All posts by nagaraj11081993

ಶೂಟಿಂಗ್​​ನಲ್ಲಿ ಕುದುರೆ ಮೇಯಿಸಿದ ಅಕ್ಷಯ್, ಬಕರಾ ಆದ ಹಾಸ್ಯನಟ ರಾಜ್​ಪಾಲ್ – Kannada News

ಅಕ್ಷಯ್ ಕುಮಾರ್​ (Akshay Kumar) ವರ್ಷಕ್ಕೆ ಅತಿ ಹೆಚ್ಚು ಸಿನಿಮಾ ಮಾಡುವ ಭಾರತದ ಸ್ಟಾರ್ ನಟ. ಇತರೆ ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ಎರಡು-ಮೂರು ವರ್ಷ ತೆಗೆದುಕೊಂಡರೆ, ಅಕ್ಷಯ್ ಕುಮಾರ್ ಒಂದೇ ವರ್ಷದಲ್ಲಿ ಮೂರು ನಾಲ್ಕು ಸಿನಿಮಾ ಮುಗಿಸಿ ಇನ್ನೆರಡರ ಶೂಟಿಂಗ್ ಪ್ರಾರಂಭಿಸಿರುತ್ತಾರೆ. ಶೂಟಿಂಗ್ ವಿಷಯದಲ್ಲಿ ಬಲು ಶಿಸ್ತಿನ ವ್ಯಕ್ತಿ ಆಗಿರುವ ಅಕ್ಷಯ್ ಕುಮಾರ್, ಬೆಳಿಗ್ಗೆ 6 ಗಂಟೆಗೆ ಶೂಟಿಂಗ್ ಆರಂಭಿಸಿದರೆ ಸಂಜೆ 4 ಅಥವಾ 5 ಕ್ಕೆ ಮುಗಿಸಿ ಬಿಡುತ್ತಾರೆ. ಶೂಟಿಂಗ್ ಸಮಯದಲ್ಲಿಯೂ ಸಹ ಬಲು ಸಕ್ರಿಯರಾಗಿರುವ ಅಕ್ಷಯ್, ಸಹ ನಟರನ್ನು ಬಕರಾ ಮಾಡುತ್ತಾ ತಮಾಷೆ ಮಾಡುತ್ತಿರುತ್ತಾರೆ.

ಇದೀಗ ಅಕ್ಷಯ್ ಕುಮಾರ್ ಅವರು ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ‘ವೆಲ್​​ಕಮ್ ಟು ಜಂಗಲ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಭಾರಿ ತಾರಾಗಣ ಇರುವ ಹಾಸ್ಯ ಪ್ರಧಾನ ಸಿನಿಮಾ ಇದಾಗಿದ್ದು, ಅಕ್ಷಯ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರುಗಳು ಇದ್ದು, ಇವರ ಜೊತೆಗೆ ಹಲವು ಹಾಸ್ಯ ನಟರು ಸಹ ನಟಿಸುತ್ತಿದ್ದಾರೆ. ಇದೀಗ ನಟ ಅಕ್ಷಯ್ ಕುಮಾರ್, ಸಿನಿಮಾ ಶೂಟಿಂಗ್ ವೇಳೆ ತಾವು ಹಿರಿಯ ಹಾಸ್ಯ ನಟನ ಮೇಲೆ ಮಾಡಿದ ಪ್ರ್ಯಾಂಕ್​​ನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಶೂಟಿಂಗ್ ವೇಳೆ ಅಕ್ಷಯ್ ಕುಮಾರ್, ಕುದುರೆ ಮೇಯಿಸಿದ್ದಾರೆ. ಆದರೆ ಕುದುರೆಗೆ ಹುಲ್ಲು ತಿನ್ನಿಸಿಲ್ಲ ಬದಲಿಗೆ ಸಹ ನಟನ ಕೂದಲನ್ನೇ ತಿನ್ನಿಸಿದ್ದಾರೆ. ಹಿರಿಯ ಹಾಸ್ಯ ನಟ ರಾಜ್​ಪಾಲ್ ಯಾದವ್ ಶೂಟಿಂಗ್ ವೇಳೆ ಯಾರೊಟ್ಟಿಗೋ ಮಾತನಾಡುತ್ತಾ ನಿಂತಿದ್ದಾಗ, ಅಲ್ಲಿಗೆ ಕುದುರೆ ಹಿಡಿದು ಬರುವ ಅಕ್ಷಯ್ ಕುಮಾರ್, ರಾಜ್​​ಪಾಲ್ ಧರಿಸಿದ್ದ ನಕಲಿ ಕೂದಲಿನ ವಿಗ್ ಅನ್ನು ತಿನ್ನುವಂತೆ ಕುದುರೆಗೆ ಹೇಳಿದ್ದಾರೆ, ಕೂಡಲೇ ಆ ಕುದುರೆ ರಾಪ್​​ಪಾಲ್​ ಯಾದವ್ ಅವರ ವಿಗ್​​ಗೆ ಬಾಯಿ ಹಾಕಿದೆ. ತಲೆಗೆ ಏನೋ ತಾಗಿದಂತಾಗಿ ಹಿಂದೆ ತಿರುಗಿ ನೋಡಿದ ರಾಜ್​​ಪಾಲ್ ಯಾದವ್ ಕುದುರೆಯನ್ನು ನೋಡಿ ಹೌಹಾರಿದ್ದಾರೆ. ಇದನ್ನು ನೋಡಿ ಅಕ್ಷಯ್ ಕುಮಾರ್​​​ಗೆ ನಗುವೋ ನಗು.

ವಿಶೇಷವೆಂದರೆ ವಿಡಿಯೋನಲ್ಲಿ ರಾಜ್​​ಪಾಲ್ ಪಕ್ಕದಲ್ಲೇ ಪರೇಶ್ ರಾವಲ್ ಸಹ ಇದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವೆ ಎಲ್ಲವೂ ಸರಿ ಇಲ್ಲ. ಅಕ್ಷಯ್ ನಿರ್ಮಾಣ ಮಾಡುತ್ತಿದ್ದ ‘ಹೇರಾ ಪೇರಿ 3’ ಸಿನಿಮಾನಲ್ಲಿ ತಾವು ನಟಿಸುವುದಿಲ್ಲ ಎಂದು ಪರೇಶ್ ಹೇಳಿದ್ದರು. ಸಂಧಾನದ ಬಳಿಕ ಒಪ್ಪಿಗೆ ಸೂಚಿಸಿದ್ದರಾದರೂ ಈಗ ಮತ್ತೆ ಸಿನಿಮಾದಿಂದ ಹೊರಗೆ ಹೋಗಿದ್ದು, ಪಡೆದಿದ್ದ ಅಡ್ವಾನ್ಸ್ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರೆ. ಅಲ್ಲದೆ, ಸಂದರ್ಶನವೊಂದರಲ್ಲಿ ಅಕ್ಷಯ್ ನನ್ನ ಗೆಳೆಯ ಅಲ್ಲ ಸಹ ನಟ ಅಷ್ಟೆ ಎಂದು ಹೇಳಿಕೆ ಸಹ ನೀಡಿದ್ದರು.

ಈಗ ಅಕ್ಷಯ್ ಕುಮಾರ್ ಹಂಚಿಕೊಂಡಿರುವ ವಿಡಿಯೋನಲ್ಲಿ ಅಕ್ಷಯ್ ಕುಮಾರ್ ಮಾಡಿರುವ ಪ್ರ್ಯಾಂಕ್ ನೋಡಿ ಪರೇಶ್ ರಾವಲ್ ಸಹ ಮನಸಾರೆ ನಕ್ಕಿದ್ದಾರೆ. ವಿಡಿಯೋ ನೋಡಿದರೆ ಅಕ್ಷಯ್ ಮತ್ತು ಪರೇಶ್ ರಾವಲ್ ತಮ್ಮ ನಡುವೆ ಇದ್ದ ಮನಸ್ಥಾಪವನ್ನು ಮರೆತಂತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSC Recruitment 2026: ಹುದ್ದೆಗಳ ಸಂಖ್ಯೆ 731ರಿಂದ 1170ಕ್ಕೆ ಏರಿಕೆ; ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ! – Kannada News

ಕೇಂದ್ರ ಸರ್ಕಾರಿ ಉದ್ಯೋಗImage Credit source: Pinterest

ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಸಿಹಿಸುದ್ದಿ ನೀಡಿದೆ. ದೇಶಾದ್ಯಂತದ ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಈ ಹಿಂದೆ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದ ಅಧಿಸೂಚನೆಯಲ್ಲಿ ಒಟ್ಟು 731 ಹುದ್ದೆಗಳ ನೇಮಕಾತಿ ಘೋಷಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು ಹುದ್ದೆಗಳ ಸಂಖ್ಯೆಯನ್ನು 1170ಕ್ಕೆ ಹೆಚ್ಚಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ಮಾಹಿತಿ:

SSC ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜೂನ್ 4, 2026ರ ವೇಳೆಗೆ ವಿವಿಧ ಇಲಾಖೆಗಳಲ್ಲಿನ ಒಟ್ಟು 1170 ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಸಂಖ್ಯೆಯಲ್ಲಿ 439 ಸ್ಥಾನಗಳ ಹೆಚ್ಚಳವಾಗಿರುವುದು ಅಭ್ಯರ್ಥಿಗಳಲ್ಲಿ ಉತ್ಸಾಹ ಮೂಡಿಸಿದೆ.

ಪರೀಕ್ಷೆ ಯಾವಾಗ ನಡೆಯಲಿದೆ?

ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆಯನ್ನು ಮತ್ತಷ್ಟು ವೇಗಗೊಳಿಸುವುದು ಅಗತ್ಯವಾಗಿದೆ.

ಪರೀಕ್ಷೆಯ ಮಾದರಿ ಹೇಗಿರಲಿದೆ?

SSC ಸ್ಟೆನೋಗ್ರಾಫರ್ CBT ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, 200 ಬಹು ಆಯ್ಕೆ ಪ್ರಶ್ನೆಗಳು ಕೇಳಲಾಗುತ್ತವೆ. ಪರೀಕ್ಷೆಯ ಅವಧಿ 2 ಗಂಟೆಗಳಾಗಿದ್ದು, ಅಭ್ಯರ್ಥಿಗಳ ವಿಶ್ಲೇಷಣಾ ಸಾಮರ್ಥ್ಯ, ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಎಚ್ಚರಿಕೆಯಿಂದ ಉತ್ತರಿಸುವುದು ಅಗತ್ಯ. ಏಕೆಂದರೆ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. CBT ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನಂತರ ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿಕೊಂಡಿರುವ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಈ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅಂತಿಮ ಆಯ್ಕೆ ಹೇಗೆ?

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕೌಶಲ್ಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ. ಬಳಿಕ SSC ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಿದೆ.

ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ:

ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅವಕಾಶಗಳಿವೆ. ಆದಾಗ್ಯೂ, CBT ಪರೀಕ್ಷೆ ಹಾಗೂ ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಪಠ್ಯಕ್ರಮ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಆಧಾರದ ಮೇಲೆ ಸಿದ್ಧತೆ ನಡೆಸುವುದು ಒಳಿತು. SSC ಸ್ಟೆನೋಗ್ರಾಫರ್ ನೇಮಕಾತಿ 2026 ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಸಾವಿರಾರು ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, ಹುದ್ದೆಗಳ ಸಂಖ್ಯೆಯ ಹೆಚ್ಚಳದಿಂದ ಉದ್ಯೋಗಾವಕಾಶಗಳು ಮತ್ತಷ್ಟು ವಿಸ್ತರಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ – Kannada News

ನವದೆಹಲಿ, ಜೂನ್ 5: ಬರುವ ಜೂನ್ 10ರಂದು ಭಾರತದ ರಾಜಕಾರಣದಲ್ಲಿ ಹಳೇ ದಾಖಲೆಯೊಂದು ಇತಿಹಾಸ ಪುಟ ಸೇರಲಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ (4,398 ದಿನಗಳು) ದಾಖಲೆಯನ್ನು ದಾಟಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ, ನೆಹರು ಮತ್ತು ಮೋದಿ ಯುಗದ ಆಡಳಿತ ಹಾಗೂ ಭಾರತದ ಬದಲಾದ ಸ್ವರೂಪದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

ಮೊದಲೆಲ್ಲ ರಾಜಕೀಯ ಎಂಬುದು ಕೇವಲ ರ‍್ಯಾಲಿ ಮತ್ತು ಚುನಾವಣೆಗಳಿಗೆ ಸೀಮಿತವಾಗಿತ್ತು. ಆದರೆ, ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ರಾಜಕೀಯ ನಾಯಕರ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಇರುತ್ತಾರೆ. ಇಂತಹ ಕಠಿಣ ಸನ್ನಿವೇಶದಲ್ಲೂ ಪ್ರಧಾನಿ ಮೋದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಶ್ರಮಿಸುತ್ತಿದ್ದಾರೆ. ಜೂನ್ 10ಕ್ಕೆ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಪ್ರಧಾನಿ ಮುರಿಯಲಿದ್ದಾರೆ.

ತಲೆಮಾರುಗಳ ನಡುವಿನ ಸಮನ್ವಯತೆ:

ಬದಲಾಗುತ್ತಿರುವ ತಲೆಮಾರುಗಳ ನಡುವೆಯೂ ತಮ್ಮ ರಾಜಕೀಯ ಮತ್ತು ಭಾವನಾತ್ಮಕ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ನಾಯಕರು ಬಹಳ ಅಪರೂಪ. ಆದರೆ, ಪ್ರಧಾನಿ ಮೋದಿ ಅವರು ಒಂದೇ ಕುಟುಂಬದ ಮೂರು ವಿಭಿನ್ನ ತಲೆಮಾರುಗಳಿಗೆ ಕನೆಕ್ಟ್ ಆಗಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೋಟ್ ಮಾಡಿದ್ದ ಒಬ್ಬ ಹಿರಿಯ ವ್ಯಕ್ತಿ ಮತ್ತು ಆತನ ಮಗ, ಹಾಗೂ ಅದೇ ಕುಟುಂಬದ ಮೊಮ್ಮಗ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಮತ ಹಾಕಿರುತ್ತಾರೆ. ಈ ಮೂಲಕ ಅವರು ಮೂರೂ ತಲೆಮಾರುಗಳ ನೆಚ್ಚಿನ ನಾಯಕರಾಗಿದ್ದಾರೆ.

ಇದನ್ನೂ ಓದಿ: ಇಡೀ ನೆಹರು-ಗಾಂಧಿ ಕುಟುಂಬವೇ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ; ಪಿಯೂಷ್ ಗೋಯಲ್ ಆರೋಪ

ಸವಾಲುಗಳ ಯುಗದ ನಾಯಕ:

ಕೊವಿಡ್-19 ಜಾಗತಿಕ ಸಾಂಕ್ರಾಮಿಕ, ಅಂತಾರಾಷ್ಟ್ರೀಯ ಯುದ್ಧಗಳು, ಭಯೋತ್ಪಾದನೆ, ಆರ್ಥಿಕ ಆಘಾತಗಳು ಮತ್ತು ಜಾಗತಿಕ ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳುವಿಕೆಯಂತಹ ಸಾಲು ಸಾಲು ಬಿಕ್ಕಟ್ಟುಗಳ ನಡುವೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನೆಹರು ಅವರ ಕಾಲಕ್ಕೆ ಹೋಲಿಸಿದರೆ, ಪ್ರಸ್ತುತ ಮೋದಿ ಅವರು ಎದುರಿಸುತ್ತಿರುವ ಸವಾಲುಗಳ ತೀವ್ರತೆ ಮತ್ತು ಸ್ವರೂಪ ಅತ್ಯಂತ ಕಠಿಣ ಹಾಗೂ ಸಂಪೂರ್ಣ ಭಿನ್ನವಾಗಿದೆ.

ಜನ ಚಳುವಳಿಯಾದ ಆಡಳಿತ:

ಜವಾಹರಲಾಲ್ ನೆಹರು ಅವರ ಆಡಳಿತ ಮಾದರಿಯು ಹೆಚ್ಚಾಗಿ ‘ಟಾಪ್-ಡೌನ್’ (ಮೇಲಿಂದ ಕೆಳಕ್ಕೆ) ಆಗಿತ್ತು. ಅಲ್ಲಿ ನಿರ್ಧಾರಗಳನ್ನು ರಾಜಕೀಯ ಗಣ್ಯರು ಮತ್ತು ಅಧಿಕಾರಶಾಹಿಯೇ ತೆಗೆದುಕೊಳ್ಳುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ತತ್ವವು ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಗೆ ಒತ್ತು ನೀಡುವ ಮೂಲಕ ಆಡಳಿತವನ್ನು ಒಂದು ‘ಜನ ಚಳುವಳಿ’ಯನ್ನಾಗಿ ಮಾರ್ಪಡಿಸಿದೆ.

ಇದನ್ನೂ ಓದಿ: ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ

ಸಾಮಾನ್ಯರ ಸಾಮರ್ಥ್ಯದ ಮೇಲೆ ನಂಬಿಕೆ:

ನೆಹರು ಅವರ ಸಮಾಜವಾದಿ ನೀತಿಯು ಸರ್ಕಾರದ ನಿಯಂತ್ರಣ ಮತ್ತು ಅಧಿಕಾರಶಾಹಿಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡಿತ್ತು. ಆದರೆ, ಪ್ರಧಾನಿ ಮೋದಿ ಅವರ ಆಡಳಿತವು ಸಾಮಾನ್ಯ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅವರ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ.

ಸಾಮೂಹಿಕ ರಾಷ್ಟ್ರೀಯ ಮಿಷನ್:

ನೆಹರು ಕಾಲದಲ್ಲಿ ದೇಶದ ಅಭಿವೃದ್ಧಿ ಎನ್ನುವುದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಬಿಂಬಿತವಾಗಿತ್ತು. ಆದರೆ, ಪ್ರಸ್ತುತ ಮೋದಿಯವರ ಯುಗದಲ್ಲಿ ದೇಶದ ಪ್ರಗತಿಯನ್ನು ಪ್ರತಿಯೊಬ್ಬ ನಾಗರಿಕನ ಕೊಡುಗೆಯನ್ನು ಬಯಸುವ ಒಂದು ‘ಸಾಮೂಹಿಕ ರಾಷ್ಟ್ರೀಯ ಮಿಷನ್’ (ಸಬ್ ಕಾ ಪ್ರಯಾಸ್) ಆಗಿ ರೂಪಿಸಲಾಗಿದೆ.

ಜನಸಂಖ್ಯೆಯ ಹೆಚ್ಚಳ:

ನೆಹರು ಅಧಿಕಾರ ವಹಿಸಿಕೊಂಡಾಗ ದೇಶದ ಜನಸಂಖ್ಯೆ 34 ಕೋಟಿ ಇತ್ತು. ಆದರೆ ಇಂದು ಪ್ರಧಾನಿ ಮೋದಿ ಮುನ್ನಡೆಸುತ್ತಿರುವ ಭಾರತದ ಜನಸಂಖ್ಯೆ 146 ಕೋಟಿಗೂ ಅಧಿಕವಾಗಿದೆ. 1951ರ ಮೊದಲ ಚುನಾವಣೆಯಲ್ಲಿ ಕೇವಲ 53 ಪಕ್ಷಗಳು ಸ್ಪರ್ಧಿಸಿದ್ದರೆ, 2024ರ ಚುನಾವಣೆಯಲ್ಲಿ ಭೀಕರ ಸ್ಪರ್ಧೆಯ ನಡುವೆ ದಾಖಲೆಯ 744 ಪಕ್ಷಗಳು ಕಣಕ್ಕಿಳಿದಿದ್ದವು. ನೆಹರು ಕಾಲದ ಏಕಪಕ್ಷೀಯ ಪ್ರಾಬಲ್ಯದ ಜಾಗದಲ್ಲಿ ಇಂದು ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಇದೆ.

ಆರ್ಥಿಕತೆ ಮತ್ತು ಜಾಗತಿಕ ಮುನ್ನಡೆ:

ನೆಹರು ಕಾಲದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಕೇವಲ 3.5%ರಷ್ಟಿತ್ತು. ಆದರೆ, ಇಂದು ಕೋವಿಡ್ ಜಾಗತಿಕ ಬಿಕ್ಕಟ್ಟಿನ ನಡುವೆಯೂ ಮೋದಿ ನೇತೃತ್ವದಲ್ಲಿ ಭಾರತ 6.5-7% ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು 2014ರಲ್ಲಿದ್ದ 10ನೇ ಸ್ಥಾನದಿಂದ 2025-26 ರಲ್ಲಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೊಕ್ಕು ಮುರಿದುಕೊಂಡು ಆಹಾರ ತಿನ್ನಲು ಕಷ್ಟಪಡುತ್ತಿದ್ದ ಹಕ್ಕಿಯ ನೆರವಿಗೆ ಬಂದ ಮತ್ತೊಂದು ಪಕ್ಷಿ – Kannada News

ಈಗಿನ ಕಾಲದಲ್ಲಿ ಜನರು ಇತರರಿಗೆ ಸಹಾಯ ಮಾಡುವುದು ಬಿಡಿ, ಕಷ್ಟ ಎನ್ನುವರತ್ತ ತಿರುಗಿಯೂ ನೋಡಲ್ಲ. ಹೀಗಿರುವಾಗ ಈ ಪಕ್ಷಿಗಳು ತನ್ನ ಬಳಗದಲ್ಲಿ ತೊಂದರೆಗೆ ಸಿಲುಕಿರುವ ಜೀವಕ್ಕೆ ರಕ್ಷಣೆಗೆ ನಿಲ್ಲುತ್ತದೆ, ಆಸರೆಯಾಗುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ವಿಡಿಯೋ. ಕೊಕ್ಕು ಮುರಿದುಕೊಂಡು ಆಹಾರ ತಿನ್ನಲಾಗದೇ ಒದ್ದಾಡುತ್ತಿದ್ದ ಪಕ್ಷಿಗೆ ಇನ್ನೊಂದು ಹಕ್ಕಿ ತನ್ನ ಕೊಕ್ಕಿನಿಂದ ಆಹಾರ (food) ನೀಡಿದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಪಕ್ಷಿಯ ಸಹಾಯ ಮಾಡುವ ಗುಣವನ್ನು ಮೆಚ್ಚಿಕೊಂಡಿದ್ದಾರೆ.

@Ravitiwariii_ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕೊಕ್ಕು ಮುರಿದುಕೊಂಡ ಪಕ್ಷಿ ಆಹಾರ ತಿನ್ನಲು ಕಷ್ಟ ಪಡುತ್ತಿದೆ. ಇದೇ ವೇಳೆ ಮತ್ತೊಂದು ಪಕ್ಷಿ ತನ್ನ ಕೊಕ್ಕಿನಿಂದ ಆಹಾರ ಕೊಟ್ಟು ಸಹಾಯ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಅಧಿಕ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರೀತಿ ಹಾಗೂ ದಯೆಯ ಅತ್ಯಂತ ಸುಂದರ ಎಂದಿದ್ದಾರೆ. ಇನ್ನೊಬ್ಬರು, ಈ ಹಕ್ಕಿಯಿಂದ ಮನುಷ್ಯರು ಕಲಿಯುವಂತಹದ್ದು ಸಾಕಷ್ಟಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮೂಕ ಜೀವಿಗಳು ಗುಣದಲಿ ಮೇಲು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Fri, 5 June 26

Source link

ಐಪಿಎಲ್ ಮುಗಿದ ಬೆನ್ನಲ್ಲೇ ಹೊಸ ಟಿ20 ತಂಡ ಸೇರಿಕೊಂಡ ದೇವದತ್ ಪಡಿಕ್ಕಲ್ – Kannada News

ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ ಇದೇ ಜೂನ್ 20 ರಿಂದ ಆರಂಭವಾಗಲಿದ್ದು, ಜುಲೈ 12 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಇಂದು ಹರಾಜು ಕೂಡ ನಡೆದಿದೆ. ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಹೊಸ ತಂಡಗಳನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ 150ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಎಲ್ಲಾ 6 ತಂಡಗಳು ತಲಾ 60 ಲಕ್ಷ ರೂ. ಹಣದೊಂದಿಗೆ ಆಟಗಾರರ ಖರೀದಿಗಿಳಿದಿವೆ. ಅದರಂತೆ ಐಪಿಎಲ್‌ನಲ್ಲಿ ಆರ್​ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇವದತ್ ಪಡಿಕ್ಕಲ್ ಇದೀಗ ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ ಮೈಸೂರ್ ವಾರಿಯರ್ಸ್​ ಫ್ರಾಂಚೈಸಿ ಪಡಿಕ್ಕಲ್​ಗೆ 2 ಲಕ್ಷ 60 ಸಾವಿರ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

Source link

ಗದಗ: 33 ದಿನ ಅನ್ನ, ನೀರಿಲ್ಲದೇ ಸ್ವಾಮೀಜಿಯಿಂದ ಶಿವಯೋಗ ಸಮಾಧಿ; ಇಟ್ಟಿಗೆಯಿಂದ ಗರ್ಭಗುಡಿ ಬಂದ್​​ – Kannada News

ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠImage Credit source: tv9 kannada

ರಾಮನಗರ, ಜೂನ್​​ 05: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ಸಕಾಲದಲ್ಲಿ ಮಳೆ-ಬೆಳೆ ಉತ್ತಮವಾಗಿ ಬರಲಿ ಎಂಬ ಸಂಕಲ್ಪದೊಂದಿಗೆ ಗದಗ (gadag) ತಾಲೂಕಿನ ಅಂತೂರು ಬೆಂತೂರು ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ‘ಶಿವಯೋಗ ಸಮಾಧಿ’ (Shiva Yoga Samadhi) ತಪಸ್ಸನ್ನು ಆರಂಭಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲೂ ಅಧ್ಯಾತ್ಮದ ಶಕ್ತಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ‌‌. ಶ್ರೀ ಮಠದ ಗರ್ಭಗುಡಿಯನ್ನು ಬಂದ್​​ ಮಾಡಿಕೊಂಡು ಸಮಾಧಿ ಯೋಗದಲ್ಲಿ ಮಗ್ನರಾಗಿದ್ದಾರೆ. ಸದ್ಯ ಮಠದಲ್ಲಿ ಭಕ್ತರಿಂದ 24 ಗಂಟೆ ಶಿವನಾಮಸ್ಮರಣೆ ನಡೆದಿದೆ.

ಮುಖ್ಯಾಂಶಗಳು

  • ಲೋಕ ಕಲ್ಯಾಣಕ್ಕಾಗಿ ಕಠಿಣ ಶಿವಯೋಗ ಸಮಾಧಿ ಅನುಷ್ಠಾನ
  • 775 ಗಂಟೆ ಅಂದರೆ 33 ದಿನಗಳ‌ ಕಾಲ ಶಿವಯೋಗ ಸಮಾಧಿ
  • ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ ಸಂಭ್ರಮದ ವಾತಾವರಣ

33 ದಿನಗಳ‌ ಕಾಲ ಶಿವಯೋಗ ಸಮಾಧಿ

ಶ್ರೀ ಬೂದೀಶ್ವರ ಮಠದ ಪೀಠಾಧಿಪತಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಠಿಣವಾದ ಶಿವಯೋಗ ಸಮಾಧಿ ಯೋಗವನ್ನು ಮಾಡುತ್ತಿದ್ದಾರೆ. ಒಂದು ತಿಂಗಳು ಮೌನಾನುಷ್ಠಾನ ಮಾಡಿದ್ದು, ಜೂನ್‌ 3ರಂದು ಮಧ್ಯರಾತ್ರಿ 3 ಗಂಟೆಗೆ, ಗರ್ಭಗುಡಿ ಪ್ರವೇಶ ಮಾಡಿದ್ದಾರೆ. ಶ್ರೀಗಳು ಗರ್ಭಗುಡಿ ಪ್ರವೇಶ ಮಾಡಿದ ನಂತರ ಬಾಗಿಲು ಬಂದ್​ ಮಾಡಿ ಇಟ್ಟಿಗೆ, ಸಿಮೆಂಟ್​ನಿಂದ ಕ್ಲೋಸ್ ಮಾಡಲಾಗಿದೆ. ಗರ್ಭಗುಡಿಯಲ್ಲಿ ಯಾವುದೇ ಬೆಳಕು, ಗಾಳಿ, ನೀರು ಇಲ್ಲದೆ 33 ದಿನಗಳು ಇರಲಿದ್ದಾರೆ. ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಈ ಹಿಂದೆ ಕೂಡ ಹಲವು ಶಿವಯೋಗ ಸಮಾಧಿ ವ್ರತ ಮಾಡಿದ್ದಾರೆ. ‌ಈ ಬಾರಿ ಕೂಡ ಮಾಡುತ್ತಿದ್ದಾರೆ. ಸದ್ಯ ಶ್ರೀಗಳು ಗರ್ಭಗುಡಿಯಲ್ಲಿನ ಶಿವಲಿಂಗದ ಮುಂದೆ ಕಠಿಣ ತಪಸ್ಸು ಮಾಡುತ್ತಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ

ಅಂತೂರು ಬೆಂತೂರು ಗ್ರಾಮ ಸೇರಿದಂತೆ ಹಲವು ಗ್ರಾಮದ ಭಕ್ತರು ಶ್ರೀ ಮಠಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ. 775 ಗಂಟೆಗಳ ಕಾಲ, ಅಂದರೆ 33 ದಿನಗಳವರೆಗೆ ನಿರಂತರವಾಗಿ ಶಿವಯೋಗ ಸಮಾಧಿಯಲ್ಲಿ ತೊಡಗಿರುವ ಸ್ವಾಮೀಜಿಗಳು, ಮಠದ ಗರ್ಭಗುಡಿಯಲ್ಲಿ ಶಿವಲಿಂಗದ ಸನ್ನಿಧಿಯಲ್ಲಿ ತಪಸ್ಸು ಮಾಡುತ್ತಿದ್ದಾರೆ. ವಿಶ್ವಶಾಂತಿ, ಮಧ್ಯ ಪ್ರಾಚ್ಯ ಯುದ್ಧದ ವಾತಾವರಣ, ಮಳೆ-ಬೆಳೆ ಚೆನ್ನಾಗಿ ಬಂದು ಸಮೃದ್ಧಿ ಫಲಿಸಲಿ ಎಂದು ಶಿವಯೋಗ ಸಮಾಧಿ ಯೋಗ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಕಠಿಣ ವ್ರತಕೈಗೊಂಡ ನಂತರ ಗ್ರಾಮದಲ್ಲಿ ಮಳೆ ಆಗಿದ್ದು, ಭಕ್ತರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು

ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಇಂತಹ ಅಪರೂಪದ ಯೋಗ ಸಾಧನೆ ಕುತೂಹಲಕ್ಕೆ ಕಾರಣವಾಗಿದೆ. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ 33 ದಿನಗಳ ಶಿವಯೋಗ ಸಮಾಧಿ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ. 33 ದಿನಗಳ ನಂತರ ಸ್ವಾಮೀಜಿ ಹೊರಗಡೆ ಬಂದು, ದರ್ಶನ ನೀಡಲಿದ್ದಾರೆ. ಸ್ವಾಮೀಜಿಗಳ ಈ ನಡೆ ಭಕ್ತರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸತೀಶ್ ಜಾರಕಿಹೊಳಿ ಹೊಸ ಬಾಂಬ್: ‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ – Kannada News

ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿImage Credit source: Tv9 kannada

ಬೆಂಗಳೂರು, ಜೂ.5: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ರಾಜೀನಾಮೆ ಗದ್ದಲದ ನಡುವೆ, ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರು ಅತ್ಯಂತ ಸಮಚಿತ್ತದ ಹಾಗೂ ವಾಸ್ತವಿಕ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ಅಸಮಾಧಾನದ ಬೆಂಕಿಯನ್ನು ನಂದಿಸುವ ಸಂಪೂರ್ಣ ಸಾಮರ್ಥ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಸಚಿವ ಸ್ಥಾನದ ರಾಜೀನಾಮೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅತ್ಯಂತ ಹಗುರವಾಗಿ ಉತ್ತರಿಸಿದ ಜಾರಕಿಹೊಳಿ, “ಅವರು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ. ಆದರೆ ಈ ಇಡೀ ಪರಿಸ್ಥಿತಿಯನ್ನು ಸಮಾಧಾನಪಡಿಸುವ ಹಾಗೂ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಸಾಮರ್ಥ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತು ಮಾತನಾಡಿದ ಅವರು, “ರಾಜಕಾರಣದಲ್ಲಿ ಪ್ರಮೋಷನ್ ಅಥವಾ ಉನ್ನತ ಹುದ್ದೆಗಳ ಬಯಕೆ ಇರುವುದು ತೀರಾ ಸಾಮಾನ್ಯ. ಆದರೆ ಎಲ್ಲರಿಗೂ ಉನ್ನತ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ, ಕೆಲವರಿಗೆ ಮಾತ್ರ ಅದು ಲಭ್ಯವಾಗುತ್ತದೆ. ಈ ಎಲ್ಲ ಗೊಂದಲಗಳನ್ನು ಸಿಎಂ ಬಗೆಹರಿಸಲಿದ್ದಾರೆ, ಅಲ್ಲಿಯವರೆಗೆ ಒಂದು-ಎರಡು ದಿನ ಕಾಯೋಣ” ಎಂದು ಹೇಳಿದ್ದಾರೆ.

ನಿಮಗೆ ಡಿಸಿಎಂ (DCM) ಸ್ಥಾನ ಅಥವಾ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆಸೆ ಇತ್ತು, ಆದರೆ ಏನು ಮಾಡಲಿಕ್ಕೆ ಆಗಲ್ಲ. ಸಿಕ್ಕಿದ್ದಕ್ಕೆ ಸಮಾಧಾನ, ತೃಪ್ತಿ ಪಡಬೇಕು ಅಷ್ಟೇ” ಎಂದು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳಿದ್ದಾರೆ. ಅಲ್ಲದೆ, ತಾವು ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ ಸಚಿವರು, “ರಾಜೀನಾಮೆ ಯಾಕೆ ಕೊಡಬೇಕು? ಅದರ ಅವಶ್ಯಕತೆ ಇಲ್ಲ. ನಮಗೆ ಯಾವ ಖಾತೆ ಇದೆಯೋ, ಅದನ್ನೇ ಮುಂದುವರಿಸಿದ್ದಾರೆ, ನಾನು ಕೆಲಸ ಮಾಡುತ್ತೇನೆ” ಎಂದರು.

ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು

ಸಚಿವರುಗಳಲ್ಲಿ ಮೊದಲು ನೊಂದವರು ನೀವು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ನೋವೂ ಇಲ್ಲ, ಸಂತೋಷವೂ ಇಲ್ಲ, ದುಃಖವೂ ಇಲ್ಲ ಎಂದು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಹೈಡ್ರಾಮಾದ ನಡುವೆ ತಾವು ಸಂಪೂರ್ಣ ಸಮಚಿತ್ತದಿಂದ ಇರುವುದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ. ಜಾರಕಿಹೊಳಿ ಅವರ ಈ ನಡೆ ಸಂಪುಟದ ಇತರ ರೆಬೆಲ್ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದಂತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mango Pachcha Review: ಆ ಕಾಲದ ಮೈಸೂರಿನ ಮಾಫಿಯಾ ತೋರಿಸುವ ‘ಮ್ಯಾಂಗೋ ಪಚ್ಚ’ – Kannada News

ಮ್ಯಾಂಗೋ ಪಚ್ಚ

A

  • Time – 95 Minutes
  • Released – June 05, 2026
  • Language – Kannada
  • Genre – Crime, Drama

Cast – ಸಂಚಿತ್ ಸಂಜೀವ್, ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್, ಉಗ್ರಂ ಮಂಜು ಮುಂತಾದವರು.

Director – ವಿವೇಕ

ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಂಚಿತ್ ಸಂಜೀವ್ (Sanchith Sanjeev) ಎಂಟ್ರಿ ಆಗಿದೆ. ಕಿಚ್ಚ ಸುದೀಪ್ ಅವರ ಕುಟುಂಬದ ಹುಡುಗ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ಸಂಚಿತ್ ಮೇಲೆ ವಿಶೇಷ ನಿರೀಕ್ಷೆ ಇತ್ತು. ‘ಮ್ಯಾಂಗೋ ಪಚ್ಚ’ (Mango Pachcha) ಸಿನಿಮಾ ಮೂಲಕ ಅವರು ಹೀರೋ ಆಗಿದ್ದಾರೆ. ಹೀರೋ ಹೊಸಬನಾದರೂ ಈ ಸಿನಿಮಾದಲ್ಲಿ ತೋರಿಸಿರುವ ಕಥೆ ಹಳೇ ಮೈಸೂರಿನದ್ದು. ಆ ಕಾಲದ ಮೈಸೂರಿನ ಮಾಫಿಯಾ ಯಾವ ರೀತಿ ಇತ್ತು ಎಂಬುದರ ಚಿತ್ರಣ ಈ ಸಿನಿಮಾದಲ್ಲಿದೆ. ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮತ್ತು ‘ಕೆಆರ್​ಜಿ ಸ್ಟುಡಿಯೋಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ.

ಸಂಚಿತ್ ಸಂಜೀವ್ ಅವರು ಪಕ್ಕಾ ಮಾಸ್ ಸಿನಿಮಾಗೆ ಸೂಕ್ತ ಆಗುವಂತಹ ನಟ. ಅವರಿಗೆ ತಕ್ಕಂತೆಯೇ ‘ಮ್ಯಾಂಗೋ ಪಚ್ಚ’ ಸಿನಿಮಾದ ಕಥೆ ಇದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಸಿದ್ಧವಾಗಿದೆ. 2000ನೇ ಇಸವಿ ಸಂದರ್ಭದಲ್ಲಿ ಮೈಸೂರಿನಲ್ಲಿ ಹಬ್ಬಿದ್ದ ಮಾದಕ ವಸ್ತು ಜಾಲದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ನಿರ್ದೇಶಕ ವಿವೇಕ ಅವರು ಕಟ್ಟಿಕೊಟ್ಟಿರುವ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಒಂದು ಡಿಫರೆಂಟ್ ಫ್ಲೇವರ್ ಇದೆ. ಕಥೆಯಲ್ಲಿ ಅತಿ ಸಣ್ಣ ವಿವರಗಳ ಕಡೆಗೆ ಅವರು ಗಮನ ಹರಿಸಿಲ್ಲ. ಬದಲಿಗೆ, ಎಲ್ಲವನ್ನೂ ಮೇಲ್ಮಟ್ಟದಲ್ಲೇ ತೋರಿಸುತ್ತಾ ಸಾಗಿದ್ದಾರೆ. ಇದರಿಂದಾಗಿ ಸಿನಿಮಾದ ಅವಧಿ ಕೇವಲ 1 ಗಂಟೆ 35 ನಿಮಿಷ ಇದೆ. ಅಷ್ಟು ಸಮಯದ ಒಳಗೆ ಅವರು ಮ್ಯಾಂಗೋ ಪಚ್ಚನ ಕಹಾನಿಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

ಹೊಸ ಹೀರೋ ಸಂಚಿತ್ ಅವರ ಪ್ರತಿಭೆ ಏನು ಎಂಬುದನ್ನು ಪ್ರೇಕ್ಷಕರಿಗೆ ಪರಿಚಯಿಸಲು ಅನುಕೂಲ ಆಗುವಂತಹ ಹಲವು ದೃಶ್ಯಗಳು ಈ ಸಿನಿಮಾದಲ್ಲಿವೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ತಾಳ್ಮೆ ಮತ್ತು ಆವೇಗ ಎರಡೂ ಇದೆ. ಅದೇ ರೀತಿ ಇತಿ-ಮಿತಿಗಳು ಕೂಡ ಇವೆ. ಎಲ್ಲವನ್ನೂ ಸಂಚಿತ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ.

ಲವರ್ ಬಾಯ್ ಆಗಿಯೂ ಸಂಚಿತ್ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಆದರೆ ಅವರಿಬ್ಬರ ಪ್ರೇಮಕಥೆಗೆ ಇನ್ನಷ್ಟು ಒತ್ತು ಸಿಗಬೇಕಿತ್ತು ಅನಿಸುತ್ತದೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಅವರು ಅಭಿನಯಿಸಿದ್ದಾರೆ. ಅಲ್ಲಿಯೂ ಕೂಡ ಸೆಂಟಿಮೆಂಟ್ ಮತ್ತಷ್ಟು ಹೆಚ್ಚಿದ್ದರೆ ಚೆನ್ನಾಗಿ ಇರುತ್ತಿತ್ತು. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಪ್ರಶಾಂತ್ ಹಿರೇಮಠ್, ಮ್ಯಾಕ್ಸ್ ಮಂಜು, ಹಂಸಾ, ಮಯೂರ್ ಪಟೇಲ್, ಜೈ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ. ಪ್ರಶಾಂತ್ ಹಿರೇಮಠ್ ಅವರಿಗೆ ಹೆಚ್ಚು ಚಪ್ಪಾಳೆ ಸಲ್ಲಬೇಕು.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್

2000ನೇ ಇಸವಿಯ ಆಸುಪಾಸಿನಲ್ಲಿದ್ದ ಮೈಸೂರನ್ನು ತೋರಿಸುವುದು ಅಷ್ಟು ಸುಲಭವಲ್ಲ. ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಅವರ ತಂಡ ಆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ. ತಾಂತ್ರಿಕವಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ.

ಈ ಚಿತ್ರದಲ್ಲಿ ತೀರಾ ಹೊಸತನವನ್ನು ನಿರೀಕ್ಷಿಸುವಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಮಾಫಿಯಾದೊಳಗೆ ಎಂಟ್ರಿ ನೀಡಿ, ತನ್ನದೇ ಸಾಮ್ರಾಜ್ಯ ಕಟ್ಟುವ ಕಥೆ ಇಲ್ಲಿದೆ. ಆದರೆ ಇದು ಮೈಸೂರಿನ ನೆಲದ ಕಥೆ ಎಂಬ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಒಂದಷ್ಟು ವಿಶೇಷತೆಗಳಿವೆ. ಚಿತ್ರತಂಡ ಗೌಪ್ಯವಾಗಿ ಇಟ್ಟಿದ್ದ ಒಂದು ಸ್ಪೆಷಲ್ ಪಾತ್ರದ ಎಂಟ್ರಿ ಕೂಡ ಕೊನೆಯಲ್ಲಿ ಆಗುತ್ತದೆ. ಮ್ಯಾಂಗೋ ಪಚ್ಚನ ಕಥೆ ಇನ್ನೂ ಮುಂದುವರಿಯುತ್ತದೆ ಎಂಬುದರ ಸುಳಿವು ಅಲ್ಲಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?

ಬೆಂಗಳೂರು, (ಜೂನ್ 05): ಕರ್ನಾಟಕ ಸಚಿವ ಸಂಪುಟ (Karnataka Cabinet)  ರಚನೆಯಾಗುವಾಗ ಅಥವಾ ಖಾತೆ ಹಂಚಿಕೆಯಾಗುವಾಗ ಸದಾ ಮುಂಚೂಣಿಯಲ್ಲಿ ಕೇಳಿಬರುವ ಹೆಸರೇ “ಬೆಂಗಳೂರು ನಗರಾಭಿವೃದ್ಧಿ ಇಲಾಖೆ” (Bengaluru Development portfolio). ಪ್ರಸ್ತುತ ಡಿಕೆ ಶಿವಕುಮಾರ್ ಸಂಪುಟದಲ್ಲೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದೀಗ ಹಿರಿಯ ಶಾಸಕ ರಾಜೀನಾಮೆ ಹಂತಕ್ಕೆ ಹೋಗಿದೆ. ಹೌದು..ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ಕೇವಲ ಮೂರು ದಿನ ಆಗಿದೆ ಅಷ್ಟೇ. ಆಗಲೇ ಸಚಿವರ ಖಾತೆಗಳ ಕ್ಯಾತೆ ಶುರುವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಕೇವಲ ರಾಜ್ಯ ರಾಜಧಾನಿ ಮಾತ್ರವಲ್ಲ, ಇದು ಜಾಗತಿಕ ಮಟ್ಟದ ಐಟಿ ಹಬ್ ಆಗಿದ್ದು, ಅಧಿಕಾರದ ಅಕ್ಷಯಪಾತ್ರೆ. ಒಂದು ರೀತಿ ಬಂಗಾರದ ಖನಿಜ ಎಂದೇ ಹೇಳಬಹುದು.

ಬೆಂಗಳೂರು ನಗರವು ಇಡೀ ಕರ್ನಾಟಕಕ್ಕೆ ಅತಿ ಹೆಚ್ಚು ರಾಜಸ್ವ (Revenue) ತಂದುಕೊಡುವ ಆರ್ಥಿಕ ಎಂಜಿನ್ ಆಗಿದೆ.ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ “ಬ್ರ್ಯಾಂಡ್ ಬೆಂಗಳೂರು” ಇಮೇಜ್ ಮೇಲೆ ಪ್ರಭಾವ ಬೀರುವುದರಿಂದ, ಈ ಖಾತೆಯನ್ನು ನಿಭಾಯಿಸುವ ನಾಯಕರಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಮುಖ್ಯಮಂತ್ರಿಯ ನಂತರದ ಅತ್ಯುನ್ನತ ಸ್ಥಾನಮಾನ ಸಿಗುತ್ತದೆ. ಹೀಗಾಗಿ ಈ ಖಾತೆಗೆ ಹೆಚ್ಚಾಗಿ ಬೇಡಿಕೆ ಇರುತ್ತೆ.

ಇದನ್ನೂ ನೋಡಿ: Ramalinga Reddy Resigns: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

ರಾಜಕೀಯ ಮತ್ತು ಆರ್ಥಿಕ ಶಕ್ತಿ ಕೇಂದ್ರ

ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಲ್ಲ, ಅದು ಇಡೀ ರಾಜ್ಯದ ರಾಜಕೀಯ ಮತ್ತು ಆರ್ಥಿಕತೆಯ ಶಕ್ತಿ ಕೇಂದ್ರವಾಗಿದೆ. ಇಡೀ ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಬರುವ ಆದಾಯವೇ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಸರೆ. ಇಂತಹ ಜಾಗತಿಕ ಮಟ್ಟದ ನಗರದ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ಒಬ್ಬ ರಾಜಕಾರಣಿಗೆ ಅತ್ಯುನ್ನತ ರಾಜಕೀಯ ಗೌರವ ಮತ್ತು ಶಕ್ತಿಯನ್ನು ತಂದುಕೊಡುತ್ತದೆ. ಹೀಗಾಗಿಯೇ ಈ ಇಲಾಖೆಗೆ ಇಷ್ಟೊಂದು ಮಹತ್ವ ಇದೆ.

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಬಜೆಟ್ ಗಾತ್ರ ಸಾಮಾನ್ಯವಾದುದಲ್ಲ. ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮತ್ತು ಅಭಿವೃದ್ಧಿ ಯೋಜನೆಗಳು ಈ ಇಲಾಖೆಯ ಮೂಲಕವೇ ಹಾದುಹೋಗುತ್ತವೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆಗಳು, ಸುರಂಗ ಮಾರ್ಗಗಳು (ಟನಲ್ ರೋಡ್ಸ್), ರಾಜಕಾಲುವೆ ಹಾಗೂ ಕೆರೆಗಳ ಅಭಿವೃದ್ಧಿ, ಮತ್ತು ನಗರದ ಟ್ರಾಫಿಕ್ ನಿರ್ವಹಣೆಯಂತಹ ಬಿಲಿಯನ್ ಡಾಲರ್ ಯೋಜನೆಗಳ ಮೇಲ್ವಿಚಾರಣೆ ಮಾಡುವ ನೇರ ಅವಕಾಶ ಈ ಖಾತೆಯ ಸಚಿವರಿಗೆ ಇರುತ್ತೆ.

ಬೆಂಗಳೂರಿನ ಭವಿಷ್ಯವನ್ನು ರೂಪಿಸುವ ಮತ್ತು ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ಪ್ರಮುಖ ಸರ್ಕಾರಿ ಸಂಸ್ಥೆಗಳು ಈ ಇಲಾಖೆಯ ಅಡಿಯಲ್ಲೇ ಕಾರ್ಯನಿರ್ವಹಿಸುತ್ತವೆ. BDA (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), BWSSB (ಬೆಂಗಳೂರು ಜಲಮಂಡಳಿ), GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ನಿರ್ಧಾರಗಳು, ನೇಮಕಾತಿಗಳು ಮತ್ತು ಒಟ್ಟಾರೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತೆ.

ಬೆಂಗಳೂರಿನ ಮೂಲಸೌಕರ್ಯ ಹೆಚ್ಚುಸವು ದೃಷ್ಟಿಯಿಂದ ವರ್ಷದಿಂದ ವರ್ಷಕ್ಕೆ ರಾಜ್ಯ ಸರ್ಕಾರ ಅನುದಾನವನ್ನು ಹೆಚ್ಚಿಸುತ್ತಲೇ ಇದೆ. ಜತೆಗೆ ಬೆಳೆಯುತ್ತುರುವ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಮವೂ ನಾಗಾಲೋಟದಲ್ಲಿ ಓಡುತ್ತಿದೆ. ಇಲ್ಲಿ ಹಣ ಹೂಡಿದರೆ ಚಿನ್ನದ ಮಳೆ ಗ್ಯಾರಂಟಿ ಎಂದಯ ದೇಶದ ಬಹಳಷ್ಟು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಓಡೋಡಿ ಬರುತ್ತಾರೆ.

ಇದೇ ಖಾತೆ ಬೇಕೆನ್ನಲು ಪ್ರಮುಖ ಕಾರಣಗಳು

  • ಸರ್ಕಾರದ ವಿಶೇಷ ಅನುದಾನ: ಕರ್ನಾಟಕ ಬಜೆಟ್ ಪ್ರಕಾರ, ಬೆಂಗಳೂರಿನ ಅಭಿವೃದ್ಧಿಗಾಗಿ ವಾರ್ಷಿಕವಾಗಿ 7,000 ಕೋಟಿಗೂ ಹೆಚ್ಚಿನ ವಿಶೇಷ ಅನುದಾನವನ್ನು ನೀಡಲಾಗುತ್ತದೆ.
  • ಈ ಇಲಾಖೆಯ ಸಚಿವರು ನಗರದ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಪ್ರಭಾವಶಾಲಿ ಸ್ವಾಯತ್ತ ಸಂಸ್ಥೆಗಳ ಮೇಲೆ ನೇರ ನಿಯಂತ್ರಣ ಹೊಂದಿರುತ್ತಾರೆ.
  • ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು 5 ಪಾಲಿಕೆಗಳು: ಇಡೀ ನಗರದ ಆಡಳಿತ ಮತ್ತು ನಾಗರಿಕ ಸೌಲಭ್ಯಗಳ ಮೇಲ್ವಿಚಾರಣೆ.
  • ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA): ನಗರದ ಭೂ ನಿಯಂತ್ರಣ, ಹೊಸ ಲೇಔಟ್‌ಗಳ ರಚನೆ ಮತ್ತು ವಾಣಿಜ್ಯ ಯೋಜನೆಗಳ ಅನುಮೋದನೆ.
  • ಬಿಡಬ್ಲ್ಯೂಎಸ್ಎಸ್‌ಬಿ (BWSSB): ಕೋಟ್ಯಂತರ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿ.

2026ರಿಂದ 2019ರವರೆಗೆ ವಾರ್ಷಿಕ ಸರಾಸರಿ 5 ಸಾವಿರ ಕೋಟಿಯಿಂದ 7.300 ಕೋಟಿಯಷ್ಟು ಅನುದಾನವನ್ನು ಬೆಂಗಳೂರು ಅಭಿವೃದ್ಧಿಗೆ ನೀಡಲಾಗಿದೆ. ಟೆಂಡರ್ ಶೂರ್ ರಸ್ತೆಗಳು, ನಮ್ಮ ಮೆಟ್ರೋ ಎರಡನೇ ಹಂತ ಸೇರಿದಂತೆ ಹಲವು ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ.

2019ರಿಂದ 2021ರವರೆಗೆ ಮುಖ್ಯಮಂತ್ರಿ ಅವರ ನವ ನಗರೋತ್ಥಾನ ಯೋಜನೆಯಡಿಯಲ್ಲಿ ನಗರ ಸಮಗ್ರ ಅಭಿವೃದ್ಧಿಗೆ ಸುಮಾರು 8300 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.

ಇನ್ನು 2022ರಿಂದ-23ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳ ನವೀಕರಣಕ್ಕೆ ಸೇರಿದಂತೆ ಇತರೆ ಕೆಲಸಗಳಿಗೆ 8 409 ಕೋಟಿ ರೂ ಹಂಚಿಕೆ ಮಾಡಲಾಗಿತ್ತು.

2024-25ರಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸುರಂಗ ರಸ್ತೆಗಳು ಮತ್ತು ವೈಟ್ ಟಾಪಿಂಗ್ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇನ್ನು 2026-27ನೇ ಸಾಲಿನಲ್ಲಿ ಬೆಂಗಳೂರಿಗೆ 7 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.

ಬೆಂಗಳೂರು ಶಾಸಕರಿಗೆ ಇದೇ ಖಾತೆ ಅಚ್ಚುಮೆಚ್ಚು ಏಕೆ?

ಇನ್ನು ಮುಖ್ಯವಾಗಿ ಗಮನಿಸಿದಬೇಕಾದ ಅಂಶ ಅಂದ್ರೆ, ಈ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಬೆಂಗಳೂರು ಲೋಕಲ್ ಶಾಸಕರ ಕಣ್ಣಿರುತ್ತೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಶಾಸಕರು ಅಷ್ಟಾಗಿ ಈ ಖಾತೆ ಪಡೆಯಲು ಇಷ್ಟಪಡಲ್ಲ. ಯಾಕಾಂದ್ರೆ  ಈ ಖಾತೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಹೀಗಾಗಿ ಬೆಂಗಳೂರು ಶಾಸಕರೇ ಹೆಚ್ಚಾಗಿ ಇದೇ ಖಾತೆ ಬೇಕೆಂದು ಬೇಡಿಕೆ ಇಡುತ್ತಾರೆ . ಈ ಖಾತೆ ಒಂದು ರೀತಿ ಲೋಕಲ್ ಇದ್ದಂತೆ.  ರಾಜ್ಯಾದ್ಯಂತ ಸುತ್ತಾಟ ಇರುವುದಿಲ್ಲ. ಕ್ಷೇತ್ರದಲ್ಲೇ ಇದ್ದುಕೊಂಡು ಇಲಾಖೆಯನ್ನು ನಿರ್ವಹಿಸಬಹುದು. ಇದರೊಂದಿಗೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ? – Kannada News

ನವದೆಹಲಿ, ಜೂನ್ 5: ಭಾರತದಲ್ಲಿರುವ ಎಟಿಎಂಗಳಲ್ಲಿ ಅಗತ್ಯ ಕ್ಯಾಷ್ ಪೂರೈಕೆ (Cash supply) ಆಗುತ್ತಿಲ್ಲ ಎನ್ನುವಂತಹ ವರದಿಯೊಂದು ಬಂದಿದೆ. ಎಟಿಎಂ ಯಂತ್ರಗಳಲ್ಲಿ ಕ್ಯಾಷ್ ಕೊರತೆ ಎದುರಾಗಿದೆ. ಈ ವಿಚಾರದ ಬಗ್ಗೆ ಎಟಿಎಂ ಉದ್ಯಮದ ಮಹಾಒಕ್ಕೂಟವಾದ ಸಿಎಟಿಎಂಐ (CATMi) ಭಾರತೀಯ ಬ್ಯಾಂಕುಗಳ ಸಂಸ್ಥೆಯ (ಐಬಿಎ) ಗಮನಕ್ಕೆ ತಂದಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ಭಾರತದ ಆರ್ಥಿಕತೆಯೊಳಗೆ ಅತಿಹೆಚ್ಚು ಕ್ಯಾಷ್ ಹರಿವು ಇರುವ ಸಂದರ್ಭದಲ್ಲೇ ಎಟಿಎಂಗಳಲ್ಲಿ ಕ್ಯಾಷ್ ಕ್ರಂಚ್ ಪರಿಸ್ಥಿತಿ ಉದ್ಭವವಾಗಿರುವುದು ಅಚ್ಚರಿಯ ಸಂಗತಿ.

ಈ ವರದಿ ಪ್ರಕಾರ ಭಾರತದಾದ್ಯಂತ ಎಟಿಎಂಗಳಲ್ಲಿ 94,000 ಕೋಟಿ ರೂ ಮೊತ್ತದ ಕ್ಯಾಷ್ ಇರಬೇಕಿತ್ತು. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಲ್ಲಾ ಎಟಿಎಂಗಳಲ್ಲಿದ್ದ ನಗದು ಹಣ ಕ್ರಮವಾಗಿ 54,000 ಕೋಟಿ ರೂ ಮತ್ತು 61,000 ಕೋಟಿ ರೂ ಎನ್ನಲಾಗಿದೆ. ಅಂದರೆ, ಎಟಿಎಂಗಳಲ್ಲಿ ಸರಾಸರಿಯಾಗಿ ಕ್ಯಾಷ್ ಭರ್ತಿಯಾಗಿರುವುದು ಶೇ 60ರ ಆಸುಪಾಸು ಮಾತ್ರ.

ಕರ್ನಾಟಕದಲ್ಲಿ ಅತಿಹೆಚ್ಚು ಕೊರತೆ…

ದೇಶಾದ್ಯಂತ ಸರಾಸರಿಯಾಗಿ ಎಟಿಎಂಗಳಲ್ಲಿ ಶೇ 60ರಷ್ಟು ಕ್ಯಾಷ್ ಇದ್ದರೆ, ಕರ್ನಾಟಕದಲ್ಲಿ ಇದು ಶೇ. 36 ಮಾತ್ರವೇ. ಅಂದರೆ, ಕರ್ನಾಟಕದಲ್ಲಿರುವ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಅತಿ ಹೆಚ್ಚು ಇದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಎಟಿಎಂಗಳಲ್ಲಿ ಇರುವ ಕ್ಯಾಷ್ ಶೇ. 39, ಶೇ. 41ರಷ್ಟು ಮಾತ್ರವೇ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಆರ್ಥಿಕತೆಯಲ್ಲಿ ಭಾರೀ ಪ್ರಮಾಣದಲ್ಲಿ ನಗದು ಹಣ ಇದ್ದರೂ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಯಾಕೆ ಕಾಡುತ್ತಿದೆ? ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಎಟಿಎಂ ಇಂಟರ್​ಚೇಂಜ್ ಶುಲ್ಕ ಮೊದಲಾದ ಸಮಸ್ಯೆಗಳು ಒಳಗೊಂಡಿವೆ.

ಎಟಿಎಂ ಇಂಟರ್​ಚೇಂಜ್ ಫೀ ಎಂಬುದು ಒಂದು ಬ್ಯಾಂಕು ತನ್ನ ಗ್ರಾಹಕ ಬೇರೊಂದು ಬ್ಯಾಂಕಿನ ಎಟಿಎಂ ಬಳಸಿದಾಗ ಆ ಬ್ಯಾಂಕಿಗೆ ತೆರಬೇಕಾದ ಶುಲ್ಕ. ಎಟಿಎಂನಲ್ಲಿ ಕ್ಯಾಷ್ ತುಂಬಿಸುವುದು, ಭದ್ರತೆ ಒದಗಿಸುವುದು ಇತ್ಯಾದಿ ಕೆಲಸಗಳಿಗೆ ಸಾಕಷ್ಟು ವ್ಯಯವಾಗುತ್ತದೆ. ಇದನ್ನು ಭರಿಸುವಷ್ಟು ಪ್ರಮಾಣದ ಇಂಟರ್​ಚೇಂಜ್ ಫೀ ಇಲ್ಲ ಎನ್ನುವುದು ಉದ್ಯಮದ ಅಳಲು. ಸರ್ಕಾರ ಇತ್ತೀಚೆಗಷ್ಟೇ ಈ ಇಂಟರ್​ಚೇಂಜ್ ಫೀ ಅನ್ನು 17 ರೂನಿಂದ 19 ರೂಗೆ ಏರಿಸಿದೆ. ಆದರೆ, ಇದು ಸಾಕಾಗುವುದಿಲ್ಲ ಎಂದು ಈ ಉದ್ಯಮದವರು ಹೇಳುತ್ತಿದ್ದಾರೆ.

ಎಟಿಎಂ ಬಳಕೆಯಲ್ಲೂ ಇಳಿಮುಖ

ಭಾರತದಾದ್ಯಂತ ಎಟಿಎಂ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. 2025ರ ಮೇ ತಿಂಗಳಲ್ಲಿ ಹತ್ತಿರಹತ್ತಿರ 50 ಕೋಟಿ ಸಂಖ್ಯೆಯಷ್ಟು ಎಟಿಎಂ ಟ್ರಾನ್ಸಾಕ್ಷನ್ಸ್ ಆಗಿದ್ದವು. ಈ ವರ್ಷದ ಮೇ ತಿಂಗಳಲ್ಲಿ ಅದು 44.6 ಕೋಟಿಗೆ ಇಳಿಕೆ ಆಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ಈ ಇಳಿಕೆಗೆ ವಿವಿಧ ಕಾರಣಗಳಿವೆ. ಎಟಿಎಂನಿಂದ ಫ್ರೀ ಲಿಮಿಟ್ ದಾಟಿ ಮಾಡಲಾಗುವ ಟ್ರಾನ್ಸಾಕ್ಷನ್​ಗೆ 23 ರೂ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರು ಎಟಿಎಂನಿಂದ ದೂರವಾಗುತ್ತಿರಬಹುದು.

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ದೊಡ್ಡ ಹೊಡೆತ

ಒಂದು ಅಂದಾಜು ಪ್ರಕಾರ, ಎಟಿಎಂಗಳನ್ನು ಈಗ ಅತಿಹೆಚ್ಚು ಬಳಸುವುದು ಡಿಬಿಟಿ ಸ್ಕೀಮ್​ನ ಫಲಾನುಭವಿಗಳು. ಪಿಎಂ ಕಿಸಾನ್ ಯೋಜನೆಯಂತಹ ಸ್ಕೀಮ್​ಗಳಲ್ಲಿ ಸರ್ಕಾರವು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇವರು ಎಟಿಎಂ ಮೂಲಕ ಹಣ ವಿತ್​ಡ್ರಾ ಮಾಡುತ್ತಾರೆ. ಈಗ ಎಟಿಎಂಗಳಲ್ಲಿ ಉಂಟಾಗಿರುವ ಕ್ಯಾಷ್ ಕೊರತೆಯಿಂದ ಅತಿಹೆಚ್ಚು ಬಾಧಿತವಾಗುವುದು ಈ ವರ್ಗದ ಜನರೇ. ಅದರಲ್ಲೂ ಕರ್ನಾಟಕದಲ್ಲಿರುವ ಫಲಾನುಭವಿಗಳು ಈ ಸಂಕಷ್ಟ ಎದುರಿಸುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Fri, 5 June 26

Source link