All posts by nagaraj11081993

ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯ!

ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ವಿದೇಶಿ ಆಟಗಾರರು:

  • ರಯಾನ್ ರಿಕೆಲ್ಟನ್
  • ಕ್ವಿಂಟನ್ ಡಿಕಾಕ್
  • ವಿಲ್ ಜ್ಯಾಕ್ಸ್​
  • ಮಿಚೆಲ್ ಸ್ಯಾಂಟ್ನರ್
  • ಶೆರ್ಫೇನ್ ರದರ್​ಫೋರ್ಡ್​
  • ಅಲ್ಲಾ ಗಫನ್ಝರ್
  • ಕಾರ್ಬಿನ್ ಬಾಷ್
  • ಟ್ರೆಂಟ್ ಬೌಲ್ಟ್

ಮುಂಬೈ ಇಂಡಿಯನ್ಸ್ ತಂಡದ 8 ವಿದೇಶಿ ಆಟಗಾರರಲ್ಲಿ ನ್ಯೂಝಿಲೆಂಡ್​ನ ಮಿಚೆಲ್ ಸ್ಯಾಂಟ್ನರ್ ಹಾಗೂ ಇಂಗ್ಲೆಂಡ್​ನ ವಿಲ್ ಜ್ಯಾಕ್ಸ್ ಇನ್ನೂ ಸಹ ಮುಂಬೈಗೆ ಆಗಮಿಸಿಲ್ಲ.

  • ಮಿಚೆಲ್ ಸ್ಯಾಂಟ್ನರ್: ನ್ಯೂಝಿಲೆಂಡ್​ನ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ವೈಯುಕ್ತಿಕ ಕಾರಣಗಳಿಂದಾಗಿ ಇನ್ನೂ ಸಹ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಕೆಕೆಆರ್ ವಿರುದ್ದದ ಮೊದಲ ಪಂದ್ಯಕ್ಕೆ ಸ್ಯಾಂಟ್ನರ್ ಅಲಭ್ಯರಾಗಲಿದ್ದಾರೆ.
  • ವಿಲ್ ಜ್ಯಾಕ್ಸ್​: ಇಂಗ್ಲೆಂಡ್ ಆಲ್​ರೌಂಡರ್ ವಿಲ್ ಜ್ಯಾಕ್ಸ್​ ಸದ್ಯ ಲಂಡನ್​ನಲ್ಲಿದ್ದು, ವೈಯುಕ್ತಿಕ ಕಾರಣಗಳಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಕಾಣಿಸಿಕೊಳ್ಳುವುದಿಲ್ಲ. ಇವರ ಬದಲಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಆಲ್​ರೌಂಡರ್ ಶೆರ್ಫೇನ್ ರದರ್​ಫೋರ್ಡ್​ ಹಾಗೂ ಸ್ಪಿನ್ನರ್ ಅಲ್ಲಾ ಗಫನ್ಝರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಬುಮ್ರಾ ಎಂಟ್ರಿ:

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ ಪ್ರೀತ್ ಬುಮ್ರಾ ಮೊದಲ ಪಂದ್ಯಕ್ಕೆ ಲಭ್ಯವಿರುವುದನ್ನು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಖಚಿತಪಡಿಸಿದ್ದಾರೆ. ಬೆಂಗಳೂರಿನ ಎನ್‌ಸಿಎನಲ್ಲಿ (NCA) ಫಿಟ್ನೆಸ್ ತರಬೇತಿ ಮುಗಿಸಿರುವ ಅವರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್‌, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್​ಫೋರ್ಡ್​,​  ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.

ಇದನ್ನೂ ಓದಿ: ಅದ್ಭುತ ಕ್ಯಾಚ್ ಅನ್ನೇ​ ಮರೆತ ಡಿಕೆ: ‘ನಾಚಿಕೆಗೇಡು’ ಎಂದ ಫಿಲ್ ಸಾಲ್ಟ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ.

Source link

ಇಂಧನ ಕೊರತೆ ವದಂತಿ: ಕೊಪ್ಫಳದಲ್ಲಿ ಪೆಟ್ರೋಲ್​​ ತುಂಬಿಸಲು ಬ್ಯಾರಲ್​​ ತಂದ ಜನ!

ಕೊಪ್ಪಳ, ಮಾರ್ಚ್​​ 29: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ವದಂತಿಗಳು ಹಬ್ಬಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಬ್ಯಾರಲ್, ಬಾಟಲ್ ಹಾಗೂ ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ. ಬಂಕ್ ಸಿಬ್ಬಂದಿ ಇಂಧನ ಲಭ್ಯತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮನವಿ ಮಾಡುತ್ತಿದ್ದರೂ, ಬೆಲೆ ಏರಿಕೆ ಅಥವಾ ಪೂರೈಕೆ ವ್ಯತ್ಯಯದ ಭೀತಿಯಿಂದ ಜನರು ಇದಕ್ಕೆ ಕಿವಿಗೊಡುತ್ತಿಲ್ಲ.ಮುಂದೆ ಸಮಸ್ಯೆ ಆಗಬಹುದು ಅಥವಾ ಬೆಲೆ ಹೆಚ್ಚಳ ಆಗಬಹುದು ಎಂಬ ಭೀತಿಯಿಂದ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲ್ ಅಥವಾ ಕ್ಯಾನ್‌ಗಳಲ್ಲಿ ಇಂಧನ ನೀಡಲು ಕಟ್ಟುನಿಟ್ಟಾಗಿ ನಿರಾಕರಿಸಲಾಗಿದ್ದರೂ, ಹಲವೆಡೆ ಜನರು ಮನವೊಲಿಸಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಅಬ್ಬರ: ಭಾರತದಲ್ಲಿ 10 ದಿನಕ್ಕೆ 700 ಕೋಟಿ ರೂಪಾಯಿ ದಾಟಿದ ಕಲೆಕ್ಷನ್

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರತಿದಿನ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಯಾದ ಕೇವಲ 9 ದಿನಗಳಲ್ಲಿ 700 ಕೋಟಿ ಕ್ಲಬ್ ಸೇರಿದ್ದ ಈ ಚಿತ್ರ, ಈಗ 10ನೇ ದಿನಕ್ಕೆ ಕಾಲಿಡುತ್ತಲೇ ಭಾರತೀಯ ಚಿತ್ರರಂಗದ ಘಟಾನುಘಟಿ ಚಿತ್ರಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ತನ್ನ 10ನೇ ದಿನವಾದ ಶನಿವಾರದಂದು (ಮಾರ್ಚ್ 28) ಬರೋಬ್ಬರಿ 62.85 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಈವರೆಗಿನ ಗಳಿಕೆ 784 ಕೋಟಿ ರೂಪಾಯಿ ಆಗಿದೆ.

ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಶನಿವಾರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. 10ನೇ ದಿನದ ಗಳಿಕೆಯಲ್ಲಿ ಈ ಹಿಂದೆ ‘ಧುರಂಧರ್’ ಮೊದಲ ಭಾಗ (58 ಕೋಟಿ ರೂ.) ಅಗ್ರಸ್ಥಾನದಲ್ಲಿತ್ತು. ಈಗ ಅದರ ದಾಖಲೆಯನ್ನು ‘ಧುರಂಧರ್ 2’ ಅಳಿಸಿಹಾಕಿದೆ. ಅಷ್ಟೇ ಅಲ್ಲದೆ ಪುಷ್ಪ 2, ಬಾಹುಬಲಿ 2, ಛಾವಾ, ಗದರ್ 2, ಸ್ತ್ರೀ 2 ಮತ್ತು ದಂಗಲ್ ಅಂತಹ ಬ್ಲಾಕ್‌ಬಸ್ಟರ್ ಚಿತ್ರಗಳ 10ನೇ ದಿನದ ಕಲೆಕ್ಷನ್ ಅನ್ನು ಕೂಡ ಇದು ಹಿಂದಿಕ್ಕಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಈ ಚಿತ್ರದ ಹವಾ ಜೋರಾಗಿದೆ. ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗೆ 1,151 ಕೋಟಿ ರೂ. ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಿಂದ ಈವರೆಗೂ 296 ಕೋಟಿ ರೂ. ಬಂದಿದೆ. ಸುಮಾರು 250ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ, ತನ್ನ ವೆಚ್ಚಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಲಾಭ ಮಾಡುವ ಮೂಲಕ ಅಧಿಕೃತವಾಗಿ ಬ್ಲಾಕ್‌ಬಸ್ಟರ್ ಪಟ್ಟ ಅಲಂಕರಿಸಿದೆ.

ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮತ್ತು ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣವಿರುವ ಈ ಚಿತ್ರವು ಭಾನುವಾರದ (ಮಾರ್ಚ್ 29) ಅಂತ್ಯಕ್ಕೆ 800 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಶೀಘ್ರದಲ್ಲೇ 300 ಕೋಟಿ ಕ್ಲಬ್ ಸೇರುವತ್ತ ಸಿನಿಮಾ ಹೆಜ್ಜೆ ಹಾಕುತ್ತಿದೆ. ಒಟ್ಟಿನಲ್ಲಿ, ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಜೋಡಿ ಬಾಲಿವುಡ್‌ಗೆ ಮತ್ತೆ ಜೀವ ತುಂಬಿದ್ದು, ‘ಧುರಂಧರ್ 2’ ಗಳಿಕೆಯ ನಾಗಾಲೋಟ ಎಲ್ಲಿಗೆ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದನ್ನೂ ಓದಿ: ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ರಜನಿಕಾಂತ್, ಅಲ್ಲು ಅರ್ಜುನ್, ರಿಷಬ್ ಶೆಟ್ಟಿ, ಶಿವರಾಜ್​ಕುಮಾರ್ ಮುಂತಾದ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾವನ್ನು ಹೊಗಳಿದ್ದಾರೆ. ಇದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅದ್ಭುತ ಕ್ಯಾಚ್ ಅನ್ನೇ​ ಮರೆತ ಡಿಕೆ: ‘ನಾಚಿಕೆಗೇಡು’ ಎಂದ ಫಿಲ್ ಸಾಲ್ಟ್

IPL 2026: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಫಿಲ್ ಸಾಲ್ಟ್ ಕೂಡ ಒಬ್ಬರು. ಆದರೆ ಸಾಲ್ಟ್ ಈ ಬಾರಿ ಬ್ಯಾಟಿಂಗ್​ ಮೂಲಕ ಕೊಡುಗೆ ನೀಡಿರಲಿಲ್ಲ. ಬದಲಾಗಿ ಮೂರು ಅದ್ಭುತ ಕ್ಯಾಚ್​ಗಳನ್ನು ಹಿಡಿದು ಇಡೀ ಪಂದ್ಯದ ಚಿತ್ರಣ ಬದಲಿಸಿದ್ದಾರೆ.

ಇದಾಗ್ಯೂ ಈ ಕ್ಯಾಚ್​ಗಳನ್ನು ಹೊಗಳದೇ ಆರ್​ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಸೋಷಿಯಲ್ ಮೀಡಿಯಾದಲ್ಲಿ ಪರ್ಫೆಕ್ಟ್ ಸ್ಟಾರ್ಟ್ ಎಂದು ಪಂದ್ಯದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್​ನ ಚಿತ್ರ ಇರಲಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಫಿಲ್ ಸಾಲ್ಟ್, “Nothing for the catch mastermind? Shame” (ಕ್ಯಾಚ್ ಮಾಸ್ಟರ್‌ಮೈಂಡ್‌ಗೆ ಏನೂ ಇಲ್ವಾ? ನಾಚಿಕೆಗೇಡು) ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ಕೆಲವರು ಸಾಲ್ಟ್ ಡಿಕೆ ಅವರ ಕಾಲೆಳೆದಿದ್ದಾರೆ ಎಂದರೆ, ಇನ್ನೂ ಕೆಲವರು ಅವರ ಫೋಟೋ ಹಂಚಿಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಪಂದ್ಯದಲ್ಲಿ ಡೇಂಜರಸ್ ಆಗಿ ಕಾಣಿಸಿಕೊಂಡಿದ್ದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಔಟಾಗಿದ್ದು ಫಿಲ್ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ. ಈ ಇಬ್ಬರ ವಿಕೆಟ್ ಪತನದ ಬಳಿಕ ಸನ್​ರೈಸರ್ಸ್ ಹೈದರಾಬಾದ್​ ತಂಡದ ರನ್​ ಗಳಿಕೆ ಕುಂಠಿತವಾಯಿತು. ಇದಾಗ್ಯೂ ಎಸ್​ಆರ್​ಹೆಚ್ ತಂಡ 20 ಓವರ್​ಗಳಲ್ಲಿ 201 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15.4 ಓವರ್​ಗಳಲ್ಲಿ 203 ರನ್​ಗಳಿಸುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಎಣ್ಣೆ ಪ್ರಿಯರೇ ಎಚ್ಚರ: ಅಧಿಕಾರಿಗಳ ನೇತೃತ್ವದಲ್ಲೇ ನಡೀತಿದೆ ಅವಧಿ ಮೀರಿದ ಮದ್ಯ ಮಾರಾಟ!

ರಾಮನಗರ, ಮಾರ್ಚ್​​ 29: ಮದ್ಯ ಮಾರಾಟ ವಿಚಾರವಾಗಿ ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಬಯಲಾಗಿದೆ. ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು, ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿಮೀರಿದ ಮದ್ಯ ಮಾರುತ್ತಿದ್ದು, ನಿಗಮದ ಸೂಪರ್ ವೈಸರ್ ಮನೆಯಲ್ಲಿ ಇವು ಪತ್ತೆಯಾಗಿದೆ. ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್​ ಮದ್ಯ ಕಂಡುಬಂದಿದೆ.

ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ. ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್​ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್​ಗಳಲ್ಲಿ 20 ಬಾಕ್ಸ್​ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಬಸ್ ಶೆಲ್ಟರ್ ನಿರ್ಮಾಣಕ್ಕೆ ಜೆಡಿಎಸ್ ಸೇರಿ ಇತರರ ವಿರೋಧ; ಗುದ್ದಲಿ ಪೂಜೆ ಮಾಡದೆ ತೆರಳಿದ ಕಾಂಗ್ರೆಸ್​ ಶಾಸಕ

ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್​ ವೈಸರ್​ ಸುರೇಶ್​ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್​ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ. ಘಟನೆ ಮದ್ಯ ಪ್ರಿಯರಿಗೆ ಎಚ್ಚರಿಕೆ ಗಂಟೆ ಎಂಬಂತಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿರುಗಾಳಿ ಸಹಿತ ವರುಣಾರ್ಭಟಕ್ಕೆ ನಲುಗಿದ ಮಲೆನಾಡು!

ಚಿಕ್ಕಮಗಳೂರು, ಮಾರ್ಚ್​ 29: ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌ಆರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿತ್ತು. ಚಿಕ್ಕಮಗಳೂರು ನಗರದಲ್ಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮಳೆಯಿಂದ ಪರದಾಡಿದ ದೃಶ್ಯಗಳು ಕಂಡುಬಂದಿವೆ. ಬಿರುಗಾಳಿ ಮಳೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದಿನ ಏಪ್ರಿಲ್ 4ರವರೆಗೆ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Rajat Patidar: ಅವರನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 201 ರನ್​ಗಳು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು  ವ್ಯಕ್ತಪಡಿಸಿದ್ದಾರೆ. ನಮ್ಮ ಹುಡುಗರು ಆಡಿದ ರೀತಿ ಮತ್ತು ಎಲ್ಲರೂ ತಂಡಕ್ಕೆ ಬೆಂಬಲ ನೀಡಿದ ರೀತಿ ಸಕಾರಾತ್ಮಕ ಸಂಕೇತವಾಗಿತ್ತು. ಏಕೆಂದರೆ ಇದು ಸೀಸನ್​ನ ಮೊದಲ ಪಂದ್ಯ.

ಮೊದಲ ಪಂದ್ಯದಲ್ಲೇ ಎಲ್ಲರೂ ಅತ್ಯುತ್ತುಮ ಕೊಡುಗೆ ನೀಡಿರುವುದು ಪಾಸಿಟಿವ್ ವಿಷಯ. ಅದರಲ್ಲೂ ಚೊಚ್ಚಲ ಪಂದ್ಯವಾಡಿರುವ ಜೇಕಬ್ ಡಫಿ ತನ್ನ ಮೊದಲ ಮ್ಯಾಚ್​ನಲ್ಲಿ ಆಡಿದ ರೀತಿ ಮತ್ತು ಅವರು ಬೌಲಿಂಗ್ ಮಾಡಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ಜೇಕಬ್ ಡಫಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳನ್ನು ಕಬಳಿಸಿದ ರೀತಿ, ಅದು ನಮಗೆ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ.

ಇದಾದ ಬಳಿಕ ನಮ್ಮ ಬ್ಯಾಟರ್​ಗಳ ಆಕ್ರಮಣಕಾರಿ ಬ್ಯಾಟಿಂಗ್ ಕೂಡ ಅದ್ಭುತವಾಗಿತ್ತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ಆಡಿದ ರೀತಿ, ಇತರ ಬ್ಯಾಟ್ಸ್‌ಮನ್‌ಗಳಿಗೆ ಭದ್ರ ಬುನಾದಿ ಹಾಕಿತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಇಂತಹ ಆಕ್ರಮಣಕಾರಿ ಬ್ಯಾಟಿಂಗ್​ ಅನ್ನು ಮುಂದುವರಿಸುತ್ತೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿಯ ಇನಿಂಗ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಅವರನ್ನು (ಕೊಹ್ಲಿ) ಹೊಗಳಲು ನನ್ನ ಬಳಿ ಪದಗಳಿಲ್ಲ. ಅವರು ಪ್ರತಿ ಬಾರಿ ಆಡುವಾಗ, ವಿಶೇಷವಾಗಿ ಚೇಸಿಂಗ್ ಮಾಡುವಾಗ ನಂಬರ್ ಒನ್ ಬ್ಯಾಟರ್ ಆಗಿ ಆಡುತ್ತಾರೆ. ಅಲ್ಲದೆ ಕೊಹ್ಲಿ ಕೊನೆಯವರೆಗೆ ನಿಂತು ಆಡಿದ ರೀತಿ ಅತ್ಯುತ್ತಮವಾಗಿತ್ತು ಎಂದು ಆರ್​ಸಿಬಿ ನಾಯಕ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಫಿಲ್ ಸಾಲ್ಟ್ ಅವರ ಅದ್ಭುತ ಕ್ಯಾಚ್ ನಿಜಕ್ಕೂ ಅತ್ಯದ್ಭುತ! ಆದರೆ ಎಲ್ಲರಿಗೂ ತಿಳಿದಿರುವಂತೆ, ಅವರು ತುಂಬಾ ಒಳ್ಳೆಯ ಫೀಲ್ಡರ್. ಅವರು ಗಾಳಿಯಲ್ಲಿ ಹಾರಿ ಅನೇಕ ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಅದರ ಮುಂದುವರೆದ ಭಾಗ ಇದು.

ಇದನ್ನೂ ಓದಿ: ಫಿಲ್ ಸಾಲ್ಟ್ ‘ಕ್ಯಾಚ್’ ಬಗ್ಗೆ ಸುನಿಲ್ ಗವಾಸ್ಕರ್ ಅಪಸ್ವರ

ಒಟ್ಟಾರೆಯಾಗಿ ಹೇಳುವುದಾದರೆ ಆರ್​ಸಿಬಿ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್​ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.

 

Source link

US No Kings Protests: ಡೊನಾಲ್ಡ್​ ಟ್ರಂಪ್ ವಿರುದ್ಧವೇ ತಿರುಗಿಬಿದ್ದ ಅಮೆರಿಕ ಜನ, ನೋ ಕಿಂಗ್ಸ್​ ಪ್ರತಿಭಟನೆ

ಅಮೆರಿಕ, ಮಾರ್ಚ್​ 29: ಬೇರೆ ದೇಶಗಳಲ್ಲಿ ಹಾಗಿರಲಿ ಅಮೆರಿಕ ಜನರೇ ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗುಬಿದ್ದಿದ್ದಾರೆ. ನೋ ಕಿಂಗ್ಸ್​ ಪ್ರತಿಭಟನೆ ನಡೆಸುತ್ತಿದ್ದಾರೆ.ಅಮೆರಿಕದ ಸುಮಾರು 50 ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆಗಳು ನಡೆದವು ಮತ್ತು ಘೋಷಣೆಗಳನ್ನು ಎತ್ತಲಾಯಿತು. ಟ್ರಂಪ್ ಅವರ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇರಾನ್ ವಿರುದ್ಧದ ಯುದ್ಧದ ಬಗ್ಗೆ ಜನರು ಕೋಪಗೊಂಡಿದ್ದಾರೆ. ಅಮೆರಿಕದಾದ್ಯಂತ ಜನರು ನೋ ಕಿಂಗ್ಸ್ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಪ್ರಮುಖ ನಗರಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆದವು. ಸಣ್ಣ ಸಭೆಗಳು ಟ್ರಂಪ್ ಅವರ ನೀತಿಗಳನ್ನು ಟೀಕಿಸಿದವು.

ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳು ನಡೆದವು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಬೀಸುತ್ತಾ ಮತ್ತು ನೃತ್ಯ ಮಾಡುವ ಮೂಲಕ ಟ್ರಂಪ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಲು ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಅವರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Dharma and Adharma: ಧರ್ಮದ ಹಾದಿಯಲ್ಲಿದ್ದವರಿಗೆ ಕಷ್ಟಗಳು ಎದುರಾಗುವುದೇಕೆ? ಸನಾತನ ತತ್ವಗಳು ಹೇಳುವುದೇನು?

ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯಾವುದು ಮೇಲುಗೈ ಸಾಧಿಸುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಗೊಂದಲ ಮೂಡಿಸಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಧರ್ಮದ ಹಾದಿ ಕಷ್ಟಗಳಿಂದ ಕೂಡಿರುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಸತ್ಯ ಹರಿಶ್ಚಂದ್ರರು ತಮ್ಮ ಸತ್ಯನಿಷ್ಠೆಗಾಗಿ ಎದುರಿಸಿದ ಅಸಂಖ್ಯಾತ ಕಷ್ಟಗಳು, ಶ್ರೀರಾಮಚಂದ್ರರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಸವಾಲುಗಳು, ಮತ್ತು ಧರ್ಮರಾಯರು ತಮ್ಮ ಧರ್ಮಪಾಲನೆಗಾಗಿ ಪಟ್ಟ ಶ್ರಮ ಎಲ್ಲವೂ ಧರ್ಮದ ಮಾರ್ಗ ಸುಗಮವಲ್ಲ ಎಂಬುದನ್ನು ತೋರಿಸುತ್ತವೆ. ಇವರು ಅನುಭವಿಸಿದ ತೊಂದರೆಗಳು ತಾತ್ಕಾಲಿಕವಾಗಿದ್ದರೂ, ಕಟ್ಟ ಕಡೆಯದಾಗಿ ಧರ್ಮಕ್ಕೇ ಜಯವಾಗಿರುವುದು ಸರ್ವವಿದಿತ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಉಕ್ತಿಯಂತೆ, ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮದ ಹಾದಿಯಲ್ಲಿ ಮುನ್ನಡೆದಾಗ ನಾವು ಸಾಕಷ್ಟು ಕಳೆದುಕೊಳ್ಳುವಂತೆ ಅನಿಸಬಹುದು, ಯಾವುದೇ ಸ್ಥಿರತೆ ಇಲ್ಲವೆನಿಸಬಹುದು. ಆದರೆ, ಭಗವಂತನ ದೃಷ್ಟಿ ಸದಾ ಧರ್ಮನಿಷ್ಠರ ಮೇಲಿರುತ್ತದೆ.

ಅಧರ್ಮವು ಕ್ಷಿಪ್ರ ಜಯವನ್ನು ನೀಡಿದರೂ, ಅದು ಅಶಾಶ್ವತ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದವರಿಗೆ ತಕ್ಷಣ ಫಲ ಸಿಗದೆ, ಸುಲಭ ಮಾರ್ಗ ಹಿಡಿದವರಿಗೆ ಅತಿ ಹೆಚ್ಚು ಅಂಕಗಳು ದೊರೆತಂತೆ ಕಾಣಬಹುದು. ಆದರೆ, ಧರ್ಮದ ಮಾರ್ಗವನ್ನು ಅನುಸರಿಸಿ ಪರಿಶ್ರಮ ಪಟ್ಟವರು ಅಂತಿಮವಾಗಿ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅಧರ್ಮದಿಂದ ದೊರೆಯುವ ಜಯವು “ಜಂಕ್ ಫುಡ್” ನಂತೆ. ನಾಲಿಗೆಗೆ ರುಚಿಯಾಗಿದ್ದರೂ, ದೇಹಕ್ಕೆ ಹಾನಿಕಾರಕ. ಅದೇ ರೀತಿ, ಅಧರ್ಮದಿಂದ ದೊರೆಯುವ ಫಲಗಳು ಕ್ಷಣಿಕ ಮತ್ತು ದೀರ್ಘಾವಧಿಯಲ್ಲಿ ದುಷ್ಪರಿಣಾಮಗಳನ್ನು ತರುತ್ತವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಶ್ರೀರಾಮಚಂದ್ರನ ಆದರ್ಶಮಯ ಜೀವನ ಮತ್ತು ಪಾಂಡವರು ಐವರು ಎದುರಿಸಿದ ಅಪಾರ ಕಷ್ಟಗಳು, ಕೊನೆಗೆ ಅವರಿಗೆ ದೊರೆತ ವಿಜಯವು ಧರ್ಮದ ಅಂತಿಮ ಜಯಕ್ಕೆ ಸಾಕ್ಷಿ. ರಾಮ ಮತ್ತು ರಾವಣರ ನಡುವಿನ ಯುದ್ಧದಲ್ಲಿ, ಮಹಾಭಕ್ತನಾದ ರಾವಣನು ಅಧರ್ಮದ ಮಾರ್ಗವನ್ನು ಆಯ್ದುಕೊಂಡಾಗ, ಅವನ ಶಕ್ತಿ, ಸಾಮ್ರಾಜ್ಯ ಸಂಪೂರ್ಣವಾಗಿ ನಾಶವಾಯಿತು. ಇದು ಅಧರ್ಮದ ಅಂತ್ಯವನ್ನು ಸಾರಿ ಹೇಳುತ್ತದೆ.

ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಯಾವುದೇ ಕ್ಷೇತ್ರದಲ್ಲಿ, ಅಧರ್ಮದ ಮೂಲಕ ಗಳಿಸಿದ ಯಾವುದೇ ಸಂಪತ್ತು ಅಥವಾ ಅಧಿಕಾರವು ಶಾಶ್ವತವಲ್ಲ. “ಜಾತಸ್ಯ ಮರಣಂ ಧ್ರುವಂ” ಎಂಬ ಸತ್ಯದಂತೆ, ಸಾವು ಯಾರನ್ನೂ ಬಿಡುವುದಿಲ್ಲ. ಅಧರ್ಮದ ಮಾರ್ಗದಲ್ಲಿ ಗಳಿಸಿದ ಎಲ್ಲವೂ ಒಂದು ದಿನ ಪರೀಕ್ಷೆಗೆ ಒಳಪಡುತ್ತದೆ. ಹಂಸ ಕ್ಷೀರ ನ್ಯಾಯದಂತೆ, ಹಾಲನ್ನು ನೀರನಿಂದ ಬೇರ್ಪಡಿಸುವಂತೆ, ಧರ್ಮ ಮತ್ತು ಅಧರ್ಮದ ಫಲಿತಾಂಶಗಳು ಸ್ಪಷ್ಟವಾಗಿ ಬೇರ್ಪಡುತ್ತವೆ. ನಮ್ಮ ಕಷ್ಟದ ಸಮಯದಲ್ಲಿ, ನಮ್ಮ ಧರ್ಮನಿಷ್ಠೆಯ ಪ್ರಮಾಣ ಕಡಿಮೆ ಇದ್ದರೆ, ಅದು ಇನ್ನಷ್ಟು ಸಂಕಟಗಳಿಗೆ ಕಾರಣವಾಗಬಹುದು. ಸೂರ್ಯ, ಪ್ರಕೃತಿ, ಗಾಳಿ ಎಂದಿಗೂ ಬದಲಾಗುವುದಿಲ್ಲ. ಅದೇ ರೀತಿ, ಧರ್ಮದ ಮೂಲ ತತ್ವಗಳು ಶಾಶ್ವತ.

ಆದ್ದರಿಂದ, ಇಂದಿನ ಸವಾಲುಗಳ ಮಧ್ಯೆಯೂ ಧರ್ಮದ ಹಾದಿಯಲ್ಲಿ ಮುನ್ನಡೆಯುವುದು ಅನಿವಾರ್ಯ. ಎಷ್ಟೇ ಕಷ್ಟಗಳು ಎದುರಾದರೂ, ಧರ್ಮದಿಂದ ಜೀವನ ಸಾಗಿಸಿದರೆ, ಅಂತಿಮವಾಗಿ ಜಯ ಧರ್ಮಕ್ಕೇ ಸಿಗುತ್ತದೆ. ಅಧರ್ಮಕ್ಕೆ ಎಂದಿಗೂ ಶಾಶ್ವತ ಜಯ ಸಾಧ್ಯವಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Astrological Guide: ದೋಷ ನಿವಾರಣಾ ಹೋಮ ಮನೆಯಲ್ಲಿ ಮಾಡಿಸಬಾರದು ಯಾಕೆ? ತಜ್ಞರ ಸಲಹೆ ಇಲ್ಲಿದೆ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಂಕಷ್ಟಗಳು, ಕಷ್ಟಗಳು, ಸಮಸ್ಯೆಗಳು ಎದುರಾಗುವುದು ಸಹಜ. ಕೆಲವೊಮ್ಮೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾಡೇಸಾತಿ, ಅರ್ಧಾಷ್ಟಮ, ಅಷ್ಟಮದಂತಹ ಗ್ರಹಗತಿಗಳು, ಕರ್ಮ ಫಲಗಳು ಅಥವಾ ವೈಫಲ್ಯಗಳು ನಮ್ಮನ್ನು ಕಾಡಬಹುದು. ಇಂತಹ ಸಂದರ್ಭಗಳಲ್ಲಿ, ನಾವು ಸಾಮಾನ್ಯವಾಗಿ ದೈವಿಕ ಕಾರ್ಯಗಳ ಮೊರೆ ಹೋಗುತ್ತೇವೆ. ಹೋಮ, ಹವನ, ಪೂಜೆಗಳು ಅಥವಾ ದೇವಸ್ಥಾನಗಳಿಗೆ ಸಹಾಯ ಮಾಡುವಂತಹ ಧರ್ಮ ಕಾರ್ಯಗಳಲ್ಲಿ ಭಾಗಿಯಾಗುವ ಮನೋಭಾವನೆ ಪ್ರತಿಯೊಬ್ಬರಿಗೂ ಮೂಡುತ್ತದೆ.

ಆದರೆ, ಇಲ್ಲಿ ಒಂದು ಮುಖ್ಯ ಪ್ರಶ್ನೆ ಉದ್ಭವಿಸುತ್ತದೆ: ಹೋಮಗಳನ್ನು ಮನೆಯಲ್ಲಿ ಮಾಡಿಸುವುದು ಶ್ರೇಷ್ಠವೇ ಅಥವಾ ದೇವಸ್ಥಾನಗಳಲ್ಲಿ ಮಾಡಿಸುವುದು ಉತ್ತಮವೇ? ಈ ವಿಚಾರವಾಗಿ ಅನೇಕರಿಗೆ ಗೊಂದಲಗಳಿರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಯಾವುದೇ ಹೋಮ ಹವನಗಳನ್ನು ಶ್ರೇಯಸ್ಸಿಗಾಗಿ, ಅಭಿವೃದ್ಧಿಗಾಗಿ, ಆರೋಗ್ಯಕ್ಕಾಗಿ ಅಥವಾ ಸಮೃದ್ಧಿಗಾಗಿ ಮಾಡಿಸಿಕೊಳ್ಳುವುದಾದರೆ, ಅವುಗಳನ್ನು ಮನೆಯಲ್ಲಿ ಮಾಡಿಸಿಕೊಳ್ಳುವುದು ಶ್ರೇಷ್ಠ. ಉದಾಹರಣೆಗೆ, ಮನೆಗಳಲ್ಲಿ ವಾಸ್ತು ಪೂಜೆ, ಗಣಹೋಮ, ಸತ್ಯನಾರಾಯಣ ಸ್ವಾಮಿ ಹೋಮಗಳನ್ನು ಮಾಡಿಸಿಕೊಳ್ಳಬಹುದು. ಇವು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ ಮತ್ತು ಅಭಿವೃದ್ಧಿಗೆ ಪೂರಕವಾಗಿರುತ್ತವೆ.

ಆದರೆ, ದೋಷ ನಿವಾರಣಾ ಹೋಮಗಳ ವಿಷಯದಲ್ಲಿ ಇದು ಭಿನ್ನವಾಗಿರುತ್ತದೆ. ನಮಗೆ ಸರ್ಪದೋಷ, ಆರೋಗ್ಯದ ತೊಂದರೆಗಳು, ಮೃತ್ಯುವಿನ ಕಾಟ ಅಥವಾ ಯಾವುದೇ ತೀವ್ರವಾದ ಅನಾರೋಗ್ಯ ಕಾಡುತ್ತಿರುವಂತಹ ಸಂದರ್ಭಗಳಲ್ಲಿ, ದೋಷ ಹೋಮಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡಿಸುವುದು ತುಂಬಾನೇ ಒಳ್ಳೆಯದು. ಇದಕ್ಕೆ ಹಲವಾರು ಕಾರಣಗಳಿವೆ.

ಎಲ್ಲಾ ಹೋಮಗಳನ್ನು ಮನೆಯಲ್ಲಿ ಮಾಡಲು ಸೂಕ್ತವಲ್ಲ. ಮನೆಗಳಲ್ಲಿ ಹೋಮ ಮಾಡಿದರೆ, ಅದಕ್ಕೆ ಅದರದೇ ಆದ ವಿಧಿವಿಧಾನಗಳು ಮತ್ತು ಪವಿತ್ರತೆಯ ನಿರ್ವಹಣೆ ಅಗತ್ಯವಿರುತ್ತದೆ. ಆದರೆ, ದೇವಸ್ಥಾನಗಳಲ್ಲಿ ಈ ಶುದ್ಧತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲಾಗುತ್ತದೆ. ಪ್ರತಿನಿತ್ಯವೂ ಬೆಳಗಿನ ಬ್ರಾಹ್ಮೀ ಮುಹೂರ್ತ, ಅಭಿಜಿತ್ ಮುಹೂರ್ತ, ಗೋದೂಳಿ ಮುಹೂರ್ತಗಳಲ್ಲಿ ವಿಶೇಷವಾದ ಪೂಜೆಗಳು ಮತ್ತು ಅಭಿಷೇಕಗಳು ನಡೆಯುತ್ತವೆ. ಮಂತ್ರಗಳ ಮೂಲಕ ದೇವಾಲಯದ ಪರಿಸರವನ್ನು ಶುದ್ಧೀಕರಿಸಲಾಗಿರುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ದೇವಸ್ಥಾನಗಳಲ್ಲಿ ದೋಷ ಹೋಮಗಳಿಗೆಂದೇ ಮೀಸಲಾದ ಸ್ಥಳಗಳಿರುತ್ತವೆ. ಉದಾಹರಣೆಗೆ, ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ಕಾಳಹಸ್ತಿ ಮುಂತಾದ ಕ್ಷೇತ್ರಗಳಲ್ಲಿ ಸರ್ಪದೋಷ ಅಥವಾ ಇನ್ನಿತರ ದೋಷಗಳ ನಿವಾರಣೆಗಾಗಿ ವಿಶೇಷ ವ್ಯವಸ್ಥೆಗಳಿವೆ. ಸಾಕಷ್ಟು ಕ್ಷೇತ್ರಗಳಲ್ಲಿ ಇಂತಹ ದೋಷ ಹೋಮಗಳನ್ನು ಮಾಡಿಸಿಕೊಳ್ಳಲು ನಿರ್ದಿಷ್ಟ ಜಾಗಗಳನ್ನು ಗುರುತಿಸಿರುತ್ತಾರೆ. ಆದ್ದರಿಂದ, ಕೇವಲ ಹಣವಿದೆ, ಐಶ್ವರ್ಯವಿದೆ, ಮನೆಯಲ್ಲಿ ದೊಡ್ಡ ಜಾಗವಿದೆ ಎಂಬ ಕಾರಣಕ್ಕೆ ದೋಷ ಹೋಮಗಳನ್ನು ಮನೆಯಲ್ಲಿ ಮಾಡಿಸಿಕೊಳ್ಳುವುದು ಅಷ್ಟು ಶುಭಕರವಲ್ಲ.

ದೇವಸ್ಥಾನಗಳಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳು ನೆಲೆಸಿರುತ್ತವೆ. ಶುದ್ಧತೆಗೆ ಅಲ್ಲಿ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಮನೆಗಳಲ್ಲಿ ಅಂತಹ ಶುದ್ಧತೆಯನ್ನು ಸದಾ ಕಾಯ್ದುಕೊಳ್ಳುವುದು ಕಷ್ಟಕರವಾಗಬಹುದು. ಅಲ್ಲದೆ, ದೇವಾಲಯದಲ್ಲಿ ಅರ್ಚಕರು ಮತ್ತು ಪೂಜೆಗೆ ಬೇಕಾದ ಸಮಸ್ತ ವಸ್ತುಗಳು ಸುಲಭವಾಗಿ ಲಭ್ಯವಿರುತ್ತವೆ. ದೋಷ ಹೋಮಗಳು, ಗ್ರಹದೋಷ ಶಾಂತಿ ಪೂಜೆಗಳು ಇತ್ಯಾದಿಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡಿಸಿಕೊಳ್ಳುವುದು ಹೆಚ್ಚು ಸಮರ್ಪಕ. ನವಗ್ರಹ ಹೋಮದಂತಹ ದೋಷ ಸಂಬಂಧಿ ಹೋಮಗಳನ್ನು ಕೂಡ ಮನೆಯಲ್ಲಿ ಮಾಡಿಕೊಳ್ಳಬಾರದು, ಬದಲಾಗಿ ದೇವಸ್ಥಾನಗಳಲ್ಲಿ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ, ಮನೆಗಳಲ್ಲಿ ಕೆಲವೊಂದು ಸೂತಕಗಳು ಇರಬಹುದು ಅಥವಾ ಮನೆಯ ಸುತ್ತಲು ನಕಾರಾತ್ಮಕ ಶಕ್ತಿಗಳು ಓಡಾಡುವ ಸಾಧ್ಯತೆ ಇರುತ್ತದೆ.

ಹಾಗಾಗಿ, ಮನೆಯಲ್ಲಿ ಯಾವುದೇ ಅಭಿವೃದ್ಧಿ ಹೋಮಗಳನ್ನು ಮಾಡಿಸಿಕೊಳ್ಳಿ, ಆದರೆ ದೋಷ ಹೋಮಗಳನ್ನು ದೇವಸ್ಥಾನಗಳಲ್ಲಿ ಮಾಡಿಸಿಕೊಳ್ಳಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link