ಫೆಬ್ರವರಿಯನ್ನು ಪ್ರೀತಿ ಮತ್ತು ಪ್ರಣಯದ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ 7 ರಂದು ರೋಸ್ ಡೇಯೊಂದಿಗೆ ಪ್ರೇಮಿಗಳ ವಾರ ಪ್ರಾರಂಭವಾಗುತ್ತದೆ. ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಸಂಗಾತಿಗೆ ತರಹೇವಾರಿ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ಚಾಕೊಲೇಟ್‌ಗಳನ್ನೇ ಗಿಫ್ಟ್ ಆಗಿ ನೀಡುತ್ತಾರೆ. ಈ ಬಾರಿಯ ಚಾಕೊಲೇಟ್ ಡೇ ಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ನೀವು ನಿಮ್ಮ ಪ್ರೇಮಿಗಾಗಿ ಪ್ರೀತಿಯಿಂದ ಮನೆಯಲ್ಲಿಯೇ ಚಾಕೊಲೇಟ್ ತಯಾರಿಸಬಹುದು. ಖಂಡಿತವಾಗಿಯೂ ಇದು ಯಾವುದೇ ದುಬಾರಿ ಚಾಕೊಲೇಟ್‌ಗಳಿಗಿಂತಲೂ ತುಂಬಾನೇ ಸ್ಪೆಷಲ್ ಆಗಿರುತ್ತದೆ.
ಚಾಕೊಲೇಟ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:
ಕೋಕೋ ಪೌಡರ್ ಅರ್ಧ ಕಪ್, ಹಾಲಿನ ಪುಡಿ, 2 ಚಮಚ ಬೆಣ್ಣೆ, ಅರ್ಧ ಕಪ್ ಪುಡಿ ಸಕ್ಕರೆ, ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್ ಮತ್ತು ನೀರು.
ಮನೆಯಲ್ಲಿ ಚಾಕೊಲೇಟ್ ತಯಾರಿಸುವುದು ಹೇಗೆ?
- ಮೊದಲು, ಸಕ್ಕರೆ ಪಾಕವನ್ನು ತಯಾರಿಸಿ. ಇದನ್ನು ಮಾಡಲು, ಒಂದು ಪ್ಯಾನ್‌ನಲ್ಲಿ 1/4 ಕಪ್ ನೀರು ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಸಕ್ಕರೆ ಕರಗಿದ ನಂತರ, ಅದನ್ನು 3-4 ನಿಮಿಷಗಳ ಕಾಲ ಕುದಿಸಲು ಬಿಡಿ.
- ಈಗ ತಯಾರಾದ ಈ ಸಿರಪ್‌ಗೆ 2 ಚಮಚ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆ ಸಂಪೂರ್ಣವಾಗಿ ಕರಗುವವರೆಗೆ ನಿರಂತರವಾಗಿ ಬೆರೆಸಿಕೊಳ್ಳಿ.
- ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ, ಕೋಕೋ ಪುಡಿ ಮತ್ತು ಹಾಲಿನ ಪುಡಿಯನ್ನು ಅದಕ್ಕೆ ಶೋಧಿಸಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗದಂತೆ ನಿರಂತರವಾಗಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್ ಅನ್ನು ತಯಾರಾದ ಚಾಕೊಲೇಟ್ ಮಿಶ್ರಣಕ್ಕೆ ಸೇರಿಸಿ. ಇದು ಚಾಕೊಲೇಟ್‌ಗೆ ಆಹ್ಲಾದಕರ ಪರಿಮಳ ಮತ್ತು ಸುವಾಸನೆಯನ್ನು ನೀಡುತ್ತದೆ.
- ಈಗ ತಯಾರಾದ ಚಾಕೊಲೇಟ್ ಬ್ಯಾಟರ್ ಅನ್ನು ಸಿಲಿಕಾ ಮೋಲ್ಡ್ (ಅಚ್ಚು) ಅಥವಾ ಯಾವುದೇ ಟ್ರೇಗೆ ಸುರಿದು, ಅದನ್ನು 2-3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ. ನೀವು ಈ ಚಾಕೊಲೇಟ್ ಮಿಶ್ರಣಕ್ಕೆ ಡ್ರೈಫೂಟ್ಸ್, ಚಾಕೋ ಚಿಪ್ಸ್‌ಗಳನ್ನು ಕೂಡಾ ಸೇರಿಸಬಹುದು.
- ಚಾಕೊಲೇಟ್ ಗಟ್ಟಿಯಾದ ನಂತರ, ಅದನ್ನು ಅಚ್ಚಿನಿಂದ ತೆಗೆದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಚಾಕೊಲೇಟ್ ಸಿದ್ಧ. ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ ಮತ್ತು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ.
ಇದನ್ನೂ ಓದಿ: ವ್ಯಾಲೆಂಟೈನ್ ವೀಕ್ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ
ಮನೆಯಲ್ಲಿ ತಯಾರಿಸಿದ ಚಾಕೊಲೇಟ್ನ ಪ್ರಯೋಜನಗಳೇನು?
ಮನೆಯಲ್ಲೇ ತಯಾರಿಸಿದ ಚಾಕೊಲೇಟ್ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಚಾಕೊಲೇಟ್‌ಗಿಂತ ಶುದ್ಧ ಮತ್ತು ಹೆಚ್ಚು ಆರೋಗ್ಯಕರವಾಗಿದೆ. ಇದರಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಮುಖ್ಯವಾಗಿ ದುಬಾರಿ ಚಾಕೊಲೇಟ್‌ಗಿಂತ ನಿಮ್ಮ ಕೈಯಾರೆ ತಯಾರಿಸಿದ ಚಾಕೊಲೇಟ್ ತುಂಬಾನೇ ಸ್ಪೆಷಲ್ ಆಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:42 pm, Sun, 8 February 26
