ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 213 ರನ್ ಕಲೆಹಾಕಿದೆ. ತಂಡವನ್ನು 200 ರನ್ಗಳ ಗಡಿ ದಾಟಿಸುವಲ್ಲಿ ಆರಂಭಿಕರ ಪಾತ್ರ ಪ್ರಮುಖವಾಗಿತ್ತು. ಅದರಲ್ಲೂ ಈ ನಿರ್ಣಾಯಕ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್ ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ಮುರಿದರು.
ಈ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಹಿಬ್ಜಾದಾ ಫರ್ಹಾನ್, ತಮ್ಮ ಇನ್ನಿಂಗ್ಸ್ನಲ್ಲಿ 60 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಈ ಮೂಲಕ ಈ ಟಿ20 ವಿಶ್ವಕಪ್ನಲ್ಲಿ ಎರಡನೇ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು.
ಈ ಪಂದ್ಯಕ್ಕೂ ಮುನ್ನ ಲೀಗ್ ಹಂತದಲ್ಲಿ ನಮೀಬಿಯಾ ವಿರುದ್ಧವೂ ಸಾಹಿಬ್ಜಾದಾ ಫರ್ಹಾನ್ ಶತಕ ಬಾರಿಸಿದ್ದರು. ಈ ಮೂಲಕ ಒಂದು ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಸಾಹಿಬ್ಜಾದಾ ಫರ್ಹಾನ್ ಪಾಲಾಗಿದೆ.
ಈ ಶತಕದ ಜೊತೆಗೆ ಇದೇ ಪಂದ್ಯದಲ್ಲಿ 37 ರನ್ ಪೂರ್ಣಗೊಳಿಸಿದ ಕೂಡಲೇ ಸಾಹಿಬ್ಜಾದಾ ಫರ್ಹಾನ್, ಒಂದು ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು. 12 ವರ್ಷಗಳ ಹಿಂದೆ 2014 ರ ವಿಶ್ವಕಪ್ನಲ್ಲಿ ಕೊಹ್ಲಿ ಆಡಿದ ಆರು ಇನ್ನಿಂಗ್ಸ್ಗಳಲ್ಲಿ 319 ರನ್ ಗಳಿಸಿದ್ದರು. ಈಗ, ಈ ದಾಖಲೆ ಪಾಕಿಸ್ತಾನಿ ಬ್ಯಾಟ್ಸ್ಮನ್ ಖಾತೆಗೆ ಸೇರಿದೆ.
ಇನ್ನು ಇದೇ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಮತ್ತೊಂದು ವಿಶ್ವದಾಖಲೆಯನ್ನು ನಿರ್ಮಿಸಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಫರ್ಹಾನ್ ಮತ್ತು ಫಖರ್ ಜಮಾನ್ ಮೊದಲ ವಿಕೆಟ್ಗೆ 176 ರನ್ಗಳ ಜೊತೆಯಾಟವನ್ನಾಡಿದರು. ಇದು ಟಿ20 ವಿಶ್ವಕಪ್ನಲ್ಲಿ ಇದುವರೆಗಿನ ಅತ್ಯಧಿಕ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಕಿವೀಸ್ನ ಆರಂಭಿಕರಾದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಮೊದಲ ವಿಕೆಟ್ಗೆ 175 ರನ್ ಬಾರಿಸಿದ್ದರು.
