ಬಾಟಲಿಯಲ್ಲಿ ಪೆಟ್ರೋಲ್ ತುಂಬಲು ನಿರಾಕರಿಸಿದ್ದಕ್ಕೆ ಗುಂಪೊಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಮನ ಬಂದತೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹತ್ತಾರು ಗೂಂಡಾಗಳು ಇಬ್ಬರು ಬಂಕ್ ಸಿಬ್ಬಂದಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ಇದು ಕೋಪವಲ್ಲ ದೌರ್ಜನ್ಯ ಎಂದು ನೆಟ್ಟಿಗರು ಕರೆದಿದ್ದಾರೆ. ಆ ಸಿಬ್ಬಂದಿ ಊಟಕ್ಕೆಂದು ಢಾಬಾಕ್ಕೆ ಬಂದ ಸಮಯದಲ್ಲಿ ಅವರ ಮೇಲೆ ದಾಳಿ ನಡೆದಿದೆ. ಈ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಅಂಥವರು ಯಾರದ್ದೂ ಭಯವಿಲ್ಲದೆ ಗೂಂಡಾಗಿರಿ ಮುಂದುವರೆಸುತ್ತಾರೆ ಎಂದೂ ಹೇಳಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ವಿದೇಶಿ ಆಟಗಾರರು:
ರಯಾನ್ ರಿಕೆಲ್ಟನ್
ಕ್ವಿಂಟನ್ ಡಿಕಾಕ್
ವಿಲ್ ಜ್ಯಾಕ್ಸ್
ಮಿಚೆಲ್ ಸ್ಯಾಂಟ್ನರ್
ಶೆರ್ಫೇನ್ ರದರ್ಫೋರ್ಡ್
ಅಲ್ಲಾ ಗಫನ್ಝರ್
ಕಾರ್ಬಿನ್ ಬಾಷ್
ಟ್ರೆಂಟ್ ಬೌಲ್ಟ್
ಮುಂಬೈ ಇಂಡಿಯನ್ಸ್ ತಂಡದ 8 ವಿದೇಶಿ ಆಟಗಾರರಲ್ಲಿ ನ್ಯೂಝಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಹಾಗೂ ಇಂಗ್ಲೆಂಡ್ನ ವಿಲ್ ಜ್ಯಾಕ್ಸ್ ಇನ್ನೂ ಸಹ ಮುಂಬೈಗೆ ಆಗಮಿಸಿಲ್ಲ.
ಮಿಚೆಲ್ ಸ್ಯಾಂಟ್ನರ್: ನ್ಯೂಝಿಲೆಂಡ್ನ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ವೈಯುಕ್ತಿಕ ಕಾರಣಗಳಿಂದಾಗಿ ಇನ್ನೂ ಸಹ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಕೆಕೆಆರ್ ವಿರುದ್ದದ ಮೊದಲ ಪಂದ್ಯಕ್ಕೆ ಸ್ಯಾಂಟ್ನರ್ ಅಲಭ್ಯರಾಗಲಿದ್ದಾರೆ.
ವಿಲ್ ಜ್ಯಾಕ್ಸ್: ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಸದ್ಯ ಲಂಡನ್ನಲ್ಲಿದ್ದು, ವೈಯುಕ್ತಿಕ ಕಾರಣಗಳಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಕಾಣಿಸಿಕೊಳ್ಳುವುದಿಲ್ಲ. ಇವರ ಬದಲಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆಲ್ರೌಂಡರ್ ಶೆರ್ಫೇನ್ ರದರ್ಫೋರ್ಡ್ ಹಾಗೂ ಸ್ಪಿನ್ನರ್ ಅಲ್ಲಾ ಗಫನ್ಝರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಬುಮ್ರಾ ಎಂಟ್ರಿ:
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ ಪ್ರೀತ್ ಬುಮ್ರಾ ಮೊದಲ ಪಂದ್ಯಕ್ಕೆ ಲಭ್ಯವಿರುವುದನ್ನು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಖಚಿತಪಡಿಸಿದ್ದಾರೆ. ಬೆಂಗಳೂರಿನ ಎನ್‌ಸಿಎನಲ್ಲಿ (NCA) ಫಿಟ್ನೆಸ್ ತರಬೇತಿ ಮುಗಿಸಿರುವ ಅವರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯಲಿದ್ದಾರೆ.
ಕೊಪ್ಪಳ, ಮಾರ್ಚ್ 29: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವದಂತಿಗಳು ಹಬ್ಬಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಬ್ಯಾರಲ್, ಬಾಟಲ್ ಹಾಗೂ ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ. ಬಂಕ್ ಸಿಬ್ಬಂದಿ ಇಂಧನ ಲಭ್ಯತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮನವಿ ಮಾಡುತ್ತಿದ್ದರೂ, ಬೆಲೆ ಏರಿಕೆ ಅಥವಾ ಪೂರೈಕೆ ವ್ಯತ್ಯಯದ ಭೀತಿಯಿಂದ ಜನರು ಇದಕ್ಕೆ ಕಿವಿಗೊಡುತ್ತಿಲ್ಲ.ಮುಂದೆ ಸಮಸ್ಯೆ ಆಗಬಹುದು ಅಥವಾ ಬೆಲೆ ಹೆಚ್ಚಳ ಆಗಬಹುದು ಎಂಬ ಭೀತಿಯಿಂದ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲ್ ಅಥವಾ ಕ್ಯಾನ್‌ಗಳಲ್ಲಿ ಇಂಧನ ನೀಡಲು ಕಟ್ಟುನಿಟ್ಟಾಗಿ ನಿರಾಕರಿಸಲಾಗಿದ್ದರೂ, ಹಲವೆಡೆ ಜನರು ಮನವೊಲಿಸಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಯಾದ ಕೇವಲ 9 ದಿನಗಳಲ್ಲಿ 700 ಕೋಟಿ ಕ್ಲಬ್ ಸೇರಿದ್ದ ಈ ಚಿತ್ರ, ಈಗ 10ನೇ ದಿನಕ್ಕೆ ಕಾಲಿಡುತ್ತಲೇ ಭಾರತೀಯ ಚಿತ್ರರಂಗದ ಘಟಾನುಘಟಿ ಚಿತ್ರಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ತನ್ನ 10ನೇ ದಿನವಾದ ಶನಿವಾರದಂದು (ಮಾರ್ಚ್ 28) ಬರೋಬ್ಬರಿ 62.85 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಈವರೆಗಿನ ಗಳಿಕೆ 784 ಕೋಟಿ ರೂಪಾಯಿ ಆಗಿದೆ.
ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಶನಿವಾರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. 10ನೇ ದಿನದ ಗಳಿಕೆಯಲ್ಲಿ ಈ ಹಿಂದೆ ‘ಧುರಂಧರ್’ ಮೊದಲ ಭಾಗ (58 ಕೋಟಿ ರೂ.) ಅಗ್ರಸ್ಥಾನದಲ್ಲಿತ್ತು. ಈಗ ಅದರ ದಾಖಲೆಯನ್ನು ‘ಧುರಂಧರ್ 2’ ಅಳಿಸಿಹಾಕಿದೆ. ಅಷ್ಟೇ ಅಲ್ಲದೆ ಪುಷ್ಪ 2, ಬಾಹುಬಲಿ 2, ಛಾವಾ, ಗದರ್ 2, ಸ್ತ್ರೀ 2 ಮತ್ತು ದಂಗಲ್ ಅಂತಹ ಬ್ಲಾಕ್‌ಬಸ್ಟರ್ ಚಿತ್ರಗಳ 10ನೇ ದಿನದ ಕಲೆಕ್ಷನ್ ಅನ್ನು ಕೂಡ ಇದು ಹಿಂದಿಕ್ಕಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಈ ಚಿತ್ರದ ಹವಾ ಜೋರಾಗಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾಗೆ 1,151 ಕೋಟಿ ರೂ. ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಿಂದ ಈವರೆಗೂ 296 ಕೋಟಿ ರೂ. ಬಂದಿದೆ. ಸುಮಾರು 250ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ, ತನ್ನ ವೆಚ್ಚಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಲಾಭ ಮಾಡುವ ಮೂಲಕ ಅಧಿಕೃತವಾಗಿ ಬ್ಲಾಕ್‌ಬಸ್ಟರ್ ಪಟ್ಟ ಅಲಂಕರಿಸಿದೆ.
ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಮತ್ತು ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣವಿರುವ ಈ ಚಿತ್ರವು ಭಾನುವಾರದ (ಮಾರ್ಚ್ 29) ಅಂತ್ಯಕ್ಕೆ 800 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಶೀಘ್ರದಲ್ಲೇ 300 ಕೋಟಿ ಕ್ಲಬ್ ಸೇರುವತ್ತ ಸಿನಿಮಾ ಹೆಜ್ಜೆ ಹಾಕುತ್ತಿದೆ. ಒಟ್ಟಿನಲ್ಲಿ, ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಜೋಡಿ ಬಾಲಿವುಡ್‌ಗೆ ಮತ್ತೆ ಜೀವ ತುಂಬಿದ್ದು, ‘ಧುರಂಧರ್ 2’ ಗಳಿಕೆಯ ನಾಗಾಲೋಟ ಎಲ್ಲಿಗೆ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ರಜನಿಕಾಂತ್, ಅಲ್ಲು ಅರ್ಜುನ್, ರಿಷಬ್ ಶೆಟ್ಟಿ, ಶಿವರಾಜ್ಕುಮಾರ್ ಮುಂತಾದ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾವನ್ನು ಹೊಗಳಿದ್ದಾರೆ. ಇದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ.
IPL 2026: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಫಿಲ್ ಸಾಲ್ಟ್ ಕೂಡ ಒಬ್ಬರು. ಆದರೆ ಸಾಲ್ಟ್ ಈ ಬಾರಿ ಬ್ಯಾಟಿಂಗ್ ಮೂಲಕ ಕೊಡುಗೆ ನೀಡಿರಲಿಲ್ಲ. ಬದಲಾಗಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಇಡೀ ಪಂದ್ಯದ ಚಿತ್ರಣ ಬದಲಿಸಿದ್ದಾರೆ.
ಇದಾಗ್ಯೂ ಈ ಕ್ಯಾಚ್‌ಗಳನ್ನು ಹೊಗಳದೇ ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಸೋಷಿಯಲ್ ಮೀಡಿಯಾದಲ್ಲಿ ಪರ್ಫೆಕ್ಟ್ ಸ್ಟಾರ್ಟ್ ಎಂದು ಪಂದ್ಯದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ನ ಚಿತ್ರ ಇರಲಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ ಫಿಲ್ ಸಾಲ್ಟ್, “Nothing for the catch mastermind? Shame” (ಕ್ಯಾಚ್ ಮಾಸ್ಟರ್‌ಮೈಂಡ್‌ಗೆ ಏನೂ ಇಲ್ವಾ? ನಾಚಿಕೆಗೇಡು) ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ಕೆಲವರು ಸಾಲ್ಟ್ ಡಿಕೆ ಅವರ ಕಾಲೆಳೆದಿದ್ದಾರೆ ಎಂದರೆ, ಇನ್ನೂ ಕೆಲವರು ಅವರ ಫೋಟೋ ಹಂಚಿಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ ಡೇಂಜರಸ್ ಆಗಿ ಕಾಣಿಸಿಕೊಂಡಿದ್ದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಔಟಾಗಿದ್ದು ಫಿಲ್ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ. ಈ ಇಬ್ಬರ ವಿಕೆಟ್ ಪತನದ ಬಳಿಕ ಸನ್ರೈಸರ್ಸ್ ಹೈದರಾಬಾದ್ ತಂಡದ ರನ್ ಗಳಿಕೆ ಕುಂಠಿತವಾಯಿತು. ಇದಾಗ್ಯೂ ಎಸ್ಆರ್ಹೆಚ್ ತಂಡ 20 ಓವರ್ಗಳಲ್ಲಿ 201 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15.4 ಓವರ್ಗಳಲ್ಲಿ 203 ರನ್ಗಳಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ರಾಮನಗರ, ಮಾರ್ಚ್ 29: ಮದ್ಯ ಮಾರಾಟ ವಿಚಾರವಾಗಿ ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ಬೆಂಗಳೂರುದಕ್ಷಿಣ ಜಿಲ್ಲೆ ರಾಮನಗರದಲ್ಲಿ ಬಯಲಾಗಿದೆ. ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು, ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿಮೀರಿದ ಮದ್ಯ ಮಾರುತ್ತಿದ್ದು, ನಿಗಮದ ಸೂಪರ್ ವೈಸರ್ ಮನೆಯಲ್ಲಿ ಇವು ಪತ್ತೆಯಾಗಿದೆ. ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್ ಮದ್ಯ ಕಂಡುಬಂದಿದೆ.
ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ. ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್ಗಳಲ್ಲಿ 20 ಬಾಕ್ಸ್ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.
ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್ ವೈಸರ್ ಸುರೇಶ್ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ. ಘಟನೆ ಮದ್ಯ ಪ್ರಿಯರಿಗೆ ಎಚ್ಚರಿಕೆ ಗಂಟೆ ಎಂಬಂತಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಚಿಕ್ಕಮಗಳೂರು, ಮಾರ್ಚ್ 29: ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌ಆರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿತ್ತು. ಚಿಕ್ಕಮಗಳೂರು ನಗರದಲ್ಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮಳೆಯಿಂದ ಪರದಾಡಿದ ದೃಶ್ಯಗಳು ಕಂಡುಬಂದಿವೆ. ಬಿರುಗಾಳಿ ಮಳೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದಿನ ಏಪ್ರಿಲ್ 4ರವರೆಗೆ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 201 ರನ್ಗಳು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಹುಡುಗರು ಆಡಿದ ರೀತಿ ಮತ್ತು ಎಲ್ಲರೂ ತಂಡಕ್ಕೆ ಬೆಂಬಲ ನೀಡಿದ ರೀತಿ ಸಕಾರಾತ್ಮಕ ಸಂಕೇತವಾಗಿತ್ತು. ಏಕೆಂದರೆ ಇದು ಸೀಸನ್ನ ಮೊದಲ ಪಂದ್ಯ.
ಮೊದಲ ಪಂದ್ಯದಲ್ಲೇ ಎಲ್ಲರೂ ಅತ್ಯುತ್ತುಮ ಕೊಡುಗೆ ನೀಡಿರುವುದು ಪಾಸಿಟಿವ್ ವಿಷಯ. ಅದರಲ್ಲೂ ಚೊಚ್ಚಲ ಪಂದ್ಯವಾಡಿರುವ ಜೇಕಬ್ ಡಫಿ ತನ್ನ ಮೊದಲ ಮ್ಯಾಚ್ನಲ್ಲಿ ಆಡಿದ ರೀತಿ ಮತ್ತು ಅವರು ಬೌಲಿಂಗ್ ಮಾಡಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ಜೇಕಬ್ ಡಫಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳನ್ನು ಕಬಳಿಸಿದ ರೀತಿ, ಅದು ನಮಗೆ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ.
ಇದಾದ ಬಳಿಕ ನಮ್ಮ ಬ್ಯಾಟರ್ಗಳ ಆಕ್ರಮಣಕಾರಿ ಬ್ಯಾಟಿಂಗ್ ಕೂಡ ಅದ್ಭುತವಾಗಿತ್ತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ಆಡಿದ ರೀತಿ, ಇತರ ಬ್ಯಾಟ್ಸ್‌ಮನ್‌ಗಳಿಗೆ ಭದ್ರ ಬುನಾದಿ ಹಾಕಿತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಇಂತಹ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸುತ್ತೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯ ಇನಿಂಗ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಅವರನ್ನು (ಕೊಹ್ಲಿ) ಹೊಗಳಲು ನನ್ನ ಬಳಿ ಪದಗಳಿಲ್ಲ. ಅವರು ಪ್ರತಿ ಬಾರಿ ಆಡುವಾಗ, ವಿಶೇಷವಾಗಿ ಚೇಸಿಂಗ್ ಮಾಡುವಾಗ ನಂಬರ್ ಒನ್ ಬ್ಯಾಟರ್ ಆಗಿ ಆಡುತ್ತಾರೆ. ಅಲ್ಲದೆ ಕೊಹ್ಲಿ ಕೊನೆಯವರೆಗೆ ನಿಂತು ಆಡಿದ ರೀತಿ ಅತ್ಯುತ್ತಮವಾಗಿತ್ತು ಎಂದು ಆರ್ಸಿಬಿ ನಾಯಕ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಫಿಲ್ ಸಾಲ್ಟ್ ಅವರ ಅದ್ಭುತ ಕ್ಯಾಚ್ ನಿಜಕ್ಕೂ ಅತ್ಯದ್ಭುತ! ಆದರೆ ಎಲ್ಲರಿಗೂ ತಿಳಿದಿರುವಂತೆ, ಅವರು ತುಂಬಾ ಒಳ್ಳೆಯ ಫೀಲ್ಡರ್. ಅವರು ಗಾಳಿಯಲ್ಲಿ ಹಾರಿ ಅನೇಕ ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಅದರ ಮುಂದುವರೆದ ಭಾಗ ಇದು.
ಒಟ್ಟಾರೆಯಾಗಿ ಹೇಳುವುದಾದರೆ ಆರ್ಸಿಬಿ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.
ಅಮೆರಿಕ, ಮಾರ್ಚ್ 29: ಬೇರೆ ದೇಶಗಳಲ್ಲಿ ಹಾಗಿರಲಿ ಅಮೆರಿಕ ಜನರೇ ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗುಬಿದ್ದಿದ್ದಾರೆ. ನೋ ಕಿಂಗ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ.ಅಮೆರಿಕದ ಸುಮಾರು 50 ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆಗಳು ನಡೆದವು ಮತ್ತು ಘೋಷಣೆಗಳನ್ನು ಎತ್ತಲಾಯಿತು. ಟ್ರಂಪ್ ಅವರ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇರಾನ್ ವಿರುದ್ಧದ ಯುದ್ಧದ ಬಗ್ಗೆ ಜನರು ಕೋಪಗೊಂಡಿದ್ದಾರೆ. ಅಮೆರಿಕದಾದ್ಯಂತ ಜನರು ನೋ ಕಿಂಗ್ಸ್ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಪ್ರಮುಖ ನಗರಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆದವು. ಸಣ್ಣ ಸಭೆಗಳು ಟ್ರಂಪ್ ಅವರ ನೀತಿಗಳನ್ನು ಟೀಕಿಸಿದವು.
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳು ನಡೆದವು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಬೀಸುತ್ತಾ ಮತ್ತು ನೃತ್ಯ ಮಾಡುವ ಮೂಲಕ ಟ್ರಂಪ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಲು ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಅವರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.
ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯಾವುದು ಮೇಲುಗೈ ಸಾಧಿಸುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಗೊಂದಲ ಮೂಡಿಸಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಧರ್ಮದ ಹಾದಿ ಕಷ್ಟಗಳಿಂದ ಕೂಡಿರುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಸತ್ಯ ಹರಿಶ್ಚಂದ್ರರು ತಮ್ಮ ಸತ್ಯನಿಷ್ಠೆಗಾಗಿ ಎದುರಿಸಿದ ಅಸಂಖ್ಯಾತ ಕಷ್ಟಗಳು, ಶ್ರೀರಾಮಚಂದ್ರರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಸವಾಲುಗಳು, ಮತ್ತು ಧರ್ಮರಾಯರು ತಮ್ಮ ಧರ್ಮಪಾಲನೆಗಾಗಿ ಪಟ್ಟ ಶ್ರಮ ಎಲ್ಲವೂ ಧರ್ಮದ ಮಾರ್ಗ ಸುಗಮವಲ್ಲ ಎಂಬುದನ್ನು ತೋರಿಸುತ್ತವೆ. ಇವರು ಅನುಭವಿಸಿದ ತೊಂದರೆಗಳು ತಾತ್ಕಾಲಿಕವಾಗಿದ್ದರೂ, ಕಟ್ಟ ಕಡೆಯದಾಗಿ ಧರ್ಮಕ್ಕೇ ಜಯವಾಗಿರುವುದು ಸರ್ವವಿದಿತ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಉಕ್ತಿಯಂತೆ, ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮದ ಹಾದಿಯಲ್ಲಿ ಮುನ್ನಡೆದಾಗ ನಾವು ಸಾಕಷ್ಟು ಕಳೆದುಕೊಳ್ಳುವಂತೆ ಅನಿಸಬಹುದು, ಯಾವುದೇ ಸ್ಥಿರತೆ ಇಲ್ಲವೆನಿಸಬಹುದು. ಆದರೆ, ಭಗವಂತನ ದೃಷ್ಟಿ ಸದಾ ಧರ್ಮನಿಷ್ಠರ ಮೇಲಿರುತ್ತದೆ.
ಅಧರ್ಮವು ಕ್ಷಿಪ್ರ ಜಯವನ್ನು ನೀಡಿದರೂ, ಅದು ಅಶಾಶ್ವತ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದವರಿಗೆ ತಕ್ಷಣ ಫಲ ಸಿಗದೆ, ಸುಲಭ ಮಾರ್ಗ ಹಿಡಿದವರಿಗೆ ಅತಿ ಹೆಚ್ಚು ಅಂಕಗಳು ದೊರೆತಂತೆ ಕಾಣಬಹುದು. ಆದರೆ, ಧರ್ಮದ ಮಾರ್ಗವನ್ನು ಅನುಸರಿಸಿ ಪರಿಶ್ರಮ ಪಟ್ಟವರು ಅಂತಿಮವಾಗಿ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅಧರ್ಮದಿಂದ ದೊರೆಯುವ ಜಯವು “ಜಂಕ್ ಫುಡ್” ನಂತೆ. ನಾಲಿಗೆಗೆ ರುಚಿಯಾಗಿದ್ದರೂ, ದೇಹಕ್ಕೆ ಹಾನಿಕಾರಕ. ಅದೇ ರೀತಿ, ಅಧರ್ಮದಿಂದ ದೊರೆಯುವ ಫಲಗಳು ಕ್ಷಣಿಕ ಮತ್ತು ದೀರ್ಘಾವಧಿಯಲ್ಲಿ ದುಷ್ಪರಿಣಾಮಗಳನ್ನು ತರುತ್ತವೆ.
ಶ್ರೀರಾಮಚಂದ್ರನ ಆದರ್ಶಮಯ ಜೀವನ ಮತ್ತು ಪಾಂಡವರು ಐವರು ಎದುರಿಸಿದ ಅಪಾರ ಕಷ್ಟಗಳು, ಕೊನೆಗೆ ಅವರಿಗೆ ದೊರೆತ ವಿಜಯವು ಧರ್ಮದ ಅಂತಿಮ ಜಯಕ್ಕೆ ಸಾಕ್ಷಿ. ರಾಮ ಮತ್ತು ರಾವಣರ ನಡುವಿನ ಯುದ್ಧದಲ್ಲಿ, ಮಹಾಭಕ್ತನಾದ ರಾವಣನು ಅಧರ್ಮದ ಮಾರ್ಗವನ್ನು ಆಯ್ದುಕೊಂಡಾಗ, ಅವನ ಶಕ್ತಿ, ಸಾಮ್ರಾಜ್ಯ ಸಂಪೂರ್ಣವಾಗಿ ನಾಶವಾಯಿತು. ಇದು ಅಧರ್ಮದ ಅಂತ್ಯವನ್ನು ಸಾರಿ ಹೇಳುತ್ತದೆ.
ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಯಾವುದೇ ಕ್ಷೇತ್ರದಲ್ಲಿ, ಅಧರ್ಮದ ಮೂಲಕ ಗಳಿಸಿದ ಯಾವುದೇ ಸಂಪತ್ತು ಅಥವಾ ಅಧಿಕಾರವು ಶಾಶ್ವತವಲ್ಲ. “ಜಾತಸ್ಯ ಮರಣಂ ಧ್ರುವಂ” ಎಂಬ ಸತ್ಯದಂತೆ, ಸಾವು ಯಾರನ್ನೂ ಬಿಡುವುದಿಲ್ಲ. ಅಧರ್ಮದ ಮಾರ್ಗದಲ್ಲಿ ಗಳಿಸಿದ ಎಲ್ಲವೂ ಒಂದು ದಿನ ಪರೀಕ್ಷೆಗೆ ಒಳಪಡುತ್ತದೆ. ಹಂಸ ಕ್ಷೀರ ನ್ಯಾಯದಂತೆ, ಹಾಲನ್ನು ನೀರನಿಂದ ಬೇರ್ಪಡಿಸುವಂತೆ, ಧರ್ಮ ಮತ್ತು ಅಧರ್ಮದ ಫಲಿತಾಂಶಗಳು ಸ್ಪಷ್ಟವಾಗಿ ಬೇರ್ಪಡುತ್ತವೆ. ನಮ್ಮ ಕಷ್ಟದ ಸಮಯದಲ್ಲಿ, ನಮ್ಮ ಧರ್ಮನಿಷ್ಠೆಯ ಪ್ರಮಾಣ ಕಡಿಮೆ ಇದ್ದರೆ, ಅದು ಇನ್ನಷ್ಟು ಸಂಕಟಗಳಿಗೆ ಕಾರಣವಾಗಬಹುದು. ಸೂರ್ಯ, ಪ್ರಕೃತಿ, ಗಾಳಿ ಎಂದಿಗೂ ಬದಲಾಗುವುದಿಲ್ಲ. ಅದೇ ರೀತಿ, ಧರ್ಮದ ಮೂಲ ತತ್ವಗಳು ಶಾಶ್ವತ.
ಆದ್ದರಿಂದ, ಇಂದಿನ ಸವಾಲುಗಳ ಮಧ್ಯೆಯೂ ಧರ್ಮದ ಹಾದಿಯಲ್ಲಿ ಮುನ್ನಡೆಯುವುದು ಅನಿವಾರ್ಯ. ಎಷ್ಟೇ ಕಷ್ಟಗಳು ಎದುರಾದರೂ, ಧರ್ಮದಿಂದ ಜೀವನ ಸಾಗಿಸಿದರೆ, ಅಂತಿಮವಾಗಿ ಜಯ ಧರ್ಮಕ್ಕೇ ಸಿಗುತ್ತದೆ. ಅಧರ್ಮಕ್ಕೆ ಎಂದಿಗೂ ಶಾಶ್ವತ ಜಯ ಸಾಧ್ಯವಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ