All posts by nagaraj11081993

Chocolate Day 2026: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಮನೆಯಲ್ಲೇ ತಯಾರಿಸಿ ಸ್ಪೆಷಲ್ ಚಾಕೊಲೇಟ್;‌ ಇಲ್ಲಿದೆ ರೆಸಿಪಿ – Kannada News | Chocolate Day 2026: Make special chocolates at home for your partner

ಫೆಬ್ರವರಿಯನ್ನು ಪ್ರೀತಿ ಮತ್ತು ಪ್ರಣಯದ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ 7 ರಂದು ರೋಸ್‌ ಡೇಯೊಂದಿಗೆ ಪ್ರೇಮಿಗಳ ವಾರ ಪ್ರಾರಂಭವಾಗುತ್ತದೆ. ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಸಂಗಾತಿಗೆ ತರಹೇವಾರಿ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ಚಾಕೊಲೇಟ್‌ಗಳನ್ನೇ ಗಿಫ್ಟ್‌ ಆಗಿ ನೀಡುತ್ತಾರೆ. ಈ ಬಾರಿಯ ಚಾಕೊಲೇಟ್‌ ಡೇ ಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ನೀವು ನಿಮ್ಮ ಪ್ರೇಮಿಗಾಗಿ ಪ್ರೀತಿಯಿಂದ ಮನೆಯಲ್ಲಿಯೇ ಚಾಕೊಲೇಟ್‌ ತಯಾರಿಸಬಹುದು.  ಖಂಡಿತವಾಗಿಯೂ ಇದು ಯಾವುದೇ ದುಬಾರಿ ಚಾಕೊಲೇಟ್‌ಗಳಿಗಿಂತಲೂ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಚಾಕೊಲೇಟ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

ಕೋಕೋ ಪೌಡರ್ ಅರ್ಧ ಕಪ್, ಹಾಲಿನ ಪುಡಿ, 2 ಚಮಚ ಬೆಣ್ಣೆ, ಅರ್ಧ ಕಪ್ ಪುಡಿ ಸಕ್ಕರೆ, ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್‌ ಮತ್ತು ನೀರು.

ಮನೆಯಲ್ಲಿ ಚಾಕೊಲೇಟ್ ತಯಾರಿಸುವುದು ಹೇಗೆ?

  • ಮೊದಲು, ಸಕ್ಕರೆ ಪಾಕವನ್ನು ತಯಾರಿಸಿ. ಇದನ್ನು ಮಾಡಲು, ಒಂದು ಪ್ಯಾನ್‌ನಲ್ಲಿ 1/4 ಕಪ್ ನೀರು ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಸಕ್ಕರೆ ಕರಗಿದ ನಂತರ, ಅದನ್ನು 3-4 ನಿಮಿಷಗಳ ಕಾಲ ಕುದಿಸಲು ಬಿಡಿ.
  • ಈಗ ತಯಾರಾದ ಈ ಸಿರಪ್‌ಗೆ 2 ಚಮಚ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆ ಸಂಪೂರ್ಣವಾಗಿ ಕರಗುವವರೆಗೆ ನಿರಂತರವಾಗಿ ಬೆರೆಸಿಕೊಳ್ಳಿ.
  • ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ, ಕೋಕೋ ಪುಡಿ ಮತ್ತು ಹಾಲಿನ ಪುಡಿಯನ್ನು ಅದಕ್ಕೆ ಶೋಧಿಸಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗದಂತೆ ನಿರಂತರವಾಗಿ ಮಿಕ್ಸ್‌ ಮಾಡಿಕೊಳ್ಳಿ.
  • ಈಗ ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್ ಅನ್ನು ತಯಾರಾದ ಚಾಕೊಲೇಟ್‌ ಮಿಶ್ರಣಕ್ಕೆ ಸೇರಿಸಿ. ಇದು ಚಾಕೊಲೇಟ್‌ಗೆ ಆಹ್ಲಾದಕರ ಪರಿಮಳ ಮತ್ತು ಸುವಾಸನೆಯನ್ನು ನೀಡುತ್ತದೆ.
  • ಈಗ ತಯಾರಾದ ಚಾಕೊಲೇಟ್ ಬ್ಯಾಟರ್ ಅನ್ನು ಸಿಲಿಕಾ ಮೋಲ್ಡ್ (ಅಚ್ಚು) ಅಥವಾ ಯಾವುದೇ ಟ್ರೇಗೆ ಸುರಿದು, ಅದನ್ನು 2-3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ. ನೀವು ಈ ಚಾಕೊಲೇಟ್‌ ಮಿಶ್ರಣಕ್ಕೆ ಡ್ರೈಫೂಟ್ಸ್‌, ಚಾಕೋ ಚಿಪ್ಸ್‌ಗಳನ್ನು ಕೂಡಾ ಸೇರಿಸಬಹುದು.
  • ಚಾಕೊಲೇಟ್ ಗಟ್ಟಿಯಾದ ನಂತರ, ಅದನ್ನು ಅಚ್ಚಿನಿಂದ ತೆಗೆದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಚಾಕೊಲೇಟ್ ಸಿದ್ಧ. ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ ಮತ್ತು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ. ‌

ಇದನ್ನೂ ಓದಿ: ವ್ಯಾಲೆಂಟೈನ್ವೀಕ್ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ

ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಪ್ರಯೋಜನಗಳೇನು?

ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಚಾಕೊಲೇಟ್‌ಗಿಂತ ಶುದ್ಧ ಮತ್ತು ಹೆಚ್ಚು ಆರೋಗ್ಯಕರವಾಗಿದೆ. ಇದರಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಮುಖ್ಯವಾಗಿ ದುಬಾರಿ ಚಾಕೊಲೇಟ್‌ಗಿಂತ ನಿಮ್ಮ ಕೈಯಾರೆ ತಯಾರಿಸಿದ ಚಾಕೊಲೇಟ್‌ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:42 pm, Sun, 8 February 26

Source link

ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರಿಂದ ಗಲಾಟೆ!

ಹಾಸನ, ಫೆಬ್ರುವರಿ 08: ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಪ್ರೀತಿಸಿ ವಿವಾಹವಾದ ಪತ್ನಿಗೆ ಪತಿ ಕುಟುಂಬಸ್ಥರು ಕಿರುಕುಳ ನೀಡಿದ ಘಟನೆ ನಡೆದಿದೆ. ಮೂರು ವರ್ಷಗಳ ಹಿಂದೆ ಅರ್ಪಿತಾ ಹಾಗೂ ಶಶಿಕುಮಾರ್ ಲವ್ ಮ್ಯಾರೇಜ್ ಮಾಡಿಕೊಂಡಿದ್ದರು. ಡ್ರೈವಿಂಗ್ ಕೆಲಸ ಮಾಡುತ್ತಿದ್ದ ಶಶಿಕುಮಾರ್, ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಯಿಂದ ದೂರವಾಗಿದ್ದಾನೆ. ಅರ್ಪಿತಾ ಉಳಿದುಕೊಳ್ಳಲು ಪತಿ ಮನೆಯ ಮೇಲಿನ ರೂಂನ್ನು ಶಶಿಕುಮಾರ್ ಪೋಷಕರು ನೀಡಿದ್ದರು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ ಮಗುವನ್ನು ಸಾಕುತ್ತಿದ್ದ ಅರ್ಪಿತಾ, ವಿಚ್ಛೇದನ ಹಾಗೂ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕುಟುಂಬಸ್ಥರು ರೂಂ ಖಾಲಿ ಮಾಡುವಂತೆ ಕಿರುಕುಳ ನೀಡಿ, ರೂಂಗೆ ನುಗ್ಗಿ ಶೀಟ್‌ಗಳನ್ನು ಒಡೆದು, ಪಾತ್ರೆಗಳನ್ನು ಹೊರಗೆ ಎಸೆದು ಅರ್ಪಿತಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅರ್ಪಿತಾ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಶರತ್ ಪ್ರಕಾಶ್ ಈಗ ‘ಸ್ಟಾರ್’ – Kannada News | Pyate Mandi Kadig Bandru fame Sharath Prakash new movie titled Star

ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್​​ನಲ್ಲಿ ಶರತ್ ಪ್ರಕಾಶ್ (Sharath Prakash) ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ (Kannada Cinema) ಮಾಡಿದ್ದಾರೆ. ಈ ಸಿನಿಮಾಗೆ ‘ಸ್ಟಾರ್’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಇತ್ತೀಚೆಗೆ ‘ಸ್ಟಾರ್’ (Star) ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೇಣುಕಾಂಬಾ ಪ್ರಿವ್ಯೂ ಥಿಯೇಟರ್​​ನಲ್ಲಿ ಸೆಕ್ಯುರಿಟಿ ಗಾರ್ಡ್ ರಮೇಶ್ ಅವರಿಂದ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿಸಲಾಯಿತು.

‘ಲಯನ್ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಶರತ್ ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ನಟಿಸಿ, ನಿರ್ಮಾಣ ಮಾಡುವ ಡಬಲ್ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದಾರೆ. ಈ ಸಿನಿಮಾಗೆ ವಿಜಯ ಸೂರ್ಯ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಸ್ಟಾರ್’ ಸಿನಿಮಾದ ಶೀರ್ಷಿಕೆಗೆ ‘ಭೂಮಿಗೆ ಹತ್ರ’ ಎಂಬ ಟ್ಯಾಗ್ ಲೈನ್ ಕೂಡ ಇದೆ.

Star Movie Team

ಈ ಸಿನಿಮಾದ ಪಾತ್ರವರ್ಗದಲ್ಲಿ ಶರತ್ ಪ್ರಕಾಶ್, ರಜತರಕ್ಷ ಮತ್ತು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಕಾಸ್ ವಸಿಷ್ಠ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಪಿಎಸ್‌ಕೆ ಅವರ ಛಾಯಾಗ್ರಹಣ, ವಿನು ಮನಸು ಅವರ ಹಿನ್ನೆಲೆ ಸಂಗೀತ, ಶಶಿಧರ್ ಪಿ. ಅವರ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್ ಬಿಡುಗಡೆ ವೇಳೆ ಶರತ್ ಪ್ರಕಾಶ್ ಮಾತನಾಡಿದರು.

‘ಅಣ್ಣಾವ್ರ ಕಾಲದಿಂದಲೂ ಅಪ್ಪ ಪ್ರಕಾಶ್ ಅವರು ಸಿನಿಮಾಗಳಲ್ಲಿ ಫೈಟರ್ ಆಗಿ ಕಾಣಿಸಿಕೊಂಡಿದ್ದರು. ನನಗೆ ಪ್ಯಾಟ್ ಮಂದಿ ಕಾಡಿಗ್ ಬಂದ್ರು ಶೋ ಬಳಿಕ ಹಲವು ಅವಕಾಶಗಳು ಬಂದವು. ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರೂ ಬ್ರೇಕ್ ಸಿಕ್ಕಿಲ್ಲ. ನಿರ್ದೇಶಕರು ಹೇಳಿದ ಒನ್ ಲೈನ್ ಇಷ್ಟವಾಯಿತು. ರೌಡಿಸಂ, ತಂದೆ ಮಗಳ ಬಾಂಧವ್ಯ, ತಾಯಿ ಸೆಂಟಿಮೆಂಟ್, ಪ್ರೀತಿ ಮುಂತಾದ ಅಂಶಗಳು ನಮ್ಮ ಸಿನಿಮಾದಲ್ಲಿವೆ’ ಎಂದು ಶರತ್ ಹೇಳಿದ್ದಾರೆ.

ಇದನ್ನೂ ಓದಿ: ಟಾಪ್​​ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್

ನಿರ್ದೇಶಕ ವಿಜಯ ಸೂರ್ಯ ಮಾತನಾಡಿ, ‘ಈ ಸಿನಿಮಾದ ಪ್ರತಿ ಸನ್ನಿವೇಶಗಳನ್ನು ನೋಡುವಾಗ ನಮ್ಮ ಏರಿಯಾದಲ್ಲಿ ನಡೆದಂತಹ ಘಟನೆಗಳು ಕಣ್ಣ ಮುಂದೆ ಬರುತ್ತದೆ. ನಾಯಕನಿಗೆ ಸ್ಟಾರ್ ಎಂದು ಹೆಸರು ಬರಲು ಕಾರಣವೇನು ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆಂಗಳೂರಿನ ಸ್ಲಮ್​ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಮತ್ತೋರ್ವ ಆಟಗಾರ ಎಂಟ್ರಿ – Kannada News | T20 World Cup 2026: Washington Sundar to link up with Indian squad in Delhi

ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಎಸ್​ಎ ತಂಡವನ್ನು 29 ರನ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಪ್ರಮುಖ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಸಂಪೂರ್ಣ ಫಿಟ್​ ಆಗಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಪೆಕ್ಕೆಲುಬಿನ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅವರು ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನ ಮೊದಲ ಪಂದ್ಯದ ವೇಳೆಯೂ ಭಾರತ ತಂಡದೊಡನೆ ಕಾಣಿಸಿಕೊಂಡಿರಲಿಲ್ಲ.

ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ವಾಷಿಂಗ್ಟನ್ ಸುಂದರ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಫೆಬ್ರವರಿ 12 ಕ್ಕೂ ಮುನ್ನ ಅವರು ದೆಹಲಿಯಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಅಂದರೆ ಭಾರತ ಮತ್ತು ನಮೀಬಿಯ ನಡುವಣ ಪಂದ್ಯವು ಫೆಬ್ರವರಿ 12 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವುದು ಖಚಿತವಾಗಿದೆ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಇಬ್ಬರಿಗೆ ಅನಾರೋಗ್ಯ… ಟೀಮ್ ಇಂಡಿಯಾಗೆ ಚಿಂತೆ ಶುರು

ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:

  1. ಫೆಬ್ರವರಿ 7: ಭಾರತ vs ಯುಎಸ್​​ಎ-  (ಮುಂಬೈ)- ಭಾರತ ತಂಡಕ್ಕೆ 29 ರನ್​ಗಳ ಭರ್ಜರಿ ಜಯ
  2. ಫೆಬ್ರವರಿ 12: ಭಾರತ vs  ನಮೀಬಿಯಾ- (ದೆಹಲಿ)
  3. ಫೆಬ್ರವರಿ 15: ಭಾರತ vs ಪಾಕಿಸ್ತಾನ್-  (ಕೊಲಂಬೊ)
  4. ಫೆಬ್ರವರಿ 18: ಭಾರತ vs ನೆದರ್​ಲೆಂಡ್ಸ್-​​ (ಅಹಮದಾಬಾದ್)

ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್​ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್​​ಗೆ ಅರ್ಹತೆ ಪಡೆಯಲಿದೆ.

Source link

ನಾನು ಎಷ್ಟು ಒತ್ತಡ ಅನುಭವಿಸಿದ್ದೆ ಎಂಬುದು ನಂಗೆ ಮಾತ್ರ ಗೊತ್ತು! – Kannada News | T20 world cup 2026: suryakumar yadav post match interview after usa match

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಜಯಭೇರಿಯ ಕಾರಣಕರ್ತ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪವರ್​ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 46 ರನ್​ಗಳು ಮಾತ್ರ.

ಇದಾದ ಬಳಿಕ 77 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಟೀಮ್ ಇಂಡಿಯಾವನ್ನು ಏಕಾಂಗಿಯಾಗಿ ಮುನ್ನಡೆಸಿದ್ದು ಸೂರ್ಯಕುಮಾರ್ ಯಾದವ್. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ 49 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 84 ರನ್ ಬಾರಿಸಿದರು.

ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 29 ರನ್​ಗಳ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಾನು ಅನುಭವಿಸಿದ ಒತ್ತಡವನ್ನು ವಿವರಿಸಿದ್ದಾರೆ. ಬೃಹತ್ ಮೊತ್ತದ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿ ನಾವು ಕೇವಲ 77 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದವು. ಈ ವೇಳೆ ನಾನು ಎಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ ಎಂದು ನನಗೆ ಮಾತ್ರ ಗೊತ್ತಿದೆ.

ಆದರೆ ಇಂತಹ ಒತ್ತಡಗಳ ಸಂದರ್ಭಗಳಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ಎನ್ನುವ ನಂಬಿಕೆ ನನಗಿತ್ತು. ಏಕೆಂದರೆ ನಾನು ಇಲ್ಲೇ ಆಡಿದವನು. ಮುಂಬೈ ಕ್ರಿಕೆಟ್ ಮೈದಾನ, ಆಝಾದ್ ಮೈದಾನ, ಕ್ರಾಸ್ ಮೈದಾನದಲ್ಲಿ ನಾನು ಕ್ರಿಕೆಟ್ ಕೆರಿಯರ್ ರೂಪಿಸಿದ್ದೇನೆ. ಹೀಗಾಗಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿದರೆ, ಪಂದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು ಎಂಬುದು ನನಗೆ ತಿಳಿದಿತ್ತು. ಹೀಗಾಗಿ ಕ್ರೀಸ್ ಕಚ್ಚಿ ಆಡಲು ನಿರ್ಧರಿಸಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದೇ ವೇಳೆ ಪಿಚ್​ ಬಗ್ಗೆ ಮಾತನಾಡಿದ ಸೂರ್ಯ, ಯಾವಾಗಲೂ ವಾಂಖೆಡೆಯಲ್ಲಿ ಇರುವುದಕ್ಕಿಂತ ಸ್ವಲ್ಪ ಭಿನ್ನವಾದ ಪಿಚ್ ಇದಾಗಿತ್ತು. ಬೆಳಿಗ್ಗೆ ಹೊರಗೆ ಹೆಚ್ಚು ಬಿಸಿಲು ಇರಲಿಲ್ಲ. ಕ್ಯುರೇಟರ್ ಮತ್ತು ಮೈದಾನದ ಸಿಬ್ಬಂದಿ ಅತ್ಯುತ್ತಮ ಪಿಚ್ ಅನ್ನು ಸಿದ್ಧಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಆದರೆ ಕೆಲವು ವಿಷಯಗಳು ಅವರ ನಿಯಂತ್ರಣದಲ್ಲಿಲ್ಲ. ಇದರಿಂದ ಪಿಚ್​ನ ಮೇಲ್ಮೈನಲ್ಲಿ ಬದಲಾವಣೆಯಾಗಿರಬಹುದು. ಇದಾಗ್ಯೂ ನಮ್ಮ ತಪ್ಪುಗಳನ್ನು ಒಪ್ಪಲು ಸಾಧ್ಯವಿಲ್ಲ. ನಾವು ಇನ್ನೂ ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ.

ಇದನ್ನೂ ಓದಿ: ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್

ಇದೀಗ ಪಂದ್ಯ ಗೆದ್ದಿದ್ದೇವೆ. ಗೆದ್ದ ಬಳಿಕ ನಾವು ಬಹಳಷ್ಟು ವಿಷಯಗಳನ್ನು ಕಲಿಯಬಹುದು. ಅದರಂತೆ ಯುಎಸ್​ಎ ವಿರುದ್ಧ ನಾವು ಸ್ವಲ್ಪ ಉತ್ತಮವಾಗಿ ಅಥವಾ ಸ್ವಲ್ಪ ಚುರುಕಾಗಿ ಬ್ಯಾಟಿಂಗ್ ಮಾಡಬೇಕಿತ್ತು ಎಂಬ ಪಾಠ ಕಲಿತಿದ್ದೇವೆ. ಒಬ್ಬ ಬ್ಯಾಟ್ಸ್‌ಮನ್ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೊನೆಯವರೆಗೂ ಆಡಲು ಪ್ರಯತ್ನಿಸುವುದಕ್ಕಿಂತ ಆ ಸಣ್ಣ, ಸಣ್ಣ ಪಾಲುದಾರಿಕೆಗಳು ನಮ್ಮನ್ನು 160 ಕ್ಕೆ ಕೊಂಡೊಯ್ಯಬಹುದಿತ್ತು. ಇದುವೇ ಈ ಪಂದ್ಯದಿಂದ ಕಲಿತ ಪಾಠ. ಮುಂದಿನ ಪಂದ್ಯಕ್ಕೆ ಇನ್ನೂ ಕೆಲ ದಿನಗಳ ಸಮಯವಿದೆ. ಹೀಗಾಗಿ ನಮೀಬಿಯ ವಿರುದ್ಧದ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿ ಹಿಂತಿರುಗುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Source link

ಜಿ.ಟಿ. ದೇವೇಗೌಡ ವಿರುದ್ಧ ಕುಮಾರಸ್ವಾಮಿ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ! – Kannada News | Uion Minister HD Kumaraswamy Slams JDS MLA G.T. Devegowda Over Loyalty

ಮೈಸೂರು, ಫೆಬ್ರವರಿ 08: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ನಮ್ಮ ಜೊತೆಯಲ್ಲಿ ಇಲ್ಲ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜಿ.ಟಿ. ದೇವೇಗೌಡ ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಜಿ.ಟಿ. ದೇವೇಗೌಡ ಹೆಸರನ್ನು ಪ್ರಸ್ತಾಪ ಮಾಡಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆ ನಡೆದಿದೆ. ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೆ? ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಹಳಷ್ಟು ಜನ ಅಭ್ಯರ್ಥಿಗಳು ಇದ್ದಾರೆ. ಬಹಳಷ್ಟು ಜನರನ್ನು ಬೆಳೆಸಿದ್ದೇವೆ, ಮೆರೆಸಿದ್ದೇವೆ ಎಂದು ಹೇಳಿಕೊಳ್ತಾರೆ. ಯಾವಾಗ ಯಾರನ್ನು ಮೆರೆಸುತ್ತಾರೋ ಯಾರಿಗೆ ಗೊತ್ತು. ಈಗ ಯಾರೋ ಒಬ್ಬರನ್ನು ಮೆರೆಸಲು ಜಿಟಿಡಿ ಹೊರಟಿದ್ದಾರೆ. ಜಿ.ಟಿ. ದೇವೇಗೌಡಗೆ ನಿಯತ್ತು ಏನಾದಾರೂ ಇದೆಯಾ? ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧ ಇದೆ. ಮುಂಡೇಶ್ವರಿ ಕ್ಷೇತ್ರದಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದ್ರೂ ಗೆಲ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today 08 February​: ಇಂದು ಈ ರಾಶಿಯವರು ಬೇರೆಯವರ ಕೆಲಸಕ್ಕೆ ಸಮಯ ವ್ಯರ್ಥ ಮಾಡಬಾರದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 08, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಸಪ್ತಮಿ, ಸ್ವಾತಿ ನಕ್ಷತ್ರದ ಈ ಶುಭ ದಿನದಂದು ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರಾಹುಕಾಲವು ಮಧ್ಯಾಹ್ನ 4:56 ರಿಂದ ಸಂಜೆ 6:24 ರ ತನಕ ಇರಲಿದೆ. ಸರ್ವ ಸಿದ್ಧಿ ಕಾಲ ಅಥವಾ ಸಂಕಲ್ಪ ಕಾಲವು ಮಧ್ಯಾಹ್ನ 2:01 ರಿಂದ 3:28 ರ ತನಕ ಇರುತ್ತದೆ.

ಈ ವಿಶೇಷ ಭಾನುವಾರದಂದು ಮದ್ದೂರು ವೈದ್ಯನಾಥಪುರದಲ್ಲಿ ರಥೋತ್ಸವ, ಸೀತಾ ಅವರ ಜಾತ್ರೆ, ಮೈಸೂರಿನಲ್ಲಿ ಮಾರಿಸಾರು ರಥೋತ್ಸವ ಮತ್ತು ಗುಬ್ಬಿಯಲ್ಲಿ ಹಿಂದೂ ಸಮಾಜೋತ್ಸವದಂತಹ ಕಾರ್ಯಕ್ರಮಗಳು ನಡೆಯಲಿವೆ. ಡಾ. ಗುರೂಜಿ ಅವರು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಸಿದ್ದಾರೆ. ತಮ್ಮ ಭವಿಷ್ಯದಲ್ಲಿ, ಅವರು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ.

 

Source link

Nelamangala: ಗ್ಯಾಸ್​​ ಗೀಸರ್​​ ಲೀಕ್​​ ಆಗಿ ಪತಿ ಸಾವು; ವಿಷಯ ತಿಳಿದು ಪತ್ನಿಯೂ ಆತ್ಮಹತ್ಯೆ! – Kannada News | Nelamangala Couple Tragedy: Gas Geyser Leak Claims Husband, Wife’s Suicide

ರಾಜು ಮತ್ತು ಮೀನಾ ದಂಪತಿImage Credit source: Tv9 Kannada

ನೆಲಮಂಗಲ, ಫೆಬ್ರವರಿ 08: 20 ವರ್ಷಗಳ ಕಾಲ ಸುಂದರವಾಗಿ ಜೀವನ ನಡೆಸಿದ್ದ ದಂಪತಿ ದುರಂತ ಅಂತ್ಯಕಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದದಲ್ಲಿ ನಡೆದಿದೆ. ರಾಜು (48) ಮತ್ತು ಮೀನಾ (42) ಮೃತರಾಗಿದ್ದಾರೆ. ಮನೆಯ ಬಾತ್​​ರೂಂಗೆ ಸ್ನಾನಕ್ಕೆಂದು ರಾಜು ತೆರಳಿದ್ದ ವೇಳೆ ಗ್ಯಾಸ್​​ ಗೀಸರ್​​ ಲೀಕ್​​ ಆಗಿದೆ. ಇದರಿಂದ ಉಸಿರಾಡಲು ಸಾಧ್ಯವಾಗದೆ ಒದ್ದಾಡಿ ಅವರು ಪ್ರಾಣ ಬಿಟ್ಟಿದ್ದಾರೆ. ಇತ್ತ ಪತಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ದುಃಖ ತಾಳಲಾರದೆ ಬ್ಯಾಂಕ್​ ಉದ್ಯೋಗಿಯಾಗಿದ್ದ ಪತ್ನಿ ಮೀನಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಯಾಗಿದ್ದ ದಂಪತಿ ಕೆಲಸ ನಿಮ್ಮಿತ್ತ ನೆಲಮಂಗಲ ನಗರದಲ್ಲಿ ಮಗನ ಜೊತೆಗೆ ವಾಸವಿದ್ದರು. ಮೀನಾ ಬೆಂಗಳೂರಿನ ಬ್ಯಾಂಕ್​​ ಒಂದರ ಉದ್ಯೋಗಿಯಾಗಿದ್ದು, ಪತಿಯ ಸಾವಿನ ವಿಚಾರ ತಿಳಿಯುತ್ತಲೇ ನೆಲಮಂಗಲ ನಗರದ ಜಕ್ಕಸಂದ್ರದ ಮನೆ ಕಡೆ ಹೊರಟ್ಟಿದ್ದಾರೆ. ಆದರೆ ಪತಿಯ ಅಗಲುವಿಕೆಯ ಸುದ್ದಿ ಕೇಳಿ ಅದಾಗಲೇ ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದ ಮೀನಾ ಮೃತ ಗಂಡನ ಮುಖ ಕೂಡ ನೋಡಿಲ್ಲ. ತಾವು ನಿರ್ಮಾಣ ಮಾಡುತ್ತಿದ್ದ ಮನೆಯ ಸಲ್ಪ ದೂರದಲ್ಲಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ಡೆತ್​​ನೋಟ್​​ ಬರೆದು ಸೂಸೈಡ್​​

ಇನ್ನು ಆತ್ಮಹತ್ಯೆಗೂ ಮುನ್ನ ಮೀನಾ ಡೆತ್ನೋಟ್​​ ಕೂಡ ಬರೆದಿದ್ದಾರೆ. ಗಂಡನನ್ನ ಬಿಟ್ಟು ಒಂದು ನಿಮಿಷವೂ ತಾನು ಬದುಕಿರುವುದಿಲ್ಲ ಎಂದು ಅದರಲ್ಲಿ ಅವರು ಉಲ್ಲೇಖ ಮಾಡಿದ್ದು, ಜೊತೆಗೆ ಯಾರ್ಯಾರಿಗೆ ಏನೇನು ಕೊಡಬೇಕು ಅದೆಲ್ಲವನ್ನ ಕೊಟ್ಟುಬಿಡಿ. ನನ್ನ ಕ್ಷಮಿಸಿಬಿಡಿ ಎಂದು ಉಲ್ಲೇಖಿಸಿದ್ದಾರೆ. ದಂಪತಿಯ ಈ ದುರಂತ ಅಂತ್ಯ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. 20 ವರ್ಷದ ಹಿಂದೆ ಕೈಹಿಡಿದಿದ್ದ ಈ ಜೋಡಿ ಸಾವಲ್ಲೂ ಒಂದಾಗಿರೋದು ಹಲವರ ಕಣ್ಣಂಚಲ್ಲಿ ನೀರು ತರಿಸಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:15 am, Sun, 8 February 26

Source link

Daily Devotional: ಪ್ರಯಾಣ ಕಾಲದಲ್ಲಿ ಅಪಶಕುನಗಳು ಎದುರಾದ್ರೆ ಏನು ಮಾಡಬೇಕು? – Kannada News | Daily Devotional: Traditional Remedies for Travel According to Hindu Beliefs

ಬೆಂಗಳೂರು, ಫೆಬ್ರುವರಿ​ 08: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪ್ರಯಾಣಕ್ಕೆ ಹೊರಡುವಾಗ ಎದುರಾಗುವ ಕೆಲವು ಘಟನೆಗಳು ಹಾಗೂ ಅವುಗಳ ಕುರಿತಾದ ನಂಬಿಕೆಗಳನ್ನು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯಿಂದ ಹೊರಡುವಾಗ ಬೀಗದಕೈ ಕೆಳಗೆ ಬೀಳುವುದು, ಕಾಲು ಎಡವುವುದು, ಅನಾರೋಗ್ಯದ ಲಕ್ಷಣಗಳು ಕಾಣಿಸುವುದು ಅಥವಾ ಒಂಟಿ ಸೀನು ಮುಂತಾದವುಗಳನ್ನು ಕೆಲವೊಮ್ಮೆ ಅಪಶಕುನಗಳೆಂದು ಭಾವಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಇವುಗಳನ್ನು ಕೇವಲ ಭಯಗಳೆಂದು ಪರಿಗಣಿಸದೆ, ಬದಲಾಗಿ ಜಾಗೃತಿ ಮೂಡಿಸುವ ಸಂಕೇತಗಳಾಗಿ ನೋಡಲಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಆತಂಕ ಪಡದೆ, ಕೆಲವು ಸರಳ ಪರಿಹಾರಗಳನ್ನು ಅನುಸರಿಸುವುದು ಉತ್ತಮ. ಈ ಪರಿಹಾರಗಳು ಕಚೇರಿಗೆ ಹೋಗುವ ಸಂದರ್ಭಕ್ಕಲ್ಲದೆ, ಪ್ರಥಮ ಬಾರಿಗೆ ಬೆಳಿಗ್ಗೆ ಮನೆಯಿಂದ ಹೊರಡುವಾಗ ಮಾತ್ರ ಅನ್ವಯಿಸುತ್ತವೆ. ಕೆಲವು ನಿಮಿಷ ವಿಶ್ರಾಂತಿ ಪಡೆಯುವುದು, ಸ್ವಲ್ಪ ನೀರು ಕುಡಿಯುವುದು, ಓಂ ಗಂ ಗಣಪತಯೇ ನಮಃ ಅಥವಾ ಹನುಮ ಮಂತ್ರವನ್ನು ಜಪಿಸುವುದು, ಬಲಗಾಲನ್ನು ಹೊರಗಿಟ್ಟು ಪ್ರಯಾಣ ಮುಂದುವರಿಸುವುದು, ಅಥವಾ ಬೆಲ್ಲ ಮತ್ತು ನೀರನ್ನು ಸೇವಿಸುವುದು ಇಂತಹ ಪರಿಹಾರಗಳಾಗಿವೆ. ಇವು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಒಳ್ಳೆಯದಾಗುತ್ತದೆ ಎಂಬ ನಂಬಿಕೆಯನ್ನು ಮೂಡಿಸುತ್ತವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಡಿವೋರ್ಸ್​​ ನೀಡದೆ 2ನೇ ಮದುವೆ: ಪೊಲೀಸರ ಜೊತೆ ಮಂಟಪಕ್ಕೇ ನುಗ್ಗಿ ಪತಿಗೆ ಶಾಕ್​​ ಕೊಟ್ಟ ಪತ್ನಿ – Kannada News | Wife Stops Husband’s Second Marriage in Filmy Style at Yedeyuru in Tumakuru

ಪತಿಯ ಎರಡನೇ ಮದುವೆ ತಡೆದ ಪತ್ನಿImage Credit source: Tv9 Kannada

ತುಮಕೂರು, ಫೆಬ್ರವರಿ 08: ತನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತ್ನಿ ಭರ್ಜರಿ ಶಾಕ್​​ ಕೊಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ನಡೆದಿದೆ. ಥೇಟ್​​ ಸಿನಿಮಾ ಶೈಲಿಯ ದೃಶ್ಯ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದು, ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆ ಮಾಡಲಾಗ್ತಿತ್ತು ಎಂಬ ಆರೋಪ ಕೇಳಿಬಂದಿದೆ.

2014ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಲೇಪಾಕ್ಷಿ ಎಂಬಾಕೆಯನ್ನ ಹರಿಪ್ರಸಾದ್ ಮದುವೆಯಾಗಿದ್ದರು. 8ನೇ ತರಗತಿಯಿಂದಲೇ ಇವರಿಬ್ಬರು ಪರಸ್ಪರ ಪ್ರಿತಿಸಿದ್ದರು ಎನ್ನಲಾಗಿದ್ದು, ಮದುವೆ ಬಳಿಕ 10 ವರ್ಷ ಸಂಸಾರವನ್ನೂ ನಡೆಸಿದ್ದರು. ಆ ಬಳಿಕ ಕೌಟುಂಬಿಕ ಕಲಹದ ಕಾರಣಕ್ಕೆ ದಂಪತಿ ಬೇರೆಯಾಗಿದ್ದರು. ಈ ನಡುವೆ ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆಗೆ ಮದುವೆಗೆ ಹರಿಪ್ರಸಾದ್​ ಮುಂದಾಗಿದ್ದಾರೆ. ಅದರಂತೆ ಯಡೆಯೂರಿನ SLN ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ 8:15ರಿಂದ 8:40ರ ವರೆಗೆ ಇದ್ದ ಮುಹೂರ್ತದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರ ಜೊತೆ ಲೇಪಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:  ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ; 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ

ಇನ್ನು ಪತ್ನಿ ಕಂಡು ಹರಿಪ್ರಸಾದ್​​ ಕಕ್ಕಾಬಿಕ್ಕಿಯಾಗಿದ್ದರೆ, ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ತೆಗೆದ ಲೇಪಾಕ್ಷಿ ಕೊನೆಗೂ ಮದುವೆ ನಿಲ್ಲಿಸಿದ್ದಾರೆ. ಮತ್ತೊಂದು ಮದುವೆಯ ಆಸೆಯಲ್ಲಿ ಹಸೆಮಣೆ ಏರಿದ್ದ ಹರಿಪ್ರಸಾದ್​​, ತಾಳಿ ಕಟ್ಟದೆ ಪೊಲೀಸ್​​ ಠಾಣೆಗೆ ತೆರಳಿದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲೇಪಾಕ್ಷಿ ಕುಟುಂಬಸ್ಥರು ಹರೀಶ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರೀತಿಸಿ ಮುದುವೆಯಾದಾಕೆಗೆ ವಿಚ್ಚೇದನವನ್ನೂ ನೀಡದೆ ಈಗ ಮತ್ತೊಬ್ಬಳಿಗೆ ತಾಳಿಕಟ್ಟಲು ಈತ ಹೋಗಿದ್ದಾನೆ ಅಂದ್ರೆ ಏನು ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:26 pm, Sun, 8 February 26

Source link