ರಾಜ್ಪಾಲ್ ಯಾದವ್ (Rajpal Yadav) ಅವರು ಸಾಲ ಮರುಪಾವತಿ ಮಾಡದಿರುವ, ಚೆಕ್ ಬೌನ್ಸ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾಗಿದ್ದು ಜೈಲುವಾಸಿಯಾಗಿದ್ದರು. ಆದರೆ ಸಹೋದರನ ಮಗಳ ಮದುವೆಗಾಗಿ ಒಂದು ತಿಂಗಳ ಕಾಲ ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದು, ಇಂದು ಡಿಜಿಟಲ್ ವೇದಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್ಪಾಲ್ ಯಾದವ್ ಅವರು ತಾವು ಶಿಕ್ಷೆ ಅನುಭವಿಸುತ್ತಿರುವ ಚೆಕ್ ಬೌನ್ಸ್ ಪ್ರಕರಣ, ಸಾಲ ಇನ್ನೂ ಇತರೆ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿ…
ಬೆಂಗಳೂರು, ಫೆಬ್ರವರಿ 28: ಮಳೆ ನೀರಿನ ಇಂಗು ಗುಂಡಿಗೆ ಮೂರು ಬಲಿ (death) ಆಗಿರುವಂತಹ ಘಟನೆ ನಗರದ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ನಡೆದಿದೆ. ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಮೃತರು. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆಯೇ ಇಂಗು ಗುಂಡಿ ನಿರ್ಮಿಸಿದ್ದರೂ ಬಳಸುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದವು. ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ.
ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಮೂರ್ಛೆಹೋಗಿದ್ದಾನೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೂವರು ಮೃತಪಟ್ಟಿದ್ದಾರೆ.
ಸಾರಿಗೆ ಬಸ್ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ
ಸಾರಿಗೆ ಬಸ್ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಬಸವರಾಜ್(21) ಮೃತ ವಿದ್ಯಾರ್ಥಿ. ಆಟೋದಲ್ಲಿ ಹೋಗ್ತಿದ್ದಾಗ ಬಸವರಾಜ್ ಆಯತಪ್ಪಿ ಕೆಳಗೆ ಬಿದಿದ್ದಾರೆ. ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದ. ರಾಯಚೂರು ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಡಿವೈಡರ್ಗೆ ಕಾರು ಡಿಕ್ಕಿಯಾಗಿ ಓರ್ವ ಸಾವು, ಮೂವರಿಗೆ ಗಾಯ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗುಲಗಳಲೆ ಬಳಿ ಡಿವೈಡರ್ಗೆ ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ. ತಮಿಳುನಾಡು ಮೂಲದ ಧನುಷ್(25) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಗಂಭೀರ ಗಾಯಗೊಂಡ ಮೂವರಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ನೇಹಿತರ ಜೊತೆ ಕಾರಿನಲ್ಲಿ ಧರ್ಮಸ್ಥಳಕ್ಕೆ ಧನುಷ್ ಹೊರಟಿದ್ದರು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಾರ್ಚ್ 2026ರಲ್ಲಿ ಧನು ರಾಶಿಯವರಿಗೆ ಗ್ರಹಗತಿಗಳ ಸಂಚಾರವು ಜೀವನದ ವಿವಿಧ ಆಯಾಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಧನು ರಾಶಿಯ ಅಧಿಪತಿ ಗುರುವು ಈ ಸಮಯದಲ್ಲಿ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ವಿಶೇಷ ಶಕ್ತಿಯನ್ನು ನೀಡುತ್ತದೆ.
ಧನು ರಾಶಿ:
ಮಾರ್ಚ್ 2026ರ ದಶಫಲಗಳ ಸಮೀಕ್ಷೆಯಲ್ಲಿ
ಧನು ರಾಶಿಯವರಿಗೆ ಈ ತಿಂಗಳು ಸಾಮಾಜಿಕ ಗೌರವ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುವ ಲಕ್ಷಣಗಳಿವೆ. ಆದರೆ, ನಾಲ್ಕನೇ ಮನೆಯಲ್ಲಿರುವ ಶನಿಯ ಪ್ರಭಾವವು ಸ್ವಲ್ಪ ಎಚ್ಚರಿಕೆಯನ್ನು ಬಯಸುತ್ತದೆ.
ಉತ್ತಮ ಫಲ ನೀಡುವ ದಶೆಗಳು
ಈ ದಶೆಗಳು ನಡೆಯುತ್ತಿದ್ದರೆ ನಿಮಗೆ ಅದೃಷ್ಟ ಮತ್ತು ಯಶಸ್ಸು ಒದಗಿ ಬರಲಿದೆ.
ಗುರು ದಶೆ :
ಧನು ರಾಶಿಯವರಿಗೆ ಗುರುವು ಲಗ್ನಾಧಿಪತಿಯಾಗಿದ್ದು, ಈ ಸಮಯದಲ್ಲಿ ಏಳನೇ ಮನೆಯಲ್ಲಿ ಇರುತ್ತಾನೆ. ಈ ದಶೆ ನಡೆಯುತ್ತಿದ್ದರೆ ಅವಿವಾಹಿತರಿಗೆ ವಿವಾಹ ಯೋಗ, ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭ ಮತ್ತು ಸಮಾಜದಲ್ಲಿ ದೊಡ್ಡ ಮಟ್ಟದ ಹೆಸರು ಸಿಗಲಿದೆ.
ಸೂರ್ಯ ದಶೆ :
ಮಾರ್ಚ್ ಮಧ್ಯಭಾಗದವರೆಗೆ ಸೂರ್ಯನು ಅನುಕೂಲಕರ ಸ್ಥಾನದಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಜಯ ಮತ್ತು ತಂದೆಯ ಕಡೆಯಿಂದ ಆರ್ಥಿಕ ಸಹಾಯ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಇದು ಸುವರ್ಣ ಕಾಲ.
ಮಧ್ಯಮ ಫಲ ನೀಡುವ ದಶೆಗಳು
ಈ ದಶೆಗಳು ನಡೆಯುತ್ತಿದ್ದರೆ ಫಲಿತಾಂಶಗಳು ಮಿಶ್ರಿತವಾಗಿರುತ್ತವೆ. ಕೆಲಸಗಳು ಸ್ವಲ್ಪ ವಿಳಂಬವಾಗಿ ಪೂರ್ಣಗೊಳ್ಳುತ್ತವೆ.
ಬುಧ ದಶೆ :
ಬುಧನು ನಿಮ್ಮ ಹತ್ತನೇ ಮನೆಯ ಅಧಿಪತಿಯಾಗಿದ್ದರೂ, ಮಾರ್ಚ್ ಆರಂಭದಲ್ಲಿ ವಕ್ರಗತಿಯಲ್ಲಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಗೊಂದಲಗಳು ಉಂಟಾಗಬಹುದು. ಮಾತಿನ ಮೇಲೆ ಸಂಯಮವಿದ್ದರೆ ವ್ಯಾಪಾರದಲ್ಲಿ ಸಾಧಾರಣ ಲಾಭ ಗಳಿಸಬಹುದು.
ಶುಕ್ರ ದಶೆ :
ಐಷಾರಾಮಿ ಜೀವನದ ಮೇಲೆ ಆಸೆ ಹೆಚ್ಚಾಗಲಿದೆ. ಶುಕ್ರನ ದಶೆಯು ಹಣಕಾಸಿನ ಹರಿವನ್ನು ನೀಡಿದರೂ, ಅನಗತ್ಯ ಖರ್ಚುಗಳನ್ನು ಸಮತೋಲನ ಮಾಡುವುದು ಸವಾಲಾಗಬಹುದು. ಪ್ರೇಮ ಜೀವನದಲ್ಲಿ ಮಿಶ್ರ ಪ್ರತಿಕ್ರಿಯೆ ಇರುತ್ತದೆ.
ಅಧಮ ಅಥವಾ ಎಚ್ಚರಿಕೆಯ ದಶೆಗಳು
ಈ ದಶೆಗಳು ನಡೆಯುತ್ತಿರುವಾಗ ಮಾನಸಿಕ ಮತ್ತು ದೈಹಿಕ ಜಾಗರೂಕತೆ ಅತ್ಯಗತ್ಯ.
ಶನಿ ದಶೆ :
ಧನು ರಾಶಿಯವರಿಗೆ ಶನಿಯು ಪ್ರಸ್ತುತ ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದನ್ನು ಅರ್ಧಾಷ್ಟಮ ಶನಿ ಎನ್ನಲಾಗುತ್ತದೆ. ಶನಿ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ ಮನೆಯಲ್ಲಿ ಅಶಾಂತಿ, ತಾಯಿಯ ಆರೋಗ್ಯದಲ್ಲಿ ಏರುಪೇರು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ಉಂಟಾಗಬಹುದು.
ರಾಹು ದಶೆ :
ರಾಹುವು ನಾಲ್ಕನೇ ಮನೆಯಲ್ಲಿ ಶನಿಯೊಂದಿಗೆ ಸೇರುವುದರಿಂದ ಮಾನಸಿಕ ನೆಮ್ಮದಿಗೆ ಭಂಗ ಬರಬಹುದು. ವಿನಾಕಾರಣ ಭಯ ಅಥವಾ ಗಾಬರಿ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಸ ಮನೆ ಖರೀದಿಸುವ ನಿರ್ಧಾರವನ್ನು ಮುಂದೂಡುವುದು ಉತ್ತಮ.
ಗುರುವು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ ವಿಷ್ಣುವಿನ ಆರಾಧನೆ ನಿಮಗೆ ಆರ್ಥಿಕ ಮತ್ತು ಮಾನಸಿಕ ಇನ್ನಷ್ಟು ಸ್ಥಿರತೆ ನೀಡುತ್ತದೆ. ಪ್ರತಿ ಶನಿವಾರ ಹನುಮಂತನಿಗೆ ಅಥವಾ ಶನಿದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ. ಇದು ಅರ್ಧಾಷ್ಟಮ ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಗುರುವಿನ ಕೃಪೆಗೂ ಪಾತ್ರರಾಗಲು ಸಾಧ್ಯ.
ಇಸ್ರೇಲ್ ಮತ್ತು ಅಮೆರಿಕದ ಭೀಕರ ವೈಮಾನಿಕ ದಾಳಿಯಿಂದಾಗಿ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಈಗ ತೀವ್ರ ಆತಂಕದಲ್ಲಿದ್ದಾರೆ. ವಿಶೇಷವಾಗಿ ತೆಹ್ರಾನ್‌ನಲ್ಲಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾರತ ಸರ್ಕಾರಕ್ಕೆ ತುರ್ತು ತೆರವು ಕಾರ್ಯಾಚರಣೆ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಸರಣಿ ವೈಮಾನಿಕ ದಾಳಿಗಳು ನಡೆಯುತ್ತಿವೆ. ನಾವು ಇರುವ ಜಾಗದ ಹತ್ತಿರವೇ ಭಾರಿ ಸ್ಫೋಟದ ಶಬ್ದಗಳು ಕೇಳಿಸುತ್ತಿವೆ. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿದೆ, ಆಹಾರ ಮತ್ತು ನೀರಿಗೆ ತೊಂದರೆಯಾಗುತ್ತಿದೆ. ನಾವು ಇಲ್ಲೇ ಸಿಲುಕಿಕೊಂಡಿದ್ದೇವೆ, ದಯವಿಟ್ಟು ಭಾರತ ಸರ್ಕಾರ ನಮ್ಮನ್ನು ಬೇಗ ಇಲ್ಲಿಂದ ಕರೆದೊಯ್ಯಲಿ.” ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್, ಇರಾನಿನ ಮೇಲೆ ದಾಳಿ ಮಾಡಿದ್ದು ಯದ್ಧ ಭೀತಿ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಭಾರತದ ಅನೇಕ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ವಿಶೇಷವಾಗಿ ಮಧ್ರಪ್ರಾಚ್ಯ ದೇಶಗಳಿಗೆ ಹೋಗಬೇಕಿದ್ದ ಎಲ್ಲ ವಿಮಾನಗಳನ್ನು ಸಹ ವಿಮಾನಯಾನ ಸಂಸ್ಥೆಗಳು ರದ್ದು ಮಾಡಿದ್ದು, ಇದರಿಂದಾಗಿ ವಿದೇಶಕ್ಕೆ ತೆರಳಿದ್ದ ಸಾವಿರಾರು ಭಾರತೀಯರು ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿಕೊಂಡಿದ್ದಾರೆ. ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಸಹ ವಿದೇಶದಲ್ಲಿ ಸಿಲುಕಿಕೊಂಡಿದ್ದು, ವಿಮಾನ ನಿಲ್ದಾಣದಿಂದ ವಿಡಿಯೋ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.
ಡ್ರೋನ್ ಪ್ರತಾಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿದ್ದಾರೆ. ಇಂದು ರಾತ್ರಿ ಅವರು ಬೆಂಗಳೂರಿಗೆ ವಾಪಸ್ ಹೊರಡಬೇಕಿತ್ತಂತೆ ಅದಕ್ಕಾಗಿ ಟಿಕೆಟ್ ಸಹ ಬುಕ್ ಮಾಡಿದ್ದರಂತೆ, ಆದರೆ ಯುದ್ಧ ಭೀತಿಯಿಂದಾಗಿ ಭಾರತದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದೇ ಕಾರಣಕ್ಕೆ ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ಡ್ರೋನ್ ಪ್ರತಾಪ್ ಹೇಳಿದ್ದಾರೆ.
‘ಮುಂದಿನ 12 ಗಂಟೆಗಳ ಕಾಲದ ಎಲ್ಲ ವಿಮಾನ ಸೇವೆಗಳನ್ನು ರದ್ದು ಮಾಡಿರುವುದಾಗಿ ಹೇಳುತ್ತಿದ್ದಾರೆ, 12 ಗಂಟೆ ಆದ ಬಳಿಕ ಹೊಸ ಅಪ್ಡೇಟ್ ಕೊಡುತ್ತಾರಂತೆ. ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅನೌನ್ಸ್ಮೆಂಟ್ ಮಾಡುತ್ತಿದ್ದಾರೆ’ ಎಂದಿರುವ ಡ್ರೋನ್ ಪ್ರತಾತ್, ಅಲ್ಲಿ ವಿಮಾನಗಳು ಕ್ಯಾನ್ಸಲ್ ಆಗಿರುವ ದೊಡ್ಡ ಪಟ್ಟಿಯನ್ನು ವಿಡಿಯೋನಲ್ಲಿ ತೋರಿಸಿದ್ದಾರೆ. ಮುಂದಿನ ಅರ್ಧದಿನ ಡ್ರೋನ್ ಪ್ರತಾಪ್ ಮತ್ತು ಭಾರತಕ್ಕೆ ಬರಲು ಅಣಿಯಾಗಿದ್ದ ಹಲವಾರು ಮಂದಿ ವಿಮಾನ ನಿಲ್ದಾಣದಲ್ಲಿಯೇ ಕಳೆಯಬೇಕಿದೆ.
ಕಳೆದ ಜನವರಿಯಲ್ಲಿ ವಿಡಿಯೋ ಮಾಡಿದ್ದ ಡ್ರೋನ್ ಪ್ರತಾಪ್, ತಮ್ಮ ಡ್ರೋನಾರ್ಕ್ ಕಂಪೆನಿಯನ್ನು ದುಬೈನಲ್ಲಿ ನೊಂದಣಿ ಮಾಡಿಸಿದ್ದಾಗಿ ಹೇಳಿದ್ದರು. ಇತ್ತೀಚೆಗೆ ದುಬೈಗೆ ಹೋಗಿದ್ದ ಡ್ರೋನ್ ಪ್ರತಾಪ್ ಅಲ್ಲಿ ತಮ್ಮ ಬೆಂಬಲಿಗರೊಬ್ಬರನ್ನು ಭೇಟಿಯಾಗಿ ಅವರಿಗೆ ಉಡುಗೊರೆ ನೀಡಿದ್ದರು. ಬಳಿಕ ಅಲ್ಲಿನ ಫಾರಂ ಒಂದರಲ್ಲಿ ಹಣ್ಣು ಕೃಷಿ ನೋಡಿ, ಮಾಹಿತಿಯನ್ನು ವ್ಲಾಗ್ನಲ್ಲಿ ಹಂಚಿಕೊಂಡಿದ್ದರು. ಅಲ್ಲಿನ ಕನ್ನಡಿಗರ ಹೋಟೆಲ್ಗೆ ಭೇಟಿ ನೀಡಿ ಮುದ್ದೆ ಸಹ ಮಾಡಿದ್ದರು. ಆದರೆ ಇದೀಗ ವಾಪಸ್ ಬೆಂಗಳೂರಿಗೆ ಬರುವ ಸಮಯದಲ್ಲಿ ಅವರ ವಿಮಾನ ರದ್ದಾಗಿ ಅಬುದಾಬಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.
ಗದಗ, ಫೆಬ್ರವರಿ 28: ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಮಾದರಿ ಕಾರ್ಯ ಮಾಡಿದ್ದಾರೆ. ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದ ನಿರ್ಮಾಣ ಕಾಮಗಾರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಸುಮಾರು 850 ಮಹಿಳೆಯರು ಸ್ವಯಂಪ್ರೇರಣೆಯಿಂದ ಈ ದೇಣಿಗೆ ಸಂಗ್ರಹದಲ್ಲಿ ಭಾಗವಹಿಸಿದ್ದಾರೆ. ನಾಲ್ಕು ದಿನದಲ್ಲಿ 2 ಲಕ್ಷ 50 ಸಾವಿರ ರೂ ಸಂಗ್ರಹಿಸಿದ್ದಾರೆ. ದೇವಸ್ಥಾನದ ಕಟ್ಟಡ ಕಾಮಗಾರಿಯು ಹಣಕಾಸಿನ ತೊಂದರೆಯಿಂದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಕೆಲಸವನ್ನು ಪುನರಾರಂಭಿಸಲು ಮಹಿಳೆಯರು ನಿರ್ಧರಿಸಿದ್ದಾರೆ. ದೇವಾಲಯ ಸಂಪೂರ್ಣಗೊಳ್ಳುವವರೆಗೂ ಅಗತ್ಯಬಿದ್ದರೆ ಮತ್ತಷ್ಟು ದೇಣಿಗೆ ನೀಡುವುದಾಗಿ ಹೇಳಿದ್ದಾರೆ.
ಕಾಕಿನಾಡ, ಫೆಬ್ರವರಿ 28: ಆಂಧ್ರದ ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 21 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಘಟನೆಯ ಕುರಿತು ಆಂಧ್ರದ (Andhra Pradesh) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ವಿಜಯನಗರದ ಉನ್ನತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚಂದ್ರಬಾಬು ಮಾತನಾಡಿದರು. ಅಪಘಾತದ ಕಾರಣಗಳ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಂದ ವಿಚಾರಿಸಿದರು.
ಸ್ಫೋಟದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳೀಯರು ಕೂಡ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಪಟಾಕಿಗಳನ್ನು ತಯಾರಿಸುವಾಗ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದ ಪರಿಣಾಮವಾಗಿ ಕಾರ್ಖಾನೆಯ ಬಳಿಯ ಕಟ್ಟಡಗಳು ಸಹ ನಾಶವಾದವು.
VIDEO | Kakinada: Andhra Pradesh CM N Chandrababu Naidu (@ncbn) visits firecrackers explosion site Vetlapalem village in Samarlakota.
21 dead and 8 critically injured in firecracker unit explosion, which occurred earlier today.
ಅಪಘಾತ ಸಂಭವಿಸಿದ ಸೂರ್ಯ ಪಟಾಕಿ ಕಾರ್ಖಾನೆಯಲ್ಲಿ ಸುಮಾರು 30 ಜನರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ತಿಳಿಸಿದರು. ಈ ಹಠಾತ್ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯ ಪಟಾಕಿ ತಯಾರಕರ ಪ್ರಾಣಹಾನಿಗೆ ಸಿಎಂ ಚಂದ್ರಬಾಬು ದುಃಖ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 213 ರನ್ ಕಲೆಹಾಕಿದೆ. ತಂಡವನ್ನು 200 ರನ್ಗಳ ಗಡಿ ದಾಟಿಸುವಲ್ಲಿ ಆರಂಭಿಕರ ಪಾತ್ರ ಪ್ರಮುಖವಾಗಿತ್ತು. ಅದರಲ್ಲೂ ಈ ನಿರ್ಣಾಯಕ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್ ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ಮುರಿದರು.
ಈ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್, ತಮ್ಮ ಇನ್ನಿಂಗ್ಸ್ನಲ್ಲಿ 60 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಈ ಮೂಲಕ ಈ ಟಿ20 ವಿಶ್ವಕಪ್ನಲ್ಲಿ ಎರಡನೇ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು.
ಈ ಪಂದ್ಯಕ್ಕೂ ಮುನ್ನ ಲೀಗ್ ಹಂತದಲ್ಲಿ ನಮೀಬಿಯಾ ವಿರುದ್ಧವೂ ಸಾಹಿಬ್ಜಾದಾ ಫರ್ಹಾನ್ ಶತಕ ಬಾರಿಸಿದ್ದರು. ಈ ಮೂಲಕ ಒಂದು ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಸಾಹಿಬ್ಜಾದಾ ಫರ್ಹಾನ್ ಪಾಲಾಗಿದೆ.
ಈ ಶತಕದ ಜೊತೆಗೆ ಇದೇ ಪಂದ್ಯದಲ್ಲಿ 37 ರನ್ ಪೂರ್ಣಗೊಳಿಸಿದ ಕೂಡಲೇ ಸಾಹಿಬ್ಜಾದಾ ಫರ್ಹಾನ್, ಒಂದು ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು. 12 ವರ್ಷಗಳ ಹಿಂದೆ 2014 ರ ವಿಶ್ವಕಪ್ನಲ್ಲಿ ಕೊಹ್ಲಿ ಆಡಿದ ಆರು ಇನ್ನಿಂಗ್ಸ್ಗಳಲ್ಲಿ 319 ರನ್ ಗಳಿಸಿದ್ದರು. ಈಗ, ಈ ದಾಖಲೆ ಪಾಕಿಸ್ತಾನಿ ಬ್ಯಾಟ್ಸ್ಮನ್ ಖಾತೆಗೆ ಸೇರಿದೆ.
ಇನ್ನು ಇದೇ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಫರ್ಹಾನ್ ಮತ್ತು ಫಖರ್ ಜಮಾನ್ ಮೊದಲ ವಿಕೆಟ್ಗೆ 176 ರನ್ಗಳ ಜೊತೆಯಾಟವನ್ನಾಡಿದರು. ಇದು ಟಿ20 ವಿಶ್ವಕಪ್ನಲ್ಲಿ ಇದುವರೆಗಿನ ಅತ್ಯಧಿಕ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಕಿವೀಸ್ನ ಆರಂಭಿಕರಾದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಮೊದಲ ವಿಕೆಟ್ಗೆ 175 ರನ್ ಬಾರಿಸಿದ್ದರು.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಪರಸ್ಪರ ‘ಥುಳಿಯುವ’ ಸಂಸ್ಕೃತಿ ಹೆಚ್ಚಾದಂತಿದೆ. ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿಯೂ ನಡೆಯುವ ಪತ್ರಿಕಾಗೋಷ್ಠಿಗಳಲ್ಲಿ ಈ ರೀತಿಯ ಮಾತುಗಳು ಸಾಮಾನ್ಯ ಆಗಿಬಿಟ್ಟಿವೆ. ‘ನಮ್ಮ ಸಿನಿಮಾದ ವಿರುದ್ಧ ಪಿತೂರಿ ನಡೆಯುತ್ತಿದೆ, ನಮ್ಮನ್ನು ಥುಳಿಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂಬ ಮಾತುಗಳು ಪದೇ ಪದೇ ಕೇಳಲು ಸಿಗುತ್ತಿವೆ. ಇದು ಸತ್ಯವೋ ಅಥವಾ ತಾವು ಸಂತ್ರಸ್ತರು ಎಂದು ತೋರಿಸಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವೋ ತಿಳಿಯದು. ಇದೀಗ ಧನ್ವೀರ್ ಗೌಡ ಅವರು ಸಹ ಇಂಥಹುದೇ ಮಾತುಗಳನ್ನಾಡಿದ್ದಾರೆ.
ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾ ನಿನ್ನೆ ಸಂಜೆ ಬಿಡುಗಡೆ ಆಗಿದೆ. ತಾಂತ್ರಿಕ ಕಾರಣಗಳಿಂದ ಸಿನಿಮಾದ ಮೊದಲೆರಡು ಶೋಗಳು ರದ್ದಾಗಿದ್ದವು, ಸಂಜೆ ವೇಳೆಗೆ ಸಿನಿಮಾ ಬಿಡುಗಡೆ ಆಯ್ತು. ಮೊದಲ ದಿನ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಯೇ ದೊರಕಿದೆ. ನಿನ್ನೆ ಚಿತ್ರಮಂದಿರ ಭೇಟಿ ವೇಳೆ ಮಾತನಾಡಿದ ಧನ್ವೀರ್ ಗೌಡ, ಕೆಲವರು ತಮ್ಮ ಸಿನಿಮಾದ ವಿರುದ್ಧ ಪಿತೂರಿ ನಡೆಸಿದ್ದಾರೆಂದು, ಅಂಥಹವರಿಂದಲೇ ತಮ್ಮ ಸಿನಿಮಾದ ಮೊದಲ ಎರಡು ಶೋಗಳು ರದ್ದಾಗಿವೆ ಎಂದು ಹೇಳಿದರು.
‘ಹಯಗ್ರೀವ’ ಸಿನಿಮಾದ ನಿರ್ಮಾಪಕರು ಇತ್ತೀಚೆಗೆ ಮಾತನಾಡಿ, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡಲೆಂದೇ ವಾಟ್ಸ್ ಆಫ್ ಗ್ರೂಪ್ ರಚಿಸಲಾಗಿದೆ ಎಂದಿದ್ದರು. ಈ ಬಗ್ಗೆಯೂ ಮಾತನಾಡಿದ ಧನ್ವೀರ್, ಪರೋಕ್ಷವಾಗಿ ಟಾಂಗ್ ನೀಡುತ್ತಾ, ‘ನಮ್ಮ ಮೇಲೆ ಲವ್ ಜಾಸ್ತಿ ಆಗಿದೆ. ಆದರೆ ನಮ್ಮ ಪ್ರೀತಿಯನ್ನು ನಾವು ಮುಂದಿನ ದಿನಗಳಲ್ಲಿ ತೋರಿಸ್ತೀವಿ’ ಎಂದು ಡೈಲಾಗ್ ಹೊಡೆದರು.
‘ಥುಳಿಯುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಆ ದೇವರು ಬಿಟ್ಟರೆ ನಮ್ಮನ್ನು ಇನ್ಯಾರೂ ಸಹ ಥುಳಿಯಲು ಆಗಲ್ಲ’ ಎಂದ ಧನ್ವೀರ್ ಗೌಡ, ಮುಂದಿನ ದಿನಗಳಲ್ಲಿ ವಿಶೇಷ ಪತ್ರಿಕಾಗೋಷ್ಠಿ ಮಾಡಿ, ತಮ್ಮ ಸಿನಿಮಾದ ವಿರುದ್ಧ ತಮ್ಮ ವಿರುದ್ಧ ನಡೆದ ಪಿತೂರಿಯ ಪೂರ್ಣ ಮಾಹಿತಿ ಹಂಚಿಕೊಳ್ಳುವುದಾಗಿ ಸಹ ಹೇಳಿದರು.
‘ಹಯಗ್ರಿವ’ ಸಿನಿಮಾನಲ್ಲಿ ಧನ್ವೀರ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಗಿಲ್ಲಿ ನಟ ಹಾಸ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಘುಕುಮಾರ್, ಸಿನಿಮಾನಲ್ಲಿ ಧನ್ವೀರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರಕ್ಕಾಗಿ ಅವರು ಸಿಕ್ಸ್ಪ್ಯಾಕ್ ಸಹ ಮಾಡಿದ್ದರಂತೆ.
ನವದೆಹಲಿ, ಫೆಬ್ರವರಿ 28: ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಇಸ್ರೇಲ್ ದೇಶಗಳು ಇರಾನ್ (Iran) ಮೇಲೆ ಜಂಟಿಯಾಗಿ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಎರಡೂ ಕಡೆಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಗೆಹರಿಸಲು ‘ಮಾತುಕತೆ ಮತ್ತು ರಾಜತಾಂತ್ರಿಕತೆ’ಗೆ ಭಾರತ ಕರೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿವೆ. ಅವರು ಜಾಗರೂಕರಾಗಿರಲು ಸೂಚಿಸಲಾಗಿದೆ. ಭಾರತೀಯ ನಾಗರಿಕರು ಸ್ಥಳೀಯ ಭದ್ರತಾ ಮಾರ್ಗದರ್ಶನವನ್ನು ಅನುಸರಿಸಬೇಕು ಮತ್ತು ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಅವರು ಹೇಳಿದ್ದಾರೆ.
“ಸಂಘರ್ಷಕ್ಕೊಳಗಾದ ಎಲ್ಲ ಕಡೆಯವರು ಸಂಯಮದಿಂದ ವರ್ತಿಸಬೇಕು, ಪರಿಸ್ಥಿತಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು ಜೈಸ್ವಾಲ್ ಹೇಳಿದ್ದಾರೆ. ಇಸ್ರೇಲ್-ಇರಾನ್-ಅಮೆರಿಕದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸಬೇಕು. ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಜೈಸ್ವಾಲ್ ಹೇಳಿದ್ದಾರೆ.
Our statement on the evolving situation in West Asia ⬇️
ಇಂದಿನ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಮೊಹಮ್ಮದ್ ಪಕ್‌ಪೂರ್ ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ. ತನ್ನ ದೇಶದ ಮೇಲಿನ ದಾಳಿಗೆ ಇರಾನ್ ಕೂಡ ಪ್ರತೀಕಾರದ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ಕತಾರ್ ಮತ್ತು ಕುವೈತ್ ಸೇರಿದಂತೆ 6 ದೇಶಗಳ ಯುಎಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಮತ್ತು ದುಬೈ ಮೇಲೆಯೂ ದಾಳಿ ಮಾಡಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ಕೊಂದಿದೆ.
ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಮತ್ತು ಇಟಲಿ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ತುರ್ತು ಸಭೆಗಳನ್ನು ನಡೆಸುತ್ತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ