All posts by nagaraj11081993

ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಗೆದ್ದ ಕಝಾಕಿಸ್ತಾನದ ಎಲೆನಾ ರೈಬಾಕಿನಾ – Kannada News | Elena Rybakina Wins Australian Open Women’s Singles Title, Defeats Sabalenka

ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕಝಾಕಿಸ್ತಾನ್‌ನ ಎಲೆನಾ ರೈಬಾಕಿನಾ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ಸೋಲಿಸಿ ತಮ್ಮ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದರು. ಆದರೆ ರೈಬಾಕಿನಾ ಅದ್ಭುತ ಪುನರಾಗಮನ ಮಾಡಿ ಪ್ರಶಸ್ತಿ ಗೆದ್ದರು.

ಈ ಪಂದ್ಯದಲ್ಲಿ ಎಲೆನಾ ರೈಬಾಕಿನಾ, ಅರಿನಾ ಸಬಲೆಂಕಾ ಅವರನ್ನು 6-4, 4-6, 6-4 ಸೆಟ್‌ಗಳಿಂದ ಸೋಲಿಸಿದರು. ರೈಬಾಕಿನಾ ಮೊದಲ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದುಕೊಂಡರೆ, ಸಬಲೆಂಕಾ ಎರಡನೇ ಸೆಟ್‌ ಅನ್ನು 6-4 ಅಂತರದಿಂದ ಗೆದ್ದುಕೊಂಡರು. ಮೂರನೇ ಸೆಟ್‌ನಲ್ಲಿ, ಸಬಲೆಂಕಾ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದರಾದರೂ ರೈಬಾಕಿನಾ ಅಂತಿಮವಾಗಿ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಎಲೆನಾ ರೈಬಾಕಿನಾಗೆ ಇದು ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಸಬಲೆಂಕಾ ಈ ಬಾರಿ ಮೂರನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ವಿಫಲರಾದರು.

ಇದರೊಂದಿಗೆ, ಎಲೆನಾ ರೈಬಾಕಿನಾ ಆಸ್ಟ್ರೇಲಿಯನ್ ಓಪನ್ ಗೆದ್ದ ಕಝಾಕಿಸ್ತಾನ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಐತಿಹಾಸಿಕ ಗೆಲುವಿಗೆ ಪ್ರತಿಯಾಗಿ ಅವರಿಗೆ 25 ಕೋಟಿ ರೂ. ಬಹುಮಾನದ ಹಣವು ಸಿಕ್ಕಿದೆ. ಇದಕ್ಕೂ ಮೊದಲು, ಅವರು 2022 ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಕಝಾಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ ಈಕೆ – Kannada News | Sunetra Pawar takes oath as Maharashtra Dy CM, and becomes first woman to become Maha DCM

ಸುನೇತ್ರಾ ಪವಾರ್Image Credit source: Emmanual Yogoni, The Hindu

ಮುಂಬೈ, ಜನವರಿ 31: ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ತಮ್ಮ ಪತಿಯ ಸ್ಥಾನವನ್ನು ಅವರು ತುಂಬಿದ್ದಾರೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಸುನೇತ್ರಾ ಪವಾರ್ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಲೀ, ಉಪಮುಖ್ಯಮಂತ್ರಿಯಾಗಲೀ ಆಗಿದ್ದಿಲ್ಲ. ಸುನೇತ್ರಾ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಎನ್ನುವ ದಾಖಲೆಯನ್ನಂತೂ ಮಾಡಿದ್ದಾರೆ.

ತಮ್ಮ ಪತಿಯ ನೆರಳಿನಲ್ಲೇ ಬಹುತೇಕ ಜೀವನ ಸವೆಸಿದ ಸುನೇತ್ರಾ ಪವಾರ್ 61ನೇ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣ ಪ್ರವೇಶ ಮಾಡಿದ್ದರು. ಪ್ರಬಲ ರಾಜಕೀಯ ವ್ಯಕ್ತಿಗಳಿರುವ ಕುಟುಂಬದಲ್ಲೇ ಹುಟ್ಟಿ ಬೆಳೆದರೂ ಕುಟುಂಬ ಪಾಲನೆಯಲ್ಲೇ ಹೆಚ್ಚಿನ ಸಮಯ ಕಳೆದಿದ್ದರು. ಅವರ ಸಹೋದರ ಪದಂಸಿಂಗ್ ಬಾಜಿರಾವ್ ಪಾಟೀಲ್ ಅವರು ಮಾಜಿ ಸಚಿವರು, ಹಾಗೂ ಎನ್​ಸಿಪಿ ಪಕ್ಷದ ಆರಂಭಿಕರಲ್ಲಿ ಒಬ್ಬರು. ಶರದ್ ಪವಾರ್ ಅವರ ಆಪ್ತರೂ ಹೌದು.

ಇದನ್ನೂ ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?

ಪ್ರಬಲ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ ಸುನೇತ್ರಾ ಸಕ್ರಿಯ ರಾಜಕಾರಣಕ್ಕೆ ಬರಲು 61ನೇ ವಯಸ್ಸು ದಾಟಬೇಕಾಯಿತು. ತಮ್ಮ ಪತಿ ಪ್ರತಿನಿಧಿಸುತ್ತಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವುದರಲ್ಲೇ ಸುನೇತ್ರಾ ತೃಪ್ತಿಪಡುತ್ತಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದಿದ್ದರಾದರೂ ಅವರ ನಿರ್ಧಾರ ಒಲ್ಲದ ಮನಸ್ಸಿನದ್ದಾಗಿತ್ತು. ಆ ಕ್ಷೇತ್ರದಲ್ಲಿ ಶರದ್ ಪವಾರ್ ಮಗಳಾದ ಸುಪ್ರಿಯಾ ಸುಲೆ ಎದುರು ಸ್ಪರ್ಧಿಸಿ ಸೋತರು. ನಂತರ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಿಲ್ಲಿಸಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿಕೊಡಲಾಯಿತು. ಈ ಮೂಲಕ ಸುನೇತ್ರಾ ಪವಾರ್ ಅವರು ಸಂಸದರಾದರು.

ಇದನ್ನೂ ಓದಿ: ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ

ಸುನೇತ್ರಾ ಪವಾರ್ ಅವರನ್ನು ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಛಗನ್ ಭುಜಬಲ್, ಪ್ರಫುಲ್ ಪಟೇಲ್ ಮೊದಲಾದ ಅನುಭವಿ ರಾಜಕಾರಣಿಗಳಿರುವ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯೂ ಅವರ ಹೆಗಲಿಗಿದೆ. ಸಕ್ರಿಯ ಆಡಳಿತದಲ್ಲಿ ಅನುಭವ ಇಲ್ಲದಿದ್ದರೂ ಅದನ್ನು ನಿಭಾಯಿಸುವ ಅನಿವಾರ್ಯತೆ ಅವರಿಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Sat, 31 January 26

Source link

ಕರೆಂಟ್​​ ಶಾಕ್​​ಗೆ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಬಲಿ: ನೀರು ತರಲು ಹೋದಾಕೆ ನರಳಾಡಿ ಸಾವು – Kannada News | Raichur Govt School Tragedy: Student Tanushree Dies of Electric Shock from Faulty Water Purifier

ರಾಯಚೂರು, ಜನವರಿ 31: ನೀರು ತರಲು ಹೋದಾಗ ವಾಟರ್​​ ಪ್ಯೂರಿಫೈರ್​​ ಸ್ವಿಚ್​​ನಿಂದ ವಿದ್ಯುತ್​​ ಪ್ರವಹಿಸಿದ ಪರಿಣಾಮ ಕರೆಂಟ್​​ ಶಾಕ್​​ಗೆ ಸರಕಾರಿ ಶಾಲೆಯ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಶಾಮಣ್ಣ ಎಂಬವರ ಪುತ್ರಿಯಾಗಿರುವ ತನುಶ್ರೀ (11) ಮೃತ ದುರ್ದೈವಿ. ಶಿಕ್ಷಕಯೊಬ್ಬರು ಬಾಟಲ್​​ನಲ್ಲಿ ನೀರು ತುಂಬಿಸಿಕೊಂಡು ಬರಲು ಹೇಳಿದ ಕಾರಣ ಆಕೆ ವಾಟರ್​​ ಪ್ಯೂರಿಫೈರ್​​ ಬಳಿ ತೆರಳಿದ್ದಳು ಎನ್ನಲಾಗಿದೆ.

ಗ್ರಾಮದ ಕಿರಿಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ತನುಶ್ರೀ, ಓದಿನಲ್ಲಿಯೂ ಜಾಣೆಯಾಗಿದ್ದಳು. ಒಂದು ದಿನವೂ ತಪ್ಪಿಸದೆ ಶಾಲೆಗೆ ತೆರಳುತ್ತಿದ್ದಳು. ಶಿಕ್ಷಕರು ಹೇಳಿದ್ದಾರೆ ಎಂದು ನೀರು ತರಲು ಹೋದ ಈಕೆ ವಾಟರ್​​ ಪ್ಯೂರಿಫೈರ್​​ ಸ್ವಿಚ್​​ ಆನ್​​ ಮಾಡಿದ್ದಾಳೆ. ಆ ವೇಳೆ ಬಾಲಕಿಯ ಎಡಗೈಗೆ ವಿದ್ಯುತ್​​ ಶಾಕ್​​ ತಗುಲಿದ್ದು, ಅಲ್ಲೇ ಆಕೆ ಕುಸಿದು ಬಿದ್ದಿದ್ದಾಳೆ. ಇದನ್ನು ಗಮನಿಸಿದ ಶಿಕ್ಷಕರು ಕೂಡಲೇ ಸ್ಥಳೀಯ ವೈದ್ಯರೊಬ್ಬರನ್ನ ಕರೆಸಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ವೈದ್ಯರು ತನುಶ್ರೀ ಸ್ಥಿತಿ ಗಂಭಿರವಾಗಿದೆ ಎಂದು ಹೇಳಿದ ಕಾರಣ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ತಾಲೂಕು ಆಸ್ಪತ್ರೆ ಆವರಣದಲ್ಲಿಯೇ ಆಕೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ

ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ., ಸಿಂಧನೂರು ತಹಶಿಲ್ದಾರ್ ಗೆ ಆದೇಶಿಸಿದ್ದಾರೆ. ಬಿಇಒ, ತಹಶೀಲ್ದಾರ್, ಜೆಸ್ಕಾಂ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ತಪ್ಪಿತಸ್ಥ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಆಗಲಿದೆ ಎನ್ನಲಾಗಿದೆ. ಅಲ್ಲದೆ ಜಿಲ್ಲೆಯ ಉಳಿದ ಶಾಲೆಗಳಲ್ಲಿಯೂ ವಿದ್ಯುತ್ ಸಮಸ್ಯೆಗಳಿದ್ದರೆ ತಕ್ಷಣ ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಮೃತಳ ಕುಟುಂಬಕ್ಕೆ ಪರಿಹಾರ ನೀಡೋ ಭರವಸೆ ಜಿಲ್ಲಾಧಿಕಾರಿಗಳಿಂದ ಸಿಕ್ಕಿದೆ. ಇನ್ನು ಘಟನಾ ಸ್ಥಳಕ್ಕೆ ತುರ್ವಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತಳ ತಂದೆ ಶಾಮಣ್ಣ ನೀಡಿದ ದೂರಿನನ್ವಯ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಯಂಗ್ ಇಂಡಿಯಾಗೆ ಕ್ರಿಕೆಟ್ ದೇವರ ಪಾಠ – Kannada News | U19 World Cup: India vs Pakistan Showdown! Sachin Tendulkar’s Pep Talk Ignites Team India’s Semifinal Bid

ಅಂಡರ್ 19 ವಿಶ್ವಕಪ್​ನಲ್ಲಿ (U19 World Cup) ಫೆಬ್ರವರಿ 1 ರಂದು ಭಾರತ ಹಾಗೂ ಪಾಕಿಸ್ತಾನದ (India vs Pakistan) ಯುವ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಹಿಂದೆ ನಡೆದಿದ್ದ ಏಷ್ಯಾಕಪ್​ ಫೈನಲ್​ನಲ್ಲಿ ಭಾರತಕ್ಕೆ ಸೋಲಿನ ಆಘಾತ ನೀಡಿದ್ದ ಪಾಕ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಟೀಂ ಇಂಡಿಯಾವಿದೆ. ಅದಕ್ಕೆ ಪೂರಕವೆಂಬಂತೆ ಯುವ ಆಟಗಾರರಿಗೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಪಂದ್ಯಕ್ಕೆ ಒಂದು ದಿನ ಮೊದಲು ವಿಡಿಯೋ ಕರೆಯ ಮುಖಾಂತರ ಸವಾಂದ ನಡೆಸಿದ್ದಾರೆ. ಈ ವೇಳೆ ತಮ್ಮ ಅನುಭವಗಳನ್ನು ಧಾರೆ ಎರೆಯುವ ಮೂಲಕ ಯಂಗ್ ಇಂಡಿಯಾದ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ವೀಡಿಯೊ ಕರೆ

ಅಂಡರ್-19 ವಿಶ್ವಕಪ್ ಸೂಪರ್-6 ರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಗ್ರೂಪ್-1 ರಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮತ್ತು ಗ್ರೂಪ್-2 ರಿಂದ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಉಳಿದ ಸ್ಥಾನಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಪೈಪೋಟಿಯಲ್ಲಿವೆ. ಈ ಹೆಚ್ಚಿನ ಒತ್ತಡದ ಪಂದ್ಯಕ್ಕೂ ಮುನ್ನ, ಬಿಸಿಸಿಐ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಮ್ಮ ಯುವ ಆಟಗಾರರೊಂದಿಗೆ ವೀಡಿಯೊ ಕರೆಯ ಮೂಲಕ ಸಂವಾದ ನಡೆಸಿದರು. ಬ್ಯಾಟಿಂಗ್ ತಂತ್ರ ಮಾತ್ರವಲ್ಲದೆ, ಮಾನಸಿಕವಾಗಿ ಬಲಶಾಲಿ, ಶಿಸ್ತು ಮತ್ತು ನಮ್ರತೆ ಯಶಸ್ಸಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಂಕಪಟ್ಟಿಯಲ್ಲಿ ಭಾರತದ ಮೇಲುಗೈ

ಭಾರತ ತಂಡವು ಪ್ರಸ್ತುತ 3 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅದರ ನೆಟ್ ರನ್​ರೇಟ್ +3.337 ಆಗಿದೆ. ಇತ್ತ ಪಾಕಿಸ್ತಾನ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾನುವಾರ ಪಾಕಿಸ್ತಾನ ಗೆದ್ದರೂ ಸಹ ನೆಟ್​ ರನ್ ರೇಟ್​ನಲ್ಲಿ ಭಾರತವನ್ನು ಮೀರಿಸುವುದು ತುಂಬಾ ಕಷ್ಟಕರ. ಆದ್ದರಿಂದ ಪಾಕ್ ತಂಡ ಭಾರತದ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಬೇಕು. ಇತ್ತ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಸಾಕು ನೇರವಾಗಿ ಸೆಮಿಫೈನಲ್​ ಆಡಲಿದೆ.

ಉಭಯ ತಂಡಗಳ ನಡುವಿನ ಈ ಪಂದ್ಯವು ಫೆಬ್ರವರಿ 1 (ಭಾನುವಾರ) ರಂದು ಜಿಂಬಾಬ್ವೆಯ ಬುಲವಾಯೊದಲ್ಲಿರುವ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ನೀವು ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vijayanagara ZP Recruitment 2026: ವಿಜಯನಗರ ಜಿಲ್ಲಾ ಪಂಚಾಯತ್​ನಲ್ಲಿ ನೇಮಕಾತಿ; SLWM ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – Kannada News | SLWM Consultant Recruitment 2026: Vijayanagara ZP Invites Civil Engineers

ವಿಜಯನಗರ ಜಿಲ್ಲಾ ಪಂಚಾಯತ್ ನೇಮಕಾತಿ

ವಿಜಯನಗರ ಜಿಲ್ಲಾ ಪಂಚಾಯತ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಮೂಲಕ SLWM ಕನ್ಸಲ್ಟೆಂಟ್ (Solid Liquid Waste Management Consultant) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ  ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 12 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿಜಯನಗರ ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳ ವಿವರ:

  • ಸಂಸ್ಥೆಯ ಹೆಸರು: ವಿಜಯನಗರ ಜಿಲ್ಲಾ ಪಂಚಾಯತ್
  • ಹುದ್ದೆಯ ಹೆಸರು: SLWM ಕನ್ಸಲ್ಟೆಂಟ್
  • ಹುದ್ದೆಗಳ ಸಂಖ್ಯೆ: 1
  • ಉದ್ಯೋಗ ಸ್ಥಳ: ವಿಜಯನಗರ
  • ಸಂಬಳ: ತಿಂಗಳಿಗೆ 25,000 ರೂ.

ಶೈಕ್ಷಣಿಕ ಅರ್ಹತೆ:

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಭ್ಯರ್ಥಿಯ ಗರಿಷ್ಠ ವಯಸ್ಸು: 40 ವರ್ಷಗಳು

ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸುವ ವಿಧಾನ:

  • ಮೊದಲು ವಿಜಯನಗರ ಜಿಲ್ಲಾ ಪಂಚಾಯತ್ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ.
  • ಐಡಿ ಪ್ರೂಫ್, ವಯಸ್ಸಿನ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ ದಾಖಲೆಗಳು, ರೆಸ್ಯೂಮ್ ಹಾಗೂ (ಅನ್ವಯಿಸಿದರೆ) ಅನುಭವ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಸಿದ್ಧಪಡಿಸಿಕೊಳ್ಳಿ.
  • SLWM ಕನ್ಸಲ್ಟೆಂಟ್ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರದೊಂದಿಗೆ ಅಪ್‌ಲೋಡ್ ಮಾಡಿ.
  • ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ.

ಒಟ್ಟಾರೆ, ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ವೇತನದೊಂದಿಗೆ ವೃತ್ತಿಜೀವನ ಆರಂಭಿಸಲು ಬಯಸುವ ಸಿವಿಲ್ ಎಂಜಿನಿಯರಿಂಗ್ ಪದವೀಧರರಿಗೆ ವಿಜಯನಗರ ಜಿಲ್ಲಾ ಪಂಚಾಯತ್ SLWM ಕನ್ಸಲ್ಟೆಂಟ್ ಹುದ್ದೆ ಉತ್ತಮ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:34 pm, Sat, 31 January 26

Source link

ರಾಹುವಿನ ನಕ್ಷತ್ರದಲ್ಲೇ ಇರುವ ರಾಹುವು ಯಾವ ರಾಶಿಗೆ ಯಾವ ಫಲವನ್ನು ಕೊಡಬಹುದು? – Kannada News | Shatabhisha Rahu Transit: Impact on Zodiac Signs and Solutions for Doshas

ಶತಭಿಷ ನಕ್ಷತ್ರವು ರಾಹುವಿನ ಸ್ವಂತ ನಕ್ಷತ್ರವಾದ್ದರಿಂದ, ಇಲ್ಲಿ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟ, ಇನ್ನು ಕೆಲವು ರಾಶಿಗಳಿಗೆ ಸವಾಲುಗಳನ್ನು ನೀಡುತ್ತದೆ. ಶುಭ ಮತ್ತು ಅಶುಭ ಫಲಗಳನ್ನು ಇಲ್ಲಿ ನೋಡಬಹುದು.

ಅತ್ಯಂತ ಶುಭ ಫಲ ಪಡೆಯುವ ರಾಶಿಗಳು

ಈ ರಾಶಿಯವರಿಗೆ ರಾಹು ಯಶಸ್ಸು ಮತ್ತು ಆರ್ಥಿಕ ಲಾಭವನ್ನು ತಂದುಕೊಡುತ್ತಾನೆ.

​ಮೇಷ ರಾಶಿ:

ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನಿರೀಕ್ಷಿತ ಧನಲಾಭ ಮತ್ತು ವಿದೇಶಿ ವ್ಯವಹಾರಗಳಿಂದ ಲಾಭವಾಗಲಿದೆ.

​ಮಿಥುನ ರಾಶಿ:

ಅದೃಷ್ಟ ನಿಮ್ಮ ಪರ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನಾರಂಭವಾಗುತ್ತವೆ. ತೀರ್ಥಯಾತ್ರೆ ಅಥವಾ ದೂರದ ಪ್ರಯಾಣದ ಯೋಗವಿದೆ.

​ಕನ್ಯಾ ರಾಶಿ:

ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ ಇರಲಿದೆ. ಶತ್ರುಗಳ ಮೇಲೆ ಜಯ ಸಿಗುತ್ತದೆ ಮತ್ತು ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

​ಧನು ರಾಶಿ:

ನಿಮ್ಮ ಸಾಹಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಅಶುಭ ಫಲ

​ಈ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳಿತು.

​ಕುಂಭ ರಾಶಿ:

ರಾಹು ನಿಮ್ಮದೇ ರಾಶಿಯಲ್ಲಿ ಸಂಚರಿಸುವುದರಿಂದ ಮಾನಸಿಕ ಗೊಂದಲಗಳು ಉಂಟಾಗಬಹುದು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ

​ಮೀನ ರಾಶಿ:
ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವಿಶೇಷವಾಗಿ ನಿದ್ರೆಯ ಸಮಸ್ಯೆ ಕಾಡಬಹುದು.

​ಕರ್ಕಾಟಕ ರಾಶಿ:

ಅಷ್ಟಮ ರಾಹುವಿನ ಪ್ರಭಾವವಿರುವುದರಿಂದ ಹಠಾತ್ ಸಂಕಷ್ಟಗಳು ಬರಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣ ಹೂಡಿಕೆ ಮಾಡುವಾಗ ಜಾಗ್ರತೆ ವಹಿಸಿ.

​ಸಿಂಹ ರಾಶಿ:

ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.

ಅಶುಭವು ನ್ಯೂನವಾಗಲು ಪರಿಹಾರಗಳಿವು. ​ಒಂದು ವೇಳೆ ನಿಮಗೆ ಅಶುಭ ಫಲಗಳಿದ್ದರೆ, ಈ ಸರಳ ಕ್ರಮಗಳನ್ನು ಅನುಸರಿಸಬಹುದು. ​ದುರ್ಗಾ ದೇವಿಯ ಆರಾಧನೆ, ಪ್ರತಿದಿನ ಅಥವಾ ಶುಕ್ರವಾರ ದುರ್ಗಾ ಚಾಲೀಸಾ ಪಠಿಸುವುದು ಶ್ರೇಯಸ್ಕರ. ರಾಹುವಿನ ದೋಷ ನಿವಾರಣೆಗೆ ನಾಗರಿಗೆ ಅಭಿಷೇಕ ಮಾಡಿ.

​- ಲೋಹಿತ ಹೆಬ್ಬಾರ್

Source link

ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ? – Kannada News | Chakravarthy Chandrachud talks about CJ Roy and Telugu actress

ಸಿಜೆ ರಾಯ್ (CJ Roy) ಅವರು ನಿನ್ನೆ ನಿಧನರಾಗಿದ್ದು, ರಾಯ್ ಅವರು ಉದ್ಯಮಿ ಆಗಿರುವ ಜೊತೆಗೆ ಸಿನಿಮಾ ಮತ್ತು ಟಿವಿ ಲೋಕದೊಟ್ಟಿಗೆ ಆಪ್ತ ಸಂಬಂಧ ಹೊಂದಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದ ರಾಯ್ ಅವರು ನಟ, ನಟಿಯರೊಟ್ಟಿಗೆ ಗೆಳೆತನ ಹೊಂದಿದ್ದರು. ರಾಯ್ ಅವರ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್​​ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ರಾಯ್ ಅವರ ಖಾಸಗಿ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರನ್ನು ಹನಿ ಟ್ರ್ಯಾಪ್​​ಗೆ ಬೀಳಿಸುವ ಪ್ರಯತ್ನವನ್ನು ಇಬ್ಬರು ತೆಲುಗು ನಟಿಯರು ಹಿಂದೊಮ್ಮೆ ಮಾಡಿದ್ದರು ಎಂದು ಘಟನೆಯ ವಿವರವನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Career Horoscope 2026: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚು ಶ್ರಮವಹಿಸಬೇಕು

01-02-2026ರಿಂದ 07-02-2026 ರವರೆಗೆ ಉದ್ಯೋಗದಲ್ಲಿ ಶ್ರಮ ಹಾಕಬೇಕಾದ ಅನಿವಾರ್ಯತೆ ಇರಲಿದೆ. ಆಯ್ಕೆಗಳನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ರಕ್ಷಣೆಯನ್ನು ನೀವು ಎಲ್ಲ ಕಡೆಯಿಂದ ಎಲ್ಲ ತರದಲ್ಲಿಯೂ ಮಾಡಕೊಳ್ಳಬೇಕಾಗುವುದು. ಕಲಾತ್ಮಕತೆಗೆ ಹೆಚ್ಚು ಮಹತ್ತ್ವ ಸಿಗಲಿದೆ. ಈ ವಾರ ಶುಭವಾಗಲಿ.

ಮೇಷ :

ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಮೇಲಧಿಕಾರಿಗಳ ಬೆಂಬಲದಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ಲಾಭದೊಂದಿಗೆ ವೃತ್ತಿಜೀವನದಲ್ಲಿ ಬಡ್ತಿಯ ಯೋಗವಿದೆ. ನಿಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗುವ ಸಮಯವಿದು.

​ವೃಷಭ :

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಕಾರ್ಯಕ್ಷಮತೆ ಕುಂದುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರವಹಿಸಿ. ವ್ಯವಹಾರದಲ್ಲಿ ಹೊಸ ಹೂಡಿಕೆಗೆ ಈ ವಾರ ಪೂರಕವಾಗಿದೆ. ತಾಳ್ಮೆ ನಿಮ್ಮ ಯಶಸ್ಸಿನ ಸೂತ್ರ.

​ಮಿಥುನ :

ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿರುವವರಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ವಿದೇಶಿ ಕಂಪನಿಗಳೊಂದಿಗೆ ವ್ಯವಹರಿಸಲು ಇದು ಸಕಾಲ. ನಿಮ್ಮ ಸಂವಹನ ಕಲೆ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

​ಕರ್ಕಾಟಕ :

ಉದ್ಯೋಗ ಸ್ಥಳದಲ್ಲಿ ಶತ್ರುಗಳ ಬಗ್ಗೆ ಎಚ್ಚರವಿರಲಿ. ಅನಗತ್ಯ ವಾದಗಳಿಂದ ದೂರವಿರುವುದು ಒಳಿತು. ಕೆಲಸದ ಬದಲಾವಣೆಗಾಗಿ ಮಾಡುವ ಪ್ರಯತ್ನಗಳು ಸದ್ಯಕ್ಕೆ ಬೇಡ. ಶಿಸ್ತು ಮತ್ತು ಕಠಿಣ ಪರಿಶ್ರಮ ಮಾತ್ರ ನಿಮಗೆ ರಕ್ಷಣೆ ನೀಡಬಲ್ಲದು.

​ಸಿಂಹ :

ಸರ್ಕಾರಿ ಕೆಲಸದಲ್ಲಿರುವವರಿಗೆ ಶುಭ ಕಾಲ. ಹೊಸ ಯೋಜನೆಗಳನ್ನು ಜಾರಿಗೆ ತರಲು ಅನುಕೂಲಕರ ವಾರವಿದು. ಆದರೆ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಕಚೇರಿ ರಾಜಕೀಯದಿಂದ ದೂರವಿದ್ದು ನಿಮ್ಮ ಕೆಲಸದ ಮೇಲೆ ಗಮನಹರಿಸಿ.

​ಕನ್ಯಾ :

ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ಫಲ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ಆರಂಭಿಸಲು ಇದು ಉತ್ತಮ ಸಮಯ.

ತುಲಾ :

ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಕಲಾತ್ಮಕ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಕೆಲಸದ ನಿಮಿತ್ತ ಸಣ್ಣ ಪ್ರಯಾಣ ಮಾಡಬೇಕಾಗಬಹುದು. ಆರ್ಥಿಕ ವಿಷಯಗಳಲ್ಲಿ ಜಾಗರೂಕರಾಗಿರಿ ಮತ್ತು ಹಿರಿಯರ ಸಲಹೆಯನ್ನು ಪಡೆಯಲು ಹಿಂಜರಿಯಬೇಡಿ.

ವೃಶ್ಚಿಕ :

ವೃತ್ತಿ ಬದಲಾವಣೆಯ ಯೋಚನೆ ಇದ್ದರೆ ಎಚ್ಚರಿಕೆಯಿಂದ ನಿರ್ಧರಿಸಿ. ವರ್ಗಾವಣೆ ಬಯಸುವವರಿಗೆ ಅನುಕೂಲಕರ ಫಲಿತಾಂಶ ಸಿಗಬಹುದು. ಉದ್ಯೋಗದಲ್ಲಿ ಅನಿಶ್ಚಿತತೆ ಕಾಡದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಬಗ್ಗೆ ಮೇಲಧಿಕಾರಿಗಳಿಗೆ ಪಾರದರ್ಶಕವಾಗಿ ಮಾಹಿತಿ ನೀಡುವುದು ಉತ್ತಮ.

ಧನು :

ಉದ್ಯೋಗದಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ಹೊಸ ತಂತ್ರಜ್ಞಾನ ಕಲಿಕೆಗೆ ಆಸಕ್ತಿ ತೋರುವಿರಿ. ವ್ಯಾಪಾರಸ್ಥರಿಗೆ ದೊಡ್ಡ ಮೊತ್ತದ ಲಾಭದ ನಿರೀಕ್ಷೆಯಿದೆ. ನಿಮ್ಮ ನಾಯಕತ್ವ ಗುಣಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ.

ಮಕರ :

ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲು ವಿಳಂಬವಾಗಬಹುದು. ದೃತಿಗೆಡಬೇಡಿ, ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ. ತಾಂತ್ರಿಕ ವಲಯದವರಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ನಿಮ್ಮ ಕೆಲಸವನ್ನು ಸುಲಭಗೊಳಿಸಲಿದೆ.

ಕುಂಭ :

ರಾಹುವಿನ ಪ್ರಭಾವದಿಂದ ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು. ಗೊಂದಲಗಳಿಗೆ ಕಿವಿಗೊಡದೆ ಗುರಿಯತ್ತ ಗಮನಹರಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ಮಿಶ್ರ ಫಲ ಸಿಗಲಿದೆ. ನಿಮ್ಮ ಬುದ್ಧಿವಂತಿಕೆಯೇ ಸವಾಲುಗಳನ್ನು ಎದುರಿಸಲು ಪ್ರಮುಖ ಅಸ್ತ್ರವಾಗಲಿದೆ.

ಮೀನ :

ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ವಾರ. ಆದರೆ ಸ್ಥಳೀಯ ಉದ್ಯೋಗದಲ್ಲಿ ಅತೃಪ್ತಿ ಕಾಡಬಹುದು. ಕೆಲಸದ ನಿಮಿತ್ತ ಅತಿಯಾದ ಓಡಾಟದಿಂದ ದಣಿವಾಗಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಶಾಂತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಡಿ ಇಡಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಜೆರ್ಸಿ ಲಾಂಚ್ ಕಾರ್ಯಕ್ರಮ ರದ್ದು; ಹೊಸ ನಾಟಕ ಶುರು ಮಾಡಿದ ಪಾಕಿಸ್ತಾನ – Kannada News | Pakistan Cricket’s T20 World Cup Saga: Boycott Threats and Jersey Launch Drama

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭವಾಗಲು ಕೇವಲ ಒಂದು ವಾರ ಬಾಕಿ ಉಳಿದಿದೆ. ಆದರೆ ಹುಟ್ಟಿಕೊಂಡಿರುವ ವಿವಾದಗಳಿಗೆ ತೆರೆ ಬಿದ್ದಿಲ್ಲ. ಬಾಂಗ್ಲಾದೇಶ ತಂಡವನ್ನು ವಿಶ್ವಕಪ್​ನಿಂದ ಹೊರಹಾಕಿರುವುದಕ್ಕೆ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಿನಕ್ಕೊಂದು ನಾಟಕ ಶುರು ಮಾಡಿದೆ. ಈ ಮೊದಲು ಟಿ20 ವಿಶ್ವಕಪ್​ಗೆ ತಂಡವನ್ನು ಕಳುಹಿಸುವುದು ಇನ್ನು ನಿರ್ಧಾರವಾಗಿಲ್ಲ ಎಂದಿದ್ದ ಪಾಕ್ ಮಂಡಳಿ, ಆ ಬಳಿಕ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿತ್ತು. ತಂಡವನ್ನು ಪ್ರಕಟಿಸಿದ ಬಳಿಕ ಪಾಕ್ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದು ಖಚಿತ ಎಂದಾಗಿತ್ತು. ಆದರೀಗ ಹೊಸ ವರಸೆ ಶುರು ಮಾಡಿರುವ ಪಾಕ್ ಮಂಡಳಿ, ಶನಿವಾರ ನಡೆಯಬೇಕಿದ್ದ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ.

ಜೆರ್ಸಿ ಅನಾವರಣ ಕಾರ್ಯಕ್ರಮ ರದ್ದು

ವಾಸ್ತವವಾಗಿ ಟಿ20 ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡನೇ ಟಿ20 ಪಂದ್ಯದ ಟಾಸ್ ನಂತರ ಜೆರ್ಸಿಯನ್ನು ಅನಾವರಣಗೊಳಿಸಬೇಕಿತ್ತು. ಆದಾಗ್ಯೂ, ಸರ್ಕಾರದ ವಿದೇಶಾಂಗ ಸಚಿವಾಲಯದ ಅನುಮತಿ ಸಿಕ್ಕಿಲ್ಲದ ಕಾರಣ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ, ಪಾಕಿಸ್ತಾನ ನಿಜವಾಗಿಯೂ ವಿಶ್ವಕಪ್ ಆಡುತ್ತದೆಯೇ ಅಥವಾ ಇಲ್ಲವೇ ಎಂಬ ಸಸ್ಪೆನ್ಸ್ ಉತ್ತುಂಗಕ್ಕೇರಿದೆ.

ಐಸಿಸಿಯಿಂದ ಭಾರಿ ದಂಡ

ಭಾರತ ಮತ್ತು ಶ್ರೀಲಂಕಾ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ, ಪಾಕಿಸ್ತಾನವು ಪ್ರತಿ ಹಂತದಲ್ಲೂ ಹೊಸ ಹೊಸ ಕ್ಯಾತೆ ತೆಗೆಯುತ್ತಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗಾಗಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಐಸಿಸಿ ಟೂರ್ನಮೆಂಟ್‌ನಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿ ಸ್ಕಾಟ್ಲೆಂಡ್ ಅನ್ನು ಸೇರಿಸಿದ್ದನ್ನು ಪಾಕಿಸ್ತಾನ ತೀವ್ರವಾಗಿ ಪ್ರತಿಭಟಿಸುತ್ತಿದೆ. ಪಾಕಿಸ್ತಾನ ಸರ್ಕಾರ ಆರಂಭದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಪಂದ್ಯಾವಳಿಯನ್ನು ಬಹಿಷ್ಕರಿಸಲು ಯೋಚಿಸಿದ್ದರೂ, ಐಸಿಸಿಯಿಂದ ಭಾರಿ ದಂಡ ಮತ್ತು ನಿರ್ಬಂಧಗಳ ಭಯದಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತೋರುತ್ತದೆ. ಆದಾಗ್ಯೂ, ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿರುವ ಹಿಂದೆ ಕೆಲವು ಬಲವಾದ ರಾಜಕೀಯ ತಂತ್ರವಿದೆ ಎಂಬ ಮಾತು ಕೇಳಿಬರುತ್ತಿದೆ.

ಐಸಿಸಿ ಆದಾಯಕ್ಕೆ ಹೊಡೆತ

ಇತ್ತೀಚಿನ ಮಾಹಿತಿಯ ಪ್ರಕಾರ, ಪಾಕಿಸ್ತಾನ ತಂಡವು ಫೆಬ್ರವರಿ 2 (ಸೋಮವಾರ) ರಂದು ಕೊಲಂಬೊಗೆ ಪ್ರಯಾಣಿಸಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಅದೇ ದಿನ ಪಾಕಿಸ್ತಾನ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ತಂಡವು ನೇರವಾಗಿ ಶ್ರೀಲಂಕಾವನ್ನು ತಲುಪುತ್ತದೆ. ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ತನ್ನ ಗುಂಪು ಪಂದ್ಯಗಳನ್ನು ಶ್ರೀಲಂಕಾದಲ್ಲಿಯೇ ಆಡಲಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಪಾಕ್ ತಂಡ ಈ ಪಂದ್ಯವನ್ನು ಬಹಿಷ್ಕರಿಸುವ ಮಾತುಗಳನ್ನಾಡುತ್ತಿದೆ. ಒಂದು ವೇಳೆ ಪಾಕ್ ತಂಡ ಈ ನಿರ್ಧಾರ ತೆಗೆದುಕೊಂಡರೆ ಅದು ಐಸಿಸಿ ಆದಾಯಕ್ಕೆ ಹೊಡೆತ ನೀಡಲಿದೆ.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

ನಾನು ರೆಡಿ ಎಂದ ಉಗಾಂಡ

ಮತ್ತೊಂದೆಡೆ ಉಗಾಂಡಾದಂತಹ ಸಣ್ಣ ದೇಶದ ಕ್ರಿಕೆಟ್ ಮಂಡಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ನಿಲುವನ್ನು ಗೇಲಿ ಮಾಡುತ್ತಿವೆ. “ನೀವು ಬರದಿದ್ದರೆ, ನಾವು ಬರಲು ಸಿದ್ಧರಿದ್ದೇವೆ, ನಮ್ಮ ಪಾಸ್‌ಪೋರ್ಟ್‌ಗಳು ಸಿದ್ಧವಾಗಿವೆ” ಎಂದು ಉಗಾಂಡಾ ಕ್ರಿಕೆಟ್ ಪೋಸ್ಟ್ ಮಾಡಿರುವ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಐಸಿಸಿ ನಿಯಮಗಳ ಪ್ರಕಾರ, ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರೆ, ಅದರ ಮೇಲೆ ಶಾಶ್ವತ ನಿಷೇಧ ಹೇರುವ ಸಾಧ್ಯತೆಯಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ವಾರ್ಷಿಕ $34.5 ಮಿಲಿಯನ್ ಆದಾಯಕ್ಕೆ ಕತ್ತರಿ ಬೀಳಲಿದೆ.

Published On – 4:50 pm, Sat, 31 January 26

Source link

Chanakya Niti: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ – Kannada News | Chanakya Niti: To avoid trouble in life, do not share these personal secrets of yours with anyone

ಬಹುತೇಕ ಹೆಚ್ಚಿನವರು ತಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಗಳು, ರಹಸ್ಯಗಳ (secrets) ಬಗ್ಗೆ ಯಾರೊಂದಿಗಾದರೂ ಶೇರ್‌ ಮಾಡುತ್ತಲೇ ಇರುತ್ತಾರೆ. ಈ ಅಭ್ಯಾಸ ಖಂಡಿತವಾಗಿಯೂ ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಯಶಸ್ಸಿಗೆ ಅಡ್ಡಿಯುಂಟಾಗುವುದು ಮಾತ್ರವಲ್ಲದೆ, ಸಾಕಷ್ಟು ಸಂಕಷ್ಟಗಳು ಸಹ ಎದುರಾಗಬಹುದು. ಹಾಗಾಗಿ ಯಶಸ್ವಿ, ಒತ್ತಡರಹಿತ ಜೀವನವನ್ನು ನಡೆಸಲು, ಆರ್ಥಿಕವಾಗಿ ಮುಂದುವರೆಯಲು  ಬಯಸಿದರೆ ನೀವು ಈ ಕೆಲವೊಂದು ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ:

ನಿಮ್ಮ ಭವಿಷ್ಯದ ಯೋಜನೆಗಳು: ಚಾಣಕ್ಯರ ಪ್ರಕಾರ ಯಾರೊಬ್ಬರೂ  ಸಹತಮ್ಮ ಭವಿಷ್ಯದ ಯೋಜನೆಗಳನ್ನು ಯಾರೊಂದಿಗೂ ಬಹಿರಂಗಪಡಿಸಬಾರದು. ಹಾಗೆ ಮಾಡುವುದರಿಂದ ನೀವು ಆ ಯೋಜನೆಗಳನ್ನು ಪ್ರಾರಂಭಿಸುವ ಮೊದಲೇ ಅಡೆತಡೆಗಳು ಉಂಟಾಗಬಹುದು.ಹೌದು ಕೆಲವರು ತಮ್ಮ ಅಸೂಯೆಯ ಕಾರಣದಿಂದ ನಿಮ್ಮ ಯೋಜನೆಗಳಿಗೆ ಕಲ್ಲು ಹಾಕುವ ಸಾಧ್ಯತೆ ಇರುತ್ತದೆ. ಆದ್ದರಿಂದ  ನಿಮ್ಮ ಗುರಿಗಳು ಮತ್ತು ತಂತ್ರಗಳನ್ನು ಯಾವಾಗಲೂ ಗೌಪ್ಯವಾಗಿಡಿ.

ನಿಮ್ಮ ಆರ್ಥಿಕ ಸ್ಥಿತಿ: ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಎಂದಿಗೂ ಯಾರ ಬಳಿಯೂ ಹೇಳಿಕೊಳ್ಳಬಾರದು. ನೀವು ಶ್ರೀಮಂತರಾಗಿದ್ದರೆ, ನಿಮ್ಮ ಆದಾಯವನ್ನು ಬಹಿರಂಗಪಡಿಸುವುದರಿಂದ ಇತರರಲ್ಲಿ ಅಸೂಯೆ ಅಥವಾ ಅಸಮಾಧಾನ ಉಂಟಾಗಬಹುದು. ಇದೇ ಕಾರಣ ಇಟ್ಟುಕೊಂಡು ನಿಮಗೆ ತೊಂದರೆಯನ್ನೂ ಉಂಟು ಮಾಡಬಹುದು. ಮತ್ತೊಂದೆಡೆ, ನೀವು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ, ಜನರು ನಿಮ್ಮನ್ನು ಕೀಳಾಗಿ ಕಾಣಲು ಪ್ರಾರಂಭಿಸಬಹುದು.

ಇತರರೊಂದಿಗಿನ ಖಾಸಗಿ ಸಂಭಾಷಣೆಗಳು: ಇಬ್ಬರು ವ್ಯಕ್ತಿಗಳ ನಡುವೆ ಚರ್ಚಿಸಲ್ಪಟ್ಟ ವಿಷಯಗಳು ಅವರಿಬ್ಬರ ನಡುವೆಯೇ ಇರಬೇಕು, ಆ ಗುಟ್ಟಿನ ವಿಚಾರವನ್ನು ಮೂರನೇ ವ್ಯಕ್ತಿಯ ಬಳಿ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಯಾರಾದರೂ ನಿಮ್ಮನ್ನು ಖಾಸಗಿಯಾಗಿ ಹೊಗಳಿದರೆ, ಗೌಪ್ಯವಾಗಿ ಸಹಾಯ ಕೇಳಿದರೆ ಅಥವಾ ನಿಮ್ಮ ಮೇಲೆ ನಂಬಿಕೆ ಇಟ್ಟು ಇನ್ಯಾವುದೇ ವಿಚಾರಗಳ ಬಗ್ಗೆ ಶೇರ್‌ ಮಾಡಿಕೊಂಡರೆ  ನೀವು ಆ ಸಂಭಾಷಣೆಯನ್ನು ಇತರರಿಗೆ ಎಂದಿಗೂ ಬಹಿರಂಗಪಡಿಸಬಾರದು. ಈ ರೀತಿ ಮಾಡುವುದರಿಂದ ನಂಬಿಕೆ ಹಾಳಾಗುವುದಲ್ಲದೆ, ಸಂಬಂಧದಲ್ಲಿಯೂ ಬಿರುಕು ಮೂಡಬಹುದು.

ಇದನ್ನೂ ಓದಿ: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ತತ್ವಗಳನ್ನು ಅನುಸರಿಸಿ

ನಿಮ್ಮ ವೈಯಕ್ತಿಕ ಜೀವನ: ಚಾಣಕ್ಯರ ಪ್ರಕಾರ, ಹಿಂದಿನ ಸಂಬಂಧಗಳು, ಕೌಟುಂಬಿಕ ವಿವಾದಗಳು ಅಥವಾ ಇತರ ಖಾಸಗಿ ಸಮಸ್ಯೆಗಳಂತಹ ವೈಯಕ್ತಿಕ ವಿಷಯಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ನಿಮ್ಮ ಈ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ನಿಮಗೆಯೇ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಮನಸ್ಸಿನ ಶಾಂತಿಯನ್ನೇ ಕದಡುತ್ತದೆ.

ನಿಮ್ಮ ಅನಾರೋಗ್ಯ, ದೌರ್ಬಲ್ಯ: ನಿಮ್ಮ ಅನಾರೋಗ್ಯ, ನಿಮ್ಮ ದೌರ್ಬಲ್ಯವನ್ನು ಇತರರೊಂದಿಗೆ ಯಾವತ್ತಿಗೂ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ನಿಮ್ಮ ದೌರ್ಬಲ್ಯಗಳ ಬಗ್ಗೆ ಹಂಚಿಕೊಂಡರೆ ಜನರು ನಿಮ್ಮ ಸ್ಥಿತಿಯ ಲಾಭ ಪಡೆಯಬಹುದು ಮತ್ತು ಇದು ಭವಿಷ್ಯದಲ್ಲಿ ನಿಮಗೆ ತುಂಬಾ ಹಾನಿಯನ್ನು ಮಾಡಬಹುದು. ಆದ್ದರಿಂದ ಇಂತಹ ಸೂಕ್ಷ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡದಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link