ ಅವರಿಗೆ 90 ವರ್ಷ. ಚಿತ್ರರಂಗದಲ್ಲಿ ಸಲೀಮ್-ಜಾವೇದ್ ಜೋಡಿ ಎಂದೇ ಇದು ಫೇಮ್ ಆಗಿತ್ತು. ಶೋಲೆ, ದೀವಾರ್, ‘ಡಾನ್’ ಮೊದಲಾದ ಹಿಂದಿ ಚಿತ್ರಗಳಿಗೆ ಹಾಗೂ ಕನ್ನಡದ ಎರಡು ಸಿನಿಮಾಗಳಿಗೆ ಇವರು ಕಥೆ ಬರೆದಿದ್ದರು. ಫೆಬ್ರವರಿ 17ರಂದು ಲೀಲಾವತಿ ಆಸ್ಪತ್ರೆಗೆ ಇವರು ದಾಖಲಾಗಿದ್ದರು. ಈಗ ಮಾರ್ಚ್ 17ರಂದು ಅವರು ಬಿಡುಗಡೆ ಹೊಂದಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಮಿದಿಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವ ಆತಂಕ ಮೂಡಿಸಿತ್ತು.ಈ ವಯಸ್ಸಿನಲ್ಲಿ ಅವರಿಗೆ ಈ ರೀತಿ ಆಗಿದೆ ಎಂದಾಗ ಸಹಜವಾಗಿಯೇ ಆತಂಕ ಹೆಚ್ಚಿತ್ತು. ಅವರನ್ನು ವೆಂಟಿಲೇಟರ್ ಸಪೋರ್ಟ್​​ನೊಂದಿಗೆ ನೋಡಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಇಂದೇ ಅವರನ್ನು ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಸಲೀಂ ಖಾನ್ ಆಸ್ಪತ್ರೆಯಲ್ಲಿ ಇರುವಾಗ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಮಲ್ವಿರಾ, ಅರ್ಪಿತಾ, ಅಳಿಯ ಅತುಲ್ ಅಗ್ನಿಹೋತ್ರಿ, ಆಯುಷ್ ಶರ್ಮಾ ಸೇರಿದಂತೆ ಅನೇಕರು ನಿತ್ಯವೂ ಬಂದು ಹೋಗುತ್ತಿದ್ದರು. ವೃತ್ತಿ ಜೀವನದಲ್ಲಿ ಬೆಂಬಲವಾಗಿ ನಿಂತ ಜಾವೇದ್ ಅಖ್ತರ್ ಕೂಡ ಆಗಾಗ ಬಂದು ಹೋಗುತ್ತಿದ್ದರು.

ಇದನ್ನೂ ಓದಿ: ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ಸಲೀಮ್ ಖಾನ್ ಅವರು ಜಾವೇದ್ ಜೊತೆ ಸೇರಿ ಅದ್ಭುತ ಕಥೆಗಳನ್ನು ಬರೆಯುತ್ತಿದ್ದರು.70ರ ದಶಕದಲ್ಲಿ ಈ ಜೋಡಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ ಎಂಬುದು ವಿಶೇಷ.ಸಲೀಮ್ ಖಾನ್ ಅವರಿಗೆ ಕನ್ನಡದ ನಂಟೂ ಇದೆ. 1976ರಲ್ಲಿ ಬಂದ ‘ಪ್ರೇಮದ ಕಾಣಿಕೆ’ ಹಾಗೂ ‘ರಾಜ ನನ್ನ ರಾಜ’ ಸಿನಿಮಾಗಳಿಗೆ ಸಲೀಮ್ ಹಾಗೂ ಜಾವೇದ್ ಅವರೇ ಕಥೆ ನೀಡಿದರು. ಈ ಎರಡೂ ಸಿನಿಮಾಗಳು ಹಿಟ್ ಆದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಸತ್ ಹೊರಗೆ ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆಗೆ ಮಾಜಿ ಅಧಿಕಾರಿಗಳ ವಿರೋಧ; ಕ್ಷಮೆ ಯಾಚನೆಗೆ ಒತ್ತಾಯ

ನವದೆಹಲಿ, ಮಾರ್ಚ್ 17: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾರ್ಚ್ 12ರಂದು ಅಧಿವೇಶನದ (Parliament Session) ವೇಳೆ ಸಂಸತ್ತಿನ ಪ್ರವೇಶದ್ವಾರದಲ್ಲಿ ಕುಳಿತು ವಿಪಕ್ಷದ ಸಂಸದರೊಂದಿಗೆ ಚಹಾ ಮತ್ತು ಪಕೋಡ ಸೇವಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು 204 ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. “ಮಾರ್ಚ್ 12ರ ಘಟನೆ ತೀವ್ರ ಕಳವಳಕಾರಿ ಮತ್ತು ಉದ್ದೇಶಪೂರ್ವಕವಾಗಿ ಸಂಸದೀಯ ಅಧಿಕಾರದ ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಸಹಿದಾರರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇತರೆ ವಿಪಕ್ಷ ನಾಯಕರ ಇತ್ತೀಚಿನ ನಡವಳಿಕೆಯನ್ನು ಖಂಡಿಸಿ 204 ಮಾಜಿ ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದ ಸಂಯೋಜಕರಾದ ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್, ಈ ಘಟನೆಯು ಭಾರತದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯ ಘನತೆ ಮತ್ತು ಸಾಂವಿಧಾನಿಕ ನೈತಿಕತೆಗೆ ಸವಾಲನ್ನು ಒಡ್ಡುತ್ತದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಪಕ್ಷಪಾತ ಮಾಡಿಲ್ಲ, ಸದನಕ್ಕಿಂತ ವಿಪಕ್ಷ ನಾಯಕ ಮೇಲಲ್ಲ; ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತಿರುಗೇಟು

ಮಾರ್ಚ್ 12ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿ ಸ್ಪೀಕರ್ ಅವರ ಸ್ಪಷ್ಟ ಸೂಚನೆಗಳನ್ನು ನಿರ್ಲಕ್ಷಿಸಿದ್ದರು. ಅವರು ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ ಮತ್ತು ಪಕೋಡ, ಬಿಸ್ಕತ್ ಸೇವಿಸಿದರು. ಇದು ರಾಷ್ಟ್ರದ ಅತ್ಯುನ್ನತ ಶಾಸಕಾಂಗ ಸಂಸ್ಥೆಯಲ್ಲಿ ಅನುಚಿತ ಮತ್ತು ಅಸಂಸದೀಯ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ರಾಹುಲ್ ಗಾಂಧಿ ಈ ವರ್ತನೆಗಾಗಿ ರಾಷ್ಟ್ರದ ಕ್ಷಮೆಯಾಚಿಸಬೇಕು. ಸಂಸತ್ತಿನ ಘನತೆ, ಅಧಿಕಾರ ಮತ್ತು ಸಾಂಸ್ಥಿಕ ಪಾವಿತ್ರ್ಯವನ್ನು ಕಾಪಾಡಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಮಾಡಲಾಗುವ ಇಂತಹ ನಿರಂತರ ಅಗೌರವವು ಸಂಸತ್ತಿನ ವಿಶ್ವಾಸಾರ್ಹತೆಯನ್ನು ಹಾಳು ಮಾಡುವುದಲ್ಲದೆ, ಪ್ರಜಾಪ್ರಭುತ್ವದ ಅಡಿಪಾಯವನ್ನು ಅಲುಗಾಡಿಸುವ ಬೆದರಿಕೆ ಹಾಕುತ್ತದೆ ಎಂದು ಪತ್ರವು ಎಚ್ಚರಿಸಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ, ಸಂಸತ್ ಹೊರಗೆ ಪ್ರತಿಭಟನೆ

ಈ ಬಗ್ಗೆ ANI ಜೊತೆ ಮಾತನಾಡಿದ ಎಸ್‌ಪಿ ವೈದ್, “ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರ ನಡವಳಿಕೆಯು ಹಕ್ಕು ಮತ್ತು ದುರಹಂಕಾರದ ಪ್ರಜ್ಞೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರ ಸಂಸತ್ತಿನಲ್ಲಿ ಅವರ ನಡವಳಿಕೆ ವಿರೋಧ ಪಕ್ಷದ ನಾಯಕನ ನಡವಳಿಕೆಗೆ ತಕ್ಕುದಲ್ಲ, ಇದು ತುಂಬಾ ಜವಾಬ್ದಾರಿಯುತ ಹುದ್ದೆ ಎಂಬುದನ್ನು ಅವರು ಅರಿಯಬೇಕು. ತಮ್ಮ ಸ್ಥಾನದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಮೂಲ್​​ ಬೆನ್ನಲ್ಲೇ ಕೋಮುಲ್​​ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್‌

ಕೋಲಾರ, ಮಾರ್ಚ್​​ 17: ಇತ್ತೀಚೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿತ್ತು. ಇದೀಗ ಅದರಂತೆ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (komul) ಕೂಡ ಹಾಲು ಉತ್ಪಾದಕರಿಗೆ ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಮೂಲಕ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ನೀಡಿದೆ.

ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ

ಯುಗಾದಿ ಹಬ್ಬಕ್ಕೆ ಕೋಲಾರ ಜಿಲ್ಲಾ ಹಾಲು ಉತ್ಪಾದಕರಿಗೆ ಕೋಮುಲ್​ ಕೊಡುಗೆ ನೀಡಿದೆ. ಲೀಟರ್​ ಹಾಲಿಗೆ 2 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಹಾಲು ಉತ್ಪಾದಕರಿಗೆ ಲೀಟರ್‌ಗೆ 35.40 ರೂ. ನೀಡಲಾಗುತ್ತಿತ್ತು. ಇದೀಗ ಪ್ರತಿ ಲೀಟರ್‌ಗೆ 37.40 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್

ಜೊತೆಗೆ ಹಸಿರು ಮೇವು ಬೆಳೆಯುವ ರೈತರಿಗೆ ಎಕರೆಗೆ 3 ಸಾವಿರ ರೂ ಪ್ರೋತ್ಸಾಹ ಧನ, ಹಸುಗಳಿಗೆ ವಿಮೆ 70 ಸಾವಿರದಿಂದ 80 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಹಿತಿ ನೀಡಿದ್ದಾರೆ.

ರೈತರು ಉತ್ಪಾದಿಸುವ 1 ಲೀಟರ್ ಹಾಲಿಗೆ ಕನಿಷ್ಟ 2 ರೂ. ಹೆಚ್ಚಳ ಮಾಡಬೇಕು ಎಂದು ಇತ್ತೀಚೆಗೆ ಒತ್ತಾಯ ಕೇಳಿಬಂದಿತ್ತು. ಪ್ರತಿ ಲೀಟರ್ ಹಾಲು ಉತ್ಪಾದಿಸಲು ಕನಿಷ್ಠ 50 ರೂ. ವೆಚ್ಚವಾಗುತ್ತದೆ. ಇತ್ತೀಚೆಗೆ ಹಿಂಡಿ ಮತ್ತು ಬೂಸಾ ದರ ಕೂಡ 50 ಕೆಜಿ ಚೀಲಕ್ಕೆ 100 ರೂ. ಏರಿಕೆಯಾಗಿದ್ದು, ರೈತರು ಪರದಾಡು ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಕಳೆದ ವರ್ಷ ಬೇಸಿಗೆ ಆರಂಭದಲ್ಲಿ ಒಕ್ಕೂಟವು 2 ರೂ. ದರ ಹೆಚ್ಚಿಸಿದ್ದರೂ, ಸರ್ಕಾರ 4 ರೂ. ನೀಡಿದ ಬಳಿಕ ಅದರಲ್ಲಿ 2 ರೂ. ಮರುಪಡೆಯಲಾಗಿತ್ತು. ಬಳಿಕ ರೈತರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 2 ರೂ. ಹೆಚ್ಚಳ ಮಾಡುವಂತೆ ಒತ್ತಾಯಿಸಲಾಗಿತ್ತು. ಜೊತೆಗೆ ಪಶು ಆಹಾರಕ್ಕಾಗಿ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು ಎಂದು ಆಗ್ರಹಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದಲ್ಲಿ ಹಾರ್ಡ್ ರಾಕ್ ಕೆಫೆ ಯುಗ ಅಂತ್ಯ: ಬೆಂಗಳೂರು ಸೇರಿದಂತೆ 10 ನಗರಗಳ ಔಟ್‌ಲೆಟ್ ಬಂದ್, ಕಾರಣವೇನು?

ಬೆಂಗಳೂರು, ಮಾ.17: ದಶಕಗಳ ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ (HRC) ಭಾರತಕ್ಕೆ ಗುಡ್‌ಬೈ ಹೇಳುತ್ತಿದೆ. ಭಾರತದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಜೊತೆಗಿನ ಒಪ್ಪಂದವನ್ನು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಅಧಿಕೃತವಾಗಿ ಕೊನೆಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ತನ್ನದೇ ಆಗಿರುವ ರುಚಿಯನ್ನು ಹಾಗೂ ವೈಶಿಷ್ಟವನ್ನು ಹೊಂದಿದ್ದ ಇದು, ಇದೀಗ ಬೆಂಗಳೂರಿಗರಿಗೆ ದೊಡ್ಡ ನಿರಾಶಿಯನ್ನು ಮೂಡಿಸಿದೆ. ಇನ್ನು ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿದ್ದ 10 ಕೆಫೆಗಳು ಮುಚ್ಚಲಿವೆ.

ಅದರಲ್ಲಿ ಒಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವೈಟ್‌ಫೀಲ್ಡ್ ಸೇಂಟ್ ಮಾರ್ಕ್ಸ್ ರೋಡ್ (ಐಕಾನಿಕ್) ಚಂಡೀಗಢ, ಚೆನ್ನೈ, ಹೈದರಾಬಾದ್ (ಹೈಟೆಕ್ ಸಿಟಿ ಸೇರಿದಂತೆ), ಕೋಲ್ಕತ್ತಾ, ನವದೆಹಲಿ ಮತ್ತು ಪುಣೆಯಲ್ಲೂ ಕೂಡ ತನ್ನ ಸೇವೆಯನ್ನು ಕೊನೆ ಮಾಡಲಿದೆ. ಆದರೆ ಗೋವಾದಲ್ಲಿರುವ ಹಾರ್ಡ್ ರಾಕ್ ಹೋಟೆಲ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಇದು ಪ್ರಸ್ತುತ ರದ್ದಾದ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ.

ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಇನ್ನು ಕೆಲವರು ಕೆಫೆಯ ವೈಫಲ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ “ಹಾರ್ಡ್ ರಾಕ್ ಕೆಫೆ ಒಳ್ಳೆಯದಾಗಿತ್ತು, ಆದರೆ ಬೆಲೆ ಮಾತ್ರ ಗಗನಕ್ಕೇರಿತ್ತು. ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಕಡಿಮೆ ಬೆಲೆಗೆ ಸ್ಥಳೀಯ ಪಬ್‌ಗಳು ಭರ್ಜರಿ ಪೈಪೋಟಿ ನೀಡಿದವು” ಎಂದು ಒಬ್ಬರು ಹೇಳಿದ್ದಾರೆ. “ಇದು ಕೇವಲ ತಿನ್ನುವ ಜಾಗವಾಗಿರಲಿಲ್ಲ, ಸಂಗೀತದ ಅನುಭವ ನೀಡುವ ತಾಣವಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿ ರಾಕ್ ಸಂಗೀತದ ಬದಲು ಜನರಿಕ್ ಪ್ಲೇಲಿಸ್ಟ್‌ಗಳು ಪ್ಲೇ ಆಗುತ್ತಿದ್ದವು” ಎಂದು ಸಂಗೀತ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯುಗಾದಿಗೆ ಮೈಸೂರು, ಧರ್ಮಸ್ಥಳ, ಕುಕ್ಕೆಗೆ ಹೋಗುವವರಿಗೆ ಬಿಗ್​​ ಶಾಕ್​​​​​ ನೀಡಿದ ಖಾಸಗಿ ಬಸ್​​​: ಟಿಕೆಟ್​​​​ ದರ ಏರಿಕೆ ಪಟ್ಟಿ ಇಲ್ಲಿದೆ

“ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್ ಕೆಫೆ ಒಂದು ಸಂಕೇತವಾಗಿತ್ತು. ಐಟಿ ಮಂದಿ ಈಗ ಕೇವಲ ಇಡಿಎಂ (EDM) ಮತ್ತು ಪಂಜಾಬಿ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ” ಎಂದು ಬೆಂಗಳೂರಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಇದು 1971 ರಲ್ಲಿ ಐಸಾಕ್ ಟಿಗ್ರೆಟ್ ಮತ್ತು ಪೀಟರ್ ಮಾರ್ಟನ್ ಅವರಿಂದ ಲಂಡನ್‌ನಲ್ಲಿ ಆರಂಭವಾಯಿತು. ಅಮೇರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತದ ಸ್ಮರಣಿಕೆಗಳು ಇಲ್ಲಿನ ವಿಶೇಷವಾಗಿತ್ತು. ಇಂದು 70 ಕ್ಕೂ ಹೆಚ್ಚು ದೇಶಗಳಲ್ಲಿ ಹೋಟೆಲ್, ಕ್ಯಾಸಿನೊ ಮತ್ತು ಮ್ಯೂಸಿಯಂಗಳನ್ನು ಈ ಸಂಸ್ಥೆ ಹೊಂದಿದೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

SSLC ವಿದ್ಯಾರ್ಥಿಗಳೇ ಗಮನಿಸಿ: ಶಿಕ್ಷಣ ಇಲಾಖೆಯಿಂದ ಮಹತ್ವದ ಸಲಹೆ; ಇಲ್ಲಿದೆ ಮಾಹಿತಿ

ಬೆಂಗಳೂರು, ಮಾರ್ಚ್​​ 17: ನಾಳೆಯಿಂದ ರಾಜ್ಯಾದ್ಯಂತ ಎಸ್​ಎಸ್​ಎಲ್​​ಸಿ ಪರೀಕ್ಷೆ ಆರಂಭವಾಗಲಿದ್ದು, ಒಟ್ಟು 2871 ಕೇಂದ್ರಗಳಲ್ಲಿ ಎಕ್ಸಾಂ ನಡೆಯಲಿದೆ. ಈ ವರ್ಷ 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 8,12,855 ಹೊಸಬರು ಪರೀಕ್ಷೆ ಬರೆಯಲಿದ್ದಾರೆ. 62,845 ರಿಪೀಟರ್ಸ್​ ಮತ್ತು 27,189 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕದ ಹಿನ್ನೆಲೆ ತಡೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿ ಇರೋದೇನು?

  • ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ
  • ಸ್ಮಾಟ್ ವಾಚ್​, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ಪೂರ್ಣ ನಿಷೇಧ
  • ಪರೀಕ್ಷಾ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳಿಂದ ಚಿತ್ರೀಕರಣಕ್ಕೆ ನಿಷೇಧ
  • ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತು ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದು ನಿಷೇಧ
  • ಯಾವುದೇ ವಿಷಯಗಳ ಮಾಹಿತಿ ರವಾನಿಸುವುದು ನಿಷೇಧ
  • ಪರೀಕ್ಷೆಯನ್ನು ವೆಬ್ ಕಾಸ್ಟಿಂಗ್​​​​ ಮೂಲಕ ಮಾನಿಟರ್
  • ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ

ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್ ನೀಡಿದ ಸರ್ಕಾರ

ವಿದ್ಯಾರ್ಥಿಗಳಿಗೆ ಸೂಚನೆ

ಈಗಾಗಲೇ ಬರೆದಿರುವ ಪೂರ್ವ ಸಿದ್ಧತಾ ಪರೀಕ್ಷೆಗಳು, ಮಂಡಳಿಯಿಂದ ನೀಡಲಾದ ನೀಲನಕ್ಷೆ (ಬ್ಲೂಪ್ರಿಂಟ್) ಮತ್ತು ಮಾದರಿ ಪ್ರಶ್ನೆಪತ್ರಿಕೆಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ತಪ್ಪು ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು. ಇದರಿಂದ ತಮ್ಮ ಅಧ್ಯಯನದ ಗಮನ ಕೆಡಿಸಿಕೊಳ್ಳಬಾರದು. ಪರೀಕ್ಷೆ ಬರೆಯುವಾಗ ಶಾಂತಚಿತ್ತದಿಂದ ಇರಬೇಕು, ಪ್ರತಿ ಪ್ರಶ್ನೆಯನ್ನು ಒಂದು ಬಾರಿ ಓದಿ, ಅರ್ಥವಾಗದಿದ್ದರೆ ಮತ್ತೊಮ್ಮೆ ಓದಿ ಸರಿಯಾಗಿ ಅರ್ಥಮಾಡಿಕೊಂಡು ಉತ್ತರ ಬರೆಯಬೇಕು. ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಆಧಾರದ ಮೇಲೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಗಳಿಸುವ ಮತ್ತು ಸುಲಭವಾಗಿ ಪಾಸಾಗುವ ಹೆಚ್ಚಿನ ಅವಕಾಶಗಳಿವೆ ಎಂದು ಇಲಾಖೆ ತಿಳಿಸಿದೆ.

ಶುಭ ಹಾರೈಸಿದ ಸಿಎಂ, ವಿಪಕ್ಷ ನಾಯಕ

ಇನ್ನು ನಾಳೆಯಿಂದ ಎಸ್ಎಸ್ಎಲ್​ಸಿ ಪರೀಕ್ಷೆ ಹಿನ್ನೆಲೆ ಎಕ್ಸಾಂ ಬರೆಯಲಿರುವ ವಿದ್ಯಾರ್ಥಿಗಳಿಗೆ ವಿಧಾನಸಭೆಯಲ್ಲಿ ಶುಭ ಹಾರೈಸಲಾಗಿದೆ. ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಅಶೋಕ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಲ್​​ ದಿ ಬೆಸ್ಟ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link