All posts by nagaraj11081993

ಸಾರ್ವಕಾಲಿಕ RCB ಇಲೆವೆನ್ ಹೆಸರಿಸಿದ ವಿರಾಟ್ ಕೊಹ್ಲಿ

ಸಾರ್ವಕಾಲಿಕ RCB ಇಲೆವೆನ್ ಹೆಸರಿಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿದಿದ್ದಾರೆ. ಈ ಹದಿನೆಂಟು ವರ್ಷಗಳಲ್ಲಿ ಅನೇಕ ಆಟಗಾರರು ಬಂದು ಹೋಗಿದ್ದಾರೆ. ಇವರಲ್ಲಿ ಕೆಲವರು ಆರ್​ಸಿಬಿ ತಂಡದ ಆಲ್​ ಟೈಮ್ ಫೇವರೇಟ್ ಆಗಿ ಗುರುತಿಸಿಕೊಂಡರೆ, ಇನ್ನು ಕೆಲವರು ಮಿಂಚಿ ಮರೆಯಾಗಿದ್ದಾರೆ. ಹೀಗೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಸಾರ್ವಕಾಲಿಕ ಇಲೆವೆನ್ ಹೆಸರಿಸಿದ್ದಾರೆ ವಿರಾಟ್ ಕೊಹ್ಲಿ. ಈ ಹನ್ನೊಂದು ಆಟಗಾರರಲ್ಲಿ ಇಬ್ಬರು ಕನ್ನಡಿಗರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ವಿರಾಟ್ ಕೊಹ್ಲಿ ತಮ್ಮ ಸಾರ್ವಕಾಲಿಕ ಇಲೆವೆನ್​ನಲ್ಲಿ ಆರಂಭಿಕರಾಗಿ ಆಯ್ಕೆ ಮಾಡಿದ್ದು ಲೆಜೆಂಡ್ ಕ್ರಿಸ್ ಗೇಲ್ ಅವರನ್ನು. ಕ್ರೀಸ್ ಗೇಲ್ ಜೊತೆ ಆರಂಭಿಕನಾಗಿ ತನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಆಪತ್ಭಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನು ಹೆಸರಿಸಿದ್ದಾರೆ.

ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಹೆಸರು ಸೂಚಿಸಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಪ್ರಸ್ತುತ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಆಯ್ಕೆ ಮಾಡಿರುವುದು ದಿನೇಶ್ ಕಾರ್ತಿಕ್ ಅವರನ್ನು. ಇನ್ನು ವೇಗಿಗಳಾಗಿ ಹರ್ಷಲ್ ಪಟೇಲ್, ಡೇಲ್ ಸ್ಟೈನ್ ಹಾಗೂ ಮಿಚೆಲ್ ಸ್ಟಾರ್ಕ್​ ಅವರನ್ನು ಹೆಸರಿಸಿದ್ದಾರೆ.

ಹಾಗೆಯೇ ಸ್ಪಿನ್ನರ್​ಗಳಾಗಿ ಕನ್ನಡಿಗ ಅನಿಲ್ ಕುಂಬ್ಳಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಇಲೆವೆನ್​ನಲ್ಲಿ ಐವರು ಬೌಲರ್​ಗಳಿದ್ದರೆ, ಆರು ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಇಲೆವೆನ್​ನ ನಾಯಕನನ್ನಾಗಿ ಆಯ್ಕೆ ಮಾಡಿರುವುದು ರಜತ್ ಪಾಟಿದಾರ್ ಅವರನ್ನು ಎಂಬುದು ವಿಶೇಷ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಂತಹ ಪಾಟಿದಾರ್ ಅವರನ್ನು ತಮ್ಮ ಸಾರ್ವಕಾಲಿಕ ಇಲೆವೆನ್​ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ ಅನುಮಾನ ಹುಟ್ಟುಹಾಕಿದ ಪಾಕ್ ವೇಗಿ

ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಆರ್​ಸಿಬಿ ಇಲೆವೆನ್:

  • ಕ್ರಿಸ್ ಗೇಲ್
  • ವಿರಾಟ್ ಕೊಹ್ಲಿ
  • ಎಬಿ ಡಿವಿಲಿಯರ್ಸ್
  • ಕೆಎಲ್ ರಾಹುಲ್
  • ರಜತ್ ಪಾಟಿದಾರ್ (ನಾಯಕ)
  • ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
  • ಹರ್ಷಲ್ ಪಟೇಲ್
  • ಅನಿಲ್ ಕುಂಬ್ಳೆ
  • ಮಿಚೆಲ್ ಸ್ಟಾರ್ಕ್
  • ಡೇಲ್​ ಸ್ಟೈನ್
  • ಯುಜ್ವೇಂದ್ರ ಚಹಲ್.

 

 

Source link

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್​​ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ.  ಜೊತೆಗೆ ಸಮರ್ಪಕ ಉತ್ತರ ಕೊಡದ 3-4 ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಉತ್ತರ ಒದಗಿಸದ ಪಿಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ನೀಡಲು ಸಿಎಂಗೆ ಸ್ಪೀಕರ್​​ ತಿಳಿಸಿರುವ ಹಿನ್ನೆಲೆ, ಹಿರಿಯ ಐಎಎಸ್ ಅಧಿಕಾರಿಗಳೂ ಆದ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಬಿಸಿ ಮುಟ್ಟಿದೆ. ಮತ್ತೊಂದೆಡೆ ಸಿಎಂ ಸೂಚನೆ ಹಿನ್ನೆಲೆ ಮಧ್ಯಾಹ್ನ ಸಿಎಸ್‌ ಶಾಲಿನಿ ರಜನೀಶ್​​ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ; ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಅಂತಿಮವಾಗಿ ಸ್ವೀಕರ್​ ಸಂಧಾನ ಯಶಸ್ವಿ ಹಿನ್ನೆಲೆ ವಿಧಾನಸಭೆ ಕಲಾಪ ಪುನಾರಂಭವಾಗಿದೆ. ಸಭೆಯಲ್ಲಿ ಲಿಖಿತ ರೂಪದ ಪ್ರಶ್ನೆಗಳಿಗೆ ಉತ್ತರ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಶಾಸಕರಿಗೆ ಉತ್ತರ ಸಿಗಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕರೆಲ್ಲರೂ ಸೇರಿ ಚರ್ಚಿಸಿದ್ದೇವೆ. ಎಲ್ಲರಿಗೂ ಉತ್ತರ ಸಿಗುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿರೋದಾಗಿ ಸ್ಪೀಕರ್​ ಖಾದರ್​​ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್​ನಲ್ಲೂ ಸದ್ದು ಮಾಡಿದ ಸಚಿವರ ಹಾಜರಾತಿ

ವಿಧಾನ ಸಭೆಯ ಬೆನ್ನಲ್ಲೇ ಅತ್ತ ವಿಧಾನ ಪರಿಷತ್​ನಲ್ಲೂ ಸಚಿವರ ಹಾಜರಾತಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಡ್ಡಾಯ ಹಾಜರಾತಿ ಅಂದರೂ ಸಚಿವರು ಸದನಕ್ಕೆ ಬಂದಿಲ್ಲ. ಅಧಿಕಾರಿಗಳೂ ಇಲ್ಲ, ಹೀಗಾದ್ರೆ ಹೇಗೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಭಾಪತಿಗಳನ್ನು ಪ್ರಶ್ನಿಸಿದ್ದಾರೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹೇಳಿ? ವಿಧಾನಸಭೆಯಲ್ಲಿ ಉತ್ತರ ಸಿಗಲಿಲ್ಲ ಅಂತಾ ಸದನ ಮುಂದೂಡಿದ್ದಾರೆ. ನಮ್ಮಲ್ಲಿ ಏಕೆ ಈ ಅಸಡ್ಡೆ? ಅಧಿಕಾರಿಗಳು ಸಮರ್ಪಕ ಉತ್ತರ ಕೊಡಲ್ಲ. ಸದಸ್ಯರ 126 ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲವೆಂದು ತಿಳಿದು ಬಂದಿದೆ. ನಮ್ಮ ಸದಸ್ಯರೊಬ್ಬರು ಇಂದಿನವರೆಗೂ ಪ್ರಶ್ನೆ ಮಾಡ್ತಾನೇ ಇದ್ದಾರೆ. ನಾವು ಉತ್ತರ ಕೊಡಲಾರದ ಪ್ರಶ್ನೆಯನ್ನ ಕೇಳುತ್ತಿದ್ದೀವಾ? ಎಂದು ಛಲವಾದಿ ಗರಂ ಆಗಿದ್ದಾರೆ. ಹೀಗಾಗಿ ಕೂಡಲೇ ಉತ್ತರ ಕೊಡಿಸಿ, ಇಲ್ಲ ಕ್ರಮ ಜರುಗಿಸಿ ಎಂದು ಸಭಾನಾಯಕ ಬೋಸರಾಜುಗೆ ​ ಸಭಾಪತಿ ಸೂಚನೆ ನೀಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ರೂ. ಟೋಲ್ ಸಂಗ್ರಹಿಸಿ ಮಜಾ ಮಾಡ್ತಾರೆ, ಸೌಕರ್ಯ ಕೊಡಲ್ಲ: ಶಾಸಕ ಸೋಮಶೇಖರ್ ಆಕ್ರೋಶ

ಬೆಂಗಳೂರು, ಮಾರ್ಚ್​ 16: ನೈಸ್ ರಸ್ತೆಯ (NICE Road) ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಶಾಸಕ ಎಸ್​ಟಿ ಸೋಮಶೇಖರ್ (ST Somashekhar) ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದರು. ಈ ಹಿಂದೆ ಇದೇ ವಿಷಯದ ಕುರಿತು ಪ್ರಶ್ನೆ ಎತ್ತಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 30–35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರ ನಿವೇಶನಗಳನ್ನು ನೀಡಲಾಗಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ದೊಡ್ಡ ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25–30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಎಂಟು ಸೇತುವೆಗಳು ಅಪಾಯಕರ ಸ್ಥಿತಿಯಲ್ಲಿ ಇರುವುದಾಗಿ ಸೋಮಶೇಖರ್ ಹೇಳಿದರು.

ಸರ್ಕಾರದ ಸೂಚನೆಗಳನ್ನು ಪಾಲಿಸದ ನೈಸ್: ಸೋಮಶೇಖರ್ ಆರೋಪ

ಈ ಕುರಿತು ನೈಸ್ ಕಂಪನಿ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಪಿಡಬ್ಲ್ಯೂಡಿ ಸಚಿವ ಹೆಚ್​​ಸಿ ಅವರ ಅವಧಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿದ್ದ ಡಿಕೆ ಜಯಚಂದ್ರ ಸೇರಿದಂತೆ ಹಲವು ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚಿದ್ದರು. ಆದರೂ ನೈಸ್ ಕಂಪನಿ ಸರ್ಕಾರ ಅಥವಾ ಸದನದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

3 ದಶಕಗಳಿಂದ ರೈತರಿಗೆ ಸಂಕಷ್ಟ

ರಸ್ತೆ ಪಕ್ಕದಲ್ಲಿರುವ ಸುಮಾರು 1,700 ಎಕರೆ ಭೂಮಿಯಲ್ಲಿ ಲೇಔಟ್ ನಿರ್ಮಾಣ ಮಾಡುವ ವಿಚಾರವೂ ನ್ಯಾಯಾಲಯದಲ್ಲಿದೆ. 35 ವರ್ಷಗಳಾದರೂ ಭೂಮಾಲೀಕರಿಗೆ ಹಣ ನೀಡಲಾಗಿಲ್ಲ ಹಾಗೂ ಲೇಔಟ್ ಅಭಿವೃದ್ಧಿಯೂ ಆಗಿಲ್ಲ. ಇದರಿಂದ ಕಳೆದ ಮೂರು ದಶಕಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸೋಮಶೇಖರ್ ಗಮನ ಸೆಳೆದರು.

ಎಸ್​​ಟಿ ಸೋಮಶೇಖರ್ ಮಾತಿನ ವಿಡಿಯೋ


ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಅಥವಾ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲಿ ಈ ಕಂಪನಿಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರ್ಕಾರ ನೀಡಿದ 30 ವರ್ಷದ ಗುತ್ತಿಗೆ ರದ್ದುಪಡಿಸಿ ರಸ್ತೆ ವಶಕ್ಕೆ ಪಡೆದುಕೊಂಡರೆ ಮಾತ್ರ ಸೇತುವೆಗಳ ದುರಸ್ತಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಸೋಮಶೇಖರ್ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ನೈಸ್ ಸಂಸ್ಥೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?

ಈ ವಿಚಾರವನ್ನು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಉಪಸಮಿತಿ ನೀಡುವ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋತ ಬಳಿಕ ಬಾಂಗ್ಲಾದೇಶ್ ವಿರುದ್ಧ ದೂರು ದಾಖಲಿಸಿದ ಪಾಕಿಸ್ತಾನ್

ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ 1-2 ಅಂತರದಿಂದ ಸೋತಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ತಂಡವು ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿದ್ದಾರೆ. ಈ ದೂರಿನಲ್ಲಿ ಬಾಂಗ್ಲಾದೇಶ್ ತಂಡವು ರಿವ್ಯೂ ತೆಗೆದುಕೊಳ್ಳಲು ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ.

ಮಾರ್ಚ್ 15, 2026 ರಂದು ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 2 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲರ್ ರಿಶಾದ್ ಹೊಸೈನ್ ಎಸೆದ 5ನೇ ಎಸೆತವನ್ನು ಅಂಪೈರ್ ಕುಮಾರ್ ಧರ್ಮಸೇನ ‘ವೈಡ್’ ಎಂದು ಘೋಷಿಸಿದ್ದರು.

ಇತ್ತ ಅಂಪೈರ್ ವೈಡ್ ಎಂದು ಘೋಷಿಸಿದರೂ ಬಾಂಗ್ಲಾದೇಶ್ ತಂಡವು ಎಲ್‌ಬಿಡಬ್ಲ್ಯೂ (LBW) ಗಾಗಿ ರಿವ್ಯೂ (DRS) ತೆಗೆದುಕೊಂಡಿತು. ಈ ವೇಳೆ ಚೆಂಡು ಪ್ಯಾಡ್​ಗೆ ತಗುಲಿರುವುದು ಕಂಡು ಬಂದಿದೆ. ಇದಾಗ್ಯೂ ಶಾಹೀನ್ ಶಾ ಅಫ್ರಿದಿ ಎಲ್​ಬಿಡಬ್ಲ್ಯೂ ಆಗಿರಲಿಲ್ಲ. ಹೀಗಾಗಿ ವೈಡ್ ಅನ್ನು ಹಿಂಪಡೆದು ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

ಆದರೆ ಇದೀಗ ಈ ರಿವ್ಯೂ ತೆಗೆದುಕೊಳ್ಳಲು ಬಾಂಗ್ಲಾದೇಶ್ ತಂಡದ ನಾಯಕ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ ಎಂದು ಪಾಕಿಸ್ತಾನ್ ಆರೋಪಿಸಿದೆ.

ಐಸಿಸಿ ನಿಯಮದ ಪ್ರಕಾರ ರಿವ್ಯೂ ಕೇಳಲು ಕೇವಲ 15 ಸೆಕೆಂಡುಗಳ ಕಾಲಾವಕಾಶವಿರುತ್ತದೆ. ಆದರೆ ಬಾಂಗ್ಲಾದೇಶ್ ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

ಕ್ರೀಡಾಂಗಣದ ಬಿಗ್​ ಸ್ಕ್ರೀನ್ ಮೇಲೆ ರಿಪ್ಲೇ ನೋಡಿದ ನಂತರವೇ ಬಾಂಗ್ಲಾದೇಶ್ ತಂಡದ ನಾಯಕ ಮೆಹದಿ ಹಸನ್ ಮಿರಾಝ್ ರಿವ್ಯೂ ನಿರ್ಧಾರ ಮಾಡಿದ್ದಾರೆ.  ಇದು ನಿಯಮಬಾಹಿರ ಎಂದು ಪಾಕಿಸ್ತಾನ ಆರೋಪಿಸಿದೆ.

ಅಲ್ಲದೆ ಈ ಬಗ್ಗೆ ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿ ಬಾಂಗ್ಲಾದೇಶ್ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ್ ತಂಡ ಆಗ್ರಹಿಸಿದೆ.

ಇದನ್ನೂ ಓದಿ: IPL 2026: 10 ತಂಡಗಳು ರೆಡಿ: ಯಾರು ಬಲಿಷ್ಠ?

ಇನ್ನು ಈ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ 12 ಗುರಿ ಪಡೆದಿದ್ದ ಪಾಕಿಸ್ತಾನ್ ತಂಡಕ್ಕೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 11 ರನ್​ಗಳ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

 

Source link

ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ: ಯುಎಇಯಲ್ಲಿ 19 ಭಾರತೀಯರು ಸೇರಿ 35 ಮಂದಿ ಬಂಧನ

ದುಬೈ, ಮಾರ್ಚ್ 16: ಇರಾನ್-ಅಮೆರಿಕ ಯುದ್ಧಕ್ಕೆ (Iran war) ಸಂಬಂಧಿಸಿದ ಘಟನೆಗಳು ಮತ್ತು ಮಾಹಿತಿಯನ್ನು ತಪ್ಪಾಗಿ ಹಂಚಿಕೊಂಡ ಆರೋಪದ ಮೇಲೆ 35 ವ್ಯಕ್ತಿಗಳನ್ನು ಯುಎಇ ಆಡಳಿತ ಬಂಧಿಸುತ್ತಿದೆ. ಈ 35 ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಭಾರತೀಯರೇ ಇದ್ದಾರೆ. ವರದಿಗಳ ಪ್ರಕಾರ ಒಟ್ಟು 19 ಮಂದಿ ಭಾರತೀಯರನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ 35 ಮಂದಿಯನ್ನು ತ್ವರಿತ ವಿಚಾರಣೆಗೆ ಒಳಪಡಿಸಲಾಗಲಿದೆ.

ಆರಂಭಿಕ ತನಿಖೆಯಲ್ಲಿ ಗೊತ್ತಾದ ಮಾಹಿತಿ ಪ್ರಕಾರ, ಈ 35 ಜನರು ಯುದ್ಧದ ವಿಚಾರಗಳನ್ನು ತಪ್ಪಾಗಿ ಬಿಂಬಿಸುವಂತೆ ಕ್ಲಿಪಿಂಗ್​ಗಳನ್ನು ಹಂಚಿಕೊಂಡಿದ್ದಾರೆ. ಶನಿವಾರ (ಮಾ. 14) ಹತ್ತು ಜನರನ್ನು ಬಂಧಿಸಲು ಆದೇಶಿಸಲಾಗಿತ್ತು. ಈ 10 ಮಂದಿಯಲ್ಲಿ ಇಬ್ಬರು ಭಾರತೀಯರು ಇದ್ದಾರೆ. ಇದೀಗ 25 ಮಂದಿಯ ಮತ್ತೊಂದು ಪಟ್ಟಿ ಇದೆ. ಈ ಹೊಸ ಪಟ್ಟಿಯಲ್ಲಿ 17 ಭಾರತೀಯರಿದ್ದಾರೆ. ಈ ಎರಡು ಪಟ್ಟಿಗಳಲ್ಲಿ ಭಾರತೀಯರ ಸಂಖ್ಯೆ 19 ಇದೆ.

ಇದನ್ನೂ ಓದಿ: ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ

ಆರೋಪಿಗಳನ್ನು ಅವರು ಮಾಡಿದ ಕೃತ್ಯದ ತೀವ್ರತೆಯ ಆಧಾರದ ಮೇಲೆ ಮೂರು ಗುಂಪುಗಳಲ್ಲಿ ಸೇರಿಸಲಾಗಿದೆ. ಯುದ್ಧದಲ್ಲಿ ನಡೆಯುತ್ತಿರುವ ಮಿಸೈಲ್ ದಾಳಿ ಇತ್ಯಾದಿ ಘಟನೆಗಳ ಕ್ಲಿಪಿಂಗ್​ಗಳನ್ನು ಹಂಚಿಕೊಂಡಿರುವುದು; ಎಐ ಮೂಲಕ ಕ್ಲಿಪಿಂಗ್​ಗಳನ್ನು ತಿರುಚಿರುವುದು; ದಾಳಿ ಕ್ರಮಗಳನ್ನು ವೈಭವೀಕರಿಸಿರುವುದು, ಈ ರೀತಿ ಆರೋಪಿಗಳನ್ನು ವರ್ಗೀಕರಿಸಲಾಗದೆ.

ದುಬೈ, ಅಬುಧಾಬಿ, ಶಾರ್ಜಾ ನಗರಗಳನ್ನು ಒಳಗೊಂಡಿರುವ ಯುಎಇಯ ಮೇಲೆ ಇರಾನ್ ಹಲವು ಬಾರಿ ಮಿಸೈಲ್ ದಾಳಿ ಮಾಡಿದೆ. ಈ ಕೆಲ ಕ್ಷಿಪಣಿಗಳನ್ನು ಗಾಳಿಯಲ್ಲೇ ತಡೆಯಾಗಿದೆ. ಇಂಥ ಘಟನೆಗಳ ವಿಡಿಯೋಗಳನ್ನು ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಹೀಗೆ ಹಂಚಿಕೊಳ್ಳುವಾಗ ಯುದ್ಧೋನ್ಮಾದವಿರುವಂತೆ ಬಿಂಬಿಸುವಂತಹ ಕಾಮೆಂಟರಿಗಳನ್ನು ಮತ್ತು ಮ್ಯೂಸಿಕ್ ಅನ್ನು ಸೇರಿಸಿರುವ ಆರೋಪವು ಮೊದಲ ಗುಂಪಿನ ಮಂದಿಯ ಮೇಲಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆ: ಭಾರತದ ನೆರವಿಗೆ ಅಮೆರಿಕ ಯಾಚನೆ?

ಎರಡನೇ ಗುಂಪಿನ ಜನರು ಎಐ ಸೃಷ್ಟಿತ ವಿಶುವಲ್ ಅಥವಾ ದೇಶ ಹೊರಗೆಲ್ಲೋ ನಡೆದ ಘಟನೆಯ ವಿಡಿಯೋವನ್ನು ಯುಎಇಯಲ್ಲೇ ನಡೆದಿದೆ ಎನ್ನುವಂತೆ ಮರುಬಳಕೆ ಮಾಡಿದ್ಧಾರೆ.

ಮೂರನೇ ಗುಂಪಿನಲ್ಲಿರುವ ಆರೋಪಿಗಳು ದಾಳಿ ಮಾಡಿದ ದೇಶ ಹಾಗೂ ಅದರ ರಾಜಕೀಯ ಮತ್ತು ಮಿಲಿಟರಿ ನಾಯಕತ್ವನ್ನು ಹಾಗೂ ಯುಎಇಯಲ್ಲಿ ಅವರ ದಾಳಿಯನ್ನು ವೈಭವೀಕರಿಸುವ ಕೆಲಸ ಮಾಡಿದ ಆರೋಪ ಇದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ

ದೆಹಲಿ, ಮಾರ್ಚ್ 16: ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೆ ಎಷ್ಟೇ ಕಷ್ಟವಾದ್ರೂ ಉದ್ಯೋಗ ಬಿಡಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಜನದಟ್ಟಣೆಯಿಂದ ತುಂಬಿದ ದೆಹಲಿ (Delhi) ಮೆಟ್ರೋದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್ ಟಾಪ್ ತೆರೆದು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

@kuxh101 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ದೆಹಲಿ ಮೆಟ್ರೋದ ಬೋಗಿಯೊಳಗೆ ಕಿಕ್ಕಿರಿದ ಕಂಪಾರ್ಟ್‌ಮೆಂಟ್‌ನ್ನು ಕಾಣಬಹುದು. ಆಫೀಸ್ ಕಾಲ್ ಸ್ವೀಕರಿಸಿದ ಬಳಿಕ ಯುವಕ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಯುವಕನೊಬ್ಬ ಲ್ಯಾಪ್‌ಟಾಪ್‌ನ್ನು ತೊಡೆಯ ಮೇಲೆ ಇರಿಸಿಕೊಂಡು ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಇನ್ನೊಂದು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್ ಹಂಚಿಕೊಂಡ ಬಳಕೆದಾರ, ಈ ವ್ಯಕ್ತಿಯನ್ನು ಮೆಟ್ರೋದಲ್ಲಿ ನೋಡಿದೆ. ಮ್ಯಾನೇಜರ್‌ನಿಂದ ಕರೆ ಬಂತು, ತಕ್ಷಣವೇ ತನ್ನ ಲ್ಯಾಪ್‌ಟಾಪ್ ತೆರೆದು, ನೆಲದ ಮೇಲೆ ಕುಳಿತು ತನ್ನ ಕೆಲಸವನ್ನು ಮುಗಿಸಲು ಪ್ರಾರಂಭಿಸಿದನು ಎಂದು ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್

ಈ ಪೋಸ್ಟ್ 2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೆಟ್ರೋವನ್ನು ಕೆಲಸದ ಸ್ಥಳವಾಗಿ ಮಾಡಿಕೊಂಡರು ಎಂದರೆ, ಮತ್ತೊಬ್ಬರು, ಇದೇ ಕಾರಣಕ್ಕೆ ನಾನು ಓದುವುದನ್ನೇ ಬಿಟ್ಟೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾನುವಾರ ಕೂಡ ಕೆಲಸನಾ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮತ್ತೊಂದು ಮದುವೆಗೆ ತ್ರಿಷಾ ಹಾಜರಿ; ಕೇಡು ಬಯಸಿದ ನಟನ ಮಗಳ ಜೊತೆ ನಟಿ ಪೋಸ್

ನಟಿ ತ್ರಿಷಾ ಅವರು ಇತ್ತೀಚೆಗೆ ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಅವರು ವಿವಾಹದಲ್ಲಿ ಭಾಗಿ ಆಗಿದ್ದು. ಚೆನ್ನೈನಲ್ಲಿ ನಡೆದ ವಿವಾಹದಲ್ಲಿ ದಳಪತಿ ವಿಜಯ್ ಜೊತೆ ತ್ರಿಷಾ ಹಾಜರಿ ಹಾಕಿದ್ದರು. ಇದು ಚರ್ಚೆ ಹುಟ್ಟುಹಾಕಿತ್ತು. ಈಗ ತ್ರಿಷಾ ಮತ್ತೊಂದು ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಹಾಗಂತ ಈ ಮದುವೆಯಲ್ಲಿ ವಿಜಯ್ ಹಾಜರಿ ಹಾಕಿಲ್ಲ. ತಮ್ಮ ಆಪ್ತ ಬಳಗದವರ ಜೊತೆ ತ್ರಿಷಾ ಕಾಣಿಸಿಕೊಂಡಿದ್ದಾರೆ.

ಸೆಲೆಬ್ರಿಟಿ ಸ್ಟೈಲಿಸ್ಟ್ ಎಕಾ ಲಖಾನಿ ಅವರು ನಿರ್ಮಾಪಕ ರವಿ ಭಾಗ್ಚಂದ್ಕಾ ಜೊತೆ ಮದುವೆ ಆದರು. ಮುಂಬೈನಲ್ಲಿ ಮಾರ್ಚ್ 14ರಂದು ಈ ಮದುವೆ ನಡೆಯಿತು. ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದರು. ಇದರಲ್ಲಿ ತ್ರಿಷಾ ಕೃಷ್ಣನ್ ಕೂಡ ಒಬ್ಬರು. ತ್ರಿಷಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ತ್ರಿಷಾ ಜೊತೆ ಪಾರ್ಥಿಬನ್ ಮಗಳು ಕೀರ್ತನಾ ಕೂಡ ಇದ್ದರು ಎಂಬುದು ವಿಶೇಷ. ಪಾರ್ಥಿಬನ್ ತಮಿಳು ನಟ. ಅವರ ಜೊತೆ ಕೀರ್ತನಾ ಕಾಣಿಸಿಕೊಂಡರೆ ಸಮಸ್ಯೆ ಏನು ಎಂಬ ಪ್ರಶ್ನೆ ಅನೇಕರಿಗೆ ಬರಬಹುದು. ಅದಕ್ಕೂ ಉತ್ತರ ಇದೆ. ಇತ್ತೀಚೆಗೆ ವಿಜಯ್ ಜೊತೆ ತ್ರಿಷಾ ಕಾಣಿಸಿಕೊಂಡಾಗ ಪಾರ್ಥಿಬನ್ ಅವರು ಇದನ್ನು ಟೀಕೆ ಮಾಡಿದ್ದರು. ‘ತ್ರಿಷಾ ಸ್ವಲ್ಪ ದಿನ ಮನೆಯಲ್ಲಿರೋದು ಉತ್ತಮ’ ಎಂಬರ್ಥದಲ್ಲಿ ಮಾತನಾಡಿದ್ದರು.

ಈ ಘಟನೆ ಬೆನ್ನಲ್ಲೇ ತ್ರಿಷಾ ಅವರು ಪಾರ್ಥಿಬನ್ ಮನೆಯವರ ಜೊತೆ ಕಾಣಿಸಿಕೊಂಡಿದ್ದು ವಿಶೇಷ. ಸೋಶಿಯಲ್ ಮೀಡಿಯಾದಲ್ಲಿ ತ್ರಿಷಾ ಫೋಟೋ ಹಚಿಕೊಂಡಿದ್ದು, ಅವರು ನವ ದಂಪತಿಗೆ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ಈ ಮದುವೆಯಲ್ಲಿ ನಿರ್ದೇಶಕ ಮಣಿರತ್ನಂ ಅವರನ್ನು ತ್ರಿಷಾ ಭೇಟಿ ಮಾಡಿದರು. ಈ ಮೊದಲು ಇಬ್ಬರೂ ‘ಪೊನ್ನಿಯನ್ ಸೆಲ್ವನ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಫೋಟೋ ವೈರಲ್ ಆದ ಬೆನ್ನಲ್ಲೇ ‘ವಿಜಯ್ ಮದುವೆಗೆ ಬಂದಿಲ್ಲವೇ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಮೂಲಕ ಮಣಿರತ್ನಂ ಅವರು ತ್ರಿಷಾ ಕಾಲೆಳೆದಿದ್ದಾರೆ. ಇನ್ನೂ ಕೆಲವರು ವೈರಿಗಳ ಮಗಳ ಜೊತೆ ತ್ರಿಷಾ ಪೋಸ್ ಕೊಟ್ಟಿದ್ದಾರೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರು, ಮಾರ್ಚ್​ 16: ಐಟಿ ಸಿಟಿಗೆ ಉದ್ಯೋಗ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಕೆಲಸ ಅರಸಿ ಬರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ತೀವ್ರವಾಗಿದ್ದು, ಈ ಬಗ್ಗೆ ಬೆಂಗಳೂರಿನ (Bengaluru) ರಿಕ್ರೂಟರ್ ಒಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 15 ದಿನಗಳಲ್ಲಿ ಸಾವಿರಾರು ಮಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರ ಕುರಿತು ಪೋಸ್ಟ್ ಮಾಡಿರುವ ಅವರು, ಒಂದು ಕೆಲಸ ದಕ್ಕಿಸಿಕೊಳ್ಳಲು ಎದುರಾಗುವ ಸ್ಪರ್ಧೆ ಇದುವೇ ಎಂದು ಬರೆದುಕೊಂಡಿದ್ದಾರೆ.

15 ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಅರ್ಜಿಗಳು

ನಗರದಲ್ಲಿ ಟೆಕ್ ಉದ್ಯೋಗಗಳಿಗಾಗಿ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದ್ದು, ವಿಶೇಷವಾಗಿ MERN ಮತ್ತು ರಿಯಾಕ್ಟ್ ಡೆವಲಪರ್ ಹುದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ 15 ದಿನಗಳಲ್ಲಿ ಮಾತ್ರ ಸುಮಾರು 34,742 ಮಂದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ರಿಕ್ರೂಟರ್ ನಾರಾಯಣಿ ಗುರುನಾಥನ್ ಎಕ್ಸ್ ಪೋಸ್ಟ್ ಮಾಡಿ, ಕೇವಲ 15 ದಿನಗಳಲ್ಲಿ MERN ಮತ್ತು React ಉದ್ಯೋಗಗಳಿಗೆ 34 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದಾರೆ. ಉದ್ಯೋಗಕ್ಕೆ ಅರ್ಜಿ ಹಾಕುವಾಗ ಎದುರಾಗುವ ಸ್ಪರ್ಧೆ ಇದುವೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನೆಟ್ಟಿಗರ ರಿಯಾಕ್ಷನ್ ಹೇಗಿತ್ತು?

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ಬೆಂಗಳೂರು ಟೆಕ್ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡಿದ್ದಾರೆ. ಕೆಲವರು ಉದ್ಯೋಗ ಸುಳ್ಳು ಅರ್ಜಿ ಹಾಕುವವರ ಸಂಖ್ಯೆಯೂ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರ ನಮ್ಮ ಕಂಪನಿಯಲ್ಲಿ 500ಕ್ಕೂ ಹೆಚ್ಚು ರೆಸ್ಯೂಮ್ ಬಂದರೂ, ಕೆಲಸಕ್ಕೆ ಬೇಕಾದ ಅರ್ಹ ತಿಳುವಳಿಕೆ ಹಲವರಲ್ಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ, ಟೆಕ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದರೂ, ಅದೇ ಮಟ್ಟದಲ್ಲಿ ಸ್ಪರ್ಧೆಯೂ ಹೆಚ್ಚುತ್ತಿರುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮ್ಯಾಚ್ ಫಿಕ್ಸಿಂಗ್ ಅನುಮಾನ ಹುಟ್ಟುಹಾಕಿದ ಪಾಕ್ ವೇಗಿ

ಪಾಕಿಸ್ತಾನದ ನ್ಯಾಷನಲ್ ಟಿ20 ಕಪ್‌ ಟೂರ್ನಿಯಲ್ಲಿ ಅಸಾದ್ ಅಖ್ತರ್ (Asad Akhtar) ಎಸೆದ ಎಸೆತವು ಇದೀಗ ಮ್ಯಾಚ್ ಫಿಕ್ಸಿಂಗ್ ಅನುಮಾನಕ್ಕೆ ಕಾರಣವಾಗಿದೆ. ಪೇಶಾವರದ ಅರ್ಬಾಬ್ ನಿಯಾಜ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಲಾಹೋರ್ ಹಾಗೂ ಕರಾಚಿ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಕರಾಚಿ ತಂಡದ ವೇಗಿ ಅಸಾದ್ ಅಖ್ತರ್ ಎಸೆತವು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಈ ಅಸಾದ್  ಚೆಂಡೆಸೆದಾಗ ಅವರ ಕಾಲು ಕ್ರೀಸ್‌ಗಿಂತ ಸುಮಾರು ಒಂದು ಅಡಿಗಿಂತಲೂ ಹೆಚ್ಚು ಮುಂದೆ ಹೋಗಿತ್ತು.

ಅಂದರೆ ಮೇಲ್ನೋಟಕ್ಕೆ ಅಸಾದ್ ಅಖ್ತರ್ ಉದ್ದೇಶಪೂರ್ವಕವಾಗಿಯೇ ನೋ ಬಾಲ್ ಎಸೆದಿದ್ದಾರೆ ಕಂಡು ಬರುತ್ತದೆ. ಏಕೆಂದರೆ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಯಾವುದೇ ಬೌಲರ್ ಇಷ್ಟೊಂದು ದೂರ ಕಾಲಿಟ್ಟು ಚೆಂಡೆಸುವುದಿಲ್ಲ.

ಆದರೆ ಅಸಾದ್ ಅಖ್ತರ್ ಕ್ರೀಸ್​ನಿಂದ ತುಂಬಾ ದೂರನೇ ಕಾಲಿಡುವ ಮೂಲಕ ನೋ ಬಾಲ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿಯೇ ಇದು ಉದ್ದೇಶಪೂರ್ವಕ ನೋ ಬಾಲ್ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.

ಇನ್ನು ಈ ಪಂದ್ಯದಲ್ಲಿ ಅಸಾದ್ ಅಖ್ತರ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಆ ಓವರ್‌ನಲ್ಲಿ ನೀಡಿದ್ದು ಬರೋಬ್ಬರಿ 21 ರನ್​ಗಳು. ಅದರಲ್ಲಿ ಎರಡು ನೋ-ಬಾಲ್ ಮತ್ತು ಎರಡು ವೈಡ್‌ಗಳು ಸೇರಿದ್ದವು.

ಅಂದರೆ ಇಲ್ಲಿ ಅಸಾದ್ ಮನಃಪೂರ್ವಕವಾಗಿಯೇ 2 ನೋ ಬಾಲ್ ಹಾಗೂ 2 ವೈಡ್​ಗಳನ್ನು ಎಸೆದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ.

ಅಮಿರ್ ನೋ ಬಾಲ್​ಗೆ ಹೋಲಿಕೆ:

ಅಸಾದ್ ಅಖ್ತರ್ ಎಸೆದಿರುವ ನೋ-ಬಾಲ್ ಅನ್ನು ನೋಡಿದ ಅಭಿಮಾನಿಗಳು, 2010ರಲ್ಲಿ ಮೊಹಮ್ಮದ್ ಅಮಿರ್ ಎಸೆದಿದ್ದ ವಿವಾದಾತ್ಮಕ ನೋ-ಬಾಲ್‌ಗೆ ಹೋಲಿಸಿ ‘ಸ್ಪಾಟ್ ಫಿಕ್ಸಿಂಗ್’ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

2010 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ಮಾಡಿಕೊಂಡು ನೋ ಬಾಲ್ ಎಸೆದಿದ್ದರು. ಈ ವೇಳೆ ಅವರ ಕಾಲುಗಳು ಕ್ರೀಸ್​ನಿಂದ ಬಲು ದೂರವಿತ್ತು.

ಇದೀಗ ಅಸಾದ್ ಅಖ್ತರ್ ಕೂಡ ಇದೇ ಮಾದರಿಯಲ್ಲಿ ನೋ ಬಾಲ್ ಎಸೆದಿದ್ದಾರೆ. ಹೀಗಾಗಿ ಈ ನೋ ಬಾಲ್​ ಅನ್ನು ಅಮಿರ್ ಅವರ ಸ್ಪಾಟ್ ಫಿಕ್ಸಿಂಗ್ ನೋ ಬಾಲ್​ಗೆ ಹೋಲಿಸಲಾಗುತ್ತಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇನ್ನು ಈ ಪಂದ್ಯದಲ್ಲಿ ಅಸಾದ್ ಅಖ್ತರ್ ದುಬಾರಿಯಾದರೂ, ಕರಾಚಿ ತಂಡವು ಈ ಪಂದ್ಯವನ್ನು 57 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಾಚಿ 20 ಓವರ್​ಗಳಲ್ಲಿ 206 ರನ್​ಗಳಿಸಿದರೆ, ಲಾಹೋರ್ ತಂಡವು 17.3 ಓವರ್​ಗಳಲ್ಲಿ 149 ರನ್​ಗಳಿಸಿ ಆಲೌಟ್ ಆಗಿದೆ.

 

 

Source link

ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್​​ ಯು.ಟಿ. ಖಾದರ್​​ ಸಮಯ ಹೇಳದೆ ಕಲಾಪವನ್ನು ಮುಂದೂಡಿರುವ ಪ್ರಸಂಗ ನಡೆದಿದೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್​​ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ.

ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ ವಿಪಕ್ಷಗಳ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಕಲಾಪ ಆರಂಭದಿಂದಲೂ ಸಚಿವರಿಂದನಿರೀಕ್ಷಿತ ಉತ್ತರ ಬಂದಿಲ್ಲ. ಸರ್ಕಾರ ಸತ್ತು ಹೋಗಿದೆ, ತಿಥಿ‌ ಮಾಡಬೇಕು, ತಿಥಿ ಊಟಕ್ಕೆ ಹೋಗಬೇಕು ಅಂತಾ ವಿಪಕ್ಷ ನಾಯಕ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರ ವಿರುದ್ಧ ಸ್ಪೀಕರ್ ಖಾದರ್​ ಅಸಮಾಧಾನ ಹೊರಹಾಕಿದ್ದಾರೆ. ಸದನದಲ್ಲಿ ಎಲ್ಲಾ ಶಾಸಕರೂ ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗಲ್ಲ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ಕೊಡಲ್ಲ. 3 ಸಲ ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟತೆ, ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಖಾರವಾಗಿ ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ಸ್ಪೀಕರ್​​ ಖಾದರ್​​ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ. ಪ್ರತಿದಿನವೂ ಶೇ. 10-30 ಲಿಖಿತ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡುತ್ತಿದ್ದಾರೆ. ಸರ್ಕಾರ ಹೆಣದಂತಾಗಿದ್ದು, ಸಿಎಂ ಹಿಡಿತ ಕಳೆದುಕೊಂಡಿದ್ದಾರೆ. ಸಚಿವರು ಸದನಕ್ಕೆ ಬರುತ್ತಿಲ್ಲ. ಯಾರು ಸಿಎಂ ಅಂತಾ ತೀರ್ಮಾನ ಆಗದಿರುವ ಕಾರಣ ಈ ರೀತಿ ಆಗುತ್ತಿದೆ. ಸ್ಪೀಕರ್ ನೊಂದು ಹೊರ ಹೋಗಿರುವುದು ಸರ್ಕಾರಕ್ಕೆ ಚಾಟಿ ಏಟು ನೀಡಿದಂತಾಗಿದೆ. ಸ್ಪೀಕರ್ ನಡೆಯನ್ನು ಸ್ವಾಗತಿಸುತ್ತೇವೆ. ಸರ್ಕಾರ ಬದುಕಿದ್ದರೆ ಸಿಎಂ ಬಂದು ಕ್ಷಮೆ ಕೇಳಬೇಕು. ಮಾನ, ಮಾರ್ಯಾದೆ ಇದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ತಿವಿದಿದ್ದಾರೆ. ವಿಧಾನಸಭೆ ಇತಿಹಾಸದಲ್ಲಿಯೇ ಸರ್ಕಾರದ ಧೋರಣೆ ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರ ಹೋಗಿದ್ದಾರೆ. ಇದು ಆಘಾತಕಾರಿಯಾಗಿದ್ದು, ಸಿಎಂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 40 ದಿನದ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಬರುವುದಿಲ್ಲ. ಸ್ಪೀಕರ್ ತೆಗೆದುಕೊಂಡಿರುವ ನಿರ್ಣಯಕ್ಕೆ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಸುನಿಲ್​​ ಕುಮಾರ್​​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link