All posts by nagaraj11081993

PSG ಚಾಂಪಿಯನ್ಸ್​… ಈ ಸಲ ಕಪ್ RCBಗೆ?

ಯುಇಎಫ್‌ಎ ಚಾಂಪಿಯನ್ಸ್ ಲೀಗ್​ನಲ್ಲಿ ಫ್ರಾನ್ಸ್ ಕ್ಲಬ್ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಈ ಬಾರಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಇಂತಹದೊಂದು ಲೆಕ್ಕಾಚಾರಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನಡುವಣ ಸಾಮ್ಯತೆ.

ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಯುರೋಪ್​ನ ಬಲಿಷ್ಠ ಫುಟ್​ಬಾಲ್ ತಂಡ ಎನಿಸಿಕೊಂಡರೂ ಮೊದಲ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲಲು ತೆಗೆದುಕೊಂಡಿದ್ದು ಬರೋಬ್ಬರಿ 55 ವರ್ಷಗಳು. ಅದರಂತೆ 2025 ರ ಚಾಂಪಿಯನ್ಸ್ ಲೀಗ್​ ಫೈನಲ್​ನಲ್ಲಿ ಇಂಟರ್ ಮಿಲಾನ್ ತಂಡವನ್ನು 5-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು 18 ವರ್ಷಗಳನ್ನು ತೆಗೆದುಕೊಂಡಿತ್ತು. ಅದರಂತೆ ಐಪಿಎಲ್ 2025ರ ಫೈನಲ್​ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.

ಉಭಯ ತಂಡಗಳು ಸುದೀರ್ಘ ಕಾಯುವಿಕೆಯ ಬಳಿಕ 2025 ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಆದರೆ ಮೊದಲ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಪ್ಯಾರಿಸ್ ಸೈಂಟ್-ಜರ್ಮೈನ್ (PSG) ತನ್ನ ಕಿರೀಟ ಮುಡಿಗೇರಿಸಿಕೊಂಡಿದೆ.

ಅಂದರೆ ಶನಿವಾರ ಬುಡಾಪೆಸ್ಟ್‌ನ ಪುಸ್ಕಾಸ್ ಅರೆನಾದಲ್ಲಿ ನಡೆದ 2026ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್​ ಫೈನಲ್ ಪಂದ್ಯದಲ್ಲಿ PSG ತಂಡವು ಆರ್ಸೆನಲ್ ಕ್ಲಬ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿದೆ.

ಅಂದರೆ ಪ್ಯಾರಿಸ್ ಸೈಂಟ್-ಜರ್ಮೈನ್ ತಂಡವು 2025, 2026 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಕಳೆದ ಬಾರಿ ಪಿಎಸ್​ಜಿ ಚಾಂಪಿಯನ್ ಆದ ಬಳಿಕ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಪಿಎಸ್​ಜಿ ಮತ್ತೊಮ್ಮೆ ಯುರೋಪ್ ಲೀಗ್​ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಕಾರಣ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

 

Source link

‘ಹಸಿಬಿಸಿ ಸೀನ್ ಬಗ್ಗೆ ಪತ್ನಿಗೆ ಆಮೇಲೆ ಗೊತ್ತಾಗಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’: ಬಾಬಿ ಡಿಯೋಲ್

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ‘ಅನಿಮಲ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಅವರ ಸ್ಟಾರ್ಡಮ್ ಮತ್ತಷ್ಟು ಹೆಚ್ಚಾಗಿದೆ. ಆದರೆ, ಅದಕ್ಕೂ ಮುನ್ನ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ಪ್ರಕಾಶ್ ಝಾ ನಿರ್ದೇಶನದ ‘ಆಶ್ರಮ್’ (Aashram) ವೆಬ್ ಸೀರೀಸ್. ಇದೀಗ ಬಾಬಿ ಡಿಯೋಲ್ ಈ ಸೀರೀಸ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಮತ್ತು ಅದನ್ನು ತಮ್ಮ ಪತ್ನಿ ತನ್ಯಾ ಡಿಯೋಲ್ ಬಳಿ ಮೊದಲು ಒಪ್ಪಿಕೊಂಡಿದ್ದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

‘ನಾನು ಆಶ್ರಮ್ ವೆಬ್ ಸೀರೀಸ್‌ನ ಕಥೆ ಕೇಳಿದಾಗ, ಆ ಬಗ್ಗೆ ನನ್ನ ತಂದೆ ಧರ್ಮೇಂದ್ರ ಅವರಿಗಾಗಲಿ, ತಾಯಿಗಾಗಲಿ ಅಥವಾ ಸಹೋದರ ಸನ್ನಿ ಡಿಯೋಲ್‌ಗಾಗಲಿ ವಿಷಯ ತಿಳಿಸಿರಲಿಲ್ಲ. ನಾನು ಕೇವಲ ಒಬ್ಬರೇ ಒಬ್ಬ ವ್ಯಕ್ತಿಗೆ ಈ ವಿಷಯ ಹೇಳಿದ್ದೆ, ಅದು ನನ್ನ ಪತ್ನಿ ತನ್ಯಾಳಿಗೆ ಮಾತ್ರ. ಏಕೆಂದರೆ ಚಿತ್ರದಲ್ಲಿದ್ದ ಇಂಟಿಮೇಟ್ ಮತ್ತು ಬೋಲ್ಡ್ ದೃಶ್ಯಗಳ ಬಗ್ಗೆ ನಾನು ಅವಳಿಗೆ ಮೊದಲೇ ಹೇಳಬೇಕಾಗಿತ್ತು. ಒಂದು ವೇಳೆ ಆಕೆಗೆ ಆಮೇಲೆ ಈ ವಿಷಯ ಗೊತ್ತಾಗಿದ್ದರೆ ನಾನು ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತಿದ್ದೆ’ ಎಂದು ಬಾಬಿ ಡಿಯೋಲ್ ನಗುತ್ತಾ ಹೇಳಿದ್ದಾರೆ.

ತಮ್ಮ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತ ಪತ್ನಿ ತನ್ಯಾ ಡಿಯೋಲ್ ಅವರನ್ನು ಬಾಬಿ ಡಿಯೋಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ಪತ್ನಿಯೇ ಕಾರಣ. ನನ್ನ ವೃತ್ತಿಜೀವನದ ಕೆಟ್ಟ ದಿನಗಳಲ್ಲಿ ಆಕೆ ಇಡೀ ಮನೆಯನ್ನು ನಿಭಾಯಿಸಿದಳು. ಆಕೆಯೇ ನನ್ನ ಬೆನ್ನೆಲುಬು. ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಆಕೆ ಸದಾ ಪ್ರೋತ್ಸಾಹಿಸುತ್ತಾಳೆ ಮತ್ತು ನನ್ನಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಸಹಾಯ ಮಾಡಿದ್ದಾಳೆ’ ಎಂದು ಭಾವುಕರಾಗಿದ್ದಾರೆ.

ಕಳೆದ ವರ್ಷ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಬಿ, ‘ಇನ್ಮುಂದೆ ನನಗೆ ಹೀರೋ ಪಾತ್ರಗಳು ಸಿಗುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಅದಕ್ಕಾಗಿಯೇ ವಿಭಿನ್ನ ಶೇಡ್ ಇರುವ ಬಾಬಾ ನಿರಾಲಾ ಪಾತ್ರವನ್ನು ಒಪ್ಪಿಕೊಂಡೆ. ಸೀರೀಸ್ ಬಿಡುಗಡೆಯಾದ ಮೇಲೆ ಜನರ ರಿಯಾಕ್ಷನ್ ಹೇಗಿರುತ್ತೆ ಎಂದು ಕಾಯುತ್ತಿದ್ದೆ’ ಎಂದು ಹೇಳಿದ್ದರು. ‘ಆಶ್ರಮ್’ ಸೀರೀಸ್ ಸೂಪರ್ ಹಿಟ್ ಆಗುವ ಮೂಲಕ ಬಾಬಿ ಕೆರಿಯರ್‌ಗೆ ಹೊಸ ಜನ್ಮ ನೀಡಿತು.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾ ಮಹಿಳಾ ವಿರೋಧಿ ಚಿತ್ರ ಅಲ್ಲ; ಸಿಕ್ತು ಸ್ಪಷ್ಟನೆ

‘ಆಶ್ರಮ್’ ಸೀರೀಸ್‌ನಲ್ಲಿ ಬಾಬಾ ನಿರಾಲಾ ಎಂಬ ವಿಲನ್ ರೂಪದ ಸ್ವಾಮೀಜಿ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿದ್ದರು. ಆಶ್ರಮದ ಹೆಸರಿನಲ್ಲಿ ಡ್ರಗ್ಸ್ ಮಾಫಿಯಾ, ವಂಚನೆ ಮತ್ತು ಯುವತಿಯರ ಶೋಷಣೆ ಮಾಡುವ ಈ ಪಾತ್ರದಲ್ಲಿ ಅವರ ನಟನೆಯು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಸದ್ಯ ಬಾಬಿ ಡಿಯೋಲ್ ಅವರು ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಬಂದರ್’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಜೂನ್ 5ರಂದು ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸ್​​ ಠಾಣೆ ಸಮೀಪವೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ?

ಕಲ್ಯಾಣ್ ಬ್ಯಾನರ್ಜಿ ಮೇಲೆ ಬಿಜೆಪಿಗರಿಂದ ಹಲ್ಲೆ ಆರೋಪImage Credit source: PTI

ಕೋಲ್ಕತ್ತಾ, ಮೇ 31: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದಿತಾಲಾ ಪೊಲೀಸ್ ಠಾಣೆ ಸಮೀಪ ತೃಣಮೂಲ ಕಾಂಗ್ರೆಸ್ (Trinamool Congress) ಸಂಸದ ಹಾಗೂ ನಾಯಕ ಕಲ್ಯಾಣ್ ಬ್ಯಾನರ್ಜಿ (Kalyan Banerjee)​​ ಮೇಲೆ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ಚುನಾವಣೆ ನಂತರ ನಡೆದ ಹಿಂಸಾಚಾರದ ಕುರಿತು ಮನವಿ ಸಲ್ಲಿಸಲು ಅವರು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಕಲ್ಯಾಣ್ ಬ್ಯಾನರ್ಜಿ ನೆಲದ ಮೇಲೆ ಮಲಗಿರುವುದು ಹಾಗೂ ಸುತ್ತಮುತ್ತ ಹಲವರು ಜಮಾಯಿಸಿರುವುದನ್ನು ಆ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಟಿಎಂಸಿ ಕಾರ್ಯಕರ್ತರು ಹಾಗೂ ಕಲ್ಯಾಣ್ ಬ್ಯಾನರ್ಜಿ ಪೊಲೀಸ್ ಠಾಣೆ ಸಮೀಪ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ; 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ಘಟನೆ ಸಂಬಂಧಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ತಮ್ಮ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಒಬ್ಬನೇ ಬರುತ್ತಿದ್ದೆ, ನನ್ನ ಜೊತೆಗೆ ಯಾರೂ ಇರಲಿಲ್ಲ. ಈ ವೇಳೆ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಡ್ಯೂಸ್ ಬಾಲ್‌ನಿಂದ ನನ್ನ ತಲೆಗೆ ಹೊಡೆದಿದ್ದಾರೆ. ಸಂಸದರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿರುವುದು ಬಗ್ಗೆ ಜನರೇ ತೀರ್ಮಾನಿಸಬೇಕು ಎಂದಿದ್ದಾರೆ

ನಿನ್ನೆಯಷ್ಟೇ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲೂ ದಾಳಿ ನಡೆದಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರಕ್ಕೆ ಭೇಟಿ ನೀಡಿದ್ದ ವೇಳೆ ಪ್ರತಿಭಟನಾಕಾರರು ಅವರ ಮೇಲೆ ಕಲ್ಲು, ಮೊಟ್ಟೆ ಹಾಗೂ ಚಪ್ಪಲಿಗಳನ್ನು ಎಸೆದಿದ್ದರು ಎಂದು ಆರೋಪಿಸಲಾಗಿತ್ತು. ಚುನಾವಣೆ ನಂತರದ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ್ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಈ ದಾಳಿಯ ಬಳಿಕ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಹಿಂಸಾಚಾರದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳು ಹಾಗೂ ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:50 pm, Sun, 31 May 26

Source link

ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?

ನವದೆಹಲಿ, ಮೇ 31: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತಗಳನ್ನು ಆಧರಿಸಿ, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನಗಳ (ATF) ರಫ್ತಿನ ಮೇಲಿನ ವಿಶೇಷ ತೆರಿಗೆಯನ್ನು (Export Tax) ಕಡಿತಗೊಳಿಸಿದೆ. ನಾಳೆ, ಜೂನ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್​ಗೆ 3 ರೂನಿಂದ 1.50 ರೂಗೆ ಇಳಿಸಲಾಗಿದೆ. ಲೀಟರ್​ಗೆ ಡೀಸಲ್​ಗೆ 16.5 ರೂ ಇದ್ದ ರಫ್ತು ಸುಂಕವನ್ನು 13.5 ರೂಗೆ ಇಳಿಸಲಾಗಿದೆ. ಜೆಟ್ ಇಂಧನ ಅಥವಾ ಎಟಿಎಫ್ ಮೇಲಿನ ರಫ್ತು ಸುಂಕವನ್ನು 16 ರೂನಿಂದ 9.5 ರೂಗೆ ತಗ್ಗಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ (Crude Oil) ಹಾಗೂ ಇಂಧನಗಳ ಸರಾಸರಿ ಬೆಲೆಯನ್ನು ಪರಾಮರ್ಶಿಸಿ ಕೇಂದ್ರ ಹಣಕಾಸು ಸಚಿವಾಲಯವು ಹೊಸ ಆದೇಶ ಹೊರಡಿಸಿದೆ.

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉದ್ಭವಿಸಿ ತೈಲ ಪೂರೈಕೆಗೆ ಅಡಚಣೆಯಾದಾಗ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ರಫ್ತು ನಿರ್ಬಂಧ ಕ್ರಮ ತೆಗೆದುಕೊಂಡಿತ್ತು. ಪೆಟ್ರೋಲಿಯಂ ಉತ್ಪನ್ನಗಳು ದೇಶೀಯವಾಗಿ ಲಭ್ಯವಾಗಿರುವುದನ್ನು ಖಚಿತಪಡಿಸಲು ಸರ್ಕಾರ ಪೆಟ್ರೋಲಿಯಂ ರಫ್ತಿಗೆ ಸುಂಕ ಹೆಚ್ಚಿಸಿತ್ತು. ಇದೀಗ ಕಚ್ಚಾ ತೈಲ ಪೂರೈಕೆ ಸುಗಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಫ್ತು ಸುಂಕವನ್ನು ಸರ್ಕಾರ ಮತ್ತೆ ಕಡಿಮೆ ಮಾಡಿದೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ತಗ್ಗಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ಪೆಟ್ರೋಲಿಯಂ ರಫ್ತು ಸುಂಕದಲ್ಲಿ ಇಳಿಕೆ

  • ಪೆಟ್ರೋಲ್ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹3 ರಿಂದ ₹1.5 ಕ್ಕೆ ಇಳಿಸಲಾಗಿದೆ. ಇದು ಸಂಪೂರ್ಣವಾಗಿ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ (SAED) ರೂಪದಲ್ಲಿರಲಿದ್ದು, ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ಶೂನ್ಯವಾಗಿರುತ್ತದೆ.
  • ಡೀಸೆಲ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹16.5 ರಿಂದ ₹13.5 ಕ್ಕೆ ಕಡಿತಗೊಳಿಸಲಾಗಿದೆ.
  • ವಿಮಾನ ಇಂಧನ (ATF) ಅಥವಾ ಏವಿಯೇಷನ್ ಟರ್ಬೈನ್ ಫ್ಯುಯೆಲ್ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹16 ರಿಂದ ₹9.5 ಕ್ಕೆ ಇಳಿಸಲಾಗಿದೆ.

ಆಂತರಿಕವಾಗಿ ಇಂಧನ ಬೆಲೆ ಇಳಿಕೆ ಇರೋದಿಲ್ಲ

ಈ ತೆರಿಗೆ ಪರಿಷ್ಕರಣೆಯು ಕೇವಲ ವಿದೇಶಗಳಿಗೆ ರಫ್ತು ಮಾಡಲಾಗುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತದೆ. ಭಾರತದ ಒಳಗಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ (Excise Duty) ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ದೇಶೀಯ ಇಂಧನ ದರಗಳು ಸ್ಥಿರವಾಗಿರಲಿವೆ.

ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ರಫ್ತು ಸುಂಕದ ಹಿನ್ನೆಲೆ

ಭಾರತದ ತೈಲ ಕಂಪನಿಗಳು ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಪೆಟ್ರೋಲ್, ಡೀಸಲ್, ಎಟಿಎಫ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳಾಗಿ ಸಂಸ್ಕರಿಸಿ, ಅವನ್ನು ದೇಶೀಯ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದುದು ಮಾತ್ರವಲ್ಲ, ಬೇರೆ ಬೇರೆ ದೇಶಗಳಿಗೂ ರಫ್ತು ಮಾಡುತ್ತವೆ. ಈ ರೀತಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ ಭಾರತ ವಿಶ್ವದ ನಂ. 5ನೇ ದೇಶವಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಉದ್ಭವವಾದಾಗ ಕಚ್ಚಾ ತೈಲ ಪೂರೈಕೆ ಕಡಿಮೆಗೊಂಡ ಹಿನ್ನೆಲೆಯಲ್ಲಿ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ತಡೆಯಲು ಸರ್ಕಾರ ವಿಶೇಷ ರಫ್ತು ಸುಂಕ ವಿಧಿಸಿತ್ತು.

ಅಂತರರಾಷ್ಟ್ರೀಯ ತೈಲ ದರಗಳ ಏರಿಳಿತಕ್ಕೆ ಅನುಗುಣವಾಗಿ ಪ್ರತಿ 15 ದಿನಗಳಿಗೊಮ್ಮೆ (Fortnightly) ಈ ಸುಂಕವನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದಿನ ಪರಿಷ್ಕರಣೆಯನ್ನು ಮೇ 16 ರಂದು ಮಾಡಲಾಗಿತ್ತು. ಪ್ರಸ್ತುತ ಜಾಗತಿಕ ಇಂಧನ ಮಾರ್ಜಿನ್‌ನಲ್ಲಿನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜೂನ್ 1 ರಿಂದ ಅನ್ವಯವಾಗುವಂತೆ ದರಗಳನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಟಾಸ್ ಸೋತರೆ ಏನಾಗಲಿದೆ? ಗೆದ್ದರೆ ಏನು ಆಯ್ಕೆ ಮಾಡಬೇಕು?

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಮೇ 31) ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯ ಜರುಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಏನನ್ನು ಆಯ್ಕೆ ಮಾಡಿಕೊಳ್ಳಬೇಕು? ಟಾಸ್ ಸೋತರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನರೇಂದ್ರ ಮೋದಿ ಸ್ಟೇಡಿಯಂ ಪಿಚ್‌ನ ಗುಣಲಕ್ಷಣಗಳು:

  • ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್‌ಗಳು: ಈ ಸ್ಟೇಡಿಯಂನಲ್ಲಿರುವ ಎರಡು ರೀತಿಯ ಪಿಚ್​ಗಳಿವೆ. ಒಂದು ಕೆಂಪು ಮಣ್ಣಿನ ಪಿಚ್. ಇನ್ನೊಂದು ಕಪ್ಪು ಮಣ್ಣಿನ ಪಿಚ್. ಕೆಂಪು ಮಣ್ಣಿನ ಪಿಚ್​ಗಳು ವೇಗ ಮತ್ತು ಬೌನ್ಸ್​ಗೆ ಸಹಕಾರಿಯಾಗಿದೆ. ಹಾಗೆಯೇ ಬ್ಯಾಟಿಂಗ್​ ಕೂಡ ಸುಲಭ. ಇನ್ನು ಕಪ್ಪು ಮಣ್ಣಿನ ಪಿಚ್​ ನಿಧಾನಗತಿಯಲ್ಲಿ ಇರಲಿದ್ದು, ಈ ಪಿಚ್ ಸ್ಪಿನ್ ಬೌಲರ್​ಗಳಿಗೆ ಹೆಚ್ಚಿನ ನೆರವು ನೀಡಲಿದೆ.
  • ಇಬ್ಬನಿಯ ಪ್ರಭಾವ: ಫೈನಲ್ ಪಂದ್ಯವು ನೈಟ್​ನಲ್ಲಿ ನಡೆಯುತ್ತಿರುವುದರಿಂದ ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರುವ ಸಾಧ್ಯತೆ ಹೆಚ್ಚಿದೆ. ಅಂದರೆ ಇಬ್ಬನಿ ಬಿದ್ದಾಗ ಬೌಲರ್​ಗಳಿಗೆ ಚೆಂಡನ್ನು ಗ್ರಿಪ್ ಮಾಡುವುದು ಕಷ್ಟಕರವಾಗಲಿದೆ. ಇದರಿಂದ ದ್ವಿತೀಯ ಇನಿಂಗ್ಸ್ ವೇಳೆ ಬೌಲಿಂಗ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ.
  • ದೊಡ್ಡ ಬೌಂಡರಿ: ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಬೌಂಡರಿಗಳು ದೊಡ್ಡದಾಗಿದ್ದು, ಬಿಗ್ ಹೊಡೆತಗಳನ್ನು ಬಾರಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗೆಯೇ ಫೀಲ್ಡರ್​ಗಳು ಉತ್ತಮ ರನ್ನಿಂಗ್​ ಮೂಲಕ ಫೀಲ್ಡ್ ಮಾಡಿದರೆ ಮಾತ್ರ ರನ್​ ನಿಯಂತ್ರಿಸಬಹುದು.

ಟಾಸ್ ಗೆದ್ದರೆ ಏನು ಆಯ್ಕೆ ಮಾಡಬೇಕು?

ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ ನಿರ್ಧಾರ. ಏಕೆಂದರೆ ಇಬ್ಬನಿಯಿಂದಾಗಿ 2ನೇ ಇನಿಂಗ್ಸ್​ ವೇಳೆ ಬೌಲಿಂಗ್ ಮಾಡುವುದು ಕಷ್ಟ. ಇದರ ಸಂಪೂರ್ಣ ಲಾಭ ಪಡೆದು ಚೇಸ್ ಮಾಡಬಹುದು.

ಟಾಸ್ ಸೋತರೆ ಏನು ಮಾಡಬೇಕು?

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ತಂಡ ಬೃಹತ್ ಮೊತ್ತ ಪೇರಿಸುವುದು ಅನಿವಾರ್ಯ. ಒಂದು ವೇಳೆ 220+ ರನ್​ಗಳಿಸಿದರೆ ಮ್ಯಾಚ್ ಗೆಲ್ಲುವ ಅವಕಾಶ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ.

ಮೇ 21 ರಂದು ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 229 ರನ್ ಗಳಿಸಿದ್ದರು. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 140 ರನ್​ಗಳಿಗೆ ಆಲೌಟ್ ಮಾಡಿ 89 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಅಂದರೆ ಇಲ್ಲಿ ಮೊದಲು ಬ್ಯಾಟ್ ಮಾಡಿದರೂ ಪಂದ್ಯ ಗೆಲ್ಲಲು ಅವಕಾಶವಿದೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು.

  •  ಟಾಸ್ ಜಯಿಸಿ ಪಂದ್ಯ ಗೆದ್ದ ತಂಡಗಳು: 23 ಪಂದ್ಯಗಳು (ಸುಮಾರು 45.10%)
  • ಟಾಸ್ ಸೋತು ಪಂದ್ಯ ಗೆದ್ದ ತಂಡಗಳು: 28 ಪಂದ್ಯಗಳು (ಸುಮಾರು 54.90%)
  • ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳು: 26
  •  ಚೇಸಿಂಗ್ ಮಾಡಿ ಗೆದ್ದ ಪಂದ್ಯಗಳು: 25

ಅಂದರೆ ಇಲ್ಲಿ ಆಡಲಾದ 51 ಮ್ಯಾಚ್​ಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 26 ಬಾರಿ ಗೆದ್ದರೆ, ಚೇಸಿಂಗ್ ಮಾಡಿದ ತಂಡ 25 ಬಾರಿ ಗೆದ್ದಿದೆ. ಅಂದರೆ ಟಾಸ್ ಫ್ಯಾಕ್ಟರ್ ಸಮವಾಗಿದೆ ಎಂದೇ ಹೇಳಬಹುದು. ಇದಾಗ್ಯೂ ಇಬ್ಬನಿ ಭೀತಿ ಇರುವ ಕಾರಣ ಟಾಸ್ ಗೆದ್ದ ತಂಡಗಳು ಬೌಲಿಂಗ್ ಆಯ್ದುಕೊಳ್ಳುವುದು ಸೂಕ್ತ.

ಇದನ್ನೂ ಓದಿ: Rajat Patidar: ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಕೂಡ ನಿರ್ಧಾರ ಮಾಡಿಲ್ಲ!

ಒಂದು ವೇಳೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಗಿ ಬಂದರೆ ಬೃಹತ್ ಮೊತ್ತ ಪೇರಿಸಿ ಪಂದ್ಯ ಗೆಲ್ಲಲು ಕೂಡ ಅವಕಾಶವಿದೆ. ಇದಕ್ಕೆ ಸಾಕ್ಷಿ ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 26 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಸೋತರೂ, ಗೆದ್ದರೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

Source link

IRCTC Yatra: ಶಿವಭಕ್ತರಿಗೆ ಐಆರ್‌ಸಿಟಿಸಿ ಬಂಪರ್ ಕೊಡುಗೆ; ಒಂದೇ ಪ್ರವಾಸದಲ್ಲಿ ‘ಸಪ್ತ ಜ್ಯೋತಿರ್ಲಿಂಗ’ ದರ್ಶನ ಭಾಗ್ಯ!

ಸಪ್ತ ಜ್ಯೋತಿರ್ಲಿಂಗ ದರ್ಶನ ಭಾಗ್ಯ!
Image Credit source: Pinterest

ಶಿವ ಭಕ್ತರಿಗೆ ಭಾರತೀಯ ರೈಲ್ವೆ ಸೌಲಭ್ಯ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅತ್ಯಂತ ಸಂತೋಷದ ಸುದ್ದಿಯೊಂದನ್ನು ನೀಡಿದೆ. ದೇಶದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯಗಳಿಗೆ ಸುಲಭವಾಗಿ ಭೇಟಿ ನೀಡಲು ಅನುಕೂಲವಾಗುವಂತೆ “ಸಪ್ತ ಜ್ಯೋತಿರ್ಲಿಂಗ ದರ್ಶನ ಯಾತ್ರೆ” ಎಂಬ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ವಿಶೇಷ ಪ್ರವಾಸವು ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹರಡಿಕೊಂಡಿರುವ ಏಳು ಜ್ಯೋತಿರ್ಲಿಂಗಗಳು ಸೇರಿದಂತೆ ಹಲವು ಪ್ರಮುಖ ಪುಣ್ಯಕ್ಷೇತ್ರಗಳನ್ನು ದರ್ಶಿಸುವ ಅದ್ಭುತ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಪ್ರವಾಸದ ಅವಧಿ ಮತ್ತು ಬೋರ್ಡಿಂಗ್ ವಿವರಗಳು:

ಈ ಐತಿಹಾಸಿಕ ಆಧ್ಯಾತ್ಮಿಕ ಯಾತ್ರೆಯು ಜೂನ್ 16 ರಂದು ಸಿಕಂದರಾಬಾದ್‌ನಿಂದ ಪ್ರಸಿದ್ಧ ‘ಭಾರತ್ ಗೌರವ್ ಪ್ರವಾಸಿ ರೈಲಿನ’ ಮೂಲಕ ಪ್ರಾರಂಭವಾಗಲಿದೆ. ಒಟ್ಟು 10 ರಾತ್ರಿಗಳು ಮತ್ತು 11 ದಿನಗಳ ಕಾಲ ಸುದೀರ್ಘವಾಗಿ ಸಾಗುವ ಈ ಪ್ರವಾಸದಲ್ಲಿ ಭಕ್ತರಿಗೆ ಆರಾಮದಾಯಕ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಪ್ರವಾಸಿಗರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ ಮತ್ತು ನಿಜಾಮಾಬಾದ್ ಜಂಕ್ಷನ್‌ಗಳಲ್ಲಿ ರೈಲು ಹತ್ತಲು (Boarding) ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ.

ಯಾತ್ರೆಯಲ್ಲಿ ನೀವು ಭೇಟಿ ನೀಡಲಿರುವ ಪ್ರಮುಖ ಪುಣ್ಯಕ್ಷೇತ್ರಗಳು:

ಈ ಸಮಗ್ರ ಪ್ರವಾಸ ಪ್ಯಾಕೇಜ್‌ನಲ್ಲಿ ದೇಶದ ಮೂರು ಪ್ರಮುಖ ರಾಜ್ಯಗಳ ಅತ್ಯಂತ ಪವಿತ್ರ ಶಿವನ ಧಾಮಗಳನ್ನು ಒಳಗೊಳ್ಳಲಾಗಿದೆ. ಭಕ್ತರು ಭೇಟಿ ನೀಡಲಿರುವ ಪ್ರಮುಖ ಸ್ಥಳಗಳ ಪಟ್ಟಿ ಇಲ್ಲಿದೆ:

  • ಮಧ್ಯಪ್ರದೇಶ: ಮಹಾಕಾಳೇಶ್ವರ ಜ್ಯೋತಿರ್ಲಿಂಗ (ಉಜ್ಜಯಿನಿ) ಮತ್ತು ಓಂಕಾರೇಶ್ವರ ಜ್ಯೋತಿರ್ಲಿಂಗ.
  • ಗುಜರಾತ್: ದ್ವಾರಕಾಧೀಶ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ (ದ್ವಾರಕಾ ಹತ್ತಿರ) ಮತ್ತು ಪ್ರಸಿದ್ಧ ಸೋಮನಾಥ ಜ್ಯೋತಿರ್ಲಿಂಗ.
  • ಮಹಾರಾಷ್ಟ್ರ: ಭೀಮಾಶಂಕರ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ (ನಾಸಿಕ್) ಮತ್ತು ಘೃಷ್ಣೇಶ್ವರ ಜ್ಯೋತಿರ್ಲಿಂಗ (ಛತ್ರಪತಿ ಶಂಭಾಜಿನಗರ).

ದಿನದ ಪ್ರಯಾಣ ಯೋಜನೆ (Itinerary) ಹೀಗಿದೆ:

ಯಾತ್ರೆಯ ಮೊದಲ ದಿನದಂದು ಯಾತ್ರಿಕರು ಸಿಕಂದರಾಬಾದ್‌ನಿಂದ ರೈಲಿನಲ್ಲಿ ಹೊರಟು ಮಧ್ಯಪ್ರದೇಶದ ಉಜ್ಜಯಿನಿ ತಲುಪುತ್ತಾರೆ. ಅಲ್ಲಿ ಮಹಾಕಾಳೇಶ್ವರ ಹಾಗೂ ಓಂಕಾರೇಶ್ವರ ದರ್ಶನದ ನಂತರ ಪ್ರಯಾಣವು ಗುಜರಾತ್ ಕಡೆಗೆ ಸಾಗಲಿದ್ದು, ದ್ವಾರಕಾ, ನಾಗೇಶ್ವರ ಮತ್ತು ಸೋಮನಾಥ ಕ್ಷೇತ್ರಗಳ ದರ್ಶನ ಭಾಗ್ಯ ಸಿಗಲಿದೆ. ಯಾತ್ರೆಯ ಕೊನೆಯ ಚರಣದಲ್ಲಿ ಮಹಾರಾಷ್ಟ್ರ ಪ್ರವೇಶಿಸುವ ಭಕ್ತರು ಭೀಮಾಶಂಕರ, ತ್ರ್ಯಂಬಕೇಶ್ವರ ಮತ್ತು ಘೃಷ್ಣೇಶ್ವರ ಜ್ಯೋತಿರ್ಲಿಂಗಗಳ ಪೂಜೆ ಮುಗಿಸಿಕೊಂಡು, ತಮ್ಮ ಯಶಸ್ವಿ ಹಿಂದಿರುಗುವ ಪ್ರಯಾಣವನ್ನು ಆರಂಭಿಸಲಿದ್ದಾರೆ.

ಟಿಕೆಟ್ ದರಗಳ ಸಂಪೂರ್ಣ ವಿವರ (ಒಬ್ಬರಿಗೆ):

ಎಕಾನಮಿ ಕ್ಲಾಸ್ (ಸ್ಲೀಪರ್ ಕ್ಲಾಸ್ ಪ್ರಯಾಣ):

ಕಡಿಮೆ ವೆಚ್ಚದಲ್ಲಿ ಆಧ್ಯಾತ್ಮಿಕ ಯಾತ್ರೆ ಕೈಗೊಳ್ಳಲು ಬಯಸುವ ಮಧ್ಯಮ ವರ್ಗದ ಭಕ್ತರಿಗೆ ಎಕಾನಮಿ ಪ್ಯಾಕೇಜ್ ಅತ್ಯಂತ ಸೂಕ್ತವಾಗಿದೆ. ಈ ವರ್ಗದಲ್ಲಿ ಪ್ರಯಾಣಿಸುವ ಒಬ್ಬ ವಯಸ್ಕರಿಗೆ ಟಿಕೆಟ್ ದರವನ್ನು ರೂ. 17,600 ಎಂದು ನಿಗದಿಪಡಿಸಲಾಗಿದೆ. ಅದೇ ರೀತಿ, 5 ರಿಂದ 11 ವರ್ಷದೊಳಗಿನ ಮಕ್ಕಳಿದ್ದಲ್ಲಿ ಅವರಿಗೆ ತಲಾ ರೂ. 16,300 ದರ ಅನ್ವಯವಾಗುತ್ತದೆ. ಇದರಲ್ಲಿ ಸ್ಲೀಪರ್ ಕ್ಲಾಸ್ ರೈಲು ಪ್ರಯಾಣದ ಜೊತೆಗೆ ಮೂಲಭೂತ ಸೌಕರ್ಯಗಳು ಒಳಗೊಂಡಿರುತ್ತವೆ.

ಸ್ಟ್ಯಾಂಡರ್ಡ್ ಕ್ಲಾಸ್ (3AC ಪ್ರಯಾಣ):

ಸ್ವಲ್ಪ ಆರಾಮದಾಯಕ ಹಾಗೂ ಹವಾನಿಯಂತ್ರಿತ (AC) ಪ್ರಯಾಣವನ್ನು ಇಷ್ಟಪಡುವವರಿಗಾಗಿ ಸ್ಟ್ಯಾಂಡರ್ಡ್ ಪ್ಯಾಕೇಜ್ ಲಭ್ಯವಿದೆ. ಈ ಥರ್ಡ್ ಎಸಿ (3AC) ದರ್ಜೆಯ ಪ್ರಯಾಣಕ್ಕಾಗಿ ಒಬ್ಬ ವಯಸ್ಕರಿಗೆ ರೂ. 26,700 ದರ ನಿಗದಿಯಾಗಿದೆ. ಇನ್ನು ತಮ್ಮೊಂದಿಗೆ ಪ್ರಯಾಣಿಸುವ 5 ರಿಂದ 11 ವರ್ಷದ ಮಕ್ಕಳಿಗೆ ತಲಾ ರೂ. 25,200 ಟಿಕೆಟ್ ದರವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಕಂಫರ್ಟ್ ಕ್ಲಾಸ್ (2AC ಪ್ರಯಾಣ):

ಯಾವುದೇ ದಣಿವಿಲ್ಲದೆ ಅತ್ಯಂತ ಐಷಾರಾಮಿ ಮತ್ತು ಆರಾಮದಾಯಕವಾಗಿ ಜ್ಯೋತಿರ್ಲಿಂಗಗಳ ದರ್ಶನ ಮಾಡಬಯಸುವವರಿಗಾಗಿ ಐಆರ್‌ಸಿಟಿಸಿ ಕಂಫರ್ಟ್ ಪ್ಯಾಕೇಜ್ ಅನ್ನು ರೂಪಿಸಿದೆ. ಈ ಪ್ರೀಮಿಯಂ ಸೆಕೆಂಡ್ ಎಸಿ (2AC) ದರ್ಜೆಯ ಪ್ರಯಾಣಕ್ಕೆ ಒಬ್ಬ ವಯಸ್ಕರಿಗೆ ರೂ. 34,600 ದರ ಇರಲಿದೆ. ಹಾಗೆಯೇ, 5 ರಿಂದ 11 ವರ್ಷದ ಮಕ್ಕಳ ಟಿಕೆಟ್‌ಗೆ ತಲಾ ರೂ. 32,800 ನಿಗದಿಪಡಿಸಲಾಗಿದೆ.

ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ವಿಶೇಷ ಸೌಲಭ್ಯಗಳು:

ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಜರ್ನಿಗೆ ಒತ್ತು ನೀಡಿರುವ ಐಆರ್‌ಸಿಟಿಸಿ, ಟಿಕೆಟ್ ದರದಲ್ಲೇ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುತ್ತಿದೆ:

  • ಪ್ರಯಾಣದ ದಿನಗಳಲ್ಲಿ ಪ್ರತಿದಿನ ಬೆಳಗಿನ ಚಹಾ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಶುದ್ಧ ಸಸ್ಯಾಹಾರಿ ಊಟ.
  • ರಾತ್ರಿ ತಂಗಲು ಸೂಕ್ತ ಹೋಟೆಲ್ ವಾಸ್ತವ್ಯದ ವ್ಯವಸ್ಥೆ.
  • ಪ್ರವಾಸಿ ತಾಣಗಳ ವೀಕ್ಷಣೆಗೆ ಸ್ಥಳೀಯ ಸಾರಿಗೆ (ವಾಹನ) ಸೌಲಭ್ಯ.
  • ಸುರಕ್ಷತೆಗಾಗಿ ಪ್ರಯಾಣ ವಿಮೆ (Travel Insurance) ಮತ್ತು ರೈಲಿನಲ್ಲಿ ವಿಶೇಷ ಭದ್ರತಾ ವ್ಯವಸ್ಥೆ.
  • ಇಡೀ ಪ್ರವಾಸದುದ್ದಕ್ಕೂ ಮಾರ್ಗದರ್ಶನ ಮಾಡಲು ಅನುಭವಿ ಪ್ರವಾಸ ವ್ಯವಸ್ಥಾಪಕರ (Tour Managers) ನೆರವು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುವಿನಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಜಸ್ಟ್ ಮಿಸ್!

ಕೊಡಗು, ಮೇ 31: ಮಡಿಕೇರಿ ಬಳಿಯ ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಭೀಕರ ರಸ್ತೆ ಅಪಘಾತವೊಂದು ಜಸ್ಟ್ ಮಿಸ್ ಆಗಿದ್ದು, ಭಾರೀ ಅನಾಹುತ ತಪ್ಪಿದೆ. ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಗೂಡ್ಸ್ ಆಟೋವೊಂದು ಅತಿ ವೇಗವಾಗಿ ಬಂದಿದೆ. ಈ ವೇಳೆ ಎದುರಿಗಿದ್ದ ಕಾರಿಗೆ ಅಪ್ಪಳಿಸುವುದನ್ನು ತಪ್ಪಿಸಲು ಆಟೋ ಚಾಲಕ ವಾಹನವನ್ನು ತಕ್ಷಣವೇ ಬಲಬದಿಗೆ ತಿರುಗಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಆಟೋ ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ, ಕೆಎಸ್‌ಆರ್‌ಟಿಸಿ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಬಸ್ ಪಕ್ಕಕ್ಕೆ ಸರಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಇಡೀ ರೋಮಾಂಚನಕಾರಿ ಅಪಘಾತದ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೂತನ ಮುಖ್ಯಮಂತ್ರಿ ಆಯ್ಕೆ ಬೆನ್ನಲ್ಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ, ಮಂತ್ರಿಗಿರಿಗೂ ಹೆಚ್ಚಿದ ಲಾಬಿ

ಬೆಂಗಳೂರು, ಮೇ 31: ನೂತನ ಮುಖ್ಯಮಂತ್ರಿಯ ಆಯ್ಕೆ ಬೆನ್ನಲ್ಲಿಯೇ ಡಿಸಿಎಂ ಮತ್ತು ಸಚಿವ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್​​ (Congress) ಪಾಳಯದಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಸ್ಥಾನಗಳ ವಿಚಾರದಲ್ಲಿ ಇನ್ನೂ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕ ಎಷ್ಟು ಡಿಸಿಎಂ, ಎಷ್ಟು ಸಚಿವರು ಅಂತಾ ತೀರ್ಮಾನ ಆಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ನಡುವೆಯೂ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ. ಅದರಲ್ಲಿ ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ರೇಸ್​ ಶುರುವಾಗಿರುವ ಮಾಹಿತಿ ಲಭಿಸಿದೆ.

ಪರಮೇಶ್ವರ್​​- ಪ್ರಿಯಾಂಕ್​​ ಖರ್ಗೆ ನಡುವೆ ರೇಸ್​​

ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಂಬಂಧ ಮೊನ್ನೆ ದೆಹಲಿಗೆ ತೆರಳಿದ್ದಾಗ ಪರಮೇಶ್ವರ್ ಹೈಕಮಾಡ್​​ ನಾಯರಿಗೆ ಒತ್ತಾಯ ಮಾಡಿ ಬಂದಿದ್ದಾರೆ. ಡಿಸಿಎಂ ಹುದ್ದೆ ಜೊತೆ ಪ್ರಮುಖ ಖಾತೆ ಕೊಡಿ ಎಂದು ಪರಮೇಶ್ವರ್ ಪಟ್ಟು ಹಿಡಿದಿದ್ದು, ಇಲ್ಲದಿದ್ದರೆ ಮಂತ್ರಿಸ್ಥಾನವೇ ಬೇಡ ಶಾಸಕನಾಗಿಯೇ ಇರುತ್ತೇನೆ ಎಂದು ಹೈಕಮಾಂಡ್ ಮುಂದೆ ತಮ್ಮ ನಿಲುವು ಪ್ರಕಟಿಸಿದ್ದಾರೆ. ಕಳೆದ ಬಾರಿ ನೀಡಿದ್ದ ಗೃಹ ಇಲಾಖೆಯೂ ಬೇಡ ಎಂದು ಅವರು ಹೇಳಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ ಬಳಿಯೇ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ್​​ ಖರ್ಗೆ ಅವರ ಹೆಸರೂ ಡಿಸಿಎಂ ರೇಸ್​​ನಲ್ಲಿ ಕೇಳಿಬಂದಿರೋದು ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಬಿಗ್​​ ಅಪ್ಡೇಟ್​​

ಸಿದ್ದರಾಮಯ್ಯರಿಂದ ಕೆಲವರ ಹೆಸರು ಶಿಫಾರಸ್ಸು

ಡಿಸಿಎಂ ಹುದ್ದೆ ಮಾತ್ರವಲ್ಲದೆ ಸಚಿವ ಸ್ಥಾನಕ್ಕಾಗಿಯೂ ಆಕಾಂಕ್ಷಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದವರು ಮತ್ತೆ ಸ್ಥಾನ ಗಿಟ್ಟಿಸುವ ಪ್ರಯತ್ನದಲ್ಲಿದ್ದರೆ, ಹಿರಿಯರಾಗಿಯೂ ಸ್ಥಾನ ಸಿಗದವರು ಕೂಡ ಲಾಬಿಗೆ ಇಳಿದಿದ್ದಾರೆ. ಕೆಲ ಹೊಸ ಸಚಿವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ನಡುವೆ ಸಚಿವ ಸ್ಥಾನಕ್ಕೆ ಹೈಕಮಾಂಡ್​​ಗೆ ಕೆಲ ಹೆಸರುಗಳನ್ನು ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅವರು ಯಾರ್ಯಾರು ಎಂಬುದರ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

ಯಾರ್ಯಾರ ಹೆಸರು ಶಿಫಾರಸ್ಸು?

ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗ ಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ. ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಹೆಚ್. ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್ ಹೆಸರುಗಳು ಸಿದ್ದರಾಮಯ್ಯ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಇವೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ‘ವಾರಣಾಸಿ’ (Varanasi) ಸಿನಿಮಾದ ಸೆಟ್‌ನಿಂದ ಹೊಸ ಫೋಟೋವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರತಂಡ ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸೆಟ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಈಗ ರಾಜಮೌಳಿ (SS Rajamouli) ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವರದಿಗಳ ಪ್ರಕಾರ, ಮೇ 26ರಂದು ಸೋರಿಕೆಯಾದ ಈ ಹೊಸ ಫೋಟೋದಲ್ಲಿ ಸಿನಿಮಾದ ಅದ್ದೂರಿ ಸೆಟ್ ವಿನ್ಯಾಸ ಕಣ್ಣಿಗೆ ಕಟ್ಟುವಂತಿದೆ. ಬೃಹತ್ ಬ್ಲೂ-ಸ್ಕ್ರೀನ್ ಹಿನ್ನೆಲೆಯೊಂದಿಗೆ ಕಲ್ಲಿನ ಕೆತ್ತನೆಗಳು ಮತ್ತು ಕಲಾತ್ಮಕವಾದ ಕಲ್ಲಿನ ಕಂಬಗಳು ಈ ಫೋಟೋದಲ್ಲಿ ಕಾಣಿಸಿಕೊಂಡಿವೆ. ಇದು ಚಿತ್ರದ ಅತ್ಯಂತ ಪ್ರಮುಖ ಭಾಗವಾದ ‘ಉಗ್ರಭಟ್ಟಿ ಗುಹೆಗಳ’ ಸೀಕ್ವೆನ್ಸ್‌ನ ಸೆಟ್ ಎನ್ನಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳಲ್ಲಿ ಈ ಗುಹೆಯ ಸಣ್ಣ ಝಲಕ್ ಕಾಣಿಸಿತ್ತು. ಆದರೆ ಈಗ ಲೀಕ್ ಆಗಿರುವ ಫೋಟೋ ಇಡೀ ಸೆಟ್‌ನ ಭವ್ಯತೆಯನ್ನು ಬಹಿರಂಗಪಡಿಸಿದೆ.

ವರದಿಗಳ ಪ್ರಕಾರ, ಈ ಉಗ್ರಭಟ್ಟಿ ಗುಹೆಯ ಸೀಕ್ವೆನ್ಸ್ ಹಿಂದೂ ಪುರಾಣಗಳ ಉಗ್ರ ದೇವತೆಯಾದ ಮಾತಾ ಛಿನ್ನಮಸ್ತಾ ದೇವಿಯ ಸುತ್ತ ಹೆಣೆಯಲಾಗಿದೆ. ಸ್ವಯಂತ್ಯಾಗ, ಪರಿವರ್ತನೆ ಮತ್ತು ಬ್ರಹ್ಮಾಂಡದ ಸಮತೋಲನದ ಸಂಕೇತವಾಗಿರುವ ಈ ದೇವತೆಯ ಕಥೆ ಚಿತ್ರದ ಕಥಾಹಂದರಕ್ಕೆ ಬಹಳ ಮುಖ್ಯವಾಗಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ದುಷ್ಟ ಶಕ್ತಿಯನ್ನು ಸೋಲಿಸಲು ಈ ದೇವತೆಯ ದೈವಿಕ ಅನುಗ್ರಹವನ್ನು ಪಡೆಯಲು ಈ ಗುಹೆಗೆ ಭೇಟಿ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ವಾರಣಾಸಿ ಶೆಡ್ಯೂಲ್‌ನಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ಇರುವ ವಿಡಿಯೋವೊಂದು ಲೀಕ್ ಆಗಿತ್ತು. ಇದರಿಂದ ನಿರ್ದೇಶಕ ರಾಜಮೌಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನುಮುಂದೆ ಸೆಟ್‌ನಿಂದ ಯಾವುದೇ ಮಾಹಿತಿ ಹೊರಹೋಗಬಾರದು ಎಂದು ಚಿತ್ರದ ಇಡೀ ತಂಡಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಮೊಬೈಲ್ ಬಳಕೆಯ ಮೇಲೆಯೂ ನಿಯಂತ್ರಣ ಹೇರಿದ್ದರು.

ಇದನ್ನೂ ಓದಿ: ‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಆದರೆ, ಇಷ್ಟೆಲ್ಲಾ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಚಿತ್ರದ ಕಥೆಗೆ ಅತ್ಯಂತ ಮುಖ್ಯವಾಗಿರುವ ಉಗ್ರಭಟ್ಟಿ ಗುಹೆಯ ದೃಶ್ಯಗಳು ಲೀಕ್ ಆಗಿರುವುದು ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ. ಸಾಹಸ ಪ್ರಧಾನವಾಗಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾವನ್ನು ಒಡಿಶಾ, ಆಫ್ರಿಕಾ ಮತ್ತು ಹೈದರಾಬಾದ್‌ನ ವಿವಿಧ ಭಾಗಗಳಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. 2027ರಲ್ಲಿ ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋದಿ ‘ಮನ್ ಕಿ ಬಾತ್’ 134ನೇ ಸಂಚಿಕೆ: ಕ್ರೀಡಾ ತಾರೆಗಳ ಕೊಂಡಾಡಿದ ಪ್ರಧಾನಿ; ಚೋಳರ ಕಾಲದ ವಿಗ್ರಹ ವಾಪಸಾತಿಗೆ ಹೆಮ್ಮೆ

ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮನ್ ಕೀ ಬಾತ್​ನ 134ನೇ ಸಂಚಿಕೆಯಲ್ಲಿ (Mann Ki Baat, 13th Episode) ಭಾರತೀಯ ಕ್ರೀಡಾ ಪ್ರತಿಭೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕೆಲ ಸಾಧಕರೊಂದಿಗೆ ಸಂವಾದ ಕೂಡ ನಡೆಸಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಬರೆದ ಭಾರತದ ಯುವ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ದೇಶಕ್ಕೆ ತರುವಲ್ಲಿ ಯಶಸ್ವಿಯಾಗಿರುವುದನ್ನು ದೇಶದ ಜನರೊಂದಿಗೆ ಹಂಚಿಕೊಂಡರು.

ರಾಷ್ಟ್ರೀಯ ದಾಖಲೆ ಬರೆದ ಕ್ರೀಡಾಪಟುಗಳಿಗೆ ಪ್ರಧಾನಿ ಶ್ಲಾಘನೆ

ಇತ್ತೀಚಿನ ಕ್ರೀಡಾಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ ನಾಲ್ಕು ಪ್ರಮುಖ ಅಥ್ಲೀಟ್‌ಗಳನ್ನು ಪ್ರಧಾನಿ ಮೋದಿ ಅವರು ವಿಶೇಷವಾಗಿ ಸ್ಮರಿಸಿದರು. ಗುರಿಂದರ್​ವೀರ್ ಸಿಂಗ್, ವಿಶಾಲ್ ಕುಮಾರ್, ತೇಜಸ್ವಿನ್ ಶಂಕರ್, ದೇವ್ ಮೀನಾ ಅವರ ಸಾಧನೆಗೆ ಹೆಮ್ಮೆ ಪಟ್ಟರು. ಟ್ರ್ಯಾಕ್ ರೇಸಿಂಗ್​ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಗುರಿಂದರ್ ವೀರ್ ಸಿಂಗ್ (Gurindervir Singh) ಅವರ ವೇಗ ಮತ್ತು ಸಮರ್ಪಣಾ ಭಾವವನ್ನು ಪ್ರಧಾನಿಗಳು ಕೊಂಡಾಡಿದರು.

ಕಠಿಣ ಪರಿಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ವಿಶಾಲ್ ಕುಮಾರ್ (Vishal Kumar) ಅವರ ಸಾಧನೆ ಯುವಕರಿಗೆ ಪ್ರೇರಣೆ ಎಂದರು. ಹೈಜಂಪ್ ಮತ್ತು ಡೆಕಾಥ್ಲಾನ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ತೇಜಸ್ವಿನ್ ಶಂಕರ್ (Tejaswin Shankar) ಅವರ ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ಪೋಲ್ ವಾಲ್ಟ್ (Pole Vault) ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದ ಮಧ್ಯಪ್ರದೇಶದ ಯುವ ಪ್ರತಿಭೆ ದೇವ್ ಮೀನಾ ಶಂಕರ್ ಅವರ ಸಾಧನೆಯನ್ನು ಪ್ರಧಾನಿ ಮುಕ್ತವಾಗಿ ಜನರಿಗೆ ಪರಿಚಯಿಸಿದರು.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, ಮೃತರ ಪೈಕಿ ಬೆಂಗಳೂರು ಮೂಲದ ಪ್ರವಾಸಿಗರೂ ಇರುವ ಶಂಕೆ

“ನಮ್ಮ ಯುವ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಿದ್ದಾರೆ. ಈ ಪ್ರತಿಯೊಬ್ಬ ಸಾಧಕನ ಯಶೋಗಾಥೆಯೂ ಭಾರತದ ಕ್ರೀಡಾ ಭವಿಷ್ಯದ ಬಲವಾದ ಹೆಜ್ಜೆಯಾಗಿದೆ.” ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಭಾರತಕ್ಕೆ ಮರಳಿದ ಚೋಳರ ಕಾಲದ ಅಮೂಲ್ಯ ಕಲಾಕೃತಿ

ಸಾಂಸ್ಕೃತಿಕ ರಂಗದಲ್ಲಿ ಭಾರತ ಸಾಧಿಸಿರುವ ಮತ್ತೊಂದು ದೊಡ್ಡ ಯಶಸ್ಸನ್ನು ಪ್ರಕಟಿಸಿದ ಪ್ರಧಾನಿ ಮೋದಿ, ತಮಿಳುನಾಡಿನ ಪ್ರಸಿದ್ಧ ಚೋಳರ ರಾಜವಂಶದ (Chola Era) ಕಾಲಕ್ಕೆ ಸೇರಿದ ಪುರಾತನ ಮತ್ತು ಅತ್ಯಂತ ಅಪರೂಪದ ಕಲಾಕೃತಿಯನ್ನು ಯಶಸ್ವಿಯಾಗಿ ಭಾರತಕ್ಕೆ ಮರಳಿ ತರಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆಮ್ಮೆಯ ವಿಷಯ: ಈ ಕಲಾಕೃತಿಯನ್ನು ಈ ಹಿಂದೆ ಭಾರತದಿಂದ ಕಾನೂನುಬಾಹಿರವಾಗಿ ವಿದೇಶಕ್ಕೆ ಸಾಗಿಸಲಾಗಿತ್ತು. ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಕಟ್ಟುನಿಟ್ಟಾದ ನಿಯಮಗಳ ಮೂಲಕ ಇದನ್ನು ಈಗ ಭಾರತಕ್ಕೆ ತಾಯ್ನಾಡಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಕಳುವಾಗಿದ್ದ ನೂರಾರು ಪವಿತ್ರ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ಜಗತ್ತಿನ ವಿವಿಧ ದೇಶಗಳಿಂದ ಭಾರತಕ್ಕೆ ವಾಪಸ್ ತರಲಾಗುತ್ತಿದ್ದು, ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಲಸವಾಗಿದೆ ಎಂದು ಪಿಎಂ ಮೋದಿ ಹೇಳಿದರು.

ಇದನ್ನೂ ಓದಿ: ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

ಬೇಸಿಗೆಯ ಬಿಸಿಗೆ ತಂಪೆರೆಯುವ ಪಾನಕ ವೈವಿಧ್ಯಗಳ ಪರಿಚಯ ತಿಳಿಸಿದ ಮೋದಿ

ಮನ್ ಕಿ ಬಾತ್​ನ 134ನೇ ಎಪಿಸೋಡ್​ನಲ್ಲಿ ಪಿಎಂ ಮೋದಿ ಅವರು ಬೇಸಿಗೆಯ ಬಿಸಿಲನ್ನು ನೀಗಿಸಬಲ್ಲಂತಹ ದೇಸೀ ತಂಪು ಪಾನೀಯಗಳನ್ನು ಪ್ರಸ್ತಾಪಿಸಿದರು. ಪಾನಕ, ಲಸ್ಸಿ, ಆಮ್ ರಸ್ ಇತ್ಯಾದಿ ಪಾನೀಯಗಳನ್ನು ಪ್ರಧಾನಿಗಳು ಉದಾಹರಿಸಿದರು. ಈ ದೇಸೀ ಪಾನೀಯಗಳು ಯಾವುದೇ ದೊಡ್ಡ ಬ್ರ್ಯಾಂಡ್ ಹೊಂದಿಲ್ಲ. ಬದಲಾಗಿ ತಲೆತಲೆಮಾರುಗಳಿಂದ ತಯಾರಾಗುತ್ತಾ ಬಂದಿವೆ ಎಂದರು. ಹಾಗೆಯೇ, ಭಾರತದಲ್ಲಿರುವ ಮಾವಿನ ವೈವಿಧ್ಯತೆಯನ್ನೂ ಮೋದಿ ತಿಳಿಸಿದರು. ತೋತಾಪುರಿ, ಮಲಗೋಬಾ ಇತ್ಯಾದಿ ತಳಿಯ ಮಾವನ್ನೂ ಉದಾಹರಿಸಿದರು.

ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ

ಈ ಬಾರಿಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿಯವರು, ಭಾರತೀಯ ಯುವಶಕ್ತಿ ತಂತ್ರಜ್ಞಾನ, ಕ್ರೀಡೆ ಮತ್ತು ನಾವೀನ್ಯತೆಗಳಲ್ಲಿ ಜಾಗತಿಕವಾಗಿ ಹೇಗೆ ಮುಂಚೂಣಿಗೆ ಬರುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ದೇಶವು ‘ವಿಕಸಿತ ಭಾರತ’ದತ್ತ ಮುನ್ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉಭಯ ಕ್ರೀಡಾ ಸಾಧನೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಮರುಸ್ಥಾಪನೆಯು 140 ಕೋಟಿ ಭಾರತೀಯರಲ್ಲಿ ಹೊಸ ಚೈತನ್ಯ ಮತ್ತು ಹೆಮ್ಮೆಯನ್ನು ಮೂಡಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link