All posts by nagaraj11081993

ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಭೋಪಾಲ್, ಮಾರ್ಚ್​ 12: ಯುವತಿಯರನ್ನು ಯಾರ್ಯಾರದ್ದೋ ಮನೆಗೆ ಕಳುಹಿಸಿ, ಅತ್ಯಾಚಾರದ ನಾಟಕವಾಡಿಸಿ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಜನರನ್ನು ಬೆದರಿಸಿ ಅವರಿಂದ ಸುಲಿಗೆ ಮಾಡುವ ಗ್ಯಾಂಗ್ ಕಟ್ಟಿದ್ದ ಆಕಾಶ್ ನೀಲಕಂಠ್ ಎಂಬಾತನನ್ನು ಆತನ ಮದುವೆ(Marriage) ದಿನವೇ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ಅಲಿಯಾಸ್ ಆಕಾಶ್ ನೀಲಕಂಠ, ಈತ ಇಲ್ಲೀಗಲ್ ಗ್ಯಾಂಗ್ ಎಂಬ ಗ್ಯಾಂಗ್ ಅನ್ನು ಕಟ್ಟಿಕೊಂಡಿದ್ದ, ಆತನ ಮದುವೆ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಗ್ಯಾಂಗ್‌ನಲ್ಲಿ ಸುಮಾರು 15 ಯುವಕರು ಮತ್ತು ಒಬ್ಬ ಯುವತಿಯಿದ್ದರು ಎಂದು ವರದಿಯಾಗಿದೆ. ಅವರು ಮೊದಲು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಂತರ ಅವರನ್ನು ಬಲೆಗೆ ಬೀಳಿಸಲು ಸಂಚು ರೂಪಿಸುತ್ತಿದ್ದರು. ನಂತರ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದ್ದರು ಮತ್ತು ನಂತರ ಅವರ ಬಳಿ ದೊಡ್ಡ ಮೊತ್ತದ ಹಣಬೇಡಿಕೆ ಇಡುತ್ತಿದ್ದರು.

ಈ ಗ್ಯಾಂಗ್‌ ಇತ್ತೀಚೆಗೆ ಕೊಹೆಫಿಜಾ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡಿತ್ತು, ಈ ಗ್ಯಾಂಗ್, ಯೋಜನೆಯ ಭಾಗವಾಗಿ, ರಾತ್ರಿಯಲ್ಲಿ ಯುವತಿಯನ್ನು ಅವರ ಮನೆಗೆ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಮನೆ ಮಾಲೀಕ ಬಾಗಿಲು ತೆರೆದ ತಕ್ಷಣ, ಯುವತಿ ಮನೆಗೆ ಪ್ರವೇಶಿಸಿ ಕೂಗಾಡಲು ಪ್ರಾರಂಭಿಸಿದಳು. ಸ್ವಲ್ಪ ಸಮಯದ ನಂತರ, 10 ರಿಂದ 15 ಯುವಕರು ಬಂದಿದ್ದರು. ಅವರು ಆತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದರು ಮತ್ತು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದರು.

ಮತ್ತಷ್ಟು ಓದಿ: ಈಕೆಗೆ ಅನುಕಂಪ ತೋರಿಸಿದ್ದೇ ತಪ್ಪಾಯಿತು: ಮದುವೆ ಹಾಲ್​​ನಲ್ಲಿ 120 ಗ್ರಾಂ ಚಿನ್ನಾಭರಣ ಕದ್ದ ಬುರ್ಖಾಧಾರಿ ಕಳ್ಳಿ

ನಂತರ ಆರೋಪಿಗಳು ಆತನನ್ನು ಬಲವಂತವಾಗಿ ವಾಹನದಲ್ಲಿ ಕೂರಿಸಿ, ಒಂದು ಕೋಣೆಗೆ ಕರೆದೊಯ್ದು ಸುಮಾರು ಐದು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ, ಅವರನ್ನು ಪದೇ ಪದೇ ಥಳಿಸಲಾಗಿತು ಮಾನಸಿಕವಾಗಿ ಬೆದರಿಸಿ ಎಂಟು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟರು.
ಭಯ ಮತ್ತು ಒತ್ತಡದಲ್ಲಿ, ಆ ವ್ಯಕ್ತಿ ತನ್ನ ಸಹೋದರನಿಗೆ ಕರೆ ಮಾಡಿದ್ದರು. ನಂತರ, ಮೊದಲ ಕಂತಾಗಿ 50,000 ರೂಪಾಯಿಗಳನ್ನು ಆರೋಪಿಯ ಖಾತೆಗೆ ವರ್ಗಾಯಿಸಲಾಯಿತು.

ಉಳಿದ 750,000 ರೂಪಾಯಿಗಳನ್ನು ನಂತರ ಪಾವತಿಸಲಾಗುವುದು ಎಂದು ಒಪ್ಪಂದವಾಯಿತು. ಹಣವನ್ನು ಪಡೆದ ನಂತರ, ಆರೋಪಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ನಂತರ, ಆ ವ್ಯಕ್ತಿ ನೇರವಾಗಿ ಕೊಹೆಫಿಜಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.
ಪೊಲೀಸ್ ತನಿಖೆಯಲ್ಲಿ ಪ್ರಮುಖ ಆರೋಪಿ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯ ವೆಚ್ಚಕ್ಕೆ ಹಣದ ಅಗತ್ಯವಿತ್ತು ಎಂದು ತಿಳಿದುಬಂದಿದೆ.

ಆದ್ದರಿಂದ, ಅವನು ಮತ್ತು ಅವನ ಸಹಚರರು ಈ ಸಂಚು ರೂಪಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ತನಿಖೆ ಆರಂಭಿಸಿ ಬುಧವಾರ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದರು. ಆತನ ವಿವಾಹ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ವಿವಾಹ ಸಮಾರಂಭದಲ್ಲೇ ಆತನನ್ನು ಬಂಧಿಸಿದ್ದಾರೆ.ಆತನ ಇಬ್ಬರು ಸಹಚರರಾದ ಆಕಾಶ್ ಉಪಾಧ್ಯಾಯ ಮತ್ತು ರಾಮ್ ಠಾಕೂರ್ ಅವರನ್ನು ಸಹ ಬಂಧಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

NEET-UG opportunities: ವೈದ್ಯಕೀಯ ಆಕಾಂಕ್ಷಿಗಳಿಗೆ ಗುಡ್​ ನ್ಯೂಸ್​​; 11,000ಕ್ಕೂ ಹೆಚ್ಚು MBBS ಸೀಟುಗಳ ಭರ್ಜರಿ ಹೆಚ್ಚಳ!

ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಬಾರಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಬರೆಯುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯು (NMC) ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಅಧಿಕೃತ ಮಾಹಿತಿಯಂತೆ, 2026ರ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸರಿಸುಮಾರು 11,000ಕ್ಕೂ ಹೆಚ್ಚು ಹೊಸ ಸೀಟುಗಳು ಸೇರ್ಪಡೆಯಾಗಿವೆ. ಈ ಮಹತ್ವದ ನಿರ್ಧಾರವನ್ನು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದ್ದು, ಇದು ವೈದ್ಯಕೀಯ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವರ್ಷ 44 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲಾಗಿದೆ. ಇದರಿಂದಾಗಿ ದೇಶದಲ್ಲಿರುವ ಒಟ್ಟು ವೈದ್ಯಕೀಯ ಕಾಲೇಜುಗಳ ಸಂಖ್ಯೆ 780 ರಿಂದ 824 ಕ್ಕೆ ಏರಿಕೆಯಾಗಿದೆ. ಹೊಸ ಕಾಲೇಜುಗಳ ಸ್ಥಾಪನೆಯಿಂದಾಗಿ 2026-27ರ ಶೈಕ್ಷಣಿಕ ಸಾಲಿನಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ದೇಶದಲ್ಲಿ 1,18,190ರಷ್ಟಿದ್ದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ ಈಗ 1,29,603 ಕ್ಕೆ ಏರಿಕೆಯಾಗಿದ್ದು, ಸೀಟುಗಳ ಕೊರತೆಯಿಂದಾಗಿ ವಿದೇಶಕ್ಕೆ ಹೋಗುತ್ತಿದ್ದ ಅಥವಾ ಪ್ರವೇಶದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಭಾರತದಲ್ಲೇ ಓದಲು ಉತ್ತಮ ಅವಕಾಶ ದೊರೆತಂತಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಕೇವಲ ಎಂಬಿಬಿಎಸ್ ಮಾತ್ರವಲ್ಲದೆ, ಸ್ನಾತಕೋತ್ತರ (Post Graduate) ವೈದ್ಯಕೀಯ ಶಿಕ್ಷಣದ ಸೀಟುಗಳಲ್ಲೂ ಕೂಡ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ಮಾಹಿತಿಯಂತೆ, ನೀಟ್ ಪಿಜಿ ವಿಭಾಗದಲ್ಲಿ 8,967 ಸೀಟುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇದರಲ್ಲಿ ಏಮ್ಸ್ (AIIMS) ನಂತಹ ಪ್ರತಿಷ್ಠಿತ ಸಂಸ್ಥೆಗಳ ಸೀಟುಗಳೂ ಒಳಗೊಂಡಿರುವುದು ವಿಶೇಷ. ವೈದ್ಯಕೀಯ ಸೀಟುಗಳ ಈ ಬೃಹತ್ ಹೆಚ್ಚಳವು ದೇಶದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದಲ್ಲದೆ, ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ನುರಿತ ವೈದ್ಯರು ಲಭ್ಯವಾಗುವಂತೆ ಮಾಡಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಕೊಡಗು, (ಮಾರ್ಚ್ 12): ಮಡಿಕೇರಿ (Madikeri) ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ (Kodagu Double Murder case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಶೋಧಾ(45) ಹಾಗೂ ಕುಂಞರಾಮ(47) ಕೊಲೆಯಾದ ಜೋಡಿ. ಈ ಡಬಲ್ ಮರ್ಡರ್​​​ ಕುಂದಚೇರಿ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಪೊಲೀಸರ ಪ್ರಾಥನಿಕ ತನಿಖೆಯಲ್ಲಿ ಈ ಜೋಡಿ ಕೊಲೆ ರಹಸ್ಯ ಬಯಲಿಗೆ ಬಂದಿದೆ.  ಹೌದು.. ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ. ಯಶೋಧಾ ಮತ್ತು ಕುಂಞರಾಮ ಇವರಿಬ್ಬರು ಸಂಬಂಧದಲ್ಲಿ ಅಣ್ಣ ತಂಗಿ. ಆದ್ರೆ, ಈ ಇವರಿಬ್ಬರು ಪವಿತ್ರ ಸಂಬಂಧವನ್ನೇ ಮೀರಿ ಅಕ್ರಮ ಸಂಬಂಧ ಹೊಂದಿದ್ದು, ಬಳಿಕ ಇಬ್ಬರು ಲಿವಿಂಗ್ ಟುಗೆದರ್​​​​ನಲ್ಲಿದ್ದರು. ಇನ್ನು ಹಂತಕ ಚಂದ್ರು ಸಹ ಯಶೋಧಾ ಮತ್ತು ಕುಂಞರಾಮಗೆ ಸಹೋದರನಾಗಬೇಕು. ಆದ್ರೆ,  ಯಶೋಧಾ ಮತ್ತು ಕುಂಞರಾಮ ಅಕ್ರಮ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡು  ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಅಣ್ಣ-ತಂಗಿ ನಡುವೆ ಅಕ್ರಮ ಸಂಬಂಧ

ನಿನ್ನೆ (ಮಾರ್ಚ್ 11) ಇವರ ಊರಲ್ಲಿ ನಾಮಕರಣ ಸಮಾರಂಭವೊಂದು ನಡೆದಿದೆ. ಅಲ್ಲಿಗೆ ತೆರಳಿದ್ದ ಈ ಮಂದಿ ಗುಂಡು ತುಂಡು ಪಾರ್ಟಿ ಮಾಡಿ ತಮ್ಮ ತಮ್ಮ ಮನೆಗೆ ಮರಳಿದ್ದಾರೆ. ಆದ್ರೆ ರಾತ್ರಿ ಚಂದು ಎಂಬಾತನಿಗೆ ಅದೇನಾಯ್ತೋ ಗೊತ್ತಿಲ್ಲ. ಮಚ್ಚು ಹಿಡಿದು ನೇರವಾಗಿ ತನ್ನ ಮಲಸಹೋದರಿ ಮನೆಗೆ ತೆರಳಿ ಯಶೋಧಳ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕುಂಞರಾಮನನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನೇಟಿಗೆ ಇಬ್ಬರೂ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಎರೆಡು ದೇಹಗಳು ಉರುಳಲು ಕಾರಣ ಮಾತ್ರ ಬಹಳ ವಿಚಿತ್ರವಾಗಿದೆ. ಕೊಲೆಯಾದ ಯಶೋಧ, ಕುಂಞರಾಮ ಮತ್ತು ಕೊಲೆ ಆರೋಪಿ ಚಂದು ಸಂಬಂಧದಲ್ಲಿ ಸಹೋದರಿ ಸಹೋದರರು ಆಗಬೇಕು. ಹೇಗಂದ್ರೆ ಕೊಲೆಯಾದ ಯಶೋಧಳ ತಾಯಿ, ಕುಂಞಇರಾಮನ ತಾಯಿ ನಾರಾಯಣೀ ಮತ್ತು ಕೊಲೆ ಆರೋಪಿ ಚಂದುವಿನ ತಾಯಿ ಸ್ವಂತ ಅಕ್ಕತಂಗಿಯರು. ಆದ್ರೆ, ಇಲ್ಲಿ ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ: ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಮಲಗಿದ್ದ ಅಣ್ಣ-ತಂಗಿ ಮೇಲೇಳಲೇ ಇಲ್ಲ

ಕೊಲೆಯಾದ ಕುಂಞಇರಾಮ ಎರಡು ವರ್ಷಗಳ ಹಿಂದೆ ಪತ್ನಿ ಕಲ್ಯಾಣಿಯನ್ನ ತ್ಯಜಿಸಿ ತನ್ನ ಸಹೋದರಿ ಯಶೋಧಳ ಜೊತೆ ಸಂಬಂಧ ಬೆಳೆಸಿದ್ದ. ಎರಡು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ನೆಲೆಸಿದ್ದರು. ಇದು ಸಹೋದರ ಸಂಬಂಧಿ ಚಂದುವಿಗೆ ಇಷ್ಟವಿರಲಿಲ್ಲ. ಅಲ್ಲದೇ ಚಂದುವಿಗೆ ಯಶೋಧಳ ಮೇಲೆ ಮನಸ್ಸಿತ್ತು ಎನ್ನಲಾಗಿದೆ. ಇದನ್ನ ಅಲ್ಲಿನವರ ಜೊತೆ ಈ ಹಿಂದೆಯೂ ಬಹಳಷ್ಟು ಬಾರಿ ಹೇಳಿದ್ದನಂತೆ. ಆದ್ರೆ ಮಾರ್​ಚ್ 11ರಂದು ಕುಡಿದ ಮತ್ತಿನಲ್ಲಿ ಯಶೋಧಳ ಮನೆಗೆ ತೆರಳಿ ನೋಡಿದಾಗ ಯಶೋಧ -ಕುಂಞರಾಮ ಒಟ್ಟಿಗೆ ಇರುವುದು ಕಂಡು ಮತ್ತಷ್ಟು ಆಕ್ರೋಶಗೊಡಿದ್ದು, ಏನು ನೋಡದೇ ಇಬ್ಬರ ಮೇಲೆ ಮನಸೋಇಚ್ಛೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಮಲಗಿದ್ದ ಯಶೋಧ ಹಾಗೂ ಕುಂಞರಾಮ ಮೇಲೇಳಲೇ ಇಲ್ಲ.

ಈ ಪ್ರಕರಣ ಕೇವಲ ಒಂದು ಅಪರಾಧವಾಗಿ ಮಾತ್ರವಲ್ಲದೆ, ಅಡಿಯ ಜನಾಂಗದ ನಿಕೃಷ್ಟ ಪರಿಸ್ಥಿತಿಯನ್ನ ಬಯಲಿಗೆಳೆದಿದೆ. ಸುಶಿಕ್ಷಿತರಾಗದೇ ಇರುವುದು, ಕಾನೂನಿನ ಕೊರತೆ, ಇವರನ್ನ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇವೆಲ್ಲವೂ ಕೂಡ ಇದೀಗ ಚರ್ಚೆಗೆ ಗ್ರಾಸ ವಾಗಿದೆ. ಸದ್ಯ ಕೊಲೆ ಆರೋಪಿ ಚಂದುವನ್ನ ಬಂಧಿಸಿರೋ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಕರ್ ಅವಾರ್ಡ್​​​ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು

ಆಸ್ಕರ್ ಅವಾರ್ಡ್ (Oscar Awards) ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ಲಾಸ್ ಎಂಜಲೀಸ್​​​ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್​​​ನಲ್ಲಿ ನಡೆಯಲಿದೆ. ಈಗ ಈ ಶೋಗೆ ಇರಾನ್ ದಾಳಿಯ ಭಯ ಕಾಡುತ್ತಿದೆ. ಅಮೆರಿಕ, ಇಸ್ರೇಲ್ vs ಇರಾನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದ ಕ್ಯಾಲಿಫೋರ್ನಿಯಾ ಮೇಲೆ ದಾಳಿ ನಡೆಯುವ ಆತಂಕವೂ ಇದೆ.

ಸದ್ಯ ಹಾಲಿವುಡ್ ಸ್ಟುಡಿಯೋದಲ್ಲಿ ಆಸ್ಕರ್​ ಅವಾರ್ಡ್​​ಗೆ ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಜಗತ್ತಿನ ದೊಡ್ಡ ಹಬ್ಬದ ಆಚರಣೆಗೆ ಎಲ್ಲರೂ ರೆಡಿ ಆಗುತ್ತಿದ್ದಾರೆ. ಈ ಮಧ್ಯೆ ಎಫ್​​​ಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಆಸ್ಕರ್ ನಡೆಯುವ ಜಾಗದಲ್ಲಿ ಭದ್ರತೆ ಹೆಚ್ಚುಸುವಂತೆ ಸೂಚಿಸಿದ್ದಾರೆ. ಡ್ರೋನ್ ದಾಳಿ ನಡೆಯುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ತೀವ್ರ ಕಾಡ್ಗಿಚ್ಚು; ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದು?

ಎಬಿಸಿ ನ್ಯೂಸ್ ವರದಿ ಮಾಡಿದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ ಭೀತಿ ಮೂಡಿದೆ. ಇರಾನ್ ಮೇಲೆ ಅಮೆರಿಕ ನಡೆಸಿರುವ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಶ್ಚಿಮ ಕರಾವಳಿಯತ್ತ ಇರಾನ್ ಡ್ರೋನ್‌ ದಾಳಿ ಮಾಡಬಹುದು ಎನ್ನಲಾಗಿದೆ. ಆಸ್ಕರ್ ಅವಾರ್ಡ್​​​ ಕಾರ್ಯಕ್ರಮದಲ್ಲಿ ಸಾಕಷ್ಟು ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಸಂದರ್ಭದಲ್ಲಿ ದಾಳಿ ನಡೆದರೆ ಅಮೆರಿಕಕ್ಕೆ ಭಾರೀ ನಷ್ಟ ಉಂಟಾಗಲಿದೆ.
ಫೆಬ್ರವರಿ ತಿಂಗಳಲ್ಲಿ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿತು. ಈ ಮೂಲಕ ಅವರ ಸುಪ್ರೀಂ ನಾಯಕ, ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದರು. ಇದು ಇರಾನ್​​ನ ಕೆರಳಿಸಿದೆ.

ಅಕಾಡೆಮಿ ಅವಾರ್ಡ್ಸ್ ಕಾರ್ಯಮ್ರಮದ ದಿನಾಂಕ

98ನೇ ಸಾಲಿನ ಆಸ್ಕರ್ ಅವಾರ್ಡ್ಸ್ 2026ರ ಮಾರ್ಚ್ 15ರಂದು (ಭಾರತೀಯ ಕಾಲಮಾನ: ಮಾರ್ಚ್ 16, ಮುಂಜಾನೆ 4.30) ನಡೆಯಲಿದೆ. ಕಾಮಿಡಿಯನ್ ಒ ಬ್ರೇನ್ ಅವರು ಈ ಶೋನ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್

ಬೆಂಗಳೂರು, ಮಾರ್ಚ್​​ 12: ಬೆಂಗಳೂರು ಸಹಕಾರ ಹಾಲು ಒಕ್ಕೂಟ (BAMUL) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಘೋಷಿಸಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿದೆ. ಸರ್ಕಾರದಿಂದಲೂ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬಮೂಲ್​ನಿಂದ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ಮಾರ್ಚ್ 31ವರೆಗೆ ಹಾಲು ಹಾಕಿರುವವರಿಗೆ ಇದು ಲಭ್ಯವಾಗಲಿದೆ.

ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್​​ ಪ್ರತಿಕ್ರಿಯಿಸಿದ್ದು, ಯಾವುದೇ ತಾರತಮ್ಯ ಇಲ್ಲದೆ ಬಮೂಲ್​ನಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿದೆ. ರೈತರಿಂದ 59,39,78,492 ಲೀಟರ್​ ಹಾಲು ಖರೀದಿಸಿದ್ದೇವೆ. ಈ ಬಾರಿ 500 ಕೋಟಿ ಹೆಚ್ಚುವರಿ ಟರ್ನ್ ಓವರ್ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಮೂಲ್​ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್​ ಆಯ್ಕೆ

ಕಾರ್ಮಿಕರಿಗೆ ಸುಮಾರು 6 ಕೋಟಿ ರೂಪಾಯಿ ಡಿಎ ಕೊಡಬೇಕು. ನಾವೂ ಸುಮಾರು 60 ಕೋಟಿ ರೂ ಲಾಭ ಗಳಿಸುವ ಮಟ್ಟಿಗೆ ಬಂದಿದ್ದೇವೆ. ಹೀಗಾಗಿ ಸಿಬ್ಬಂದಿಗೆ ಬಾಕಿ ಇದ್ದ ಹಣ ಕೊಡಲು ತೀರ್ಮಾನಿಸಲಾಯಿತು. ಗುತ್ತಿಗೆದಾರರಿಗೆ 5 ಸಾವಿರ ಬೋನಸ್ ಕೊಡುತ್ತೇವೆ. ಗುಣಮಟ್ಟದ ಹಾಲು ಕೊಡುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಡಿ.ಕೆ.ಸುರೇಶ್​ ಹೇಳಿದ್ದಾರೆ.

ಮಾರುಕಟ್ಟೆ ಸೋರಿಕೆ ತಡೆದಿದ್ದೇವೆ. ತುಪ್ಪದ ಬೆಲೆ ಜಾಸ್ತಿ ಮಾಡಿದ್ದೇವೆ. ಚೀಸ್ ಜಾಸ್ತಿ ಮಾರಾಟವಾಗುತ್ತಿದೆ. ಗುಣಮಟ್ಟ ಇದೆ. ಡೆಲ್ಲಿ ಮದರ್ ಡೈರಿಗೆ 2 ಲಕ್ಷ ಕೊಡುತ್ತಿದ್ದೇವೆ. ದುಂದು ವೆಚ್ಚ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಮತ್ತು ಮಾರುಕಟ್ಟೆ ಸುಧಾರಣೆ ಮಾಡಲಾಗಿದ್ದು, ಈ ಎಲ್ಲಾ ಕೆಲವು ಕಾರಣಗಳಿಂದ ಲಾಭ ಹೆಚ್ಚಾಗಿದೆ ಎಂದಿದ್ದಾರೆ.

ಸರ್ಕಾರಕ್ಕೆ ಮನವಿ

ಇನ್ನು ಕ್ಷೀರ ಭಾಗ್ಯಕ್ಕೆ 75 ಸಾವಿರ ಲೀಟರ್ ಪೌಡರ್ ಆಗಿ ಕನ್ವರ್ಟ್ ಮಾಡಿ ಕೊಡುತ್ತಿದ್ದೇವೆ. ರಾಗಿ ಮಾಲ್ಟ್ ಜೊತೆ ಹಾಲು ಮಿಕ್ಸ್ ಮಾಡಿ ಕೂಡ ನಾವೂ ಕೊಡಲು ಸಿದ್ಧ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಬಮೂಲ್​ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಟೀಂ ಇಂಡಿಯಾದ ಮಾಜಿ ನಾಯಕ, ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಆಟಗಾರನಾಗಿ ಆ ಬಳಿಕ ತಂಡದ ನಾಯಕನಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ನಿವೃತ್ತಿಯ ಬಳಿಕ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಅವರ ಕೋಚಿಂಗ್​ನಡಿಯಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಕೋಚಿಂಗ್​ನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ಪ್ರಸ್ತುತ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಹೀಗೆ ತನ್ನ ನಿಸ್ವಾರ್ಥ ಸೇವೆಯಿಂದ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿರುವ ದ್ರಾವಿಡ್​ಗೆ ಮಾರ್ಚ್ 15 ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ನಮನ್ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಗೌರವಕ್ಕೆ ಭಾಜನರಾಗಲಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವಂತೆ ರಾಹುಲ್ ದ್ರಾವಿಡ್ ಅವರಿಗೆ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಟೀಂ ಇಂಡಿಯಾದ ‘ಬಿಗ್ ಫೋರ್’ ಬ್ಯಾಟಿಂಗ್ ಲೈನ್ ಅಪ್​ನ ಭಾಗವಾಗಿದ್ದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್​ತಂತಹ ದಿಗ್ಗಜರ ಪಟ್ಟಿಯಲ್ಲಿ ಒಬ್ಬರಾಗಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ದ್ರಾವಿಡ್​ಗೆ ‘ದಿ ವಾಲ್’ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.

ಏಕದಿನ ಮಾದರಿಯಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2012 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ದ್ರಾವಿಡ್, ಆ ಬಳಿಕ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡರು. ನಂತರ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್, ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್​ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

Source link

ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ಬಂದರು ತಲುಪಿದ ಭಾರತದ ಮೊದಲ ತೈಲ ಟ್ಯಾಂಕರ್

ಮುಂಬೈ, ಮಾರ್ಚ್ 12: ಸೌದಿ ಅರೇಬಿಯಾದಿಂದ ಇಂಧನವನ್ನು ಸಾಗಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಇಂದು ಹಾರ್ಮುಜ್ ಜಲಸಂಧಿಯ (Strait Of Hormuz) ಮೂಲಕ ಸಾಗಿ ಸುರಕ್ಷಿತವಾಗಿ ಮುಂಬೈ ಬಂದರಿಗೆ ಆಗಮಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇರುವುದರಿಂದ ತೈಲ ಟ್ಯಾಂಕರ್ ಸಾಗಣೆಗೆ ಭಾರತ ಇರಾನ್​ನ ಅನುಮತಿ ಕೋರಿತ್ತು. ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್ ಎಂಬ ಈ ಹಡಗನ್ನು ಭಾರತೀಯರೊಬ್ಬರು ಮುನ್ನಡೆಸಿದ್ದಾರೆ. ಸೌದಿ ಅರೇಬಿಯಾದ ಪ್ರಮುಖ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾದ ರಾಸ್ ತನುರಾದಿಂದ ಲೋಡ್ ಮಾಡಲಾದ ಕಚ್ಚಾ ತೈಲವನ್ನು ಅವರು ಸಾಗಿಸುತ್ತಿದ್ದರು.

ಮುಂಬೈ ಬಂದರಿನ ವಿಡಿಯೋಗಳು ತೈಲ ಟ್ಯಾಂಕರ್ ಬಂದರನ್ನು ಸಮೀಪಿಸುತ್ತಿರುವುದನ್ನು ಮತ್ತು ಡಾಕಿಂಗ್ ಮಾಡುತ್ತಿರುವುದನ್ನು ತೋರಿಸಿವೆ. ಈ ಟ್ಯಾಂಕರ್ ಮಾರ್ಚ್ 1ರಂದು ರಾಸ್ ತನುರಾದಿಂದ ಹೊರಟು ಮುಂಬೈ ತಲುಪುವ ಮೊದಲು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿತ್ತು. ಈ ಹಡಗು ಕಿರಿದಾದ ಕಡಲ ಕಾರಿಡಾರ್ ಮೂಲಕ ಹಾದುಹೋಗಲು ಇರಾನ್‌ನಿಂದ ಅನುಮತಿ ಪಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ

ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಈ ಮಾರ್ಗದಲ್ಲಿ ಸಾಗುವ ಹಡಗುಗಳು ಜಲಮಾರ್ಗವನ್ನು ಪ್ರವೇಶಿಸುವ ಮೊದಲು ಟೆಹ್ರಾನ್‌ನಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತದೆ. ಪ್ರತಿದಿನ 20 ಮಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವು ಈ ಚಾನಲ್ ಮೂಲಕ ಹಾದುಹೋಗುತ್ತದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇರಾನಿನ ಸಚಿವ ಅಬ್ಬಾಸ್ ಅರಗ್ಚಿ ನಡುವಿನ ಮಾತುಕತೆಯ ನಂತರ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯನ್ನು ಸಾಗಿಸಲು ಅನುಮತಿ ಸಿಕ್ಕಿತ್ತು. ಇದಾದ ನಂತರ ಈ ಹಡಗು ಮುಂಬೈಗೆ ಆಗಮಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IOCL Recruitment 2026: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿ 405 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಯುವಜನರಿಗೆ ಮಹತ್ವದ ಅವಕಾಶವನ್ನು ತೆರೆದಿದೆ. ಕಂಪನಿಯು ತನ್ನ ಮಾರ್ಕೆಟಿಂಗ್ ವಿಭಾಗದ ಪಶ್ಚಿಮ ಪ್ರದೇಶದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 405 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪ್ರತಿಷ್ಠಿತ ಸರ್ಕಾರಿ ಕಂಪನಿಯಲ್ಲಿ ಸೇರುವ ಮೂಲಕ ತರಬೇತಿ ಪಡೆಯಲು ಮತ್ತು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಯಸುವ ಯುವಕರಿಗೆ ಇದು ಒಂದು ಸುವರ್ಣಾವಕಾಶವಾಗಿದೆ.

ಯಾವ ಹುದ್ದೆಗಳಿಗೆ ತರಬೇತಿ ಲಭ್ಯವಿರುತ್ತದೆ?

ಈ ನೇಮಕಾತಿ ಡ್ರೈವ್ ಮೂರು ವಿಭಾಗಗಳಲ್ಲಿ ಹುದ್ದೆಗಳನ್ನು ನೀಡುತ್ತದೆ. ತಂತ್ರಜ್ಞ ಅಪ್ರೆಂಟಿಸ್‌ಶಿಪ್‌ಗಳು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡುತ್ತವೆ. ಟ್ರೇಡ್ ಅಪ್ರೆಂಟಿಸ್‌ಶಿಪ್‌ಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಮತ್ತು ಮೆಷಿನಿಸ್ಟ್ ಸೇರಿದ್ದಾರೆ.

ಹೆಚ್ಚುವರಿಯಾಗಿ, ಗ್ರಾಜುಯೇಟ್ ಅಪ್ರೆಂಟಿಸ್ ಮತ್ತು ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳನ್ನು ಘೋಷಿಸಲಾಗಿದ್ದು, ತಾಂತ್ರಿಕೇತರ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿಗಳು ಪ್ರಾಥಮಿಕವಾಗಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಗೋವಾ ಮತ್ತು ದಾದ್ರಾ ಮತ್ತು ನಗರ ಹವೇಲಿಯಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಟ್ರೇಡ್ ಅಪ್ರೆಂಟಿಸ್‌ಗಳಿಗೆ, ಅಭ್ಯರ್ಥಿಗಳು ಸಂಬಂಧಿತ ಟ್ರೇಡ್‌ನಲ್ಲಿ ಎರಡು ವರ್ಷಗಳ ನಿಯಮಿತ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ, ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಗತ್ಯವಿದೆ.

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ (ಮೀಸಲಾತಿ ವಿಭಾಗಗಳಿಗೆ 45 ಪ್ರತಿಶತ) ಪದವಿ ಪಡೆದಿರುವುದು ಕಡ್ಡಾಯವಾಗಿದೆ. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ, ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 24 ವರ್ಷಗಳು.

ಅರ್ಜಿ ಸಲ್ಲಿಸುವ ದಿನಾಂಕ:

ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಮಾರ್ಚ್ 11ರಂದು ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 26 ರ ಸಂಜೆ 5:00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ ಆಧಾರಿತವಾಗಿರುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು ತಮ್ಮ ಐಟಿಐ, ಡಿಪ್ಲೊಮಾ ಅಥವಾ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ನ ವೃತ್ತಿ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಭಾರತ ಸರ್ಕಾರದ ಅಪ್ರೆಂಟಿಸ್‌ಶಿಪ್ ಪೋರ್ಟಲ್, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (NATS) ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ (NAPS) ನಲ್ಲಿ ನೋಂದಾಯಿಸಿಕೊಳ್ಳಬೇಕು. ಆಗ ಮಾತ್ರ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಾಜಿಗೂ ಮುನ್ನ ಶಾಹೀನ್ ಅಫ್ರಿದಿ ಔಟ್: ಆದ್ರೂ ಸಿಗಲಿದೆ 17 ಲಕ್ಷ ರೂ.

ಪಾಕಿಸ್ತಾನದ ಏಕದಿನ ಕ್ರಿಕೆಟ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ, ದಿ ಹಂಡ್ರೆಡ್ (The Hundred) 2026 ಟೂರ್ನಿಯ ಆಟಗಾರರ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಲಂಡನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.

ಪಾಕಿಸ್ತಾನ ತಂಡದ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ) ಆದ್ಯತೆ ನೀಡಲು ಅಥವಾ ಗ್ಲೋಬಲ್ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ಶಾಹೀನ್ ಅಫ್ರಿದಿ ಅವರ ಬದಲಿಗೆ ನ್ಯೂಝಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ‘ವೆಲ್ಷ್ ಫೈರ್’ ತಂಡವು ಆಯ್ಕೆ ಮಾಡಿಕೊಂಡಿದೆ. ಇತ್ತ ಹರಾಜಿನಿಂದ ಹಿಂದೆ ಸರಿದರೂ ಶಾಹೀನ್​ಗೆ ಇಮೇಜ್ ರೈಟ್ಸ್ ರೂಪದಲ್ಲಿ 17 ಲಕ್ಷ ರೂ. (PKR) ಸಿಗಲಿದೆ.

ಏನಿದು ಇಮೇಜ್ ರೈಟ್ಸ್​?

ಇಮೇಜ್ ರೈಟ್ಸ್  ಎಂದರೆ ಒಬ್ಬ ಆಟಗಾರನ ಹೆಸರು, ಫೋಟೋ, ಸಹಿ ಅಥವಾ ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಹಕ್ಕು.

ಲೀಗ್ ಅಥವಾ ತಂಡವು ಪಂದ್ಯದ ಪ್ರಚಾರಕ್ಕಾಗಿ, ಜಾಹೀರಾತುಗಳಲ್ಲಿ ಅಥವಾ ಟಿ-ಶರ್ಟ್‌ನಂತಹ ವಸ್ತುಗಳ ಮೇಲೆ ಆಟಗಾರನ ಚಿತ್ರವನ್ನು ಬಳಸುತ್ತದೆ. ಹೀಗೆ ಬಳಸಿದ್ದಕ್ಕಾಗಿ ಆಟಗಾರನಿಗೆ ಪ್ರತ್ಯೇಕವಾಗಿ ಹಣವನ್ನು ನೀಡಲಾಗುತ್ತದೆ.

ಆಟಗಾರನು ಪಂದ್ಯವಾಡಲು ಪಡೆಯುವ ಸಂಭಾವನೆ ಬೇರೆ, ಮತ್ತು ಅವರ ಫೋಟೋ ಅಥವಾ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಕ್ಕಾಗಿ ನೀಡುವ ಇಮೇಜ್ ರೈಟ್ಸ್ ಹಣವೇ ಬೇರೆ.

ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರೂ, ಅವರ ಚಿತ್ರವನ್ನು ಈಗಾಗಲೇ ದಿ ಹಂಡ್ರೆಡ್​ ಲೀಗ್‌ನ ಪ್ರಚಾರಕ್ಕಾಗಿ ಅಥವಾ ಮಾರ್ಕೆಟಿಂಗ್‌ಗಾಗಿ ಬಳಸಲಾಗಿದೆ.

ಈ ಕಾರಣಕ್ಕಾಗಿ ಅವರಿಗೆ ಸುಮಾರು £5,000 ಇಮೇಜ್ ರೈಟ್ಸ್ ರೂಪದಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಅಂದರೆ ಪಾಕಿಸ್ತಾನ್ ರೂಪಾಯಿ 17 ಲಕ್ಷ ಪಡೆಯಲಿದ್ದಾರೆ.

ಏನಿದು ಹಂಡ್ರೆಡ್ ಲೀಗ್?

ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್​ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

ದಿ ಹಂಡ್ರೆಡ್ ಲೀಗ್​ನ ತಂಡಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
  • ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​)
  • ಬರ್ಮಿಂಗ್​ಹ್ಯಾಮ್ ಫೀನಿಕ್ಸ್
  • ಲಂಡನ್ ಸ್ಪಿರಿಟ್
  • ಟ್ರೆಂಟ್ ರಾಕೆಟ್ಸ್
  • ವೆಲ್ಷ್ ಫೈರ್

 

Source link

ಕಾಡಾನೆ ದಾಳಿಗೆ ಕೊಡಗಲ್ಲಿ ಮತ್ತೊಂದು ಬಲಿ: ದಾರುಣವಾಗಿ ಮೃತಪಟ್ಟ ಕಾಫಿ ಬೆಳೆಗಾರ

ಮಡಿಕೇರಿ, ಮಾರ್ಚ್​​ 12: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಲು ಸಾಲು ಸಾವು

ಕಾಡಾನೆ ದಾಳಿಗೆ ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಾವುಗಳಾಗ್ತಿರೋದು ಜನರ ನಿದ್ದೆಗೆಡಿಸಿದೆ. ಕಾಫಿ ತೋಟ, ರಸ್ತೆ ಬದಿ ಎಲ್ಲೆಂದರಲ್ಲಿ ಇವುಗಳು ಜನರ ಪ್ರಾಣ ಬಲಿ ಪಡೆಯುತ್ತಿರುವ ಕಾರಣ ಜನರು ಮನೆಯಿಂದ ಹೊರ ಬರಲೂ ಹೆದರಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು.

ಇದನ್ನೂ ಓದಿ: 10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ; ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

ಅದಾಗಿ 10 ದಿನಗಳು ಕಳೆಯುವುದರ ಒಳಗೆಯೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.  ಸಾಲು ಸಾಲು ಸಾವುಗಳ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ದಾಳಿ ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link