All posts by nagaraj11081993

ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್​-ಇನ್​ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ

ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್​-ಇನ್​ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ

ಆಗ್ರಾ,ಮಾರ್ಚ್​ 13: ಮದುವೆ(Marriage)ಯಾಗುವುದಾಗಿ ನಂಬಿಸಿ 4 ವರ್ಷ ಲಿವ್-ಇನ್ ಸಂಬಂಧದಲ್ಲಿದ್ದು ಪೊಲೀಸ್ ಕಾನ್​​ಸ್ಟೆಬಲ್ ಕೈಕೊಟ್ಟಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ವರ್ಷಗಳ ಕಾಲ ಆತ ದೈಹಿಕ ಹಾಗೂ ಮಾನಸಿಕ ಶೋಷಣೆಯಾಗಿದೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಮಹಿಳೆ ಹೇಳಿದ್ದಾಳೆ. ಮದುವೆಯಾಗುವ ಭರವಸೆ ನೀಡಿದ್ದ ತಾನು ಆತನೊಂದಿಗೆ ಪತ್ನಿಯಂತೆಯೇ ಸಂಸಾರ ನಡೆಸಿದ್ದೇನೆ ಬಳಿಕ ಆತ ಮದುವೆಯಾಗಲು ನಿರಾಕರಿಸಿದ್ದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ, ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಕಾನ್‌ಸ್ಟೆಬಲ್ ತನ್ನ ಕುಟುಂಬದವರು ತಮ್ಮ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾಗಿ ಮಹಿಳೆ ಹೇಳಿದ್ದಾಳೆ. ತಾನು ನ್ಯಾಯಕ್ಕಾಗಿ ಹಲವು ಬಾರಿ ಪ್ರಯತ್ನಿಸಿದ್ದರೂ ಸಹಾಯ ಸಿಗಲಿಲ್ಲ ಎಂದು ಕೂಡ ಹೇಳಿದ್ದಾಳೆ.

ಮತ್ತಷ್ಟು ಓದಿ: ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಘಟನೆ ಬೆಳಕಿಗೆ ಬಂದ ಬಳಿಕ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಒಟ್ಟಿಗೆ ಇದ್ದು ಈಗ ಕಾನ್‌ಸ್ಟೆಬಲ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದಾನೆ.

ವಿಡಿಯೋದಲ್ಲಿರುವ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿಕೊಂಡಿದ್ದು, ತಾನು ಬದುಕಿದ್ದಾಗ ನ್ಯಾಯ ಸಿಕ್ಕಿಲ್ಲ ಮತ್ತು ತನ್ನ ಮರಣದ ನಂತರ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾಳೆ.

ಆ ಮಹಿಳೆ ಮೂಲತಃ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯವಳು. ಆಕೆಗೆ ಈ ಹಿಂದೆ ಮದುವೆಯಾಗಿ ವಿಚ್ಛೇದನವೂ ಆಗಿತ್ತು. ಆಗ್ರಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾಗ ಕಾನ್ಸ್ಟೇಬಲ್ ಅವರನ್ನು ಭೇಟಿಯಾಗಿದ್ದಳು. ಈ ವಿಡಿಯೋಗಳು ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಕಾನ್‌ಸ್ಟೆಬಲ್ ಜೆ.ವಿ. ಗೌತಮ್ ಅವರನ್ನು ಅಮಾನತುಗೊಳಿಸಲಾಗಿದೆ. ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ, ಕಾನ್‌ಸ್ಟೆಬಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗ ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಅನುರಾಗ್ ದೊಭಾಲ್ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ಹೊರಬಂದ ಯೂಟ್ಯೂಬರ್

ಹಿಂದಿ ‘ಬಿಗ್ ಬಾಸ್ 17’ ಸ್ಪರ್ಧಿ ಹಾಗೂ ಖ್ಯಾತ ಯೂಟ್ಯೂಬರ್ ಅನುರಾಗ್ ದೋಭಾಲ್ (Anurag Dobhal) ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಮಾರ್ಚ್ 7ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅನುರಾಗ್, ಇದೀಗ ಐಸಿಯುನಿಂದ (ICU) ಹೊರಬಂದಿದ್ದಾರೆ ಎಂದು ಅವರ ಮ್ಯಾನೇಜರ್ ರೋಹಿತ್ ಪಾಂಡೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅನುರಾಗ್ ನಗುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಫೋಟೋವನ್ನು ರೋಹಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಅನುರಾಗ್ ಭಾಯ್ ಐಸಿಯುನಿಂದ ಹೊರಬಂದಿದ್ದಾರೆ. ನಾವು ದಿನದ 24 ಗಂಟೆಯೂ ಅವರ ಜೊತೆಗಿದ್ದೇವೆ. ಅವರು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸಿ’ ಎಂದು ರೋಹಿತ್ ಪಾಂಡೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಪಘಾತಕ್ಕೂ ಮುನ್ನ ಅನುರಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಇದು ನನ್ನ ಕೊನೆಯ ವಿಡಿಯೋ’ ಎಂದು ಭಾವುಕವಾಗಿ ಮಾತನಾಡಿದ್ದರು. ತಮ್ಮ ಅಂತರ್ಜಾತಿ ವಿವಾಹದ ಕಾರಣಕ್ಕಾಗಿ ಪೋಷಕರು ಮತ್ತು ಸಹೋದರ ಕಲಂ ದೊಭಾಲ್ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಪತ್ನಿ ರಿತಿಕಾ ಕೂಡ ತನ್ನನ್ನು ಬಿಟ್ಟು ಹೋಗಿದ್ದಾಳೆ ಮತ್ತು ತಾನು ತೀವ್ರ ಖಿನ್ನತೆಯಲ್ಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅನುರಾಗ್ ಸಹೋದರ ಕಲಂ, ‘ಇವೆಲ್ಲವೂ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯಲು ಮಾಡುತ್ತಿರುವ ನಾಟಕ’ ಎಂದು ಆರೋಪಿಸಿದ್ದರು. ಕುಟುಂಬದ ನಡುವಿನ ಗಲಾಟೆ ತಾರಕಕ್ಕೇರಿದ ಬೆನ್ನಲ್ಲೇ, ಅನುರಾಗ್ ಅವರು ಟೊಯೋಟಾ ಫಾರ್ಚುನರ್ ಕಾರಿನಲ್ಲಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು. ವರದಿಗಳ ಪ್ರಕಾರ, ಕಾರು ಸುಮಾರು 140-150 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ಬೇಕಂತಲೇ ಅವರು ಡಿವೈಡರ್​ಗೆ ಗುದ್ದಿದರು.

ಅನುರಾಗ್ ಪತ್ನಿ ರಿತಿಕಾ ಪ್ರಸ್ತುತ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ಮ್ಯಾನೇಜರ್ ಕಾಳಜಿ ವ್ಯಕ್ತಪಡಿಸಿದ್ದಾರೆ. ‘ಈಗ ನಮಗೆ ಅನುರಾಗ್ ಮತ್ತು ರಿತಿಕಾ ಅವರ ಆರೋಗ್ಯವೇ ಮುಖ್ಯ. ಕುಟುಂಬದ ವಿಚಾರಗಳ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅನುರಾಗ್ ಗುಣಮುಖರಾದ ನಂತರ ಅಧಿಕೃತ ಹೇಳಿಕೆ ಬಿಡುಗಡೆ ಮಾಡುತ್ತೇವೆ’ ಎಂದು ಮ್ಯಾನೇಜರ್ ರೋಹಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ

ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ದೊಭಾಲ್ ಬಹಳ ಫೇಮಸ್. ಮೊಟೋ ವ್ಲಾಗ್ ಮೂಲಕ ಅವರು ಹೆಸರು ಗಳಿಸಿದ್ದಾರೆ. ಆದರೆ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಉಂಟಾದ ಕಾರಣ ಅವರು ಖಿನ್ನತೆಗೆ ಜಾರಿದ್ದರು. ಅದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈಗ ಅವರು ಚೇತರಿಕೆ ಕಾಣುತ್ತಿದ್ದಾರೆ ಎಂಬ ವಿಷಯ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್​​ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್​​ಗೆ ನುಗ್ಗಿ ಕದ್ದು ಎಸ್ಕೇಪ್​​!

ರಾಮನಗರ, ಮಾರ್ಚ್​ 13: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಹಡಗುಗಳು ಬಾರದೆ ದೇಶದ ಬಹುತೇಕ ರಾಜ್ಯಗಳಲ್ಲಿ ಎಲ್​​ಪಿಜಿ ವಾಣಿಜ್ಯ ಸಿಲಿಂಡರ್​​ಗಳ ಅಭಾವ ತಲೆದೋರಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸಮಸ್ಯೆ ತೀರಾ ಹದಗೆಟ್ಟಿದ್ದು, ಸಿಲಿಂಡರ್​​ಗಳ ಅಲಭ್ಯತೆಯ ಹಿನ್ನೆಲೆ ಬಹುತೇಕ ಹೋಟೆಲ್​​ಗಳು ಭಾಗಶಃ ಬಂದ್​ ಆಗಿವೆ. ಇಲ್ಲವೇ ಗಣನೀಯವಾಗಿ ಮೆನು ಕಡಿತಗೊಳಿಸಿ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಪಿಜಿಗಳು ಮತ್ತು ಸರಕಾರಿ ಶಾಲೆಗಳಲ್ಲಿ ಊಟ ತಯಾರಿಕೆಗೂ ಸಂಕಷ್ಟ ಬಂದೊದಗಿದ್ದು, ಹೆಚ್ಚಿನ ಹಣ ಕೊಡುತ್ತೇವೆ ಎಂದರೂ ಸಿಲಿಂಡರ್​​ಗಳು ಸಿಗುತ್ತಿಲ್ಲ ಎಂದು ಆಹಾರೋದ್ಯಮಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಕೆಲವರು ಬ್ಲ್ಯಾಕ್​​ ಮಾರ್ಕೆಟ್​​ನಲ್ಲಿ ಸಿಲಿಂಡರ್​​ ಮಾರುತ್ತಿದ್ದರೆ, ಇನ್ನು ಕೆಲವರು ಮನೆಗಳಿಗೆ ನುಗ್ಗಿ ಕದಿಯುವ ಕೆಲಸಕ್ಕೆ ಕೈಹಾಕಿದ್ದಾರೆ.

ಸ್ಕೂಟರ್​​ನಲ್ಲಿ ಬಂದ ಆರೋಪಿಗಳು ಮನೆಯ ಕಾಂಪೌಂಡ್​​ ಪ್ರವೇಶಿಸಿ ಗೃಹೋಪಯೋಗಿ ಎಲ್​​ಪಿಜಿ ಸಿಲಿಂಡರ್​​ ಕದ್ದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಮಾರ್ಚ್​​ 7ರಂದೇ ಈ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣಪ್ಪ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಘಟನೆ ವೇಳೆ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಬಳಿಕ ಅಡುಗೆ ಮನೆಯ ಸಿಲಿಂಡರ್​​ ಬದಲಾಯಿಸಲು ಹೋದ ವೇಳೆ ಮನೆಯ ಆವರಣದಲ್ಲಿ ಇಟ್ಟುಕೊಂಡಿದ್ದ ಹೆಚ್ಚುವರಿ ಸಿಲಿಂಡರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಸಿಲಿಂಡರ್​​ ಏನಾಯಿತು ಎಂಬ ಬಗ್ಗೆ ಮನೆಯವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ

ಸ್ಕೂಟರ್​​ನಲ್ಲಿ ಬಂದ ಆರೋಪಿಗಳ ಪೈಕಿ ಓರ್ವ ಮನೆಯ ಗೇಟ್​​ ತೆರೆದು ಕಾಂಪೌಂಡ್​​ ಒಳಗೆ ಪ್ರವೇಶಿಸಿದ್ದು, ಆಕಡೆ ಈಕಡೆ ನೋಡಿ ಸೀದಾ ಸಿಲಿಂಡರ್​​ ಇಟ್ಟ ಸ್ಥಳಕ್ಕೆ ತೆರಳಿದ್ದಾನೆ. ಕೂಡಲೇ ಅದನ್ನು ಎತ್ತಿಕೊಂಡು ಆತ ಕಾಂಪೌಂಡ್​​ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃತ್ಯವನ್ನು ಗಮನಿಸಿದಾಗ ಮನೆಯವರು ಹೆಚ್ಚುವರಿ ಸಿಲಿಂಡರ್​​ ಇಡುತ್ತಿದ್ದ ಸ್ಥಳ ಆರೋಪಿಗಳಿಗೆ ಮೊದಲೇ ಗೊತ್ತಿತ್ತಾ ಎನ್ನುವ ಅನುಮಾನವೂ ಇದ್ದು, ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಮೊದಲೇ ಆತಂಕಗೊಂಡಿದ್ದ ನಿವಾಸಿಗಳಿಗೆ ಇದೀಗ ಸಿಲಿಂಡರ್ ಕಳ್ಳರ ಹಾವಳಿ ಹೊಸ ತಲೆನೋವಾಗಿ ಮಾರ್ಪಟ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಬೆಂಗಳೂರು, ಮಾರ್ಚ್ 13: ಡಿಜಿಟಲ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆ ನಡೆಸುತ್ತಿರುವ ಭಾರತದಲ್ಲಿ ಈಗಲೂ ಕೂಡ ಸಾವಿರಾರು ಹಳ್ಳಿಗಳಿಗೆ ಮೊಬೈಲ್ ನೆಟ್ವರ್ಕ್ (Mobile Network) ಇಲ್ಲವೇ ಇಲ್ಲ. ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, 2026ರ ಜನವರಿ 31ರವರೆಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳ ಸಂಖ್ಯೆ 8,985 ಎನ್ನಲಾಗಿದೆ. ಈ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ.

ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಾಪನೆಯಾಗಿಲ್ಲ. ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದ್ದು ಹೀನಾಯ ಸಾಧನೆ. ಕೇರಳದಲ್ಲಿ ಪ್ರತೀ ಹಳ್ಳಿಯಲ್ಲೂ ಮೊಬೈಲ್ ನೆಟ್ವರ್ಕ್ ಇದೆ. ತಮಿಳುನಾಡಿನಲ್ಲಿ ಕೇವಲ ಮೂರು ಹಳ್ಳಿಗಳು ನೆಟ್ವರ್ಕ್​ನಿಂದ ವಂಚಿತವಾಗಿವೆ. ಕಳಪೆ ಮೊಬೈಲ್ ಕನೆಕ್ಟಿವಿಟಿಯಲ್ಲಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಪೈಪೋಟಿ ನೀಡುತ್ತಿರುವುದು ಆಂಧ್ರ ಮಾತ್ರ. ಅಲ್ಲಿ 394 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕ ಇಲ್ಲ. ತೆಲಂಗಾಣದಲ್ಲಿ 228 ಹಳ್ಳಿಗಳಿಗೆ ಈ ನೆಟ್ವರ್ಕ್ ಇಲ್ಲ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಕರ್ನಾಟಕದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳು ಹೆಚ್ಚಾಗಿ ಅರಣ್ಯ ಹಾಗೂ ಗುಡ್ಡಗಾಡು ಜಾಗದಲ್ಲಿವೆ. ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 189 ಇಂಥ ಹಳ್ಳಿಗಳಿವೆ. ಶಿವಮೊಗ್ಗ (75), ಚಿಕ್ಕಮಗಳೂರು (40), ಚಾಮರಾಜನಗರ (25), ಬೆಳಗಾವಿ (19), ಕಲಬುರ್ಗಿ (18) ಜಿಲ್ಲೆಗಳು ನಂತರದ ಸ್ಥಾನ ಪಡೆಯುತ್ತವೆ.

ಮೊಬೈಲ್ ನೆಟ್ವರ್ಕ್ ಇಲ್ಲದ ಅತಿಹೆಚ್ಚು ಹಳ್ಳಿಗಳಿರುವ ರಾಜ್ಯಗಳು

  1. ಒಡಿಶಾ: 1,237
  2. ಅರುಣಾಚಲಪ್ರದೇಶ: 1,185
  3. ಮಧ್ಯಪ್ರದೇಶ: 960
  4. ಮಹಾರಾಷ್ಟ್ರ: 872
  5. ಕರ್ನಾಟಕ: 470

ಇದನ್ನೂ ಓದಿ: ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ಭಾರತ್​ನೆಟ್ ಪ್ರಾಜೆಕ್ಟ್​ನಲ್ಲಿ ಎಲ್ಲೆಡೆ ಕನೆಕ್ಟಿವಿಟಿ

ಸರ್ಕಾರವು ಡಿಜಿಟಲ್ ಇಂಡಿಯಾವನ್ನು ಇನ್ನೂ ಸಮರ್ಪಕವಾಗಿ ಮಾಡಲು ಭಾರತ್​ನೆಟ್ ಪ್ರಾಜೆಟ್ ಜಾರಿಗೊಳಿಸುತ್ತಿದೆ. ಈ ಯೋಜನೆ ಅಡಿ ಪ್ರತೀ ಹಳ್ಳಿಗೂ ಬ್ರಾಡ್​ಬ್ಯಾಂಡ್ ಕನೆಕ್ಟಿವಿಟಿ ಕೊಡುವ ಗುರಿ ಇದೆ. ಈ ಸ್ಕೀಮ್ ಅಡಿ ಇಲ್ಲಿಯವರೆಗೆ ದೇಶಾದ್ಯಂತ 23,994 ಮೊಬೈಲ್ ಟವರ್​ಗಳನ್ನು ಸ್ಥಾಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ

ಪುನೀತ್ ರಾಜ್​​ಕುಮಾರ್ (Puneeth Rajkumar) ನಟಿಸಿ 2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ದಶಕಗಳ ಬಳಿಕ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. ರಮ್ಯಾ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ 2005 ರಲ್ಲಿ ಬಿಡುಗಡೆ ಆಗಿದ್ದಾಗ ಭಾರಿ ದೊಡ್ಡ ಹಿಟ್ ಆಗಿತ್ತು. ಮಹೇಶ್ ಬಾಬು ನಿರ್ದೇಶಿಸಿದ್ದ ಈ ಸಿನಿಮಾಕ್ಕೆ ಪಾರ್ವತಮ್ಮ ರಾಜ್​​ಕುಮಾರ್ ಬಂಡವಾಳ ಹೂಡಿದ್ದರು. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿದೆ. ಸಿನಿಮಾವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿಯಂತೂ ಅಪ್ಪು ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಅಭಿಮಾನಿಗಳ ಸಂಭ್ರಮ ಹೇಗಿತ್ತೆಂಬುದನ್ನು ವಿಡಿಯೋನಲ್ಲಿ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಬ್ರಾರ್ ಅಹ್ಮದ್​ನ ಕಾವ್ಯ ಮಾರನ್ ಖರೀದಿಸಿದ್ಯಾಕೆ? ಮೌನ ಮುರಿದ ಹೆಡ್ ಕೋಚ್

ಇಂಗ್ಲೆಂಡ್​ನಲ್ಲಿ ನಡೆಯುವ ದಿ ಹಂಡ್ರೆಡ್ (The Hundred) ಲೀಗ್ ಪ್ರಸ್ತುತ ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ದಿ ಹಂಡ್ರೆಡ್ ಲೀಗ್​ನಲ್ಲಿ ಫ್ರಾಂಚೈಸಿಯನ್ನು ಖರೀದಿಸಿರುವ ಭಾರತದ ಕಾವ್ಯ ಮಾರನ್ (Kavya Maran). ವಾಸ್ತವವಾಗಿ ಮುಂಬರುವ ದಿ ಹಂಡ್ರೆಡ್ ಲೀಗ್​ಗೆ ನಿನ್ನೆ ಹರಾಜು ನಡೆಯಿತು. ಈ ಹರಾಜಿನಲ್ಲಿ ಕಾವ್ಯ ಮಾರನ್ ಒಡೆತನದ ಸನ್​ರೈಸರ್ಸ್​ ಲೀಡ್ಸ್ (Sunrisers Leeds) ಫ್ರಾಂಚೈಸಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ (Abrar Ahmed) ಅವರನ್ನು ಖರೀದಿ ಮಾಡಿತು. ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದೊಂದಿಗೆ ಯಾವ ಸಂಬಂದಕ್ಕೂ ಸಿದ್ಧರಿಲ್ಲದ ಭಾರತೀಯರನ್ನು ಕಾವ್ಯ ಮಾರನ್ ಮಾಡಿದ್ದು ಕೆರಳುವಂತೆ ಮಾಡಿದೆ. ಹೀಗಾಗಿ ಕಾವ್ಯ ಮಾರನ್ ಹಾಗೂ ಐಪಿಎಲ್​ನಲ್ಲಿ ಅವರ ಒಡೆತನದ ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಅಭಿಮಾನಿಗಳು ಕೆರಳಿದ್ದಾರೆ. ಐಪಿಎಲ್​ನಿಂದ ಈ ತಂಡವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ಹೆಡ್ ಕೋಚ್ ಡೇನಿಯಲ್ ವೆಟ್ಟೋರಿ ನೀಡಿರುವ ಹೇಳಿಕೆ ಭಾರತೀಯರನ್ನು ಇನ್ನಷ್ಟು ಕೆರಳಿಸಿದೆ.

ನಮಗೆ ಸಂತಸ ತಂದಿದೆ

ವಾಸ್ತವವಾಗಿ ಅಬ್ರಾರ್ ಅಹ್ಮದ್ ಅವರನ್ನು 2.35 ಕೋಟಿ ರೂ.ಗೆ ಖರೀದಿ ಮಾಡಿದ ಬಳಿಕ ಅವರನ್ನು ಏಕೆ ಖರೀದಿಸಲಾಯಿತು ಎಂಬುದರ ಬಗ್ಗೆ ವಿವರಣೆ ನೀಡಿರುವ ಡೇನಿಯಲ್ ವೆಟ್ಟೋರಿ, ‘ಆರಂಭದಲ್ಲಿ, ನಾವು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಖರೀದಿ ಮಾಡಲು ಯೋಚಿಸಿದ್ದೆವು. ಆದರೆ ಅವರನ್ನು ಸದರ್ನ್ ಬ್ರೇವ್ಸ್ ಖರೀದಿ ಮಾಡುವಲ್ಲಿ ಯಶಸ್ವಿಯಾಗಿತು. ಹೀಗಾಗಿ ನಮಗೆ ವಿದೇಶಿ ಸ್ಪಿನ್ನರ್​ನ ಅವಶ್ಯಕತೆ ಇದ್ದ ಕಾರಣ, ನಾವು ನಾಲ್ಕೈದು ಆಟಗಾರರ ಮೇಲೆ ಕಣ್ಣಿಟ್ಟಿದ್ದೆವು. ಅವರುಗಳಲ್ಲಿ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಕೂಡ ಒಬ್ಬರು. ಅದರಂತೆ ನಾವು ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಅವರು ನಮ್ಮ ತಂಡವನ್ನು ಸೇರಿಕೊಂಡಿರುವುದು ನಮಗೆ ಸಂತಸ ತಂದಿದೆ’ ಎಂದಿದ್ದಾರೆ.

ಯಾವುದೇ ಚರ್ಚೆ ನಡೆದಿರಲಿಲ್ಲ

ಇನ್ನು ದಿ ಹಂಡ್ರೆಡ್ ಲೀಗ್​ನಲ್ಲಿ ಭಾರತೀಯರ ಒಡೆತನದಲ್ಲಿರುವ ಫ್ರಾಂಚೈಸಿಗಳು ಪಾಕಿಸ್ತಾನದ ಆಟಗಾರರನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂಬುದು ಈ ಮೊದಲು ಕೇಳಿಬಂದ ಸುದ್ದಿಯಾಗಿತ್ತು. ಆದರೆ ಅದೆಲ್ಲವನ್ನು ಸುಳ್ಳು ಮಾಡಿದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಪಾಕ್ ಆಟಗಾರನನ್ನು ಖರೀದಿ ಮಾಡಿದೆ. ಈ ಬಗ್ಗೆ ವೆಟ್ಟೋರಿ ಬಳಿ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ವೆಟ್ಟೋರಿ, ‘ಪಾಕಿಸ್ತಾನಿ ಆಟಗಾರರನ್ನು ಖರೀದಿಸದಿರುವ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ಪಾಕಿಸ್ತಾನಿ ಆಟಗಾರರನ್ನು ಆಯ್ಕೆ ಮಾಡದಿರುವ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಉತ್ತಮ ಆಯ್ಕೆ ಯಾರು ಎಂಬುದನ್ನು ಮಾತ್ರ ನಾವು ಚರ್ಚಿಸಿದ್ದೇವು’ ಎಂದು ವೆಟ್ಟೋರಿ ಹೇಳಿದ್ದಾರೆ.

ಪಾಕ್ ಆಟಗಾರನನ್ನು 2.34 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್; ಭುಗಿಲೆದ್ದ ಆಕ್ರೋಶ

2.3 ಕೋಟಿ ರೂ.ಗೆ ಖರೀದಿ

ಕಾವ್ಯಾ ಮಾರನ್, ಅಬ್ರಾರ್ ಅಹ್ಮದ್ ಅವರನ್ನು 2.3 ಕೋಟಿ ರೂ.ಗೆ ಖರೀದಿಸಿದರು. ಈ ಮೂಲಕ ಟಿ20 ಲೀಗ್‌ನಲ್ಲಿ ಐಪಿಎಲ್‌ನೊಂದಿಗೆ ಸಂಯೋಜಿತವಾಗಿರುವ ಭಾರತೀಯ ಮಾಲೀಕರು ಖರೀದಿಸಿದ ಮೊದಲ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್. ಪಾಕಿಸ್ತಾನಿ ಆಟಗಾರರು ಕೊನೆಯ ಬಾರಿಗೆ 2009 ರ ಐಪಿಎಲ್‌ನಲ್ಲಿ ಆಡಿದ್ದರು. ಅಂದಿನಿಂದ, ಪಾಕಿಸ್ತಾನಿ ಆಟಗಾರರನ್ನು ಐಪಿಎಲ್​ನಿಂದ ನಿಷೇಧಿಸಲಾಗಿದೆ. ಆದಾಗ್ಯೂ, ಅವರನ್ನು ದಿ ಹಂಡ್ರೆಡ್‌ ಲೀಗ್​ನಲ್ಲಿ ಖರೀದಿ ಮಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ವಿವಾದಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಕಾವ್ಯ ಮಾರನ್ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಬೆಂಗಳೂರು, ಮಾರ್ಚ್​​ 13: ಇಸ್ರೇಲ್​, ಅಮೆರಿಕ ಮತ್ತು ಇರಾನ್​ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಯುದ್ಧದ ಎಫೆಕ್ಟ್​​ಗೆ ರಾಜ್ಯದಲ್ಲಿ ಕಮರ್ಷಿಯಲ್​ ಗ್ಯಾಸ್​​​ನ ಅಭಾವ ಸೃಷ್ಟಿಯಾಗಿದೆ. ಈ ಮಧ್ಯೆ ಹೋಟೆಲ್​​ ನಂತರ ಇದೀಗ ಅಡುಗೆ ಎಣ್ಣೆ (cooking oil) ಅಂಗಡಿಯ ಸರದಿ. ಗ್ಯಾಸ್​​ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ಆ ಮೂಲಕ ಸಿಟಿ ಜನರಿಗೆ ಮತ್ತೊಂದು ಶಾಕ್​​ ಎದುರಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್​ ಮಾಲೀಕರ ಸ್ಥಿತಿ ಕೇಳತೀರದಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್​​ಗಳು ಬಂದ್​ ಕೂಡ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್​ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.

ಅಡುಗೆ ಎಣ್ಣೆ ಅಂಗಡಿಯ ಮಾಲೀಕರು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಅಡುಗೆ ಎಣ್ಣೆ ಅಂಗಡಿಯ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100 ರಿಂದ 200 ಬಾಕ್ಸ್ ಬುಕ್ ಮಾಡಿದರೆ ಕೇವಲ 20 ರಿಂದ 50 ಬಾಕ್ಸ್​​ ಮಾತ್ರ ಏಜೆಂಟರು ಕಳಿಸುತ್ತಿದ್ದಾರೆ. ಏಕೆ ಅಂತಾ ಕೇಳಿದರೆ ಸಪ್ಲೈ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೆಚ್ಚು ಬಾಕ್ಸ್ ನೀಡುವುದಕ್ಕೆ ಆಗಲ್ಲ ಎನ್ನುತ್ತಿದ್ದಾರೆ. ಇದರ ನಡುವೆ 15 ರಿಂದ 20 ರೂ ದರ ಕೂಡ ಜಾಸ್ತಿ ಆಗಿದೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ ಮಾಲೀಕರು.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೂ ಸಿಲಿಂಡರ್ ಅಭಾವ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೂ ಕಮರ್ಷಿಯಲ್ ಸಿಲಿಂಡರ್​​ ಅಭಾವದ ಎಫೆಕ್ಟ್​ ತಟ್ಟಿದೆ. ಆಸ್ಪತ್ರೆ ಹೊರಗಿರುವ ಫುಡ್​ ಪ್ಯಾಲೇಸ್​​ನಲ್ಲಿ ಅನ್ನ ಸಾಂಬಾರ್, ರೈಸ್ ಬಾತ್ ಸೇರಿ ಕೆಲವೇ ಕೆಲವು ಆಹಾರ ಲಭ್ಯವಾಗುತ್ತಿದೆ. ಚೈನೀಸ್, ತಂದೂರ್ ಆಹಾರಗಳ ತಯಾರಿಕೆಯನ್ನ ನಿಲ್ಲಿಸಿದ್ದಾರೆ.

ಕೆ.ಆರ್​ ಮಾರ್ಕೆಟ್​ನಲ್ಲಿ ತರಕಾರಿ ವ್ಯಾಪಾರಕ್ಕೆ ತಟ್ಟಿದ ಬಿಸಿ

ಕಮರ್ಷಿಯಲ್ ಸಿಲಿಂಡರ್ ಇಲ್ಲದೇ ದರ್ಶಿನಿ, ಬೀದಿ ಬದಿ ಹೋಟೆಲ್​​ಗಳು ಕ್ಲೋಸ್ ಆಗಿವೆ. ಇದರಿಂದ ಕೆ.ಆರ್​ ಮಾರ್ಕೆಟ್​​ನಲ್ಲಿ ತರಕಾರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಹೋಟೆಲ್​ಗಳು ಬಂದ್ ಆಗಿರೋದ್ರಿಂದ ತರಕಾರಿ ತೆಗೆದುಕೊಳ್ಳೋರೇ ಇಲ್ಲದಂತಾಗಿದೆ.

ವರದಿ: ಅರುಣ್​​ ಕುಮಾರ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಉಸ್ತಾದ್ ಭಗತ್ ಸಿಂಗ್’ ಪ್ರೀ ರಿಲೀಸ್ ಇವೆಂಟ್​​ಗೆ ದಿನಾಂಕ ನಿಗದಿ

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್, ಆಂಧ್ರ ಪ್ರದೇಶದ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೂರನೇ ಸಿನಿಮಾ ಇದಾಗಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದ ಎದುರು ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗುತ್ತಿದ್ದು, ‘ಧುರಂಧರ್ 2’ಗೆ ಪೈಪೋಟಿ ನೀಡಲು ಭಾರಿ ಪ್ರಚಾರವನ್ನೇ ಚಿತ್ರತಂಡ ಮಾಡಬೇಕಿದೆ. ಆದರೆ ಈ ವರೆಗೂ ಸಿನಿಮಾದ ಮುಖ್ಯ ಆಕರ್ಷಣೆಯಾಗಿರುವ ಪವನ್ ಕಲ್ಯಾಣ್ ಪ್ರಚಾರಕ್ಕೆ ಇಳಿದೇ ಇಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಆಗಮನಕ್ಕೆ ದಿನಾಂಕ ನಿಗದಿ ಆಗಿದ್ದು, ಸಿನಿಮಾದ ಅದ್ಧೂರಿ ಪ್ರೀ ರಿಲೀಸ್​​ ಆಯೋಜನೆ ಮಾಡಲಾಗಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರಚಾರ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದ ನಾಯಕಿ ಶ್ರೀಲೀಲಾ ಮತ್ತು ನಿರ್ದೇಶಕ ಹರೀಶ್ ಶಂಕರ್ ಅವರುಗಳು ಕಾಲೇಜುಗಳು ಇನ್ನಿತರೆ ಕಡೆಗಳಿಗೆ ಹೋಗಿ ಸಿನಿಮಾದ ಪ್ರಚಾರ ಮಾಡುತ್ತಲಿದ್ದಾರೆ. ಆದರೆ ಸಿನಿಮಾಕ್ಕೆ ಸಿಗಬೇಕಿದ್ದ ಹೈಪ್ ಇನ್ನೂ ಸೃಷ್ಟಿಯಾಗಿಲ್ಲ. ಹೈಪ್ ಸೃಷ್ಟಿಯಾಗಬೇಕೆಂದರೆ ಪವನ್ ಕಲ್ಯಾಣ್ ಅಖಾಡಕ್ಕೆ ಇಳಿಯಲೇ ಬೇಕಿದೆ.

ಇದೇ ಕಾರಣಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಮಾರ್ಚ್ 15 ರಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ವಿಶಾಲವಾದ ಹೈದರಾಬಾದ್​​ನ ಯೂಸಫ್​​ಘಡದ ಪೊಲೀಸ್ ಗ್ರೌಂಡ್​​ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಹಾಗೂ ಸಿನಿಮಾದ ಇನ್ನೂ ಕೆಲವು ನಟ-ನಟಿಯರು ಭಾಗಿ ಆಗಲಿದ್ದಾರೆ. ಅತಿಥಿಯಾಗಿ ಪವನ್ ಅವರ ಆತ್ಮೀಯರಾದ ಕೆಲವು ರಾಜಕಾರಣಿಗಳು ಸಹ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡೊಂದು ಈಗಾಗಲೇ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಮಾರ್ಚ್ 15ರಂದು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೇ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಮುಖ್ಯ ನಾಯಕಿಯಾಗಿ ಶ್ರೀಲೀಲಾ ಮತ್ತು ರಾಶಿ ಖನ್ನಾ ಸಹ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ; ಮುಂದೇನು?

ಸಂಜನಾ ಬುರ್ಲಿ (Sanjana Burli) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಅರ್ಧಕ್ಕೆ ತೊರೆದು ಶಾಕ್ ಕೊಟ್ಟಿದ್ದರು. ಆ ಬಳಿಕ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಭಾಗ ಆಗಿದ್ದರು. ಶಾಕಿಂಗ್ ವಿಷಯ ಏನೆಂದರೆ, ಈಗ ಅವರು ಈ ಸೀರಿಯಲ್​​ನಿಂದಲೂ ಹೊರ ನಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧಾರಾವಾಹಿಯ ಕಥೆ ಏನು ಎಂಬ ಆತಂಕ ಮೂಡಿದ್ದು, ಅದಕ್ಕೆ ಉತ್ತರವೂ ಸಿಕ್ಕಿದೆ.

‘ಶ್ರೀ ಗಂಧದ ಗುಡಿ’ ಧಾರಾವಾಹಿ ತಮಿಳು ಸೀರಿಯಲ್​​ನ ರಿಮೇಕ್. ಈ ಸೀರಿಯಲ್​​ನಲ್ಲಿ ಶಿಶಿರ್, ಸಂಜನಾ ಮೊದಲಾದವರು ನಟಿಸಿದ್ದಾರೆ. ಈ ಸೀರಿಯಲ್ ವೀಕ್ಷಕರ ಮನ ಗೆದ್ದಿದೆ. ಒಳ್ಳೆಯ ಟಿಆರ್​​​ಪಿ ಪಡೆಯುತ್ತಲೂ ಇತ್ತು. ಆದರೆ, ಧಾರಾವಾಹಿಯಲ್ಲಿ ಈಗ ನಡೆದ ಹೊಸ ಬೆಳವಣಿಗೆಯಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

ಸಂಜನಾ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರ ಮಾಡಿದ್ದರು. ಈ ಪಾತ್ರವನ್ನು ಸಂಜನಾ ಅರ್ಧಕ್ಕೆ ತೊರೆದರು. ಶಿಕ್ಷಣದ ಕಾರಣ ನೀಡಿ ಅವರು ಧಾರಾವಾಹಿ ಬಿಟ್ಟರು. ಈಗ ಸಂಜನಾ ಬುರ್ಲಿ ಅವರು ಮದುವೆ ಕಾರಣ ನೀಡಿ, ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದರು ಎಂದು ವರದಿ ಆಗಿದೆ. ಈ ಜಾಗಕ್ಕೆ ಹೊಸ ಪಾತ್ರಧಾರಿಯ ಆಯ್ಕೆ ಕೂಡ ಆಗಿದೆ.

ಸ್ನೇಹಾ ಮಂಜುನಾಥ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿ ಆಗಿದೆ. ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಿದ್ದ ‘ಶುಭಸ್ಯ ಶೀಘ್ರಂ’ ಸೀರಿಯಲ್​​ನಲ್ಲಿ ಸ್ನೇಹಾ ನಟಿಸುತ್ತಿದ್ದರು. ಈ ಧಾರಾವಾಹಿಗಳನ್ನು ನಿಲ್ಲಿಸಲಾಗಿದೆ. ಈಗ ಅವರು ಈ ಧಾರಾವಾಹಿ ಆಫರ್ ಪಡೆದು ನಟಿಸೋಕೆ ಆರಂಭಿಸಿದ್ದಾರೆ. ಇಂದಿನ (ಮಾರ್ಚ್ 13) ಎಪಿಸೋಡ್​​ ಅಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಆಫರ್ ಬಂದ್ರೆ ಸಂಜನಾ ಬುರ್ಲಿ ಏನು ಮಾಡ್ತಾರೆ? ಉತ್ತರಿಸಿದ ನಟಿ

ಸಂಜನಾ ಬುರ್ಲಿ ಅವರು ಈ ರೀತಿ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಂದರ್ಭದಲ್ಲಿ ಹಾಗೆಯೇ ಮಾಡಿದ್ದರು. ಈಗ  ಮತ್ತೆ ಅದೇ ರೀತಿಯ ಘಟನೆ ರಿಪೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ: ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ಚಾಮರಾಜನಗರ, ಮಾರ್ಚ್​​ 13: ಗೆಳೆಯನ ಜೊತೆ ಬೈಕ್​​ ಏರಿ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದಿದೆ. ಗುಂಡ್ಲುಪೇಟೆಯ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಮೃತ ವ್ಯಕ್ತಿಯಾಗಿದ್ದು, ಕತ್ತು ಕೊಯ್ದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಅಜಯ್​ ಎಂಬಾತ ನಂಜುಂಡಸ್ವಾಮಿಯನ್ನು ಪಾರ್ಟಿಗೆಂದು ಕರೆದೊಯ್ದಿದ್ದ ಎನ್ನಲಾಗಿದ್ದು, ಅಲ್ಲಿ ನಡೆದಿದ್ದಾರೂ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ನಂಜುಂಡಸ್ವಾಮಿ ಬೆಂಗಳೂರು, ನಂಜನಗೂಡು ಹೀಗೆ ಹಲವೆಡೆ ಸಣ್ಣಪುಟ್ಟ ಕೂಲಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಕರೆದೊಯ್ದಿದ್ದ ಅಜಯ್ ಎಂಬಾತ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಪಾರ್ಟಿಯಲ್ಲಿ ಏನಾಯಿತು? ಇಬ್ಬರೇ ಪಾರ್ಟಿ ಮಾಡಿದ್ದರಾ ಅಥವಾ ಜೊತೆಗೆ ಇನ್ನಷ್ಟು ಮಂದಿ ಇದ್ದರೇ ಎಂಬುದು ಇನ್ನೂ ನಿಗೂಢವಾಗಿದೆ. ಗಾಂಜಾ ಮತ್ತು ಅಥವಾ ಮದ್ಯದ ನಶೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಗುಮಾನಿ ಇದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ; 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಶವವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯ, ನಂಜುಂಡಸ್ವಾಮಿ ಸಹೋದರ ರಾಜು ನೀಡಿರುವ ದೂರಿನ ಅನ್ವಯ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ನಂಜುಂಡಸ್ವಾಮಿಯನ್ನು ಪಾರ್ಟಿಗೆ ಕರೆದೊಯ್ದಿದ್ದ ಅಜಯ್​​ ಸಿಕ್ಕ ಬಳಿಕವೇ ಘಟನೆ ಸಂಪೂರ್ಣ ಸತ್ಯ ಬಯಲಾಗಬೇಕಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ತನ್ನ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮೃತನ‌ ತಂದೆ ಕರಿಯಯ್ಯ ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link