All posts by nagaraj11081993

Spiritual and Mental Peace: ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರ ಸೇರಿಸಿ; ಪ್ರಯೋಜನ ಸಾಕಷ್ಟಿವೆ! – Kannada News

ಭಾರತೀಯ ಸಂಪ್ರದಾಯಗಳಲ್ಲಿ ಕರ್ಪೂರImage Credit source: Pinterest

ಭಾರತೀಯ ಸಂಪ್ರದಾಯಗಳಲ್ಲಿ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ. ಪೂಜೆ-ಪುನಸ್ಕಾರಗಳಲ್ಲಿ ಮಾತ್ರವಲ್ಲದೆ, ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರವನ್ನು ಸೇರಿಸಿ ಸ್ನಾನ ಮಾಡುವ ಪದ್ಧತಿಯೂ ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕರ್ಪೂರವು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ಹಾಗೂ ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದರ ಸುವಾಸನೆಯು ವಾತಾವರಣವನ್ನು ಶುದ್ಧೀಕರಿಸುವುದರ ಜೊತೆಗೆ ಮಾನಸಿಕ ಚೈತನ್ಯವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ.

ದುಷ್ಟ ಕಣ್ಣಿನ ಪರಿಣಾಮದಿಂದ ರಕ್ಷಣೆ:

ಜ್ಯೋತಿಷ್ಯದ ಪ್ರಕಾರ, ಕರ್ಪೂರವು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುಷ್ಟ ಕಣ್ಣು ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ.

ಮಾನಸಿಕ ಒತ್ತಡ ನಿವಾರಣೆ:

ಇಂದಿನ ವೇಗದ ಜೀವನದಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿವೆ. ಕರ್ಪೂರದ ಸುವಾಸನೆಯು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ ಎಂಬ ನಂಬಿಕೆ ಇದೆ.

ಆಧ್ಯಾತ್ಮಿಕ ಶುದ್ಧೀಕರಣ:

ಕರ್ಪೂರವನ್ನು ಆಧ್ಯಾತ್ಮಿಕ ಶುದ್ಧತೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕರ್ಪೂರ ಸ್ನಾನವು ಆಂತರಿಕ ಶಾಂತಿಯನ್ನು ಹೆಚ್ಚಿಸಿ, ಆಧ್ಯಾತ್ಮಿಕ ಅಡೆತಡೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗುತ್ತದೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯ ಸುತ್ತಲಿನ ಶಕ್ತಿ ಕ್ಷೇತ್ರ (Aura) ಶುದ್ಧೀಕರಣಗೊಳ್ಳುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ರಾಹು-ಕೇತು ದೋಷಗಳ ಪರಿಣಾಮ ಕಡಿಮೆಯಾಗುತ್ತದೆಯೇ?

ಜ್ಯೋತಿಷ್ಯ ತಜ್ಞರ ಅಭಿಪ್ರಾಯದಂತೆ, ಕರ್ಪೂರ ಸ್ನಾನವು ರಾಹು ಮತ್ತು ಕೇತುವಿನ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಹಾಯಕವಾಗಬಹುದು ಎಂಬ ನಂಬಿಕೆ ಇದೆ. ಇದು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಹುಣ್ಣಿಮೆ ಮತ್ತು ಅಮಾವಾಸ್ಯೆಯಲ್ಲಿ ವಿಶೇಷ ಮಹತ್ವ:

ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಳೆಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಹೊಸ ಆರಂಭಗಳಿಗೆ ದಾರಿ ಸಿಗುತ್ತದೆ ಎಂದು ಅನೇಕರು ನಂಬುತ್ತಾರೆ. ಈ ದಿನಗಳಲ್ಲಿ ಇದರ ಆಧ್ಯಾತ್ಮಿಕ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಕರ್ಪೂರ ಸ್ನಾನವನ್ನು ಹೇಗೆ ಮಾಡಬೇಕು?

ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರ ಪುಡಿಯನ್ನು ಸೇರಿಸಿ ಸಾಮಾನ್ಯವಾಗಿ ಸ್ನಾನ ಮಾಡಬಹುದು. ಆದರೆ ಕರ್ಪೂರ ಬೆರೆಸಿದ ನೀರು ಕಣ್ಣಿಗೆ ನೇರವಾಗಿ ತಾಗದಂತೆ ಎಚ್ಚರಿಕೆ ವಹಿಸಬೇಕು. ಸೂಕ್ಷ್ಮ ಚರ್ಮ ಹೊಂದಿರುವವರು ಅಥವಾ ಅಲರ್ಜಿ ಸಮಸ್ಯೆ ಇರುವವರು ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್​ ಕೇಳುವ ನೆಪದಲ್ಲಿ ಯುವಕರ ಮೊಬೈಲ್ ದೋಚುತ್ತಿದ್ದ ಯುವತಿ ಸಿಕ್ಕಿಬಿದ್ಲು – Kannada News

ಕಳ್ಳಿಯ ಹಿಡಿದ ವ್ಯಕ್ತಿImage Credit source: ABP LIVE

ಜೈಪುರ, ಜೂನ್ 04: ಲಿಫ್ಟ್​ ಕೇಳುವ ನೆಪದಲ್ಲಿ ಯುವಕರ (Mobile) ದೋಚುತ್ತಿದ್ದ ಯುವತಿ ಸಿಕ್ಕಿಬಿದ್ದಿರುವ ಘಟನೆ ಜೈಪುರದಲ್ಲಿ ನಡೆದಿದೆ. ಯುವಕನೊಬ್ಬನ ಜಾಣ್ಮೆಯಿಂದಾಗಿ ಮೊಬೈಲ್ ಫೋನ್ ಕಳ್ಳತನದ ಯತ್ನವೊಂದು ಯಶಸ್ವಿಯಾಗಿ ವಿಫಲಗೊಂಡಿದೆ. ಅಪರಿಚಿತರಿಗೆ ಸಹಾಯ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸುವ ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ವೈರಲ್ ಆಗಿರುವ ವೀಡಿಯೊದ ಪ್ರಕಾರ, ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಯುವಕನೊಬ್ಬನಿಗೆ ಹುಡುಗಿಯೊಬ್ಬಳು ಲಿಫ್ಟ್ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದಾಳೆ. ಯುವಕನು ಆಕೆಗೆ ಸಹಾಯ ಮಾಡಲು ಮುಂದಾದಾಗ, ಆಕೆ ಅತ್ಯಂತ ಚಾಣಾಕ್ಷತನದಿಂದ ಯುವಕನ ಮೊಬೈಲ್ ಫೋನ್ ಕಸಿದುಕೊಂಡು ಓಡಿಹೋಗಲು ಯತ್ನಿಸಿದ್ದಾಳೆ.

ತಕ್ಷಣವೇ ಅಲರ್ಟ್ ಆದ ಯುವಕ, ಆಕೆ ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಆಕೆ ಬಿಡಿಸಿಕೊಳ್ಳಲು ಗದ್ದಲ ಸೃಷ್ಟಿಸಿ, ಕ್ಯಾಮೆರಾದಿಂದ ಮುಖ ಮರೆಮಾಡಲು ಯತ್ನಿಸಿದರೂ ಯುವಕ ಧೈರ್ಯ ಕಳೆದುಕೊಳ್ಳದೆ ಸಾರ್ವಜನಿಕರ ಸಹಾಯ ಕೋರಿದ್ದಾನೆ.

ಮತ್ತಷ್ಟು ಓದಿ: ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ರಸ್ತೆಯ ಮಧ್ಯೆ ಗದ್ದಲ ಉಂಟಾಗುತ್ತಿದ್ದಂತೆ ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ತಕ್ಷಣವೇ ಅಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಕೆಲವರು ಇಡೀ ಘಟನೆಯನ್ನು ಪಾರದರ್ಶಕತೆಗಾಗಿ ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಪೊಲೀಸರಿಗೆ ನಿಖರ ಮಾಹಿತಿ ನೀಡಲು ಸಜ್ಜಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪರಿಚಿತರಿಗೆ ರಸ್ತೆಯಲ್ಲಿ ಸಹಾಯ ಮಾಡುವಾಗ ಕುರುಡಾಗಿ ನಂಬದೆ, ಸ್ವಲ್ಪ ಜಾಗರೂಕರಾಗಿರಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ವೈರಲ್ ವಿಡಿಯೋಗಳು ಇಡೀ ಕಥೆಯನ್ನು ಹೇಳುವುದಿಲ್ಲ, ಆದ್ದರಿಂದ ಪೊಲೀಸರು ಎರಡೂ ಕಡೆಯ ವಾದಗಳನ್ನು ಆಲಿಸಿ ಸತ್ಯವನ್ನು ಹೊರತರಬೇಕು ಎಂದು ಇನ್ನು ಕೆಲವು ಬಳಕೆದಾರರು ಪ್ರಬುದ್ಧವಾಗಿ ಕಾಮೆಂಟ್ ಮಾಡಿದ್ದಾರೆ.

ಯುವಕನ ಸಮಯಪ್ರಜ್ಞೆಯಿಂದಾಗಿ ಮೊಬೈಲ್ ಫೋನ್ ಸುರಕ್ಷಿತವಾಗಿ ಸಿಕ್ಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳನ್ನು ತಡೆಯಲು ಸಾರ್ವಜನಿಕರ ಮತ್ತು ಪೊಲೀಸರ ಈ ಒಗ್ಗಟ್ಟು ಅತ್ಯಂತ ಆಶಾದಾಯಕ ಸಂದೇಶವನ್ನು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್-ಲೋಕೇಶ್ ಸಿನಿಮಾ ನಿಂತು ಹೋಯ್ತೆ? ಸತ್ಯಾಂಶವೇನು? – Kannada News

ಪುಷ್ಪ’ (Pushpa) ಮತ್ತು ‘ಪುಷ್ಪ 2’ ಸಿನಿಮಾಗಳ ಅಲ್ಲು ಅರ್ಜುನ್ (Allu Arjun) ಇದೀಗ ‘ರಾಕಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಅವರಿಗೆ ಇರುವಷ್ಟು ಒಳ್ಳೆಯ ಸಿನಿಮಾ ಲೈನಪ್ ಬಹುಷಃ ಇನ್ಯಾವ ಸ್ಟಾರ್ ನಟರಿಗೂ ಇಲ್ಲವೇನೋ. ಅಷ್ಟು ಒಳ್ಳೆಯ, ಸೂಪರ್ ಹಿಟ್ ಡೈರೆಕ್ಟರ್​​ಗಳು ಕತೆ ಹಿಡಿದುಕೊಂಡು ಅಲ್ಲು ಅರ್ಜುನ್ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಬೇಕಿದ್ದ ಲೋಕೇಶ್ ಕನಗರಾಜ್ ಅವರು ಹಿಂದೆ ಸರಿದಿದ್ದು, ಸಿನಿಮಾ ರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಸಿನಿಮಾದ ಸಣ್ಣ ಟೀಸರ್ ಅನ್ನೂ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನು ಹೆಸರಿಡದ ‘AA 23’ ಚಿತ್ರ ಪ್ರಕಟವಾದಾಗಿನಿಂದಲೂ, ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಚಿತ್ರದ ಹಾಡು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಚಿತ್ರದ ಹೊಸ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ, ಇತ್ತೀಚೆಗೆ ಲೋಕೇಶ್ ಕನಗರಾಜ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ರದ್ದಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ.

ಲೋಕೇಶ್ ಕನಗರಾಜ್ ಅವರ ಜೊತೆ ಬರಹಗಾರರಾಗಿ ಕೆಲಸ ಮಾಡುವ ರತ್ನಕುಮಾರ್ ಅವರು ಟ್ವೀಟ್ ಮಾಡಿದ್ದು, ‘ಎಎ23’ ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ’ ಎಂದು ಟ್ವಿಟ್ ಮಾಡಿದ್ದಾರೆ. ಲೋಕೇಶ್ ನಿರ್ದೇಶಿಸಿ, ರತ್ನಾಕರ್ ಸಹ ಜೊತೆಗೆ ಕೆಲಸ ಮಾಡಿದ್ದ ‘ವಿಕ್ರಂ’ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷಗಳಾದ ಕಾರಣ ಮಾಡಿದ ಸರಣಿ ಟ್ವೀಟ್​​ನಲ್ಲಿ ‘ಎಎ23’ ಸಿನಿಮಾದ ಬಗ್ಗೆಯೂ ಟ್ವೀಟ್ ಮಾಡುವ ಮೂಲಕ, ಆ ಸಿನಿಮಾ ನಿಂತು ಹೋಗಿಲ್ಲ ಬದಲಿಗೆ ಕೆಲಸಗಳು ಚಾಲ್ತಿಯಲ್ಲಿವೆ ಎಂಬ ಸುಳಿವು ಸಹ ನೀಡಿದ್ದಾರೆ.

ಇದನ್ನೂ ಓದಿ:ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್?

ಅಲ್ಲು ಅರ್ಜುನ್ ಕಳೆದ ಐದು ವರ್ಷಗಳಿಗಿಂತಲೂ ಹೆಚ್ಚು ಸಮಯವನ್ನು ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಮತ್ತು ‘ಪುಷ್ಪ 2: ದಿ ರೂಲ್’ ಚಿತ್ರಗಳಿಗಾಗಿ ಮುಡಿಪಾಗಿಟ್ಟಿದ್ದರು. ಈಗ ಅವರು ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಮಲಯಾಳಿ ಸುಂದರಿ ಫೆಮಿನಾ ನಾಯಕಿಯರು. ಈ ಸಿನಿಮಾದ ಬಳಿಕ ಮಲಯಾಳಂ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಆ ಬಳಿಕ ಸಂದೀಪ್ ರೆಡ್ಡಿ ವಂಗಾ ರೆಡಿಯಾಗಿದ್ದಾರೆ. ಇವರೆಲ್ಲರ ಬಳಿಕ ಮತ್ತೆ ಸುಕುಮಾರ್ ಅವರು ‘ಪುಷ್ಪ 3’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ವೇದಿಕೆಯಲ್ಲಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಸಿದ್ಧತೆ: ಫ್ರಾನ್ಸ್ ಜಿ7 ಶೃಂಗಸಭೆಯಿಂದ ಭಾರತ-ಅಮೆರಿಕ ಬಾಂಧವ್ಯಕ್ಕೆ ಹೊಸ ಚೈತನ್ಯ – Kannada News

ನರೇಂದ್ರ ಮೋದಿ-ಟ್ರಂಪ್ Image Credit source: India Shipping News

ನವದೆಹಲಿ, ಜೂನ್ 04: ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸುವ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ಸಂಭವಿಸಿದೆ. ಈ ತಿಂಗಳು ಫ್ರಾನ್ಸ್​​ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಗವಹಿಸುವುದು ಖಚಿತವಾಗಿದೆ. ಉಭಯ ನಾಯಕರ ನಡುವೆ ಜಾಗತಿಕ ಮಟ್ಟದ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್​ ಖಾತೆಯಲ್ಲಿ ಜೂನ್ 14 ರಂದು ಶ್ವೇತಭವನದಲ್ಲಿ ನಡೆಯಲಿರುವ ಯುಎಫ್​ಸಿ ವಿಶ್ವ ಚಾಂಪಿಯನ್​ಶಿಪ್ ಮುಗಿದ ತಕ್ಷಣವೇ ಜಿ7 ಶೃಂಗಸಭೆಗಾಗಿ ಫ್ರಾನ್ಸ್​ಗೆ ಪ್ರಯಾಣ ಬೆಳೆಸುವುದುದಾಗಿ ತಿಳಿಸಿದ್ದಾರೆ.

ಫ್ರಾನ್ಸ್‌ನ ಏವಿಯನ್‌ನಲ್ಲಿ ವಿಶ್ವ ನಾಯಕರ ಮಹಾಸಂಗಮ
ಜೂನ್ 15 ರಿಂದ 17 ರವರೆಗೆ ಫ್ರಾನ್ಸ್‌ನ ಅತ್ಯಾಕರ್ಷಕ ‘ಏವಿಯನ್-ಲೆಸ್-ಬೈನ್ಸ್’ (Évian-les-Bains) ನಗರದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಜಿ7 ಶೃಂಗಸಭೆ ಆಯೋಜನೆಗೊಂಡಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟುಗಳ ನಂತರ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಜಾಗತಿಕ ನಾಯಕರೊಂದಿಗೆ ನೇರ ಮುಖಾಮುಖಿ ಚರ್ಚೆ ನಡೆಸಲು ಈ ಶೃಂಗಸಭೆಯು ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ.

ಪ್ರಧಾನಿ ಮೋದಿ ಭೇಟಿ ಖಚಿತಪಡಿಸಿದ ಫ್ರಾನ್ಸ್ ಸರ್ಕಾರ
ಭಾರತವು ಜಿ7 ಒಕ್ಕೂಟದ ಅಧಿಕೃತ ಸದಸ್ಯ ರಾಷ್ಟ್ರವಲ್ಲದಿದ್ದರೂ, ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪ್ರಭಾವವನ್ನು ಪರಿಗಣಿಸಿ ಫ್ರಾನ್ಸ್ ಪ್ರಧಾನಿ ಮೋದಿಯವರನ್ನು ವಿಶೇಷ ಪಾಲುದಾರ ರಾಷ್ಟ್ರದ ನಾಯಕರಾಗಿ ಆಹ್ವಾನಿಸಿದೆ.

ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹಾಗೂ ಫ್ರೆಂಚ್ ವಿದೇಶಾಂಗ ಸಚಿವ ಜೀನ್ ನೋಯೆಲ್ ಬ್ಯಾರಟ್ ನಡುವೆ ನಡೆದ ಸಭೆಯ ಬಳಿಕ ಪ್ರಧಾನಿ ಮೋದಿ ಈ ಶೃಂಗಸಭೆಲ್ಲಿ ಭಾಗವಹಿಸುವುದನ್ನು ಫ್ರಾನ್ಸ್​ ವಿದೇಶಾಂಗ ಸಚಿವಾಲಯವು ಅಧಿಕೃತ ಪ್ರಕರಣೆ ಊಲಕ ಸ್ವಾಗತಿಸಿದೆ. ಸ್ಥೂಲ ಆರ್ಥಿಕ ಅಸಮತೋಲನ ನಿವಾರಣೆ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಜಿ7 ಒಕ್ಕೂಟಕ್ಕೆ ಭಾರತ ನೀಡಲಿರುವ ಕೊಡುಗೆಯನ್ನು ಫ್ರಾನ್ಸ್ ಮುಕ್ತಕಂಠದಿಂದ ಶ್ಲಾಘಿಸಿದೆ.

ವ್ಯಾಪಾರ ಮತ್ತು ಆರ್ಥಿಕ ಪ್ರಗತಿಯ ಹೊಸ ಆಶಾಕಿರಣ
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಕೊನೆಯ ಬಾರಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಮುಖಾಮುಖಿಯಾಗಿದ್ದರು. ಆನಂತರ ಸುಂಕಗಳು, ವ್ಯಾಪಾರ ಒಪ್ಪಂದಗಳು ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಚಲನೆಗಳ ಕಾರಣದಿಂದಾಗಿ ಉಭಯ ದೇಶಗಳ ನಡುವೆ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಮೂಡಿದ್ದರೂ, ಇಬ್ಬರೂ ನಾಯಕರು ದೂರವಾಣಿ ಸಂಭಾಷಣೆಗಳ ಮೂಲಕ ನಿರಂತರ ಸ್ನೇಹವನ್ನು ಕಾಯ್ದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ರಾಬಿಂದರ್ ಸಚ್‌ದೇವ್ ಅವರ ಪ್ರಕಾರ, ಈ ಮುಖಾಮುಖಿ ಭೇಟಿಯು ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ವ್ಯಾಪಾರ ಒಪ್ಪಂದಗಳಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲಿದೆ. ಟ್ರಂಪ್ ಅವರ ಸುಂಕದ ನೀತಿಗಳ ಕುರಿತು ಉಭಯ ದೇಶಗಳ ನಡುವೆ ಪರಸ್ಪರ ಉತ್ತಮ ತಿಳುವಳಿಕೆ ಮತ್ತು ಒಮ್ಮತ ಮೂಡಲು ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಪುನಃಸ್ಥಾಪಿಸಲು ಈ ಶೃಂಗಸಭೆಯು ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಹಾಗೂ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ ನಾಯಕರು ಒಟ್ಟಾಗಿ ಕೈಗೊಳ್ಳಲಿರುವ ಈ ನಿರ್ಧಾರಗಳು ಜಾಗತಿಕ ಮಾರುಕಟ್ಟೆಯ ಸ್ಥಿರತೆ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಸೂಚಿಯಾಗಲಿವೆ ಎಂದು ರಾಜಕೀಯ ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ – Kannada News

ನೆಲಮಂಗಲ, ಜೂನ್​​ 04: ತಾಲೂಕಿನ ಕುಣಿಗಲ್ ಬೈಪಾಸ್ ಬಳಿ ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಹಾಸನ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಈ ಆ್ಯಂಬುಲೆನ್ಸ್ ಮಾರ್ಗಮಧ್ಯೆ ಕ್ಯಾಂಟರ್ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಅದೃಷ್ಟವಶಾತ್​​ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಹಾಗೂ ಚಾಲಕ ಸೇರಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ತೀವ್ರತೆ ಗಮನಿಸಿದರೆ, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನು ಅಪಘಾತದ ನಡೆದ ಕ್ಷಣಮಾತ್ರದಲ್ಲಿ ಸ್ಥಳೀಯರು ನೆರವಿಗೆ ಧಾವಿಸಿದ್ದು, ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಸುರಕ್ಷಿತವಾಗಿ ಬೇರೆ ವಾಹನಕ್ಕೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್​​ ಮುಭಾಂಗ ಸಂಪೂರ್ಣ ಜಖಂ ಆಗಿದ್ದು, ಕ್ಯಾಂಟರ್​​ಗೂ ಅಲ್ಪ ಪ್ರಮಾಣದ ಡ್ಯಾಮೇಜ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತುಮಕೂರು ವಿವಿ ಘಟಿಕೋತ್ಸವದಲ್ಲಿ ದೊಡ್ಡ ಎಡವಟ್ಟು: ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ನಗದು ಚೆಕ್; ಧರಣಿ ಕುಳಿತ ವಿದ್ಯಾರ್ಥಿಗಳು – Kannada News

ತುಮಕೂರು ವಿವಿ ಘಟಿಕೋತ್ಸವದಲ್ಲಿ ದೊಡ್ಡ ಎಡವಟ್ಟುImage Credit source: Tv9 kannada

ತುಮಕೂರು, ಜೂ.4: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರಿ ಎಡವಟ್ಟು ನಡೆದಿದೆ. ವರ್ಷಗಟ್ಟಲೆ ಕಷ್ಟಪಟ್ಟು ಓದಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ (Gold Medal) ಪಡೆಯುವ ಕನಸು ಹೊತ್ತು ಬಂದಿದ್ದ ನೂರಾರು ರ್ಯಾಂಕ್ ವಿದ್ಯಾರ್ಥಿಗಳ ಆಸೆಗೆ ವಿಶ್ವವಿದ್ಯಾಲಯವು ತಣ್ಣೀರೆರಚಿದೆ. ಚಿನ್ನದ ಪದಕ ನೀಡುವ ಬದಲು ಕೇವಲ ಪ್ರಮಾಣ ಪತ್ರ ಮತ್ತು ನಗದು ಹಣದ ಚೆಕ್ ನೀಡಿ ಕೈತೊಳೆದುಕೊಳ್ಳಲು ಮುಂದಾದ ವಿವಿಯ ನಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ವಿಶ್ವವಿದ್ಯಾಲಯದ ಆವರಣದಲ್ಲಿ ಘಟಿಕೋತ್ಸವ ನಡೆಯುತ್ತಿದ್ದಾಗಲೇ ಈ ಗೊಂದಲ ಸೃಷ್ಟಿಯಾಗಿದೆ. ತಮಗೆ ಚಿನ್ನದ ಪದಕ ನೀಡದಿದ್ದನ್ನು ಕಂಡು ರೊಚ್ಚಿಗೆದ್ದ ರ್ಯಾಂಕ್ ವಿದ್ಯಾರ್ಥಿಗಳು, ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲೇ ಪ್ರತಿಭಟನೆಗೆ ಕೂತರು. “ನಮಗೆ ನಗದು ಹಣ ಬೇಡವೇ ಬೇಡ, ನಮ್ಮ ಸಾಧನೆಗೆ ಸಿಗಬೇಕಾದ ಚಿನ್ನದ ಪದಕವೇ ಬೇಕು. ನಾವು ನಿಗದಿತ ಶುಲ್ಕ (Fees) ಪಾವತಿಸಿದ್ದರೂ ನಮಗೆ ಪದಕ ನೀಡಿಲ್ಲ” ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾರಂಭವು ಕೆಲವು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಮಕ್ಕಳ ಸಾಧನೆಯ ಸಂಕೇತವಾದ ಪದಕ ಸಿಗದಿರುವುದನ್ನು ಕಂಡು ಪೋಷಕರೂ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದರು.

ಇನ್ನು ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರಗಳನ್ನು ಬೇಕಾಬಿಟ್ಟಿಯಾಗಿ ನೀಡಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 17 ಮತ್ತು 18ನೇ ಘಟಿಕೋತ್ಸವದ ಹಳೆಯ ಫೈಲ್‌ಗಳಲ್ಲೇ ಇಂದಿನ ಪ್ರಮಾಣ ಪತ್ರಗಳನ್ನು ಇಟ್ಟು ಕೊಡಲಾಗಿದೆ. ಪದಕ ನೀಡಲು ವಿವಿಗೆ ಸಾಧ್ಯವಿರಲಿಲ್ಲ ಎಂದರೆ ಘಟಿಕೋತ್ಸವವನ್ನೇ ಮುಂದೂಡಬಹುದಿತ್ತಲ್ಲವೇ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. “ಪದಕ ಸಿಗುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಪಟ್ಟು ಹಿಡಿದು ವಿದ್ಯಾರ್ಥಿಗಳು ಕಾದು ಕುಳಿತಿದ್ದರು.

ಇದನ್ನೂ ಓದಿ: ಪರಮೇಶ್ವರ್, ರಾಜಣ್ಣಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ನಿರ್ಧಾರ

ಸ್ಥಳದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯಕ್ಕೆ ಮುಂದಾದರು. ಪ್ರಸ್ತುತ ನೀಡಿರುವ ಚೆಕ್ ಬದಲಿಗೆ ಶೀಘ್ರದಲ್ಲೇ ಅಧಿಕೃತವಾಗಿ ಚಿನ್ನದ ಪದಕಗಳನ್ನೇ (Medals) ಮಾಡಿಸಿಕೊಡುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಈ ಭರವಸೆಯ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟು ಅಲ್ಲಿಂದ ತೆರಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸದ್ದಿಲ್ಲದೆ ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಟರ್ನಲ್’ ಟೀಸರ್, ಹೊಸದೆನೂ ಇಲ್ಲ – Kannada News

ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಬರೆದ ಸಿನಿಮಾ ‘ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಸಿನಿಮಾ. ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾಗಳು ಇವು. ‘ಬಾಹುಬಲಿ’ ಸಿನಿಮಾದ ಎಲ್ಲ ಪಾತ್ರಗಳು ನೆನಪುಳಿಯುವಂಥಹವು. ಇದೀಗ ‘ಬಾಹುಬಲಿ’ ಕತೆಯನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತವಾಗಲು ಬಿಡದೆ, ನಿರ್ಮಾಣ ಸಂಸ್ಥೆಯು ಇನ್ನಷ್ಟು ಹಿಗ್ಗಿಸಲು ಮುಂದಾಗಿದ್ದು ‘ಬಾಹುಬಲಿ: ದಿ ಎಟರ್ನಲ್’ ಹೆಸರಿನ ಮತ್ತೊಂದು ಸಿನಿಮಾ ನಿರ್ಮಿಸಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ.

‘ಬಾಹುಬಲಿ: ದಿ ಎಟರ್ನಲ್’ ಅನಿಮೇಷನ್ ಸಿನಿಮಾ ಆಗಿದ್ದು, ನಿನ್ನೆ ಸಂಜೆ, ಎಆರ್ಕೆ (ಆರ್ಕ್) ಮೀಡಿಯಾ ಟೀಸರ್ ಬಿಡುಗಡೆ ಮಾಡಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅನಿಮೇಷನ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಡುಗಡೆ ಮಾಡಿದ್ದ ದೃಶ್ಯಗಳನ್ನೇ ಸೇರಿಸಿ ಈ ಟೀಸರ್ ಬಿಡುಗಡೆ ಮಾಡಲಾಗಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.

‘ಬಾಹುಬಲಿ: ದಿ ಎಟರ್ನಲ್’ ಸಿನಿಮಾವು, ಅಮರೇಂದ್ರ ಬಾಹುಬಲಿ, ಬಲ್ಲಾಳದೇವನಿಂದ ಕೊಲ್ಲಲ್ಪಟ್ಟ ಬಳಿಕ ಬೇರೆ ಲೋಕಕ್ಕೆ ಹೋಗಿ ಅಲ್ಲಿ ದೇವತೆಗಳ ಜೊತೆಗೆ ಯುದ್ಧ ಮಾಡುವ ಕತೆಯನ್ನು ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಬಾಹುಬಲಿಯು ಪಾತಾಳ ಮಂಡಲಂ ಲೋಕದಲ್ಲಿ ಶಿವನ ಆರಾಧನೆಯಲ್ಲಿ ತೊಡಗಿದ್ದಾನೆ. ಆದರೆ ‘ಬಾಹುಬಲಿ’ಯನ್ನು ವಶಕ್ಕೆ ಪಡೆಯಲು ಇಂದ್ರದೇವ ಬರುತ್ತಾನೆ ಆದರೆ ಇಂದ್ರನನ್ನು, ಬಾಹುಬಲಿಯ ಗೆಳೆಯ ವಿಹಾಸುರ ಎದುರಿಸುತ್ತಾನೆ. ಬೀಕರ ಯುದ್ಧ ನಡೆದು ವಿಹಾಸುರ ಸೋಲುತ್ತಾನೆ. ಬಳಿಕ ಬಾಹುಬಲಿ, ಆನೆಗಳ ರಥದ ಮೇಲೆ ಕುಳಿತು ಬಂದು ಇಂದ್ರನನ್ನೇ ಎದುರಿಸುತ್ತಾನೆ.

ಈ ಅನಿಮೇಟೆಡ್ ಟೀಸರ್ ಅದ್ಭುತವಾಗಿದೆ. ಅದ್ಭುತವಾದ ಆಕ್ಷನ್ ಟೀಸರ್​​ನಲ್ಲಿದೆ. ಆದರೆ ಈಗ ಟೀಸರ್​​ನಲ್ಲಿ ಇರುವ ದೃಶ್ಯಗಳನ್ನು ಕೆಲ ತಿಂಗಳುಗಳ ಹಿಂದೆ ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಈಗ ಟೀಸರ್​​ನಲ್ಲಿಯೇ ಅದೇ ದೃಶ್ಯಗಳನ್ನು ಸೇರಿಸಲಾಗಿದೆ. ಅಂದಹಾಗೆ ಸಿನಿಮಾನಲ್ಲಿ ಬಾಹುಬಲಿ ಪಾತ್ರಕ್ಕೆ ಖುದ್ದು ಪ್ರಭಾಸ್ ಧ್ವನಿ ನೀಡಿದ್ದಾರೆ. ರಮ್ಯಾ ಕೃಷ್ಣ ಸಹ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್

‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾವನ್ನು ಇಶಾನ್ ಶುಕ್ಲ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರೆಸೆಂಟ್ ಮಾಡುತ್ತಿರುವುದು ರಾಜಮೌಳಿ, ನಿರ್ಮಾಣ ಆರ್ಕ್ ಮೀಡಿಯಾ, ಸಂಗೀತ ನೀಡಿರುವುದು ಎಂಎಂ ಕೀರವಾಣಿ ಅವರು. ಚಿತ್ರಕತೆ ಬರೆದಿರುವುದು ಸ್ಕಾಟ್ ಮೊಸೀಯರ್ ಸಿನಿಮಾ ಮುಂದಿನ ವರ್ಷ ಅಂದರೆ 2027ರಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲೇ ತಿರುಪತಿ ಬೆಟ್ಟ ಹತ್ತಿದ ಜಾನ್ವಿ ಕಪೂರ್ – Kannada News

ರಾಮ್ ಚರಣ್, ಜಾನ್ವಿ ಕಪೂರ್ ಮೊದಲಾದವರು ನಟಿಸಿರುವ ‘ಪೆದ್ದಿ’ ಇಂದು (ಜೂನ್ 4) ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಜಾನ್ವಿ ಕಪೂರ್ ಅವರು ಆಂಧ್ರಪ್ರದೇಶದ ಪವಿತ್ರ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮೆಟ್ಟಿಲುಗಳ ಮಾರ್ಗವಾಗಿ ನಡೆದುಕೊಂಡೇ ಬೆಟ್ಟ ಹತ್ತಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ಬಾರಿಯೂ ತಮ್ಮ ಯಾವುದೇ ಹೊಸ ಸಿನಿಮಾ ತೆರೆಗೆ ಬರುವ ಮುನ್ನ ತಿರುಪತಿಗೆ ಭೇಟಿ ನೀಡುವುದನ್ನು ಜಾನ್ವಿ ಕಪೂರ್ ರೂಢಿಸಿಕೊಂಡಿದ್ದಾರೆ. ಈ ವಿಶೇಷ ಸಂಪ್ರದಾಯವನ್ನು ಅವರು ಸತತವಾಗಿ ಪಾಲಿಸುತ್ತಾ ಬಂದಿದ್ದಾರೆ. ಈ ಭಕ್ತಿಯ ನಡೆ ಅವರ ಸಿನಿಮಾಗಳ ಮೇಲಿರುವ ಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಹಿಂದೆ ತಮ್ಮ ಚೊಚ್ಚಲ ಚಿತ್ರ ‘ಧಡಕ್’ ಬಿಡುಗಡೆಯ ಮುನ್ನ ತಂದೆ ಬೋನಿ ಕಪೂರ್ ಜೊತೆ ಜಾನ್ವಿ ಇಲ್ಲಿಗೆ ಬಂದಿದ್ದರು. ಇತ್ತೀಚಿನ ‘ದೇವರ’ ಮತ್ತು ‘ಪರಂ ಸುಂದರಿ’ ಚಿತ್ರಗಳ ಬಿಡುಗಡೆಯ ವೇಳೆಯೂ ಅವರು ತಿರುಪತಿಗೆ ಭೇಟಿ ನೀಡಿದ್ದರು. ಅವರ ತಾಯಿ, ದಿವಂಗತ ನಟಿ ಶ್ರೀದೇವಿ ಅವರೂ ಸಹ ಪ್ರತಿ ವರ್ಷ ತಮ್ಮ ಜನ್ಮದಿನದಂದು ತಿರುಪತಿಗೆ ಭೇಟಿ ನೀಡುವ ಸಂಪ್ರದಾಯ ಹೊಂದಿದ್ದರು. ತಾಯಿಯ ಅಗಲಿಕೆಯ ನಂತರ ಜಾನ್ವಿ ಕಪೂರ್ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಪ್ ಗೆದ್ದ ಖುಷಿಯಲ್ಲಿದ್ದ ರಜತ್​​ಗೆ ಹೊಸ ಲೀಗ್​​ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲಿನಾಘಾತ – Kannada News

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಅವರು ಮಧ್ಯಪ್ರದೇಶ ಲೀಗ್ ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಂಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗ್ವಾಲಿಯರ್ ಚೀತಾಸ್ ತಂಡವನ್ನು ಮುನ್ನಡೆಸಿದ ಪಾಟಿದಾರ್, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ 92 ರನ್‌ಗಳ ಹೀನಾಯ ಸೋಲು ಅನುಭವಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದ ಗ್ವಾಲಿಯರ್ ಚೀತಾಸ್ ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರ ಸಂಪೂರ್ಣವಾಗಿ ಕೈಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಉಜ್ಜಯಿನಿ ಫಾಲ್ಕನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ಚಂಚಲ್ ರಾಥೋಡ್ ಮತ್ತು ಯಶ್ ದುಬೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನ ಅಬ್ಬರ

ಉಜ್ಜಯಿನಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಆಲ್ ರೌಂಡರ್ ಮಾಧವ್ ತಿವಾರಿ. ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಮಿಂಚಿದ್ದ 22 ವರ್ಷದ ತಿವಾರಿ, ಗ್ವಾಲಿಯರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟಾರೆ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 62 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 220ರ ಗಡಿ ದಾಟಿತು.

ಕೇವಲ 11 ರನ್‌ಗೆ ಔಟಾದ ಪಾಟಿದಾರ್; ಗ್ವಾಲಿಯರ್ ಧೂಳೀಪಟ

222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗ್ವಾಲಿಯರ್ ಚೀತಾಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂದೋರ್ ಅಂಗಳದಲ್ಲಿ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ರಜತ್ ಪಾಟಿದಾರ್ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು.

ಗ್ವಾಲಿಯರ್ ಪರ ಸ್ಥಳೀಯ ಬ್ಯಾಟರ್ ಪಾರ್ಥ್ ಚೌಧರಿ ಒಂಟಿ ಹೋರಾಟ ನಡೆಸಿ, ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 46 ರನ್ ಚಚ್ಚಿ ಚೇತರಿಕೆ ನೀಡಿದರೂ ಪ್ರಯೋಜನ ಆಗಲಿಲ್ಲ. ಉಳಿದವರಿಂದ ಯಾವುದೇ ಬೆಂಬಲ ಸಿಗದ ಕಾರಣ ಗ್ವಾಲಿಯರ್ ತಂಡ 14.2 ಓವರ್‌ಗಳಲ್ಲಿ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಉಜ್ಜಯಿನಿ ಪರ ಆಯುಷ್ ಮಂಕರ್ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಎಂಪಿಎಲ್‌ನಲ್ಲಿ ಉಜ್ಜಯಿನಿ ಫಾಲ್ಕನ್ಸ್ ಭರ್ಜರಿ ಜಯದೊಂದಿಗೆ ಅಭಿಯಾನ ಆರಂಭಿಸಿದೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿರಾರು ಮನೆಗಳಿರುವ ಅಪಾರ್ಟ್​​ಮೆಂಟ್​​ಗಿಲ್ಲ ಸುಸಜ್ಜಿತ ರಸ್ತೆ ಭಾಗ್ಯ: ಪ್ರತಿವರ್ಷ ನಿವಾಸಿಗಳ ದುಡ್ಡಲ್ಲಿಯೇ ನಡೆಯುತ್ತಿದೆ ರೋಡ್​​ ದುರಸ್ತಿ! – Kannada News

ಸಂಪೂರ್ಣ ಹದಗೆಟ್ಟಿರುವ ರಸ್ತೆImage Credit source: Times Of India

ಬೆಂಗಳೂರು, ಜೂನ್​​ 04: ಮಳೆಗಾಲದಲ್ಲಿ ರಸ್ತೆ ಸಂಚಾರ ಯೋಗ್ಯವಾಗಿರಲೆಂದು ಬೆಂಗಳೂರಿನ (Bengaluru) ಜಾಲಹಳ್ಳಿ ಪೂರ್ವದ ಬೃಹತ್ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿಗಳು ಪ್ರತಿವರ್ಷ ತಮ್ಮ ಹಣದಲ್ಲಿಯೇ ರಸ್ತೆ ದುರಸ್ತಿ ಮಾಡಿಸುತ್ತಿದ್ದಾರೆ. ನಗರ ಪಾಲಿಕೆ ಅಥವಾ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲರಾಗಿರುವ ಕಾರಣ 1,000ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್ ನಿವಾಸಿಗಳಿಗಿದು ಅನಿವಾರ್ಯವಾಗಿದೆ. ಗಂಗಮ್ಮ ಗುಡಿ ಪೊಲೀಸ್ ಠಾಣೆ ರಸ್ತೆಯನ್ನು ಕುವೆಂಪುನಗರಕ್ಕೆ ಸಂಪರ್ಕಿಸುವ ಸುಮಾರು 100 ಮೀಟರ್ ಉದ್ದದ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲು ವರ್ಷಕ್ಕೆ ಸುಮಾರು 80,000 ವೆಚ್ಚವನ್ನು ಇವರು ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿವಾಸಿಗಳ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಸ್ಥಳಕ್ಕೂ ಭೇಟಿ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ನಿವೃತ್ತ ನೌಕಾಪಡೆ ಅಧಿಕಾರಿ ಹಾಗೂ ನಿವಾಸಿ ಉನ್ನಿ ಕೃಷ್ಣನ್ ಮೆನನ್ ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿಯಾಗದ ಕಾರಣ ಅದರ ಸುತ್ತಮುತ್ತಲಿನ ಪ್ರದೇಶ ಕಸದ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಮಾದಕ ವಸ್ತು ವ್ಯಸನಿಗಳು ಈ ಪ್ರದೇಶವನ್ನು ತಮ್ಮ ಚಟುವಟಿಕೆಗಳಿಗೆ ಬಳಸುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ನಿವಾಸಿ ವಿವೇಕ್ ಬಾಲಾಜಿ ಹೇಳಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ನ್ಯಾಯಾಲಯದಲ್ಲಿರುವ ಜಮೀನು ವಿವಾದ

ಜಮೀನು ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯ ಬಾಕಿ ಇರುವುದರಿಂದ ಸರ್ಕಾರಿ ಸಂಸ್ಥೆಗಳು ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯಿಂದ ಕುಡಿಯುವ ನೀರಿನ ಸಂಪರ್ಕ ಮತ್ತು ಬಿಎಂಟಿಸಿ ಬಸ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಈ ರಸ್ತೆ ಕಳೆದ ಹತ್ತು ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ಬಳಕೆಯಲ್ಲಿದೆ. ಆದರೂ ಇದು ಇನ್ನೂ ಸುರಕ್ಷಿತವಾಗಿಲ್ಲ. ಇಲ್ಲಿ ಹಲವರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಕಾನೂನು ವಿವಾದ ಬಗೆಹರಿಯುವವರೆಗೂ ಕನಿಷ್ಠ ರಸ್ತೆಯನ್ನು ಸುರಕ್ಷಿತವಾಗಿಸುವಂತೆ ನಮ್ಮ ಮನವಿ ಎಂದು ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ನಟೇಶ್ ಮುತ್ತಣ್ಣ ಹೇಳಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಕಾಮಾಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಂದಿನ ಕಾರ್ಪೊರೇಟರ್‌ಗಳು ಜಮೀನಿನ ಹಕ್ಕುದಾರರ ಒಪ್ಪಿಗೆ ಪಡೆಯಲು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಅನುಮತಿ ದೊರೆತ ತಕ್ಷಣ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬಹುದು ಎಂದು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:40 am, Thu, 4 June 26

Source link