ಮೈಸೂರು, ಮಾರ್ಚ್ 7: ಬಜೆಟ್ ಮಂಡನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬರಲಿದೆಯಾ? ಸಿಎಂ ಸಿದ್ದರಾಮಯ್ಯ ನೀಡಿರುವ ಶಾಕಿಂಗ್ ಹೇಳಿಕೆ ಹೀಗೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಅನ್ನು ಮಾರ್ಚ್ 7 ರಂದು ಮಂಡಿಸಿದ್ದಾರೆ. ಬಳಿಕ ಮಾರ್ಚ್ 7 ರಂದು ಮೈಸೂರಿಗೆ ಭೇಟಿ ನೀಡಿದ್ದು, ಇದೇ ವೇಳೆ ಪತ್ರಕರ್ತರು ಅವರ ಬಳಿ, ‘ಇನ್ನೆರಡು ಬಜೆಟ್ ಅನ್ನೂ ನೀವೇ ಮಂಡಿಸಲಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಸಿದ್ದರಾಮಯ್ಯ, ಅದು ಹೈಕಮಾಂಡ್‌ನ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡಿದರೂ ಅದಕ್ಕೆ ತಾನು ಬದ್ಧನಾಗಿರುವುದಾಗಿ ಸಿದ್ರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಬಿಟ್ಟುಬಿಡು ಎಂದರೆ ಬಿಡುತ್ತೀನಿ ಎಂದೂ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಮಾತುಗಳನ್ನಾಡಿದರಾ ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಧಾರವಾಡ, ಮಾರ್ಚ್ 07: ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚ ಪಡೆಯುತ್ತಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಅಧಿಕಾರಿಯನ್ನು ಲೋಕಾಯುಕ್ತ (Lokayukta raid) ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆಯ ವಲಯ–1 ಕಚೇರಿಯ ಅಧಿಕಾರಿ ಹೀನಾ ಕೌಸರ್ ಎಂಬವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮುಂಗಡವಾಗಿ 1,000 ರೂ. ಸ್ವೀಕರಿಸಿದ್ದ ಅಧಿಕಾರಿ
ಮಾಳೆಪ್ಪ ತಳವಾರ ಎಂಬುವರು ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಲೈಸೆನ್ಸ್ ನೀಡಲು ಹೀನಾ ಕೌಸರ್ 4,500 ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊದಲು ಅವರು ಮಾಳೆಪ್ಪರಿಂದ ಮುಂಗಡವಾಗಿ 1,000 ರೂ. ಸ್ವೀಕರಿಸಿದ್ದಾಗಿ ತಿಳಿದುಬಂದಿದೆ. ಇಂದು (ಮಾರ್ಚ್ 7) ಉಳಿದ 3,500 ರೂ. ಹಣವನ್ನು ಮಾಳೆಪ್ಪ ತಳವಾರರಿಂದ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹೀನಾ ಕೌಸರ್ ಅವರನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಈ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿದ್ದು, ಅಧಿಕಾರಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುನಿಯಾ ವಿಜಯ್ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ವೇದಿಕೆಯಲ್ಲಿ ಶಿವಣ್ಣ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಶಿವಣ್ಣ ಅವರು ಮಾಡಿದ ಸಹಾಯವನ್ನು ದುನಿಯಾ ವಿಜಯ್ ನೆನಪಿಸಿಕೊಂಡರು. ‘ನಾನು ಸಿನಿಮಾ ರಂಗದಲ್ಲಿ ಇನ್ನೂ ಗುರುತಿಸಿಕೊಳ್ಳದೆ ಇರುವಾಗ ಶಿವಣ್ಣ ನನ್ನನ್ನು ಗುರುತಿಸಿ ಅವಕಾಶ ಕೊಟ್ಟರು. ತಂದೆ ತಾಯಿ ಹಾಗೂ ಶಿವಣ್ಣ ಅವರು ಮಾಡಿದ ಆಶೀರ್ವಾದದಿಂದ ಇಲ್ಲಿದ್ದೇನೆ’ ಎಂದು ದುನಿಯಾ ವಿಜಯ್ ಹೇಳಿದರು.
ಮಂಡ್ಯ, ಮಾರ್ಚ್ 07: ಖೇಲೋ ಇಂಡಿಯಾ (Khelo India)ಯೋಜನೆಯಡಿ ಮಂಡ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ (Mandya Sports Complex)ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದ ವಿಸಿ ಫಾರಂನಲ್ಲಿ ಮಾತನಾಡಿದ ಅವರು, ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಸಂಪೂರ್ಣ ಅಭಿವೃದ್ಧಿಗಾಗಿ 5 ಎಕರೆಗೆ ವಿಸ್ತರಣೆ
ವಿಸಿ ಫಾರಂನ ಸುಮಾರು 1.5 ಎಕರೆ ಜಾಗದಲ್ಲಿ ಪ್ರಥಮ ಹಂತದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ನಿರ್ಧರಿಸಲಾಗಿದ್ದು, ಮಾರ್ಚ್ 14ರಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಈ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ಹೇಳಿದರು. ಸಂಪೂರ್ಣ ಅಭಿವೃದ್ಧಿಗಾಗಿ ಸುಮಾರು 5 ಎಕರೆ ಜಾಗ ಅಗತ್ಯವಿದ್ದು, ಮುಂದಿನ ಹಂತದಲ್ಲಿ ಅದನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸೂಕ್ತ ಜಾಗದ ಕೊರತೆ ಇರುವ ಕಾರಣ ವಿಸಿ ಫಾರಂ ಪ್ರದೇಶದಲ್ಲಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಹೆಚ್ಚುವರಿ ಅಭಿವೃದ್ಧಿಗಾಗಿ ಮತ್ತಷ್ಟು ಜಾಗ ಒದಗಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ. ಇದಕ್ಕಾಗಿ ಹಲವು ಬಾರಿ ಭೂಮಿ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ. ಈ ಯೋಜನೆಗೆ ಯಾವುದೇ ರೀತಿಯ ರಾಜಕೀಯ ಸಂಬಂಧ ಇಲ್ಲ. ಗ್ರಾಮೀಣ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವುದು ಹಾಗೂ ಉತ್ತಮ ಸೌಲಭ್ಯಗಳನ್ನು ಒದಗಿಸುವುದೇ ಇದರ ಮುಖ್ಯ ಉದ್ದೇಶ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ, ಮಾರ್ಚ್ 7: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (Vijayanagara Sri Krishnadevaraya University) ಮತ್ತೊಂದು ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ಗರಿಷ್ಠ 700 ಅಂಕಗಳಿರುವಲ್ಲಿ ಅದನ್ನೂ ಮೀರಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ 996, 1080, 1100, 840 ಮತ್ತು 1163 ಅಂಕಗಳನ್ನು ಮುದ್ರಿಸಿದ್ದು, ಇದನ್ನು ನೋಡಿ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ. ಬಿಬಿಎ (BBA) ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ತಪ್ಪು ಕಂಡುಬಂದಿದ್ದು, ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಇದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಬಿಬಿಎ ಪದವಿ ಕೋರ್ಸ್‌ನಲ್ಲಿ ಏಳು ವಿಷಯಗಳು ಇದ್ದು, ಪ್ರತಿ ವಿಷಯಕ್ಕೂ ಗರಿಷ್ಠ 100 ಅಂಕಗಳಿರುತ್ತವೆ. ಹೀಗಾಗಿ ಒಟ್ಟು ಗರಿಷ್ಠ ಅಂಕ 700 ಮಾತ್ರವಾಗುತ್ತದೆ. ಆದರೆ ಕೆಲ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕಕ್ಕಿಂತಲೂ ಹೆಚ್ಚು ಅಂಕಗಳನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಬಳ್ಳಾರಿಯ ಖಾಸಗಿ ಎಸ್ಜಿಟಿ ಪದವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ಎಡವಟ್ಟು ಮಾಡಲಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಈ ಖಾಸಗಿ ಕಾಲೇಜಿನ ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ಎಡವಟ್ಟು ಕಂಡುಬಂದಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಎಡವಟ್ಟು ಇದೇ ಮೊದಲಲ್ಲ!
ಗಮನಾರ್ಹ ಸಂಗತಿ ಎಂದರೆ, ಇದೇ ವಿಶ್ವವಿದ್ಯಾಲಯದಿಂದ ಈ ಹಿಂದೆ ಮಾಕ್ ಮಾರ್ಕ್ಸ್ ಕಾರ್ಡ್‌ನಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯ ಚಿತ್ರ ಹಾಗೂ ಸಿನಿಮಾ ನಟರ ಫೋಟೋಗಳು ಮುದ್ರಿತವಾಗಿದ್ದ ಘಟನೆ ಕೂಡ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ಅಂಕಪಟ್ಟಿ ಮುದ್ರಣದಲ್ಲಿ ಎಡವಟ್ಟು ಸಂಭವಿಸಿರುವುದು ಪ್ರಶ್ನೆಗಳನ್ನು ಹುಟ್ಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಎಂ. ಸಾಲಿ ಅವರು, ‘ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ. ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ತಪ್ಪು ಕಂಡುಬಂದಿದ್ದು, ಸಮಸ್ಯೆಯನ್ನು ಈಗಾಗಲೇ ಸರಿಪಡಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ದೋಷಪೂರಿತ ಅಂಕಪಟ್ಟಿಗಳನ್ನು ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಚಿತ್ರಕೂಟ (ಉತ್ತರ ಪ್ರದೇಶ): ಶಾಲೆ ಕೇವಲ ಅಕ್ಷರ ಕಲಿಸುವ ಜಾಗವಲ್ಲ, ಬದಲಾಗಿ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಪವಿತ್ರ ಸ್ಥಳ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಗಳು ಮತ್ತು ಒಳ್ಳೆಯ ನಡತೆಯನ್ನು ಬೆಳೆಸುವ ಭವಿಷ್ಯದ ಬುನಾದಿ. ಆದರೆ ಇಂತಹ ಜ್ಞಾನದ ದೇಗುಲದಲ್ಲೇ ಶಿಕ್ಷಕಿಯೊಬ್ಬಳು ತನ್ನ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡು ಪುಟ್ಟ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏನಿದು ಘಟನೆ?
ಚಿತ್ರಕೂಟ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಮಧು ರೈ, ಪಾಠ ಮಾಡುವ ಬದಲು, ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಮಸಾಜ್ ಮಾಡಿಸಿಕೊಂಡಿದ್ದಾಳೆ.
“Principal wants foot massage in school.”
Madhu Rai, woman principal, lies on floor in
a govt primary school in UP’s Chitrakoot while girl students give her a foot massage.
How can the future of children be shaped if principal herself exploits them like this? pic.twitter.com/dxLOjS5QR1
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಶಿಕ್ಷಕಿ ಮಧು ರೈ ತರಗತಿಯ ನೆಲದ ಮೇಲೆ ಮಲಗಿದ್ದು, ಸುತ್ತ ಇರುವ ಪುಟ್ಟ ಬಾಲಕಿಯರು ಶಿಕ್ಷಕಿಯ ಕಾಲುಗಳನ್ನು ಒತ್ತುತ್ತಿರುವ ದೃಶ್ಯ ಸೆರೆಯಾಗಿದೆ. ಜ್ಞಾನದ ದೀಪ ಬೆಳಗಬೇಕಾದ ಗುರುವೇ, ಮಕ್ಕಳನ್ನು ಇಂತಹ ಕೀಳು ಕೆಲಸಗಳಿಗೆ ಬಳಸಿಕೊಂಡಿರುವುದು ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಇಲಾಖೆಯ ಕ್ರಮ:
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಕೂಡಲೇ ತನಿಖೆಗೆ ಆದೇಶಿಸಿದೆ. ಚಿತ್ರಕೂಟದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಗಳು (BSA) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲು ಮುಂದಾಗಿರುವುದು ವರದಿಯಾಗಿದೆ.
“ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯುವುದು ಶಿಕ್ಷಕ ವೃತ್ತಿಗೇ ಅವಮಾನ. ವಿದ್ಯಾರ್ಥಿಗಳ ಮೇಲೆ ಇಂತಹ ಒತ್ತಡ ಹೇರುವುದು ಶಿಕ್ಷಣ ಇಲಾಖೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಶಾಲೆಗೆ ವಿದ್ಯೆಯನ್ನು ಕಲಿಯಲು ಬರುವ ಮಕ್ಕಳನ್ನು ಅಸಹಾಯಕತೆಯಿಂದ ತಮ್ಮ ಸೇವಕರಂತೆ ನಡೆಸಿಕೊಂಡ ಶಿಕ್ಷಕಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.
ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ (Dhurandhar 2) ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಈ ಟ್ರೇಲರ್ ಗಮನ ಸೆಳೆದಿದೆ. ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ರಣವೀರ್ ಸಿಂಗ್ ಅವರು ಟ್ರೇಲರ್ ಅಲ್ಲಿ ರಕ್ತ ಹರಿಸಿದ್ದಾರೆ. ಟ್ರೇಲರ್ ನೋಡಿದರೆ ಸಿನಿಮಾ 2 ಸಾವಿರ ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿವೆ. ಆದರೂ ಒಂದು ಕೊರತೆ ಕಾಣುತ್ತಿದೆ.
‘ಧುರಂಧರ್ 2’ ಸಿನಿಮಾ ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಮೆರೆಯಲಾಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಅದ್ಭುತ ಫೀಲ್ ಆಗಿದೆ. ಹಮ್ಜಾ ಅಲಿ ಮಜಾರಿ ಪಾಕಿಸ್ತಾನದಲ್ಲಿ ರೆಹಮಾನ್ ಡಕಾಯಿತ್ನ ಕೊಲೆ ಮಾಡುತ್ತಾನೆ. ಈ ಕೊಲೆ ಬಳಿಕ ಹಮ್ಜಾ ಪಾಕಿಸ್ತಾನದ ಡಾನ್ ಆಗುವ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ, ಹಮ್ಜಾನ ಹಿಂದಿನ ಕಥೆಯನ್ನು ಕೂಡ ತೋರಿಸಲಾಗಿದೆ.
ಟ್ರೇಲರ್ ಉದ್ದಕ್ಕೂ ‘ಧುರಂದರ್ 2’ ಚಿತ್ರದಲ್ಲಿ ಆ್ಯಕ್ಷನ್ ಇದೆ. ಇದು ಆ್ಯಕ್ಷನ್ ಪ್ರಿಯರಿಗೆ ಸಾಕಷ್ಟು ಇಷ್ಟ ಆಗುವ ಸಾಧ್ಯತೆ ಇದೆ. ಆದರೆ, ಟ್ರೇಲರ್ ಅಲ್ಲಿ ಎಲ್ಲಿಯೂ ಅಕ್ಷಯ್ ಖನ್ನಾ ಕಾಣಿಸಿಲ್ಲ. ಮೊದಲ ಭಾಗದಲ್ಲಿ ಅವರು ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದರು. ಈ ಪಾತ್ರ ಎಲ್ಲಿಯೂ ತೋರಿಸಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣ ಆಗಿದೆ. ಕೆಲವು ದೃಶ್ಯಗಳಲ್ಲಿಯಾದರೂ ಅವರು ಕಾಣಿಸಿಕೊಳ್ಳಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋ ಜೊತೆ ಆದಿತ್ಯ ಧಾರ್ ಕೂಡ ಸಿನಿಮಾದ ನಿರ್ಮಾಪಕ. ಭಾರತದ ವ್ಯಕ್ತಿಯೋರ್ವ ಪಾಕಿಸ್ತಾನದಲ್ಲಿ ಸ್ಪೈ ಆಗುತ್ತಾನೆ. ಅಲ್ಲಿಯವರ ಜೊತೆ ಸೇರಿ, ಭಾರತದ ಪರವಾಗಿ ಕೆಲಸ ಮಾಡುತ್ತಾನೆ.
ಕೋಲಾರ, ಮಾರ್ಚ್ 07: ಯುಪಿಎಸ್‌ಸಿ 2026ರ ಫಲಿತಾಂಶ ಪ್ರಕಟವಾಗಿದ್ದು, ಕೋಲಾರ ಜಿಲ್ಲೆಯ ಅಣ್ಣಿನಹಳ್ಳಿಯ ರೈತನ ಮಗ ಸಾಗರ್ 641ನೇ ಅಖಿಲ ಭಾರತ ರ್‍ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ರಾಜ್ಯದಿಂದ 22ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐಎಎಸ್ ಮತ್ತು ಐಪಿಎಸ್ ಶ್ರೇಣಿಗಳಿಗೆ ಆಯ್ಕೆಯಾಗುತ್ತಿದ್ದಾರೆ. ಸಾಗರ್ ಎ. ಅವರು ತಮ್ಮ ಸಾಧನೆಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಸಾಗರ್ ಮೂಲತಃ ಕೋಲಾರ ಜಿಲ್ಲೆಯ ನೆನಮನಹಳ್ಳಿ ನಿವಾಸಿಯಾಗಿದ್ದು, ಅವರ ತಂದೆ-ತಾಯಿ ಇಬ್ಬರೂ ರೈತರು. ಸಾಗರ್ ಅವರು ಈ ಹಿಂದೆ ವಿಧಾನಸೌಧದಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ. ಏಳು ವರ್ಷಗಳ ಕಾಲ ಯುಪಿಎಸ್‌ಸಿ ಪರೀಕ್ಷೆಗೆ ಸತತವಾಗಿ ಅಧ್ಯಯನ ಮಾಡಿದ ಸಾಗರ್, ಇದು ತಮ್ಮ ಆರನೇ ಪ್ರಯತ್ನ ಎಂದು ತಿಳಿಸಿದ್ದಾರೆ. ಹಿಂದಿನ ಐದು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಹಂತವನ್ನು ಸಹ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಮೂರನ್ನೂ ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ. ಈ ಸಾಧನೆಗೆ ಕುಟುಂಬ, ಸ್ನೇಹಿತರು ಮತ್ತು ಮಾರ್ಗದರ್ಶಕರ ಬೆಂಬಲವೂ ಕಾರಣ ಎಂದು ಸಾಗರ್ ಹೇಳಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಿದ್ಧರಾಗಿರುವ ಸಾಗರ್, ಭವಿಷ್ಯದಲ್ಲಿ ಐಎಎಸ್ ಆಗುವ ಗುರಿ ಹೊಂದಿದ್ದಾರೆ.
ಬೆಂಗಳೂರು, ಮಾರ್ಚ್ 7: ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಗೃಹ ಬಳಕೆಯ ಸಿಲಿಂಡರ್ ದರ 60 ರೂಪಾಯಿ ಹೆಚ್ಚಳವಾಗಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದರ 115 ರೂಪಾಯಿ ಏರಿಕೆಯಾಗಿದೆ. ಅಲ್ಲದೆ, ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಸತತ ಮೂರು ತಿಂಗಳಿನಿಂದ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರ ಪ್ರಕಾರ, ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆಯ ಜೊತೆಗೆ ಮುಂದಿನ ದಿನಗಳಲ್ಲಿ ಸಿಲಿಂಡರ್ ಅಭಾವ ಉಂಟಾಗುವ ಸಾಧ್ಯತೆ ಇದೆ.
ಕೇಂದ್ರ ಪೆಟ್ರೋಲಿಯಂ ಖಾತೆಯು ಹೊರಡಿಸಿರುವ ಮಾರ್ಗಸೂಚಿಯಂತೆ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಸಿಲಿಂಡರ್‌ಗಳಿಗೆ ಅಭಾವ ಉಂಟಾಗಬಹುದು ಎಂದು ಡಿಸ್ಟ್ರಿಬ್ಯೂಟರ್‌ಗಳಿಂದ ಹೋಟೆಲ್ ಅಸೋಸಿಯೇಷನ್‌ಗೆ ಮಾಹಿತಿ ಲಭಿಸಿದೆ. ಬೆಂಗಳೂರು ಸೇರಿದಂತೆ ದೇಶದ 95% ಹೋಟೆಲ್‌ಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಸಿಲಿಂಡರ್ ಸಿಗದಿದ್ದರೆ ಹೋಟೆಲ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಇದರಿಂದಾಗಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು ಮತ್ತು ಹೋಟೆಲ್ ಮಾಲೀಕರಿಗೆ ದೊಡ್ಡ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸದ್ಯಕ್ಕೆ ಯಾವುದೇ ದರ ಏರಿಕೆ ನಿರ್ಧಾರ ಕೈಗೊಂಡಿಲ್ಲವಾದರೂ, ಭವಿಷ್ಯದಲ್ಲಿ ಹೊರೆ ಹೆಚ್ಚಾದರೆ ಗ್ರಾಹಕರ ಮೇಲೆ ಬೆಲೆ ಹಾಕುವ ಅನಿವಾರ್ಯತೆ ಬರಬಹುದು ಎಂದು ಕಾಮತ್ ತಿಳಿಸಿದ್ದಾರೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಯಾದಗಿರಿ, ಮಾರ್ಚ್ 07: ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ (UPSC Exam Results) ಪ್ರಕಟವಾಗುತ್ತಿದ್ದಂತೆ ಶೈಕ್ಷಣಿಕವಾಗಿ ಹಿಂದುಳಿದ ಎಂದು ಕರೆಯಲಾಗುವ ಯಾದಗಿರಿ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳು ಒಂದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಜಿಲ್ಲೆಯ ಜನರಲ್ಲಿ ಹೆಮ್ಮೆ ಮೂಡಿಸಿದ್ದಾರೆ.
ಒಂದೇ ಜಿಲ್ಲೆಯ ನಾಲ್ವರ ಸಾಧನೆ!
ಯಾದಗಿರಿ ನಗರದ ಸಂದೀಪ್ ಬಾಡದ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 82ನೇ ರ್ಯಾಂಕ್ ಪಡೆದು ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಯಾದಗಿರಿ ನಗರದ ಡಾ. ನಿವೇದಿತಾ ಬಾವಿಮನಿ 469ನೇ ರ್ಯಾಂಕ್, ಶಹಾಪುರ ನಿವಾಸಿ ಬಸವರಾಜ್ ಜವಳಿ 664ನೇ ರ್ಯಾಂಕ್ ಹಾಗೂ ಚೆನ್ನೂರು ಗ್ರಾಮದ ಚಂದ್ರಶೇಖರ್ 880ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಡಾ. ನಿವೇದಿತಾ
ಇದರ ನಡುವೆ ಡಾ. ನಿವೇದಿತಾ ಬಾವಿಮನಿ ಅವರ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಮಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಭ್ರಮಾಚರಣೆ ನಡೆಸಿದ್ದಾರೆ. ಪೋಷಕರು ಮಗಳಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರೆ, ಪೊಲೀಸರು ಸಹ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದರು. ನಿವೇದಿತಾ ಅವರ ತಂದೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ತಾಯಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೈದ್ಯೆಯಾಗಿದ್ದ ನಿವೇದಿತಾ ಮೂರು ವರ್ಷಗಳ ಹಿಂದೆ ವೈದ್ಯ ವೃತ್ತಿಯನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು. ಆರಂಭದಿಂದಲೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಕನಸು ಹೊಂದಿದ್ದ ಅವರು ಸತತ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಹಿಂದುಳಿದ ಜಿಲ್ಲೆ ಎಂಬ ಹೆಸರು ಇದ್ದರೂ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯಾಗಬೇಕು ಎಂಬ ಆಸೆಯಿದ್ದು, ಅವಕಾಶ ಸಿಕ್ಕರೆ ಜನಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ನಿವೇದಿತಾ ತಿಳಿಸಿದ್ದಾರೆ.