All posts by nagaraj11081993

ದಿಢೀರ್​​ ಜಮೀರ್​ ಅಹ್ಮದ್​​ ಭೆಟಿಯಾದ ಡಿ.ಕೆ. ಸುರೇಶ್​​: ಕಾರಣ ಏನೆಂಬುದೇ ಕುತೂಹಲ – Kannada News

ಬೆಂಗಳೂರು, ಜೂನ್​​ 02: ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಹೋದರ ಡಿ.ಕೆ. ಸುರೇಶ್ ಬೆಂಗಳೂರಿನ ಚಾಲುಕ್ಯ ರಸ್ತೆಯಲ್ಲಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜಮೀರ್ ಅಹ್ಮದ್ ಉಪಮುಖ್ಯಮಂತ್ರಿ (DyCM) ಮತ್ತು ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ನಡುವೆ ಇತ್ತೀಚೆಗೆ ದಾವಣಗೆರೆ ದಕ್ಷಿಣ ಉಪಚುನಾವಣೆ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ! ಉಭಯ ಕುಶಲೋಪರಿ

ನವದೆಹಲಿ, ಜೂನ್ 2: ರಾಜ್ಯದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ರಚನೆ ಹಾಗೂ ಮಂತ್ರಿಗಳ ಪಟ್ಟಿ ಅಂತಿಮಗೊಳಿಸುವ ಮಹತ್ವದ ಕಸರತ್ತಿಗಾಗಿ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆಗಾಗಿ ದೆಹಲಿಗೆ ಆಗಮಿಸಿರುವ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವಿಲ್ಲದ ಸಭೆಗಳಲ್ಲಿ ನಿರತರಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ನಡುವೆ, ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಿಂದ ಹೊರಬರುತ್ತಿದ್ದ ಸಿದ್ದರಾಮಯ್ಯಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಎದುರಾಗಿದ್ದಾರೆ. ಈ ವೇಳೆ ಉಭಯ ನಾಯಕರು ಅತ್ಯಂತ ಸೌಜನ್ಯದಿಂದ ಪರಸ್ಪರ ಹಸ್ತಲಾಘವ ಮಾಡಿ, ನಗುಮುಖದಿಂದಲೇ ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ‘ಹೇಗಿದ್ದೀರಾ?’ ಎಂದು ಜೈಶಂಕರ್ ಅವರ ಕ್ಷೇಮ ಸಮಾಚಾರ ವಿಚಾರಿಸಿದ ಸಿದ್ದರಾಮಯ್ಯ, ಕೆಲ ಕ್ಷಣಗಳ ಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ! – Kannada News

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರು, ಜೂನ್ 02: ನಗರದಲ್ಲಿ ರಾಜ್ಯಪಾಲರ (Governor) ಸಂಚಾರದ ವೇಳೆ ವಿಐಪಿ ಟ್ರಾಫಿಕ್ ತಡೆದಿದ್ದಕ್ಕೆ ಆಕ್ರೋಶಗೊಂಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಭಾರಿ ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸರ ಪ್ರಾಥಮಿಕ ತನಿಖೆ ಮತ್ತು ವಿಚಾರಣೆಯ ವೇಳೆ ಪ್ರತಿಭಟನೆ ನಡೆಸಿದ ವ್ಯಕ್ತಿ ಸಾರ್ವಜನಿಕವಾಗಿ ಹೈಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ಕಾರಿನಲ್ಲಿ ಆ ಸಮಯದಲ್ಲಿ ಯಾವ ಗರ್ಭಿಣಿಯೂ ಇರಲಿಲ್ಲ ಎಂಬ ಸತ್ಯವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ರಾಜ್ಯಪಾಲರ ಸಂಚಾರ ವೇಳೆ ನಡುರಸ್ತೆಯಲ್ಲಿ ಪ್ರತಿಭಟಿಸಿದ್ದ ಯುವಕನ ಹೈಡ್ರಾಮಾ ಬಯಲಾಗಿದೆ.
  • ಕಾರಿನಲ್ಲಿ ಗರ್ಭಿಣಿ ಪತ್ನಿ ಇರಲಿಲ್ಲ ಎಂದು ಒಪ್ಪಿಕೊಂಡ ಯುವಕ ಮೋಹಿತ್.
  • ಹೆಚ್‌ಎಎಲ್ ಪೊಲೀಸರು ಯುವಕನ ಹೇಳಿಕೆ ದಾಖಲಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಹೆಚ್‌ಎಎಲ್ (HAL) ಠಾಣೆಯ ಪೊಲೀಸರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಸುಳ್ಳು ಹೇಳಿದ್ದಾಗಿ ಮೋಹಿತ್ ಒಪ್ಪಿಕೊಂಡಿದ್ದಾನೆ.

ವಿಚಾರಣೆ ವೇಳೆ ಮೋಹಿತ್ ಹೇಳಿದ್ದೇನು?

ಪ್ರತಿಭಟನೆಯ ಸಮಯದಲ್ಲಿ ಮೋಹಿತ್ ಜೊತೆ ಕಾರಿನಲ್ಲಿ ಆತನ ಪತ್ನಿ ಇರಲಿಲ್ಲ. ಆತ ಒಂಟಿಯಾಗಿಯೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ನಾನು ಹೆಚ್‌ಎಎಲ್ ಇಸ್ರೋ (ISRO) ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಕಾಯುತ್ತಿದ್ದೆ. ವಿಐಪಿ ಮೂವ್‌ಮೆಂಟ್‌ನಿಂದಾಗಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ನನಗೆ ಮನೆಗೆ ಹೋಗಲು ತಡವಾಗುತ್ತಿತ್ತು ಮತ್ತು ಮನೆಯಲ್ಲಿದ್ದ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ತುರ್ತು ಪರಿಸ್ಥಿತಿ ಇತ್ತು. ಆ ಒತ್ತಡದಲ್ಲಿ ಸಿಟ್ಟು ಬಂದು, ಪೊಲೀಸರು ದಾರಿ ಬಿಡಲಿ ಎಂಬ ಕಾರಣಕ್ಕೆ ಕಾರಿನಲ್ಲೇ ಪತ್ನಿ ಇದ್ದಾಳೆ ಎಂದು ಸುಳ್ಳು ಹೇಳಿ ವಾಗ್ವಾದ ನಡೆಸಿದೆ ಎಂದು ಮೋಹಿತ್ ತಿಳಿಸಿದ್ದಾನೆ. ಪೊಲೀಸರ ಮೇಲೆ ತನಗೆ ಯಾವುದೇ ವೈಯಕ್ತಿಕ ಟಾರ್ಗೆಟ್ ಇರಲಿಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಇದನ್ನೂ ಓದಿ ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಸದ್ಯಕ್ಕೆ ಪ್ರಕರಣ ದಾಖಲಾಗಿಲ್ಲ

ಯುವಕನ ಹೈಡ್ರಾಮಾದಿಂದಾಗಿ ಇಡೀ ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುವಂತಾಗಿತ್ತು. ಆದರೆ ಸದ್ಯಕ್ಕೆ ಪೊಲೀಸರು ಮೋಹಿತ್ ವಿರುದ್ಧ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ. ಆತನ ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡು, ಇನ್ನು ಮುಂದೆ ಇಂತಹ ಕೃತ್ಯಗಳನ್ನು ಎಸಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಹೆಚ್‌ಎಎಲ್ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ. ವಿಐಪಿ ಟ್ರಾಫಿಕ್ ಕಿರಿಕಿರಿಯ ನಡುವೆಯೂ ಸಾರ್ವಜನಿಕರು ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ – Kannada News

ನವದೆಹಲಿ, ಜೂನ್ 2: ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನದ ಜಾಗತಿಕ ಹೂಡಿಕೆಯ ಅಲೆಯು ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳ ಷೇರು ಮಾರುಕಟ್ಟೆಗಳನ್ನು ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ಕೊಂಡೊಯ್ದಿದೆ. ಇದರ ಪರಿಣಾಮವಾಗಿ, ಜಾಗತಿಕ ಮಾರುಕಟ್ಟೆ ಬಂಡವಾಳೀಕರಣದಲ್ಲಿ (Market Capitalization) ಭಾರತವು ಏಳನೇ ಸ್ಥಾನಕ್ಕೆ ಕುಸಿದಿದ್ದು, ದಕ್ಷಿಣ ಕೊರಿಯಾ ಆರನೇ ಸ್ಥಾನಕ್ಕೇರಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯು ಜಾಗತಿಕವಾಗಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ತೈವಾನ್ 5ನೇ ಸ್ಥಾನದಲ್ಲಿದ್ದರೆ, ಇದೀಗ ದಕ್ಷಿಣ ಕೊರಿಯಾದ ‘ಕೋಸ್ಪಿ’ (Kospi) ಸೂಚ್ಯಂಕವು ಭಾರತವನ್ನು ಹಿಂದಿಕ್ಕಿ 6ನೇ ಸ್ಥಾನವನ್ನು ಪಡೆದುಕೊಂಡಿದೆ.

ಸದ್ಯ ತೈವಾನ್ 5.15 ಟ್ರಿಲಿಯನ್ ಡಾಲರ್ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ 5.04 ಟ್ರಿಲಿಯನ್ ಡಾಲರ್‌ನೊಂದಿಗೆ ಆರನೇ ಸ್ಥಾನದಲ್ಲಿದೆ. ಭಾರತದ ಮಾರುಕಟ್ಟೆ ಮೌಲ್ಯವು 4.84 ಟ್ರಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ದಕ್ಷಿಣ ಕೊರಿಯಾದ ಮುಖ್ಯ ಷೇರು ಮಾರುಕಟ್ಟೆ ಸೂಚ್ಯಂಕವಾದ ‘ಕೋಸ್ಪಿ’, ಈ ವರ್ಷ ಭಾರಿ ಪ್ರಗತಿ ಸಾಧಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ (ಚಿಪ್ಸ್) ವಲಯದ ದಿಗ್ಗಜ ಕಂಪನಿಗಳಾದ ಸ್ಯಾಮ್‌ಸಂಗ್ (Samsung) ಮತ್ತು ಎಸ್‌ಕೆ ಹೈನಿಕ್ಸ್ (SK Hynix) ಶರವೇಗದ ಬೆಳವಣಿಗೆ ಕಂಡಿವೆ. ಕಳೆದ ಒಂದು ವರ್ಷದಲ್ಲಿ ಸ್ಯಾಮ್‌ಸಂಗ್ ಷೇರುಗಳು ಶೇ. 524 ರಷ್ಟು ಮತ್ತು ಎಸ್‌ಕೆ ಹೈನಿಕ್ಸ್ ಷೇರುಗಳು ಬರೋಬ್ಬರಿ ಶೇ. 1000 ರಷ್ಟು ಜಿಗಿದಿವೆ.

ಇದನ್ನೂ ಓದಿ: ಜೂನ್​ನಲ್ಲಿ ಪ್ಯಾನ್ ಕಾರ್ಡ್, ಯುಪಿಐ, ಅಡ್ವಾನ್ಸ್ ಟ್ಯಾಕ್ಸ್ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ಗಮನಿಸಿ

ಭಾರತಕ್ಕೆ ಹಿನ್ನಡೆ ಏಕೆ?

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ 50 (Nifty 50) ಈ ವರ್ಷ ಶೇ. 10.57 ರಷ್ಟು ಕುಸಿತ ಕಂಡಿದೆ. ಜಾಗತಿಕವಾಗಿ ಎಐ (AI) ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ಭಾರಿ ಬೇಡಿಕೆ ಇದೆ, ಆದರೆ ಭಾರತದ ಮಾರುಕಟ್ಟೆಯಲ್ಲಿ ಇಂತಹ ಬೃಹತ್ ಎಐ ಕಂಪನಿಗಳ ಕೊರತೆಯಿರುವುದರಿಂದ ವಿದೇಶಿ ಹೂಡಿಕೆದಾರರು ವೇಗವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.

ಶೇ. 1 ರಷ್ಟು ಕಂಪನಿಗಳದ್ದೇ ಹವಾ

‘ಯೆಸ್ ಸೆಕ್ಯುರಿಟೀಸ್’ ವರದಿಯ ಪ್ರಕಾರ, 2026 ರಲ್ಲಿ ಜಾಗತಿಕ ಷೇರು ಮಾರುಕಟ್ಟೆ ಗಳಿಸಿದ ಒಟ್ಟು 12 ಟ್ರಿಲಿಯನ್ ಡಾಲರ್ ಲಾಭದಲ್ಲಿ, ಕೇವಲ ಅಗ್ರ 100 ಕಂಪನಿಗಳೇ (ಶೇ. 1 ಕ್ಕಿಂತ ಕಡಿಮೆ ಕಂಪನಿಗಳು) ಸುಮಾರು 11.4 ಟ್ರಿಲಿಯನ್ ಡಾಲರ್ ಕೊಡುಗೆ ನೀಡಿವೆ. ದುರದೃಷ್ಟವಶಾತ್, ಈ ಟಾಪ್ 100 ಕಂಪನಿಗಳ ಪಟ್ಟಿಯಲ್ಲಿ ಭಾರತದ ಯಾವುದೇ ಕಂಪನಿ ಸ್ಥಾನ ಪಡೆದಿಲ್ಲ. ಭಾರತದಲ್ಲಿ ಎಐ ಇರಲಿ, ಟೆಕ್ನಾಲಜಿ ಕಂಪನಿಗಳು ಬಹಳ ವಿರಳ ಇವೆ. ಇತ್ತೀಚೆಗಷ್ಟೇ ಇಲ್ಲಿ ಸೆಮಿಕಂಡಕ್ಟರ್, ಎಐ ಕ್ಷೇತ್ರದಲ್ಲಿ ಒಂದಷ್ಟು ಸಂಕಲನಗಳಾಗಿವೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಪ್ರಮುಖ ಟೆಕ್ನಾಲಜಿ ಕಂಪನಿಗಳು ಇಲ್ಲ. ಹೀಗಾಗಿ, ಹೂಡಿಕೆದಾರರನ್ನು ಸೆಳೆಯುವ ಅವಕಾಶ ಕಡಿಮೆ ಆಗಿದೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಪಂಚದಾದ್ಯಂತ ನಡೆಯುತ್ತಿರುವ ಕೃತಕ ಬುದ್ಧಿಮತ್ತೆಯ (AI) ಕ್ರಾಂತಿಯು ತೈವಾನ್ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಗಳಿಗೆ ವರವಾಗಿದ್ದರೆ, ಎಐ ಕಂಪನಿಗಳ ಕೊರತೆಯಿಂದಾಗಿ ಭಾರತದ ಷೇರು ಮಾರುಕಟ್ಟೆ ಸದ್ಯಕ್ಕೆ ಹಿನ್ನಡೆ ಅನುಭವಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಗಿ ನಾಳೆ ಡಿಕೆಶಿ ಪ್ರಮಾಣ: ಪದಗ್ರಹಣಕ್ಕೆ ಅಂತಿಮ ಹಂತದ ತಯಾರಿ, ಅತಿಥಿಗಳಿಗೆ 3 ರೀತಿಯ ಪಾಸ್​​ ವಿತರಣೆ – Kannada News

ಸಿಎಂ ಆಗಿ ನಾಳೆ ಡಿಕೆಶಿ ಪದಗ್ರಹಣಕ್ಕೆ ಅಂತಿಮ ಹಂತದ ತಯಾರಿImage Credit source: Tv9 Kannada

ಬೆಂಗಳೂರು, ಜೂನ್​​ 02: ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ (DK Shivakumar)​​ ನಾಳೆ (ಜೂನ್​​ 03) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದ ಗಾಜಿನಮನೆಯಲ್ಲಿ ಪದಗ್ರಹಣ ಸಮಾರಂಭ ಸಂಜೆ 4.05ಕ್ಕೆ ನೆರವೇರಲಿದ್ದು, ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ನಾಳೆಯ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಸಿನಿಮಾ ತಾರೆಯರು, ಶಾಸಕರು, ಮಾಜಿ ಸಚಿವರು ಸೇರಿ ಗಣ್ಯರು ಭಾಗಿಯಾಗಲಿದ್ದು, ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಸಿಎಂ ಆಗಿ ನಾಳೆ ಡಿ.ಕೆ. ಶಿವಕುಮಾರ್​​ ಪ್ರಮಾಣವಚನ
  • ಲೋಕಭವನದ ಗಾಜಿನಮನೆಯಲ್ಲಿ ನಡೆಯಲಿದೆ ಪದಗ್ರಹಣ
  • ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ವಿತರಣೆ

ಪ್ರಮುಖರಿಗೆ ಪ್ರತ್ಯೇಕ ವ್ಯವಸ್ಥೆ

ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಮುಖ ನಾಯಕರ ಕುಟುಂಬಗಳು, ಬೆಂಬಲಿಗರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ. ಅತಿ ಗಣ್ಯರು, ಗಣ್ಯರು ಹಾಗೂ ಸಾಮಾನ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ 2 ಗಂಟೆ ಒಳಗಾಗಿ ಲೋಕಭವನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಆಯುದೇ ಆಡಂಭರವಿಲ್ಲದೆ ಸರಳವಾಗಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇನ್ನು ನಾಳೆ ನಡಯಲಿರುವ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯನ್ನು ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್​​ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು; ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!

ಪೊಲೀಸ್ ಅಧಿಕಾರಿಗಳ ಸಭೆ

ನಾಳೆ ಸಿಎಂ ಪ್ರಮಾಣವಚನ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಎಲ್ಲಾ ವಿಭಾಗದ ಜಂಟಿ ಪೊಲೀಸ್ ಅಯುಕ್ತರು, ಡಿಸಿಪಿಗಳು, ಸಂಚಾರ ವಿಭಾಗದ ಡಿಸಿಪಿಗಳ ಜೊತೆ ಪೊಲೀಸ್‌ ಕಮಿಷನರ್​ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದು, ಬಂದೋಬಸ್ತ್ ಬಗ್ಗೆ ಸಲಹೆ, ಸೂಚನೆ ನೀಡಲಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಈ ಸಭೆ ಆಯೋಜನೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಲ್ಲ..’; ರಾಮಾಯಣ ನಿರ್ಮಾಪಕನ ಮೆಚ್ಚುಗೆ – Kannada News

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರ ನಟನೆಯ ‘ರಾಮಾಯಣ’ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುವುದರ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಕನ್ನಡದ ಹೀರೋ ಒಬ್ಬರು ಬಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ಸಂಗತಿ. ಯಶ್ ಅವರು ಕೇವಲ ಕಾಟಾಚಾರಕ್ಕೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿಲ್ಲ. ಈ ವಿಷಯವನ್ನು ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ವಿವರಿಸಿದ್ದಾರೆ.

‘ಯಶ್ ಅವರಲ್ಲಿರುವ ಶ್ರೇಷ್ಠ ಗುಣ ಏನೆಂದರೆ, ಅವರು ಕೇವಲ ಒಬ್ಬ ಅದ್ಭುತ ನಟ ಮಾತ್ರ ಅಲ್ಲ. ನಾವು ಹಾಕಿಕೊಂಡಿದ್ದ ಗುರಿ ಮತ್ತು ನಮ್ಮ ಆಕಾಂಕ್ಷೆಯನ್ನು ಅವರು ನೋಡಿದ ತಕ್ಷಣವೇ ನಮ್ಮೊಂದಿಗೆ ಕೈಜೋಡಿಸಿದರು. ಸಂಪೂರ್ಣ ಬೆಂಬಲವನ್ನು ನೀಡಿದ ಅವರು, ನಮಿತ್, ನಾವು ಇದನ್ನು ಒಟ್ಟಾಗಿ ಮಾಡಬೇಕು ಮತ್ತು ಇದನ್ನು ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು’ ಎಂಬುದಾಗಿ ನಮಿತ್ ವಿವರಿಸಿದ್ದಾರೆ.

‘ಅವರ ಆ ಮಾತು ನನಗೆ ಅತ್ಯಂತ ಅಮೂಲ್ಯವಾದದ್ದು. ಏಕೆಂದರೆ, ಅವರಂತಹ ದೊಡ್ಡ ಮಟ್ಟದ ವ್ಯಕ್ತಿಯೊಬ್ಬರು ಕೇವಲ ಒಬ್ಬ ನಟನಾಗಿ ಮಾತ್ರ ಉಳಿಯದೆ, ನಮ್ಮೊಂದಿಗೆ ಜೊತೆಯಾಗಿ ನಿಂತು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಾಗ ತುಂಬಾ ದೂರದವರೆಗೆ ಸಾಗಲು ಸಹಾಯ ಮಾಡುತ್ತದೆ. ಅವರ ಆ ಧೃಢ ಸಂಕಲ್ಪವೇ ಇಂದು ಜನರ ಕಣ್ಣಮುಂದೆ ಕಾಣಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ ನಾವು ಭಾರತದಿಂದ ಇಡೀ ಜಗತ್ತಿಗಾಗಿ, ಈ ಹಿಂದೆ ಎಂದೂ ಮಾಡಿರದಂತಹ ಒಂದು ವಿಶಿಷ್ಟವಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂಬುದು ನಮಿತ್ ಮಾತು.

ಇದನ್ನೂ ಓದಿ: ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್

‘ರಾಮಾಯಣ’ ಸಿನಿಮಾ ಎರಡು ಪಾರ್ಟ್​ ಅಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ, ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ! – Kannada News

ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!Image Credit source: tv9

ನವದೆಹಲಿ, ಜೂನ್ 2: ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯನ್ನು ಯಶಸ್ವಿಯಾಗಿ ನೆರವೇರುವಂತೆ ಮಾಡಿದರೂ ಇದೀಗ ಸಚಿವ ಸಂಪುಟ ರಚನೆ ಕಾಂಗ್ರೆಸ್ (Congress) ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗ ಮಂತ್ರಿ ಮಂಡಲಕ್ಕೆ ಯಾರನ್ನು ಸೇರಿಸಬೇಕು, ಯಾರನ್ನು ಬಿಡಬೇಕು ಎಂಬುದು ಹೈಕಮಾಂಡ್​ಗೆ ಪ್ರಮುಖ ತಲೆನೋವಾಗಿದೆ. ಈ ಕುರಿತು ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಮ್ಯಾರಥಾನ್ ಸಭೆಗಳು ನಡೆಯುತ್ತಿದ್ದು, ನಿರ್ಧಾರ ಅಂತಿಮಗೊಳಿಸಲು ವರಿಷ್ಠರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಪ್ರತ್ಯೇಕ ಪಟ್ಟಿಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಈ ಪಟ್ಟಿಗಳನ್ನು ಪರಿಶೀಲಿಸಿ, ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸಣ್ಣದೊಂದು ಎಡವಟ್ಟಾದರೂ ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂಬ ಆತಂಕ ವರಿಷ್ಠರಲ್ಲಿದೆ.

ಮುಖ್ಯಾಂಶಗಳು

  • ಸಚಿವರ ಪಟ್ಟಿ ಅಂತಿಮಗೊಳಿಸಲು ದೆಹಲಿಯಲ್ಲಿ ಸರಣಿ ಸಭೆಗಳು.
  • ಸುಗಮ ಅಧಿಕಾರ ಹಂಚಿಕೆಯ ನಂತರ ಹೈಕಮಾಂಡ್ ಎದುರು ಮತ್ತೊಂದು ಸವಾಲು.
  • ಸಚಿವರ ಪಟ್ಟಿ ಬಹುತೇಕ ಇಂದೇ ಫೈನಲ್, ನಾಳೆ ಲೋಕಭವನಕ್ಕೆ ರವಾನೆ.

ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಕೆಸಿ ವೇಣುಗೋಪಾಲ್ ನಿವಾಸಕ್ಕೆ ಕರೆಸಿಕೊಂಡು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಮೊದಲ ಹಂತದ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಭಾವ್ಯ ಸಚಿವರ ಪಟ್ಟಿ ಮತ್ತು ಜಾತಿ ಸಮೀಕರಣ

ಸಂಭಾವ್ಯ ಸಚಿವರ ಪಟ್ಟಿಯ ಪ್ರಕಾರ, ಹತ್ತರಿಂದ ಹನ್ನೆರಡು ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೈಕಮಾಂಡ್ ಕೈ ಸೇರಿರುವ ಸಂಭಾವ್ಯ ಪಟ್ಟಿಯಲ್ಲಿ ಕೆಲವು ಪ್ರಮುಖ ಹೆಸರುಗಳು ಇಲ್ಲಿವೆ;

  • ಸತೀಶ್ ಜಾರಕಿಹೊಳಿ: ಬೆಳಗಾವಿ ಭಾಗದ ಪ್ರಭಾವಿ ನಾಯಕ ಹಾಗೂ ಹಿಂದುಳಿದ ವರ್ಗದ ಮುಖಂಡ.
  • ಡಾ. ಜಿ. ಪರಮೇಶ್ವರ: ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಹಿರಿಯ ದಲಿತ ನಾಯಕ.
  • ಯು.ಟಿ. ಖಾದರ್: ಮಾಜಿ ಸ್ಪೀಕರ್ ಆಗಿ ಉತ್ತಮ ಕೆಲಸ ಮಾಡಿದವರು, ಮಾಜಿ ಸಚಿವರು.
  • ಪ್ರಿಯಾಂಕ್ ಖರ್ಗೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ.
  • ರಾಮಲಿಂಗ ರೆಡ್ಡಿ: ಬೆಂಗಳೂರಿನ ಹಿರಿಯ ನಾಯಕ.
  • ಎಂ.ಬಿ. ಪಾಟೀಲ್: ಲಿಂಗಾಯತ ಸಮುದಾಯದ ಪ್ರಮುಖ ನಾಯಕ.
  • ಕೃಷ್ಣ ಭೈರೇಗೌಡ: ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
  • ಕೆ.ಜೆ. ಜಾರ್ಜ್: ಕಾಂಗ್ರೆಸ್‌ನ ಹಿರಿಯ ಸಚಿವರು, ಹೈಕಮಾಂಡ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
  • ಈಶ್ವರ್ ಖಂಡ್ರೆ: ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಮುಖ ನಾಯಕ.
  • ಜಮೀರ್ ಅಹಮದ್ ಖಾನ್: ಮುಸ್ಲಿಂ ಸಮುದಾಯದ ಕೋಟಾದಿಂದ ಪ್ರಮುಖ ಹೆಸರು.

ಸಚಿವ ಸಂಪುಟ ರಚನೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತರು (ಮುಸ್ಲಿಂ ಸೇರಿದಂತೆ) ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೀಡಿರುವ ಪ್ರತ್ಯೇಕ ಪಟ್ಟಿಗಳಲ್ಲಿ ಕೆಲ ಸಾಮಾನ್ಯ ಹೆಸರುಗಳು ಇರಬಹುದಾಗಿದ್ದರೂ, ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಲು ಇಬ್ಬರೂ ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟ ಸೇರಲು ಆಕಾಂಕ್ಷಿಗಳ ಭರ್ಜರಿ ಲಾಬಿ, ದೆಹಲಿ ದಂಡಯಾತ್ರೆ: ಸ್ಪೀಕರ್ ಆಗಲು ನಾಯಕರ ಹಿಂದೇಟು

ಒಟ್ಟಿನಲ್ಲಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜತೆಗಿನ ಸಭೆಯ ಬಳಿಕ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಬಂಡಾಯ ಅಥವಾ ಗೊಂದಲಗಳನ್ನು ತಪ್ಪಿಸಲು, ಪಟ್ಟಿಯನ್ನು ನಾಳೆ (ಜೂನ್ 3) ಬೆಳಗ್ಗೆ ಲೋಕಭವನಕ್ಕೆ ರವಾನಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಕಾರ್ಪೊರೇಟ್ ಕೆಲಸಕ್ಕೆ ಬೇಸತ್ತು ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಯುವಕರು! ಒಂದು ಜಾಹೀರಾತು, 700ಕ್ಕೂ ಹೆಚ್ಚು ಅರ್ಜಿ! – Kannada News

ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಚೀನಾ ಯುವಕರುImage Credit source: Pinterest

ಚೀನಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕಾರ್ಪೊರೇಟ್ ವಲಯದ ಕಠಿಣ ಕೆಲಸದ ಒತ್ತಡಕ್ಕೆ (Corporate Burnout) ಅಲ್ಲಿನ ಯುವ ಪೀಳಿಗೆ ಎಷ್ಟು ಬೇಸತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಂಗೋಲಿಯಾದ (Inner Mongolia) ರೈತನೊಬ್ಬ ತನ್ನ ಫಾರ್ಮ್‌ನಲ್ಲಿ ಕುರಿ ಕಾಯಲು ಇಬ್ಬರು ನೌಕರರು ಬೇಕಾಗಿದ್ದಾರೆ ಎಂದು ನೀಡಿದ ಸಣ್ಣದೊಂದು ಜಾಹೀರಾತು ಇಡೀ ಚೀನಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐಟಿ ಉದ್ಯೋಗಿಗಳು ಮತ್ತು ಪದವೀಧರರು ಈ ಕೆಲಸಕ್ಕಾಗಿ ಮುಗಿಬಿದ್ದಿರುವ ಸತ್ಯ ಹೊರಬಿದ್ದಿದೆ.

ವೈರಲ್ ಆದ ಆ ಒಂದು ಜಾಹೀರಾತು:

ಮಂಗೋಲಿಯನ್ ಗಡಿಯ ಸಮೀಪವಿರುವ ಕ್ಸಿಲಿನ್‌ಹೋಟ್ ನಗರದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಫಾರ್ಮ್ ಮಾಲೀಕ ‘ಜುವೊ ಕ್ಸಿಯಾವೊಯಾಂಗ್’ ಎಂಬುವವರು ಏಪ್ರಿಲ್ ಕೊನೆಯಲ್ಲಿ ಚೀನಾದ ಪ್ರಮುಖ ಸಾಮಾಜಿಕ ಜಾಲತಾಣವಾದ ‘ವೈಬೋ’ (Weibo) ನಲ್ಲಿ ಒಂದು ಸರಳ ಜಾಹೀರಾತು ಪೋಸ್ಟ್ ಮಾಡಿದ್ದರು. ಹಸಿರು ಹುಲ್ಲುಗಾವಲಿನಲ್ಲಿ ಕುರಿಗಳು ಓಡಾಡುತ್ತಿರುವ ವೀಡಿಯೊ ಹೊಂದಿದ್ದ ಈ ಪೋಸ್ಟ್ ಚೀನಾದಲ್ಲಿ ಬರೋಬ್ಬರಿ 5.9 ಕೋಟಿಗೂ ಹೆಚ್ಚು ವೀಕ್ಷಣೆ (Views) ಪಡೆದುಕೊಂಡಿದೆ.

ಕೆಲಸವೇನು? ಸಂಬಳ ಎಷ್ಟು?

ಜುವೊ ಅವರ 2,000 ಹೆಕ್ಟೇರ್ ವಿಸ್ತೀರ್ಣದ ವಿಶಾಲವಾದ ಹುಲ್ಲುಗಾವಲಿನಲ್ಲಿರುವ 3,000 ಕುರಿಗಳನ್ನು ಕಾಯಲು ಮೇಲ್ನೋಟಕ್ಕೆ ದಂಪತಿಗಳಾಗಿರುವ ಇಬ್ಬರು ಕುರುಬರು ಬೇಕಾಗಿದ್ದರು. ಬೇಸಿಗೆಯಲ್ಲಿ ಕುರಿಗಳನ್ನು ಮೇಯಿಸಲು ಹೊರಗೆ ಕರೆದೊಯ್ಯುವುದು ಮತ್ತು ಚಳಿಗಾಲದಲ್ಲಿ ತಾಪಮಾನವು ಮೈನಸ್ 30 ಡಿಗ್ರಿ (-30°C) ಗಿಂತ ಕೆಳಗೆ ಕುಸಿದಾಗ ಅವುಗಳಿಗೆ ಶೆಡ್‌ನಲ್ಲೇ ಆಹಾರ ನೀಡಿ ಸ್ವಚ್ಛಗೊಳಿಸುವುದು ಇವರ ಕೆಲಸವಾಗಿತ್ತು.

ಈ ಕೆಲಸಕ್ಕೆ ಅವರು ತಿಂಗಳಿಗೆ ತಲಾ 8,000 ಯುವಾನ್ (ಸುಮಾರು ₹95,000) ಸಂಬಳದ ಜೊತೆಗೆ ಉಚಿತ ವಸತಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಈ ಸಂಬಳವು ಚೀನಾದ ನಗರ ಪ್ರದೇಶದ ಖಾಸಗಿ ಕಂಪನಿಗಳ ಸರಾಸರಿ ವೇತನಕ್ಕಿಂತ (6,000 ಯುವಾನ್) ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ: ಫೇವರಿಟ್ ಟೀಚರ್‌ಗಾಗಿ ಮನೆಯಿಂದ ಟೀ ಮಾಡಿಕೊಂಡು ತಂದ ಪುಟಾಣಿ

ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಪದವೀಧರರಿಂದ ಅರ್ಜಿ:

ಕೇವಲ ಇಬ್ಬರು ಕುರುಬರ ಹುದ್ದೆಗೆ ಜುವೊ ಅವರಿಗೆ ಬಂದಿದ್ದು ಬರೋಬ್ಬರಿ 700 ಕ್ಕೂ ಹೆಚ್ಚು ಅರ್ಜಿಗಳು. ವಿಶೇಷವೆಂದರೆ, ಅರ್ಜಿ ಸಲ್ಲಿಸಿದವರಲ್ಲಿ ಶೇಕಡಾ 10 ರಷ್ಟು ಮಂದಿ ಇತ್ತೀಚೆಗೆ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಯುವಕರಾಗಿದ್ದರೆ, ಇನ್ನುಳಿದವರು ಶಾಂಘೈ ಮತ್ತು ಚಾಂಗ್‌ಕಿಂಗ್‌ನಂತಹ ಮೆಗಾಸಿಟಿಗಳ ಆಫೀಸ್ ರಾಜಕೀಯ ಹಾಗೂ ಐಟಿ ಕಂಪನಿಗಳ ಒತ್ತಡಕ್ಕೆ ಬೇಸತ್ತ ಬಿಳಿ ಕಾಲರ್ (White-collar) ಉದ್ಯೋಗಿಗಳು ಮತ್ತು ಫ್ಯಾಕ್ಟರಿ ಕಾರ್ಮಿಕರಾಗಿದ್ದಾರೆ.

“ಸಾಮಾನ್ಯ ಜನರಿಗೆ ನಗರಗಳಲ್ಲಿ ಕೆಲಸ ಸಿಗುವುದು ಎಷ್ಟು ಕಷ್ಟವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ” ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಾಲೀಕ ಜುವೊ, “ಇದು ಪ್ರವಾಸೋದ್ಯಮವಲ್ಲ, ಮೈನಸ್ 30 ಡಿಗ್ರಿ ಚಳಿಯಲ್ಲಿ ದೀರ್ಘಕಾಲ ಇಲ್ಲಿ ಬದುಕುವುದು ಮುಖ್ಯ” ಎಂದು ಎಚ್ಚರಿಸಿದ್ದಾರೆ.

ಚೀನಾದ ಮಾರಕ ‘996’ ಸಂಸ್ಕೃತಿಗೆ ಯುವಕರ ಆಕ್ರೋಶ:

ಚೀನಾದ ಬಹುತೇಕ ಕಂಪನಿಗಳಲ್ಲಿ ‘996’ ಕೆಲಸದ ಸಂಸ್ಕೃತಿ ಜಾರಿಯಲ್ಲಿದೆ. ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ 6 ದಿನಗಳ ಕಾಲ ಕಡ್ಡಾಯವಾಗಿ ದುಡಿಯಬೇಕು. ಇದರಿಂದ ಬೇಸತ್ತ ಯುವಕರು ಇದರಿಂದ ತಪ್ಪಿಸಿಕೊಳ್ಳಲು ಹಂಬಲಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

ಅಂತಿಮವಾಗಿ ಆಯ್ಕೆಯಾದವರು ಯಾರು?

ಅರ್ಜಿಗಳ ಮಹಾಪೂರವೇ ಹರಿದುಬಂದರೂ, ಮಾಲೀಕ ಜುವೊ ಅವರು ನಗರದ ಯುವಕರನ್ನು ಅಥವಾ ಒಂಟಿ ವ್ಯಕ್ತಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಹಿಂದೆ ಫಾರ್ಮ್‌ಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಎರಡು ದಂಪತಿಗಳನ್ನು (ಒಟ್ಟು 4 ಜನ) ಕೆಲಸಕ್ಕೆ ನಿಯೋಜಿಸಿಕೊಂಡಿರುವುದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:03 pm, Tue, 2 June 26

Source link

ಬಿಟ್ಟು ಹೋದ ಕಾರ್ಯಕರ್ತರನ್ನು ಪಕ್ಷಕ್ಕೆ ಮತ್ತೆ ಕರೆ ತರಲು ಬಿಜೆಪಿ ಮಾಸ್ಟರ್ ಪ್ಲ್ಯಾನ್, ರಾಷ್ಟ್ರಮಟ್ಟದಲ್ಲಿ ಆಂದೋಲನ, ತ್ರಿಪಾಠಿಗೆ ಮಹತ್ವದ ಜವಾಬ್ದಾರಿ – Kannada News

ನಾಗೇಂದ್ರ ನಾಥ್ ತ್ರಿಪಾಠಿ Image Credit source: Newsdrum

ನವದೆಹಲಿ, ಜೂನ್ 02: ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹಾಗೂ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ(BJP)ವು ತನ್ನ ತಳಮಟ್ಟದ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹತ್ವದ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದು, ಈಗ ಯಾವುದೇ ಅಧಿಕಾರ ಅಥವಾ ಮುಂಚೂಣಿ ಹುದ್ದೆಗಳಲ್ಲಿ ಇಲ್ಲದ ಪಕ್ಷವನ್ನು ಬಿಟ್ಟು ಹೋದ ಅನುಭವಿ ಕಾರ್ಯಕರ್ತರನ್ನು ಮರಳಿ ಸಕ್ರಿಯಗೊಳಿಸಲು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಂಪರ್ಕ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ವಹಿಸಲು ಆರ್‌ಎಸ್‌ಎಸ್‌ನ ಹಿರಿಯ ಧೀಮಂತ ಸಂಘಟಕ ನಾಗೇಂದ್ರ ನಾಥ್ ತ್ರಿಪಾಠಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟಕರನ್ನಾಗಿ ನೇಮಕ ಮಾಡಲಾಗಿದೆ.

ದಶಕಗಳ ಅನುಭವದ ‘ತ್ರಿಪಾಠಿ’ ಬಲ

ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಹೊಸ ತಂಡದಲ್ಲಿ ಪಕ್ಷ ಹಾಗೂ ಸಂಘ ಪರಿವಾರದ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ಈ ನೇಮಕ ಶುರುವಾಗಿದೆ. 71 ವರ್ಷದ ನಾಗೇಂದ್ರ ನಾಥ್ ತ್ರಿಪಾಠಿ ಆರ್​ಎಸ್​ಎಸ್​, ಎಬಿವಿಪಿ ಹಾಗೂ ಬಿಜೆಪಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ತಳಮಟಗಟದಲ್ಲಿ ಕೆಲಸ ಮಾಡಿದ ಅಪಾರ ಅನುಭವವಿದೆ.

2002 ರಲ್ಲಿ ಉತ್ತರ ಪ್ರದೇಶ ಬಿಜೆಪಿಯ ಸಾಂಸ್ಥಿಕ ರಚನೆಯನ್ನು ಏಕೀಕರಿಸಿದಾಗ, ಇಡೀ ರಾಜ್ಯದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ತ್ರಿಪಾಠಿ ಕಾರ್ಯನಿರ್ವಹಿಸಿದ್ದರು. ಸುಮಾರು ಒಂದು ದಶಕದ ಕಾಲ ಯುಪಿಯಲ್ಲಿ ಪಕ್ಷದ ಜಾಲವನ್ನು ವಿಸ್ತರಿಸಿದ ಕೀರ್ತಿ ಇವರಿಗಿದೆ.

ಪ್ರಾದೇಶಿಕ ಪರಿಣತಿ: ಇತ್ತೀಚಿನವರೆಗೂ ರಾಂಚಿಯಲ್ಲಿ ಬಿಹಾರ ಮತ್ತು ಜಾರ್ಖಂಡ್‌ನ ಪ್ರಾದೇಶಿಕ ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈಗ ತಮ್ಮ ಕಾರ್ಯಕ್ಷೇತ್ರವನ್ನು ದೆಹಲಿಗೆ ಬದಲಾಯಿಸಲಿದ್ದಾರೆ.

ಆಂದೋಲನದ ಮುಖ್ಯ ಉದ್ದೇಶಗಳೇನು?
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಈ ಆಂದೋಲನದ ಪ್ರಮುಖ ಗುರಿಯಾಗಿದೆ. ಕುಂದುಕೊರತೆಗಳ ನಿವಾರಣೆ: ತ್ರಿಪಾಠಿ ನೇತೃತ್ವದ ಹಿರಿಯ ನಾಯಕರ ತಂಡವು ದೇಶಾದ್ಯಂತ ವ್ಯಾಪಕ ಪ್ರವಾಸ ಕೈಗೊಳ್ಳಲಿದೆ. ಸಕ್ರಿಯ ರಾಜಕಾರಣದಿಂದ ಕೊಂಚ ದೂರ ಉಳಿದಿರುವ ಹಿರಿಯ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಿ, ಅವರ ಕೊಡುಗೆಗಳನ್ನು ಗೌರವಿಸಿ, ಅವರ ಕುಂದುಕೊರತೆಗಳನ್ನು ಆಲಿಸಲಿದೆ.

ಮತ್ತಷ್ಟು ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ತಳಮಟ್ಟದ ಶಕ್ತಿ ಪುನಶ್ಚೇತನ: ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಿದ್ಧಾಂತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟ ನಿಷ್ಠಾವಂತ ಕಾರ್ಯಕರ್ತರು ತಮಗೆ ಸೂಕ್ತ ಮನ್ನಣೆ ಸಿಗುತ್ತಿದೆ ಎಂದು ಭಾವಿಸುವಂತೆ ಮಾಡುವುದು ಈ ಆಂದೋಲನದ ಪ್ರಮುಖ ಆಶಯವಾಗಿದೆ.

ವರ್ಷಗಳ ಕಾಲ ಪಕ್ಷದ ಬೆನ್ನೆಲುಬಾಗಿದ್ದ ಶಕ್ತಿಯನ್ನು ಮರುಸಂಘಟಿಸುವ ಬಿಜೆಪಿಯ ಈ ತಂತ್ರವು ದೇಶಾದ್ಯಂತ ಇರುವ ಲಕ್ಷಾಂತರ ಹಿರಿಯ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಪಕ್ಷದ ಸಾಂಸ್ಥಿಕ ಬಲವನ್ನು ಮತ್ತೊಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಡಹಗಲೇ ಸಿನಿಮೀಯ ಮಾದರಿ ದರೋಡೆ: ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್​​ ಆದ ಮೂವರು – Kannada News

ದರೋಡೆಯಾದ ಬಂಗಾರದ ಅಂಗಡಿImage Credit source: Tv9 Kannada

ನೆಲಮಂಗಲ, ಜೂನ್​ 02: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ ಪ್ರಕರಣವೊಂದು ಬೆಂಗಳೂರು (Bengaluru) ಗ್ರಾಮಾಂತರದ ನೆಲಮಂಗಲದಲ್ಲಿ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಆರೋಪಿಗಳು ಬಂಗಾರ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಆಭರಣಗಳನ್ನು ದೋಚಿ ಎಸ್ಕೇಪ್​​ ಆಗಿದ್ದು, ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಭಾಗದಲ್ಲಿ ಮೇಲಿಂದ ಮೇಲೆ ದರೋಡೆ ಪ್ರಕರಣಗಳು ನಡೆಯುತ್ತಿರೋದು ಸಾರ್ವಜನಿಕರ ತೀವ್ರ ಆತಂಕಕ್ಕೂ ಕಾರಣವಾಗಿದೆ.

ಮುಖ್ಯಾಂಶಗಳು

  • ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ ದರೋಡೆ
  • ಬೈಕ್​​ನಲ್ಲಿ ಬಂದಿದ್ದ ಮೂವರು ಆರೋಪಿಗಳಿಂದ ಕೃತ್ಯ
  • ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿರುವ ಘಟನೆ

ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್​​ಗೆ ನುಗ್ಗಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದವರಿಗೆ ಡ್ಯಾಗರ್​​ ತೋರಿಸಿ ಬೆದರಿಸಿರುವ ಆರೋಪಿಗಳು, ಶೋ ಗ್ಲಾಸ್​​​ನಲ್ಲಿದ್ದ 20 ಉಂಗುರಗಳು ಇದ್ದ ಟ್ರೇ ದೋಚಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಕೆಲ ಉಂಗುರಗಳು ರಸ್ತೆಗೆ ಬಿದ್ದಿವೆ ಎನ್ನಲಾಗಿದೆ. ಒಟ್ಟು 5 ಉಂಗುರಗಳು ಕಳವಾಗಿರುವ ಬಗ್ಗೆ ಶಾಪ್​​ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕಳುವಾಗಿರುವ ಬಂಗಾರದ ಒಟ್ಟು ತೀಕ ಸುಮಾರು 35 ಗ್ರಾಂ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ

ಇನ್ನು ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಬಂಗಾರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರ ಗೊತ್ತಾದ ಕಾರಣ, ಶಾಪ್​​ ಮಾಲೀಕನ ಬಳಿಯಿಂದಲೇ ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link