All posts by nagaraj11081993

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ – Kannada News

ನಮ್ಮಲ್ಲಿ ಯಾರನ್ನಾದ್ರೂ ಕೇಳಿದ್ರೆ ಕೆಲಸಕ್ಕೆ (Office) ಹೋಗಿ ಬಂದು ಸುಸ್ತು ಆಗುತ್ತದೆ. ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಟೈಮ್ ಆಗಿ ಬಿಡುತ್ತದೆ. ಮನೆಗೆ ಬಂದು ಮಲಗಿದ್ರೆ ಸಾಕು ಎಂದು ಹೇಳುವವರೇ ಹೆಚ್ಚು. ಇದೆಲ್ಲದರ ನಡುವೆ ಈ ಯುವಕನ ಬಿಡುವಿಲ್ಲದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಎನರ್ಜಿಟಿಕ್ ಯುವಕನ ಹೆಸರು ದೀಪಕ್ ಪಾಂಡೆ (Deepak Pandey). ಬೆಳಗ್ಗೆ 9 ರಿಂದ 5 ಗಂಟೆ ತನಕ ಆಫೀಸ್ ಕೆಲಸ. ಸಂಜೆ ಆಫೀಸ್‌ ಮುಗಿಸಿ ಬಂದು ರಾತ್ರಿ 11 ಗಂಟೆವರೆಗೆ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಾನೆ. ಅದರ ಪಿಹೆಚ್‌ಡಿ ಓದು ಹಾಗೂ ವಿಡಿಯೋ ಎಡಿಟಿಂಗ್ ಹೀಗೆ ಎಲ್ಲಾ ಕೆಲಸವನ್ನು ಯಾವುದೇ ಒತ್ತಡವಿಲ್ಲದೇ ನಿಭಾಯಿಸಿಕೊಂಡು ಹೋಗುವುದನ್ನು ಕಂಡು ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ. ಸದಾ ಆಕ್ಟಿವ್ ಆಗಿರುವ ಈ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಕ್ ಪಾಂಡೆ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಮ್‌ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ. ನಾನು ಯಾಕೆ ಖುಷಿಯಾಗಿದ್ದೇನೆ ಗೊತ್ತಾ? ನನ್ನ ಜೀವನದಲ್ಲಿ ಮೊದಲ ಬಾರಿಗೆ, ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ನನಗೆ ತಿಳಿಯಿತು. ನಾಲ್ಕು ಜನ ಏನು ಅಂತಾರೋ ನನ್ನಿಂದ ಈ ಕೆಲಸ ಸಾಧ್ಯವಿಲ್ಲ ಅಥವಾ ಹೊಸದಾಗಿ ಏನಾದರೂ ಮಾಡಬೇಕೆಂದರೆ ನಾನು ಈಗ ಮಾಡುವ ಕೆಲಸ ಬಿಡಬೇಕು ಎಂಬ ಭಯವಿತ್ತು. ಈ ಭಯದಿಂದಲೇ ನನಗೆ ನನ್ನ ಸಾಮರ್ಥ್ಯದ ಅರಿವಿರಲಿಲ್ಲ. ನಾನು ನಿಧಾನವಾಗಿ ನನನ್ನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಮೊದಲಿಗೆ ಪಿಎಚ್‌ಡಿಗೆ ಸೇರಿಕೊಂಡೆ, ಆ ಬಳಿಕ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾದೆ. ತದನಂತರದಲ್ಲಿ ಕಂಟೆಂಟ್ ಕ್ರಿಯೇಷನ್‌ ನತ್ತ ಹೆಜ್ಜೆ ಹಾಕಿದೆ.. ಇಂದು ನಾನು ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಲ್ಲೆ ಎಂಬ ಧೈರ್ಯ ಹಾಗೂ ಆತ್ಮವಿಶ್ವಾಸವಿದೆ ಎಂದಿದ್ದಾನೆ.

ಇದೆಲ್ಲವನ್ನು ಓದಿದ ಮೇಲೆ ನಿಮಗೂ ಇದೆಲ್ಲವೂ ನನಗೇಕೆ ಸಾಧ್ಯವಿಲ್ಲ, ನಾನೇಕೆ ಮಾಡಬಾರದು ಎಂದು ಅನಿಸಬಹುದು. ನಿಮ್ಮಲ್ಲಿ ಸಾಮರ್ಥ್ಯವಿದೆ, ನಿಮಗೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕಾಗಿ ಕೆಲಸ ಮಾಡಿ. ನೀವು ಅಂದುಕೊಂಡದ್ದನ್ನು ಮಾಡಲು ಓದು ನಿಲ್ಲಿಸಬೇಡಿ, ಕೆಲಸ ಬಿಡಬೇಡಿ. ಒಮ್ಮಿಂದ ಒಮ್ಮೆ ಕಷ್ಟಗಳು ಬರುತ್ತದೆ. ಆದರೆ ಯಶಸ್ಸು ಸಿಕ್ಕಾಗ, ನಿಮ್ಮ ಸಾಮರ್ಥ್ಯದ ಅರಿವಾದಾಗ ನಿಮಗೆ ನಿಜಕ್ಕೂ ಖುಷಿ ಸಿಗುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಆಲ್ ದಿ ಬೆಸ್ಟ್, ನಿಮಗೆ ಒಳ್ಳೆದಾಗಲಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ಯುವಕ ಸ್ಫೂರ್ತಿ ಎಂದರೆ, ಮತ್ತೊಬ್ಬರು, ನೀವು ನಿಜಕ್ಕೂ ಗ್ರೇಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Thu, 4 June 26

Source link

ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ! – Kannada News

ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್​​ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ ಆಂತರಿಕ ಭಿನ್ನಮತ ಹಾಗೂ ಬಂಡಾಯವೇ ಜಮೀರ್‌ಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ದಾವಣಗೆರೆ ಉಪಚುನಾವಣೆ ಬಂಡಾಯ ಹಾಗೂ ಹೈಕಮಾಂಡ್ ಅಸಮಾಧಾನ

ಏಪ್ರಿಲ್ 9 ರಂದು ನಡೆದಿದ್ದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಬ್ಯಾಂಕ್ ಭಾರಿ ಪ್ರಮಾಣದಲ್ಲಿ ಒಡೆದುಹೋಗಿತ್ತು. ಸುಮಾರು 20 ಕ್ಕೂ ಹೆಚ್ಚು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದು ಅಲ್ಪಸಂಖ್ಯಾತರ ಮತಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಎಸ್‌ಡಿಪಿಐ (SDPI) ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ಬರೋಬ್ಬರಿ 19,000 ಮತಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ತಂದಿತ್ತು. ಈ ಇಡೀ ಅಸಮಾಧಾನ ಮತ್ತು ಬಂಡಾಯದ ಹಿಂದೆ ಜಮೀರ್ ಅಹ್ಮದ್ ಖಾನ್ ಅವರ ಕೈವಾಡವಿದೆ ಎಂದು ಹೈಕಮಾಂಡ್‌ಗೆ ದೂರು ಸಲ್ಲಿಕೆಯಾಗಿತ್ತು. ವಿಡಿಯೋ ಹಾಗೂ ಆಡಿಯೋವೊಂದು ವೈರಲ್ ಆಗಿದ್ದು, ಅದು ಎಐ (AI) ಸೃಷ್ಟಿತ ಎಂದು ಜಮೀರ್ ಸಮರ್ಥಿಸಿಕೊಂಡಿದ್ದರೂ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರನ್ನು ಕೈಬಿಡಲಾಗಿದ್ದು, ಈಗ ಜಮೀರ್ ಅವರ ಹೆಸರನ್ನು ಮೊದಲ ಪಟ್ಟಿಯಿಂದ ದೂರ ಇಡಲಾಗಿದೆ.

ಪ್ರಮಾಣವಚನ ಕಾರ್ಯಕ್ರಮದ ನಡುವೆಯೇ ಎದ್ದುಹೋಗಿದ್ದ ಜಮೀರ್

ಬುಧವಾರ (ಜೂನ್ 3) ಲೋಕಭವನದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಜಮೀರ್ ಅಹ್ಮದ್ ಖಾನ್ ಅರ್ಧದಲ್ಲೇ ಎದ್ದುಹೋಗಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ವಂದೇ ಮಾತರಂ’ ಪ್ರಸಾರವಾಗುತ್ತಿದ್ದ ವೇಳೆಯೇ ಜಮೀರ್ ಎದ್ದುಹೋಗಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೂ ಸಹ ಮುಂದಿನ ದಿನಗಳಲ್ಲಿ ಜಮೀರ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಮೀರ್ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್

ಜಮೀರ್ ಅಹ್ಮದ್ ಖಾನ್​ಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರ ಪರವಾಗಿ ಧ್ವನಿ ಎತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಸೇವೆ ಮತ್ತು ಶಕ್ತಿ ನಮ್ಮ ಪಕ್ಷಕ್ಕೆ ತೀರಾ ಅಗತ್ಯವಿದೆ. ಜಮೀರ್ ಅವರಿಗೆ ಸಚಿವ ಸ್ಥಾನ ತಪ್ಪಿಸಲೆಂದೇ ಕೊನೆ ಹಂತದಲ್ಲಿ ವ್ಯವಸ್ಥಿತ ರಾಜಕಾರಣ ಮಾಡಲಾಗಿದ್ದು, ಉದ್ದೇಶಪೂರ್ವಕವಾಗಿ ಆಡಿಯೋವನ್ನು ಹರಿಬಿಡಲಾಗಿದೆ. ಒಂದು ಆಡಿಯೋ ಬಿಟ್ಟರೇನು, ಎರಡು ಆಡಿಯೋ ಬಿಟ್ಟರೇನು? ಒಟ್ಟಿನಲ್ಲಿ ಅವರ ಸಚಿವ ಸ್ಥಾನ ತಪ್ಪಿಸಬೇಕೆಂಬ ವಿರೋಧಿಗಳ ಉದ್ದೇಶ ಸಫಲವಾಯಿತು ಎಂದು ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ಅಲ್ಲದೆ, ಇದಕ್ಕೂ ಹಳೆಯ ಸಿಡಿ ಫ್ಯಾಕ್ಟರಿ ಆರೋಪಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಜಮೀರ್ ಶಕ್ತಿಯನ್ನು ಪಕ್ಷ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Thu, 4 June 26

Source link

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ – Kannada News

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ವಿವಾದಕ್ಕೆ ಸಂಬಂಧಿಸಿದಂತೆ ದಶಕದ ಬಳಿಕ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರದ ಪ್ರಮುಖ ನಾಯಕರು ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಲಲಿತ್ ಮೋದಿ ಬಹಿರಂಗಪಡಿಸಿದ್ದಾರೆ.

ಸೋನಿಯಾ ಗಾಂಧಿ ಬೆಂಬಲ, ನಾಯಕರಿಂದ ಕರೆಗಳು

ಸಂದರ್ಶನವೊಂದರಲ್ಲಿ ಅಂದಿನ ಘಟನಾವಳಿಗಳನ್ನು ನೆನಪಿಸಿಕೊಂಡಿರುವ ಲಲಿತ್ ಮೋದಿ, ‘ಅಂದು ಶಶಿ ತರೂರ್ ಅವರಿಗೆ ಸೋನಿಯಾ ಗಾಂಧಿ ಅವರ ಸಂಪೂರ್ಣ ಬೆಂಬಲವಿತ್ತು. ಆ ದಿನಗಳಲ್ಲಿ ನನಗೆ ಅಹ್ಮದ್ ಪಟೇಲ್ ಮತ್ತು ಪ್ರಣಬ್ ಮುಖರ್ಜಿ ಅವರಿಂದ ಕರೆಗಳು ಬಂದಿದ್ದವು. ಅಹ್ಮದ್ ಪಟೇಲ್ ಬರುತ್ತಿದ್ದಾರೆ ಎಂದು ರಾಜೀವ್ ಶುಕ್ಲಾ ನನ್ನ ಬಳಿ ಬಂದು ಹೇಳುತ್ತಿದ್ದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಷೇರು ಹಂಚಿಕೆ ಬಗ್ಗೆ ಅನುಮಾನ

ಕೊಚ್ಚಿ ಫ್ರಾಂಚೈಸಿಯ ಆರ್ಥಿಕ ಒಪ್ಪಂದದ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ‘ಕೊಚ್ಚಿ ಕನ್ಸೋರ್ಟಿಯಂ ತಂಡಕ್ಕಾಗಿ 350 ಮಿಲಿಯನ್ ಡಾಲರ್ ನೀಡಲು ಷೇರುದಾರರು ಮುಂದಾಗಿದ್ದರು. ಅದು ಕೊಚ್ಚಿಯಂತಹ ತಂಡಕ್ಕೆ ಇಷ್ಟು ಹಣ ಕೊಡಲು ಯಾರಿಂದಾದರೂ ಸಾಧ್ಯವೇ? ತಂಡಕ್ಕೆ ಬರುವ ಒಟ್ಟು ಆದಾಯದ ಪ್ರತಿ ಡಾಲರ್‌ನಲ್ಲಿ ಶೇ. 15ರಷ್ಟು ಹಣ ಸುನಂದಾ ಪುಷ್ಕರ್ ಅವರಿಗೆ ಹೋಗುತ್ತಿತ್ತು. ಈ ಒಪ್ಪಂದ ಮುಂದೆ ಒಂದು ದಿನ ಕುಸಿಯುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು, ಎರಡು ವರ್ಷಗಳ ನಂತರ ಅದೇ ಆಯಿತು’ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕನ್ಸೋರ್ಟಿಯಂ ಸದಸ್ಯರ ಸಭೆಯ ವಿವರ ಹಂಚಿಕೊಂಡ ಲಲಿತ್ ಮೋದಿ, ‘ನಾನು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪ್ರತಿಯೊಬ್ಬ ಸದಸ್ಯರನ್ನು ಭೇಟಿಯಾಗಲು ಬಯಸಿದ್ದೆ. ಬೆಂಗಳೂರಿನಲ್ಲಿ ಸಭೆ ನಡೆದಾಗ ಸುನಂದಾ ಪುಷ್ಕರ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಷೇರುದಾರರು ಉಪಸ್ಥಿತರಿದ್ದರು. ಸುನಂದಾ ಪುಷ್ಕರ್ ಅವರಿಗೆ ಶೇ. 25ರಷ್ಟು ಉಚಿತ ಷೇರುಗಳನ್ನು ನೀಡಲಾಗುತ್ತಿತ್ತು. ಅಂದರೆ ಇಲ್ಲಿ ಶೇ. 75ರಷ್ಟು ಶೇರುದಾರರು ಶೇ. 100ರಷ್ಟು ವೆಚ್ಚವನ್ನು ಭರಿಸುತ್ತಿದ್ದರು. ಸುನಂದಾ ಯಾರೆಂದು ನಾನು ಪ್ರಶ್ನಿಸಿದೆ ಮತ್ತು ಯಾರೆಂದು ತಿಳಿಯುವವರೆಗೂ ಸಹಿ ಮಾಡುವುದಿಲ್ಲ ಎಂದೆ. ತಕ್ಷಣವೇ ನನಗೆ ಅಂದಿನ ವಿದೇಶಾಂಗ ಖಾತೆಯ ಸಹಾಯಕ ಸಚಿವ ಶಶಿ ತರೂರ್ ಅವರಿಂದ ಕರೆ ಬಂತು’ ಎಂದು ಹೇಳಿದ್ದಾರೆ.

‘ಲಲಿತ್, ಸುನಂದಾ ಪುಷ್ಕರ್ ಬಗ್ಗೆ ಪ್ರಶ್ನಿಸಬೇಡ. ಹಾಗೆ ಮಾಡಿದರೆ ನಾಳೆ ಬೆಳಗ್ಗೆ ನಿನ್ನ ಮೇಲೆ ಐಟಿ ದಾಳಿ ಮಾಡಿಸುತ್ತೇನೆ ಎಂದು ಶಶಿ ತರೂರ್ ಬೆದರಿಕೆ ಹಾಕಿದರು. ನೀನು ದೇಶದ ವಿದೇಶಾಂಗ ಸಚಿವನಾಗಿರಬಹುದು, ಆದರೆ ನನಗೆ ಹೀಗೆ ಹೇಳುವ ಧೈರ್ಯ ಮಾಡಬೇಡ ಎಂದು ಹೇಳಿ ನಾನು ಫೋನ್ ಕಟ್ ಮಾಡಿದೆ’ ಎಂದು ಲಲಿತ್ ಮೋದಿ ಅಂದಿನ ಸಂಭಾಷಣೆಯನ್ನು ಬಿಚ್ಚಿಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷರಿಂದ ಒತ್ತಡ

ಮಧ್ಯರಾತ್ರಿ ನಡೆದ ಹೈಡ್ರಾಮಾ ಬಗ್ಗೆ ಮಾತನಾಡುತ್ತಾ, ‘ಅದು ಮಧ್ಯರಾತ್ರಿ 2 ಗಂಟೆಯ ಸಮಯ. ಸಾಮಾನ್ಯವಾಗಿ ಯಾವುದೇ ವಿಷಯದಲ್ಲೂ ತಲೆಹಾಕದ ಅಂದಿನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಂದ ನನಗೆ ಕರೆ ಬಂತು. ಲಲಿತ್, ನೀನು ಇಂದೇ ಈ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವರು ಹೇಳಿದರು. ನಾನು ಸದಾ ಅಧಿಕಾರದಲ್ಲಿದ್ದವರ ಮಾತಿಗೆ ಗೌರವ ನೀಡುತ್ತಿದ್ದೆ. ಹೀಗಾಗಿ, ನಾನು ಒತ್ತಡದ ಮಣಿದು ಈ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇನೆ ಮತ್ತು ಅಧ್ಯಕ್ಷರೇ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂಬುದನ್ನು ಉಲ್ಲೇಖಿಸಿಯೇ ಸಹಿ ಮಾಡುವುದಾಗಿ ಅವರಿಗೆ ತಿಳಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ

‘ಮರುದಿನ ಬೆಳಗ್ಗೆ ಎದ್ದು ಪತ್ರಿಕೆಗಳನ್ನು ನೋಡಿದಾಗ, ಮುಖಪುಟದಲ್ಲಿ ‘ಸುನಂದಾ ಪುಷ್ಕರ್ ಮತ್ತು ಶಶಿ ತರೂರ್ ವಿವಾಹವಾಗಲಿದ್ದಾರೆ’ ಎಂಬ ಸುದ್ದಿ ಇತ್ತು. ನಾನು ಅಂದು ರಾತ್ರಿ ಯಾಕೆ ಸಹಿ ಹಾಕಬೇಕಾಗಿ ಬಂತು ಎಂಬುದು ನನಗೆ ಆಗ ಅರ್ಥವಾಯಿತು’ ಎಂದು ಲಲಿತ್ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು – Kannada News

ನವದೆಹಲಿ, ಜೂನ್ 4: ಭಾರತವು ಫ್ರಾನ್ಸ್‌ನಿಂದ ಸುಮಾರು ₹3.25 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ 114 ದಸ್ಸಾಲ್ಟ್ ರಫೇಲ್ (Dassault Rafale) ಯುದ್ಧವಿಮಾನಗಳನ್ನು ಖರೀದಿಸುವ ವಿನಂತಿಯನ್ನು ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ವಿನಂತಿ ಪತ್ರವನ್ನು (Letter of Request – LoR) ಶೀಘ್ರದಲ್ಲೇ ಕಳುಹಿಸಲಾಗುವುದು. ಇದು ಉಭಯ ದೇಶಗಳ ನಡುವೆ ಅಧಿಕೃತ ಮಾತುಕತೆಗೆ ನಾಂದಿ ಹಾಡಲಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಯುದ್ಧವಿಮಾನ ಖರೀದಿ ಒಪ್ಪಂದವಾಗುವ ಸಾಧ್ಯತೆಯಿದೆ. ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ (Air Chief Marshal) ಅಮರ್ ಪ್ರೀತ್ ಸಿಂಗ್ ಅವರು 3 ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವಾಗಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಕಳೆದ 60 ವರ್ಷಗಳಲ್ಲೇ ಭಾರತೀಯ ವಾಯುಸೇನೆ (IAF) ತನ್ನ ಅತ್ಯಂತ ಕನಿಷ್ಠ ಯುದ್ಧವಿಮಾನಗಳ ಸ್ಕ್ವಾಡ್ರನ್ ಬಲವನ್ನು ಎದುರಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ವಾಯುಸೇನೆಯಲ್ಲಿರುವ ಕೊರತೆ ನೀಗಿಸುವ ಯತ್ನ

1962 ರ ಚೀನಾ ಯುದ್ಧದ ನಂತರ, ಜೆ.ಆರ್.ಡಿ. ಟಾಟಾ (J.R.D. Tata) ನೇತೃತ್ವದ ಸಮಿತಿಯು ದೇಶದ ವಾಯು ರಕ್ಷಣೆಯನ್ನು ಬಲಪಡಿಸಲು ಭಾರತೀಯ ವಾಯುಸೇನೆಯು ಕನಿಷ್ಠ 50 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಬಜೆಟ್ ಮಿತಿಗಳಿಂದಾಗಿ, ಸರ್ಕಾರವು ಇದಕ್ಕಿಂತ ಕಡಿಮೆ ಬಲಕ್ಕೆ ಅನುಮೋದನೆ ನೀಡಿತು. ಕಾಲಕ್ರಮೇಣ, ಈ ಗುರಿಯನ್ನು 42.5 ಸ್ಕ್ವಾಡ್ರನ್‌ಗಳಿಗೆ ನಿಗದಿಪಡಿಸಲಾಯಿತು. ಈಗ ಚೀನಾ ಮತ್ತು ಪಾಕಿಸ್ತಾನದಿಂದ ದ್ವಿಮುಖ ಅಪಾಯ (Two-front challenge) ಎದುರಿಸುವ ಸನ್ನಿವೇಶದಲ್ಲಿ ಭಾರತ ಇದೆ. ಈ ಪರಿಸ್ಥಿತಿಯಲ್ಲಿ ಭಾರತೀಯ ವಾಯುಸೇನೆ ಗರಿಷ್ಠ 42 ಸ್ಕ್ವಾಡ್ರನ್​ಗಳನ್ನು ಹೊಂದಬಹುದು (ಒಂದು ಸ್ಕ್ವಾಡ್ರನ್ ಎಂದರೆ ಸುಮಾರು 18 ಯುದ್ಧವಿಮಾನಗಳು).

ಆದರೆ, ಭಾರತ ಈ ಗುರಿಯನ್ನು ಕೂಡ ಎಂದಿಗೂ ತಲುಪಿಲ್ಲ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಇರುವುದು ಕೇವಲ 29 ಕಾರ್ಯನಿರತ ಸ್ಕ್ವಾಡ್ರನ್‌ಗಳು ಮಾತ್ರ — ಅಂದರೆ ಇನ್ನೂ 13 ಸ್ಕ್ವಾಡ್ರನ್‌ಗಳ ಭಾರಿ ಕೊರತೆಯಿದೆ. ಇದು ಕಳೆದ 60 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ.

1990 ರಲ್ಲಿ ವಾಯುಸೇನೆಯು ತನ್ನ ಇತಿಹಾಸದಲ್ಲೇ ಗರಿಷ್ಠ ಅಂದರೆ 39.5 ಸ್ಕ್ವಾಡ್ರನ್‌ಗಳನ್ನು ಹೊಂದಿತ್ತು. 2018 ರಲ್ಲಿ ಈ ಸಂಖ್ಯೆ 33 ಕ್ಕೆ ಇಳಿಯಿತು. 2025 ರ ವೇಳೆಗೆ ಎಲ್ಲಾ ಮಿಗ್-21 (MiG-21) ಸ್ಕ್ವಾಡ್ರನ್‌ಗಳ ನಿವೃತ್ತಿಯ ನಂತರ, ಈ ಸಂಖ್ಯೆ ಸುಮಾರು 29 ಕ್ಕೆ ಕುಸಿಯಿತು. ಮುಂದಿನ ದಶಕದಲ್ಲಿ ಹಳೆಯದಾಗುತ್ತಿರುವ ಜಾಗ್ವಾರ್ (Jaguar), ಮಿಗ್-29 (MiG-29) ಮತ್ತು ಮಿರಾಜ್-2000 (Mirage-2000) ವಿಮಾನಗಳು ನಿವೃತ್ತಿಯಾಗಲಿದ್ದು, ಈ ಸವಾಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಹೇಗಿದೆ?

ಜಾಗ್ವಾರ್ ಯುದ್ಧವಿಮಾನವು 1979 ರಲ್ಲಿ ಭಾರತೀಯ ವಾಯುಸೇನೆಯನ್ನು ಸೇರಿತು. ಪ್ರಸ್ತುತ 6 ಸ್ಕ್ವಾಡ್ರನ್‌ಗಳಲ್ಲಿ ಅದರ ಸೇವೆ ಇನ್ನೂ ಇದೆ. ಪ್ರಸ್ತುತ ಭಾರತೀಯ ವಾಯುಸೇನೆಯು 6 ಜಾಗ್ವಾರ್ ಸ್ಕ್ವಾಡ್ರನ್‌ಗಳು, 3 ಮಿಗ್-29 ಸ್ಕ್ವಾಡ್ರನ್‌ಗಳು, 13 ಸುಖೋಯ್ (Su-30MKI) ಸ್ಕ್ವಾಡ್ರನ್‌ಗಳು, 2 ತೇಜಸ್ ಮಾರ್ಕ್-1 (Tejas Mk-1) ಸ್ಕ್ವಾಡ್ರನ್‌ಗಳು ಮತ್ತು 2 ರಫೇಲ್ ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತಿದೆ.

ಪಾಕಿಸ್ತಾನದೊಂದಿಗೆ ಹೋಲಿಕೆ: 1990 ರಲ್ಲಿ ಭಾರತದ ಬಳಿ ಸುಮಾರು 39 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನದ ಬಳಿ ಕೇವಲ 18 ಇದ್ದವು. ಆದರೆ ಇಂದು ಭಾರತದ ಬಳಿ 29 ಸ್ಕ್ವಾಡ್ರನ್‌ಗಳಿದ್ದರೆ, ಪಾಕಿಸ್ತಾನವು F-16, J-10 ಮತ್ತು JF-17 ವಿಮಾನಗಳನ್ನೊಳಗೊಂಡ ಸುಮಾರು 25 ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಂದರೆ ಉಭಯ ದೇಶಗಳ ನಡುವಿನ ವ್ಯತ್ಯಾಸ ತುಂಬಾ ಕಡಿಮೆಯಾಗಿದೆ.

ಚೀನಾದೊಂದಿಗೆ ಹೋಲಿಕೆ: ಚೀನಾ ನಮಗಿಂತ ಬಹುದೂರ ಮುಂದಿದೆ. ಅದು ಸುಮಾರು 66 ಯುದ್ಧವಿಮಾನ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಚೀನಾ ವಾಯುಸೇನೆಯು J-20 ಮತ್ತು J-35 ನಂತಹ ಅತ್ಯಾಧುನಿಕ 5ನೇ ತಲೆಮಾರಿನ (5th Generation) ಯುದ್ಧವಿಮಾನಗಳನ್ನು ಸಹ ಬಳಸುತ್ತಿದೆ.

ಭಾರತೀಯ ವಾಯುಸೇನೆಯಲ್ಲಿ ಯುದ್ಧವಿಮಾನಗಳ ಕೊರತೆಗೆ ಕಾರಣಗಳೇನು?

ಮಿಗ್-21 ನಿವೃತ್ತಿ: ಈ ರಷ್ಯನ್ ಯುದ್ಧವಿಮಾನವು ಭಾರತೀಯ ವಾಯುಪಡೆಯನ್ನು ಸೇರಿದ್ದು 1963 ರಲ್ಲಿ. ಅಲ್ಲಿಂದ ಅದು ವಾಯುಪಡೆಯ ಬೆನ್ನೆಲುಬಾಗಿತ್ತು. ಒಂದು ಹಂತದಲ್ಲಿ ಸೇನೆಯ ಶೇ. 60ರಷ್ಟು ಯುದ್ಧವಿಮಾನಗಳು ಮಿಗ್-21 ಆಗಿದ್ದವು. ಈ ವಿಮಾನಗಳ ಅವಧಿ ಮುಗಿದು, ನಿವೃತ್ತಿಯಾದಾಗ, ಬದಲೀ ವಿಆನಗಳನ್ನು ಕ್ಷಿಪ್ರವಾಗಿ ಭರ್ತಿ ಮಾಡಿಕೊಳ್ಳಲಾಗಲಿಲ್ಲ. ಇದರಿಂದಾಗಿ ದೊಡ್ಡ ಕೊರತೆ ಉಂಟಾಯಿತು.

ತೇಜಸ್ ವಿಳಂಬ: ಭಾರತದಲ್ಲೇ ತಯಾರಾದ ಸ್ವದೇಶಿ ‘ತೇಜಸ್’ ಯುದ್ಧವಿಮಾನಗಳು ಹಳೆಯ ವಿಮಾನಗಳ ಜಾಗವನ್ನು ತುಂಬಬೇಕಿತ್ತು. ಆದರೆ ಭಾರಿ ವಿಳಂಬದ ನಂತರ ಇದಕ್ಕೆ 2011 ರಲ್ಲಿ ಕಾರ್ಯಚರಣೆಯ ಅನುಮತಿ ಸಿಕ್ಕಿತು. ಪ್ರಸ್ತುತ ಎಂಜಿನ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ‘ತೇಜಸ್ Mk-1A’ ಉತ್ಪಾದನೆ ನಿಧಾನವಾಗಿದ್ದು, ವಿತರಣೆಯ ಸಮಯದ ಮೇಲೆ ಪರಿಣಾಮ ಬೀರಿದೆ.

ರದ್ದಾದ ಮತ್ತು ಕಡಿತಗೊಂಡ ರಫೇಲ್ ಆರ್ಡರ್: 2015 ರಲ್ಲಿ 126 ಯುದ್ಧವಿಮಾನಗಳ (MMRCA) ರಫೇಲ್ ಒಪ್ಪಂದವನ್ನು ವೆಚ್ಚ ಮತ್ತು ಇತರ ಕಾರಣಗಳಿಂದಾಗಿ ರದ್ದುಗೊಳಿಸಲಾಯಿತು. ನಂತರ 2016 ರಲ್ಲಿ ಇದನ್ನು ಕೇವಲ 36 ವಿಮಾನಗಳಿಗೆ ಸೀಮಿತಗೊಳಿಸಲಾಯಿತು. ಹೊಸ ವಿಮಾನಗಳ ಸೇರ್ಪಡೆಗಿಂತ ಹಳೆಯ ವಿಮಾನಗಳ ನಿವೃತ್ತಿ ವೇಗವಾಗಿ ನಡೆಯುತ್ತಿರುವುದರಿಂದ ಸ್ಕ್ವಾಡ್ರನ್ ಬಲ ಕುಸಿಯುತ್ತಾ ಬಂದಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ರಫೇಲ್ ಒಪ್ಪಂದ ಏಕೆ ಮುಖ್ಯ?

ಚೀನಾ ತನ್ನ ಅತ್ಯಾಧುನಿಕ ಯುದ್ಧವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನ ತನ್ನ ವಾಯು ಸಾಮರ್ಥ್ಯವನ್ನು ನವೀಕರಿಸುತ್ತಿದೆ. ಇಂಥ ಉದ್ವಿಗ್ನ ಭೂ-ರಾಜಕೀಯ ಪರಿಸ್ಥಿತಿಯಲ್ಲಿ, ರಫೇಲ್ ಒಪ್ಪಂದವು ಭಾರತೀಯ ವಾಯುಸೇನೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ನಿಖರವಾದ ದಾಳಿ ಮತ್ತು ಕಣ್ಗಾವಲು ನಡೆಸಲು ವಾಯು ಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇತ್ತೀಚಿನ ಯುದ್ಧಗಳು ಸಾಬೀತುಪಡಿಸಿವೆ. 114 ರಫೇಲ್ ವಿಮಾನಗಳ ಖರೀದಿ ವಾಯುಸೇನೆಯಲ್ಲಿರುವ ಸ್ಕ್ವಾಡ್ರನ್‌ಗಳ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

114 ರಫೇಲ್ ವಿಮಾನಗಳಿಂದಾಗುವ ಬದಲಾವಣೆಗಳೇನು?

ಒಪ್ಪಂದವಾಗಿರುವ ಈ 114 ರಫೇಲ್ ವಿಮಾನಗಳ ಪೈಕಿ 88 ಸಿಂಗಲ್-ಸೀಟ್ (ಏಕ ಆಸನ) ಯುದ್ಧವಿಮಾನಗಳು ಮತ್ತು 26 ಟ್ವಿನ್-ಸೀಟ್ (ಅವಳಿ ಆಸನ) ತರಬೇತಿ ವಿಮಾನಗಳನ್ನು ಒಳಗೊಂಡಿದೆ. ಇದರೊಂದಿಗೆ ಅತ್ಯಾಧುನಿಕ ಆಯುಧಗಳು, ಸಿಮ್ಯುಲೇಟರ್‌ಗಳು, ಬಿಡಿಭಾಗಗಳು, ತರಬೇತಿ ಮತ್ತು ದೀರ್ಘಕಾಲೀನ ನಿರ್ವಹಣಾ ಬೆಂಬಲವೂ ಸಿಗಲಿದೆ. ಇವುಗಳು ಸಂಪೂರ್ಣವಾಗಿ ಪೂರೈಕೆಯಾದಾಗ ಭಾರತದ ರಫೇಲ್ ವಿಮಾನಗಳ ಒಟ್ಟು ಸಂಖ್ಯೆ ಸುಮಾರು 150 ಕ್ಕೆ ಏರಲಿದ್ದು, ದೇಶದ ಯುದ್ಧ ಸಾಮರ್ಥ್ಯಕ್ಕೆ ಭಾರಿ ಬಲ ಬರಲಿದೆ.

ಹಂತಹಂತವಾದ ವಿತರಣಾ ಯೋಜನೆ

ಭಾರತದ ತಕ್ಷಣದ ಅಗತ್ಯತೆಗಳನ್ನು ಪೂರೈಸಲು ಮತ್ತು ದೀರ್ಘಾವಧಿಯಲ್ಲಿ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸಲು ಹಂತಹಂತವಾದ ವಿತರಣಾ ಯೋಜನೆಯನ್ನು ರೂಪಿಸಲಾಗಿದೆ. ಮೊದಲ 18 ರಫೇಲ್ ವಿಮಾನಗಳು ನೇರವಾಗಿ ಫ್ರಾನ್ಸ್‌ನಿಂದ ಸಂಪೂರ್ಣ ಸಿದ್ಧ ಸ್ಥಿತಿಯಲ್ಲಿ (Ready-to-fly) ಬರಲಿವೆ. ಇವುಗಳನ್ನು ಭಾರತೀಯ ವಾಯುಸೇನೆ ತಕ್ಷಣವೇ ಬಳಸಬಹುದು.

ಉಳಿದ 96 ವಿಮಾನಗಳು ಲೈಸೆನ್ಸ್ ಅಡಿಯಲ್ಲಿ ಭಾರತದಲ್ಲೇ ತಯಾರಾಗಲಿವೆ. ನಾಗ್ಪುರದಲ್ಲಿರುವ ದಸ್ಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (DRAL) ಘಟಕದಲ್ಲಿ ಅಂತಿಮ ಜೋಡಣೆ (Final Assembly Line) ಪ್ರಕ್ರಿಯೆ ನಡೆದು ವಿತರಣೆಯಾಗಲಿದೆ.

ರಫೇಲ್‌ನ ಸ್ವದೇಶೀಕರಣ ಹಾದಿ (Indigenisation)

ಸ್ವದೇಶೀಕರಣ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಲಿದೆ. ಆರಂಭದಲ್ಲಿ ಶೇ. 30 ರಷ್ಟು ಭಾಗಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಕಾಲಾನಂತರದಲ್ಲಿ ಇದನ್ನು ಶೇ. 50 ಕ್ಕಿಂತ ಹೆಚ್ಚು ಹೆಚ್ಚಿಸುವ ಗುರಿ ಹೊಂದಲಾಗಿದೆ.

(ಮಾಹಿತಿ ಕೃಪೆ: Nivriti Mohan, ನ್ಯೂಸ್9)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ’ಯ ಗರಿ – Kannada News

ಅಬುಧಾಬಿ, ಜೂನ್ 04: ಯುಎಇ (UAE) ರಾಜಧಾನಿ ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ (BAPS) ಹಿಂದೂ ಮಂದಿರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ ಟಾಲರೆನ್ಸ್​ ಪ್ರಶಸ್ತಿ 2026” (Tolerance Award 2026) ಒಲಿದು ಬಂದಿದೆ. ಜಾಗತಿಕವಾಗಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಮಂದಿರ ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚೆಗೆ ನಡೆದ ‘ಥರ್ಡ್​ ಇಂಟರ್​ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್​ ಕಾನ್ಫರೆನ್ಸ್​(IDCT 2026)ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಅಬುಧಾಬಿಯ ಈ ಹಿಂದೂ ಮಂದಿರವು ಕೇವಲ ಒಂದು ಪ್ರಾರ್ಥನಾ ಮಂದಿರವಾಗಿ ಉಳಿಯದೆ, ಗಲ್ಫ್ ರಾಷ್ಟ್ರಗಳಲ್ಲಿ ಜಾಗತಿಕ ಏಕತೆಯ ಸಂಕೇತವಾಗಿ ಹೊರಹೊಮ್ಮಿದೆ.

ಮಂದಿರವು ಆಯೋಜಿಸುವ ‘ಫೆಸ್ಟಿವಲ್ ಆಫ್ ಹಾರ್ಮೋನಿ’, ‘ಓಮ್ಸಿಯಾತ್’ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಧರ್ಮ ಮತ್ತು ಸಂಸ್ಕೃತಿಯ ಜನರನ್ನು ಒಟ್ಟಿಗೆ ತರುತ್ತಿವೆ. ಸಂಕಷ್ಟದ ಸಮಯದಲ್ಲಿ ಮತ್ತು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಂದಿರವು ಹಮ್ಮಿಕೊಳ್ಳುವ ಜನಪದ ಕಾರುಣ್ಯದ ಸೇವೆಗಳು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ.

ಮತ್ತಷ್ಟು ಓದಿ: Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಮಂದಿರದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮವಿಹಾರಿ ಸ್ವಾಮೀಜಿ ಅವರು ಭವಿಷ್ಯದ ಕುಟುಂಬ, ಧರ್ಮ ಮತ್ತು ತಂತ್ರಜ್ಞಾನದ ಕುರಿತು ಅತ್ಯಂತ ಪ್ರಬುದ್ಧವಾದ ಸಂದೇಶ ನೀಡಿದರು.

ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಮನುಷ್ಯ ತನ್ನ ನೈತಿಕ ಮೌಲ್ಯಗಳು ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಪ್ರತಿ ಕುಟುಂಬವೂ ದಿನದ ಕೆಲವು ಸಮಯವನ್ನು ಮೊಬೈಲ್, ಇಂಟರ್ನೆಟ್‌ನಂತಹ ಡಿಜಿಟಲ್ ಆಕರ್ಷಣೆಗಳಿಂದ ದೂರವಿಟ್ಟು, ಒಟ್ಟಿಗೆ ಕುಳಿತು ಪ್ರಾರ್ಥನೆ ಮತ್ತು ಪರಸ್ಪರ ಪ್ರೀತಿಯ ಸಂಭಾಷಣೆಯಲ್ಲಿ ಕಳೆಯಬೇಕು (ಘರ್ ಸಭಾ). ನಮಗೆ ಕೇವಲ ತಂತ್ರಜ್ಞಾನ ತುಂಬಿದ ಕುಟುಂಬಗಳಿಗಿಂತ, ಸಂಸ್ಕಾರ ಮತ್ತು ಮೌಲ್ಯಗಳು ತುಂಬಿದ ಕುಟುಂಬಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಮಹಂತ್ ಸ್ವಾಮಿ ಮಹಾರಾಜ್ ಅವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಎಪಿಎಸ್ ಮಂದಿರಕ್ಕೆ ಸಿಕ್ಕಿರುವ ಈ ಗೌರವವು, ವಿಶ್ವ ಶಾಂತಿ, ಕರುಣೆ ಮತ್ತು ಮಾನವೀಯ ಸಹೋದರತ್ವವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಭಾರತೀಯ ಸಂಸ್ಕೃತಿಗೆ ಸಿಕ್ಕ ಮತ್ತೊಂದು ಜಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ? ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ?: ಇಲ್ಲಿದೆ ಮಾಹಿತಿ – Kannada News

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ?Image Credit source: Tv9 Kannada

ಬೆಂಗಳೂರು, ಜೂನ್​​ 04: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ (DK Shivakumar)​​ ರಾಜೀನಾಮೆ ಬೆನ್ನಲ್ಲೇ ಪಕ್ಷದ ನೂತನ ಸಾರಥಿಯಾಗಿ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​ ಅವರನ್ನು ಎಐಸಿಸಿ ಘೋಷಣೆ ಮಾಡಿದೆ. ಅಷ್ಟಕ್ಕೂ ಹರಿಪ್ರಸಾದ್​​ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಆದ ಸರ್ಪ್ರೈಸ್​​ ಎಂಟ್ರಿಯಾಗಿತ್ತು. ಅಲ್ಲಿಯವರೆಗೂ ಸತೀಶ್​​ ಜಾರಕಿಹೊಳಿ ಹೆಸರೇ ಮುಂಚೂಣಿಯಲ್ಲಿತ್ತು, ಅವರಿಗೇ ಪಟ್ಟ ಎಂಬದೂ ಬಹುತೇಕ ಫೈನಲ್​​ ಆಗಿತ್ತು. ಆದರೆ ಕೊನೇ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಒಬಿಸಿಯ ನಾಯಕನಿಗೆ ಮಹತ್ವದ ಹುದ್ದೆ ಲಭಿಸಿದೆ.

ಸತೀಶ್​​ ಲೆಕ್ಕಾಚಾರ ತಪ್ಪಿದ್ದೇಗೆ?

  • ಕೆಪಿಸಿಸಿ ಹಾಗೂ ಮಿನಿಸ್ಟರ್ ಎರಡೂ ಹುದ್ದೆ ನೀಡಲು ಹೈಕಮಾಂಡ್ ನಿರಾಕರಣೆ
  • ಸಿಎಂ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲಿ ಸತೀಶ್ ಕಾಂಪಿಟೇಟರ್​ ಎಂಬ ಆತಂಕ
  • ಡಿಕೆ ಶಿವಕುಮಾರ್​​ಗೆ ಸಮನಾಗಿ ಪವರ್ ಸೆಂಟರ್ ಆಗುತ್ತಾರೆ ಎಂಬ ಭೀತಿ
  • ಶಾಸಕರ ಬೆಂಬಲ ಸತೀಶ್​​ಗೆ ಇದೆ ಎಂಬುದು ದೊಡ್ಡ ಥ್ರೆಟ್
  • ಸಿದ್ದರಾಮಯ್ಯರಿಂದಲೂ ಸತೀಶ್​​ಗೆ ಕೆಪಿಸಿಸಿ ಹೊಣೆ ನೀಡಲು ವಿರೋಧ
  • ತಮ್ಮ ಬೆನ್ನಿಗೆ ನಿಂತಿಲ್ಲ ಎಂಬಂತೆ ಭಾವಿಸಿರುವ ಸಿದ್ದರಾಮಯ್ಯ
  • ಸತೀಶ್ ಅಹಿಂದ ಉತ್ತರಾಧಿಕಾರಿಯಾದರೆ ತಮ್ಮ ಅಸ್ತಿತ್ವ ಅಲುಗಾಡುತ್ತದೆ ಎಂದು ಯೋಚಿಸಿದ ಹಲವರು
  • ಸಂಘಟನೆಯಲ್ಲಿ ಸತೀಶ್ ಕೆಪ್ಯಾಸಿಟಿಯೇ ದೌರ್ಬಲ್ಯವಾಗಿದ್ದು
  • 2028ಕ್ಕೆ ಸತೀಶ್ ಸಿಎಂ ಸ್ಥಾನ ಕ್ಲೇಮ್ ಮಾಡ್ತಾರೆ ಎಂಬ ಭಯ
  • ಶಾಸಕರ ಬೆಂಬಲದ ವಿಚಾರ ಬಂದರೆ ಮತ್ತೆ ಸತೀಶ್ vs ಡಿಕೆಶಿ ಫೈಟ್ ನಡೆಯಬಹುದು
  • ಶಾಸಕರನ್ನು ಸತೀಶ್ ತಮ್ಮ ವೈಯಕ್ತಿಕ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆತಂಕ
  • ಜನರನ್ನು ಹಿಡಿದು ಕೂರಿಸಬಲ್ಲ ಪ್ರಭಾವಿ ಮಾತುಗಾರ ಅಲ್ಲ ಎಂಬ ಅಂಶ
  • ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ಒಬ್ಬನಿಗೆ ಒಂದೇ ಹುದ್ದೆ ಎಂಬ ಹೈಕಮಾಂಡ್ ನಿರ್ಧಾರ

ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ; ಬಿಕೆ ಹರಿಪ್ರಾಸದ್​​​ ಒಂದೇ ದಿನ ಡಬಲ್ ಧಮಾಕ

ಸಚಿವ ಸ್ಥಾನವನ್ನೇ ಸತೀಶ್​​ ಆಯ್ದುಕೊಂಡಿದ್ದೇಕೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಸಚಿವ ಸ್ಥಾನವೇ ಬೆಸ್ಟ್ ಎಂಬ ನಿರ್ಧಾರಕ್ಕೆ ಸತೀಶ್​​ ಜಾರಕಿಹೊಳಿ ಕೂಡ ಬಂದಿದ್ದರು ಎನ್ನಲಾಗಿದೆ. ಸಚಿವ ಸ್ಥಾನ ಇಲ್ಲದಿದ್ದರೆ ಸರ್ಕಾರದ ಮೇಲೆ ಹಿಡಿತ ಕೈತಪ್ಪುವ ಆತಂಕದ ಜೊತೆಗೆ ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಕೈತಪ್ಪುವ ಭೀತಿಯೂ ಅವರಿಗಿತ್ತು. ಕೆಪಿಸಿಸಿ ಮಾತ್ರ ಸಿಕ್ಕಿದರೆ ಸಂಘಟನೆಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ಅಲ್ಲದೆ ಸಚಿವಗಿರಿ ಇಲ್ಲದಿದ್ದರೆ ಸಂಘಟನೆಗೆ ಧನ ಬೆಂಬಲ ಸಿಗುವ ಅವಕಾಶವೂ ಕಡಿಮೆ. ಈ ಕಾರಣಕ್ಕೆ ಸಚಿವ ಸ್ಥಾನವೆ ಒಳಿತೆಂದು ಸತೀಶ್​​ ಕೂಡ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ – Kannada News

ಸಿಂಗಾಪುರ, ಜೂನ್ 04: ಸಂಚಾರಿ ನಿಯಮಗಳನ್ನು (Traffic Rules) ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರು ಹೈಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಧರಿಸುವುದಿಲ್ಲ, ಗ್ರೀನ್ ಸಿಗ್ನಲ್ ಬರುವವರೆಗೂ ಕಾಯುವುದೇ ಇಲ್ಲ ವಾಹನ ಚಲಾಯಿಸಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡ್ತಾರೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ದೃಶ್ಯ. ಸಿಂಗಾಪುರದ (Singapore) ಖಾಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಟ್ರಾಫಿಕ್ ನಿಮಯ ಪಾಲಿಸಿದ್ದಾರೆ. ತಡರಾತ್ರಿ 1 ಗಂಟೆಯ ವೇಳೆ ವಾಹನಗಳಿಲ್ಲದ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು, ಆ ಬಳಿಕ ರಸ್ತೆ ದಾಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರಾಫಿಕ್ ರೂಲ್ಸ್ ಪಾಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃತಿಕಾ ಜೈನ್ (Kritika Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಅಭ್ಯಾಸವೋ, ಶಿಸ್ತೋ ತಿಳಿಯದು ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರಸ್ತೆಯಲ್ಲಿ ವಾಹನಗಳು ಓಡಾಡದೇ ಖಾಲಿ ಇರುವುದನ್ನು ಗಮನಿಸಬಹುದು. ಹೀಗಿರುವಾಗ ವ್ಯಕ್ತಿಯೊಬ್ಬರು ರೆಡ್ ಸಿಗ್ನಲ್ ಇರುವುದನ್ನು ಗಮನಿಸಿದ್ದಾರೆ. ಆ ಬಳಿಕ ಗ್ರೀನ್ ಸಿಗ್ನಲ್ ಬರುವವರೆಗೆ ಕಾದು ನಿಂತು ಆ ಬಳಿಕ ರಸ್ತೆ ದಾಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್​​ ವೈರಲ್​​

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಇವರೇ ನಿಜವಾದ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ಸಿಂಗಾಪುರದ ಕಠಿಣ ನಿಯಮಗಳೇ ಇಂತಹ ನಡವಳಿಕೆಗೆ ಕಾರಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ತಾವೇನೋ ಸಾಧನೆ ಮಾಡಿದ್ದಂತೆ ಅಂದುಕೊಂಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:13 am, Thu, 4 June 26

Source link

ಚತುರ ರಾಜತಾಂತ್ರಿಕ ನಡೆ: ಸವಾಲುಗಳ ನಡುವೆಯೇ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ ಶಾಸಕ ರಿತಬ್ರತ ಬ್ಯಾನರ್ಜಿ – Kannada News

ಕೋಲ್ಕತಾ, ಜೂನ್ 04: ಪಶ್ಚಿಮ ಬಂಗಾಳ(West Bengal)ದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ, ಸುಶಿಕ್ಷಿತ ಹಾಗೂ ತೀಕ್ಷ್ಣ ಸಂಭಾಷಣಾ ಚತುರ ನಾಯಕರೆಂದೇ ಗುರುತಿಸಲ್ಪಟ್ಟಿರುವ ರಿತಬ್ರತ ಬ್ಯಾನರ್ಜಿ ಪ್ರಸ್ತುತ ತಮಗಿರುವ ರಾಜಕೀಯ ಕೌಶಲ್ಯ ಮತ್ತು ಬೌದ್ಧಿಕ ಮೌಲ್ಯದ ಮೂಲಕ ಬಂಗಾಳದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ಆರಂಭಗೊಂಡು, ರಾಜ್ಯಸಭಾ ಸಂಸದರಾಗಿ ದೇಶದ ಗಮನ ಸೆಳೆದಿದ್ದ ಇವರು, ಇತ್ತೀಚೆಗೆ ಅಂದರೆ 2026 ರ ಚುನಾವಣೆಯಲ್ಲಿ ಉಲ್ಲುಬೇರಿಯಾ ಪುರ್ಬಾ ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ (MLA) ಆಯ್ಕೆಯಾಗುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ.

ವಿವಿಧ ಸೈದ್ಧಾಂತಿಕ ಏರುಪೇರುಗಳು ಮತ್ತು ರಾಜಕೀಯ ಬದಲಾವಣೆಗಳ ನಡುವೆಯೂ ಮುನ್ನಡೆದಿರುವ ರಿತಬ್ರತ ಬ್ಯಾನರ್ಜಿ ಅವರ ಈ ನಡೆ, ಬಂಗಾಳದ ರಾಜಕೀಯ ಭವಿಷ್ಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ಆಶಾದಾಯಕ ಮುನ್ನುಡಿಯಾಗಿದೆ.

ಭರವಸೆಯ ಯುವ ನಾಯಕತ್ವದಿಂದ ಶಾಸಕರಾಗುವವರೆಗಿನ ಯಶಸ್ವಿ ಪಯಣ
ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಿತಬ್ರತ ಬ್ಯಾನರ್ಜಿ ಅವರು ಆರಂಭದಿಂದಲೂ ತಮ್ಮ ಸ್ಪಷ್ಟ ಹಾಗೂ ಆಳವಾದ ಸಂಶೋಧನಾತ್ಮಕ ಭಾಷಣಗಳಿಗೆ ಹೆಸರುವಾಸಿಯಾದವರು.

ಎಸ್‌ಎಫ್‌ಐ ನಾಯಕತ್ವ: ಆರಂಭದಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐ (SFI)ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಯುವ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ನೆಚ್ಚಿನ ನಾಯಕರಾಗಿದ್ದ ಇವರು, ಕೇವಲ 35 ನೇ ವಯಸ್ಸಿಗೆ (2014 ರಲ್ಲಿ) ರಾಜ್ಯಸಭಾ ಸಂಸದರಾಗಿ ಸಂಸತ್ ಪ್ರವೇಶಿಸಿದರು.

ಟಿಎಂಸಿ ಮತ್ತು ಕಾರ್ಮಿಕ ಸಂಘಟನೆಗಳ ಸಾರಥ್ಯ: 2017 ರಲ್ಲಿ ಸಿಪಿಐ(ಎಂ)ನಿಂದ ಹೊರಬಂದ ನಂತರ, ಮಮತಾ ಬ್ಯಾನರ್ಜಿ ಅವರ ಕಲ್ಯಾಣ ರಾಜಕಾರಣವನ್ನು ಕಮ್ಯುನಿಸ್ಟ್ ಆದರ್ಶಗಳಿಗೆ ಹೋಲಿಸಿ ಮುಕ್ತವಾಗಿ ಶ್ಲಾಘಿಸಿದರು. ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ನಂಬಿಕೆ ಗಳಿಸಿ 2020 ರಲ್ಲಿ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ (TMC) ಸೇರಿದ ಇವರಿಗೆ ಪಕ್ಷದ ಪ್ರಮುಖ ಟ್ರೇಡ್ ಯೂನಿಯನ್ ಜವಾಬ್ದಾರಿಯನ್ನು ನೀಡಿ ಗೌರವಿಸಲಾಯಿತು.

ಮತ್ತಷ್ಟು ಓದಿ:
ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!

ರಾಜತಾಂತ್ರಿಕ ಜಾಣ್ಮೆ ಮತ್ತು ಭವಿಷ್ಯದ ಮುನ್ನೋಟ
ರಾಜ್ಯಸಭಾ ಅವಧಿ ಮುಗಿದ ನಂತರ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಿತಬ್ರತ ಬ್ಯಾನರ್ಜಿ ಅವರು, ಸದ್ಯ ಬಂಗಾಳ ವಿಧಾನಸಭೆಯಲ್ಲಿ ಜನಹಿತಕ್ಕಾಗಿ ಮತ್ತಷ್ಟು ದೃಢ ಹೆಜ್ಜೆಗಳನ್ನು ಇಡಲು ಮುಂದಾಗಿದ್ದಾರೆ.

ವ್ಯವಸ್ಥಿತ ಬದಲಾವಣೆಯ ಹಾದಿ: ವಿಧಾನಸಭೆಯಲ್ಲಿ ಸುವೇಂದು ಅಧಿಕಾರಿಯವರೊಂದಿಗಿನ ರಾಜಕೀಯ ಒಡಕು ಹಾಗೂ ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಬೆಂಬಲದೊಂದಿಗೆ ವಿರೋಧ ಪಕ್ಷದ ನಾಯಕರಾಗುವ ನಿಟ್ಟಿನಲ್ಲಿ ಕಂಡುಬರುತ್ತಿರುವ ರಾಜಕೀಯ ಚಟುವಟಿಕೆಗಳು ಅವರ ಚಾಣಾಕ್ಷ ತಂತ್ರಗಾರಿಕೆಯನ್ನು ಎತ್ತಿ ತೋರಿಸುತ್ತವೆ. ಪಕ್ಷದ ಆಂತರಿಕ ಬಿಕ್ಕಟ್ಟುಗಳನ್ನು ಮೀರಿ, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಹೊಸ ಬಲ ತರಲು ಅವರು ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯವಾಗಿವೆ.

ಹಿಂದೆ ವಿದ್ಯಾರ್ಥಿ ಚಳವಳಿಗಳ ಸಮಯದಲ್ಲಿ ಮತ್ತು ಸಂಸತ್ತಿನಲ್ಲಿ ಸಾರ್ವಜನಿಕರ ಧ್ವನಿಯಾಗಿ ಹೋರಾಡಿದ್ದ ರಿತಬ್ರತ ಬ್ಯಾನರ್ಜಿ ಅವರು, ಈಗಲೂ ಜನರ ಕಡೆಗಿನ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಬಂಗಾಳದ ರಾಜಕೀಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಹೊರಟಿರುವ ಇವರ ಈ ‘ರಾಜಕೀಯ ಸಾಹಸ’ವು ಯುವ ಪೀಳಿಗೆಗೆ ಹೊಸ ಆಶಾಕಿರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ? – Kannada News

ಉಚ್ಚಸ್ಥಾನದಲ್ಲಿ ಗುರುImage Credit source: Pinterest

ಕಾಲವನ್ನು ತಿಳಿಯುವ ಶಾಸ್ತ್ರದ ಪ್ರಕಾರ ಗುರುವು ಅತ್ಯಂತ ಶುಭ ಗ್ರಹ. ಗುರುವು ತನ್ನ ಉಚ್ಛ ರಾಶಿಯಾದ ಕರ್ಕಾಟಕದಲ್ಲಿದ್ದಾನೆ. ಇದು ಅತ್ಯಂತ ಬಲವಾದ ಸ್ಥಿತಿ. ಜೊತೆಗೆ ಚಂದ್ರನ ದ್ರೇಕ್ಕಾಣ ಮತ್ತು ಹೋರೆಯಲ್ಲಿ ಸ್ನೇಹಿತನ ವರ್ಗ, ರವಿಯ ನವಾಂಶಯಲ್ಲಿ ಮಿತ್ರನ ವರ್ಗದಲ್ಲಿದ್ದಾನೆ. ಆದರೆ ಬುಧನ ತ್ರಿಂಶಾಂಶ ಮತ್ತು ದ್ವಾದಶಾಂಶದಲ್ಲಿದ್ದಾನೆ. ಬುಧನು ಗುರುವಿಗೆ ಶತ್ರು/ಸಮ ಭಾವ ಹೊಂದಿದ್ದಾನೆ. ಒಟ್ಟಾರೆಯಾಗಿ ಹೇಳುವುದಾದರೆ, ಗುರುವು ಉಚ್ಛ ಸ್ಥಾನದಲ್ಲಿದ್ದರೂ ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದಾನೆ. ಈ ವಿಶಿಷ್ಟ ಸ್ಥಿತಿಯ 12 ರಾಶಿಗಳ ಫಲ ಇದು.

ಮೇಷ ರಾಶಿ:

​ನಿಮ್ಮ ರಾಶಿಗೆ ಗುರುವು ೪ನೇ ಮನೆಯಲ್ಲಿ ಸಂಚರಿಸುತ್ತಾನೆ. ಭೂಮಿ, ವಾಹನ ಮತ್ತು ಆಸ್ತಿ ಖರೀದಿ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆದರೆ ಬುಧನ ತ್ರಿಂಶಾಂಶದ ಪ್ರಭಾವದಿಂದ ಅನಾವಶ್ಯಕ ಕೌಟುಂಬಿಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಜಾಗ್ರತೆ ವಹಿಸಿ.

​ವೃಷಭ ರಾಶಿ:

​ನಿಮ್ಮ ರಾಶಿಗೆ ಗುರುವು ಮೂರನೇ ರಾಶಿಯಲ್ಲಿದ್ದರೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರುತ್ತವೆ. ಸಹೋದರ-ಸಹೋದರಿಯರಿಂದ ಸಹಕಾರ ಸಿಗಲಿದೆ. ರವಿಯ ನವಾಂಶದ ಪ್ರಭಾವದಿಂದ ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.

ಮಿಥುನ ರಾಶಿ:

​ನಿಮ್ಮ ರಾಶಿಗೆ ಗುರುವು ದ್ವಿತೀಯದಲ್ಲಿದ್ದರೆ, ಧನ ಲಾಭ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವದಿಂದ ನೆನೆಗುದಿಗೆ ಬಿದ್ದ ಕೆಲಸಗಳು ಯಶಸ್ವಿಯಾಗುತ್ತವೆ. ಬುಧನ ದ್ವಾದಶಾಂಶವಿರುವುದರಿಂದ ವ್ಯಾಪಾರದಲ್ಲಿ ಹೂಡಿಕೆ ಮಾಡುವಾಗ ಕೊಂಚ ಯೋಚಿಸಿ ನಿರ್ಧಾರ ತಗೊಳ್ಳಿ.

ಕರ್ಕಾಟಕ ರಾಶಿ:

​ಗುರುವು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಾನೆ ಮತ್ತು ಉಚ್ಛನಾಗಿರುತ್ತಾನೆ. ಅತ್ಯಂತ ಶುಭ ಕಾಲ. ಬುದ್ಧಿಶಕ್ತಿ, ಗೌರವ, ಕೀರ್ತಿ ಹೆಚ್ಚಾಗಲಿದೆ. ಆರೋಗ್ಯ ಸುಧಾರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಚಂದ್ರನ ಹೋರೆಯ ಪ್ರಭಾವದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಸಿಂಹ ರಾಶಿ:

ನಿಮ್ಮ ರಾಶಿಗೆ ಗುರುವು ದ್ವಾದಶದಲ್ಲಿ ಶುಭ ಕಾರ್ಯಗಳಿಗಾಗಿ ವೆಚ್ಚಗಳು ಹೆಚ್ಚಾಗಿಸುವನು. ವಿದೇಶ ಪ್ರಯಾಣದ ಯೋಗವಿದೆ. ರವಿಯ ನವಾಂಶವಿರುವುದರಿಂದ ಆಧ್ಯಾತ್ಮಿಕವಾಗಿ ದೊಡ್ಡ ಪ್ರಗತಿ ಕಾಣುವಿರಿ. ಆದರೆ ಕೋರ್ಟ್ ಕಚೇರಿ ವಿಚಾರಗಳಲ್ಲಿ ಜಾಗರೂಕರಾಗಿರಿ.

ಕನ್ಯಾ ರಾಶಿ:

ಈ ತಿಂಗಳಲ್ಲಿ ರಾಶಿಗೆ ಗುರುವು ಹನ್ನೊಂದನೇ ಮನೆಯಲ್ಲಿದ್ದು, ಲಾಭ ಸ್ಥಾನದಲ್ಲಿ ಗುರುವಿರುವುದರಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಹಿರಿಯ ಅಧಿಕಾರಿಗಳು ಮತ್ತು ಸ್ನೇಹಿತರಿಂದ ಬೆಂಬಲ ಸಿಗಲಿದೆ. ಬುಧನ ತ್ರಿಂಶಾಂಶದ ಪ್ರಭಾವದಿಂದ ಹಳೆಯ ಬಾಕಿ ವಸೂಲಾಗಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ.

​ತುಲಾ ರಾಶಿ:

​ಈ ರಾಶಿಗೆ ಗುರುವು ಹತ್ತನೇ ಮನೆಯಲ್ಲಿ ಇರಲಿದ್ದಾನೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಆದರೆ ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟ ಇರಬಹುದು. ಚಂದ್ರನ ದ್ರೇಕ್ಕಾಣದ ಪ್ರಭಾವದಿಂದ ಕಲಾ ಮತ್ತು ಕ್ರಿಯೇಟಿವ್ ರಂಗದಲ್ಲಿರುವವರಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ:

ಈ ರಾಶಿಗೆ ಗುರುವು ನವಮ ಸ್ಥಾನದಲದಲಿರುವ ಕಾರಣ ಭಾಗ್ಯೋದಯವಾಗುವ ಸಮಯ. ಅದೃಷ್ಟ ನಿಮ್ಮ ಕೈಹಿಡಿಯಲಿದೆ. ತಂದೆಯ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರಿಂದ ಲಾಭವಾಗಲಿದೆ. ದೀರ್ಘಾವಧಿ ಪ್ರಯಾಣಗಳು ಯಶಸ್ವಿಯಾಗುತ್ತವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

​ಧನು ರಾಶಿ:

​ನಿಮ್ಮ ರಾಶಿಗೆ ಗುರುವಿರುವುದು ಎಂಟನೇ ರಾಶಿಯಲ್ಲಿ. ಮಿಶ್ರ ಫಲಗಳು ಕಂಡುಬರುತ್ತವೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಅನಿರೀಕ್ಷಿತ ಧನಲಾಭ ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಆಗುವ ಸಂಭವವಿದೆ. ಬುಧನ ನಕಾರಾತ್ಮಕ ತ್ರಿಂಶಾಂಶ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಗಳಗಳಾಗಬಹುದು, ತಾಳ್ಮೆ ಇರಲಿ.

ಮಕರ ರಾಶಿ:

​ನಿಮ್ಮ ರಾಶಿಗೆ ಗುರುವು ಏಳನೇ ರಾಶಿಯಲ್ಲಿರುವುದು. ವಿವಾಹ ಆಕಾಂಕ್ಷಿಗಳಿಗೆ ಕಲ್ಯಾಣ ಯೋಗ ಕೂಡಿಬರಲಿದೆ. ಜಂಟಿ ಉದ್ಯೋಗ ಮಾಡುವವರಿಗೆ ಭರಪೂರ ಲಾಭ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಎಲ್ಲ ಕಡೆಯಿಂದ ಪೂರ್ಣ ಸಹಕಾರ ಸಿಗಲಿದೆ.

ಕುಂಭ ರಾಶಿ:

​ನಿಮ್ಮ ರಾಶಿಗೆ ಗುರುವು ಆರನೇ ರಾಶಿಯಲ್ಲಿ ಇದ್ದ ಕಾರಣ ಸಾಲ ಮತ್ತು ರೋಗಗಳಿಂದ ಮುಕ್ತಿ ಸಿಗುವ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ಆದರೆ ರವಿ ಮತ್ತು ಬುಧನ ಸೂಕ್ಷ್ಮ ದೃಷ್ಟಿಯಿಂದಾಗಿ ಗುಪ್ತ ಶತ್ರುಗಳ ಭಯವಿರಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ ಮತ್ತು ಕಾನೂನು ಬಾಹಿರ ಕೆಲಸಗಳಿಂದ ದೂರವಿರಿ.

ಮೀನ ರಾಶಿ:

ನಿಮ್ಮ ರಾಶಿಗೆ ಗುರುವು ಐದನೇ ಮನೆಯಲ್ಲಿರುತ್ತಾನೆ. ಸಂತಾನ ಯೋಗವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮತ್ತು ಯಶಸ್ಸು ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ. ನಿಮ್ಮ ಕ್ರಿಯೇಟಿವಿಟಿಗೆ ತಕ್ಕ ಮನ್ನಣೆ ಸಿಗಲಿದೆ.

-ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ? – Kannada News

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ (Shiva Rajkumar), ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲು ಕಂಡಿರುವ ರಾಮ್ ಚರಣ್​​ ಪಾಲಿಗೆ ಇದು ಬಲು ಮಹತ್ವದ ಸಿನಿಮಾ ಆಗಿದೆ. ಬುಚ್ಚಿಬಾಬು ಸನಾ ನಿರ್ದೇಶಿಸಿರುವ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಕ್ರೀಡಾಪಟು ಯುವಕನೊಬ್ಬನ ಸುತ್ತ ಕತೆ ಸುತ್ತುತ್ತದೆ.

‘ಪೆದ್ದಿ’ ಸಿನಿಮಾದ ಮೊದಲಾರ್ಧ ಏನಿದೆ? ಏನಿಲ್ಲ?

  1. ‘ಪೆದ್ದಿ’ ಆಟದ ಕತೆಯ ಜೊತೆಗೆ ಐಡೆಂಟಿಟಿಯ ಕತೆ
  2. ಮೊದಲಾರ್ಧ ನಾಯಕನ ಎಂಟ್ರಿ, ನಾಯಕಿಯ ಗ್ಲಾಮರ್, ಇತರೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲು.
  3. ಗುರುತೂ, ಇಲ್ಲದ ರಸ್ತೆಯೂ ಇಲ್ಲದ ಬೆಟ್ಟದ ಬುಡದ ಊರಿನ ಯುವಕ ಪೆದ್ದಿಯ ಕತೆ ಆರಂಭವಾಗುವುದು ಕ್ರಿಕೆಟ್ ಆಟದ ಜೊತೆ
  4. ಜಾನ್ಹವಿಯ ಎಂಟ್ರಿ ಸೂಪರ್, ಮೊದಲಾರ್ಧದಲ್ಲಿ ನಾಯಕಿ ಕೇವಲ ಗ್ಲಾಮರ್ ಗಷ್ಟೆ ಸೀಮಿತ.
  5. ಶಿವಣ್ಣನಿಗೆ ಮೊದಲಾರ್ಧದಲ್ಲಿ ಹೆಚ್ಚು ದೃಶ್ಯಗಳಿಲ್ಲ ಆದರೆ ಕತೆಗೆ ತಿರುವು ನೀಡುವುದು ಶಿವಣ್ಣನ ಪಾತ್ರ
    ಮೊದಲಾರ್ಧದ ಅಂತ್ಯಕ್ಕೆ ನಾಯಕನಿಗೆ ತನ್ನ ಗುರಿ ಏನೆಂಬುದು ತಿಳಿಯುತ್ತದೆ, ದ್ವಿತೀಯಾರ್ಧ ನಿಜವಾದ ಕತೆ ತೆರೆದುಕೊಳ್ಳಲಿದೆ
  6. ಮೊದಲಾರ್ಧದಲ್ಲಿ ಎರಡು ಹಾಡುಗಳಿದ್ದು ಎರಡೂ ಚೆನ್ನಾಗಿವೆ, ಅಲ್ಲಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
  7. ರಾಮ್ ಚರಣ್ ಆಕ್ಷನ್, ಡ್ಯಾನ್ಸ್ ಹಾಗೂ ಎಮೋಷನಲ್ ದೃಶ್ಯದಲ್ಲಿ ಗಮನ ಸೆಳೆಯುತ್ತಾರೆ
  8. ಮೊದಲಾರ್ಧ ಕೂಲಿಗಾಗಿ ಕ್ರಿಕೆಟ್ ಆಡುವ ನಾಯಕ, ಇಂಟರ್ವೆಲ್ ವೇಳೆಗೆ ಕುಸ್ತಿ ಅಖಾಡಕ್ಕೆ ಕಾಲಿಟ್ಟಿದ್ದಾನೆ.
  9. ಮೊದಲಾರ್ಧದಲ್ಲಿ ವಿಲನ್ ದಿವ್ಯೇಂದು ಗಮನ ಸೆಳೆಯುತ್ತಾರೆ. ಜಗಪತಿ ಬಾಬು ಪೋಷಕ ಪಾತ್ರ ಭಾವುಕವಾಗಿದೆ. ಬೊಮನ್ ಇರಾನಿಗೆ ಹೆಚ್ಚು ಕೆಲಸವಿಲ್ಲ.
  10. ಮೊದಲಾರ್ಧದಲ್ಲಿ ನಾಯಕಿ, ನಾಯಕನ ಭೇಟಿಯೇ ಆಗಿಲ್ಲ, ಪೆದ್ದಿ ಎಂಬ ವ್ಯಕ್ತಿ ಇದ್ದಾನೆಂಬುದು ಸಹ ನಾಯಕಿಗೆ ತಿಳಿಯದು

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿಯ ಹೊರತಾಗಿ ಬಾಲಿವುಡ್ ನಟ ದಿವ್ಯೇಂದು, ಬೊಮನ್ ಇರಾನಿ ಸಹ ನಟಿಸಿದ್ದಾರೆ. ಜಗಪತಿ ಬಾಬು ಸೇರಿದಂತೆ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಶಿವಣ್ಣನ ಪಾತ್ರ ಸಹ ಸಿನಿಮಾನಲ್ಲಿ ಹೈಲೆಟ್, ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:42 am, Thu, 4 June 26

Source link