ಬೆಂಗಳೂರು, ಜನವರಿ 31: ಸಿ.ಜೆ. ರಾಯ್ ಅವರ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ವಿಶೇಷವಾಗಿ, ಅವರು ಅಂತರರಾಷ್ಟ್ರೀಯ ಹವಾಲಾ ಮಾಫಿಯಾದಲ್ಲಿ ಭಾಗಿಯಾಗಿದ್ದರೇ ಮತ್ತು ಮುಂಬರುವ ಕೇರಳ ಚುನಾವಣೆಗಳಿಗೆ ವಿದೇಶದಿಂದ ಹವಾಲಾ ಮೂಲಕ ಹಣವನ್ನು ರಾಜಕೀಯ ಪಕ್ಷಗಳಿಗೆ ವರ್ಗಾಯಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಮತ್ತು ರೆವೆನ್ಯೂ ಇಂಟೆಲಿಜೆನ್ಸ್ ಕಳೆದ ಆರು ತಿಂಗಳಿಂದ ರಾಯ್ ಅವರ ಹಣಕಾಸು ವ್ಯವಹಾರಗಳ ಮೇಲೆ ನಿರಂತರವಾಗಿ ಕಣ್ಗಾವಲು ಇರಿಸಿದ್ದವು.
ರಾಯ್ ಅವರು ರಾಜಕೀಯ ಪ್ರವೇಶ ಮಾಡುವ ಯೋಜನೆಯನ್ನು ಹೊಂದಿದ್ದರು ಮತ್ತು ಹವಾಲಾ ಹಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದರು ಎಂಬ ಅನುಮಾನಗಳೂ ಕೇಳಿಬಂದಿವೆ. ಅಧಿಕಾರಿಗಳಿಗೆ ಲಭ್ಯವಾಗಿರುವ ದಾಖಲೆಗಳು ಮತ್ತು ರಾಯ್ ಅವರ ಮೊಬೈಲ್ ಚಾಟ್‌ಗಳು ಈ ಎಲ್ಲಾ ಅಂಶಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಜೈಲು ಶಿಕ್ಷೆಯ ಭಯ ಅಥವಾ ಅವ್ಯವಹಾರಗಳು ಬಹಿರಂಗಗೊಳ್ಳುವ ಆತಂಕ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.
ತುಮಕೂರು, ಜನವರಿ 31: ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆ ಮುಂದುವರಿದಿದ್ದು, ತುಮಕೂರು (Tumakur) ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ವಾಪಸ್ ನೀಡುವ ನೆಪದಲ್ಲಿ ಪಿಎಸ್‌ಐ ಚೇತನ ಕುಮಾರ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಅವರನ್ನು ಬಂಧಿಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದೆ. ಸರ್ಕಾರಿ ಕಚೇರಿಯಲ್ಲೇ ಲಂಚ ಸ್ವೀಕಾರ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಡ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಯನ್ನು ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿದ್ದು, ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ 4 ಲಕ್ಷ ರೂ. ಲಂಚ ಪಡೆಯುವಾಗ ಅವರನ್ನು ಬಂಧಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲೇ ಹೆಚ್ಚುತ್ತಿರುವ ಭ್ರಷ್ಟಾಚಾರ
ಸತತವಾಗಿ ಪೊಲೀಸ್ ಅಧಿಕಾರಿಗಳೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವ ಘಟನೆಗಳು ಪೊಲೀಸ್ ಇಲಾಖೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾರ್ವಜನಿಕರ ವಿಶ್ವಾಸ ಕಾಪಾಡಬೇಕಾದ ಅಧಿಕಾರಿಗಳೇ ಲಂಚದ ದಂಧೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ವಿಜಯಪುರ ಸರ್ಕಾರಿ ಉರ್ದು ಶಾಲೆಯಲ್ಲಿ ಕೆಮಿಕಲ್ ಸ್ಫೋಟ: 7ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯ
ಬೆಂಗಳೂರು ಗ್ರಾಮಾಂತರ, ಜನವರಿ 31: ಜಿಲ್ಲೆಯ (Bengaluru Rural) ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ ಕೆಮಿಕಲ್ ಸ್ಫೋಟ ಸಂಭವಿಸಿ, ಏಳನೇ ತರಗತಿಯೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಪಟ್ಟಣದ ಜಿಲ್ಲಾ ಗ್ರಂಥಾಲಯದ ಮುಂಭಾಗದಲ್ಲಿರುವ ಈ ಶಾಲೆಯಲ್ಲಿ ಘಟನೆ ನಡೆದಿದ್ದು, ಕ್ಷಣಕಾಲ ಶಾಲಾ ವಾತಾವರಣದಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾರ್ಬನ್ ಕೆಮಿಕಲ್ ನೀರಿಗೆ ಮಿಕ್ಸ್ ಮಾಡಿದ್ದ ವಿದ್ಯಾರ್ಥಿ
ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕಾರ್ಬನ್ ಕೆಮಿಕಲ್ ಅನ್ನು ಶಾಲೆಗೆ ತಂದು, ಶೌಚಾಲಯದಲ್ಲಿ ಒಂದು ಜಗ್ ನೀರಿಗೆ ಹಾಕಿ ಪ್ರಯೋಗ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಅಚಾನಕವಾಗಿ ಜಗ್ ಸ್ಫೋಟಗೊಂಡಿದ್ದು, ಅದರ ಪರಿಣಾಮವಾಗಿ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ವಿದ್ಯಾರ್ಥಿಯ ಬಟ್ಟೆಗಳು ಸುಟ್ಟುಹೋಗಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ಆತನ ಬಟ್ಟೆಗಳನ್ನು ತೆಗೆದು, ಪ್ರಾಥಮಿಕ ನೆರವು ನೀಡಿ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟ ಸಂಭವಿಸಿದ ತಕ್ಷಣ ಶಾಲೆಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಪಡೆದ ವಿಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್ ಶಾಲೆಗೆ ಹೇಗೆ ತರಲಾಯಿತು ಎಂಬಿನ್ನಿತರ ವಿಷಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಶಾಲಾ ಆವರಣದಲ್ಲಿ ಭದ್ರತೆ ಮತ್ತು ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ತಮಿಳುನಾಡಿನ ತಿರುಚ್ಚಿಯಲ್ಲಿ (Trichy) ನಡೆದ ಘಟನೆ ರಾಜ್ಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪಕ್ಷವೊಂದರ ಪ್ರಮುಖ ನಾಯಕನೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆ ಮಹಿಳೆಯ ಪತಿ ತನ್ನ ಸಹಚರರೊಂದಿಗೆ ಕಾರನ್ನು ಅಡ್ಡಗಟ್ಟಿದ್ದಾನೆ. ಮಹಿಳೆಯ ಪತಿ ಮತ್ತು ಅವನ ತಂಡವು ಕಾರ್ ನಲ್ಲಿದ್ದ ಪಕ್ಷದ ನಾಯಕ ಮತ್ತು ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಆವೇಶದಲ್ಲಿ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಅಕ್ರಮ ಸಂಬಂಧದ ಶಂಕೆಯಿಂದ ಈ ದಾಳಿ ಮಾಡಿದ್ದಾನೆ. ನ್ನ ಪತ್ನಿ ಆ ನಾಯಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ದ್ವೇಷದಿಂದ ಪತಿಯು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗಲಾಟೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡಿದ್ದಕ್ಕಾಗಿ ಮತ್ತು ಹಲ್ಲೆ ನಡೆಸಿದ್ದಕ್ಕಾಗಿ ಮಹಿಳೆಯ ಪತಿ ಮತ್ತು ಅವನ ಸಹಚರರ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು, ಜನವರಿ 31: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಈ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ‘ಟಿವಿ9’ ಜತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬುಲೆಟ್ ಎದೆಯ ಎಡಭಾಗಕ್ಕೆ ಹೊಕ್ಕಿದೆ. ಅದು ದೇಹದಿಂದ ಹೊರಹೋಗದೆ ಒಳಗೆ ಉಳಿದಿದೆ. 6.35 ಮಿಲಿಮೀಟರ್ ಗಾತ್ರದ ಬುಲೆಟ್ ಹೃದಯ, ಶ್ವಾಸಕೋಶದ ಕೆಳಭಾಗ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಹಾಗೆಯೇ, ಹೊಟ್ಟೆಯ ಒಂದು ಭಾಗಕ್ಕೂ ತಗುಲಿ ಡಯಾಫ್ರಮ್‌ಗೆ ಭಾರಿ ಹಾನಿಯಾಗಿದೆ. ಬುಲೆಟ್ ಹಿಂದಿನ ಪಕ್ಕೆಲುಬುಗಳವರೆಗೆ ತಲುಪಿತ್ತು. ಸಿಜೆ ರಾಯ್ ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತದೇಹದಿಂದ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಮತ್ತು ಗುಂಡು ಹಾರಿದ ಬಗ್ಗೆ ಬೆರಳಚ್ಚು ಪರೀಕ್ಷೆಗಾಗಿ ಕೈ ಮತ್ತು ಬೆರಳಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಡಾ. ಅರವಿಂದ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಅನುರಾಧಾ ಠಾಕೂರ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ: ಈ ಬಾರಿಯ ಬಜೆಟ್ನ ಮುಖ್ಯ ರೂವಾರಿ ಇವರೇ ಎಂದು ಹೇಳಲಾಗುತ್ತಿದೆ. ಆರ್ಥಿಕ ವ್ಯವಹಾರಗಳ ಇಲಾಖೆಗೆ 2025ರ ಜುಲೈ 1ರಂದು ಕಾರ್ಯದರ್ಶಿಯಾಗಿ ಚುಕ್ಕಾಣಿ ಹಿಡಿದ ಇವರಿಗೆ ಇದು ಮೊದಲ ಬಜೆಟ್ ಅನುಭವ. ಆದರೂ ಕೂಡ ಬಜೆಟ್ ವಿಭಾಗದ ನೇತೃತ್ವದ ಜವಾಬ್ದಾರಿಯನ್ನು ಇವರಿಗೆ ಕೊಡಲಾಗಿದೆ. ಯಾವ್ಯಾವ ಇಲಾಖೆಗೆ ಎಷ್ಟು ಸಂಪನ್ಮೂಲ ನೀಡಬೇಕೆಂದು ನಿರ್ಧರಿಸುವಲ್ಲಿ ಇವರ ಪಾತ್ರ ದೊಡ್ಡದು.
ಅರುಣೀಶ್ ಚಾವ್ಲಾ, ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ: ಸರ್ಕಾರೀ ಸಂಸ್ಥೆಗಳ ಬಂಡವಾಳ ಹಿಂತೆಗೆತ, ಖಾಸಗೀಕರಣದ ಜವಾಬ್ದಾರಿ ಇವರ ಇಲಾಖೆಯದ್ದು. ಸರ್ಕಾರಿ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆದುಕೊಂಡು ಆ ಮೂಲಕ ತೆರಿಗೆಯೇತರ ಕಂದಾಯದ ಆದಾಯ ನಿರ್ವಹಿಸುವ ಹೊಣೆ ಇವರದ್ದು.
ಅರವಿಂದ್ ಶ್ರೀವಾಸ್ತವ, ರೆವೆನ್ಯೂ ಸೆಕ್ರೆಟರಿ: ಇವರು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಎರಡರ ಮೇಲ್ವಿಚಾರಣೆ ಮಾಡುತ್ತಾರೆ. ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಬರುವ ಟ್ಯಾಕ್ಸ್ ಪ್ರೊಪೋಸಲ್ಗಳನ್ನು ತಯಾರಿಸಿದವರು ಇವರೆಯೇ. ರೆವೆನ್ಯೂ ಕಾರ್ಯದರ್ಶಿಯಾಗಿ ಇವರಿಗೆ ಇದು ಮೊದಲ ಬಜೆಟ್.
ಕೆ ಮೋಸಸ್ ಚಲಾಯ್, ಸರ್ಕಾರಿ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ: ಆಯ್ದ ಸರ್ಕಾರಿ ಉದ್ದಿಮೆಗಳ ಬಂಡವಾಳ ವೆಚ್ಚ ಎಷ್ಟಿರುತ್ತೆ ಎಂಬುದನ್ನು ಇವರು ಗಮನಿಸುತ್ತಾರೆ. ಬಜೆಟ್ನಲ್ಲಿ ನೀಡಲಾಗಿರುವ ಹಣ ಸರಿಯಾಗಿ ವಿನಿಯೋಗ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸುತ್ತಾರೆ.
ಎಂ ನಾಗರಾಜು, ಹಣಕಾಸು ಸೇವೆಗಳ ಕಾರ್ಯದರ್ಶಿ: ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಸ್ಕೀಮ್ಗಳನ್ನು ಇವರು ನಿಕಟವಾಗಿ ಗಮನಿಸುತ್ತಾರೆ. ಇನ್ಷೂರೆನ್ಸ್ ಕಂಪನಿಗಳು, ಸರ್ಕಾರಿ ಬ್ಯಾಂಕುಗಳು, ಪಿಂಚಣಿ ಸಿಸ್ಟಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯಾ ಎಂಬುದನ್ನು ಗಮನಿಸುತ್ತಾರೆ.
ವಿ ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ: ಆರ್ಥಿಕ ಸಮೀಕ್ಷೆಯ ರೂವಾರಿ ಇವರೆಯೇ. ಒಟ್ಟಾರೆ ಸ್ಥೂಲ ಆರ್ಥಿಕ ದೃಷ್ಟಿಕೋನವನ್ನು ಇವರು ಬಜೆಟ್ಗೆ ನೀಡುತ್ತಾರೆ. ಆರ್ಥಿಕ ಸ್ಥಿತಿ ಹೇಗಿರುತ್ತದೆ, ಜಾಗತಿಕ ಪರಿಸ್ಥಿತಿ ಹೇಗಿದೆ, ವಿವಿಧ ಸೆಕ್ಟರ್ಗಳ ಆರೋಗ್ಯ ಹೇಗಿದೆ ಎಂಬುದನ್ನು ಇವರು ತಿಳಿಸುತ್ತಾರೆ. ಇವರ ಸಲಹೆ ಆಧಾರದ ಮೇಲೆ ಬಜೆಟ್ ಅಲೋಕೇಶನ್ ಆಗಬಹುದು.
ವುಮ್ಲುನ್ಮಾಂಗ್ ವುವಾಲ್ನಮ್, ಎಕ್ಸ್ಪೆಂಡಿಚರ್ ಸೆಕ್ರೆಟರಿ: ಸರ್ಕಾರ ಮಾಡುವ ವೆಚ್ಚ, ಸಬ್ಸಿಡಿ, ಕೇಂದ್ರ ಸ್ಕೀಮ್ಗಳ ಅನುಷ್ಠಾನ ಇತ್ಯಾದಿಯ ಮೇಲ್ವಿಚಾರಣೆ ಇವರು ಮಾಡುತ್ತಾರೆ. ವಿತ್ತೀಯ ಕೊರತೆ ಮಿತಿಮೀರದಂತೆ ಎಚ್ಚರವಹಿಸುತ್ತಾ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಇವರ ಇಲಾಖೆ ಆದ್ಯತೆ ಕೊಡುತ್ತದೆ. ಹೀಗಾಗಿ, ಬಜೆಟ್ನಲ್ಲಿ ಸರ್ಕಾರದ ವೆಚ್ಚಗಳನ್ನು ಇವರು ಕೂಲಂಕಷವಾಗಿ ಪರಿಶೀಲಿಸಿರುತ್ತಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಜ.31) ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಸಂಜು ಸ್ಯಾಮ್ಸನ್ ಪಾಲಿಗೆ ಕೊನೆಯ ಚಾನ್ಸ್. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 10 ರನ್ ಬಾರಿಸಿದ್ದ ಸ್ಯಾಮ್ಸನ್, ದ್ವಿತೀಯ ಪಂದ್ಯದಲ್ಲಿ 6 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹಾಗೆಯೇ ನಾಲ್ಕನೇ ಪಂದ್ಯದಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಅಂದರೆ ಕಳೆದ ನಾಲ್ಕು ಇನಿಂಗ್ಸ್ಗಳ ಮೂಲಕ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 40 ರನ್ಗಳು ಮಾತ್ರ. ಹೀಗಾಗಿಯೇ ಐದನೇ ಟಿ20 ಪಂದ್ಯವು ಸಂಜು ಸ್ಯಾಮ್ಸನ್ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಮಾತ್ರ ಅವರು ಟಿ20 ವಿಶ್ವಕಪ್ನಲ್ಲಿ ಆರಂಭಿಕನಾಗಿ ಮುಂದುವರೆಯಬಹುದು.
ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು:
ಸಂಜು ಸ್ಯಾಮ್ಸನ್ ಐದನೇ ಟಿ20 ಪಂದ್ಯದಲ್ಲೂ ವಿಫಲರಾದರೆ, ಟಿ20 ವಿಶ್ವಕಪ್ನಲ್ಲಿ ಆರಂಭಿಕನಾಗಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ತಿಲಕ್ ವರ್ಮಾ ಮುಂಬರುವ ಟಿ20 ವಿಶ್ವಕಪ್ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಅಲ್ಲದೆ ಟಿ20 ವಿಶ್ವಕಪ್ನಲ್ಲಿ ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇತ್ತ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ಕೊನೆಯ ಟಿ20 ಪಂದ್ಯದಲ್ಲೂ ವಿಫಲರಾದರೆ ಇಶಾನ್ ಕಿಶನ್ಗೆ ಆರಂಭಿಕನ ಸ್ಥಾನ ದೊರೆಯುವುದು ಖಚಿತ. ಹೀಗಾಗಿಯೇ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯವು ಸಂಜು ಸ್ಯಾಮ್ಸನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರೆ ಟಿ20 ವಿಶ್ವಕಪ್ನಲ್ಲಿ ಅಭಿಷೇಕ್ ಶರ್ಮಾ ಜೊತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.
14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿ ಉತ್ಖನನ; ಈ ವರೆಗೂ 45ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳು ಪತ್ತೆ
ಗದಗ, ಜನವರಿ 31: ಜಿಲ್ಲೆಯ (Lakkundi Excavtion)ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನ ಕಾರ್ಯ 14ನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನದಲ್ಲಿ ಈವರೆಗೂ 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯಾವಶೇಷ ವಸ್ತುಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಖನನ?
ಲಕ್ಕುಂಡಿಯ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯವಸ್ತುಗಳ ಕುರಿತು ಮಾತನಾಡಿದ ಐತಿಹಾಸಿಕ ತಜ್ಞ ಷಡಕ್ಷರಯ್ಯಾ, ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷ ಮತ್ತು ನಾಗ ಮೂರ್ತಿಗಳು ಪತ್ತೆಯಾಗಿವೆ. ಲಕ್ಕುಂಡಿಯ ಸಂಪೂರ್ಣ ಐತಿಹಾಸಿಕ ವಸ್ತುಗಳನ್ನು ಹೊರತೆಗೆಯಲು ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಖನ ಮಾಡಬೇಕು.ಕೆಲವು ಶಿಲೆ, ಧಾರ್ಮಿಕ ವಸ್ತುಗಳು ನೆಲದ ಮೂರು-ನಾಲ್ಕು ಅಡಿ ಕೆಳಗೆ ಸಿಕ್ಕಿದ್ದು, ನಿಧಿ ಹೇಗೆ ಸಿಕ್ಕಿದೆ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ.
ಆರೋಗ್ಯ ಸಮಸ್ಯೆಗೆ ಸಿಲುಕಿದ ಪುಟ್ಟ ಮಕ್ಕಳು
ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. LKG, UKG ತರಗತಿಗಳ ಮಕ್ಕಳಿಗೆ ಉತ್ಖನನದ ಧೂಳಿನಿಂದ ಕೆಮ್ಮು, ನೆಗಡಿ, ವಾಂತಿ ಮತ್ತು ಜ್ವರದ ಸಮಸ್ಯೆಗಳು ಕಾಣಿಸಿಕೊಂಡು, ನರಳಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮವಾಗಿ ಶಾಲೆ ಸುತ್ತ ಮತ್ತು ಉತ್ಖನ ಆವರಣದಲ್ಲಿ ಟ್ರ್ಯಾಕ್ಟರ್ ಮೂಲಕ ನೀರು ಸಿಂಪಡಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ, ನಿಧನರಾದ ಟಿ.ಎಂ. ಕೇಶವ್ (74) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಭಾರತೀಯ ಪುರಾತತ್ವ ಅಧಿಕಾರಿಯಯಾಗಿದ್ದ ಅವರು ಜೂನ್ 2025 ರಲ್ಲಿ ಉತ್ಖನ ಕಾರ್ಯಕ್ಕೆ ಚಾಲನೆ ನೀಡಿದ್ದರು. ಕರಳು ಕ್ಯಾನ್ಸರ್‌ನಿಂದ ನಿಧನರಾದ ಕೇಶವ್ ಉತ್ಖನನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಅಧಿಕಾರಿಗಳು ಮತ್ತು ಕಾರ್ಮಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇತ್ತೀಚೆಗೆ ತಮ್ಮ ದೇಶದ ಆರ್ಥಿಕ ದುಸ್ಥಿತಿಯ ಬಗ್ಗೆ ನೀಡಿರುವ ಈ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ತಮ್ಮ ದೇಶದ ಆರ್ಥಿಕ ಬಿಕ್ಕಟ್ಟನ್ನು (Pakistan economic crisi) ಒಪ್ಪಿಕೊಳ್ಳುತ್ತಾ ಅವರು ಅತ್ಯಂತ ಭಾವುಕರಾಗಿ ಈ ಮಾತುಗಳನ್ನು ಆಡಿದ್ದಾರೆ. ಪಾಕಿಸ್ತಾನವು ಪ್ರತಿ ಬಾರಿಯೂ ಮಿತ್ರ ರಾಷ್ಟ್ರಗಳ ಮುಂದೆ ಸಾಲಕ್ಕಾಗಿ ಕೈಚಾಚುತ್ತಿರುವುದನ್ನು ಪ್ರಸ್ತಾಪಿಸಿದ ಅವರು, “ನಮ್ಮ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ನಾವು ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅವರು ನಾವು ಸಹಾಯ ಕೇಳಲು ಬಂದಿದ್ದೇವೆ ಎಂದು ಭಾವಿಸುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದ ಸ್ಥಿತಿಯನ್ನು ಕಂಡು “ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ” ಎಂದು ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನವು ಒಂದು ಪರಮಾಣು ಶಕ್ತಿಯನ್ನು ಹೊಂದಿರುವ ದೇಶವಾಗಿದ್ದರೂ, ಸಣ್ಣ ಪುಟ್ಟ ಆರ್ಥಿಕ ಅಗತ್ಯಗಳಿಗೂ ಬೇರೆಯವರನ್ನು ಅವಲಂಬಿಸಿರುವುದು ವಿಪರ್ಯಾಸ ಎಂದು ಹೇಳಿದೆ. ಚೀನಾ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ನಿಂದ ಪಡೆದ ಸಾಲದ ಬಡ್ಡಿ ಕಟ್ಟುವುದೇ ದೊಡ್ಡ ಹೊರೆಯಾಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಹಿಟ್ಟು, ಬೇಳೆ ಮತ್ತು ವಿದ್ಯುತ್‌ಗಾಗಿ ಪರದಾಡುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ಕಿತ್ತಾಟಗಳು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿವೆ. ದೇಶದ ಬಳಿ ಕೇವಲ ಕೆಲವೇ ವಾರಗಳ ಆಮದಿಗೆ ಸಾಕಾಗುವಷ್ಟು ಮಾತ್ರ ಡಾಲರ್ ಸಂಗ್ರಹವಿದೆ.
ಶೆಹಬಾಜ್ ಷರೀಫ್ ಅವರು ದೇಶದ ಉದ್ಯಮಿಗಳು ಮತ್ತು ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸುವ ಮೂಲಕ ಮತ್ತು ಸರ್ಕಾರವು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ದೇಶವನ್ನು ಈ ಸಂಕಷ್ಟದಿಂದ ಪಾರು ಮಾಡಬೇಕೆಂದು ಕರೆ ನೀಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಕುಸಿತವು ಕೇವಲ ಆ ದೇಶಕ್ಕೆ ಸೀಮಿತವಾಗಿಲ್ಲ; ಅದರ ನೆರೆಹೊರೆಯ ರಾಷ್ಟ್ರವಾಗಿ ಭಾರತದ ಮೇಲೆ ಇದು ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಪಾಕಿಸ್ತಾನದ ಆಡಳಿತಗಾರರು ಆಂತರಿಕ ಆರ್ಥಿಕ ಬಿಕ್ಕಟ್ಟು ಮತ್ತು ಜನರ ಆಕ್ರೋಶದಿಂದ ಗಮನ ಬೇರೆಡೆ ಸೆಳೆಯಲು ಭಾರತದ ವಿರುದ್ಧ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಅಥವಾ ಉಗ್ರವಾದವನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ. ಪಾಕಿಸ್ತಾನವು ಸಂಪೂರ್ಣವಾಗಿ ವಿಫಲ ರಾಷ್ಟ್ರವಾದರೆ , ಅಲ್ಲಿನ ಪರಮಾಣು ಶಸ್ತ್ರಾಸ್ತ್ರಗಳು ಉಗ್ರರ ಕೈ ಸೇರುವ ಸಾಧ್ಯತೆ ಇದೆ. ಇದು ಭಾರತಕ್ಕೆ ದೊಡ್ಡ ತಲೆನೋವಾಗಬಹುದು.
ಒಂದು ವೇಳೆ ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ದಂಗೆಗಳು ನಡೆದು ಪರಿಸ್ಥಿತಿ ಕೈಮೀರಿದರೆ, ಗಡಿ ಭಾಗದ ಜನರು ಜೀವ ಉಳಿಸಿಕೊಳ್ಳಲು ಭಾರತದ ಕಡೆಗೆ ನುಸುಳುವ ಸಾಧ್ಯತೆ ಇರುತ್ತದೆ. ಇದು ಭಾರತದ ಗಡಿ ಭದ್ರತೆ ಮತ್ತು ಸಂಪನ್ಮೂಲಗಳ ಮೇಲೆ ಒತ್ತಡ ಹೇರಬಹುದು. ಪಾಕಿಸ್ತಾನದ ಬಳಿ ಡಾಲರ್ ಇಲ್ಲದಿರುವುದರಿಂದ, ಅವರು ಭಾರತದಿಂದ ಅಗತ್ಯ ವಸ್ತುಗಳನ್ನು (ಉದಾಹರಣೆಗೆ ಔಷಧ ಅಥವಾ ಸಕ್ಕರೆ) ಆಮದು ಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ (SAARC) ಆರ್ಥಿಕ ಅಸ್ಥಿರತೆ ಉಂಟಾದರೆ, ಈ ವಲಯಕ್ಕೆ ಬರುವ ವಿದೇಶಿ ಹೂಡಿಕೆದಾರರು ತುಸು ಹಿಂಜರಿಯಬಹುದು, ಇದು ಪರೋಕ್ಷವಾಗಿ ಭಾರತದ ಮೇಲೂ ಪರಿಣಾಮ ಬೀರಬಹುದು. ಇದರ ಜತೆಗೆ ಪಾಕಿಸ್ತಾನ ಸಾಲ ತೀರಿಸಲಾಗದೆ ಹೋದರೆ, ಚೀನಾ ಅಲ್ಲಿನ ಬಂದರು ಮತ್ತು ಆಯಕಟ್ಟಿನ ಜಾಗಗಳನ್ನು ವಶಪಡಿಸಿಕೊಳ್ಳಬಹುದು ಭಾರತದ ನೆರೆಹೊರೆಯಲ್ಲಿ ಚೀನಾದ ಈ ಪ್ರಾಬಲ್ಯ ಭಾರತದ ಭದ್ರತೆಗೆ ಸವಾಲಾಗಬಹುದು.
ಪಾಕಿಸ್ತಾನದಲ್ಲಿ ಹಣದುಬ್ಬರ ಪ್ರಮಾಣ 30% ರಿಂದ 40% ದಾಟಿದೆ. ದಿನಬಳಕೆಯ ವಸ್ತುಗಳಾದ ಗೋಧಿ ಹಿಟ್ಟು, ಹಾಲು ಮತ್ತು ಈರುಳ್ಳಿ ಬೆಲೆಗಳು ಸಾಮಾನ್ಯ ಜನರ ಕೈಗೆಟುಕದಂತಾಗಿವೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿದಿದ್ದು, ಆಮದು ಮಾಡಿಕೊಳ್ಳುವ ವಸ್ತುಗಳು (ತೈಲ, ಗ್ಯಾಸ್) ವಿಪರೀತ ತುಟ್ಟಿಯಾಗಿವೆ. ಪಾಕಿಸ್ತಾನವು ತನ್ನ ಜಿಡಿಪಿಯ (GDP) ಬಹುದೊಡ್ಡ ಭಾಗವನ್ನು ಸಾಲದ ಬಡ್ಡಿ ಕಟ್ಟಲಿಕ್ಕೇ ವ್ಯಯಿಸುತ್ತಿದೆ. ಪಾಕಿಸ್ತಾನದ ಒಟ್ಟು ವಿದೇಶಿ ಸಾಲದ ಬಹುಪಾಲು ಚೀನಾದ್ದಾಗಿದೆ. ಚೀನಾದ ‘ಸಾಲದ ಸುಳಿ’ ರಾಜತಾಂತ್ರಿಕತೆಗೆ ಪಾಕಿಸ್ತಾನ ಬಲಿಯಾಗುತ್ತಿದೆ ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ನೀಡಲು ವಿದ್ಯುತ್ ದರ ಏರಿಕೆ ಮತ್ತು ಸಬ್ಸಿಡಿ ಕಡಿತದಂತಹ ಕಠಿಣ ಷರತ್ತುಗಳನ್ನು ವಿಧಿಸಿದೆ, ಇದು ಅಲ್ಲಿನ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಶೆಹಬಾಜ್ ಷರೀಫ್ ಅವರು ಹೇಳಿದಂತೆ, ಪಾಕಿಸ್ತಾನವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಹಂತದಲ್ಲಿದೆ. ಸುಧಾರಣೆಗಳಿಲ್ಲದೆ ಈ ಸುಳಿಯಿಂದ ಹೊರಬರುವುದು ಅಸಾಧ್ಯದ ಮಾತು ಎಂದು ಹೇಳಲಾಗಿದೆ.