ಚಿಕ್ಕಮಗಳೂರು, ಮಾರ್ಚ್ 29: ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌ಆರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿತ್ತು. ಚಿಕ್ಕಮಗಳೂರು ನಗರದಲ್ಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮಳೆಯಿಂದ ಪರದಾಡಿದ ದೃಶ್ಯಗಳು ಕಂಡುಬಂದಿವೆ. ಬಿರುಗಾಳಿ ಮಳೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದಿನ ಏಪ್ರಿಲ್ 4ರವರೆಗೆ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 201 ರನ್ಗಳು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಹುಡುಗರು ಆಡಿದ ರೀತಿ ಮತ್ತು ಎಲ್ಲರೂ ತಂಡಕ್ಕೆ ಬೆಂಬಲ ನೀಡಿದ ರೀತಿ ಸಕಾರಾತ್ಮಕ ಸಂಕೇತವಾಗಿತ್ತು. ಏಕೆಂದರೆ ಇದು ಸೀಸನ್ನ ಮೊದಲ ಪಂದ್ಯ.
ಮೊದಲ ಪಂದ್ಯದಲ್ಲೇ ಎಲ್ಲರೂ ಅತ್ಯುತ್ತುಮ ಕೊಡುಗೆ ನೀಡಿರುವುದು ಪಾಸಿಟಿವ್ ವಿಷಯ. ಅದರಲ್ಲೂ ಚೊಚ್ಚಲ ಪಂದ್ಯವಾಡಿರುವ ಜೇಕಬ್ ಡಫಿ ತನ್ನ ಮೊದಲ ಮ್ಯಾಚ್ನಲ್ಲಿ ಆಡಿದ ರೀತಿ ಮತ್ತು ಅವರು ಬೌಲಿಂಗ್ ಮಾಡಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ಜೇಕಬ್ ಡಫಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳನ್ನು ಕಬಳಿಸಿದ ರೀತಿ, ಅದು ನಮಗೆ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ.
ಇದಾದ ಬಳಿಕ ನಮ್ಮ ಬ್ಯಾಟರ್ಗಳ ಆಕ್ರಮಣಕಾರಿ ಬ್ಯಾಟಿಂಗ್ ಕೂಡ ಅದ್ಭುತವಾಗಿತ್ತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ಆಡಿದ ರೀತಿ, ಇತರ ಬ್ಯಾಟ್ಸ್‌ಮನ್‌ಗಳಿಗೆ ಭದ್ರ ಬುನಾದಿ ಹಾಕಿತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಇಂತಹ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸುತ್ತೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯ ಇನಿಂಗ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಅವರನ್ನು (ಕೊಹ್ಲಿ) ಹೊಗಳಲು ನನ್ನ ಬಳಿ ಪದಗಳಿಲ್ಲ. ಅವರು ಪ್ರತಿ ಬಾರಿ ಆಡುವಾಗ, ವಿಶೇಷವಾಗಿ ಚೇಸಿಂಗ್ ಮಾಡುವಾಗ ನಂಬರ್ ಒನ್ ಬ್ಯಾಟರ್ ಆಗಿ ಆಡುತ್ತಾರೆ. ಅಲ್ಲದೆ ಕೊಹ್ಲಿ ಕೊನೆಯವರೆಗೆ ನಿಂತು ಆಡಿದ ರೀತಿ ಅತ್ಯುತ್ತಮವಾಗಿತ್ತು ಎಂದು ಆರ್ಸಿಬಿ ನಾಯಕ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಫಿಲ್ ಸಾಲ್ಟ್ ಅವರ ಅದ್ಭುತ ಕ್ಯಾಚ್ ನಿಜಕ್ಕೂ ಅತ್ಯದ್ಭುತ! ಆದರೆ ಎಲ್ಲರಿಗೂ ತಿಳಿದಿರುವಂತೆ, ಅವರು ತುಂಬಾ ಒಳ್ಳೆಯ ಫೀಲ್ಡರ್. ಅವರು ಗಾಳಿಯಲ್ಲಿ ಹಾರಿ ಅನೇಕ ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಅದರ ಮುಂದುವರೆದ ಭಾಗ ಇದು.
ಒಟ್ಟಾರೆಯಾಗಿ ಹೇಳುವುದಾದರೆ ಆರ್ಸಿಬಿ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.
ಅಮೆರಿಕ, ಮಾರ್ಚ್ 29: ಬೇರೆ ದೇಶಗಳಲ್ಲಿ ಹಾಗಿರಲಿ ಅಮೆರಿಕ ಜನರೇ ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗುಬಿದ್ದಿದ್ದಾರೆ. ನೋ ಕಿಂಗ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ.ಅಮೆರಿಕದ ಸುಮಾರು 50 ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆಗಳು ನಡೆದವು ಮತ್ತು ಘೋಷಣೆಗಳನ್ನು ಎತ್ತಲಾಯಿತು. ಟ್ರಂಪ್ ಅವರ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇರಾನ್ ವಿರುದ್ಧದ ಯುದ್ಧದ ಬಗ್ಗೆ ಜನರು ಕೋಪಗೊಂಡಿದ್ದಾರೆ. ಅಮೆರಿಕದಾದ್ಯಂತ ಜನರು ನೋ ಕಿಂಗ್ಸ್ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಪ್ರಮುಖ ನಗರಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆದವು. ಸಣ್ಣ ಸಭೆಗಳು ಟ್ರಂಪ್ ಅವರ ನೀತಿಗಳನ್ನು ಟೀಕಿಸಿದವು.
ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳು ನಡೆದವು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಫಲಕಗಳನ್ನು ಬೀಸುತ್ತಾ ಮತ್ತು ನೃತ್ಯ ಮಾಡುವ ಮೂಲಕ ಟ್ರಂಪ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಲು ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಅವರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.
ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯಾವುದು ಮೇಲುಗೈ ಸಾಧಿಸುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಗೊಂದಲ ಮೂಡಿಸಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಧರ್ಮದ ಹಾದಿ ಕಷ್ಟಗಳಿಂದ ಕೂಡಿರುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಸತ್ಯ ಹರಿಶ್ಚಂದ್ರರು ತಮ್ಮ ಸತ್ಯನಿಷ್ಠೆಗಾಗಿ ಎದುರಿಸಿದ ಅಸಂಖ್ಯಾತ ಕಷ್ಟಗಳು, ಶ್ರೀರಾಮಚಂದ್ರರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಸವಾಲುಗಳು, ಮತ್ತು ಧರ್ಮರಾಯರು ತಮ್ಮ ಧರ್ಮಪಾಲನೆಗಾಗಿ ಪಟ್ಟ ಶ್ರಮ ಎಲ್ಲವೂ ಧರ್ಮದ ಮಾರ್ಗ ಸುಗಮವಲ್ಲ ಎಂಬುದನ್ನು ತೋರಿಸುತ್ತವೆ. ಇವರು ಅನುಭವಿಸಿದ ತೊಂದರೆಗಳು ತಾತ್ಕಾಲಿಕವಾಗಿದ್ದರೂ, ಕಟ್ಟ ಕಡೆಯದಾಗಿ ಧರ್ಮಕ್ಕೇ ಜಯವಾಗಿರುವುದು ಸರ್ವವಿದಿತ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಉಕ್ತಿಯಂತೆ, ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮದ ಹಾದಿಯಲ್ಲಿ ಮುನ್ನಡೆದಾಗ ನಾವು ಸಾಕಷ್ಟು ಕಳೆದುಕೊಳ್ಳುವಂತೆ ಅನಿಸಬಹುದು, ಯಾವುದೇ ಸ್ಥಿರತೆ ಇಲ್ಲವೆನಿಸಬಹುದು. ಆದರೆ, ಭಗವಂತನ ದೃಷ್ಟಿ ಸದಾ ಧರ್ಮನಿಷ್ಠರ ಮೇಲಿರುತ್ತದೆ.
ಅಧರ್ಮವು ಕ್ಷಿಪ್ರ ಜಯವನ್ನು ನೀಡಿದರೂ, ಅದು ಅಶಾಶ್ವತ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದವರಿಗೆ ತಕ್ಷಣ ಫಲ ಸಿಗದೆ, ಸುಲಭ ಮಾರ್ಗ ಹಿಡಿದವರಿಗೆ ಅತಿ ಹೆಚ್ಚು ಅಂಕಗಳು ದೊರೆತಂತೆ ಕಾಣಬಹುದು. ಆದರೆ, ಧರ್ಮದ ಮಾರ್ಗವನ್ನು ಅನುಸರಿಸಿ ಪರಿಶ್ರಮ ಪಟ್ಟವರು ಅಂತಿಮವಾಗಿ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅಧರ್ಮದಿಂದ ದೊರೆಯುವ ಜಯವು “ಜಂಕ್ ಫುಡ್” ನಂತೆ. ನಾಲಿಗೆಗೆ ರುಚಿಯಾಗಿದ್ದರೂ, ದೇಹಕ್ಕೆ ಹಾನಿಕಾರಕ. ಅದೇ ರೀತಿ, ಅಧರ್ಮದಿಂದ ದೊರೆಯುವ ಫಲಗಳು ಕ್ಷಣಿಕ ಮತ್ತು ದೀರ್ಘಾವಧಿಯಲ್ಲಿ ದುಷ್ಪರಿಣಾಮಗಳನ್ನು ತರುತ್ತವೆ.
ಶ್ರೀರಾಮಚಂದ್ರನ ಆದರ್ಶಮಯ ಜೀವನ ಮತ್ತು ಪಾಂಡವರು ಐವರು ಎದುರಿಸಿದ ಅಪಾರ ಕಷ್ಟಗಳು, ಕೊನೆಗೆ ಅವರಿಗೆ ದೊರೆತ ವಿಜಯವು ಧರ್ಮದ ಅಂತಿಮ ಜಯಕ್ಕೆ ಸಾಕ್ಷಿ. ರಾಮ ಮತ್ತು ರಾವಣರ ನಡುವಿನ ಯುದ್ಧದಲ್ಲಿ, ಮಹಾಭಕ್ತನಾದ ರಾವಣನು ಅಧರ್ಮದ ಮಾರ್ಗವನ್ನು ಆಯ್ದುಕೊಂಡಾಗ, ಅವನ ಶಕ್ತಿ, ಸಾಮ್ರಾಜ್ಯ ಸಂಪೂರ್ಣವಾಗಿ ನಾಶವಾಯಿತು. ಇದು ಅಧರ್ಮದ ಅಂತ್ಯವನ್ನು ಸಾರಿ ಹೇಳುತ್ತದೆ.
ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಯಾವುದೇ ಕ್ಷೇತ್ರದಲ್ಲಿ, ಅಧರ್ಮದ ಮೂಲಕ ಗಳಿಸಿದ ಯಾವುದೇ ಸಂಪತ್ತು ಅಥವಾ ಅಧಿಕಾರವು ಶಾಶ್ವತವಲ್ಲ. “ಜಾತಸ್ಯ ಮರಣಂ ಧ್ರುವಂ” ಎಂಬ ಸತ್ಯದಂತೆ, ಸಾವು ಯಾರನ್ನೂ ಬಿಡುವುದಿಲ್ಲ. ಅಧರ್ಮದ ಮಾರ್ಗದಲ್ಲಿ ಗಳಿಸಿದ ಎಲ್ಲವೂ ಒಂದು ದಿನ ಪರೀಕ್ಷೆಗೆ ಒಳಪಡುತ್ತದೆ. ಹಂಸ ಕ್ಷೀರ ನ್ಯಾಯದಂತೆ, ಹಾಲನ್ನು ನೀರನಿಂದ ಬೇರ್ಪಡಿಸುವಂತೆ, ಧರ್ಮ ಮತ್ತು ಅಧರ್ಮದ ಫಲಿತಾಂಶಗಳು ಸ್ಪಷ್ಟವಾಗಿ ಬೇರ್ಪಡುತ್ತವೆ. ನಮ್ಮ ಕಷ್ಟದ ಸಮಯದಲ್ಲಿ, ನಮ್ಮ ಧರ್ಮನಿಷ್ಠೆಯ ಪ್ರಮಾಣ ಕಡಿಮೆ ಇದ್ದರೆ, ಅದು ಇನ್ನಷ್ಟು ಸಂಕಟಗಳಿಗೆ ಕಾರಣವಾಗಬಹುದು. ಸೂರ್ಯ, ಪ್ರಕೃತಿ, ಗಾಳಿ ಎಂದಿಗೂ ಬದಲಾಗುವುದಿಲ್ಲ. ಅದೇ ರೀತಿ, ಧರ್ಮದ ಮೂಲ ತತ್ವಗಳು ಶಾಶ್ವತ.
ಆದ್ದರಿಂದ, ಇಂದಿನ ಸವಾಲುಗಳ ಮಧ್ಯೆಯೂ ಧರ್ಮದ ಹಾದಿಯಲ್ಲಿ ಮುನ್ನಡೆಯುವುದು ಅನಿವಾರ್ಯ. ಎಷ್ಟೇ ಕಷ್ಟಗಳು ಎದುರಾದರೂ, ಧರ್ಮದಿಂದ ಜೀವನ ಸಾಗಿಸಿದರೆ, ಅಂತಿಮವಾಗಿ ಜಯ ಧರ್ಮಕ್ಕೇ ಸಿಗುತ್ತದೆ. ಅಧರ್ಮಕ್ಕೆ ಎಂದಿಗೂ ಶಾಶ್ವತ ಜಯ ಸಾಧ್ಯವಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಂಕಷ್ಟಗಳು, ಕಷ್ಟಗಳು, ಸಮಸ್ಯೆಗಳು ಎದುರಾಗುವುದು ಸಹಜ. ಕೆಲವೊಮ್ಮೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾಡೇಸಾತಿ, ಅರ್ಧಾಷ್ಟಮ, ಅಷ್ಟಮದಂತಹ ಗ್ರಹಗತಿಗಳು, ಕರ್ಮ ಫಲಗಳು ಅಥವಾ ವೈಫಲ್ಯಗಳು ನಮ್ಮನ್ನು ಕಾಡಬಹುದು. ಇಂತಹ ಸಂದರ್ಭಗಳಲ್ಲಿ, ನಾವು ಸಾಮಾನ್ಯವಾಗಿ ದೈವಿಕ ಕಾರ್ಯಗಳ ಮೊರೆ ಹೋಗುತ್ತೇವೆ. ಹೋಮ, ಹವನ, ಪೂಜೆಗಳು ಅಥವಾ ದೇವಸ್ಥಾನಗಳಿಗೆ ಸಹಾಯ ಮಾಡುವಂತಹ ಧರ್ಮ ಕಾರ್ಯಗಳಲ್ಲಿ ಭಾಗಿಯಾಗುವ ಮನೋಭಾವನೆ ಪ್ರತಿಯೊಬ್ಬರಿಗೂ ಮೂಡುತ್ತದೆ.
ಆದರೆ, ಇಲ್ಲಿ ಒಂದು ಮುಖ್ಯ ಪ್ರಶ್ನೆ ಉದ್ಭವಿಸುತ್ತದೆ: ಹೋಮಗಳನ್ನು ಮನೆಯಲ್ಲಿ ಮಾಡಿಸುವುದು ಶ್ರೇಷ್ಠವೇ ಅಥವಾ ದೇವಸ್ಥಾನಗಳಲ್ಲಿ ಮಾಡಿಸುವುದು ಉತ್ತಮವೇ? ಈ ವಿಚಾರವಾಗಿ ಅನೇಕರಿಗೆ ಗೊಂದಲಗಳಿರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಯಾವುದೇ ಹೋಮ ಹವನಗಳನ್ನು ಶ್ರೇಯಸ್ಸಿಗಾಗಿ, ಅಭಿವೃದ್ಧಿಗಾಗಿ, ಆರೋಗ್ಯಕ್ಕಾಗಿ ಅಥವಾ ಸಮೃದ್ಧಿಗಾಗಿ ಮಾಡಿಸಿಕೊಳ್ಳುವುದಾದರೆ, ಅವುಗಳನ್ನು ಮನೆಯಲ್ಲಿ ಮಾಡಿಸಿಕೊಳ್ಳುವುದು ಶ್ರೇಷ್ಠ. ಉದಾಹರಣೆಗೆ, ಮನೆಗಳಲ್ಲಿ ವಾಸ್ತು ಪೂಜೆ, ಗಣಹೋಮ, ಸತ್ಯನಾರಾಯಣ ಸ್ವಾಮಿ ಹೋಮಗಳನ್ನು ಮಾಡಿಸಿಕೊಳ್ಳಬಹುದು. ಇವು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ ಮತ್ತು ಅಭಿವೃದ್ಧಿಗೆ ಪೂರಕವಾಗಿರುತ್ತವೆ.
ಆದರೆ, ದೋಷ ನಿವಾರಣಾ ಹೋಮಗಳ ವಿಷಯದಲ್ಲಿ ಇದು ಭಿನ್ನವಾಗಿರುತ್ತದೆ. ನಮಗೆ ಸರ್ಪದೋಷ, ಆರೋಗ್ಯದ ತೊಂದರೆಗಳು, ಮೃತ್ಯುವಿನ ಕಾಟ ಅಥವಾ ಯಾವುದೇ ತೀವ್ರವಾದ ಅನಾರೋಗ್ಯ ಕಾಡುತ್ತಿರುವಂತಹ ಸಂದರ್ಭಗಳಲ್ಲಿ, ದೋಷ ಹೋಮಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡಿಸುವುದು ತುಂಬಾನೇ ಒಳ್ಳೆಯದು. ಇದಕ್ಕೆ ಹಲವಾರು ಕಾರಣಗಳಿವೆ.
ಎಲ್ಲಾ ಹೋಮಗಳನ್ನು ಮನೆಯಲ್ಲಿ ಮಾಡಲು ಸೂಕ್ತವಲ್ಲ. ಮನೆಗಳಲ್ಲಿ ಹೋಮ ಮಾಡಿದರೆ, ಅದಕ್ಕೆ ಅದರದೇ ಆದ ವಿಧಿವಿಧಾನಗಳು ಮತ್ತು ಪವಿತ್ರತೆಯ ನಿರ್ವಹಣೆ ಅಗತ್ಯವಿರುತ್ತದೆ. ಆದರೆ, ದೇವಸ್ಥಾನಗಳಲ್ಲಿ ಈ ಶುದ್ಧತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲಾಗುತ್ತದೆ. ಪ್ರತಿನಿತ್ಯವೂ ಬೆಳಗಿನ ಬ್ರಾಹ್ಮೀ ಮುಹೂರ್ತ, ಅಭಿಜಿತ್ ಮುಹೂರ್ತ, ಗೋದೂಳಿ ಮುಹೂರ್ತಗಳಲ್ಲಿ ವಿಶೇಷವಾದ ಪೂಜೆಗಳು ಮತ್ತು ಅಭಿಷೇಕಗಳು ನಡೆಯುತ್ತವೆ. ಮಂತ್ರಗಳ ಮೂಲಕ ದೇವಾಲಯದ ಪರಿಸರವನ್ನು ಶುದ್ಧೀಕರಿಸಲಾಗಿರುತ್ತದೆ.
ದೇವಸ್ಥಾನಗಳಲ್ಲಿ ದೋಷ ಹೋಮಗಳಿಗೆಂದೇ ಮೀಸಲಾದ ಸ್ಥಳಗಳಿರುತ್ತವೆ. ಉದಾಹರಣೆಗೆ, ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ಕಾಳಹಸ್ತಿ ಮುಂತಾದ ಕ್ಷೇತ್ರಗಳಲ್ಲಿ ಸರ್ಪದೋಷ ಅಥವಾ ಇನ್ನಿತರ ದೋಷಗಳ ನಿವಾರಣೆಗಾಗಿ ವಿಶೇಷ ವ್ಯವಸ್ಥೆಗಳಿವೆ. ಸಾಕಷ್ಟು ಕ್ಷೇತ್ರಗಳಲ್ಲಿ ಇಂತಹ ದೋಷ ಹೋಮಗಳನ್ನು ಮಾಡಿಸಿಕೊಳ್ಳಲು ನಿರ್ದಿಷ್ಟ ಜಾಗಗಳನ್ನು ಗುರುತಿಸಿರುತ್ತಾರೆ. ಆದ್ದರಿಂದ, ಕೇವಲ ಹಣವಿದೆ, ಐಶ್ವರ್ಯವಿದೆ, ಮನೆಯಲ್ಲಿ ದೊಡ್ಡ ಜಾಗವಿದೆ ಎಂಬ ಕಾರಣಕ್ಕೆ ದೋಷ ಹೋಮಗಳನ್ನು ಮನೆಯಲ್ಲಿ ಮಾಡಿಸಿಕೊಳ್ಳುವುದು ಅಷ್ಟು ಶುಭಕರವಲ್ಲ.
ದೇವಸ್ಥಾನಗಳಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳು ನೆಲೆಸಿರುತ್ತವೆ. ಶುದ್ಧತೆಗೆ ಅಲ್ಲಿ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಮನೆಗಳಲ್ಲಿ ಅಂತಹ ಶುದ್ಧತೆಯನ್ನು ಸದಾ ಕಾಯ್ದುಕೊಳ್ಳುವುದು ಕಷ್ಟಕರವಾಗಬಹುದು. ಅಲ್ಲದೆ, ದೇವಾಲಯದಲ್ಲಿ ಅರ್ಚಕರು ಮತ್ತು ಪೂಜೆಗೆ ಬೇಕಾದ ಸಮಸ್ತ ವಸ್ತುಗಳು ಸುಲಭವಾಗಿ ಲಭ್ಯವಿರುತ್ತವೆ. ದೋಷ ಹೋಮಗಳು, ಗ್ರಹದೋಷ ಶಾಂತಿ ಪೂಜೆಗಳು ಇತ್ಯಾದಿಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡಿಸಿಕೊಳ್ಳುವುದು ಹೆಚ್ಚು ಸಮರ್ಪಕ. ನವಗ್ರಹ ಹೋಮದಂತಹ ದೋಷ ಸಂಬಂಧಿ ಹೋಮಗಳನ್ನು ಕೂಡ ಮನೆಯಲ್ಲಿ ಮಾಡಿಕೊಳ್ಳಬಾರದು, ಬದಲಾಗಿ ದೇವಸ್ಥಾನಗಳಲ್ಲಿ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ, ಮನೆಗಳಲ್ಲಿ ಕೆಲವೊಂದು ಸೂತಕಗಳು ಇರಬಹುದು ಅಥವಾ ಮನೆಯ ಸುತ್ತಲು ನಕಾರಾತ್ಮಕ ಶಕ್ತಿಗಳು ಓಡಾಡುವ ಸಾಧ್ಯತೆ ಇರುತ್ತದೆ.
ಹಾಗಾಗಿ, ಮನೆಯಲ್ಲಿ ಯಾವುದೇ ಅಭಿವೃದ್ಧಿ ಹೋಮಗಳನ್ನು ಮಾಡಿಸಿಕೊಳ್ಳಿ, ಆದರೆ ದೋಷ ಹೋಮಗಳನ್ನು ದೇವಸ್ಥಾನಗಳಲ್ಲಿ ಮಾಡಿಸಿಕೊಳ್ಳಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಡ್ಯ, ಮಾರ್ಚ್ 29: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು. ಈ ಭವ್ಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಶ್ರೀದೇವಿ ಮತ್ತು ಭೂದೇವಿ ಸಮೇತ ಚಲುವನಾರಾಯಣಸ್ವಾಮಿಯು ರತ್ನಖಚಿತ ವೈರಮುಡಿ ಕಿರೀಟವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುವುದು. ಈ ವೈರಮುಡಿ ಕಿರೀಟವನ್ನು ದೇವರಿಗೆ ಧಾರಣೆ ಮಾಡುವ ಆ ಕ್ಷಣವು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ಸಂದರ್ಭವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು ಮೇಲುಕೋಟೆಗೆ ಆಗಮಿಸಿದ್ದರು. ದೇವಾಲಯದ ಆವರಣವು ಭಕ್ತಿ-ಭಾವಗಳಿಂದ ತುಂಬಿ ತುಳುಕುತ್ತಿತ್ತು. ಭಕ್ತರು ಜೈ ಚಲುವನಾರಾಯಣಸ್ವಾಮಿ ಎಂದು ಜಯಘೋಷಗಳನ್ನು ಕೂಗುತ್ತಾ, ತಮ್ಮ ಇಷ್ಟದ ದೇವರ ದರ್ಶನ ಪಡೆದು ಪುನೀತರಾದರು.
‘ಧುರಂಧರ್’ ಚಿತ್ರದ ರೆಹಮಾನ್ ಡಕಾಯತ್ ಪಾತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಮ್ಯಾಜಿಕ್ ಮಾಡಿದ್ದ ನಟ ಅಕ್ಷಯ್ ಖನ್ನಾ (Akshaye Khanna), ಈಗ ಮತ್ತೊಂದು ವಿಭಿನ್ನ ಅವತಾರದಲ್ಲಿ ಬರಲು ಸಜ್ಜಾಗಿದ್ದಾರೆ. ಮಾರ್ಚ್ 28ರಂದು ಅಕ್ಷಯ್ ಖನ್ನಾ ಅವರ ಜನ್ಮದಿನದ ಅಂಗವಾಗಿ, ಖ್ಯಾತ ನಿರ್ದೇಶಕ ಪ್ರಶಾಂತ್ ವರ್ಮಾ ಅವರು ‘ಮಹಾಕಾಳಿ’ (Mahakali) ಸೆಟ್‌ನಿಂದ ವಿಶೇಷ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಶುಕ್ರಾಚಾರ್ಯನ ಪಾತ್ರ ಮಾಡುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅಕ್ಷಯ್ ಖನ್ನಾ ಅವರಿಗೆ ಶುಭ ಕೋರುತ್ತಾ, ‘ಯಾವುದೇ ಸದ್ದು ಗದ್ದಲವಿಲ್ಲದೆ ನೈಜ ಪ್ರತಿಭೆಯನ್ನು ಸಾಬೀತುಪಡಿಸುವ ನಟ ನೀವು. ನಿಮ್ಮೊಂದಿಗೆ ಕೆಲಸ ಮಾಡುವುದು ಗೌರವದ ವಿಷಯ’ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಅಕ್ಷಯ್ ಖನ್ನಾ ಅವರು ಗೆಟಪ್ ಗಮನ ಸೆಳೆಯುತ್ತಿದೆ.
‘ಮಹಾಕಾಳಿ’ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ಅಸುರ ಗುರು ಶುಕ್ರಾಚಾರ್ಯನ ಶಕ್ತಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಕ್ಷಯ್ ಖನ್ನಾ ಅವರು ನಟಿಸುತ್ತಿರುವ ಮೊದಲ ತೆಲುಗು ಸಿನಿಮಾ ಎಂಬುದು ವಿಶೇಷ. ಉದ್ದನೆಯ ಗಡ್ಡ ಮತ್ತು ಕೂದಲು ಬಿಟ್ಟು ಸನ್ಯಾಸಿಯ ಲುಕ್‌ನಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆದ ಬಳಿಕ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.
Happy Birthday #AkshayeKhanna sir, a true actor who proves that real talent doesn’t need noise. Effortless screen presence, powerful performances, and unmatched class always stand out
Its an absolute honour working with you. Can’t wait to show the world what we’ve created… pic.twitter.com/xiblaH8voc
‘ಹನುಮಾನ್’ ಖ್ಯಾತಿಯ ಪ್ರಶಾಂತ್ ವರ್ಮಾ ಸೃಷ್ಟಿಸಿರುವ ಈ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿ ‘ಮಹಾಕಾಳಿ’ ಚಿತ್ರ ಮೂಡಿಬರುತ್ತಿದೆ. ಈ ಯೂನಿವರ್ಸ್‌ನಲ್ಲಿ ಈಗಾಗಲೇ ‘ಜೈ ಹನುಮಾನ್’, ‘ಅಧೀರ’, ‘ಮಹಾಕಾಳಿ’ ಸಿನಿಮಾಗಳು ಘೋಷಣೆಯಾಗಿವೆ. ‘ಮಹಾಕಾಳಿ’ ಚಿತ್ರವನ್ನು ಪೂಜಾ ಕೊಲ್ಲೂರು ನಿರ್ದೇಶಿಸುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಸೂಪರ್ ಹೀರೋ ಚಿತ್ರವಾಗಿದೆ. ಕನ್ನಡದ ನಟಿ ಭೂಮಿ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
‘ಮಹಾಕಾಳಿ’ ಮಾತ್ರವಲ್ಲದೆ, ಅಕ್ಷಯ್ ಖನ್ನಾ ಅವರು ಸಿದ್ಧಾರ್ಥ್ ಪಿ. ಮಲ್ಹೋತ್ರಾ ನಿರ್ದೇಶನದ ‘ಇಕ್ಕಾ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಾಲಿವುಡ್ ಸೂಪರ್ ಸ್ಟಾರ್ ಸನ್ನಿ ಡಿಯೋಲ್ ಎದುರು ಪ್ರಬಲ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 28 ವರ್ಷಗಳ ಹಿಂದೆ ‘ಬಾರ್ಡರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಈಗ ಮತ್ತೆ ಮುಖಾಮುಖಿ ಆಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ದಿನವಿಡೀ ಉತ್ಸಾಹಭರಿತ ಮತ್ತು ಸಕಾರಾತ್ಮಕವಾಗಿರಲು ಬೆಳಗಿನ ದಿನಚರಿ (morning routine) ಉತ್ತಮವಾಗಿರಬೇಕು. ಹೌದು ದಿನದ ಆರಂಭ ಚೆನ್ನಾಗಿದ್ದರೆ ಆ ಸಂಪೂರ್ಣ ದಿನವೇ ಸಕಾರಾತ್ಮಕವಾಗಿರುತ್ತದೆ. ಅದಕ್ಕಾಗಿ ಹೆಚ್ಚಿನವರು ಬೆಳಗಿನ ದಿನಚರಿಯಲ್ಲಿ ಯೋಗ, ವ್ಯಾಯಾಮ ಮಾಡುತ್ತಾರೆ, ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುತ್ತಾರೆ. ಈ ಸಣ್ಣ ಅಭ್ಯಾಸಗಳು ನಮ್ಮನ್ನು ಆರೋಗ್ಯವಾಗಿ ಮತ್ತು ಮಾನಸಿಕವಾಗಿ ಸಕಾರಾತ್ಮಕವಾಗಿ ಇರಿಸುತ್ತದೆ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಮಾಡುವಂತಹ ಒಂದಷ್ಟು ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾದ್ರೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಬೆಳಗ್ಗೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡದಿರಿ:
ದಿನವನ್ನು ಆತುರದಿಂದ ಪ್ರಾರಂಭಿಸುವುದು: ಅನೇಕ ಜನರು ಬೆಳಿಗ್ಗೆ ಎದ್ದು, ತಮ್ಮ ಅಲಾರಾಂ ಅನ್ನು ಆಫ್ ಮಾಡಿ, ತಕ್ಷಣ ತಮ್ಮ ಫೋನ್ ನೋಡುವುದು ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. ಇದು ಮೆದುಳನ್ನು ಹೈ ಅಲರ್ಟ್ ಮೋಡ್‌ಗೆ ತರುತ್ತದೆ. ಇದು ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸಬಹುದು, ಇದು ಕಿರಿಕಿರಿ, ತಲೆನೋವು ಅಥವಾ ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು.
ಬೆಳಗ್ಗೆ ಎದ್ದತಕ್ಷಣಮೊಬೈಲ್ ಫೋನ್ ನೋಡುವುದು: ಇತ್ತೀಚಿನ ದಿನಗಳಲ್ಲಿ ಎದ್ದ ತಕ್ಷಣ ಫೋನ್ ನೋಡುವ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಇದು ಮೆದುಳಿನ ಮೇಲೆ ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ. ಫೋನ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ ಮತ್ತು ಇದು ಬೆಳಗಿನ ತಾಜಾ ಮನಸ್ಥಿತಿಯನ್ನು ಕಸಿದುಕೊಳ್ಳುತ್ತದೆ.
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು: ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇದು ಆಮ್ಲೀಯತೆ ಮತ್ತು ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡುವುದರಿಂದ ಇದು ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದು: ಬೆಳಗ್ಗೆ ಎಚ್ಚರವಾದ ನಂತರ ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದರಿಂದ ಸೋಮಾರಿತನ ಮತ್ತು ಆಲಸ್ಯ ಹೆಚ್ಚಾಗುತ್ತದೆ. ಇದು ದೇಹದ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ದಿನವಿಡೀ ನಿಮಗೆ ದಣಿವುಂಟು ಮಾಡುತ್ತದೆ. ನೀವು ಎದ್ದ ತಕ್ಷಣ ಸ್ವಲ್ಪ ಸ್ಟ್ರೆಚಿಂಗ್ ಅಥವಾ ವ್ಯಾಯಾಮ ಮಾಡುವುದು ಉತ್ತಮ.
ತಕ್ಷಣವೇ ಭಾರೀ ವ್ಯಾಯಾಮ ಮಾಡುವುದು: ಬೆಳಗ್ಗೆ ಎದ್ದ ತಕ್ಷಣವೇ ಭಾರೀ ವ್ಯಾಯಾಮವನ್ನು ಮಾಡಬೇಡಿ. ಭಾರೀ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಹಠಾತ್ ಒತ್ತಡ ಉಂಟಾಗುತ್ತದೆ. ಇದು ಸ್ನಾಯುಗಳು ಮತ್ತು ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಿಗ್ಗೆ ವಾಕಿಂಗ್ ಅಥವಾ ಸ್ಟ್ರೆಚಿಂಗ್ ನಂತಹ ಲಘು ವ್ಯಾಯಾಮವನ್ನು ಮಾಡುವುದು ಉತ್ತಮ.
ಬಾಯಿ ತೊಳೆಯದೆ ತಿನ್ನುವ ಅಭ್ಯಾಸ: ಬೆಳಿಗ್ಗೆ ಎದ್ದಾಗ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತವೆ. ಆದ್ದರಿಂದ ಬ್ರಷ್ ಮಾಡದೆ ಏನಾದ್ರೂ ಸೇವನೆ ಮಾಡಿದರೆ ಈ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರವೇಶಿಸಿ ಅವು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತವೆ. ಆದ್ದರಿಂದ, ಬೆಳಿಗ್ಗೆ ಮೊದಲು ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸುವುದು ಮುಖ್ಯ.
ಬೆಳಗಿನ ದಿನಚರಿ ಹೇಗಿರಬೇಕು?
ನಿಧಾನವಾಗಿ ಎದ್ದೇಳಿ ಮತ್ತು ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳಿ, ಧ್ಯಾನ ಮಾಡಿ. ಮೊದಲು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯಿರಿ, ಸ್ಟ್ರೆಚಿಂಗ್ ಮಾಡಿ ನಂತರ ವ್ಯಾಯಾಮ ಮಾಡಿ. ಅಲ್ಲದೆ, ಎದ್ದ ತಕ್ಷಣ ನಿಮ್ಮ ಫೋನ್ ಬಳಸುವುದನ್ನು ತಪ್ಪಿಸಿ ಮತ್ತು ನಿಮ್ಮ ದಿನವನ್ನು ಸರಳ ಮತ್ತು ಶಾಂತ ಕೆಲಸಗಳೊಂದಿಗೆ ಪ್ರಾರಂಭಿಸಿ. ಇದು ನಿಮ್ಮ ಮನಸ್ಥಿತಿ, ಆರೋಗ್ಯ ಎರಡನ್ನೂ ಸುಧಾರಿಸುತ್ತದೆ.
ಗದಗ, ಮಾರ್ಚ್ 29: ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ಕೃತ್ಯ ಎಸಗಿರಬಹುದೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ತಂದೆಯ ಪ್ರತಿಜ್ಞೆ
ಇನ್ನು ಮಗ ಚಂದ್ರುವಿನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ತಂದೆ ಬಸವರಾಜ್ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು, ತನಗೆ ಮೂರು ಎಕರೆ ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮೆನ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕರಾಗಿದ್ದಾರೆ.
ಹಿರಿಯ ಪುತ್ರನಾಗಿದ್ದ ಚಂದ್ರು ಸೇರಿ ಎರಡನೇ ಮಗ ಸುರೇಶ್ ಮದುವೆಗೆ ತಂದೆ ಬಸವರಾಜ್ ತಯಾರಿ ನಡೆಸಿದ್ದರು. ಬೀರಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಬೇಕೆಂದು ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕೆಂದಿದ್ದ ಪೋಷಕರು, ಕರುಳ ಕುಡಿಯ ಅಂತ್ಯ ಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳೋದಾಗಿ ಬಸವರಾಜ್ ಅವರು ಹೇಳಿದ್ದಾರೆ. ಅಷ್ಟಕ್ಕೂ ಚಂದ್ರುಗೆ ಆಗಿದ್ದೇನು? ಕುಟುಂಬಸ್ಥರು ಹೇಳುವಂತೆ ಇದು ನಿಜಕ್ಕೂ ಕೊಲೆಯಾ? ಅಥವಾ ಘಟನೆ ಹಿಂದೆ ಬೇರೆ ಏನಾದರೂ ಕಾರಣಗಳಿವೆಯಾ? ಎಂಬುದು ಪೊಲೀಸರ ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಸಾಲ್ಟ್ ಬೌಂಡರಿ ಲೈನ್ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ತೀರ್ಪಿನ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.
ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ನೀಡಿದ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಫಿಲ್ ಸಾಲ್ಟ್ ಹಿಡಿದರು. ಈ ಸಮಯದಲ್ಲಿ ಸಾಲ್ಟ್ ಅವರ ಕಾಲು ಅಥವಾ ದೇಹ ಬೌಂಡರಿ ಹಗ್ಗಕ್ಕೆ ತಗುಲಿದೆಯೇ ಎಂಬ ಗೊಂದಲ ಸೃಷ್ಟಿಯಾಯಿತು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಇತ್ತ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಅಸಮಾಧಾನ ಹೊರಹಾಕಿದ್ದರು. ಏಕೆಂದರೆ ಕ್ಯಾಚ್ ಹಿಡಿಯುವ ಭರದಲ್ಲಿ ಫಿಲ್ ಸಾಲ್ಟ್ ಅವರ ದೇಹ ಬೌಂಡರಿ ಹಗ್ಗಕ್ಕೆ ತಗುಲಿದಂತೆ ಕಾಣುತ್ತಿದೆ ಮತ್ತು ಹಗ್ಗ ಸ್ವಲ್ಪ ಸರಿದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.
ರೀಪ್ಲೇಗಳನ್ನು ನೋಡುವಾಗ ಕೆಲವು ಕೋನಗಳಿಂದ ಇದು ಔಟ್ ಎಂದು ಕಂಡರೂ, ಇನ್ನು ಕೆಲವು ಕಡೆಯಿಂದ ಹಗ್ಗ ಸರಿದಿರುವುದು ಸ್ಪಷ್ಟವಾಗಿತ್ತು. ಗವಾಸ್ಕರ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, “ಇದು ಕ್ಲೀನ್ ಕ್ಯಾಚ್ ಹೌದೇ ಎಂಬ ಬಗ್ಗೆ ಅನುಮಾನವಿದೆ” ಎಂದರು.
ಅಲ್ಲದೆ, ಮೂರನೇ ಅಂಪೈರ್ ಕ್ಲಾಸೆನ್ ಅವರ ಕ್ಯಾಚನ್ನು ವಿವಿಧ ಕೋನಗಳಿಂದ ಪರಿಶೀಲಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಿತ್ತು. ಫಿಲ್ ಸಾಲ್ಟ್ ಅವರು ಬೌಂಡರಿಯನ್ನು ಸ್ಪರ್ಶಿಸಿರುವಂತೆ ಕಂಡುಬರುತ್ತಿತ್ತು. ಇಂತಹ ಸಂದೇಹಾಸ್ಪದ ಸಂದರ್ಭಗಳಲ್ಲಿ, ಇದರ ಲಾಭವು ಬ್ಯಾಟರ್‌ಗೆ ಸಿಗಬೇಕಿತ್ತು. ಆದರೆ ಮೂರನೇ ಅಂಪೈರ್ ಸರಿಯಾಗಿ ಪರಿಶೀಲಿಸದೇ ಬೇಗನೆ ಔಟ್ ನೀಡಿರುವುದು ತಪ್ಪು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತ ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ಲಭ್ಯವಿರುವ ದೃಶ್ಯಗಳನ್ನು ಪರಿಶೀಲಿಸಿ ಅದು ‘ಔಟ್’ ಎಂದು ತೀರ್ಪು ನೀಡುತ್ತಿದ್ದಂತೆ ಹೆನ್ರಿಕ್ ಕ್ಲಾಸೆನ್ ಮೈದಾನದಲ್ಲೇ ಕೋಪಗೊಂಡು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಕ್ಯಾಚ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಇಶಾನ್ ಕಿಶನ್ (8) ಅವರ ಅರ್ಧಶತಕದ ನೆರವಿನೊಂದಿಗೆ 20 ಓವರ್ಗಳಲ್ಲಿ 201 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಆರ್ಸಿಬಿ ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.