All posts by nagaraj11081993

ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ – Kannada News

R. PraggnanandhaaImage Credit source: Rediff

ನಾರ್ವೆ ಚೆಸ್ 2026 ಟೂರ್ನಮೆಂಟ್‌ನಲ್ಲಿ ಭಾರತದ ಯುವ ಚೆಸ್ ತಾರೆ, 20 ವರ್ಷದ ಆರ್. ಪ್ರಜ್ಞಾನಂದ (R Praggnanandhaa) ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಸರಿಗಟ್ಟಿದ್ದಾರೆ.

ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

  • ಮೇ 27 ರಂದು ಪ್ರಜ್ಞಾನಂದ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು.
  • ಜೂನ್ 2, 2026 ರಂದು ನಡೆದ ಪಂದ್ಯದಲ್ಲಿ ಕಪ್ಪು ದಾಳಗಳೊಂದಿಗೆ  ಅದ್ಭುತ ಪ್ರದರ್ಶನ ನೀಡಿ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದರು.
  • ಈ ಮೂಲಕ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್​ಗೆ ಒಂದೇ ಕ್ಲಾಸಿಕಲ್ ಟೂರ್ನಮೆಂಟ್​ನಲ್ಲಿ ಎರಡು ಸೋಲುಣಿಸಿದ ಸಾಧನೆ ಮಾಡಿದ್ದಾರೆ.

 ವಿಶಿ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ:

ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು.

ಆ ಬಳಿಕ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.

ಈ ಗೆಲುವಿನೊಂದಿಗೆ, ಕ್ಲಾಸಿಕಲ್ ಚೆಸ್‌ನಲ್ಲಿ ಕಾರ್ಲ್‌ಸನ್ ಅವರನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೋಲಿಸಿದ ವಿಶ್ವದ ಅತ್ಯಂತ ಪ್ರಮುಖ ಗ್ರ್ಯಾಂಡ್‌ಮಾಸ್ಟರ್‌ಗಳ ಗಣ್ಯರ ಪಟ್ಟಿಗೆ ಪ್ರಜ್ಞಾನಂದ ಸೇರಿದ್ದಾರೆ.

ಹಾಗೆಯೇ ಜಯದೊಂದಿಗೆ ನಾರ್ವೆ ಚೆಸ್ 2026 ರ ಪ್ರಶಸ್ತಿ ರೇಸ್ ಮತ್ತಷ್ಟು ರೋಚಕ ಹಂತ ತಲುಪಿದೆ. ಪ್ರಜ್ಞಾನಂದ ಅವರ ಅಂಕಗಳ ಪಟ್ಟಿ ಮೇಲೇರಿದ್ದರೆ, ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದೆ.

ಪ್ರಜ್ಞಾನಂದ ಮುಂದಿನ ಸವಾಲು:

ನಾರ್ವೆ ಚೆಸ್ 2026 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಪ್ರಜ್ಞಾನಂದ ಪಾಲಿಗೆ ಇನ್ನುಳಿದ ಕೊನೆಯ 2 ಸುತ್ತುಗಳು (Round 9 & Round 10) ಅತ್ಯಂತ ನಿರ್ಣಾಯಕವಾಗಿವೆ. ಸದ್ಯದ ಅಂಕಗಳ ಪಟ್ಟಿಯಲ್ಲಿ ಅವರು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅಮೆರಿಕದ ವೆಸ್ಲಿ ಸೋ (14 ಅಂಕ) ಹಾಗೂ  ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಅವರನ್ನು ಹಿಂದಿಕ್ಕಬೇಕು.

ಇದನ್ನೂ ಓದಿ: 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ!

ಇದಕ್ಕಾಗಿ ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಡಿ. ಗುಕೇಶ್ ವಿರುದ್ಧ ಗೆಲ್ಲಬೇಕಾಗಿದೆ. ಈ ಗೆಲುವುಗಳ ಮೂಲಕ ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಅವರ ಕೈಸೇರಲು ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.

Source link

Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ – Kannada News

ಈಗಿನ ಕಾಲದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿಗಳ ಜತೆಗೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಅಂತಹದರಲ್ಲಿ ಈ ಜಪಾನಿನ ವೃದ್ಧ ದಂಪತಿ ಭಾರತೀಯ ವ್ಯಕ್ತಿಯನ್ನು ಊಟಕ್ಕೆ ಆಹ್ವಾನಿಸಿದ್ದಾರಂತೆ. ಹೌದು, ಜಪಾನ್‌ನಲ್ಲಿ(Japan) ಟ್ರಕ್ಕಿಂಗ್ ಮಾಡುತ್ತಿದ್ದ ವೇಳೆ ಬಾಟಲಿಯಲ್ಲಿದ್ದ ನೀರು ಖಾಲಿಯಾಗಿದೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯ ವೃದ್ಧ ದಂಪತಿ (Elderly couple) ಭಾರತೀಯನಿಗೆ ನೀರಿನ ಬದಲು ಜ್ಯೂಸ್ ನೀಡಿದಲ್ಲದೇ, ತಮ್ಮ ಮನೆಗೆ ಊಟಕ್ಕೂ ಕರೆದಿದ್ದಾರಂತೆ. ಈ ವೃದ್ಧ ದಂಪತಿಯ ಒಳ್ಳೆಯ ಮನಸ್ಸನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಆದಿತ್ಯ ಪಾರ್ಖಿ ಎಂಬ ಭಾರತೀಯ ವ್ಯಕ್ತಿ ತಮ್ಮ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ, ಭಾರತೀಯ ವ್ಯಕ್ತಿ ಜಪಾನ್‌ನ ಅಮಾಮಿ ಎಂಬ ಹಳ್ಳಿಯಲ್ಲಿ ಪರ್ವತದಲ್ಲಿ ಟ್ರಕ್ಕಿಂಗ್ ಮಾಡುತ್ತಿದ್ದ ವೇಳೆ ನೀರು ಖಾಲಿಯಾಯಿತು. ಸಹಾಯಕ್ಕಾಗಿ ಹುಡುಕುತ್ತಾ, ಹತ್ತಿರದ ಮನೆಯೊಂದಕ್ಕೆ ಹೋಗಿ ನೀರು ಖರೀದಿಸಲು ಕೆಫೆ ಇದೆಯೇ ಎಂದು ಕೇಳಿರುವುದನ್ನು ನೀವು ನೋಡಬಹುದು. ಆದರೆ ನೀರಿನ ಬದಲು ವೃದ್ಧ ವ್ಯಕ್ತಿ ಜ್ಯೂಸ್ ಕೊಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಮಾತುಕತೆ ಶೀಘ್ರದಲ್ಲೇ ಸ್ನೇಹಪರ ಸಂಭಾಷಣೆಯಾಗಿ ಬದಲಾಗಿದೆ. ಈ ವೃದ್ಧ ವ್ಯಕ್ತಿ ಭಾರತೀಯ ವ್ಯಕ್ತಿಯ ಬಳಿ, ನೀವು ಕೆಲಸದಲ್ಲಿ ಜಪಾನೀಸ್ ಬಳಸುತ್ತೀರಾ? ಎಂದು ಕೇಳಿದ್ದಾರೆ. ಹೌದು, ಜಪಾನೀಸ್. ನನ್ನದು ಕಂಪ್ಯೂಟರ್ ಸಂಬಂಧಿತ ಕೆಲಸ. ನಾನು ಐಟಿ ಅಧ್ಯಯನ ಮಾಡಿದ್ದೇನೆ. ಐಟಿ ಕೆಲಸ ಎಂದು ಭಾರತೀಯ ವ್ಯಕ್ತಿ ಉತ್ತರಿಸಿದ್ದಾರೆ.

ಆ ಬಳಿಕ ವೃದ್ಧ ಮಹಿಳೆ ಭಾರತೀಯ ಆಹಾರದ ಬಗ್ಗೆ ಮಾತನಾಡಿದ್ದು, ನಾನು ಮೊದಲು ಕರಿ ತಿಂದಿದ್ದೇನೆ. ನನಗೆ ಕರಿ ಇಷ್ಟ. ನಾನು ಬಿರಿಯಾನಿ ತಿಂದಿದ್ದೇನೆ, ಬಹಳ ರುಚಿಕರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೀವು ಕಾಣಬಹುದು. ಕೊನೆಗೆ ಈ ವೃದ್ಧ ದಂಪತಿ ಊಟ ಮಾಡುವಂತೆ ಈ ವ್ಯಕ್ತಿಯನ್ನು ಒತ್ತಾಯಿಸಿದ್ದು, ಎಲ್ಲರೂ ಜತೆಗೆ ಕುಳಿತು ಊಟ ಮಾಡಿದ್ದಾರೆ. ತಮಾಷೆ ಭರಿತ ಮಾತುಕತೆ ಮುಗಿದ ಬಳಿಕ  ಭಾರತೀಯ ವ್ಯಕ್ತಿ ಹೊರಟು ನಿಂತಿದ್ದು, ಜಾಗರೂಕರಾಗಿರಿ ಎನ್ನುತ್ತಾ ಈ ವೃದ್ಧ ಮಹಿಳೆ ಕಳುಹಿಸಿ ಕೊಡುವುದರೊಂದಿಗೆ ಈ ವಿಡಿಯೋ ಕೊನೆಗೊಂಡಿದೆ.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜಪಾನೀಸ್ ಸಂಸ್ಕೃತಿ ನಿಜವಾಗಿಯೂ ಅದ್ಭುತವಾಗಿದೆ, ಮತ್ತು ಆತಿಥ್ಯವು ಅಷ್ಟೇ ಪ್ರಭಾವಶಾಲಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಜಪಾನೀಸ್ ಜನರು ತುಂಬಾ ಒಳ್ಳೆಯವ್ರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಅದ್ಭುತ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

Source link

ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳನ್ನು ಆಹ್ವಾನಿಸಿದ ಡಿಕೆಶಿ: ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನಿಯೋಜಿತ ಮುಖ್ಯಮಂತ್ರಿ – Kannada News

ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಿಗೆ ಡಿಕೆಶಿ ಆಹ್ವಾನImage Credit source: Tv9 Kannada

ಬೆಂಗಳೂರು, ಜೂನ್​​, 03: ಕರ್ನಾಟಕದ ನೂತನ ಸಿಎಂ ಆಗಿ ಇಂದು ಸಂಜೆ ಪ್ರಮಾಣವಚನ ಹಿನ್ನೆಲೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮನೆಗಳಿಗೆ ಖುದ್ದಾಗಿ ತೆರಳಿ ಡಿ.ಕೆ. ಶಿವಕುಮಾರ್ (DK Shivakumar)​​ ಆಹ್ವಾನ ನೀಡಿದ್ದಾರೆ. ಸಂಜೆ 4 ಗಂಟೆ 05 ನಿಮಿಷಕ್ಕೆ ನಡೆಯಲಿರುವ ಪದಗ್ರಹಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ, ಬಿ.ಎಸ್​​. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಡಿಕೆಶಿ ಆಮಂತ್ರಿಸಿದ್ದಾರೆ. ಮೊದಲು ಸಿದ್ದರಾಮಯ್ಯ ನಿವಾಸಕ್ಕೆ ನಿಯೋಜಿತ ಸಿಎಂ ತೆರಳಿದ್ದು, ಈ ವೇಳೆ ಪರಮೇಶ್ವರ್​​ ಅವರ ಜೊತೆ ಉಪಸ್ಥಿತರಿದ್ದರು.

ಮುಖ್ಯಾಂಶಗಳು

  • ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಿಗೆ ಡಿಕೆಶಿ ಆಹ್ವಾನ
  • ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ದೇವೇಗೌಡರಿಗೆ ಆಹ್ವಾನ
  • ನಿಯೋಜಿತ ಸಿಎಂರನ್ನು ಈ ವೇಳೆ ಅಭಿನಂದಿಸಿರುವ ನಾಯಕರು

ಬಿಎಸ್​​ವೈ ಆಶೀರ್ವಾದ ಪಡೆದ ಡಿಕೆಶಿ

ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರ ಮನೆಗೂ ಡಿಕೆಶಿ ತೆರಳಿದ್ದು, ಈ ವೇಳೆ ಮನೆಯಿಂದ ಹೊರಬಂದು ನಿಯೋಜಿತ ಸಿಎಂರನ್ನು ಬಿಎಸ್​ವೈ ಆಲಂಗಿಸಿ ಸ್ವಾಗತಿಸಿದ್ದಾರೆ. ಬಳಿಕ ಮನೆಯ ದೇವರ ಕೋಣೆಗೆ ತೆರಳಿ ಡಿಕೆಶಿ ನಮಸ್ಕರಿಸಿದ್ದು, ಈ ವೇಳೆ ಶಾಲು ಹೊದಿಸಿ ಶಿವಕುಮಾರ್​​ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ; ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಶಿವಕುಮಾರ್​

ಇನ್ನು ರಾಜಕೀಯ ವೈರತ್ವ ಮರೆತು ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೂ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಡಿಕೆಶಿ ಆಹ್ವಾನಿಸಿದ್ದಾರೆ. ಈ ವೇಳೆ ದೇವೇಗೌಡರ ಕಾಲಿಗೆ ಶಿವಕುಮಾರ್​​ ನಮಿಸಿದ್ದು, ನಿಯೋಜಿತ ಸಿಎಂರನ್ನು ಹೆಚ್​ಡಿಡಿ ಈ ವೇಳೆ ಅಭಿನಂದಿಸಿದ್ದಾರೆ.

ಬಳಿಕ ಮಾತನಾಡಿದ ಡಿಕೆಶಿ, ದೇವೇಗೌಡರು ಮತ್ತು ಯಡಿಯೂರಪ್ಪ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸೇವೆ ಸಲ್ಲಿಸಿರುವ ಬೇರೆ ಮುಖ್ಯಮಂತ್ರಿಗಳನ್ನೂ ಸಹ ಭೇಟಿ ಮಾಡುತ್ತೇನೆ. ಹೆಚ್​.ಡಿ.ದೇವೇಗೌಡರು ನನಗೆ ಹಲವು ಸಲಹೆ ನೀಡಿದ್ದಾರೆ.
ನನ್ನ ತಾಳ್ಮೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತೇನೆ ಎಂದು ಅವರಿಗೆ ನಂಬಿಕೆ. ಮುಂದೆಯೂ ಸಹ ಬಂದು ಅವರ ಮಾರ್ಗದರ್ಶನ ಪಡೆಯುವೆ. ಬೆಳಗ್ಗೆ ಸೋನಿಯಾ ಗಾಂಧಿ ಕೂಡ ಕರೆ ಮಾಡಿ ವಿಶ್​ ಮಾಡಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿರೋದಾಗಿ ಈ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:58 pm, Wed, 3 June 26

Source link

8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ! – Kannada News

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಸಿರುವ ಟೀಮ್ ಇಂಡಿಯಾ ಆಟಗಾರರು ಇದೀಗ ತವರಿನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅದು ಕೂಡ 8 ಸುದೀರ್ಘ 8 ವರ್ಷಗಳ ಬಳಿಕ. ಅಂದರೆ ಉಭಯ ತಂಡಗಳು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿ ಬರೋಬ್ಬರಿ 8 ವರ್ಷಗಳು ಕಳೆದಿವೆ.

ಭಾರತ ಮತ್ತು ಅಫ್ಘಾನಿಸ್ತಾನ್ ತಂಡ ಈವರೆಗೆ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಅದು ಸಹ 2018 ರಲ್ಲಿ. ಈ ಪಂದ್ಯವನ್ನು ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 262 ರನ್​ಗಳ ಜಯ ಸಾಧಿಸಿತ್ತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಅಂದಿನ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.

  • ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 474 ರನ್​ ಕಲೆಹಾಕಿದ್ದರು.
  • ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ತಂಡ 109 ರನ್​ಗಳಿಗೆ ಆಲೌಟ್ ಆಗಿದ್ದರು.
  • ಟೀಮ್ ಇಂಡಿಯಾ ಫಾಲೋಆನ್ ಹೇರಿದ ಹಿನ್ನಲೆ ಅಫ್ಘಾನಿಸ್ತಾನ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು.
  • ದ್ವಿತೀಯ ಇನಿಂಗ್ಸ್​ನಲ್ಲಿ ಅಫ್ಘಾನಿಸ್ತಾನ್ ತಂಡವು ಕೇವಲ 103 ರನ್​ಗಳಿಸಿ ಆಲೌಟ್ ಆಯಿತು.
  • ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 262 ರನ್​ಗಳ ಭರ್ಜರಿ ಜಯ ಸಾಧಿಸಿದ್ದರು.

ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷ ಎಂದರೆ ಈ ಪಂದ್ಯ ನಡೆಯಲಿರುವುದು ಚಂಡೀಗಢ್​ನ ಮುಲ್ಲನ್​ಪುರ್ ಸ್ಟೇಡಿಯಂನಲ್ಲಿ.

ಅಂದರೆ ಇದೇ ಮೊದಲ ಬಾರಿಗೆ ಚಂಡೀಗಢ್​ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಮುಲ್ಲನ್​ಪುರ್​ನಲ್ಲಿರುವ ಎಂವೈಎಸ್ ಸ್ಟೇಡಿಯಂನಲ್ಲಿ ಈವರೆಗೆ ಐಪಿಎಲ್ ಪಂದ್ಯಗಳು, ಒಂದು ಪುರುಷರ ಟಿ20 ಪಂದ್ಯ ಮತ್ತು ಎರಡು ಮಹಿಳಾ ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೀಗ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಾದರೂ ಅಫ್ಘಾನಿಸ್ತಾನ್ ಪಡೆ ಯಂಗ್ ಇಂಡಿಯಾಗೆ ಸವಾಲೆಸೆಯಲಿದೆಯಾ ಕಾದು ನೋಡಬೇಕಿದೆ.

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ.

ಇದನ್ನೂ ಓದಿ: FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

ಅಫ್ಘಾನಿಸ್ತಾನ್ ಟೆಸ್ಟ್ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ಅಬ್ದುಲ್ ಮಲಿಕ್, ಸೇದಿಕುಲ್ಲಾ ಅಟಲ್, ರಹಮತ್ ಷಾ, ರಹಮಾನುಲ್ಲಾ ಗುರ್ಬಾಝ್, ರಹಮಾನುಲ್ಲಾ ಝದ್ರಾನ್, ಅಫ್ಸರ್ ಝಜೈ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮಝಾಹಿ, ಶರಫುದಿನ್ ಅಶ್ರಫ್, ನಂಗಿಯಾಲೈ ಖರೋಟಿ, ಖೈಸ್ ಅಹ್ಮದ್, ಬಿಲಾಲ್ ಸಮಿ, ಜಿಯಾ ಶರೀಫಿ, ಸಲೀಂ ಸಫಿ.

Source link

ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ – Kannada News

ವಾಷಿಂಗ್ಟನ್, ಜೂನ್ 3: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಪುನರಾರಂಭಗೊಂಡ ಬೆನ್ನಲ್ಲೇ, ಭಾರತಕ್ಕೆ ಅಮೆರಿಕ ಹೊಸದೊಂದು ಆಘಾತ ನೀಡಿದೆ. ಬಲವಂತದ ಕಾರ್ಮಿಕ ಕ್ರಮ ಮೂಲಕ ತಯಾರಾದ ಸರಕುಗಳಿಗೆ ನಿರ್ಬಂಧ ಹಾಕಿಲ್ಲ ಎನ್ನುವ ಕಾರಣವೊಡ್ಡಿ 60 ದೇಶಗಳಿಗೆ ಅಮೆರಿಕ ಶೇ. 12.5ರಷ್ಟು ಹೆಚ್ಚುವರಿ ಸುಂಕವನ್ನು (Tariff) ವಿಧಿಸಲು ಯೋಜಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್) ಇಂಥದ್ದೊಂದು ಪ್ರಸ್ತಾಪ ಮಾಡಿದ್ದಾರೆ. ಈ 60 ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ, ರಷ್ಯಾ ಮೊದಲಾದವು ಇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ (supply chains) ‘ಬಲವಂತದ ಕಾರ್ಮಿಕ ಪದ್ಧತಿ’ಯನ್ನು (Forced Labour) ತಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಅಮೆರಿಕದ 1974ರ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 301’ ರ ಅಡಿಯಲ್ಲಿ USTR ಹಲವು ತಿಂಗಳುಗಳಿಂದ ತನಿಖೆ ನಡೆಸುತ್ತಿತ್ತು. ತನ್ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳು ತಮ್ಮ ಪೂರೈಕೆ ಸರಪಳಿಯಲ್ಲಿ ಬಲವಂತದ ಕಾರ್ಮಿಕರಿಂದ ತಯಾರಾಗುವ ಸರಕುಗಳ ಆಮದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆಯೇ ಇಲ್ಲವೇ ಎಂಬುದನ್ನು ಈ ತನಿಖೆ ಪರಿಶೀಲಿಸಿದೆ. ಜೂನ್ 3ರಂದು ಪ್ರಕಟವಾದ ವರದಿಯ ಪ್ರಕಾರ, ಭಾರತ ಸೇರಿದಂತೆ ವಿಶ್ವದ ಒಟ್ಟು 60 ದೇಶಗಳು ಜಾಗತಿಕ ಪೂರೈಕೆ ಸರಪಳಿಯಲ್ಲಿ ಬಲವಂತದ ಕಾರ್ಮಿಕರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ. ಇಂತಹ ವೈಫಲ್ಯಗಳು ಅಮೆರಿಕದ ಸ್ಥಳೀಯ ಉತ್ಪಾದಕರು ಮತ್ತು ಕಾರ್ಮಿಕರಿಗೆ ಅನ್ಯಾಯದ ಸ್ಪರ್ಧೆಯನ್ನು ಉಂಟುಮಾಡುತ್ತವೆ ಎಂದು ಟ್ರಂಪ್ ಆಡಳಿತ ವಾದಿಸಿದೆ.

ಇತರ ದೇಶಗಳಿಗೆ 10%, ಭಾರತಕ್ಕೇಕೆ 12.5% ಸುಂಕ?

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಹೆಚ್ಚು ಸುಂಕ ವಿಧಿಸಲು USTR ಮಾಡಿರುವ ದೇಶಗಳ ವರ್ಗೀಕರಣವೇ ಮುಖ್ಯ ಕಾರಣವಾಗಿದೆ.

10% ಸುಂಕದ ವರ್ಗ: ಕೆನಡಾ, ಯುರೋಪಿಯನ್ ಯೂನಿಯನ್ (EU), ಮೆಕ್ಸಿಕೋ, ಇಂಡೋನೇಷ್ಯಾ, ಮಲೇಷ್ಯಾ, ತೈವಾನ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಮುಂತಾದ ದೇಶಗಳಿಗೆ ಶೇ. 10 ರಷ್ಟು ಸುಂಕ ವಿಧಿಸಲಾಗಿದೆ. ಏಕೆಂದರೆ ಈ ದೇಶಗಳು ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳ ಆಮದಿನ ವಿರುದ್ಧ ಸಂಪೂರ್ಣ ಅಥವಾ ಭಾಗಶಃ ನಿಷೇಧವನ್ನು ಹೊಂದಿವೆ.

ಇದನ್ನೂ ಓದಿ: ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

12.5% ಸುಂಕದ ವರ್ಗ (ಭಾರತ): ಭಾರತವನ್ನು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಜೊತೆಗೆ ಉನ್ನತ ಸುಂಕದ ವರ್ಗದಲ್ಲಿ ಇರಿಸಲಾಗಿದೆ. USTR ಪ್ರಕಾರ, ಈ ದೇಶಗಳಲ್ಲಿ ಬಲವಂತದ ಕಾರ್ಮಿಕರ ಸಂಪರ್ಕ ಹೊಂದಿರುವ ಸರಕುಗಳು ಪೂರೈಕೆ ಸರಪಳಿಯನ್ನು ಪ್ರವೇಶಿಸದಂತೆ ತಡೆಯಲು ಸಾಕಷ್ಟು ಬಲವಾದ ನಿಷೇಧಗಳು ಅಥವಾ ಕಟ್ಟುನಿಟ್ಟಾದ ಜಾರಿ ಕಾರ್ಯವಿಧಾನಗಳು ಇಲ್ಲ.

ವಿಶೇಷವೆಂದರೆ, ಈ ಬಾರಿ ಅಮೆರಿಕವು ವ್ಯಾಪಾರ ಕೊರತೆ (trade deficits) ಅಥವಾ ಪರಸ್ಪರ ಸುಂಕದ ದರಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿಲ್ಲ, ಬದಲಿಗೆ ಕೇವಲ ಕಾರ್ಮಿಕ ಕಾಯ್ದೆಗಳ ಜಾರಿಯ ಗುಣಮಟ್ಟವನ್ನು ಆಧರಿಸಿ ಈ ಸುಂಕ ವಿಧಿಸಿದೆ.

ಪ್ರಸ್ತುತ ಇರುವ 10% ಮೂಲ ಸುಂಕಕ್ಕೂ ಇದಕ್ಕೂ ಏನು ಸಂಬಂಧ?

ಅಮೆರಿಕದ ಸುಪ್ರೀಂ ಕೋರ್ಟ್ ಹಳೆಯ ತುರ್ತು ಸುಂಕದ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ, ಅಮೆರಿಕವು ಸದ್ಯಕ್ಕೆ ತನ್ನ ಎಲ್ಲಾ ವ್ಯಾಪಾರ ಪಾಲುದಾರ ದೇಶಗಳ ಮೇಲೆ ತಾತ್ಕಾಲಿಕವಾಗಿ ಶೇ. 10 ರಷ್ಟು ಮೂಲ ಸುಂಕವನ್ನು (baseline tariff) ಹೇರಿದೆ. ಈ ನಿಯಮವು ಜುಲೈ 24 ರವರೆಗೆ ಜಾರಿಯಲ್ಲಿರಲಿದೆ.

ಆದರೆ, ಈಗ ಪ್ರಸ್ತಾಪಿಸಲಾಗಿರುವ ಶೇ. 12.5 ರಷ್ಟು ಸುಂಕವು ಸಂಪೂರ್ಣವಾಗಿ ವಿಭಿನ್ನವಾದ ಕಾನೂನು ಮಾರ್ಗದ (ಸೆಕ್ಷನ್ 301) ಅಡಿಯಲ್ಲಿ ಬರುತ್ತದೆ. ಆದ್ದರಿಂದ ಇದು ಪ್ರಸ್ತುತ ಇರುವ ಮೂಲ ಸುಂಕದ ಚೌಕಟ್ಟಿಗಿಂತ ಭಿನ್ನವಾಗಿದೆ ಮತ್ತು ಪ್ರತ್ಯೇಕವಾಗಿದೆ.

ಭಾರತ ಈ ಸುಂಕದಿಂದ ಪಾರಾಗಲು ಸಾಧ್ಯವೇ?

ಈ ಹೊಸ ಸುಂಕದ ಪ್ರಸ್ತಾಪ ಇನ್ನೂ ಅಂತಿಮಗೊಂಡಿಲ್ಲ. USTR ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಜುಲೈ 6 ರವರೆಗೆ ಕಾಲಾವಕಾಶ ನೀಡಿದೆ ಮತ್ತು ಜುಲೈ 7 ರಂದು ವಿಚಾರಣೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರಸ್ತುತ ಭಾರತ ಮತ್ತು ಅಮೆರಿಕ ನಡುವೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಕುರಿತು ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿವೆ. ಸೆಕ್ಷನ್ 301 ರ ಅಡಿಯ ಸುಂಕಗಳಿಂದ ವಿನಾಯಿತಿ ಪಡೆಯುವುದು ಭಾರತದ ಪ್ರಮುಖ ಉದ್ದೇಶವಾಗಿದೆ. ಜುಲೈ ಗಡುವಿನ ಒಳಗಾಗಿ ಉಭಯ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟ್ಟರೆ, ವಾಷಿಂಗ್ಟನ್ ಈ ಹೆಚ್ಚುವರಿ ಸುಂಕವನ್ನು ಕೈಬಿಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಬಲವಂತದ ಕಾರ್ಮಿಕ ಪದ್ಧತಿ ಎಂದರೇನು?

ಜೀತಗಾರಿಕೆ, ಬಲವಂತವಾಗಿ ಕೆಲಸ ಮಾಡಿಸುವುದು, ಮಾನವ ಕಳ್ಳಸಾಗಣೆ ಮೂಲಕ ಜನರನ್ನು ಕರೆತಂದು ಕೆಲಸ ಮಾಡಿಸುವುದು, ಇವೇ ಮುಂತಾದ ವ್ಯವಸ್ಥೆ ಅನ್ನು ಫೋರ್ಸ್ ಲೇಬರ್ ಎಂದು ಅಮೆರಿಕದ ಕಾನೂನು ವರ್ಗೀಕರಿಸುತ್ತದೆ.

ಭಾರತದ ಮೇಲಾಗುವ ಪರಿಣಾಮಗಳೇನು?

ಭಾರತದ ರಫ್ತುದಾರರ (exporters) ಮೇಲಾಗುವ ತಕ್ಷಣದ ಪರಿಣಾಮಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅಮೆರಿಕದ ಈ ನಿರ್ಧಾರವು ಭಾರತಕ್ಕೆ ತೀವ್ರ ಮುಜುಗರ ಮತ್ತು ಆರ್ಥಿಕ ಒತ್ತಡವನ್ನು ತಂದಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಬೆಲೆ ಹೆಚ್ಚಾಗುವ ಭೀತಿ ಎದುರಾಗಿದೆ. ವಾಷಿಂಗ್ಟನ್‌ನ ವಾಣಿಜ್ಯ ಕಾರ್ಯಸೂಚಿಯಲ್ಲಿ ಇನ್ನು ಮುಂದೆ ‘ಕಾರ್ಮಿಕರ ಹಕ್ಕುಗಳ ಅನುಸರಣೆ’ ಮತ್ತು ‘ಪೂರೈಕೆ ಸರಪಳಿಯ ಪಾರದರ್ಶಕತೆ’ ಅತ್ಯಂತ ಪ್ರಮುಖ ವಿಷಯಗಳಾಗಲಿವೆ ಎಂಬ ಸ್ಪಷ್ಟ ಸಂದೇಶವನ್ನು ಈ ನಿರ್ಧಾರ ನೀಡಿದೆ. ಮುಂಬರುವ ಕೆಲವು ವಾರಗಳ ಮಾತುಕತೆಯು ಭಾರತಕ್ಕೆ ಈ ಸುಂಕದಿಂದ ವಿನಾಯಿತಿ ಸಿಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಮುಗಿಯುತ್ತಿದ್ದಂತೆ ಸಿನಿ ಹಬ್ಬ ಶುರು; ಈ ವಾರ ಥಿಯೇಟರ್​ನಲ್ಲಿ ಬಿಗ್ ಫೈಟ್ – Kannada News

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಹಬ್ಬ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರೇಕ್ಷಕರು ಮತ್ತೆ ಸಿನಿಮಾ ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಐಪಿಎಲ್ ಕ್ರೇಜ್‌ನಿಂದಾಗಿ ಇಷ್ಟು ದಿನ ದೊಡ್ಡ ಸಿನಿಮಾಗಳ ಬಿಡುಗಡೆ ಕೊಂಚ ಕಮ್ಮಿಯಾಗಿತ್ತು. ಆದರೆ ಈಗ ಕ್ರಿಕೆಟ್ ಜ್ವರ ಇಳಿಯುತ್ತಿದ್ದಂತೆ ಬಾಕ್ಸ್ ಆಫೀಸ್‌ನಲ್ಲಿ ಅಸಲಿ ಜಟಾಪಟಿ ಆರಂಭವಾಗಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸೌತ್ ಮತ್ತು ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿದ್ದು, ಸಿನಿಮಾ ಪ್ರೇಮಿಗಳಿಗೆ ಜೂನ್ ತಿಂಗಳ ಆರಂಭದಲ್ಲೇ ಭರಪೂರ ಮನರಂಜನೆಯ ಹಬ್ಬ ಸಿಗಲಿದೆ.

‘ಮ್ಯಾಂಗೋ ಪಚ್ಚ’

ಕಿಚ್ಚ ಸುದೀಪ್ ಅಳಿಯ ಸಂಜಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಜೂನ್ 5ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಅನ್ನು ಸುದೀಪ್ ಪತ್ನಿ ಪ್ರಿಯಾ ನಿರ್ಮಾಣ ಮಾಡಿದ್ದಾರೆ. ಭಿನ್ನವಾದ ಶೀರ್ಷಿಕೆ ಮತ್ತು ವಿಭಿನ್ನವಾದ ಕಥಾಹಂದರ ಹೊಂದಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾ ಕೌಟುಂಬಿಕ ಡ್ರಾಮಾ ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ದೊಡ್ಡ ಕಮರ್ಷಿಯಲ್ ಚಿತ್ರಗಳ ಪೈಪೋಟಿಯ ನಡುವೆಯೂ ತನ್ನ ಕಂಟೆಂಟ್ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಪೆದ್ದಿ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ‘ಪೆದ್ದಿ’ ಸಿನಿಮಾ ಈ ವಾರದ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ‘ಆರ್​​ಆರ್​ಆರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಉತ್ತರ ಭಾರತದಲ್ಲೂ ರಾಮ್ ಚರಣ್ ಅವರಿಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು, ಈ ಚಿತ್ರವು ಹಿಂದಿಯಲ್ಲೂ ಅತ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್, ಕನ್ನಡದ ನಟ ಶಿವರಾಜ್​​ಕುಮಾರ್ ಅಭಿನಯಿಸಿದ್ದಾರೆ. ಬುಚ್ಚಿ ಬಾಬು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ

ಹೈ ಜವಾನಿ ತೋ ಇಷ್ಕ್ ಹೋನಾ ಹೈ

ಬಾಲಿವುಡ್‌ನ ಖ್ಯಾತ ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಂಪೂರ್ಣ ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದೆ. ವರುಣ್ ಧವನ್, ಮೃಣಾಲ್ ಠಾಕೂರ್ ಹಾಗೂ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜೂನ್ 5 ರಂದು ತೆರೆಗೆ ಬರುತ್ತಿದೆ. ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾದ ಹಿಂದಿ ಬಿಡುಗಡೆಯ ಭೀತಿಯ ನಡುವೆಯೇ, ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆಯಲು ಬುಕ್‌ಮೈಶೋನಲ್ಲಿ ಟಿಕೆಟ್ ದರದಲ್ಲಿ ಬರೋಬ್ಬರಿ 50% ರಷ್ಟು ಭರ್ಜರಿ ರಿಯಾಯಿತಿ ಆಫರ್ ಅನ್ನು ಚಿತ್ರತಂಡ ಘೋಷಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿರುವ ಪೂಜಾ ಹೆಗ್ಡೆ ಅವರಿಗೆ ಈ ಸಿನಿಮಾ ಬಾಲಿವುಡ್‌ನಲ್ಲಿ ಮರುಜೀವ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Delhi Tragedy: ದೆಹಲಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ – Kannada News

ನವದೆಹಲಿ, ಜೂನ್ 03: ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ‘ಮಿಕಾಸಾ ಇನ್’ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ(Fire Tragedy) ಸಂಭವಿಸಿದೆ. ಘಟನೆಯಲ್ಲಿ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಕೆಲವರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಬೆಳಗ್ಗೆ 8.50 ರ ಸುಮಾರಿಗೆ ಹೋಟೆಲ್‌ನ ನೆಲಮಾಳಿಗೆಯಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ, ದೆಹಲಿ ಅಗ್ನಿಶಾಮಕ ಸೇವೆಗಳು (DFS) ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಅಪಾಯದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಎರಡು ವಾಟರ್ ಎಂಜಿನ್‌ಗಳು, ಎರಡು ಬೌಸರ್‌ಗಳು ಮತ್ತು ಒಂದು ತ್ವರಿತ ಪ್ರತಿಕ್ರಿಯೆ ವಾಹನ (QRV) ಸೇರಿದಂತೆ ಆಧುನಿಕ ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿದವು. ಕಿರಿದಾದ ಗಲ್ಲಿಗಳ ನಡುವೆಯೂ ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಐದು ಅಂತಸ್ತಿನ ಈ ಹೋಟೆಲ್‌ನಲ್ಲಿ ಸುಮಾರು 25 ಕೊಠಡಿಗಳಿದ್ದು, ಅವಘಡದ ಸಮಯದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಇದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದರು. ಬೆಂಕಿ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಹೋಟೆಲ್ ಸಿಬ್ಬಂದಿ ಅಗ್ನಿಶಾಮಕ ದಳದೊಂದಿಗೆ ಕೈಜೋಡಿಸಿ, ಸಿಲುಕಿಕೊಂಡಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹರಸಾಹಸ ಪಟ್ಟರು. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೆಸ್ಟೋರೆಂಟ್ ಸಿಬ್ಬಂದಿಯ ಜಾಣ್ಮೆ
ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡುವ ಕೇಸರ್ ಸಿಂಗ್ ಅವರು ಬೆಳಗ್ಗೆ ವಿದ್ಯುತ್ ಸ್ಟೌವ್ ಆನ್ ಮಾಡಲು ಹೋದಾಗ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅವರು ಗಾಬರಿಯಾಗದೆ ತಕ್ಷಣವೇ ತಮ್ಮ ಸಹಾಯಕರು ಹಾಗೂ ಹೋಟೆಲ್‌ನ ಇತರೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಎಲ್ಲರೂ ಬೇಗನೆ ಹೊರಹೋಗಲು ದಾರಿ ಮಾಡಿಕೊಟ್ಟರು.

ಮತ್ತಷ್ಟು ಓದಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರು ದುರ್ಮರಣ

ಅನಿರೀಕ್ಷಿತವಾಗಿ ಸಂಭವಿಸಿದ ಈ ಅವಘಡದಲ್ಲಿ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರದ ಸಂಗತಿಯಾದರೂ, ದೆಹಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಹೌಜ್ ರಾಣಿಯ ಯುವಕರ ಸಕಾಲಿಕ ಸಾಹಸದಿಂದಾಗಿ ಉಳಿದ ಜನರುಪಾರಾಗಿರುವುದು ಸಮಾಧಾನದ ಸಂಗತಿಯಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಅಕ್ರಮಗಳ ಬಗ್ಗೆ ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ – Kannada News

ಸಿಬಿಐ ಹಾಗೂ ಬಿ ನಾಗೇಂದ್ರImage Credit source: TV9 Network

ಬೆಂಗಳೂರು, ಜೂನ್ 3: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ (KMVSTDCL) ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಸೇರಿದಂತೆ 30 ಆರೋಪಿಗಳ ವಿರುದ್ಧ ಸಿಬಿಐ (CBI) ಇಲ್ಲಿನ ನ್ಯಾಯಾಲಯಕ್ಕೆ ಮಂಗಳವಾರ ಬೃಹತ್ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವರ ಕುಟುಂಬಸ್ಥರು ಹಾಗೂ ಅವರ ಆಪ್ತರು ಶಾಮೀಲಾಗಿರುವುದು ಸಾಬೀತಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಮುಖ್ಯಾಂಶಗಳು

  • ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಿಬಿಐನಿಂದ 3 ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಕೆ.
  • ಹಗರಣದ ಮುಖ್ಯ ಸೂತ್ರಧಾರ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧದ ಆರೋಪಗಳ ಸಾಕ್ಷಿ ಬಗ್ಗೆ ಉಲ್ಲೇಖ.
  • ನಕಲಿ ದಾಖಲೆ ಸೃಷ್ಟಿಸಿ ಒಟ್ಟು 89.63 ಕೋಟಿ ರೂ. ಹಣ ದುರುಪಯೋಗಪಡಿಸಿದ್ದರ ಬಗ್ಗೆ ಉಲ್ಲೇಖ.

ವಾಲ್ಮೀಕಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಈ ಮೂರೂ ಘಟಕಗಳಲ್ಲಿ ನಡೆದಿರುವ ಆರ್ಥಿಕ ದುರುಪಯೋಗದ ತನಿಖೆ ಪೂರ್ಣಗೊಳಿಸಲಾಗಿದ್ದು, ಮೂರರಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ಎಂ.ಜಿ. ರೋಡ್ ಶಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಹೈಕೋರ್ಟ್ ಉಸ್ತುವಾರಿಯಲ್ಲಿ ಈ ತನಿಖೆ ನಡೆದಿತ್ತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ತನಿಖೆಯನ್ನು ಇಲಾಖೆಯ ಇತರೆ ಎರಡು ಘಟಕಗಳಿಗೂ ವಿಸ್ತರಿಸಲಾಗಿತ್ತು.

ಕೋಟ್ಯಂತರ ರೂಪಾಯಿ ಲೂಟಿ ನಡೆದಿದ್ದು ಹೇಗೆ?

ಮಾಜಿ ಸಚಿವ ಬಿ. ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಎಂಡಿ ಪದ್ಮನಾಭ ಜಂಟಿಯಾಗಿ ಈ ವ್ಯವಸ್ಥಿತ ಸಂಚು ರೂಪಿಸಿದ್ದರು. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಎಂಬಾತ ಈ ಹಿಂದೆ ಛತ್ತೀಸ್‌ಗಢದಲ್ಲಿ ಮಾಡಿದ ಮಾದರಿಯಲ್ಲೇ ಇಲ್ಲೂ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಿಗಮದ ಎಂಡಿ ಮತ್ತು ಅಕೌಂಟ್ಸ್ ಆಫೀಸರ್ ಅವರ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಸಹಿಗಳನ್ನು ಬಳಸಿ, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂ. ಪೈಕಿ 89.63 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿ ಕೊನೆಗೆ ನಗದು, ಚಿನ್ನ ಮತ್ತು ಐಷಾರಾಮಿ ಬೆನಾಮಿ ವಾಹನಗಳಾಗಿ ಪರಿವರ್ತಿಸಿಕೊಳ್ಳಲಾಗಿತ್ತು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೂ ಸಾಥ್ ನೀಡಿದ್ದರು ಎಂಬುದಾಗಿ ಸಿಬಿಐ ಹೇಳಿದೆ.

ಕುಟುಂಬದ ಖಾತೆಗಳಿಗೆ ಸೇರಿದ ಕಮಿಷನ್ ಹಣ

ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಹಾಗೂ ರೊಟ್ಟಿ ಮಾಡುವ ಯಂತ್ರಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೆಕ್ಕಂಟಿ ನಾಗರಾಜ್ ಅವರ ಆಪ್ತನಿಗೆ ಸೇರಿದ ಸಂಸ್ಥೆಗೆ 13.95 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಇದರ ಪ್ರತಿಯಾಗಿ ಸಚಿವ ನಾಗೇಂದ್ರ ಅವರಿಗೆ ಸಂದಾಯವಾದ 1.20 ಕೋಟಿ ರೂ. ಅಕ್ರಮ ಹಣವನ್ನು ಅವರ ಸಹೋದರಿ, ಭಾವ, ಪಿಎ ಹಾಗೂ ಬಳ್ಳಾರಿಯ ಫಾರ್ಮ್‌ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್: 5 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಇದಲ್ಲದೆ, ಕೌಶಲಾಭಿವೃದ್ಧಿ ತರಬೇತಿಯ 4.90 ಕೋಟಿ ರೂ. ಕಾಮಗಾರಿಯಲ್ಲೂ ಯಾವುದೇ ಟೆಂಡರ್ ಇಲ್ಲದೆ ಉಪ-ಗುತ್ತಿಗೆ ನೀಡಿ, ನೆಕ್ಕಂಟಿ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರೂ. ಹಾಗೂ ಇಲಾಖೆಯ ಸೆಕ್ಷನ್ ಆಫೀಸರ್ ಪ್ರಕಾಶ್ ಅವರಿಗೆ 15.50 ಲಕ್ಷ ಲಂಚ ನೀಡಲಾಗಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MBBS Course: NMC ಹೊಸ ಪ್ರಸ್ತಾಪ; MBBS ಪೂರ್ಣಗೊಳಿಸಲು ಇನ್ಮುಂದೆ 10 ವರ್ಷಗಳ ಕಾಲಾವಕಾಶ! – Kannada News

MBBS ಪೂರ್ಣಗೊಳಿಸಲು ಇನ್ಮುಂದೆ 10 ವರ್ಷಗಳ ಕಾಲಾವಕಾಶ!Image Credit source: Pinterest

ಕಳೆದ 2023 ರ ‘ಪದವಿ ವೈದ್ಯಕೀಯ ಶಿಕ್ಷಣ ನಿಯಮಗಳ ತಿದ್ದುಪಡಿ’ಯ ಪ್ರಕಾರ, ಎಂಬಿಬಿಎಸ್ ಕೋರ್ಸ್ ಮುಗಿಸುವ ಗರಿಷ್ಠ ಅವಧಿಯನ್ನು 9 ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಇದೀಗ ಹಳೆಯ ನಿಯಮಕ್ಕೆ ಮರಳಿ ಆ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಲು ಆಯೋಗ ನಿರ್ಧರಿಸಿದೆ. ಈ ಹೊಸ 10 ವರ್ಷಗಳ ನಿಯಮದ ಚೌಕಟ್ಟಿನಲ್ಲೇ ವಿದ್ಯಾರ್ಥಿಗಳು ತಮ್ಮ 4.5 ವರ್ಷಗಳ ಶೈಕ್ಷಣಿಕ ಕೋರ್ಸ್ (ಥಿಯರಿ ಮತ್ತು ಪ್ರಾಕ್ಟಿಕಲ್) ಮತ್ತು ಕಡ್ಡಾಯವಾಗಿ ಮಾಡಬೇಕಾದ ಒಂದು ವರ್ಷದ ರೋಟರಿ ಮೆಡಿಕಲ್ ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.

ಮೊದಲ ವರ್ಷದ ಪರೀಕ್ಷಾ ನಿಯಮಗಳಲ್ಲಿ ಬದಲಾವಣೆ ಇಲ್ಲ:

ಕೋರ್ಸ್‌ನ ಒಟ್ಟಾರೆ ಅವಧಿಯನ್ನು ಹೆಚ್ಚಿಸಲಾಗಿದೆಯಾದರೂ, ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷಾ ನಿಯಮಗಳಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ ಎಂದು ಎನ್‌ಎಂಸಿ ಸ್ಪಷ್ಟಪಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, ವಿದ್ಯಾರ್ಥಿಗಳು ಪ್ರಥಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ಗರಿಷ್ಠ 4 ಪ್ರಯತ್ನಗಳಿಗೆ (Attempts) ಮಾತ್ರ ಅವಕಾಶವಿರುತ್ತದೆ. ಈ ನಾಲ್ಕು ಅವಕಾಶಗಳಲ್ಲೇ ಮೊದಲ ವರ್ಷದ ಎಲ್ಲಾ ವಿಷಯಗಳನ್ನು ಕಡ್ಡಾಯವಾಗಿ ಪಾಸ್ ಮಾಡಬೇಕಾಗುತ್ತದೆ. ಇದರಲ್ಲಿ ವಿಫಲರಾದರೆ ಕೋರ್ಸ್‌ನಿಂದ ಹೊರಹೋಗಬೇಕಾಗುತ್ತದೆ.

ಸಾರ್ವಜನಿಕರು ಮತ್ತು ಪಾಲುದಾರರಿಂದ ಸಲಹೆಗೆ ಆಹ್ವಾನ:

ಎನ್‌ಎಂಸಿ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹೊಸ ನಿಯಮಕ್ಕೆ ಸಕ್ಷಮ ಪ್ರಾಧಿಕಾರವು ಈಗಾಗಲೇ ಅನುಮೋದನೆ ನೀಡಿದೆ. ಆದಾಗ್ಯೂ, ಪ್ರಜಾಪ್ರಭುತ್ವ ಮಾದರಿಯಲ್ಲಿ ಇದನ್ನು ಜಾರಿಗೆ ತರಲು ಆಯೋಗವು ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜುಗಳು, ಪ್ರೊಫೆಸರ್‌ಗಳು ಹಾಗೂ ವೈದ್ಯಕೀಯ ಕ್ಷೇತ್ರದ ಇತರೆ ಪಾಲುದಾರರಿಂದ (Stakeholders) ಅನಿಸಿಕೆಗಳನ್ನು ಕೋರಿದೆ. ಈ ಹೊಸ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಸಲಹೆಗಳು ಅಥವಾ ಆಕ್ಷೇಪಣೆಗಳನ್ನು ನೋಂದಾಯಿಸಲು 30 ದಿನಗಳ ಗಡುವು ನೀಡಲಾಗಿದೆ.

ಇಮೇಲ್ ಮೂಲಕ ಮಾತ್ರ ಸ್ವೀಕಾರ:

ಆಯೋಗವು ನಿಗದಿಪಡಿಸಿದ ಅಧಿಕೃತ ಇಮೇಲ್ ವಿಳಾಸದ ಮೂಲಕ ಬರುವ ಪ್ರತಿಕ್ರಿಯೆಗಳನ್ನು ಮಾತ್ರ ಪರಿಶೀಲನಾ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಎಂಸಿ ತಿಳಿಸಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಸಾಮಾನ್ಯವಾಗಿ ವೈದ್ಯರಾಗಲು ಎಷ್ಟು ವರ್ಷ ಬೇಕು?

ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಯು ಕಠಿಣವಾದ ‘ನೀಟ್ ಯುಜಿ’ (NEET UG) ಪರೀಕ್ಷೆಯ ಮೂಲಕ ದೇಶಾದ್ಯಂತದ ವೈದ್ಯಕೀಯ ಕಾಲೇಜುಗಳಲ್ಲಿ ಆರಂಭವಾಗುತ್ತದೆ. ಅಧಿಕೃತವಾಗಿ ಎಂಬಿಬಿಎಸ್ ಕೋರ್ಸ್ ಅವಧಿ 5.5 ವರ್ಷಗಳು. ಇದರಲ್ಲಿ 4.5 ವರ್ಷಗಳ ಕಾಲ ತರಗತಿ ಹಾಗೂ ಪ್ರಾಯೋಗಿಕ ಅಧ್ಯಯನವಿದ್ದರೆ, ಕೊನೆಯ 1 ವರ್ಷ ಕಡ್ಡಾಯ ಇಂಟರ್ನ್‌ಶಿಪ್ ಇರುತ್ತದೆ.

ಆದರೆ, ವೈದ್ಯಕೀಯ ಶಿಕ್ಷಣದ ಅತ್ಯಂತ ಕಠಿಣ ಪಠ್ಯಕ್ರಮದ ಕಾರಣದಿಂದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನಿಗದಿತ 5.5 ವರ್ಷಗಳಲ್ಲೇ ಕೋರ್ಸ್ ಮುಗಿಸಲು ಸಾಧ್ಯವಾಗುವುದಿಲ್ಲ. ಹಲವರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಹೆಚ್ಚುವರಿ ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯಕೀಯ ಕಾರಣ ಅಥವಾ ವೈಯಕ್ತಿಕ ತೊಂದರೆಗಳಿಂದ ವಿದ್ಯಾರ್ಥಿಯೊಬ್ಬರು ಒಂದು ಸೆಮಿಸ್ಟರ್ ಪರೀಕ್ಷೆಯನ್ನು ತಪ್ಪಿಸಿಕೊಂಡರೆ, ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಆದರೆ, ಅಂತಿಮವಾಗಿ ಇಡೀ ಕೋರ್ಸ್ ಅನ್ನು ಹೊಸ ನಿಯಮದ ಪ್ರಕಾರ 10 ವರ್ಷಗಳ ಒಳಗಾಗಿ ಮುಗಿಸುವುದು ಕಡ್ಡಾಯವಾಗಿರುತ್ತದೆ.

ಎನ್‌ಎಂಸಿಯ ಈ ನಿರ್ಧಾರವು ಕಠಿಣ ಪಠ್ಯಕ್ರಮದ ಒತ್ತಡದಲ್ಲಿರುವ ಮತ್ತು ಆರೋಗ್ಯದ ಸಮಸ್ಯೆಗಳಿಂದಾಗಿ ಪರೀಕ್ಷೆಗಳನ್ನು ಸರಿಯಾದ ಸಮಯಕ್ಕೆ ಬರೆಯಲಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರಾಳತೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link