All posts by nagaraj11081993

ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ: ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ – Kannada News

ಹಾಸನ, (ಜೂನ್ 07): ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ರಚನೆಯಾಗಿದ್ದು, 2ನೇ ಹಂತದಲ್ಲಿ ಸಚಿವ ಸಂಪುಟ ಸೇರಸಲು ಶಾಸಕರು ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯನವರ ಪರಮಾಪ್ತ ಜಮೀರ್ ಅಹಮ್ಮದ್ ಖಾನ್ (zameer ahmed khan) ಅವರನ್ನು ಮಂತ್ರಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿವೆ. ಇದರ ಮಧ್ಯೆ ಕೋಡಿಮಠದ (Kodi Math) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಜಮೀರ್ ಪರ ಬ್ಯಾಟಿಂಗ್ ಮಾಡಿದ್ದು, ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಅಲ್ಲಾ, ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಸರ್ಕಾರ. ಆ ದೃಷ್ಟಿಯಿಂದ ಜಮೀರ್ ಅವರು ಮಂತ್ರಿಮಂಡಲ ಸೇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಖ್ಯಾಂಶಗಳು

  • ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಪರ ಬ್ಯಾಟ್ ಬೀಸಿದ ಕೋಡಿ‌ ಶ್ರೀ
  • ಜಮೀರ್ ಅಹಮ್ಮದ್ ಖಾನ್ ಮತ್ತೊಮ್ಮೆ ಮಂತ್ರಿಮಂಡಲ ಸೇರುತ್ತಾರೆ
  • ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು, ಅದು ಮುಚ್ಚಿ ಹೋಗುತ್ತಿದೆ
  • ಅರಸೀಕೆರೆಯಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ
  • ಜಮೀರ್ ಜೊತೆಗೆ ನಮ್ಮ ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನ ಸಿಗುತ್ತೆ

ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು

ಹಾಸನದ ಅರಸೀಕೆರೆಯ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕೋಡಿಶ್ರೀ, ಜಮೀರ್ ಅಹಮ್ಮದ್ ಖಾನ್ ಅವರ ಆಡಿಯೋ ವಿಚಾರ ಅಪಪ್ರಚಾರದ ಉದ್ದೇಶದಿಂದ ಆಗಿದೆ. ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು. ಇದು ಮೊದಲು ಬಂದು ಆ ಅಪಪ್ರಚಾರ ಮುಚ್ಚಿ ಹೋಗುತ್ತಿದೆ. ಜಮೀರ್ ಹೆದರುವ ಅವಶ್ಯಕತೆ ಇಲ್ಲ. ಅವರು ಮತ್ತೊಮ್ಮೆ ಮಂತ್ರಿಮಂಡಲ ಸೇರುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೊಂದು ಸ್ವರೂಪ ಪಡೆದ ಜಮೀರ್ ಅಹ್ಮದ್ ಖಾನ್​ರದ್ದು ಎನ್ನಲಾದ ಆಡಿಯೋ ಪ್ರಕರಣ

ಜಮೀರ್ ಜೊತೆಗೆ ಶಿವಲಿಂಗೇಗೌಡ್ರು ಮಂತ್ರಿ

ಜಮೀರ್ ಜೊತೆಗೆ ನಮ್ಮ ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನ ಸಿಗುತ್ತದೆ. ಯೋಚನೆ ಮಾಡುವುದು ಬೇಡ. ಸಂಬಂಧಪಟ್ಟವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ನಾಳೆಯೂ ಮಾತನಾಡುತ್ತೇನೆ. ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ಅವರು ಮತ್ತೊಮ್ಮೆ ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬೇಡಿ. ಶಾಂತಿಯಿಂದ ಇರಿ. ಇದರ ಬಗ್ಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಡಿಕೆಶಿಗೆ ಸಿಎಂ ಯೋಗ: ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಅಂದು ಸ್ವಾಮೀಜಿ ಹೇಳಿದ್ದೇನು?


ಜಮೀರ್‌ಗೆ ಮಂತ್ರಿ ಸ್ಥಾನ ಸಿಕ್ಕಿದ ಕೂಡಲೇ ಇಲ್ಲಿಗೆ ಕರೆದುಕೊಂಡು ಬರೋಣ. ಅವರ ಮೇಲೆ ಭಗವಂತನ ಕೃಪೆ ಇದೆ. ಅವರು ಜಾತ್ಯತೀತವಾಗಿ ದುಡಿದು ಸಮಾಜ ಸೇವೆ ಮಾಡಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲ ಕೊಡೋಣ. ಅವರು ಮತ್ತೆ ರಾಜ್ಯದ ಮಂತ್ರಿಯಾಗುವುದನ್ನು ನೋಡಿ ಸಂತೋಷ ಪಡೋಣ. ಮುಂದೆ ಜಮೀರ್ ಮತ್ತು ಶಿವಲಿಂಗೇಗೌಡ ಇಬ್ಬರಿಗೂ ನಮ್ಮ ಮಠದಲ್ಲಿ ಸನ್ಮಾನ ಮಾಡೋಣ ಎಂದು ಜಮೀರ್ ಪರ ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ.

ಸಿದ್ದರಾಮಯ್ಯನವರೇ ಸ್ವಯಂಪ್ರೇರಿತರಾಗಿ ಬಿಟ್ಟು ಕೊಟ್ಟರೇ ಮಾತ್ರ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಈ ಹಿಂದೆ ಇದೇ ಕೋಡಿಶ್ರೀ ಭವಿಷ್ಯ ನುಡಿದಿದ್ದರು. ಅದರಂತೆ ಸಿದ್ದರಾಮಯ್ಯನವರು ತಾವಾಗಿಯೇ ಯಾವುದೇ ಗೊಂದಲ ಮಾಡಿಕೊಳ್ಳದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಡಿಕೆ ಶೀವಕುಮಾರ್ ಅವರು ಸಿಎಂ ಆಗಿದ್ದು, ಕೋಡಿಶ್ರೀ ಹೇಳಿದ್ದ ಭವಿಷ್ಯ ನಿಜವಾಗಿದೆ.  ಇದೀಗ ಜಮೀರ್ ಅವರು ಮಂತ್ರಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದು, ಏನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್​ಗಳು – Kannada News

ನವದೆಹಲಿ, ಜೂನ್ 7: ಇಂಟರ್ನೆಟ್ ಜಗತ್ತಿನಲ್ಲಿ ಒಂದು ಮಹತ್ವದ ಮತ್ತು ಆತಂಕಕಾರಿ ಬದಲಾವಣೆ ಸಂಭವಿಸಿದೆ. ಜಾಗತಿಕವಾಗಿ ಇಂಟರ್ನೆಟ್‌ನಲ್ಲಿ ಹರಿದಾಡುವ ಒಟ್ಟು ಟ್ರಾಫಿಕ್‌ನಲ್ಲಿ (Internet Traffic) ಈಗ ಮನುಷ್ಯರಿಗಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಬಾಟ್‌ಗಳು (Bots) ಸೃಷ್ಟಿಸುವ ಟ್ರಾಫಿಕ್‌ನದ್ದೇ ಮೇಲುಗೈಯಾಗಿದೆ. ಪ್ರಸ್ತುತ ಇಂಟರ್ನೆಟ್‌ನಲ್ಲಿ ಶೇಕಡಾ 50 ಕ್ಕಿಂತಲೂ ಹೆಚ್ಚು ಟ್ರಾಫಿಕ್ ಸ್ವಯಂಚಾಲಿತ ಪ್ರೋಗ್ರಾಂಗಳಾದ ಬಾಟ್‌ಗಳಿಂದಲೇ (ಬ್ಯಾಡ್ ಬಾಟ್‌ಗಳು ಮತ್ತು ಗುಡ್ ಬಾಟ್‌ಗಳು) ಸೃಷ್ಟಿಯಾಗುತ್ತಿದೆ.

ಸೈಬರ್ ಭದ್ರತಾ ಕಂಪನಿಯಾದ ಕ್ಲೌಡ್​ಫೇರ್​ನ ಸಿಇಒ ಮ್ಯಾಥ್ಯೂ ಪ್ರಿನ್ಸ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಇಂಟರ್ನೆಟ್ ಬಳಕೆಯಲ್ಲಿ ಬಾಟ್​ಗಳು ಮನುಷ್ಯರನ್ನು ಮೀರಿಸುವ ಕಾಲ ಇಷ್ಟು ಬೇಗ ಬರುತ್ತದೆ ಎಂದು ತಾನು ಎಣಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಚಾಟ್ ಜಿಪಿಟಿ (ChatGPT), ಕ್ಲಾಡ್ ಮತ್ತು ಜೆಮಿನಿಯಂತಹ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳ (LLM) ಭಾರಿ ಬೆಳವಣಿಗೆಯಿಂದಾಗಿ, ಇಂಟರ್ನೆಟ್‌ನಲ್ಲಿ ದತ್ತಾಂಶವನ್ನು ಕ್ರಾಲ್ (Crawl) ಮಾಡುವ ಅಥವಾ ಸ್ಕ್ರೇಪ್ (Scrape) ಮಾಡುವ ಬಾಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ: ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಬಾಟ್ ಟ್ರಾಫಿಕ್ ಎಂದರೇನು? ಒಳ್ಳೆಯ ಮತ್ತು ಕೆಟ್ಟ ಬಾಟ್‌ಗಳ ವ್ಯತ್ಯಾಸ

ನಾವು ಇಂಟರ್ನೆಟ್ ಬಳಸುವಾಗ ವೆಬ್‌ಸೈಟ್ ನೋಡುವುದು, ವಿಡಿಯೋ ವೀಕ್ಷಿಸುವುದು ಮನುಷ್ಯರು ಮಾಡುವ ಕೆಲಸ (Human Traffic). ಆದರೆ, ಯಾವುದೇ ಮನುಷ್ಯನ ಹಸ್ತಕ್ಷೇಪವಿಲ್ಲದೆ ಕಂಪ್ಯೂಟರ್ ಪ್ರೋಗ್ರಾಂಗಳು ತಾವಾಗಿಯೇ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಮಾಹಿತಿ ಕದಿಯುವುದು, ವೀಕ್ಷಿಸುವುದು, ಸರ್ಚ್ ಇಂಜಿನ್‌ಗಳಿಗೆ ಡೇಟಾ ಹುಡುಕುವುದು ಅಥವಾ ಸೈಬರ್ ದಾಳಿ ಮಾಡುವುದನ್ನು ‘ಬಾಟ್ ಟ್ರಾಫಿಕ್’ ಎನ್ನಲಾಗುತ್ತದೆ.

ಒಳ್ಳೆಯ ಬಾಟ್‌ಗಳು (Good Bots) ಇಂಟರ್ನೆಟ್‌ಗೆ ಸಹಕಾರಿಯಾಗಿವೆ. ಉದಾಹರಣೆಗೆ, ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳ ಬಾಟ್‌ಗಳು ವೆಬ್‌ಸೈಟ್‌ಗಳನ್ನು ಇಂಡೆಕ್ಸ್ ಮಾಡಿ ನಮಗೆ ಸರಿಯಾದ ಮಾಹಿತಿ ಹುಡುಕಿಕೊಡಲು ನೆರವಾಗುತ್ತವೆ. ಎಐ ಏಜೆಂಟ್​ಗಳು ಕೂಡ ಒಳ್ಳೆಯ ಬಾಟ್​ಗಳು.

ಕೆಟ್ಟ ಬಾಟ್‌ಗಳು (Bad Bots) ಅತ್ಯಂತ ಅಪಾಯಕಾರಿ. ವೆಬ್‌ಸೈಟ್‌ಗಳಿಂದ ಗ್ರಾಹಕರ ಡೇಟಾ ಕಳ್ಳತನ ಮಾಡುವುದು (Data Scraping), ಸುಳ್ಳು ಖಾತೆಗಳನ್ನು ಸೃಷ್ಟಿಸಿ ಜಾಹೀರಾತು ವಂಚನೆ ಮಾಡುವುದು ಮತ್ತು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಸೈಬರ್ ದಾಳಿ (DDoS Attacks) ನಡೆಸುವುದು ಇವುಗಳ ಕೆಲಸವಾಗಿದೆ. ಪ್ರಸ್ತುತ ಇಂಟರ್ನೆಟ್‌ನಲ್ಲಿ ಈ ಕೆಟ್ಟ ಬಾಟ್‌ಗಳ ಸಂಖ್ಯೆ ಶೇ. 32 ಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ಇಂಟರ್ನೆಟ್‌ನಲ್ಲಿ AI ಬಾಟ್‌ಗಳ ಪ್ರಾಬಲ್ಯ ಮತ್ತು ವೆಬ್‌ಸೈಟ್‌ಗಳ ಮೇಲಿನ ಪರಿಣಾಮ

ಬಾಟ್‌ಗಳ ಟ್ರಾಫಿಕ್ ಮಿತಿಮೀರುತ್ತಿರುವುದರಿಂದ ಜಾಗತಿಕವಾಗಿ ವೆಬ್‌ಸೈಟ್‌ಗಳ ನಿರ್ವಹಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನೈಜ ಗ್ರಾಹಕರಿಗಿಂತ ಹೆಚ್ಚಾಗಿ ಬಾಟ್‌ಗಳೇ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗುತ್ತಿರುವುದರಿಂದ ಸರ್ವರ್‌ಗಳು ನಿಧಾನಗೊಳ್ಳುತ್ತಿವೆ. ಇದನ್ನು ತಡೆಯಲು ಕಂಪನಿಗಳು ಈಗ ಸೈಬರ್ ಸೆಕ್ಯೂರಿಟಿ ಮತ್ತು ‘ಕ್ಯಾಪ್ಚಾ’ (CAPTCHA) ತಂತ್ರಜ್ಞಾನಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾಗಿ ಬಂದಿದೆ.

ಸೈಬರ್ ಭದ್ರತೆಗೆ ಸವಾಲು: ಇತ್ತೀಚಿನ ವರದಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತಷ್ಟು ಬಲಶಾಲಿಯಾಗಲಿದ್ದು, ಮನುಷ್ಯರು ಮತ್ತು ಬಾಟ್‌ಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚುವುದು ಸೈಬರ್ ಭದ್ರತಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲು ಮತ್ತು ಆನ್‌ಲೈನ್ ವಂಚನೆಗಳನ್ನು ಸ್ವಯಂಚಾಲಿತವಾಗಿ ಮಾಡಲು ಈ ಬಾಟ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ – Kannada News

ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಅವರು ನಟಿಸುವ ಹೆಚ್ಚು ಸಿನಿಮಾಗಳು ನಾಯಕ ಪ್ರಧಾನ, ನಾಯಕಿಗೆ ಬಹಳ ಕಡಿಮೆ ಆದ್ಯತೆ (‘ಗರ್ಲ್​​ಫ್ರೆಂಡ್’ ಮತ್ತು ‘ಥಮಾ’ ಬಿಟ್ಟು) ಆದರೆ ಇತ್ತೀಚೆಗಷ್ಟೆ ಮದುವೆ ಆದ ರಶ್ಮಿಕಾ ಇನ್ನು ಮುಂದೆ ಹೆಚ್ಚು-ಹೆಚ್ಚು ಮಹಿಳಾ ಪ್ರಧಾನ ಮತ್ತು ತಮ್ಮ ನಟನಾ ಕೌಶಲಕ್ಕೆ ಸವಾಲೆನಿಸುವ ಪಾತ್ರಗಳಲ್ಲಿ ನಟಿಸುವ ಉತ್ಸುಕತೆ ತೋರುತ್ತಿದ್ದಾರೆ. ಇದೀಗ ರಶ್ಮಿಕಾಗೆ ಬಹಳ ಭಾರತದ ಸಂಗೀತ ಕ್ಷೇತ್ರದ ಪ್ರಾತಃ ಸ್ಮರಣೀಯ ಗಾಯಕಿಯೊಬ್ಬರ ಜೀವನ ಆಧರಿತ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದದೆ. ಈ ಪಾತ್ರ ಮತ್ತೊಬ್ಬ ಸ್ಟಾರ್ ನಟಿಗೆ ಫಿಕ್ಸ್ ಆಗಿತ್ತು. ಅವರ ಕೈಯಿಂದ ಜಾರಿ ರಶ್ಮಿಕಾ ಕೈಗೆ ಬಿದ್ದಿದೆ ಸಿನಿಮಾ. ಯಾವುದು ಆ ಸಿನಿಮಾ?

ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಬರಲಿದೆ ಎಂದು ಸುದ್ದಿ ಹರಡಿ ಸುಮಾರು ತಿಂಗಳುಗಳೇ ಆಗಿವೆ. ಎಂಎಸ್ ಸುಬ್ಬಲಕ್ಷ್ಮಿ ಪಾತ್ರದಲ್ಲಿ ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದೇ ಕಾರಣಕ್ಕೆ ಅವರು ಸಂಗೀತಾಭ್ಯಾಸವನ್ನೂ ಸಹ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಸಾಯಿ ಲಕ್ಷ್ಮಿ ಹಾಡು ಹಾಡುತ್ತಿರುವ ಚಿತ್ರಗಳು ಸಹ ಹರಿದಾಡಿದ್ದವು. ಆದರೆ ಇದೀಗ ಬಂದಿರುವ ಸುದ್ದಿಯೆಂದರೆ ಆ ಸಿನಿಮಾದ ನಾಯಕಿ ಪಾತ್ರ ರಶ್ಮಿಕಾ ಮಂದಣ್ಣ ಅವರಿಗೆ ದೊರಕಿದೆಯಂತೆ.

ಈ ಹಿಂದೆ, ‘ಜರ್ಸಿ’ ಹೆಸರಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೂರಿ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಸಾಯಿ ಪಲ್ಲವಿ ಮತ್ತು ಒಂದು ಸಮಯದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಇತ್ತೀಚೆಗಷ್ಟೇ ರಶ್ಮಿಕಾ ಅವರ ನಿವಾಸದಲ್ಲಿ ಲುಕ್ ಟೆಸ್ಟ್ ಕೂಡ ನಡೆದಿದ್ದು, ಪ್ರಖ್ಯಾತ ಕಾಸ್ಟ್ಯೂಮ್ ಡಿಸೈನರ್ ನೀರಜಾ ಕೋನಾ ಅವರು ಈ ಲುಕ್ ಟೆಸ್ಟ್‌ಗಾಗಿ ವಿಶೇಷವಾದ ಉಡುಪುಗಳನ್ನು ವಿನ್ಯಾಸಗೊಳಿಸಿದ್ದರು ಎನ್ನಲಾಗಿದೆ. ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ರೆಡಿಯಾಗಿದ್ದು, ರಶ್ಮಿಕಾ ಪಾಲಿಗಂತೂ ಇದು ಬಹು ಸವಾಲಿನ ಪಾತ್ರ ಆಗಲಿದೆ.

ಸಿನಿಮಾದ ಕೆಲಸಗಳು ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಸಾಗುತ್ತಿದ್ದು. ಮುಂಬರುವ ವಾರಗಳಲ್ಲಿ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಗೌತಮ್ ತಿನ್ನನೂರಿ ಜೊತೆ ಮತ್ತೊಮ್ಮೆ ಕೈಜೋಡಿಸಲಿದ್ದಾರೆ. ರಶ್ಮಿಕಾ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಸಿನಿಮಾ ಅವರ ಬತ್ತಳಿಕೆ ಸೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಸ್ವರೂಪ ಪಡೆದ ಜಮೀರ್ ಅಹ್ಮದ್ ಖಾನ್​ರದ್ದು ಎನ್ನಲಾದ ಆಡಿಯೋ ಪ್ರಕರಣ – Kannada News

ದಾವಣಗೆರೆ, (ಜೂನ್ 07): ಜಮೀರ್ ಅಹಮ್ಮದ್ ಖಾನ್ (zameer ahmed khan) ಅವರದ್ದು ಎನ್ನಲಾದ ಆಡಿಯೋ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದ್ದು, ಈ ಸಂಬಂಧ ಇದೀಗ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಕಾಂಗ್ರೆಸ್​ನಿಂದ ಉಚ್ಚಾಟನೆಗೊಂಡಿರುವ ಮೊಹಮ್ಮದ್ ಸಿರಾಜ್ ಅವರು ನೀಡಿದ ದೂರಿನ ಮೇರೆಗೆ BNS 2023ರ ಅನ್ವಯ 336(2), 336(4), 318(2), 340(2), 351(2) ಐಟಿ ಆ್ಯಕ್ಟ್ 2000 ಅನ್ವಯ U/S 66, 66(C), 66(D) ಅನ್ವಯ ಎಫ್​​ಐಆರ್ ದಾಖಲಾಗಿದ್ದು, ದೂರುದಾರ ಮೊಹಮ್ಮದ್ ಸಿರಾಜ್​ಗೆ ಸಿಇಎನ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದ್ರೆ, ಮೊಹಮ್ಮದ್ ಸಿರಾಜ್, ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.

ಮುಖ್ಯಾಂಶಗಳು

  • ಜಮೀರ್ ಅಹ್ಮದ್ ಖಾನ್​ ಅವರದ್ದು ಎನ್ನಲಾದ ಆಡಿಯೋ ವೈರಲ್
  • ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
  • ಮೊಹಮ್ಮದ್ ಸಿರಾಜ್ ನೀಡಿದ್ದ ದೂರು ಆಧರಿಸಿದ FIR ದಾಖಲು
  • ಆಡಿಯೋ ಮೂಲ ಹುಡುಕಲು ಮುಂದಾದ ಪೊಲೀಸ್ರು

ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಮೇರೆಗೆ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದ್ದು, ಇದೀಗ ಪೊಲೀಸರು ಆಡಿಯೋ ಮೂಲ ಪತ್ತೆಗೆ ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂತೆ ಮೊಲದ ಹಂತದ ತನಿಖೆಗೆ ದೂರುದಾರ ಮೊಹಮ್ಮದ್ ಸಿರಾಜ್  ಅವರನ್ನು ವಿಚಾರಣೆ ನಡೆಸಲು ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ಮೊಹಮ್ಮದ್ ಸಿರಾಜ್ ಅವರ ಮೊಬೈಲ್ ವಶಕ್ಕೆ ಪಡೆದ ಆಡಿಯೋ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಲಿದ್ದಾರೆ. ಅಲ್ಲದೆ ಆಡಿಯೋ ವೈರಲ್ ಮಾಡಿದ್ದ ಕರ್ನಾಟಕ ಕಾಕ್ರೋಚ್ ಖಾತೆಯ ಮೂಲ ಪತ್ತೆಗೂ ಸಹ ಸಹ ಪೊಲೀಸರು ಮುಂದಾಗಿದ್ದಾರೆ.

ಆಡಿಯೋ ಬಗ್ಗೆ ಸವಾಲು ಹಾಕಿರುವ ಜಮೀರ್

ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೇ ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದರು.

ಆಡಿಯೋದಲ್ಲೇನಿದೆ?

ದಾವಣಗೆರೆ ಉಪಸಮರದದಲ್ಲಿ ಟಿಕೆಟ್ ನೀಡದ್ದಕ್ಕೆ ಮುಸ್ಲಿಂ ಸಮುದಾಯ ಅಸಾಮಾಧಾನಗೊಂಡಿತ್ತು . ಇತ್ತ ಜಮೀರ್ ಅಹ್ಮದ್ ಖಾನ್​ ಸೇರಿ ಮುಸ್ಲಿಂ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಇದೀಗ ಜಮೀರ್ ಅಹಮ್ಮದ್​ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ದೊಡ್ಡ ಸದ್ದು ಮಾಡುತ್ತಿದೆ. ಸ್ಥಳೀಯ ಕಾಂಗ್ರೆಸ್ ಉಚ್ಛಾಟಿತ ನಾಯಕ ಮುಹಮ್ಮದ್ ಸಿರಾಜ್ ಎಂಬುವವರ ಜೊತೆಗೆ ಮಾತನಾಡಿದ ಫೋನ್ ಆಡಿಯೋ ಸಂಬಾಷಣೆ ಇದಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದಾವಣಗೆರೆ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಇದು ಪೂರಕ ಎಂಬಂತಿದೆ‌ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿರುವ ಈ ಆಡಿಯೋ ಸಂಭಾಷಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಮರ್ಥ್ ಅವರಿಗೆ ಹೆಚ್ಚು ವೋಟು ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್​ನಲ್ಲಿ ಕಾಂಗ್ರೆಸ್​ಗೆ ವೋಟು ಕಡಿಮೆ ಬರುವಂತೆ ನೋಡಿಕೊಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ವೋಟು ಹಾಕಿಸಬೇಡಿ ಎಂದು ಮಾತನಾಡಿರುವುದು ಈ ಆಡಿಯೋನಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ENG vs NZ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನ್ಯೂಜಿಲೆಂಡ್ – Kannada News

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಡೆದ ಈ ಪಂದ್ಯ 4ನೇ ದಿನದ ಮೊದಲ ಸೆಷನ್‌ನಲ್ಲಿಯೇ ಅಂತ್ಯವಾಯಿತು. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್,ನ್ಯೂಜಿಲೆಂಡ್ ತಂಡವನ್ನು 115 ರನ್​ಗಳಿಂದ ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಗೆಲುವಿಗೆ 254 ರನ್​ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 40.3 ಓವರ್ ಬ್ಯಾಟಿಂಗ್‌ ಮಾಡಿ 138 ರನ್ ಕಲೆಹಾಕುವುದರೊಳಗೆ ತನ್ನಲ್ಲೇ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.

ಇಂಗ್ಲೆಂಡ್​ಗೆ ಏಕಪಕ್ಷೀಯ ಗೆಲುವು

ಈ ಇಡೀ ಪಂದ್ಯದಲ್ಲಿ ಬೌಲರ್​ಗಳ ಪಾರುಪತ್ಯವೇ ಹೆಚ್ಚಿತ್ತು. ಲಾರ್ಡ್ಸ್‌ನ ಬೌಲಿಂಗ್‌ ಸಹಾಯಕವಾದ ಈ ಪಿಚ್‌ನಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವೇಗದ ಬೌಲರ್‌ಗಳು ಪಂದ್ಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಇತ್ತ ತವರಿನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್‌ನ ಬೌಲರ್‌ಗಳು ನ್ಯೂಜಿಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನ ಇನ್ನಿಲ್ಲದಂತೆ ಕಾಡಿದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 140 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್‌ ಬೌಲರ್‌ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಕೇವಲ 113 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

ಆದಾಗ್ಯೂ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 226 ರನ್ ಕಲೆಹಾಕಿತು. ತಂಡದ ಪರ ಎಮಿಲಿಯೊ ಗೇ ನಿರ್ಣಾಯಕ 57 ರನ್​ಗಳ ಇನ್ನಿಂಗ್ಸ್ ಅಡಿದರೆ, ಜೇಮೀ ಸ್ಮಿತ್ ಕೂಡ 39 ರನ್ ಬಾರಿಸಿದರು. ಕೊನೆಯಲ್ಲಿ ಓಲ್ಲಿ ರಾಬಿನ್ಸನ್ 29 ರನ್ ಬಾರಿಸಿ ತಂಡ ಈ ಸ್ಕೋರ್ ತಲುಪಲು ಸಹಾಯ ಮಾಡಿದರು. ಅಂತಿಮವಾಗಿ 253 ರನ್‌ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 138 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು 115 ರನ್‌ಗಳಿಂದ ಸೋತಿತು.

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ

WTC ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ

ಈ ಪಂದ್ಯಕ್ಕೂ ಮುನ್ನ, ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‘ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಈ ಹೀನಾಯ ಸೋಲಿನ ನಂತರ, ಕಿವೀಸ್ ಪಾಯಿಂಟ್‌ ಪಟ್ಟಿಯಲ್ಲಿ ಕುಸಿತ ಅನುಭವಿಸಿದ್ದು, ನೇರವಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಮತ್ತು ಶ್ರೀಲಂಕಾ ಮೂರನೇ ಸ್ಥಾನಕ್ಕೆ ಏರಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ಏಳನೇ ಸ್ಥಾನದಲ್ಲೇ ಉಳಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲ್ಲಿಯಲ್ಲಿ ಜೂನ್ 8ರಂದು ಜನಬಂಧನ್ ಸಭೆ; 23 ವಿಪಕ್ಷಗಳು ಭಾಗಿ; ಡಿಎಂಕೆ ಔಟ್, ಟಿವಿಕೆ ಇನ್ – Kannada News

ಕಾಂಗ್ರೆಸ್ ಬಾವುಟದ ಸಾಂದರ್ಭಿಕ ಚಿತ್ರImage Credit source: PTI

ನವದೆಹಲಿ, ಜೂನ್ 7: ಇಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಾಳೆ ಸೋಮವಾರ (ಜೂನ್ 8) ಮಧ್ಯಾಹ್ನ 12 ಗಂಟೆಗೆ ‘ಇಂಡಿಯಾ’ (I.N.D.I.A. bloc) ಮೈತ್ರಿಕೂಟದ ಪ್ರಮುಖ ಸಭೆ ಆಯೋಜಿಸಲಾಗಿದೆ. ಇದನ್ನು ‘ಜನಬಂಧನ್’ (Janbandhan) ಸಭೆ ಎಂದು ಹೆಸರಿಸಲಾಗಿದೆ. ಈ ಬೃಹತ್ ಸಭೆಯಲ್ಲಿ ಭಾಗವಹಿಸುವುದಾಗಿ ಮೈತ್ರಿಕೂಟದ ಒಟ್ಟು 23 ರಾಜಕೀಯ ಪಕ್ಷಗಳು ಅಧಿಕೃತವಾಗಿ ಖಚಿತಪಡಿಸಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. 2023ರ ಡಿಸೆಂಬರ್ ನಂತರ ನಡೆಯುತ್ತಿರುವ ಈ ಮೈತ್ರಿಕೂಟದ ಮೊದಲ ಪ್ರಮುಖ ಸಭೆಯಾಗಿದ್ದು, ಮೈತ್ರಿಕೂಟದ ಒಳಗಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಈ ಸಭೆ ನಡೆಯುತ್ತಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ವೈವಿಧ್ಯತೆಯ ನಡುವೆಯೂ ಇಂಡಿಯಾ ಜನಬಂಧನ್ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಸಂಸದ ಡೆರೆಕ್ ಒಬ್ರಿಯನ್ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಸ್ಪಷ್ಟ ಉದ್ದೇಶ ಮತ್ತು ಸೌಹಾರ್ದಯುತ ಮನೋಭಾವದೊಂದಿಗೆ ನಾವು ಈ ಸಭೆಯನ್ನು ಎದುರು ನೋಡುತ್ತಿದ್ದೇವೆ. ಇಂಡಿಯಾ ಒಕ್ಕೂಟ ಒಂದಾಗಿದೆ,” ಎಂದು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಈಗಾಗಲೇ ದೆಹಲಿಗೆ ತಲುಪಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ದಾಳಿಗೆ ಬಿದ್ದ 100 ಮನೆಗಳು; ಅಧಿಕಾರಿಗಳಿಗೂ ಗೊತ್ತಿಲ್ಲ; ಭೂಮಾಫಿಯಾ ಕರಾಮತ್ತಾ?

ಸಭೆಯ ಪ್ರಮುಖ ಅಜೆಂಡಾ

ಸಭೆಯ ಅಧಿಕೃತ ಕಾರ್ಯಸೂಚಿ ಪ್ರಕಟವಾಗಿಲ್ಲವಾದರೂ, ಮುಂಬರುವ 2029 ರ ಲೋಕಸಭಾ ಚುನಾವಣೆಗೆ ಜಂಟಿ ಕಾರ್ಯತಂತ್ರ ರೂಪಿಸುವುದು ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಮುತ್ತಿಗೆ ಹಾಕಲು ನೀಲನಕ್ಷೆ ಸಿದ್ಧಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಂವಿಧಾನದ ರಕ್ಷಣೆ, ತನಿಖಾ ಸಂಸ್ಥೆಗಳ ದುರುಪಯೋಗ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ವಿಷಯಗಳ ವಿರುದ್ಧ ಜಂಟಿ ಹೋರಾಟದ ಕುರಿತು ಚರ್ಚೆ ನಡೆಯಲಿದೆ.

ಸಭೆಯಿಂದ ದೂರ ಉಳಿಯಲಿರುವ ಪ್ರಮುಖ ಪಕ್ಷಗಳು

ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಅಚ್ಚರಿ ಜಯ ಸಾಧಿಸಿ ಗದ್ದುಗೆ ಹಿಡಿದಿರುವ ವಿಜಯ್ ಅವರ ಟಿವಿಕೆ ಪಕ್ಷ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ತಮಗೆ “ದ್ರೋಹ”ವಾಗಿದೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ಮೂಲಗಳ ಪ್ರಕಾರ ಆಪ್ (AAP) ಸಹ ಈ ಸಭೆಯಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು

ಸಿಪಿಐ(ಎಂ)-ಕಾಂಗ್ರೆಸ್ ನಡುವಿನ ತಿಕ್ಕಾಟ

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು, ಸಿಪಿಐ(ಎಂ) ಪಕ್ಷವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಈ ಕುರಿತು ಸ್ಪಷ್ಟನೆ ಕೋರಿದ್ದಾರೆ. ಆದಾಗ್ಯೂ, ಮೈತ್ರಿಕೂಟದ ಒಗ್ಗಟ್ಟಿಗಾಗಿ ಸಿಪಿಐ(ಎಂ) ಸಭೆಯಲ್ಲಿ ಭಾಗವಹಿಸಲಿದ್ದು, ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ! – Kannada News

ಪ್ರತಿಯೊಬ್ಬರೂ ಸಹ ಶ್ರೀಮಂತಿಕೆಯನ್ನು ಗಳಿಸಬೇಕು, ಸಮೃದ್ಧ ಜೀವನವನ್ನು ಸಾಗಿಸಬೇಕು ಎಂದು ಬಯಸುತ್ತಾರೆ. ಇದರ ಸಲುವಾಗಿ ಕಷ್ಟಪಟ್ಟು ಕೆಲಸವನ್ನು ಕೂಡ ಮಾಡ್ತಾರೆ. ಆದರೆ ಕೆಲವರು ಎಷ್ಟು ಸಂಪಾದನೆ ಮಾಡಿದರೂ ಸಹ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಇದಕ್ಕೆ ಅವರ ಕೆಲವೊಂದು ಅಭ್ಯಾಸಗಳೇ ಕಾರಣ. ನಿಮ್ಮಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ, ನೀವು ಕೂಡ ಜೀವನಪರ್ಯಂತ ಬಡವರಾಗಿಯೇ (poor) ಉಳಿಯಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ನಮ್ಮ ಯಾವ ಅಭ್ಯಾಸಗಳು ನಮ್ಮನ್ನು ಬಡತನಕ್ಕೆ ನೂಕುತ್ತವೆ ಎಂಬುದನ್ನು ನೋಡೋಣ ಬನ್ನಿ.

ಬಡತನಕ್ಕೆ ಕಾರಣವಾಗುವ ಅಭ್ಯಾಸಗಳಿವು:

ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡದಿರುವುದು: ಯಾವಾಗಲೂ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಹಣ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ. ಆಚಾರ್ಯ ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆದಾಯದ ಒಂದು ಭಾಗವನ್ನು ಭವಿಷ್ಯಕ್ಕಾಗಿ ಯಾವಾಗಲೂ ಉಳಿಸಬೇಕು, ಮತ್ತು ಉಳಿತಾಯ ಮಾಡಿದ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಬೇಕು. ಈ ಬುದ್ಧಿವಂತಿಕೆಯಿದ್ದರೆ ಮಾತ್ರ ಶ್ರೀಮಂತಿಕೆ ಗಳಿಸಲು ಸಾಧ್ಯ.

ಅನಗತ್ಯ ಖರ್ಚು ಮಾಡುವುದು: ಯಾರು ಅನಗತ್ಯವಾಗಿ ಖರ್ಚು ಮಾಡುತ್ತಾರೋ ಅವರು ಕ್ರಮೇಣ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ, ಇದು ಮುಂದೊಂದು ದಿನ ಅವರನ್ನು ಬಡತನಕ್ಕೆ ನೂಕುತ್ತದೆ. ಚಾಣಕ್ಯ ತತ್ವದ ಪ್ರಕಾರ, ಹಣವನ್ನು ಯೋಜಿತವಲ್ಲದೆ ಖರ್ಚು ಮಾಡಬಾರದು. ಯಾವುದೇ ಕಾರಣವಿಲ್ಲದೆ ಹಣವನ್ನು ಖರ್ಚು ಮಾಡುವ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಬೇಕೇ? ಹಾಗಿದ್ರೆ ಸರಳ ಸಲಹೆ ಪಾಲಿಸಿ ಸಾಕು

ಸಾಲ ಮಾಡುವುದು: ಅನಗತ್ಯ ಸಾಲ ತೆಗೆದುಕೊಳ್ಳಬಾರದು, ಈ ಅಭ್ಯಾಸವು ಒಬ್ಬ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.  ಆಚಾರ್ಯ ಚಾಣಕ್ಯ ಹೇಳುವಂತೆ, ಕಾರಣವಿಲ್ಲದೆ ಯಾರಿಂದಲೂ ಸಾಲ ಪಡೆಯಬಾರದು. ಏಕೆಂದರೆ ಈ ಅಭ್ಯಾಸವು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ. ಮತ್ತು ಜೀವನಪರ್ಯಂತ ಸಾಲವನ್ನೇ ತೀರಿಸುತ್ತಾ ಕೂರಬೇಕಾಗುತ್ತದೆ. ಹಾಗಾಗಿ ಅನಗತ್ಯ ವಿಚಾರಕ್ಕೆ ಎಂದಿಗೂ ಸಾಲವನ್ನು ಪಡೆಯಬೇಡಿ.

ಸೋಮಾರಿತ: ಸೋಮರಿತನ ಕೂಡ ಬಡತನಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ. ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನೀವು ಬಯಸದಿದ್ದರೆ ನೀವು ಸೋಮಾರಿತನವನ್ನು ಬಿಟ್ಟುಬಿಡಬೇಕು. ಸೋಮಾರಿತನವನ್ನು ಬಿಟ್ಟರೆ ಮಾತ್ರ ಹಣ ಸಂಪಾದಿಸಲು ಸಾಧ್ಯ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೂರ್ಯನಿಗೆ ಅನ್ಯಾಯವಾಗಿದೆ’; ಬಿಸಿಸಿಐ ವಿರುದ್ಧ ಗರಂ ಆದ ಗವಾಸ್ಕರ್ – Kannada News

ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೆ ಅವರನ್ನು ತಂಡದಿಂದಲೂ ಹೊರಹಾಕಲಾಗಿದೆ. ಸೂರ್ಯಕುಮಾರ್ ಯಾದವ್ ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ತಂಡದಿಂ ಕೈಬಿಟ್ಟಿರುವುದು ಸರಿಯಾದ ನಿರ್ಧಾರವಾಗಿದೆ ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ಸೂರ್ಯನಿಗೆ ಕೊನೆಯ ಅವಕಾಶವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಒಬ್ಬರು.

ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಗವಾಸ್ಕರ್, ‘ಸೂರ್ಯಕುಮಾರ್ ಯಾದವ್ ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. 2028 ರಲ್ಲಿ ಟಿ20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಇದೆ. ಹೀಗಾಗಿ ಕನಿಷ್ಠ ಮುಂಬರುವ ಇಂಗ್ಲೆಂಡ್ ಸರಣಿಯವರೆಗೆ ಅವರಿಗೆ ಅವಕಾಶ ನೀಡಬೇಕಿತ್ತು. ಆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರವೇ ಆಯ್ಕೆದಾರರು ನಿರ್ಧಾರಕ್ಕೆ ಬಂದಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ 2026 ರ ಐಪಿಎಲ್​ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಆಯ್ಕೆದಾರರ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.

ಯುವ ನಾಯಕನ ಅಗತ್ಯವಿದೆ

ಆದರೆ, ಆಯ್ಕೆದಾರರ ಚಿಂತನೆ ಬೇರೆಯದೇ ಆಗಿರಬಹುದು ಎಂದಿರುವ ಗವಾಸ್ಕರ್, ‘ಬದಲಾವಣೆ ಈಗಲೇ ಆರಂಭವಾಗಬೇಕು ಎಂದು ಆಯ್ಕೆದಾರರು ಭಾವಿಸಿರಬಹುದು. ಸೂರ್ಯಗೆ ಈಗ 35 ಅಥವಾ 36 ವರ್ಷ. 2028 ರ ಹೊತ್ತಿಗೆ ಅವರಿಗೆ 38 ವರ್ಷ ವಯಸ್ಸಾಗಿರುತ್ತದೆ. ಆ ಸಮಯದಲ್ಲಿ, ನಾವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಅಥವಾ ವಿಶ್ವಕಪ್ ಉಳಿಸಿಕೊಳ್ಳಲು ಬಯಸಿದರೆ, ನಮಗೆ ಯುವ ನಾಯಕನ ಅಗತ್ಯವಿದೆ. ಅದಕ್ಕಾಗಿಯೇ ಶ್ರೇಯಸ್ ಅಯ್ಯರ್ ಅವರಂತಹ ಅನುಭವ ಹೊಂದಿರುವ ಯುವ ಆಟಗಾರನನ್ನು ಆಯ್ಕೆ ಮಾಡಿರಬಹುದು ಎಂದಿದ್ದಾರೆ.

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್

ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ

ನಾಯಕತ್ವದಿಂದ ತೆಗೆದುಹಾಕಲ್ಪಟ್ಟಿದ್ದರೂ ಸಹ, ಗವಾಸ್ಕರ್ ಸೂರ್ಯನ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಮಹೇಂದ್ರ ಸಿಂಗ್ ಧೋನಿಯಂತೆ ಸೂರ್ಯ ಮೈದಾನದಲ್ಲಿ ತುಂಬಾ ಶಾಂತವಾಗಿದ್ದರು. ಸೂರ್ಯ ತಂಡಕ್ಕೆ ತನ್ನ ಶಾಂತ ಸ್ವಭಾವವನ್ನು ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ. ಕಠಿಣ ಸಂದರ್ಭಗಳಲ್ಲಿಯೂ ಒತ್ತಡಕ್ಕೆ ಒಳಗಾಗದೆ ತಂಡವನ್ನು ಮುನ್ನಡೆಸುವಲ್ಲಿ ಅವರು ಧೋನಿಯಂತೆಯೇ ಇದ್ದರು ಎಂದು ಗವಾಸ್ಕರ್ ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಂಪತಿಗಳು ಎಂದಿಗೂ ಬೆಳಬೆಳಗ್ಗೆ ಈ ವಿಚಾರಗಳನ್ನು ಮಾತನಾಡಬಾರದು; ಏಕೆ ಗೊತ್ತಾ? – Kannada News

ಬೆಳಗ್ಗಿನ (morning) ಸಮಯ ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಹೌದು ಬೆಳಿಗ್ಗೆ ಎದ್ದಾಗ ನಮ್ಮ ಮನಸ್ಸು ಶಾಂತವಾಗಿದ್ದಷ್ಟೂ, ನಮ್ಮ ದಿನವು ಸಂತೋಷದಾಯಕ ಮತ್ತು ಹೆಚ್ಚು ಸಕಾರಾತ್ಮಕವಾಗಿರುತ್ತದೆ. ವಿಶೇಷವಾಗಿ ದಾಂಪತ್ಯ ಜೀವನದ ಬಗ್ಗೆ ಮಾತನಾಡುವುದಾದರೆ  ಬೆಳಗ್ಗಿನ ಹೊತ್ತು ಗಂಡ ಮತ್ತು ಹೆಂಡತಿಯ ನಡುವೆ ವಿನಿಮಯವಾಗುವ ಮಾತುಗಳು ಮತ್ತು ಭಾವನೆಗಳು ಸಂಬಂಧವನ್ನು ಸದೃಢವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಸಂಗಾತಿಗಳು ಪರಸ್ಪರ ಸಕಾರಾತ್ಮಕ ಮಾತುಗಳನ್ನಾಡಬೇಕು. ಏನಾದ್ರೂ ಬೆಳಬೆಳಗ್ಗೆ ಈ ಕೆಲವು ನಕಾರಾತ್ಮಕ ಸಂಗತಿಗಳ ಬಗ್ಗೆ ಮಾತನಾಡಿದರೆ ಇದು ಸಂಸಾರದ ಶಾಂತಿ, ನೆಮ್ಮದಿಯನ್ನು ಕೆಡಿಸುವುದಲ್ಲದೆ ಇದು  ಕಾಲ ನಂತರದಲ್ಲಿ ದಾಂಪತ್ಯ ಜೀವನದಲ್ಲಿ ದುರ್ಬಲಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣ ಯಾವೆಲ್ಲಾ ವಿಚಾರಗಳನ್ನು ಮಾತನಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣವೇ ಈ ವಿಷಯಗಳ ಬಗ್ಗೆ ಮಾತನಾಡಬಾರದಂತೆ:

ಹಿಂದಿನ ತಪ್ಪುಗಳ ಬಗ್ಗೆ ಮಾತನಾಡುವುದು: ಬೆಳಗ್ಗೆ ಎದ್ದ ತಕ್ಷಣವೇ ಹಿಂದೆ ಅಥವಾ ಹಿಂದಿನ ದಿನ ನಡೆದಂತಹ ಜಗಳ, ಮನಸ್ತಾಪ ಅಥವಾ ತಪ್ಪುಗಳ ಬಗ್ಗೆಯೇ ಮಾತನಾಡಿದರೆ ಇದು ಕಿರಿಕಿರಿಯನ್ನು ಉಂಟು ಮಾಡುವುದಲ್ಲದೆ, ದಿನದ ಸಕಾರಾತ್ಮಕತೆಯನ್ನೇ ಹೋಗಲಾಡಿಸುತ್ತದೆ. ಈ ಒಂದು ತಪ್ಪಿನಿಂದ ಸಂಪೂರ್ಣ ದಿನವೇ ಹಾಳಾಗುವುದಲ್ಲದೆ, ಇದರಿಂದ ಸುಂದರ ಸಂಬಂಧಕ್ಕೂ ಪೆಟ್ಟು ಬೀಳುತ್ತದೆ.

ಹೋಲಿಕೆ ಮಾಡುವುದು: ಬೆಳಬೆಳಗ್ಗೆಯೇ ನಿಮ್ಮ ಸಂಗಾತಿಯನ್ನು ಬೇರೆಯವರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ. ಉದಾಹರಣೆಗೆ ಆ ಪಕ್ಕದ ಮನೆಯವನು ತನ್ನ ಹೆಂಡತಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಹೆಂಡತಿಗೆ ಮನೆ ಕೆಲಸದಲ್ಲಿ ಎಷ್ಟು ಸಹಾಯ ಮಾಡ್ತಾನೆ, ನೀವು ನೋಡಿದ್ರೆ ನನಗೆ ಯಾವ ಸಹಾಯ ಕೂಡ ಮಾಡಲ್ಲ ಅಂತೆಲ್ಲಾ ಬೆಳಬೆಳಗ್ಗೆ ಕಿರಿಕಿರಿಯ ಮಾತುಗಳನ್ನಾಡಿದರೆ, ಈ ಮಾತುಗಳು ಸಂಗಾತಿಯ ಸ್ವಾಭಿಮಾನಕ್ಕೆ ಧಕ್ಕೆ ತರಬಹುದು ಅಲ್ಲದೆ ಇದು ನಿಮ್ಮಿಬ್ಬರ ನಡುವಿನ ಅಂತರವನ್ನು ಹೆಚ್ಚಿಸಬಹುದು.

ಖರ್ಚು ಮತ್ತು ಸಾಲದ ಬಗ್ಗೆ ತೀವ್ರವಾದ ಚರ್ಚೆಗಳು: ಪ್ರತಿಯೊಬ್ಬರೂ ಸಹ ಬೆಳಗಿನ ಟೀ ಕಾಫಿ ಸಮಯವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಹೀಗಿರುವಾಗ ಈ ಸಮಯದಲ್ಲಿ ಗಂಡ-ಹೆಂಡತಿ ಸಾಲ, ಖರ್ಚುಗಳು, ಹಣಕಾಸಿನ ವಿಚಾರಗಳ ಬಗ್ಗೆ ಚರ್ಚಿಸಿದರೆ ಇದರಿಂದ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಂಪೂರ್ಣ ದಿನವೇ ಹಾಳಾಗುತ್ತದೆ. ಹಾಗಾಗಿ ಸಂಜೆ ಅಥವಾ ವಾರಾಂತ್ಯದಲ್ಲಿ ಹಣಕಾಸಿನ ವಿಷಯಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು.

ಇದನ್ನೂ ಓದಿ: ಗಂಡ-ಹೆಂಡತಿ ಪರಸ್ಪರ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?

ವ್ಯಂಗ್ಯ ಅಥವಾ ಅಪಹಾಸ್ಯದ ಮಾತುಗಳು: ಬೆಳಬೆಳಗ್ಗೆ ನಿಮ್ಮ ಸಂಗಾತಿಯ ಬಗ್ಗೆ ಅಪಹಾಸ್ಯದ ಮಾತುಗಳನ್ನಾಡಬೇಡಿ. ನಿನ್ನಿಂದ ಏನು ಸಾಧ್ಯವಿಲ್ಲ, ನೀವು ಎಂದಾದ್ರೂ ಒಂದಾದ್ರೂ ಕೆಲಸ ನೆಟ್ಟಗೆ ಮಾಡಿದ್ದೀರಾ ಅಂತೆಲ್ಲಾ ಬೆಳಬೆಳಗ್ಗೆ ವ್ಯಂಗ ಮಾತುಗಳನ್ನಾಡುವುದು ಸಂಗಾತಿಯ ಮನಸ್ಸಿಗೆ ನೋವುಂಟು ಮಾಡುವುದಲ್ಲದೆ, ಇದು ಸಂಬಂಧವನ್ನು ಸಹ ದುರ್ಬಲಗೊಳಿಸುತ್ತದೆ.

ದಾಂಪತ್ಯ ಜೀವನವನ್ನು ಸದೃಢವಾಗಿಡಲು ಗಂಡ ಹೆಂಡತಿ ಏನು ಮಾಡಬೇಕು?

ಬೆಳಬೆಳಗ್ಗೆ ನಕಾರಾತ್ಮಕ ಮಾತುಗಳನ್ನಾಡುವ ಬದಲು ದಂಪತಿಗಳು ಪರಸ್ಪರ ಸಕಾರಾತ್ಮಕ ಮಾತುಗಳನ್ನಾಡಬೇಕು.  ನಗುನಗುತ್ತಾ ಒಬ್ಬರನ್ನೊಬ್ಬರು ಸ್ವಾಗತಿಸುತ್ತಾ ಮತ್ತು ದೈನಂದಿನ ಕೆಲಸಗಳಲ್ಲಿ ಪರಸ್ಪರ ಸಹಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಹಿಂದಿನ ದಿನ ನಡೆದ ಜಗಳವನ್ನು ಅಲ್ಲೇ ಬಿಟ್ಟು ಪ್ರೀತಿಯಿಂದ ಇಬ್ಬರು ಹೊಸ ದಿನವನ್ನು ಆರಂಭಿಸಬೇಕು. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಖ್ಯವಾಗಿ ವೈವಾಹಿಕ ಸಂಬಂಧವು ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಆಧರಿಸಿರುವುದರಿಂದ, ಬೆಳಿಗ್ಗೆ ನೋವುಂಟುಮಾಡುವ ಮಾತುಗಳನ್ನು ತಪ್ಪಿಸುವುದು ತುಂಬಾ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ – Kannada News

ಮನೆಯಲ್ಲಿ ಪುಟಾಣಿ ಮಕ್ಕಳಿದ್ದರೆ (little girl) ಗೊಂಬೆಯಾಟ ಆಡುತ್ತಾರೆ. ಹೆಣ್ಣು ಮಕ್ಕಳು ಈ ಗೊಂಬೆಗಳಿಗೆ ಬಟ್ಟೆ ತೊಡಿಸುವುದು, ತಲೆ ಬಾಚುವುದು ಮತ್ತು ಆರೈಕೆ ಮಾಡುವ ಮೂಲಕ ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ದೃಶ್ಯ ನೋಡಿದಾಗ ದೊಡ್ಡವರ ಮುಖದಲ್ಲಿ ನಗು ಮೂಡುತ್ತದೆ. ಇದೀಗ ಇಂತಹದ್ದೇ ಮುದ್ದಾದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪುಟಾಣಿಯೊಂದು ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡುವ ದೃಶ್ಯವಿದೆ. ಈ ಪುಟಾಣಿಯ ಗೊಂಬೆಯಾಟ ನೋಡಿ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ಶೋಭಾ (shobha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು, ಸಣ್ಣ ಮಗುವಿಗೆ ಸ್ನಾನ ಮಾಡಿಸಿದ್ದಂತೆ ಗೊಂಬೆಗೆ ಸ್ನಾನ ಮಾಡಿಸುತ್ತಿದೆ. ಆರೈಕೆ ಮಾಡುವುದರಲ್ಲಿ ಬ್ಯುಸಿಯಾಗಿರುವ ಪುಟ್ಟ ಮಗುವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಒಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಗೊಂಬೆ ಅಂದ್ರೆ ಮಕ್ಕಳಿಗೆ ಇಷ್ಟ ಎಂದಿದ್ದಾರೆ. ಮತ್ತೊಬ್ಬರು, ಬಾಲ್ಯದ ದಿನಗಳು ಕಣ್ಣ ಮುಂದೆ ಬಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಆರೈಕೆ, ಕಾಳಜಿ ತೋರಿಸುವ ಬಂದು ಬಿಟ್ಟಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:11 pm, Sun, 7 June 26

Source link