All posts by nagaraj11081993

‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಮೊನಾಲಿಸಾ ಗಂಭೀರ ಆರೋಪ

‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಮೊನಾಲಿಸಾ ಗಂಭೀರ ಆರೋಪ

ಪ್ರಯಾಗ್ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ಮದುವೆ ಆದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೋನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

‘ಸನೋಹ್ ಮಿಶ್ರಾ ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿರುವ ಮೊನಾಲಿಸಾ ಕೇಂದ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳಿಂದ ಸಹಾಯವನ್ನು ಕೋರಿದ್ದಾರೆ. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಮತ್ತು ಅವರ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಅವರು ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ’ ಎಂದು ಹೇಳಿದರು.

‘ಶೂಟಿಂಗ್ ಸಮಯದಲ್ಲಿ ಸನೋಜ್ ಮಿಶ್ರಾ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ಮನೆಯಲ್ಲಿ ಆ ಕಹಿ ಅನುಭವದ ಬಗ್ಗೆ ನಾನು ಅವರಿಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಚಿತ್ರ ಮತ್ತು ನಾನು ಹೊಂದಿಕೊಳ್ಳಬೇಕಾಯಿತು. ನಾನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಾನು ಮೌನವಾಗಿದ್ದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಇದು ಲವ್ ಜಿಹಾದ್’; ಮೊನಾಲಿಸಾ ನಟನೆಯ ಸಿನಿಮಾ ನಿರ್ದೇಶಕನ ಗಂಭೀರ ಆರೋಪ

ತಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದಕ್ಕೆ ಕಾರಣ ತನ್ನ ಮೇಲಿನ ದ್ವೇಷ ಎಂದು ಅವರು ಹೇಳಿದರು. ನನ್ನ ಮದುವೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಅವರು ಹೇಳಿದರು. ‘ನಾವು ಹಿಂದೂ ಸಂಪ್ರದಾಯಗಳ ಪ್ರಕಾರ ದೇವಾಲಯದಲ್ಲಿ ವಿವಾಹವಾದೆವು. ದೇಶದ ಪ್ರತಿಯೊಬ್ಬರಿಗೂ ಅದು ತಿಳಿದಿದೆ. ನಿರ್ದೇಶಕರು ಭಯೋತ್ಪಾದನೆ ಇರಬೇಕು ಮತ್ತು ಜನರು ಪರಸ್ಪರ ಜಗಳವಾಡಬೇಕು ಎಂದು ಬಯಸುತ್ತಾರೆ. ಅವರು ನಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಮೊನಾಲಿಸಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ಕರಡಿಯನ್ನು10 ಸೆಕೆಂಡುಗಳಲ್ಲಿ ಗುರುತಿಸಿ

ನಿಮ್ಮ ಏಕಾಗ್ರತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಮುಂದಾಗಿದ್ದೀರಾ. ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್‌ ಟೀಸರ್‌ ಚಿತ್ರಗಳು ನಿಮಗೆ ಖಂಡಿತ ಸಹಾಯ ಮಾಡುತ್ತದೆ. ಈ ಒಗಟಿನ ಆಟದಿಂದ ಆಲೋಚನಾ ಕೌಶಲ್ಯವನ್ನು ಹೆಚ್ಚಿಸಿ, ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಈ ಒಗಟಿನ ಆಟಗಳನ್ನು ನೀವು ಇಷ್ಟ ಪಡುತ್ತೀರಾ ಅಲ್ವಾ, ಇದೀಗ ಅಂತಹದ್ದೇ  ಚಿತ್ರವೊಂದು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಕರಡಿಯೊಂದನ್ನು ಮರೆ ಮಾಡಲಾಗಿದ್ದು, ನೀವು ಕೇವಲ 10 ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಗುರುತಿಸಬೇಕು. ನೀವು ಬುದ್ಧಿವಂತರೆಂದು ಪರೀಕ್ಷಿಸಿಕೊಳ್ಳಲು ಇದು ಒಳ್ಳೆಯ ಸಮಯ, ಈ ಟ್ರಿಕ್ಕಿ ಒಗಟು ಬಿಡಿಸಲು ಸಿದ್ಧರಾಗಿ.

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಪ್ರಕೃತಿಯ ಸುಂದರ ನೋಟವನ್ನು ಕಾಣಬಹುದು. ಬೆಟ್ಟಗಳು, ಸಸ್ಯಗಳು, ಹಸಿರಾದ ಹುಲ್ಲು ಮತ್ತು ಸರೋವರವಿದ್ದು, ಈ ಸುಂದರ ಪ್ರಕೃತಿಯ ನಡುವೆ ಕರಡಿಯೂ ಇದೆ. ಈ ಪ್ರಾಣಿಯನ್ನು ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಶಕ್ತಿ ಅತ್ಯುತ್ತಮ ಎನ್ನುವುದು ಖಚಿತವಾಗುತ್ತದೆ.

ಇದನ್ನೂ ಓದಿ: ಜಸ್ಟ್‌ 10 ಸೆಕೆಂಡುಗಳಲ್ಲಿ ಹೂವುಗಳ ನಡುವೆ ಇರುವ ಗಂಟೆಯನ್ನು ಕಂಡು ಹಿಡಿಯಬಲ್ಲಿರಾ

ಕರಡಿ ನಿಮ್ಮ ಕಣ್ಣಿಗೆ ಬಿದ್ದಿತೇ?

ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಹುಡುಕುವ ಸವಾಲನ್ನು ಸ್ವೀಕರಿಸಿದ್ದೀರಿ eಎಂದು ನಾವು ಭಾವಿಸುತ್ತೇವೆ. ತಕ್ಷಣವೇ ನಿಮ್ಮ ಕಣ್ಣಿಗೆ ಕರಡಿ ಕಾಣಿಸದೇ ಇದ್ದರೆ ಚಿಂತಿಸಬೇಡಿ. ಈ ಚಿತ್ರವು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ನೀವು ಕಣ್ಣು ಬಿಟ್ಟು ಈ ಚಿತ್ರ ನೋಡಿ, ಆಗ ಮಾತ್ರ ನಿಮ್ಮ ಕಣ್ಣಿಗೆ ಕರಡಿ ಕಾಣಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ಈ ಪ್ರಾಣಿ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಗ್ಯಾಸ್ ಟ್ರಬಲ್ ಆಯ್ತು, ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!

ಬೆಂಗಳೂರು, ಮಾರ್ಚ್ 25: ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ನಿಂದ ಇಂಧನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಈ ಕುರಿತು ಎಚ್ಚರಿಕೆ ನೀಡಿದೆ. ಕಂಪನಿಯು ಮುಂಗಡ ಹಣ ಪಡೆದಿದ್ದರೂ ಲೋಡ್ ನೀಡುತ್ತಿಲ್ಲ ಎಂದು ಫೆಡರೇಶನ್ ತಿಳಿಸಿದೆ. ಈ ಸಮಸ್ಯೆ ಪ್ರಸ್ತುತ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಆನೇಕಲ್, ಕೋಲಾರ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ಭಾಗಗಳಲ್ಲಿ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಹೆಚ್‌ಪಿಸಿ ಮತ್ತು ಐಓಸಿ ಕೂಡ ಇದೇ ಹಾದಿ ಹಿಡಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಫೆಡರೇಶನ್ ಆತಂಕ ವ್ಯಕ್ತಪಡಿಸಿದೆ. ಕೂಡಲೇ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಮನವಿ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಕೊರತೆ ನಡುವೆ ಗ್ಯಾಸ್ ಬುಕಿಂಗ್ ನಿಯಮ ಬದಲಿಸಿದ ಕೇಂದ್ರ , ಸಿಲಿಂಡರ್ ಬುಕ್ ಮಾಡಿದ್ರೆ ಎಷ್ಟು ದಿನ ಕಾಯ್ಬೇಕು?

ನವದೆಹಲಿ, ಮಾರ್ಚ್​ 25: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಭಾರತ ಸೇರಿ ಹಲವು ದೇಶಗಳ ಮೇಲಾಗುತ್ತಿದೆ. ಭಾರತದಲ್ಲಿ ಎಲ್​ಪಿಜಿ(LPG) ಕೊರತೆ ಎದುರಾಗಿದೆ. ಇದರ ನಡುವೆ ಕೇಂದ್ರ ಸರ್ಕಾರವು ಬುಕಿಂಗ್ ನಿಯಮವನ್ನು ಬದಲಿಸಿದೆ. ನಿನ್ನೆ ಸಂಜೆ ಹೊಸ ನಿಯಮ ಜಾರಿಗೆ ಬಂದಿದ್ದು, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ವಿತರಣಾ ಸಮಯವನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ. ನಿಯಮದ ಪ್ರಕಾರ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ, 35 ದಿನಗಳ ನಂತರವೇ ಎರಡನೇ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ.

ನಿಮ್ಮ ಬಳಿ 5 ಕೆಜಿ ಗ್ಯಾಸ್ ಸಿಲಿಂಡರ್ ಇದ್ದರೆ, ನೀವು ಅದನ್ನು 9 ರಿಂದ 16 ದಿನಗಳ ಅಂತರದಲ್ಲಿ ಬುಕ್ ಮಾಡಬಹುದು. ನೀವು 18 ರಿಂದ 32 ದಿನಗಳ ಅಂತರದಲ್ಲಿ 10 ಸಿಲಿಂಡರ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

ತಿಂಗಳಿಗೆ ಎರಡು ಸಿಲಿಂಡರ್​ಗಳನ್ನು ಮಾತ್ರ ಬುಕ್ ಮಾಡಬಹುದು
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಒಬ್ಬ ಸಾಮಾನ್ಯ ನಾಗರಿಕರು ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು ಎಂದು ಅಧಿಸೂಚನೆ ಹೊರಡಿಸಿದೆ.

ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಕೆವೈಸಿ ಕಡ್ಡಾಯ
ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಸಿಲಿಂಡರ್ ಬುಕಿಂಗ್ ಮಾಡಬಹುದು. ಗ್ರಾಹಕರು ತಮ್ಮ ಸಂಖ್ಯೆಯನ್ನು ಬದಲಾಯಿಸಿದ್ದರೆ, ಅದನ್ನು ಏಜೆನ್ಸಿಯಲ್ಲಿ ಅಥವಾ ಅಪ್ಲಿಕೇಶನ್ ಮೂಲಕ ನವೀಕರಿಸಬೇಕು.

ಮತ್ತಷ್ಟು ಓದಿ: ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!

ಸಿಲಿಂಡರ್ ಪಡೆಯುವ ಸಮಯದಲ್ಲಿ ಒಟಿಪಿ ಅಗತ್ಯ
ವಿತರಣೆಯ ಸಮಯದಲ್ಲಿ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಎಂಬ OTP ಅನ್ನು ಸ್ವೀಕರಿಸುತ್ತಾರೆ.

ಈವೆಂಟ್ ಮತ್ತು ಅತಿಥಿಗಳ ಕುರಿತು ಪ್ರಶ್ನೆಗಳಿರುತ್ತವೆ
ಆ್ಯಪ್ ಮೂಲಕ ಹೆಚ್ಚುವರಿ ಸಿಲಿಂಡರ್‌ ಬಗ್ಗೆ ಬೇಡಿಕೆ ಇಡುವಾಗ, ಗ್ರಾಹಕರು ಅಂದಾಜು ಅತಿಥಿಗಳ ಸಂಖ್ಯೆ ಮತ್ತು ಹೆಚ್ಚುವರಿ ಬೇಡಿಕೆಗೆ ಕಾರಣವನ್ನು ನಮೂದಿಸಬೇಕಾಗಬಹುದು. ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು.

ಮುಂದಿನ ಬುಕಿಂಗ್‌ಗಾಗಿ ಹೆಚ್ಚು ಸಮಯ ಕಾಯಬೇಕು
ಈ ಹಿಂದೆ, ಗ್ರಾಹಕರು ಹಿಂದಿನ ಬುಕಿಂಗ್ ಮಾಡಿದ 21 ದಿನಗಳ ನಂತರ ಮುಂದಿನ ಸಿಲಿಂಡರ್ ಅನ್ನು ಬುಕ್ ಮಾಡಬಹುದಿತ್ತು. ಈಗ ಹೆಚ್ಚು ದಿನ ಕಾಯಬೇಕು.

ವರ್ಷಕ್ಕೆ ಗರಿಷ್ಠ 15 ಸಿಲಿಂಡರ್‌ಗಳು
ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು. ಮನೆಯಲ್ಲಿ ಮದುವೆ, ಕುಟುಂಬ ಕಾರ್ಯಕ್ರಮ ಅಥವಾ ವಿಶೇಷ ಕಾರ್ಯಕ್ರಮವಿದೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳಬಹುದು. ಗ್ರಾಹಕರು ಈ ನಿಯಮಗಳಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಿದರೆ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಅವರು ಅಧಿಕೃತ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800-2333-555 ಅನ್ನು ಸಂಪರ್ಕಿಸಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

Source link

ಕೆಲಸ ಅರಸಿ ಬರುವ ಒಂಟಿ ಮಹಿಳೆಯರಿಗೆ ಬೆಂಗಳೂರು ಸೇಫಾ? ಬ್ರಿಟಿಷ್ ಯುವತಿಯ ಪ್ರಶ್ನೆಗೆ ನೆಟ್ಟಿಗರೇನಂದ್ರು?

ಬೆಂಗಳೂರು, ಮಾರ್ಚ್​ 25: ಜೀವನದಲ್ಲಿ ಏನನ್ನಾದರೂ ಸಾಧಿಸಬೆಕೆಂದುಕೊಂಡು ಬೆಂಗಳೂರಿಗೆ (Bengaluru) ಕೆಲಸ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕರ್ನಾಟಕವಷ್ಟೇ ಅಲ್ಲದೆ ಭಾರತದ ಮೂಲೆ ಮೂಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅನ್ನ ನೀಡಿ ಸಲಹುತ್ತಿರುವ ಐಟಿ ಸಿಟಿ, ಪಾಶ್ಚಿಮಾತ್ಯರನ್ನೂ ಕೈ ಬೀಸಿ ಕರೆಯುತ್ತದೆ. ಹೀಗಿರುವಾಗ ಒಬ್ಬಂಟಿಯಾಗಿರಲು ಬೆಂಗಳೂರು ಸುರಕ್ಷಿತವೆ (Women Safety)ಎಂಬ ಪ್ರಶ್ನೆ ಹಲವರನ್ನು ಕಾಡುವುದುಂಟು. ಅದರಲ್ಲಿಯೂ ಒಬ್ಬಂಟಿ ಮಹಿಳೆಯರು ಇಲ್ಲಿ ನೆಮ್ಮದಿಯಿಂದ ಜೀವಿಸಬಹುದೆ ಎಂಬುದೂ ಗಮನಾರ್ಹವೇ. ಇದೇ ಕುತೂಹಲವನ್ನಿಟ್ಟುಕೊಂಡು ಪ್ರಶ್ನೆ ಮಾಡಿದ ಯುಕೆ ಯುವತಿಯೊಬ್ಬಳ ರೆಡಿಟ್ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ವೈರಲ್ ಆದ ಯುವತಿಯ ಪೋಸ್ಟ್​ನಲ್ಲೇನಿದೆ?

22 ವರ್ಷದ ಬ್ರಿಟಿಷ್ ಯುವತಿ ರೆಡಿಟ್‌ನಲ್ಲಿ ಪೋಸ್ಟ್ ಮಾಡುತ್ತಾ, ಬೆಂಗಳೂರಿನಲ್ಲಿ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಕೇಳಿದ್ದಾಳೆ. ನಾನು ಯುಕೆಯ 22 ವರ್ಷದ ಯುವತಿ. ನನಗೆ ಬೆಂಗಳೂರಿನಲ್ಲಿ ಉದ್ಯೋಗದ ಅವಕಾಶ ಬಂದಿದೆ. ಆದರೆ ಅದನ್ನು ಸ್ವೀಕರಿಸುವುದರ ಬಗ್ಗೆ ನನಗೆ ಅನುಮಾನ ಇದೆ. ನಾನು ಒಬ್ಬಂಟಿಯಾಗಿ ಬೆಂಗಳೂರಿನಲ್ಲಿ ಇರಬಹುದೇ ಅಥವಾ ಸುರಕ್ಷತೆ ಸಮಸ್ಯೆ ಎದುರಾಗಬಹುದೇ ಎಂದು ಆಕೆ ನೆಟ್ಟಿಗರ ಬಳಿ ಕೇಳಿದ್ದಾಳೆ. ಇದಲ್ಲದೆ, ಬೆಂಗಳೂರು ನಗರದಲ್ಲಿ ಯುವ ವಿದೇಶಿಗರ ಸಮುದಾಯವಿದೆಯೇ? ಯುವ ಮಹಿಳೆಯರ ಜೀವನ ಇಲ್ಲಿ ಹೇಗಿರುತ್ತದೆ? ಎಂದು ಪ್ರಶ್ನಿಸಿದ್ದಾಳೆ.

ಯುವತಿಗೆ ನೆಟ್ಟಿಗರ ಪ್ರತಿಕ್ರಿಯೆ ಏನು?

ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಇದೇ ಭಯದಲ್ಲಿ ತಾನು ಬೆಂಗಳೂರಿಗೆ ಬರುವುದು ಸೂಕ್ತವೇ ಎಂದು ಆಕೆ ಈ ಪೋಸ್ಟ್ ಮೂಲಕ ಕೇಳಿರಬಹುದು. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಓರ್ವ ಯೂಸರ್, ನೀವು ಬಿಳಿಯರಾಗಿದ್ದರೆ ಇಲ್ಲಿನ ಜನ ಖಂಡಿತಾ ನಿಮ್ಮನ್ನು ಕುತೂಹಲದಿಂದ ನೋಡುತ್ತಾರೆ. ನೀವು ವಿದೇಶಿಗರ ಅಭಿಪ್ರಾಯವನ್ನೇ ಕೇಳುವುದು ಒಳ್ಳೆಯದು ಎಂದಿದ್ದಾರೆ.

ಇದನ್ನೂ ಓದಿ ಮಹಿಳೆಯರೇ, ಕ್ಯಾಬ್ ನಲ್ಲಿ ಓಡಾಡುವಾಗ ನಿಮ್ಮ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳಬಹುದು? ಇಲ್ಲಿದೆ ಸಲಹೆಗಳು

ಆಕೆಯ ಪೋಸ್ಟ್​ಗೆ ಅಮೆರಿಕನ್ ಯುವತಿಯೊಬ್ಬಳು ಕಾಮೆಂಟ್ ಮಾಡಿ, ಬೇರೆ ಸಿಟಿಗಳಂತೆ ಬೆಂಗಳೂರು ಅಸುರಕ್ಷಿತವೇನಲ್ಲ. ಆದರೂ ನೀವು ಜಾಗರೂಕರಾಗಿರಬೇಕು. ಇಲ್ಲಿನ ಸಂಸ್ಕೃತಿ ಭಿನ್ನವಾಗಿರುತ್ತದೆ. ಆದರೆ ನೀವು ಸಮಯ ಕಳೆದಂತೆ ಹೊಂದಿಕೊಳ್ಳುವಿರಿ. ನನಗೆ ವೈಯಕ್ತಿಕವಾಗಿ ಇಲ್ಲಿನ ಹೋಮ್ ಸರ್ವಿಸ್ ಇಷ್ಟ. ಲಾಂಡ್ರಿಯಿಂದ ಹಿಡಿದು ಇಲ್ಲಿ ಹಲವು ವಸ್ತುಗಳು ಮತ್ತು ಸೇವೆಗಳು ಮನೆ ಬಾಗಿಲಿಗೆ ತಲುಪಲಿವೆ ಎಂದು ಹೇಳಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈದರಾಬಾದ್​ ಮೇಲೆ ಕಣ್ಣು ಹಾಕಿದ ಬಾಲಿವುಡ್, ಹಾಲಿವುಡ್: ಕಾರಣ?

ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಈಗ ಅದು ಬದಲಾಗಿದೆ. ಭಾರತದ ಇತರೆ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್ ಅನ್ನು ಮೀರಿ ಬೆಳೆದಿವೆ ಮತ್ತು ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿವೆ. ತೆಲುಗು ಚಿತ್ರರಂಗವಂತೂ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ ಎನಿಸಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ. ಯಾವ ಮಟ್ಟಿಗೆಂದರೆ ಇದೀಗ ಬಾಲಿವುಡ್​​ನವರು ಸಹ ಹೈದರಾಬಾದ್​​ ಕಡೆ ಮುಖ ಮಾಡಿದ್ದಾರೆ. ಹಾಲಿವುಡ್ ಸಹ ಅದೇ ದಾರಿ ಹಿಡಿದಿವೆ.

‘ಬಾಹುಬಲಿ’, ‘ಪುಷ್ಪ’, ‘RRR’, ‘ಪುಷ್ಪ 2’ ಮತ್ತು ಕಲ್ಕಿಯಂತಹ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಹ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ತೆಲುಗು ಚಿತ್ರರಂಗಕ್ಕೆ ತಮ್ಮ ರಾಜ್ಯಗಳಲ್ಲಿ ವಿಶೇಷವಾಗಿ ಹೈದರಾಬಾದ್ ನಲ್ಲಿ ಲಭ್ಯವಿರುವ ಸಂಪನ್ಮೂಲದ ಸದುಪಯೋಗ ಪಡೆದುಕೊಂಡು ಇಷ್ಟು ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ತೆಲುಗು ಚಿತ್ರರಂಗದ ಸೃಜನಶೀಲ ಕೇಂದ್ರವಾಗಿ ಹೈದರಾಬಾದ್ ಕಾರ್ಯನಿರ್ವಹಿಸುತ್ತಿದೆ.

ಈಗ ತೆಲುಗು ಚಿತ್ರರಂಗದ ಕ್ರಾಂತಿ ಇಡೀ ಭಾರತವನ್ನು ಆವರಿಸಿಕೊಂಡಿದ್ದು, ಮನೋರಂಜನಾ ಕ್ಷೇತ್ರದ ಎಲ್ಲಾ ಪ್ರಮುಖ ವಿಭಾಗಗಳು ತೆಲುಗು ರಾಜ್ಯಗಳತ್ತ ಗಮನ ಹರಿಸುತ್ತಿವೆ. ಹೈದರಾಬಾದ್​​ನ ಸಿಎಂ ರೇವಂತ್ ರೆಡ್ಡಿ ಸಹ ಸಿನಿಮಾಕ್ಕೆ ಭರಪೂರ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಹೈದರಾಬಾದ್ನಲ್ಲಿ ವಿಶ್ವದರ್ಜೆಯ ಸಿನಿಮಾ ತಂತ್ರಜ್ಞಾನ ಸಿಗುವಂತಾಗಬೇಕು, ಹೈದರಾಬಾದ್ ಅನ್ನು ಟೆಕ್ ಹಬ್ ಜೊತೆಗೆ ಸಿನಿಮಾ ಹಬ್ ಆಗಿ ಮಾಡುವ ಕುರಿತು ಇತ್ತೀಚೆಗಿನ ಕೆಲ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:ಗದ್ದರ್ ಪ್ರಶಸ್ತಿ: ರಶ್ಮಿಕಾ ಬೌನ್ಸರ್ ಕಿರಿಕ್, ರಾಜಮೌಳಿ ತಂದೆಗೆ ಅವಮಾನ

ಇದರ ಭಾಗವಾಗಿ, ಸಂಜಯ್ ದತ್ ಮತ್ತು ಅಜಯ್ ದೇವಗನ್ ಅವರಂತಹ ಬಾಲಿವುಡ್ ತಾರೆಯರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಆಗಿದ್ದ ಅಜಯ್ ದೇವಗನ್, ತಮ್ಮ ಒಡೆತನದ ಸಿನಿಮಾ ವಿಎಫ್​​ಎಕ್ಸ್ ಸಂಸ್ಥೆಯನ್ನು ಹೈದರಾಬಾದ್​​ನಲ್ಲಿ ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದ್ದರು. ಸಂಜಯ್ ದತ್ ಸಹ ಸಿನಿಮಾ ಸಂಬಂಧ ಉದ್ಯಮವನ್ನು ಹೈದರಾಬಾದ್​​ನಲ್ಲಿ ಪ್ರಾರಂಭಿಸಲಿದ್ದು, ಇದಕ್ಕಾಗಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಸಲ್ಮಾನ್ ಖಾನ್ ಸಹ ಮಾಲೀಕತ್ವ ಹೊಂದಿರುವ ನಿರ್ಮಾಣ ಸಂಸ್ಥೆಯೊಂದು ಬೃಹತ್ ಫಿಲಂ ಸಿಟಿ ಮತ್ತು ಅಪಾರ್ಟ್​​ಮೆಂಟ್ ಅನ್ನು ಹೈದರಾಬಾದ್​​ನಲ್ಲಿ ನಿರ್ಮಿಸಲು ಮುಂದಾಗಿದೆ.

ಇನ್ನು ಹಾಲಿವುಡ್ ಸಹ ಹೈದರಾಬಾದ್​​ ಮೇಲೆ ಕಣ್ಣಿಟ್ಟಿದೆ. ಕೆಲ ವಾರಗಳ ಹಿಂದಷ್ಟೆ ನೆಟ್​​ಫ್ಲಿಕ್ಸ್​ ತನ್ನ ಕಚೇರಿಯನ್ನು ಹೈದರಾಬಾದ್​​ನಲ್ಲಿ ತೆರಿದೆ, ಇದು ಕೇವಲ ಕಚೇರಿ ಮಾತ್ರವೇ ಆಗಿರದೆ ಸ್ಟುಡಿಯೋ ಸಹ ಆಗಿದ್ದು, ನೆಟ್​​ಫ್ಲಿಕ್ಸ್ ಈ ರೀತಿಯ ಕೇವಲ ನಾಲ್ಕು ಸ್ಟುಡಿಯೋಗಳನ್ನು ಮಾತ್ರವೇ ಹೊಂದಿದ್ದು ಅದರಲ್ಲಿ ಒಂದು ಹೈದರಾಬಾದ್​​ನಲ್ಲಿದೆ. ಒಟ್ಟಾರೆಯಾಗಿ, ಬಾಲಿವುಡ್ ಮತ್ತು ಹಾಲಿವುಡ್ ಹೈದರಾಬಾದ್​​ನಲ್ಲಿ ಸಿನಿಮಾ ಉದ್ಯಮದ ಅವಕಾಶಗಳನ್ನು ಹುಡುಕಿ ಹೂಡಿಕೆ ಮಾಡುತ್ತಿದೆ. ಇದು ತೆಲುಗು ಚಿತ್ರರಂಗಕ್ಕೆ ಮತ್ತಷ್ಟು ಬೆಂಬಲ ನೀಡುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ದಾವಣಗೆರೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಗುಡುಗು!

ದಾವಣಗೆರೆ, ಮಾರ್ಚ್ 25: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿರುವ ನಡುವೆಯೇ ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಂ ಹಾಗೂ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಸಾದಿಕ್ ಪೈಲ್ವಾನ್, ‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಶಕ್ತಿ ಪ್ರದರ್ಶನವಾಗಬೇಕು. ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರು ಮತ್ತು ಅಹಿಂದ ಸಮುದಾಯವನ್ನು ಕಡೆಗಣಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಕಣಕ್ಕಿಳಿದಿದ್ದೇನೆ’ ಎಂದು ಹೇಳಿದರು. ಜನರು ಬದಲಾವಣೆ ಬಯಸುತ್ತಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಯಾವ ಒತ್ತಡಕ್ಕೂ ತಲೆಬಾಗುವುದಿಲ್ಲ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ ಒಂದು ಕೋಟಿ ಗಳಿಸಿದ ಪವನ್ ಕಲ್ಯಾಣ್ ಸಿನಿಮಾ; ‘ಧುರಂಧರ್ 2’ ಎದುರು ಮಂಕಾದ ಉಸ್ತಾದ್

‘ಧುರಂಧರ್ 2’ ಸಿನಿಮಾ (Dhurandhar 2 Movie) ಅಬ್ಬರಕ್ಕೆ ಎಲ್ಲರೂ ನಡುಗಿ ಹೋಗಿದ್ದಾರೆ. ಇಡೀ ಬಾಕ್ಸ್ ಆಫೀಸ್​ ಶೇಕ್ ಆಗುತ್ತಿದೆ. ಈ ಚಿತ್ರದ ನಾಗಾಲೋಟಕ್ಕೆ ಎಲ್ಲಾ ಸಿನಿಮಾಗಳು ಮಂಕಾಗುತ್ತಿವೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವಂತೂ ಮಕಾಡೆ ಮಲಗಿದೆ. ಈ ಚಿತ್ರ ಮಂಗಳವಾರ ಗಳಿಕೆ ಮಾಡಿದ್ದು ಕೇಲವ ಒಂದು ಕೋಟಿ ರೂಪಾಯಿ. ಆದರೆ, ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆದ ‘ಧುರಂಧರ್ 2’ಸಿನಿಮಾ, ಪವನ್ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ.

‘ಧುರಂಧರ್ 2’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನೂ ಮೀರಿ ‘ಧುರಂಧರ್ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗಳಿಕೆ ಮಂಗಳವಾರ 56 ಕೋಟಿ ರೂಪಾಯಿ ಇದೆ. ತೆಲುಗು ಭಾಷೆಯಲ್ಲೇ ಚಿತ್ರ ಮೂರು ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಧುರಂಧರ್ 2’ ಚಿತ್ರವು ಅನಾಯಾಸವಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವನ್ನು ಮಣಿಸಿದೆ. ಪವನ್ ಚಿತ್ರ ಮಂಗಳವಾರ ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು ವರದಿ ಆಗಿದೆ.

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಾದ ಅನಿವಾರ್ಯತೆ ಕಾರಣದಿಂದ ಆದಷ್ಟು ಪ್ರಯತ್ನಿಸಿ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾಗಳು ರಿಲೀಸ್ ಆಗಿ ಸೋತವು. ಈ ಸಾಲಿಗೆ ‘ಉಸ್ತಾದ್ ಭಗತ್ ಸಿಂಗ್’ ಕೂಡ ಸೇರ್ಪಡೆ ಆಗುತ್ತಿದೆ.

ಪವನ್ ಕಲ್ಯಾಣ್​ಗೆ ಟಾಲಿವುಡ್​​​ನಲ್ಲಿ ಬಹುಬೇಡಿಕೆ ಇದೆ. ಅವರು ಅನೇಕ ಚಿತ್ರಗಳನ್ನು ಮಣಿಸಿದ್ದಾರೆ. ಆದರೆ, ಈಗ ಅವರು ‘ ಧುರಂಧರ್ 2’ ಚಿತ್ರದ ಎದುರು ಮಂಡಿ ಊರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪವನ್ ಚಿತ್ರಕ್ಕೆ ಈಗಾಗಲೇ ಸಾಕಷ್ಟು ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಅವರ ಸಿನಿಮಾ ಮತ್ತೆ ಮೇಲಕ್ಕೆ ಏಳೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಆರು ದಿನಕ್ಕೆ 900 ಕೋಟಿ ಗಳಿಸಿದ ‘ಧುರಂಧರ್ 2’; ಆದರೂ, ಒಂದು ವಿಷಯದಲ್ಲಿ ಚಿತ್ರಕ್ಕೆ ಸೋಲು

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್ ಮೊದಲಾದದವರು ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Video: ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಗೆ ಹೆಗಲು ನೀಡಿದ ಪುಟಾಣಿ

ಪುಟಾಣಿಗಳ (little kids) ತೊದಲು ನುಡಿ, ತುಂಟಾಟ, ಅಪ್ಪ ಅಮ್ಮನ ಮುದ್ದಿಸುವ ರೀತಿ ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿ ಮಕ್ಕಳು ತಾವು ಮಾಡುವ ಕೆಲಸದಿಂದಲೇ ದೊಡ್ಡವರಂತೆ ಕಾಣುವುದಿದೆ.. ಇದೀಗ ಈ ಪುಟಾಣಿಯೂ ದೊಡ್ಡವರಂತೆ ನಡೆದುಕೊಂಡಿದೆ. ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಯನ್ನು (mother) ಪುಟಾಣಿಯೊಂದು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಪ್ರಯತ್ನಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ತಾಯಿ ಮಗನ ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ.

Leenesh Madhav ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಗೆ ಪುಟಾಣಿ ಬೆಂಬಲ ನೀಡುತ್ತಿರುವುದನ್ನು ಕಾಣಬಹುದು. ಕಾಲಿಗೆ ಗಾಯಗೊಂಡಿದ್ದು, ಬ್ಯಾಂಡೇಜ್ ಹಾಕಿಕೊಂಡು ನಡೆಯಲು ಕಷ್ಟ ಪಡುತ್ತಿರುವ ಮಹಿಳೆಯನ್ನು ನೀವು ಕಾಣಬಹುದು. ಅಲ್ಲೇ ಇದ್ದ ಪುಟಾಣಿಯೂ ತನ್ನ ತಾಯಿಯನ್ನು ತನ್ನ ಭುಜದ ಮೇಲೆ ಹೊತ್ತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ದೃಶ್ಯದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತಾಯಿ ಮಗನ ಬಾಂಧವ್ಯ ಎಂದರೆ, ಮತ್ತೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪುಟಾಣಿಯ ಸಹಾಯ ಮಾಡುವ ಗುಣ ನೋಡಿ ಖುಷಿಯಾಯ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

 

Source link

MNREGA: ಕರ್ನಾಟಕ ನರೇಗಾದಲ್ಲಿ ಭಾರಿ ಅಕ್ರಮ, ಸಿಎಜಿ ವರದಿಯಲ್ಲಿ ಬಯಲಾಯ್ತು ಸ್ಫೋಟಕ ವಿಚಾರ

ಬೆಂಗಳೂರು, ಮಾರ್ಚ್​ 25: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಮಹಾಲೇಖಾಪರಿಶೋಧಕರ (CAG) ವರದಿಯು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅನುಷ್ಠಾನದಲ್ಲಿ ಭಾರಿ ಅಕ್ರಮಗಳು ನಡೆದಿರುವುದನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಈಗಾಗಲೇ ಪೂರ್ಣಗೊಂಡ ಮನೆ ಕಾಮಗಾರಿಗಳಿಗೆ ಮತ್ತೆ ಹಣ ಪಾವತಿ ಮಾಡಿರುವುದು, ಅರ್ಹತೆಯಿಲ್ಲದವರಿಗೆ ಹಣ ನೀಡಿರುವುದು ಹಾಗೂ ಯಾವುದೇ ಕೆಲಸ ಮಾಡದೇ ಕಾರ್ಮಿಕರಿಗೆ ವೇತನ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಕೆಲಸವೇ ಇಲ್ಲದೆ ವೇತನ!

ಕೆಲವು ಸ್ಥಳಗಳಲ್ಲಿ ನಿರ್ಮಾಣ ಕಾರ್ಯವೇ ನಡೆಯದಿದ್ದರೂ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಅಲ್ಲದೆ, ನಿಯಮಿತ ಮಿತಿಗಿಂತ ಹೆಚ್ಚು ಹಣ ನೀಡಿರುವುದೂ ವರದಿಯಲ್ಲಿ ಉಲ್ಲೇಖವಾಗಿದೆ. ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಮಕ್ಕಳ ಆರೈಕೆ ಸೌಲಭ್ಯಗಳ ಕೊರತೆಯಿಂದ ಮಹಿಳೆಯರು ಹಾಗೂ ವೃದ್ಧರು ಕೆಲಸದಲ್ಲಿ ಪಾಲ್ಗೊಳ್ಳಲು ಹಿಂಜರಿದಿರುವುದೂ ವರದಿಯಿಂದ ತಿಳಿದುಬಂದಿದೆ.

ಅರ್ಧದಲ್ಲೇ ಸ್ಥಗಿತಗೊಂಡ ಯೋಜನೆಗಳು

ನರೇಗಾ ಅಡಿ ಅಂಗೀಕೃತ ಯೋಜನೆಗಳಲ್ಲಿ ಬಹಳಷ್ಟು ಪ್ರಾರಂಭವಾಗದೇ ಉಳಿದಿದ್ದರೆ, ಕೆಲವು ಯೋಜನೆಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಪೂರ್ಣಗೊಳ್ಳದೇ ಉಳಿದಿವೆ ಎಂದು ವರದಿ ತಿಳಿಸಿದೆ.

ಹಾಜರಾತಿಯಲ್ಲಿ ಭಾರಿ ಗೋಲ್​ಮಾಲ್

50 ಪ್ರಕರಣಗಳಲ್ಲಿ ಕಾರ್ಮಿಕರ ಹಾಜರಾತಿ ಗುರುತು ಹಾಕದೇ, ಸಹಿ ಅಥವಾ ಬೆರಳಚ್ಚು ಪಡೆಯದೇ ಇದ್ದರೂ, ಸುಮಾರು 5.51 ಲಕ್ಷ ರೂ. ವೇತನ ಪಾವತಿಸಿರುವುದು ಪತ್ತೆಯಾಗಿದೆ.

ಕೆಲಸ ಮಾಡಿದವರಿಗೆ ವೇತನವಿಲ್ಲ!

ಇನ್ನೊಂದೆಡೆ, 13 ಗ್ರಾಮ ಪಂಚಾಯಿತಿಗಳಲ್ಲಿ 17 ಕೆಲಸಗಳಲ್ಲಿ ತೊಡಗಿದ್ದ 497 ಕಾರ್ಮಿಕರಿಗೆ, ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ 10.98 ಲಕ್ಷ ರೂ. ವೇತನ ಪಾವತಿಸದೇ ಇರುವುದಾಗಿ ಸಿಎಜಿ ವರದಿ ತಿಳಿಸಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳು ರಚನೆಗೊಳ್ಳದ ಕಾರಣ ಅಸಂಬದ್ಧ ಅಂದಾಜುಗಳು, ಕಾಮಗಾರಿಗಳ ಅಸಮರ್ಪಕ ಅನುಷ್ಠಾನ ಮತ್ತು ಅನಿಯಮಿತ ವೆಚ್ಚಗಳು ಆಗಿರುವುದು ಗಮನಕ್ಕೆ ಬಂದಿದೆ.

ಕೆಲವು ಕಾಮಗಾರಿಗಳಲ್ಲಿ ಅಂದಾಜು ಪರಿಷ್ಕರಣೆ ಮಾಡದೇ ಹೆಚ್ಚುವರಿ ವೆಚ್ಚ ಮಾಡಲಾಗಿದೆ. ಜೊತೆಗೆ, ವೈಯಕ್ತಿಕ ಕಾಮಗಾರಿಗಳಲ್ಲಿ ವಸ್ತು ವೆಚ್ಚವನ್ನು ಲಾಭಾರ್ಥಿಗಳಿಗೆ ನೀಡಬೇಕಾದಲ್ಲಿ ನೇರವಾಗಿ ಮಾರಾಟಗಾರರಿಗೆ ಪಾವತಿಸಿರುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಇದನ್ನೂ ಓದಿ: ನರೇಗಾ ಹೆಸರು ವಿವಾದ, ಸರ್ಕಾರ-ಪ್ರತಿಪಕ್ಷಗಳ ನಡುವೆ ಜಟಾಪಟಿ

ಒಟ್ಟಿನಲ್ಲಿ, ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಬಡಜನರ ಆರ್ಥಿಕ ಭದ್ರತೆ ಗುರಿಯಾಗಿಟ್ಟುಕೊಂಡ ಎಂನರೇಗಾ ಯೋಜನೆಯಲ್ಲಿ ಇಂತಹ ಅಕ್ರಮಗಳು ನಡೆದಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link