ವಸಾಯಿ, ಮಾರ್ಚ್ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರು, ಮಾರ್ಚ್ 31: ವಿಧಾನಸಭೆ ಬಜೆಟ್ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಳುಮೆ ಮಾಡುವ ಎತ್ತುಗಳು ಬೇಕು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ವೋಟ್ ಹಾಕಬಾರದು ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೀಗ ಅಶೋಕ್ ಕೌಂಟರ್ ಕೊಟ್ಟಿದ್ದಾರೆ.
‘ಜೋಡೆತ್ತುಗಳಲ್ಲ, ಕುಂಟೆತ್ತುಗಳು’
ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್. ಅಶೋಕ್, ಸಿದ್ದರಾಮಯ್ಯ ಮತ್ತು ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ತಿವಿದಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಹೀಗಾಗಿ ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಜಾಸ್ತಿ ಮಾಡಿದೆ. ಉಪ ಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕಲಿದ್ದು, ಜನ ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ. ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು, ಮಾ,31: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOMs) ನಷ್ಟವನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ದರ ಪರಿಷ್ಕರಣೆಗೆ ಹಸಿರು ನಿಶಾನೆ ತೋರಿಸಿದ್ದು, ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ವಿಶೇಷವೆಂದರೆ, ಈ ದರ ಏರಿಕೆಯು 2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಘೋಷಿಸಲಾಗಿದೆ. ಅಂದರೆ, ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಬಳಕೆ ಮಾಡಿರುವ ವಿದ್ಯುತ್‌ಗೆ ಬಳಕೆದಾರರು ಈಗ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಈ ಬಾಕಿ ಮೊತ್ತವನ್ನು ಬೆಸ್ಕಾಂ (BESCOM) ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಆರ್ಥಿಕ ವರ್ಷದ ಬಿಲ್‌ಗಳಲ್ಲಿ ವಸೂಲಿ ಮಾಡಲಿವೆ.
ಕೈಗಾರಿಕೆ ಮತ್ತು ಹೋಟೆಲ್, ಸಿನಿಮಾ ಹಾಲ್‌ಗಳಂತಹ ವಾಣಿಜ್ಯ ಸಂಕೀರ್ಣಗಳಿಗೆ ಗರಿಷ್ಠ ದರ ಏರಿಕೆ ಮಾಡಲಾಗಿದ್ದು, ಇದು ಉತ್ಪಾದನಾ ವೆಚ್ಚ ಮತ್ತು ಸೇವಾ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇನ್ನು ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದ ವಿದ್ಯುತ್ ಬಳಕೆಗಳು ಹೆಚ್ಚಾಗಿದೆ. ದಾಖಲೆ ಮಟ್ಟದಲ್ಲಿ ಈ ಭಾರೀ ಕರೆಂಟ್ ಉಪಯೋಗಿಸಲಾಗಿದೆ ಎಂದು ಹೇಳಿದೆ.
ಇನ್ನು ಬೆಂಗಳೂರಿನಲ್ಲಿ ಹೆಚ್ಚು ವಿದ್ಯುತ್ ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಒಂದು ಸಣ್ಣ ರಾಜ್ಯ ಬಳಸುವ ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ ಎಂಬ ಅಚ್ಚರಿಯ ವಿಚಾರವೊಂದು ಹೊರಬಂದಿದೆ. ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ.
ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ ಎಂದು ಹೇಳಲಾಗಿದೆ.
ಬಾಲಿವುಡ್‌ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ತಮಗೆ ಅಪರೂಪದ ಶ್ರವಣ ದೋಷ (Sensory Neural Nerve Hearing Loss) ಇರುವುದಾಗಿ ಅವರು ಬಹಿರಂಗಪಡಿಸಿದ್ದರು. ಆತಂಕದ ವಿಚಾರ ಏನೆಂದರೆ, ಈಗಲೂ ಅವರು ಆ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಈ ನೋವಿನ ಸುದ್ದಿಯನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರು ಹಾಡುವುದು ಕಷ್ಟ ಎಂಬಂತಾಗಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಲ್ಕಾ ಯಾಗ್ನಿಕ್ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ‘ನಾನು ಇನ್ನೂ ಆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಆದರೆ ಹಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ಪ್ರಸ್ತುತ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ. ಅವರ ಧ್ವನಿಯಲ್ಲಿ ಕೊನೆಯದಾಗಿ ಮೂಡಿಬಂದ ಹಾಡು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಂ ಕಾಲ್ಜಾ’. 1980ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಈಗ 60 ವರ್ಷ ವಯಸ್ಸು. ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಲವು ದಿನಗಳ ಹಿಂದೆ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಬೇಡಿಕೆಯ ಉತ್ತುಂಗದಲ್ಲಿ ಇದ್ದಾಗಲೇ ಅವರು ಇಂಥ ನಿರ್ಧಾರ ತೆಗೆದುಕೊಂಡರು. ಸತತವಾಗಿ ಹಿಟ್ ಹಾಡುಗಳನ್ನು ನೀಡುತ್ತಿದ್ದ ಅರಿಜಿತ್ ಅವರ ಈ ಹಠಾತ್ ನಿರ್ಧಾರ ಸಂಗೀತ ಪ್ರಿಯರಲ್ಲಿ ಬೇಸರ ತಂದಿದೆ. ಈಗ ಅಲ್ಕಾ ಯಾಗ್ನಿಕ್ ಕೂಡ ಹಾಡುವುದನ್ನು ನಿಲ್ಲಿಸಿರುವುದು ಇನ್ನಷ್ಟು ಬೇಸರ ಮೂಡಿಸಿದೆ.
ಅಲ್ಕಾ ಯಾಗ್ನಿಕ್ ಅವರು ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು, ಬೆಂಗಾಲಿ, ಪಂಜಾಬಿ ಮುಂತಾದ ಭಾಷೆಯ ಹಾಡುಗಳನ್ನು ಕೂಡ ಅವರು ಹಾಡಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅನಾರೋಗ್ಯದ ಕಾರಣ ಹಾಡಲು ಸಾಧ್ಯವಾಗುತ್ತಿಲ್ಲ.
ಮಂಗಳೂರು, (ಮಾರ್ಚ್ 31): ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ Sandeep Suicide case) ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಪತ್ನಿ ಸೌಮ್ಯಾಳ ನವರಂಗಿ ಆಟದಿಂದ ಬೇಸತ್ತು ಮದ್ವೆಯಾದ ಒಂದೇ ತಿಂಗಳಲ್ಲಿ ಪತಿ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಬೆನ್ನಲ್ಲೇ ಸೌಮ್ಯ ಶೆಟ್ಟಿ ಒಂದೊಂದೇ ಕರ್ಮಕಾಂಡಗಳು ಬಯಲಿಗೆ ಬರುತ್ತಿವೆ. ಸೌಮ್ಯ ಶೆಟ್ಟಿ ಸಾಮಾನ್ಯ ಕಲಾವಿದೆ ಅಲ್ಲ. ಆಕೆಗೆ ಈಗಾಗಲೇ ಎರಡು ಮದ್ವೆಯಾಗಿದ್ದು, ಸಂದೀಪ್ನೊಂದಿಗೆ ಮೂರನೇ ಮದ್ವೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸೌಮ್ಯ ಶೆಟ್ಟಿಯ ಮಾಜಿ ಲವರ್, ಸೌಮ್ಯಳ ನವರಂಗಿ ಆಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು, ಮಾ.31: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಘಟನೆ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್‌ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ ತುಂಬಿಸಿಕೊಂಡು ಯಾರಿಗೂ ಹೆದರದೆ ‘ಜಾಲಿಯಾಗಿ’ ಕುಡಿಯುತ್ತಿರುವ ದೃಶ್ಯ ಹಿಂಬಂದಿ ಬರುತ್ತಿದ್ದ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮತ್ತೊಂದು ಕಾರಿನಲ್ಲಿ ಚಲಿಸುತ್ತಿದ್ದ ಮಹಿಳೆಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಬೆಂಗಳೂರಲ್ಲಿ ಪೊಲೀಸರು ಇದ್ದಾರೋ ಇಲ್ಲವೋ?” ಎಂದು ಪ್ರಶ್ನಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಚಾರಿ ಪೊಲೀಸರು, ಕಾರಿನ ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ. ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಪ್ರಕರಣದಡಿ ಕ್ರಮ ಕೈಗೊಳ್ಳಲು ಮತ್ತು ವಾಹನದ ಪರವಾನಗಿ ರದ್ದುಗೊಳಿಸುವಂತೆ RTO ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನವದೆಹಲಿ, ಮಾರ್ಚ್ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲ ನಿಯಮಗಳಲ್ಲಿ ಬದಲಾವಣೆ ಇರಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್ಡ್ರಾಯಲ್, ಲಾಕರ್, ಎಫ್ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆ ಇದೆ. ಏಪ್ರಿಲ್ 1ರಿಂದ ಕೆಲ ಮಹತ್ವದ ಹಣಕಾಸು ನಿಯಮಗಳ (Financial Rules) ಬದಲಾವಣೆ ಏನೇನು ಎನ್ನುವ ವಿವರ ಇಲ್ಲಿದೆ:
ಡಿಜಿಟಲ್ ಪೇಮೆಂಟ್ ನಿಯಮಗಳು
ಆರ್ಬಿಐ ಮಾರ್ಗಸೂಚಿ ಪ್ರಕಾರ ಡಿಜಿಟಲ್ ಪೇಮೆಂಟ್ಸ್ ನಿಯಮಗಳಲ್ಲಿ ಏಪ್ರಿಲ್ 1ರಿಂದ ಕೆಲ ಬದಲಾವಣೆ ಇರಲಿದೆ. ಯುಪಿಐ ಪೇಮೆಂಟ್ಸ್, ಕಾರ್ಡ್ ಪೇಮೆಂಟ್, ವ್ಯಾಲಟ್ ಪೇಮೆಂಟ್ಗಳಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆ ಇರುತ್ತದೆ. ಒಟಿಪಿ ಜೊತೆಗೆ ಪಿನ್ ಅಥವಾ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಸೆಕ್ಯೂರಿಟಿ ಟೋಕನ್ಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ. ಒಟಿಪಿ ಇಲ್ಲದೆಯೂ ಅಥೆಂಟಿಕೇಶನ್ ಸಾಧ್ಯ. ಪಿನ್ ಮತ್ತು ಬಯೋಮೆಟ್ರಿಕ್ ಮೂಲಕ ಟ್ರಾನ್ಸಾಕ್ಷನ್ ದೃಢೀಕರಿಸಬಹುದು. ಯಾವುದಾದರೂ ಎರಡು ಫ್ಯಾಕ್ಟರ್ ದೃಢೀಕರಣವನ್ನು ಆಯ್ದುಕೊಳ್ಳಬಹುದು.
ಈ ಮೊದಲು ನೀವು ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ದಾಖಲೆ ಕೊಟ್ಟರೆ ಸಾಕಿತ್ತು. ಆದರೆ, ಏಪ್ರಿಲ್ 1ರಿಂದ ನಿಯಮ ಕಠಿಣಗೊಳ್ಳುತ್ತದೆ. ಪ್ಯಾನ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಜೊತೆಗೆ ಇನ್ನೊಂದು ಹೆಚ್ಚುವರಿ ದಾಖಲೆ ಸಲ್ಲಿಸಬೇಕಾಗುತ್ತದೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಆಧಾರ್ನಲ್ಲಿರುವಂತೆಯೇ ಸ್ಪೆಲ್ಲಿಂಗ್ ಸಮೇತ ಹೆಸರು ಪ್ಯಾನ್ನಲ್ಲಿ ಇರಬೇಕು. ಇಲ್ಲದಿದ್ದರೆ ಅರ್ಜಿ ರಿಜೆಕ್ಟ್ ಆಗಬಹುದು.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) 2026-27ರ ಹಣಕಾಸು ವರ್ಷಕ್ಕೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ನ ದರ ಪರಿಷ್ಕರಣೆ ಮಾಡಿದೆ. ಏಪ್ರಿಲ್ 1ರಿಂದ ಪಾಸ್ ತುಸು ದುಬಾರಿಯಾಗಲಿದೆ. ಈಗ 3,000 ರೂ ಇರುವ ಫಾಸ್ಟ್ಯಾಗ್ ವಾರ್ಷಿಕ ಪಾಸ್ನ ಬೆಲೆ 3,075 ರೂಗೆ ಏರಲಿದೆ.
ಡಿಜಿಟಲ್ ಪೇಮೆಂಟ್ ಪಾವತಿ ಮತ್ತು ಪ್ಲಾಟ್ಫಾರ್ಮ್ಗಳ ನಿರ್ವಹಣೆ ವಿಚಾರದಲ್ಲಿ ಆರ್ಬಿಐ ಮಾರ್ಗಸೂಚಿ ಗಮನಾರ್ಹವೆನಿಸಿದೆ. ಡಿಜಿಟಲ್ ಇಕೋಸಿಸ್ಟಂನಲ್ಲಿರುವ ಸಂಸ್ಥೆಗಳು ಸೆಕ್ಯೂರಿಟಿ ಸ್ಟ್ಯಾಂಡರ್ಡ್ಗಳನ್ನು ಸರಿಯಾಗಿ ಪಾಲಿಸಬೇಕು. ಸಿಸ್ಟಂ ದೋಷದಿಂದ ಯಾವುದಾದರೂ ವಂಚನೆಯಾದಲ್ಲಿ ಗ್ರಾಹಕರಿಗೆ ಬ್ಯಾಂಕುಗಳೇ ಪರಿಹಾರ ನೀಡಬೇಕು. ಗ್ರಾಹಕರ ವ್ಯಾಜ್ಯ ಪರಿಹಾರ ವ್ಯವಸ್ಥೆ ವೇಗವಾಗಿ ಆಗಬೇಕು. ಇವೇ ಮುಂತಾದ ನಿಯಮಗಳನ್ನು ಆರ್ಬಿಐ ರೂಪಿಸಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಗಿಂತಲೂ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಎಲ್ಲರ ಮಿಷನ್ ಆಗಿದೆ. ಈ ನಿಟ್ಟಿನಲ್ಲಿ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಎಂಬ ಸಂದೇಶವನ್ನು ದೇಶಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಎಲ್ಲರಿಗೂ ಉತ್ತಮ ಬಾಯಿ ಆರೋಗ್ಯವನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದು ಸೆನ್ಸೋಡೈನ್‌ನ ತಡೆಗಟ್ಟುವ ಆರೋಗ್ಯ ರಕ್ಷಣೆಯ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುವ ಮೂಲಕ ಈ ಕ್ರಮವನ್ನು ಪ್ರಜಾಸತ್ತಾತ್ಮಕಗೊಳಿಸಲಾಗುತ್ತಿದೆ, ಇದರಿಂದ ಪ್ರತಿಯೊಬ್ಬರೂ ತಮ್ಮ ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಬೆಂಗಳೂರು, (ಮಾರ್ಚ್ 31): ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ (Bengaluru) ತಿಗಳರಪಾಳ್ಯದಲ್ಲಿ ನಡೆದಿದೆ. ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್(38) ಹತ್ಯೆಯಾದ ವ್ಯಕ್ತಿ. ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿ ಯಾದಗಿರಿ ಮೂಲದ ಹನುಮಂತಪ್ಪ, ನಿನ್ನೆ (ಮಾರ್ಚ್ 30) ಮ್ಯಾನೇಜರ್ ರಾಹುಲ್ ಗೆ ಚಾಕುವಿನಿಂದ ಇರಿದಿದ್ದ. ಇದರಿಂದ ಗಾಯಗೊಂಡ ರಾಹುಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ರಾಹುಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹನುಮಂತಪ್ಪ ಎನ್ನುವಾತ ಬೆಂಗಳೂರಿನ ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ, ಏಕಾಏಕಿ ಹನುಮಂತಪ್ಪನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಕೋಪಗೊಂಡ ಹನುಮಂತಪ್ಪ, ನಿನ್ನೆ(ಮಾರ್ಚ್ 30) ಕಂಪನಿಯಲ್ಲಿದ್ದ ಮ್ಯಾನೇಜರ್ ರಾಹುಲ್ಗೆ ಸುಮಾರು 10 ಬಾರಿ ಚಾಕುವಿನಿಂದ ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ರಾಹುಲ್, ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೇ ಮ್ಯಾನೇಜರ್ ರಾಹುಲ್ ಮಂಗಳವಾರ ಮೃತಪಟ್ಟಿದ್ದಾರೆ.
ಮೃತ ರಾಹುಲ್ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ರಾಜಗೋಪಾಲ್ ನಗರ ಪೊಲೀಸರು, ಯಾದಗಿರಿ ಮೂಲಕದ ಆರೋಪಿ ಹನುಮಂತಪ್ಪನನ್ನ ಬಂಧಿಸಿದ್ದಾರೆ.
ವಿಜಯಪುರ, ಮಾರ್ಚ್ 31: ಸಾರಿಗೆ ಬಸ್, ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್ ಕೂಡ ಬೆಂಕಿಗೆ ಆಹುತಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಭೀಕರ ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಮೃತ ಬೈಕ್ ಸವಾರ ಯಾರೆಂಬ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಆ ಬಗ್ಗೆ ತನಿಖೆಗಿಳಿದ ಪೊಲೀಸರು ಮೃತನನ್ನು ಅಭಿಷೇಕ ನಾಗರಾಳ ಎಂದು ಖಚಿತಪಡಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಮೇಲ್ನೋಟಕ್ಕೆ ಇದೊಂದು ಅಪಘಾತ ಎಂಬಂತೆ ಕಂಡುಬಂದರೂ ಪ್ರೀತಿ ವಿಚಾರಕ್ಕೆ ಅಭಿಷೇಕ್ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಜನಾ ಎಂಬ ಯುವತಿಯನ್ನು ನನ್ನಿಂದ ದೂರ ಮಾಡಿದ್ದಾರೆ. ಹಾಗಾಗಿ ನಾನು ಬದುಕಲ್ಲ ಎಂದು ವಿಡಿಯೋ ಮಾಡಿ ಅದನ್ನು ಆತ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದ. ಹೀಗಾಗಿ ಬೇಕಂತಲೇ ಬಸ್ಗೆ ಬೈಕ್ ಡಿಕ್ಕಿ ಹೊಡೆದಿರುವ ಅನುಮಾನ ಬಂದಿದೆ. ಸಂಜನಾಳನ್ನು ನನ್ನಿಂದ ದೂರು ಮಾಡಿದವರೇ ನನ್ನ ಸಾವಿಗೆ ಕಾರಣ. ವೀರೇಶ್ ನಂದೂರ್, ಚೈತ್ರಾ ನಂದೂರ್, ಸಂಬಂಧಿ ನವೀನ್‌ಕುಮಾರ್ ಪಾಟೀಲ್ ಅವರೇ ಆಕೆಯನ್ನು ತನ್ನಿಂದ ದೂರ ಮಾಡಿದ್ದು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಸಾಯುತ್ತೇನೆ ಎಂದು ಅಭಿಷೇಕ್ ವಿಡಿಯೋ ಪೋಸ್ಟ್ ಮಾಡಿದ್ದ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಆ ಬಳಿಕವೇ ಗೊತ್ತಾಗಬೇಕಿದೆ.