ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 2026 ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದಿರಬಹುದು, ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ 2026 ರ ಐಪಿಎಲ್ನಲ್ಲೂ (IPL 2026) ಅದೇ ಆಟವನ್ನು ಮುಂದುವರೆಸಲು ಅಭಿಷೇಕ್ ಶರ್ಮಾ ಸಜ್ಜಾಗಿದ್ದಾರೆ. ಲೀಗ್ನ ಮೊದಲ ಪಂದ್ಯದಲ್ಲೇ ಆರ್ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಆದರೆ ಅದಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ 94 ರನ್ಗಳ ಅಬ್ಬರದ ಇನ್ನಿಂಗ್ಸ್ ಆಡಿದರು.
ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 21 ರ ಶನಿವಾರದಂದು ತಮ್ಮ ತವರು ಮೈದಾನವಾದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ಆಡಿತು. ತಂಡದ ಸದಸ್ಯರ ನಡುವೆ ನಡೆದ ಈ ಪಂದ್ಯದಲ್ಲಿ ಅಭಿಷೇಕ್ , ಇಶಾನ್, ಹೆನ್ರಿಕ್ ಕ್ಲಾಸೆನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಎಲ್ಲರೂ ಒಂದೇ ತಂಡದಲ್ಲಿದ್ದರು.
ಅಭಿಷೇಕ್ ಸ್ಫೋಟಕ ಇನ್ನಿಂಗ್ಸ್
ಎಸ್ಆರ್ಹೆಚ್ ಎ ಮತ್ತು ಎಸ್ಆರ್ಹೆಚ್ ಬಿ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ಎ ತಂಡದ ಪರ ಇಶಾನ್ ಕಿಶನ್ ಮತ್ತು ಅಭಿಷೇಕ್ ಜೋಡಿ ಇನ್ನಿಂಗ್ಸ್ ಆರಂಭಿಸಿತು. ಆದಾಗ್ಯೂ ಇಶಾನ್ ಕಿಶನ್ 14 ಎಸೆತಗಳಲ್ಲಿ ಕೇವಲ 18 ರನ್‌ಗಳಿಸಿ ಔಟಾದರು. ಇತ್ತ ಅಬ್ಬರದ ಆರಂಭ ಪಡೆದ ಅಭಿಷೇಕ್ ಶರ್ಮಾ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಇದರ ಪರಿಣಾಮವಾಗಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕದಂಚಿನಲ್ಲಿ ಎಡವಿದ ಅಭಿಷೇಕ್ ಕೇವಲ 42 ಎಸೆತಗಳಲ್ಲಿ 94 ರನ್ ಗಳಿಸಿದರು.
ಅಭಿಷೇಕ್ ಶರ್ಮಾ ಜೊತೆಗೆ ಹೆನ್ರಿಕ್ ಕ್ಲಾಸೆನ್ ಕೂಡ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಆಟದಿಂದಾಗಿ ಈ ಎಸ್ಆರ್ಹೆಚ್ ಎ ತಂಡವು ಕೇವಲ 13 ಓವರ್‌ಗಳಲ್ಲಿ 160 ಕ್ಕಿಂತ ಹೆಚ್ಚು ಸ್ಕೋರ್ ಕಲೆಹಾಕಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಎಸ್ಆರ್ಹೆಚ್ ಎ ತಂಡ 9 ವಿಕೆಟ್ಗಳ ನಷ್ಟಕ್ಕೆ 253 ರನ್ ಕಲೆಹಾಕಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 21: ಕೇರಳ ವಿಧಾನಸಭಾ ಚುನಾವಣೆಗೆ (Kerala Assembly Elections) ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಮಾರ್ಚ್ 18ರಂದು ಸಭೆ ಸೇರಿ ಪಟ್ಟಿಗಳನ್ನು ಬಿಡುಗಡೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಭೆಯಲ್ಲಿ ಹಾಜರಿದ್ದರು.
ಮಾರ್ಚ್ 16ರಂದು ಬಿಜೆಪಿ ಕೇರಳದ ಮೊದಲ 47 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ನಂತರ ಮಾರ್ಚ್ 19ರಂದು 39 ಹೆಸರುಗಳನ್ನು ಒಳಗೊಂಡ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಇದುವರೆಗೆ ಬಿಜೆಪಿ 97 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಇಂದು ಘೋಷಿಸಲಾದ ಬಿಜೆಪಿಯ ಪಟ್ಟಿಯ ಪ್ರಕಾರ, ಬಿಜೆಪಿ ತಿರುವನಂತಪುರಂನಿಂದ ಜಿಲ್ಲಾಧ್ಯಕ್ಷ ಕರಮಣ ಜಯನ್ ಅವರನ್ನು ಕಣಕ್ಕಿಳಿಸಿದೆ. ಅವರು ಎಲ್‌ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟ ಸುಧೀರ್ ಕರಮಣ ಮತ್ತು ಯುಡಿಎಫ್ ನಾಯಕ ಸಿ.ಪಿ ಜಾನ್ ಅವರನ್ನು ಎದುರಿಸಲಿದ್ದಾರೆ. ಎಲ್‌ಡಿಎಫ್ ಮಿತ್ರ ಪಕ್ಷವಾದ ಜನಾಧಿಪತ್ಯ ಕೇರಳ ಕಾಂಗ್ರೆಸ್ (ಜೆಕೆಸಿ)ನ ಹಾಲಿ ಶಾಸಕ ಆಂಥೋನಿ ರಾಜು ಅವರನ್ನು ಸಾಕ್ಷ್ಯ ತಿರುಚುವ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಅನರ್ಹಗೊಳಿಸಲಾಯಿತು.
ಉದ್ಯಮಿ ಎಸ್ ರಾಜಶೇಖರನ್ ನಾಯರ್ ಅವರನ್ನು ನೆಯ್ಯಟ್ಟಿಂಕರದಿಂದ ಕಣಕ್ಕಿಳಿಸಲಾಗಿದೆ. ಇದಕ್ಕೂ ಮೊದಲು, 2021ರಲ್ಲಿ ಅವರು ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ನಟ ವಿವೇಕ್ ಗೋಪನ್ ಅವರನ್ನು ಪುತ್ತುಪ್ಪಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಕೇರಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 9ರಂದು ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಕೇರಳದ ಎಲ್ಲಾ 140 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು ಮೂಲದ ನಟಿ ಸ್ನೇಹಾ ಉಲ್ಲಾಳ್ (Sneha Ullal), ಬಾಲಿವುಡ್ನ (Bollywood) ಜನಪ್ರಿಯ ನಟಿಯರಲ್ಲಿ ಒಬ್ಬರು. ಒಮನ್ನಲ್ಲಿ ಹುಟ್ಟಿದ್ದರಾದರೂ ಅವರದ್ದು ಮಂಗಳೂರು ಮೂಲ. ಸಲ್ಮಾನ್ ಖಾನ್ ನಟನೆಯ ‘ಲಕ್ಕಿ’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅದೂ ಅವರು ಚಿತ್ರರಂಗಕ್ಕೆ ಬರಲು ಐಶ್ವರ್ಯಾ ರೈ ಅವರೊಟ್ಟಿಗಿನ ಹೋಲಿಕೆಯೇ ಕಾರಣ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟ ಮತ್ತು ಐಶ್ವರ್ಯ ರೈ ಅವರೊಂದಿಗಿನ ಭೇಟಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಐಶ್ವರ್ಯಾ ರೈ ಅವರ ಬಳಿ ಕ್ಷಮೆ ಕೇಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.
2005ರಲ್ಲಿ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸ್ನೇಹಾ, ಅಂದು ವಿಶ್ವ ಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣುತ್ತಿದ್ದರು ಎಂಬ ಕಾರಣಕ್ಕೆ ಭಾರೀ ಸುದ್ದಿಯಾಗಿದ್ದರು. ಮಾಧ್ಯಮಗಳು ತನ್ನನ್ನು ಐಶ್ವರ್ಯ ರೈ ಅವರ ತದ್ರೂಪು ಎಂದು ಕರೆಯುತ್ತಿದ್ದ ಕಾಲದಲ್ಲಿ ಸ್ನೇಹಾ ಅವರು ಐಶ್ವರ್ಯರನ್ನು ಭೇಟಿಯಾಗಿದ್ದರಂತೆ. ಸಂದರ್ಶನದಲ್ಲಿ ಆ ಸಂದರ್ಭವನ್ನು ನೆನಪಿಸಿಕೊಂಡಿರುವ ಸ್ನೇಹಾ ಉಲ್ಲಾಳ್ , ‘ನಾನು ಐಶ್ವರ್ಯರನ್ನು ಭೇಟಿಯಾದಾಗ ಅವರಿಗೆ ಕ್ಷಮೆ ಕೇಳಿದೆ. ಮಾಧ್ಯಮಗಳಲ್ಲಿ ಆಗುತ್ತಿದ್ದ ಹೋಲಿಕೆಗಳಿಂದಾಗಿ ಅವರು ನನ್ನ ಮೇಲೆ ಸಿಟ್ಟಾಗಿರಬಹುದು ಎಂಬ ಭಯ ನನಗಿತ್ತು. ಪ್ಲೀಸ್ ನನ್ನನ್ನು ದ್ವೇಷಿಸಬೇಡಿ ಎಂದು ಅವರಲ್ಲಿ ವಿನಂತಿಸಿದೆ’ ಎಂದು ಹೇಳಿದ್ದಾರೆ. ಆದರೆ ಐಶ್ವರ್ಯ ರೈ ಅವರು ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಂಡರು, ‘ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ’ ಎಂದು ಐಶ್ವರ್ಯಾ ಹೇಳಿದರು ಎಂದು ಸ್ನೇಹಾ ನೆನಪು ಮಾಡಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿದ ಸ್ನೇಹಾ, ಚಿತ್ರೀಕರಣದ ಸಮಯದಲ್ಲಿ ಅವರು ತಮಗೆ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ‘ಸಲ್ಮಾನ್, ನನ್ನ ಬಗ್ಗೆ ಎಂದಿಗೂ ಅಸಹನೆ ತೋರಲಿಲ್ಲ. ನಾನು ಆಗ ತಾನೇ ಕಾಲೇಜು ಮುಗಿಸಿ ಬಂದ ಹೊಸಬಳಾಗಿದ್ದೆ. ಸಲ್ಮಾನ್ ಅತ್ಯಂತ ತಾಳ್ಮೆಯಿಂದ ನನಗೆ ಎಲ್ಲವನ್ನೂ ಹೇಳಿಕೊಟ್ಟರು. ನನ್ನ ವಿರುದ್ಧ ಸಿಟ್ಟು ಪ್ರದರ್ಶಿಸಲಿಲ್ಲ, ಅಹಂ ತೋರಿಸಲಿಲ್ಲ’ ಎಂದು ಸ್ನೇಹಾ ತಿಳಿಸಿದ್ದಾರೆ.
ತಮಗೆ ನಟಿಯಾಗುವುದು ಇಷ್ಟವೇ ಇರಲಿಲ್ಲ ಎಂದಿರುವ ಸ್ನೇಹಾ, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಗೆಳೆಯರು ಸ್ನೇಹಾರನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ನೋಡಿದರಂತೆ. ಅದೇ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಮುರಿದುಬಿದ್ದಿತ್ತು. ಸ್ನೇಹಾ ನೋಡಲು ಐಶ್ವರ್ಯಾ ರೈ ರೀತಿ ಇದ್ದ ಕಾರಣದಿಂದಾಗಿಯೇ ಅವರನ್ನು ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಆ ಬಗ್ಗೆತೂ ಪ್ರತಿಕ್ರಿಯಿಸಿದ ಸ್ನೇಹಾ, ‘ಅದೊಂದು ಪ್ರಚಾರ ತಂತ್ರವಾಗಿತ್ತು, ನಾನು ತುಂಬಾ ಚಿಕ್ಕವಳಾಗಿದ್ದರಿಂದ ಆ ಹೋಲಿಕೆಗಳು ನನಗೆ ಎಂದೂ ಬೇಸರ ತರಲಿಲ್ಲ’ ಎಂದಿದ್ದಾರೆ.
ಸಲ್ಮಾನ್ ಖಾನ್ ಜೊತೆಗೆ ಲಾಂಚ್ ಆದರೂ ಸಹ ಸ್ನೇಹಾ ಉಲ್ಲಾಲ್ ಹೆಚ್ಚು ಯಶಸ್ವಿ ಆಗಿದ್ದು ದಕ್ಷಿಣದ ಸಿನಿಮಾಗಳಲ್ಲಿ ಅದರಲ್ಲೂ ತೆಲುಗಿನಲ್ಲಿ ‘ಉಲ್ಲಾಸಂಗಾ, ಉತ್ಸಾಹಂಗ’ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ದೇವಿ’ ಸಿನಿಮಾನಲ್ಲಿಯೂ ನಟಿಸಿದ್ದಾರೆ.
ಬೆಂಗಳೂರು, ಮಾರ್ಚ್ 21: ಗಲ್ಫ್ ರಾಷ್ಟ್ರಗಳ ಯುದ್ಧದಿಂದಾಗಿ ಕಚ್ಛಾ ತೈಲ ಪೂರೈಕೆಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ. ಪ್ಲಾಸ್ಟಿಕ್, ಫೈಬರ್, ಐರನ್ ಮತ್ತು ಇತರೆ ಲೋಹಗಳ ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ಇದ್ರಿಂದ ಆಟೋಮೊಬೈಲ್ ಇಂಡಸ್ಟ್ರಿಗೂ ಬಿಸಿ ತಟ್ಟಿದೆ. ಮುಂದಿನ ವಾರದ ಬಳಿಕ ಕಾರು ಹಾಗೂ ಬೈಕ್ಗಳ ದರ ಶೇಕಡ 10ರಿಂದ 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ಕಾರುಗಳ ಮೇಲೆ 40ರಿಂದ 50ಸಾವಿರದಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಮಾರುತಿ ಸುಜಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಮರ್ಸಿಡಿಸ್ ಬೆಂಜ್ನಂತಹ ಕಂಪನಿಗಳು ಕೂಡ ಬೆಲೆ ಹೆಚ್ಚಿಸಲು ಪ್ಲ್ಯಾನ್ ಮಾಡಿವೆ.
ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾದ (Team India) ಮುಂದಿನ ಗುರಿ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (2027 World Cup) ಗೆಲ್ಲುವುದಾಗಿದಾಗಿದೆ. ಇದಕ್ಕೆ ಪೂರಕವಾಗಿ ಟಿ20 ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಹೆಡ್ ಕೋಚ್ ಗೌತಮ್ ಗಂಭೀರ್, ಐಪಿಎಲ್ ಮುಗಿದ ಬಳಿಕ ಏಕದಿನ ವಿಶ್ವಕಪ್‌ಗೆ ಸಿದ್ಧತೆಗಳು ಪ್ರಾರಂಭವಾಗಲಿವೆ ಎಂದಿದ್ದರು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ, ಐಪಿಎಲ್ಗೂ ಮುನ್ನವೇ ತನ್ನ ತಯಾರಿಯನ್ನು ಶುರು ಮಾಡಿದೆ. ಅದರಂತೆ ಆಯ್ಕೆ ಸಮಿತಿಯು 2027ರ ಏಕದಿನ ವಿಶ್ವಕಪ್ಗಾಗಿ 20 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಹಾಗಿದ್ದರೆ ಆ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು? ಎಂಬುದನ್ನು ನೋಡುವುದಾದರೆ..
ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್‌ನಿಂದಾಗಿ ಭಾರತ ತಂಡವು ಎರಡು ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರಲಿದೆ. ಅದರ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವ ಕಾರಣ, ಈ ಮಾದರಿಯ ಸರಣಿಗೆ ಬಿಸಿಸಿಐ ಹೆಚ್ಚು ಒತ್ತು ನೀಡಲಿದೆ. ಆದರೆ, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಇರಾದೆಯಲ್ಲಿದ್ದ ಆಟಗಾರರಿಗೆ ನಿರಾಸೆ ಎದುರಾಗಿದೆ. ಏಕೆಂದರೆ ಆಯ್ಕೆದಾರರು ಈಗಾಗಲೇ ಏಕದಿನ ವಿಶ್ವಕಪ್‌ಗೆ 20 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ 20 ಆಟಗಾರರಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ.
ಈ ಆಟಗಾರರಿಗೆ ತಂಡದಲ್ಲಿ ಸ್ಥಾನ?
ಈಗ ಪ್ರಶ್ನೆಯೆಂದರೆ ಆಯ್ಕೆ ಮಂಡಳಿ ಸಿದ್ಧಪಡಿಸಿರುವ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು ಎಂಬುದು. ಸಧ್ಯಕ್ಕೆ ಆ 20 ಆಟಗಾರರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದ ಏಕದಿನ ಸರಣಿ ಮತ್ತು ಈ ಸ್ವರೂಪದಲ್ಲಿರುವ ಸಾಮಾನ್ಯ ಆಟಗಾರರನ್ನು ಪರಿಗಣಿಸಿದರೆ, ಊಹಿಸುವುದು ಕಷ್ಟವೇನಲ್ಲ. ನಾಯಕನಾಗಿರುವ ಶುಭ್ಮನ್ ಗಿಲ್ ಹಾಗೂ ಉಪನಾಯಕನಾಗಿರುವ ಶ್ರೇಯಸ್ ಅಯ್ಯರ್ ತಂಡದಲ್ಲಿರುವುದು ಖಚಿತ. ಹಾಗೆಯೇ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಂಡದಲ್ಲಿ ಇರುತ್ತಾರೆ.
ಇವರಲ್ಲದೆ, ನಿಯಮಿತ ಏಕದಿನ ವಿಕೆಟ್ ಕೀಪರ್ ಕೆಎಲ್ ರಾಹುಲ್, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಖಚಿತವಾಗಿದೆ. ಇವರ ಜೊತೆಗೆ, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರರ್ಥ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ವೃತ್ತಿಜೀವನ ಮುಗಿದಿದೆ ಎನ್ನಬಹುದು.
ಸ್ಪಿನ್ ವಿಭಾಗದಲ್ಲಿ ಯಾರು?
ಸ್ಪಿನ್ ವಿಭಾಗದಲ್ಲಿ, ಕುಲ್ದೀಪ್ ಜೊತೆಗೆ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಂಡದಲ್ಲಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರವೀಂದ್ರ ಜಡೇಜಾ ಅವರ ಸೇರ್ಪಡೆಯ ಬಗ್ಗೆ ಪ್ರಶ್ನೆ ಉಳಿದಿದೆ. ಆದಾಗ್ಯೂ, ಅವರ ಅನುಭವವನ್ನು ಗಮನಿಸಿದರೆ, ಅವರು 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಖಚಿತ. ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಬ್ಯಾಕಪ್ ಆರಂಭಿಕ ಆಟಗಾರರೆಂದು ಪರಿಗಣಿಸಬಹುದು. ಆದಾಗ್ಯೂ, ಬ್ಯಾಕಪ್ ವಿಕೆಟ್ ಕೀಪರ್ಗಾಗಿ ಪೈಪೋಟಿ ತೀವ್ರವಾಗಿದ್ದು, ರಿಷಭ್ ಪಂತ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪಂತ್ ಮತ್ತು ಇಶಾನ್ 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಬೆಂಗಳೂರು, ಮಾರ್ಚ್ 21: ಭಾರತದ ಬಗ್ಗೆ ಅಮೆರಿಕದ ಸ್ವತಂತ್ರ ಸಂಸ್ಥೆಯಾದ USCIRF (ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್) ನೀಡಿದ ವರದಿಯನ್ನು ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಸೇರಿದಂತೆ ಒಟ್ಟು 275 ಜನರು ತೀವ್ರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತವಾಗಿದೆ ಎಂದು USCIRF ಹೇಳಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು USCIRF ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಹಾಗೇ, USCIRF ಭಾರತದ ಕೆಲವು ಕಾನೂನುಗಳ ಬಗ್ಗೆಯೂ ಪ್ರಶ್ನೆ ಎತ್ತಿತ್ತು. ಮತಾಂತರ ವಿರೋಧಿ ಕಾನೂನುಗಳು (Anti-conversion laws), ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act/ CAA) ಇವುಗಳು ಕೆಲ ಸಮುದಾಯಗಳಿಗೆ ಅನ್ಯಾಯ ಮಾಡಬಹುದು ಎಂದು ಈ ವರದಿ ಹೇಳಿತ್ತು. ಭಾರತದಲ್ಲಿ ಕೆಲವು ಕಡೆ ಹಿಂಸಾಚಾರ ಮತ್ತು ದ್ವೇಷ ಭಾಷಣದ ಘಟನೆಗಳು ಹೆಚ್ಚಾಗಿವೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಲಾಗಿತ್ತು.
ಇದೆಲ್ಲದರ ಜೊತೆಗೆ, ಭಾರತದ ಆರ್ಎಸ್ಎಸ್ (RSS), ರಾ (RAW)ನಂತಹ ಕೆಲವು ಭಾರತೀಯ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕೆಂಬ ಶಿಫಾರಸನ್ನೂ USCIRF ವರದಿ ಮಾಡಿತ್ತು. ಈ USCIRF ಅಮೆರಿಕದ ಒಂದು ಸಲಹಾ ಸಂಸ್ಥೆಯಾಗಿದ್ದು, ಅದರ ವರದಿಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ. USCIRF ಭಾರತದ ಬಗ್ಗೆ ತಪ್ಪುಚಿತ್ರಣ ನೀಡುತ್ತಿದೆ, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾರತ ಆರೋಪಿಸಿದೆ.
ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಭಾರತದ 275 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿ USCIRF ವರದಿಯನ್ನು ಖಂಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಮಿಲಿಟರಿ ಪರಿಣತರು ಸೇರಿದಂತೆ 275 ಭಾರತೀಯರ ಗುಂಪು ಇಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ನೀಡಿದ ಭಾರತದ ಕುರಿತ “ಆಫ್-ದಿ-ಮಾರ್ಕ್” ವರದಿಯನ್ನು ಟೀಕಿಸಿದೆ.
“ನಾವು ಕೆಳಗೆ ಸಹಿ ಮಾಡಿರುವವರು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಸಿದ್ಧಪಡಿಸಿದ ಅತ್ಯಂತ ಗೊಂದಲಮಯ ಮತ್ತು ಸಂಪೂರ್ಣವಾಗಿ ಆಫ್-ದಿ-ಮಾರ್ಕ್ ವರದಿಯನ್ನು ನಿಮ್ಮ ಗಮನಕ್ಕೆ ತರುತ್ತೇವೆ” ಎಂದು ಅವರು ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.
ಭಾರತದ ವಿದೇಶಿ ಗುಪ್ತಚರ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RA&AW) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೇಲೆ ನಿರ್ಬಂಧಗಳನ್ನು ಶಿಫಾರಸು ಮಾಡುವ USCIRF ವರದಿಗೆ ಈ ಗುಂಪು ಆಕ್ಷೇಪಿಸಿದೆ. ಈ ತಂಡದಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು NGT ಅಧ್ಯಕ್ಷ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ಕೇರಳದ ಮಾಜಿ DGP ಪಿ. ಚಂದ್ರಶೇಖರನ್ ಮತ್ತು ಮಾಜಿ ರಾಯಭಾರಿಗಳಾದ ಭಾಸ್ವತಿ ಮುಖರ್ಜಿ ಮತ್ತು ಶ್ಯಾಮಲಾ ಬಿ. ಕೌಸಿಕ್ ಕೂಡ ಸೇರಿದ್ದಾರೆ.
ತಮ್ಮ ಬಹಿರಂಗ ಪತ್ರದಲ್ಲಿ ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು 1951ರಲ್ಲಿ ಶೇ. 9.8 ರಷ್ಟಿತ್ತು. 2011ರಲ್ಲಿ ಶೇ. 14.2ಕ್ಕೆ ಏರಿತು. ಕ್ರಿಶ್ಚಿಯನ್ ಜನಸಂಖ್ಯೆಯು 1951ರಲ್ಲಿ ಶೇ. 2.3ರಷ್ಟಿತ್ತು. 2011ರಲ್ಲಿ ಶೇ. 2.3 ರಷ್ಟಿತ್ತು. 1951ರಲ್ಲಿ ಶೇ. 1.79ರಷ್ಟಿದ್ದ ಸಿಖ್ ಜನಸಂಖ್ಯೆಯು 2011ರಲ್ಲಿ ಶೇ 1.72ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.
“ಈ ಡೇಟಾವನ್ನು ಅಧಿಕೃತ ಜನಗಣತಿ ದತ್ತಾಂಶದಿಂದ ತೆಗೆದುಕೊಳ್ಳಲಾಗಿದೆ. ಇದು ಭಾರತದಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಸ್ವತಂತ್ರ ಸಾಂವಿಧಾನಿಕ ಆಡಳಿತದಲ್ಲಿ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜನಸಂಖ್ಯಾ ವಿಸ್ತರಣೆ ಅಥವಾ ಸ್ಥಿರತೆಯ ವಿಶಾಲ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
“USCIRFನ ಎಲ್ಲಾ 6 ಆಯುಕ್ತರನ್ನು US ಸರ್ಕಾರವು ನೇಮಿಸುತ್ತದೆ. US ಕಾಂಗ್ರೆಸ್ ಮೂಲಕ ಅಮೇರಿಕನ್ ತೆರಿಗೆದಾರರು ಅವರಿಗೆ ಹಣಕಾಸು ಒದಗಿಸುತ್ತಾರೆ. USCIRFನಲ್ಲಿ ಈ ವರದಿಗೆ ಕೊಡುಗೆ ನೀಡಿದ ಎಲ್ಲರ ಕಟ್ಟುನಿಟ್ಟಿನ ಹಿನ್ನೆಲೆಯನ್ನು ಪರಿಶೀಲನೆ ನಡೆಸುವಂತೆ ನಾವು US ಸರ್ಕಾರವನ್ನು ಒತ್ತಾಯಿಸುತ್ತೇವೆ. ಇದು USCIRF ನಿಂದ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಅಸಮರ್ಥನೀಯ ವರದಿಗಳನ್ನು ತಯಾರಿಸಲು ಬಳಸಲ್ಪಡುತ್ತಿರುವ US ತೆರಿಗೆದಾರರ ಕಣ್ಣು ತೆರೆಸುತ್ತದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಅಲ್ಲಿನ ಪ್ರಜೆಗಳ ಹಣವನ್ನು ಕೆಲವು ಭಾರತ ವಿರೋಧಿ ಹಿತಾಸಕ್ತಿಗಳು ಭಾರತದ ಜನರೊಂದಿಗೆ ಅವರ ಸದ್ಭಾವನೆಯನ್ನು ಹಾಳುಮಾಡಲು ಗುಪ್ತ ಕಾರ್ಯಸೂಚಿಯನ್ನು ಉತ್ತೇಜಿಸಲು ಬಳಸುತ್ತಿವೆ” ಎಂದು ಮಾಜಿ ಐಎಎಸ್ ಅಧಿಕಾರಿಗಳಾದ ಎಂ. ಮದನ್ ಗೋಪಾಲ್, ಒ.ಪಿ. ಪಾಠಕ್ ಮತ್ತು ಸಿ.ಎಸ್. ತಲ್ವಾರ್ ಮತ್ತು ಇತರರು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.
“ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಮಾಡಲಾದ ಆರೋಪ ಸಂಪೂರ್ಣ ಸುಳ್ಳು. ಹಲವಾರು ವರ್ಷಗಳಿಂದ USCIRF ಭಾರತದ ಕುರಿತು ವಿಕೃತ ಮತ್ತು ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಹೇಳಿದ್ದರು.
ಭಾರತದ ಬಗ್ಗೆ ಆಯ್ದ ಟೀಕೆಗಳನ್ನು ಮುಂದುವರಿಸುವ ಬದಲು, USCIRF ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಟಾರ್ಗೆಟ್ ಮಾಡುವುದು ಮತ್ತು ಅಮೆರಿಕದಲ್ಲಿ ಭಾರತೀಯ ವಲಸೆಗಾರರ ಸದಸ್ಯರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಬೆದರಿಕೆಯ ಬಗ್ಗೆ ಚಿಂತಿಸುವುದು ಒಳ್ಳೆಯದು” ಎಂದು ಜೈಸ್ವಾಲ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 21: ಗಲ್ಫ್ ಯುದ್ಧದಿಂದ ಇರಾನ್ ಹೊರ್ಮುಝ್ ಜಲಸಂಧಿ ಮುಚ್ಚಿದೆ. ಭಾರತಕ್ಕೆ ಅಡುಗೆ ಅನಿಲ, ತೈಲ ಹೊತ್ತು ಬರ್ತಿದ್ದ 22 ಹಡಗುಗಳು ಇರಾನ್ ಹಿಡಿತದಲ್ಲಿವೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತೆ ಗ್ಯಾಸ್ ಸಿಲಿಂಡರ್ ಕೊರತೆ ತಾಂಡವವಾಡುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್ (Commercial Gas) ಅಭಾವದಿಂದ ಬೆಂಗಳೂರಿನ ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಸಮಸ್ಯೆಯಿಂದ ಎದುರಾಗಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹೋಟೆಲ್ ಸೇರಿದಂತೆ ಹಲವು ವಲಯಗಳ ಮೇಲೆ ಇದರ ಬಿಸಿ ತಟ್ಟಿದೆ. ಹೋಟೆಲ್ ಮಾಲೀಕರು ಗ್ಯಾಸ್ ಸಿಲಿಂಡರ್ ಸಿಗದೇ ವಿಲ ವಿಲ ಎನ್ನುತ್ತಿದ್ದಾರೆ. ಹೋಟೆಲ್ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಜನರು ಕೂಡ ಇದರಿಂದಾಗಿ ಕಂಗಾಲಾಗಿದ್ದಾರೆ.
ಬೆಂಗಳೂರು ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟ
ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿಕೆ ನೀಡಿದ್ದು, ಗ್ಯಾಸ್ ಅಭಾವದಿಂದ ಬೆಂಗಳೂರಲ್ಲಿ ನೂರಾರು ಹೋಟೆಲ್ಗಳು ಬಂದ್ ಆಗಿವೆ. ಇದರಿಂದಾಗಿ ಕಳೆದ ವಾರವೇ ಹೋಟೆಲ್‌ಗಳಿಗೆ 100 ಕೋಟಿ ರೂ ನಷ್ಟವಾಗಿತ್ತು. ಈ ವಾರ 50 ಕೋಟಿ ರೂ ನಷ್ಟವಾಗಿದೆ. ಕಳೆದೆರಡು ವಾರದಲ್ಲಿ 150 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಒಂದು ಕೆಜಿ ಸೌದೆಗೆ 9 ರೂಪಾಯಿ
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಭಾವದಿಂದಾಗಿ ಬೆಳಗಾವಿಯಲ್ಲಿ ಹೋಟೆಲ್ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಬಡಕಲ್ ಗಲ್ಲಿಯ ದುರ್ಗಾದೇವಿ ಖಾನಾವಳಿಯವರು ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಆದರೆ ಕೆಜಿ ಕಟ್ಟಿಗೆಗೆ 9 ರೂಪಾಯಿ ನೀಡ್ತಿದ್ದು, ದಿನಕ್ಕೆ 25 ಕೆಜಿ ಕಟ್ಟಿಗೆ ಬಳಕೆ ಆಗುತ್ತಿದೆ. ಅದು ಕೂಡ ನಮಗೆ ಲಾಸ್ ಅಂತ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದಿದ್ದಾರೆ.
ಕಳೆದ ವಾರವೂ ಶಿವಾಲಿಕ್ ಹಾಗೂ ನಂದಾದೇವಿ ಹೆಸರಿನ ಹಡುಗುಗಳು ಭಾರತಕ್ಕೆ ಬಂದಿದ್ವು. ಸುಮಾರು 92 ಸಾವಿರ ಮೆಟ್ರಿಕ್ ಟನ್ LPG ಹೊತ್ತು ತಂದಿದ್ವು. ಇಷ್ಟಾದ್ರೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ.
ಭಾವನಾ ರಾಮಣ್ಣ ಅವರ ಅಜ್ಜಿಯ ಹೆಸರು ರುಕ್ಮಿಣಿ ಅಂತೆ. ಅದರಂತೆ ಭಾವನಾ ಅವರು ತಮ್ಮ ಮುದ್ದಾದ ಮಗಳಿಗೆ ರುಕ್ಮಿಣಿ ಎಂದೇ ಹೆಸರಿಟ್ಟಿದ್ದಾರೆ.
ಭಾವನಾ ರಾಮಣ್ಣ ಅವರು ಎಂಟು ತಿಂಗಳ ಗರ್ಭಿಣಿ ಆಗಿದ್ದಾಗ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಈ ವೇಳೆ ಒಂದು ಮಗು ತೀರಿಕೊಂಡು ಒಂದು ಮಗು ಮಾತ್ರವೇ ಜನಿಸಿತು. ಅದೇ ಮಗುವಿಗೆ ಈಗ ನಾಮಕರಣ ಮಾಡಲಾಗಿದೆ.
ಇಂದು (ಮಾರ್ಚ್ 21) ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೆಲ ಆಪ್ತರ ಹಾಜರಿಯಲ್ಲಿ ನಾಮಕರಣ ಮಹೋತ್ಸವ ನಡೆದಿದ್ದು, ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ.
ತಾಯಿ ಆಗಬೇಕೆಂಬ ಅದಮ್ಯ ಆಸೆಯಿಂದ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿ ಆಗಿದ್ದಾರೆ. ಈ ಹಿಂದೆ ತಮ್ಮ ಈ ನಿರ್ಧಾರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು ನಟಿ ಭಾವನಾ.
ನಟಿ ಭಾವನಾ ರಾಮಣ್ಣ ಐವಿಎಫ್ ಪದ್ಧತಿ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಪದ್ಧತಿ ಅನುಸರಿಸಿದ ಕಾರಣ ಭಾವನಾ ರಾಮಣ್ಣ ತಾಯಿ ಆಗಿದ್ದು ಸಖತ್ ಸುದ್ದಿ ಆಗಿತ್ತು.
ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಭಾರಿ ಪ್ರಶಂಸೆ ಗಳಿಸಿದ್ದ ‘ವಲವಾರ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಇಬ್ಬರು ಮಕ್ಕಳು ಮತ್ತು ಹಸುವಿನ ಸುತ್ತ ನಡೆಯುವ ಈ ಕತೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಈ ಸಿನಿಮಾವನ್ನು ಸನ್ನೆಕ್ಸ್ಟ್ನಲ್ಲಿ ವೀಕ್ಷಿಸಬಹುದು.
ಅರ್ಜುನ್ ಸರ್ಜಾ ನಿರ್ದೇಶಿಸಿ, ಅವರ ಪುತ್ರಿ ಐಶ್ವರ್ಯಾ ನಾಯಕಿಯಾಗಿ, ಉಪೇಂದ್ರ ಅವರ ಅಣ್ಣನ ಪುತ್ರ ನಿರಂಜನ್ ನಾಯಕನಾಗಿ ನಟಿಸಿರುವ ‘ಸೀತಾಪಯಣ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸನ್ನೆಕ್ಸ್ಟ್ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.
‘ಪೀಕಿ ಬ್ಲೈಂಡರ್ಸ್’ ಜನಪ್ರಿಯ ವೆಬ್ ಸರಣಿ ಆಸ್ಕರ್ ವಿಜೇತ ಕಿಲಿಯನ್ ಮರ್ಫಿ ನಟಿಸಿರುವ ಈ ವೆಬ್ ಸರಣಿಯನ್ನು ಇದೀಗ ಸಿನಿಮಾ ಮಾಡಲಾಗಿದ್ದು, ಸಿನಿಮಾಕ್ಕೆ ‘ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್’ ಎಂದು ಹೆಸರಿಡಲಾಗಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜೀತ್ ದೊಸ್ಸಾಂಜ್ ಇನ್ನೂ ಕೆಲವು ಸ್ಟಾರ್ ನಟರು ನಟಿಸಿರುವ ‘ಬಾರ್ಡರ್ 2’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಈ ಸಿನಿಮಾ 1971ರ ಇಂಡೊ-ಪಾಕಿಸ್ತಾನ ಯುದ್ಧದ ಕುರಿತಾದ ಕತೆಯನ್ನು ಒಳಗೊಂಡಿದೆ. ಇದೀಗ ಸಿನಿಮಾ ನೆಟ್ಫ್ಲಿಕ್ಸ್ಟ್ನಲ್ಲಿ ಬಿಡುಗಡೆ ಆಗಿದೆ.
ಕೊಲೆಗಳ ತನಿಖೆ ನಡೆಸಲು ಹೋದ ಯುವಕನಿಗೆ ಚಿತ್ರ ವಿಚಿತ್ರಗಳು ಎದುರಾಗುತ್ತದೆ. ಸುರ ಮತ್ತು ಅಸುರರ ಕತೆಯನ್ನು ಒಳಗೊಂಡ ತೆಲುಗು ಸಿನಿಮಾ ‘ಜಟಾಧರ’ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸುಧೀರ್ ಬಾಬು ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ.
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.
ಐಪಿಎಲ್ ಎಂದರೆ ಬೌಂಡರಿ ಮತ್ತು ಸಿಕ್ಸರ್ಗಳ ಅಬ್ಬರ. ಇಲ್ಲಿ ಬ್ಯಾಟ್ಸ್ಮನ್ಗಳಿಗೆ ಸಿಗುವಷ್ಟು ಮನ್ನಣೆ ಬೌಲರ್ಗಳಿಗೆ ಸಿಗುವುದಿಲ್ಲ. ಅದರಲ್ಲೂ ತಂಡದಲ್ಲಿ ಸಿಕ್ಸ್ ಹಿಟ್ಟರ್ಗಳ ದಂಡೇ ಇದ್ದರೆ ಆ ತಂಡಕ್ಕೆ ಅಭಿಮಾನಿಗಳ ಬಳಗ ಹೆಚ್ಚಿರುತ್ತದೆ. ಅದರಂತೆ ಅಭಿಮಾನಿಗಳನ್ನು ರಂಜಿಸಿ ಇದುವರೆಗೆ ನಡೆದಿರುವ 18 ಆವೃತ್ತಿಗಳ ಐಪಿಎಲ್‌ನಲ್ಲಿ ಯಾವ ತಂಡ ಹೆಚ್ಚು ಸಿಕ್ಸ್ಗಳನ್ನು ಹೊಡೆದಿದೆ ಎಂಬುದನ್ನು ನೋಡುವುದಾದರೆ..
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ, ತಂಡವು ಒಟ್ಟು 1823 ಸಿಕ್ಸರ್ಗಳನ್ನು ಬಾರಿಸಿದೆ. ಇದಕ್ಕೆ ಪ್ರಮುಖ ಕಾರಣ ಈ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಶಕ್ತಿಶಾಲಿ ಹಿಟ್ಟರ್ಗಳ ಉಪಸ್ಥಿತಿ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಂತಹ ವಿಶ್ವ ದರ್ಜೆಯ ಹಿಟ್ಟರ್ಗಳು ತಂಡದಲ್ಲಿ ಆಡಿದ್ದರ ಪರಿಣಾಮವಾಗಿ ಆರ್ಸಿಬಿ ಇದುವರೆಗೆ 1774 ಸಿಕ್ಸರ್ಗಳನ್ನು ಬಾರಿಸಿದೆ. ಮುಂಬೈ ಮತ್ತು ಆರ್ಸಿಬಿ ನಡುವಿನ ಅಂತರವು ತುಂಬಾ ಕಡಿಮೆ ಇದ್ದು, ಈ ಆವೃತ್ತಿಯಲ್ಲಿ ಆರ್ಸಿಬಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಳ್ಳಲು ಪ್ರಯತ್ನಿಸಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಪಟ್ಟಿಯಲ್ಲಿ 1610 ಸಿಕ್ಸರ್ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಧೋನಿ ನೇತೃತ್ವದ ಈ ತಂಡ ಯಾವಾಗಲೂ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದಾಗ್ಯೂ, ಕಳೆದ ಕೆಲವು ಆವೃತ್ತಿಗಳಲ್ಲಿ, ಮುಂಬೈ ಮತ್ತು ಆರ್ಸಿಬಿಗೆ ಹೋಲಿಸಿದರೆ ಸಿಕ್ಸರ್ಗಳನ್ನು ಬಾರಿಸುವ ವಿಚಾರದಲ್ಲಿ ಸಿಎಸ್ಕೆ ಹಿಂದೆ ಬಿದ್ದಿದೆ. ಆದಾಗ್ಯೂ, ಟಾಪ್ 3 ರಲ್ಲಿರುವುದು ಸಿಎಸ್ಕೆಯ ಬ್ಯಾಟಿಂಗ್ ಬಲಕ್ಕೆ ಸಾಕ್ಷಿಯಾಗಿದೆ. ಸುರೇಶ್ ರೈನಾ, ಶೇನ್ ವ್ಯಾಟ್ಸನ್ ಮತ್ತು ಸ್ವತಃ MS ಧೋನಿ ಬಾರಿಸಿದ ಬೃಹತ್ ಸಿಕ್ಸರ್ಗಳು ಈ ದಾಖಲೆಗೆ ಪ್ರಮುಖ ಕಾರಣಗಳಾಗಿವೆ.
ಕಳೆದ ಕೆಲವು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಬ್ಯಾಟಿಂಗ್ ಶೈಲಿ ಸಂಪೂರ್ಣವಾಗಿ ಬದಲಾಗಿದೆ. ಹಳೆಯ ತಂಡಗಳು ಮಾತ್ರವಲ್ಲ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಂತಹ ತಂಡಗಳು ಸಹ ಸಿಕ್ಸರ್ಗಳ ಮಳೆ ಸುರಿಸುತ್ತಿವೆ. 2024 ರ ಆವೃತ್ತಿಯಲ್ಲಿ ಎಸ್ಆರ್ಹೆಚ್ 178 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.
ಅದೇ ರೀತಿ, 2025 ರಲ್ಲಿ, ಪಂಜಾಬ್ ಕಿಂಗ್ಸ್ 173 ಸಿಕ್ಸರ್ಗಳನ್ನು ಬಾರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿತು. ಇದರರ್ಥ ಈ ಸಣ್ಣ ತಂಡಗಳು ಮುಂಬರುವ ದಿನಗಳಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಪುನಃ ಬರೆಯುವ ಸಾಧ್ಯತೆಯಿದೆ. ಐಪಿಎಲ್ 2026 ರಲ್ಲಿ ಈ ಸಿಕ್ಸರ್ಗಳ ಯುದ್ಧ ಎಷ್ಟು ರಸಭರಿತವಾಗುತ್ತದೆ ಎಂದು ಕಾದು ನೋಡೋಣ.