All posts by nagaraj11081993

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಕೈ ಕಮಾಂಡ್ ಅಹಿಂದ

ಬೆಂಗಳೂರು, (ಮೇ 27) : ಸಿದ್ದರಾಮಯ್ಯ ಅವರು ನಾಳೆ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇನ್ನೂ ಎರಡು ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಇನ್ನೂ ಎರಡು ವರ್ಷ ಆಡಳಿತ ಬಾಕಿ ಇರುವಾಗಲೇ ನಾಯಕತ್ವ ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಶೋಷಿತ ವರ್ಗಗಳ ಒಕ್ಕೂಟ ಸಹ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಿದ್ರೆ ಹೋರಾಟ ಮಾಡುವುದಾಗಿ ಹೈಕಮಾಂಡ್​ಗೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಬೆಂಗಳೂರಿನಲ್ಲಿಂದ ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದಾರಂತೆ. ಇದು ನಿಜವಾಗಿದ್ರೆ ಯಾವ ರೀತಿ ಎದುರಿಸ್ತಾರೆ ಅನ್ನೋದನ್ನ ತೋರಿಸುತ್ತೆ. ನಮ್ಮ ಸಮಾಜ ಸುಮ್ಮನೆ ಕೂರುವುದಿಲ್ಲ, ನಾಳೆಯಿಂದಲೇ ಹೋರಾಟ ಮಾಡುತ್ತೇವೆ ಎಂದು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

ಸಿಎಂ ಸಿದ್ದರಾಮಯ್ಯನವರು ಸಂದಿಗ್ಧ ಪರಿಸ್ಥಿತಿಯಲ್ಲಿಲ್ಲ.ರಾಹುಲ್ ಗಾಂಧಿ ಹೇಳಿದ್ರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ರು. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಮುಂದೇನು? ಅಹಿಂದ ವರ್ಗ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇವೆ. ಯಾವುದೇ ಬದಲಾವಣೆ ಮಾಡಬಾರದ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ವರ್ಚಸ್ಸು ಕಡೆಗಣಿಸಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಅಹಿಂದ ವರ್ಗದಿಂದ. ಅಹಿಂದ ವರ್ಗದ ಯಾರನ್ನಾದ್ರೂ ಸಿಎಂ ಮಾಡಲಿ.ಕಾಂಗ್ರೆಸ್​ನವರು ಸಮಸಮಾಜ ನಿರ್ಮಿಸ್ತೇವೆ ಅಂತಾರೆ, ಎಲ್ಲಿ ಮಾಡ್ತಿದ್ದಾರೆ. ನಮ್ಮ ಸಮುದಾಯದ ಶಾಸಕರು ಸಿಎಂ ಸಿದ್ದರಾಮಯ್ಯ ಜೊತೆ ನಿಲ್ಲಬೇಕು ಎಂದು ಕರೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲವ್ ಆಜ್ ಕಲ್ 2: ತಮ್ಮದೇ ಸಿನಿಮಾವನ್ನು ನಿಷ್ಪ್ರಯೋಜಕ ಚಿತ್ರ ಎಂದ ಜರಿದ ನಿರ್ದೇಶಕ ಇಮ್ತಿಯಾಜ್ ಅಲಿ

ಹಿಂದಿ ಚಿತ್ರರಂಗದಲ್ಲಿ ಕಳೆದ 20 ವರ್ಷಗಳಿಂದ ಸಕ್ರಿಯರಾಗಿರುವ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ (Imtiaz Ali) ಅವರು ತಮ್ಮ ವೃತ್ತಿಜೀವನದಲ್ಲಿ ಸೋಲಿಗಿಂತ ಹೆಚ್ಚು ಯಶಸ್ಸನ್ನು ಕಂಡಿದ್ದಾರೆ. ಆದರೆ ಅವರ ವೃತ್ತಿಜೀವನದ ಅತಿ ದೊಡ್ಡ ಹಿನ್ನಡೆಗಳಲ್ಲಿ ‘ಲವ್ ಆಜ್ ಕಲ್ 2’ (Love Aaj Kal 2) ಚಿತ್ರವೂ ಒಂದು. ಇದು ಅವರದ್ದೇ ನಿರ್ದೇಶನದ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ಆಗಿತ್ತು. ಕಾರ್ತಿಕ್ ಆರ್ಯನ್ (Kartik Aaaryan) ಮತ್ತು ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿದ್ದ ಈ ರೊಮ್ಯಾಂಟಿಕ್ ಡ್ರಾಮಾ ಗಲ್ಲಾಪೆಟ್ಟಿಗೆಯಲ್ಲಿ ಹಾಗೂ ವಿಮರ್ಶಾತ್ಮಕವಾಗಿ ತೀವ್ರ ಸೋಲನ್ನು ಅನುಭವಿಸಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಚಿತ್ರದ ವೈಫಲ್ಯದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಇಮ್ತಿಯಾಜ್ ಅಲಿ, ಇದೊಂದು ‘ನಿಷ್ಪ್ರಯೋಜಕ ಪ್ರಯೋಗ’ ಎಂದು ಕರೆದಿದ್ದಾರೆ.

‘ಝೂಮ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಚಿತ್ರದ ಮೇಕಿಂಗ್ ಕುರಿತು ಇಮ್ತಿಯಾಜ್ ಅಲಿ ಅವರು ಮಾತನಾಡಿದ್ದಾರೆ. ‘ನನ್ನ ಬಳಿ ಈಗಾಗಲೇ ಕಥೆ ಸಿದ್ಧವಿತ್ತು ಮತ್ತು ನಾನು ಅದರ ಬಗ್ಗೆ ಉತ್ಸುಕನಾಗಿದ್ದರಿಂದ ‘ಲವ್ ಆಜ್ ಕಲ್ 2’ ಮಾಡಿದೆ. ಆದರೆ ಅದು ವರ್ಕ್‌ಔಟ್ ಆಗಲಿಲ್ಲ ಎಂಬುದು ಬೇರೆ ಮಾತು. ನಮಗೆ ಸಿನಿಮಾ ಮಾಡಲು ಮನಸ್ಸಿಲ್ಲದಿದ್ದರೆ ಅದು ಕೇವಲ ಆರ್ಥಿಕವಾಗಿ ಲಾಭದಾಯಕ ಪ್ರಾಜೆಕ್ಟ್ ಆಗಿ ಉಳಿಯುವುದಿಲ್ಲ ಮತ್ತು ಅದೊಂದು ನಿಷ್ಪ್ರಯೋಜಕ ಪ್ರಯೋಗ ಎಂದು ಈ ಸಿನಿಮಾ ನನಗೆ ಕಲಿಸಿಕೊಟ್ಟಿತು. ‘ಲವ್ ಆಜ್ ಕಲ್ 2’ ತನ್ನದೇ ಆದ ವಿಭಿನ್ನ ಕಥೆಯನ್ನು ಹೊಂದಿತ್ತು. ನಾನು ಅದಕ್ಕೆ ಬೇರೆ ಹೆಸರಿಟ್ಟು ಸಿನಿಮಾ ಮಾಡಬಹುದಿತ್ತು’ ಎಂದು ಅವರು ಹೇಳಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ ಮೂಲ ‘ಲವ್ ಆಜ್ ಕಲ್’ ಸಿನಿಮಾ 2009ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ವಿಮರ್ಶಕರಿಂದ ಪ್ರಶಂಸೆ ಗಳಿಸಿದ್ದಲ್ಲದೆ 120 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ, 2020ರಲ್ಲಿ ಬಿಡುಗಡೆಯಾದ ಇದರ ಸೀಕ್ವೆಲ್ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆ ಪಡೆಯಿತು. ಬಾಕ್ಸ್ ಆಫೀಸ್‌ನಲ್ಲಿ ಹಾಕಿದ ಬಂಡವಾಳವನ್ನು ಸಹ ಮರಳಿ ಗಳಿಸಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಜನರು ಇದನ್ನು ಮೂಲ ಚಿತ್ರದೊಂದಿಗೆ ಹೋಲಿಸಿ ಟೀಕಿಸಿದ್ದರು.

ಮೊದಲಿಗೆ ತಾವು ಈ ಚಿತ್ರಕ್ಕೆ ‘ರಿವರ್ಸ್’ ಎಂದು ಹೆಸರಿಡಲು ಬಯಸಿದ್ದಾಗಿ ಇಮ್ತಿಯಾಜ್ ಬಹಿರಂಗಪಡಿಸಿದ್ದಾರೆ. ಆದರೆ ನಂತರ ‘ಲವ್ ಆಜ್ ಕಲ್ 2’ ಎಂದು ಹೆಸರಿಡಲು ನಿರ್ಧರಿಸಲಾಯಿತು. ಇದು ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ. ‘ಕೇವಲ ಹಣ ಗಳಿಸುವ ಪ್ರಾಜೆಕ್ಟ್ ಎಂಬ ಕಾರಣಕ್ಕೆ ಸಿನಿಮಾ ಮಾಡುವುದು ನನ್ನನ್ನು ಎರಡು ವರ್ಷಗಳ ಕಾಲ ಆ ಸಿನಿಮಾದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಒಳ್ಳೆತನದ ಮುಖವಾಡ ಧರಿಸಿದ್ದ ದೀಪಿಕಾ ಪಡುಕೋಣೆ’: ಹೇಳಿಕೆಗೆ ಕ್ಷಮೆ ಕೇಳಿದ ನಿರ್ದೇಶಕ

ಇಮ್ತಿಯಾಜ್ ಅಲಿ ಈಗ ‘ಮೈ ವಾಪಸ್ ಆವುಂಗಾ’ ಸಿನಿಮಾಗೆ ನಿರ್ದೇಶನ ಮಾಡಿದ್ದು, ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯ ರೊಮ್ಯಾಂಟಿಕ್ ಡ್ರಾಮಾ ಇದಾಗಿದ್ದು, ವೇದಾಂತ್ ರೈನಾ, ಶರ್ವರಿ, ದಿಲ್ಜಿತ್ ದೋಸಾಂಜ್ ಮತ್ತು ನಸೀರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಜೂನ್ 12ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಫೇವರಿಟ್ ಟೀಚರ್‌ಗಾಗಿ ಮನೆಯಿಂದ ಟೀ ಮಾಡಿಕೊಂಡು ತಂದ ಪುಟಾಣಿ

ಮಕ್ಕಳೆಂದರೆ (children) ಹಾಗೆ, ಯಾರು ತಮ್ಮನ್ನು ಅತಿಯಾಗಿ ಪ್ರೀತಿ ತೋರುತ್ತಾರೋ ಅವರ ಜತೆಗೆ ಆತ್ಮೀಯವಾಗಿ ವರ್ತಿಸುತ್ತಾರೆ. ಈ ಪುಟ್ಟ ಮಕ್ಕಳಿಗೆ ಶಿಕ್ಷಕರು ಎಂದರೆ ಅದೇನೋ ಪ್ರೀತಿ, ಹೀಗಾಗಿ ಏನೇ ಇದ್ರೂ ತನ್ನ ಫೇವರಿಟ್ ಟೀಚರ್ ಬಳಿ ಹೇಳಿಕೊಳ್ಳುತ್ತಾರೆ. ತನ್ನ ಫೇವರಿಟ್ ಟೀಚರ್ ಮನೆಯಿಂದ ಏನಾದ್ರೂ ತೆಗೆದುಕೊಂಡು ಹೋಗುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಪುಟಾಣಿ ಅದೇ ರೀತಿ ಮಾಡಿದೆ. ನೆಚ್ಚಿನ ಟೀಚರ್ ಗೆ ಮನೆಯಿಂದ ಟೀ ಮಾಡಿ ತಂದ ವಿಡಿಯೋ ವೈರಲ್ ಆಗಿದೆ. ಈ ಪುಟಾಣಿಯ ಪರಿಶುದ್ಧ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

thebharatpost ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ಫೇವರಿಟ್ ಟೀಚರ್ ಗಾಗಿ ಮಾಡಿದ ಕೆಲಸವನ್ನು ನೋಡಬಹುದು. ಮನೆಯಿಂದ ಟೀ ಮಾಡಿಕೊಂಡು ಸ್ಕೂಲ್‌ಗೆ ಬಂದು ಫೇವರಿಟ್ ಟೀಚರ್‌ಗೆ ಕೊಟ್ಟಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಟೀಚರ್‌ನನ್ನು ಕಂಡೊಡನೆ ಈ ಪುಟ್ಟ ಬಾಲಕ ಓಡೋಡಿ ಬಂದಿದ್ದಾನೆ. ಆ ಬಳಿಕ ಈ ಪುಟಾಣಿಯ ಬ್ಯಾಗ್‌ನಲ್ಲಿದ್ದ ಪ್ಲಾಸ್ಕ್ ತೆಗೆದು ಟೀಚರ್ ಟೀಯನ್ನು ಲೋಟಕ್ಕೆ ಹಾಕಿದ್ದಾರೆ. ಟೀ ಕುಡಿಯುತ್ತಾ ಪುಟಾಣಿಯ ಹಣೆಗೆ ಮುತ್ತು ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಾಲನ್ನು ತಾನೇ ಸ್ಪರ್ಶಿಸಿ ನಮಸ್ಕರಿಸಿಕೊಂಡ ಪುಟಾಣಿ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಮುದ್ದಾದ ಟೀ ಸಪ್ಲೈ ಬಾಯ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಕ್ರಶ್ ಈ ಪುಟಾಣಿ ಮಿಲ್ಕ್ ಮ್ಯಾನ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

ಬೆಂಗಳೂರು, (ಮೇ 27): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಮಹತ್ವದ ರಾಜಕೀಯ ಬೆಳೆವಣಿಗೆಗಳು ಗರಿಗೆದರಿದ್ದು, ನಾಯಕತ್ವ ಬದಲಾವಣೆ ಖಚಿತವಾಗಿದೆ. ನಿನ್ನೆ (ಮೇ 26) ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಸರಣಿ ಸಭೆ ಬಳಿಕ ಸಿದ್ದರಾಮಯ್ಯನವರು (Siddaramaiah) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು, ಇದಕ್ಕೆ ಪೂರಕವೆಂಬಂತೆ ಬೇರೆ ಬೇರೆ ವಿದ್ಯಮಾನಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುದ್ದಿಗಳ ನಡುವೆಯೇ ಸಿದ್ದರಾಮಯ್ಯ ತಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ತೀವ್ರ ಕುತುಹಲಕ ಮೂಡಿಸಿದೆ. ಈ ಮೂಲಕ ಸಿದ್ದರಾಮಯ್ಯ ತಮ್ಮ ಮಹತ್ವಕಾಂಕ್ಷೆಯ ಯೋಜನೆ ಬಗ್ಗೆ ಬರೆದುಕೊಂಡಿರುವುದು ಸಾರ್ಥಕ ಆಡಳಿತ ನಡೆಸಿದ್ದೇನೆ ಎನ್ನುವ ವಿದಾಯದ ಸುಳಿವು ನೀಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿವೆ.

ಮುಖ್ಯಾಂಶಗಳು

  • ಕರ್ನಾಟಕ ಕಾಂಗ್ರೆಸ್​​ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
  • ನಾಯಕತ್ವ ಬದಲಾವಣೆ ಗೊಂದಲ ಕ್ಲೈಮ್ಯಾಕ್ಸ್ ಹಂತಕ್ಕೆ
  • ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ
  • ಇದರ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷೆ ಯೋಜನೆ ಬಗ್ಗೆ ಬರೆದು ವಿದಾಯದ ಸುಳಿವು ನೀಡಿದ್ರಾ ಸಿದ್ದರಾಮಯ್ಯ?.

ಸಿದ್ದರಾಮಯ್ಯ ಟ್ವೀಟ್

ರಾಜೀನಾಮೆ ಚರ್ಚೆಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯ ಯೋಜನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಇದನ್ನೂ ಓದಿ: ಕರ್ನಾಟಕ ಅಧಿಕಾರ ಹಂಚಿಕೆ: ಕಾಂಗ್ರೆಸ್ ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಯಾರೂ ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪದೊಂದಿಗೆ ಜಾರಿಗೊಂಡ ಅನ್ನಭಾಗ್ಯ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಭದ್ರತೆ ನೀಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಆಧಾರವಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಿಸಲು ಈವರೆಗೆ 18,897 ಕೋಟಿ ರೂ. ವ್ಯಯಿಸಲಾಗಿದ್ದು, 4.26 ಕೋಟಿ ಪಡಿತರದಾರರು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದು ತಮ್ಮ ವಿದಾಯದ ಮುನ್ಸೂಚನೆಯ ಧನ್ಯವಾದದ ಪೋಸ್ಟ್‌ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಅನ್ನಭಾಗ್ಯ ಸಿದ್ದರಾಮಯ್ಯನವರ ಮಹತ್ವಕಾಂಕ್ಷಿ ಯೋಜನೆ

ಹೌದು…ಇದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರ ಯೋಜನೆಗಳಲ್ಲಿ ಮಹತ್ವಕಾಂಕ್ಷಿ ಯೋಜನೆ ಅಂದರೆ ಅದು ಅನ್ನಭಾಗ್ಯ. ಈ ಹಿಂದೆ 2013ರಲ್ಲಿ ಸಿಎಂ ಆಗಿದ್ದ ವೇಳೆಯಲ್ಲೇ ಸಿದ್ದರಾಮಯ್ಯ ಈ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಬಳಿಕ ಈ ಯೋಜನೆಯನ್ನು ತಮ್ಮ ಎರಡನೇ ಅವಧಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು, ಯಾರೊಬ್ಬರೂ ಹಸಿದು ಮಲಗಬಾರದು, ಜನಸಾಮಾನ್ಯರ ಬದುಕು ಹಸನಾಗಬೇಕು ಎಂಬ ಆಶಯವನ್ನು ಸಾಕಾರಗೊಳಿಸಲು ‘ಅನ್ನಭಾಗ್ಯ’ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ ಆಹಾರ ಧ್ಯಾನದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧ್ಯಾನವನ್ನು ಸೇರಿಸಿ ಪ್ರತಿ ತಿಂಗಳೂ ತಲಾ 10 ಕೆಜಿ ಆಹಾರ ಧ್ಯಾನವನ್ನು ಉಚಿತವಾಗಿ ವಿತರಿಸಲಾಗುತ್ತೆ.

ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇಕೆ?

ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಜಾರಿ ಮಾಡೋಕೆ ಕಾರಣ ಏನು ಎನ್ನುವ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದರು. ಫ್ರೀ ಅಕ್ಕಿ ಯಾಕೆ ಕೊಟ್ಟೆ ಎನ್ನುವ ಬಗ್ಗೆ ಬಾಲ್ಯದಲ್ಲಿ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಉಚಿತ ಅಕ್ಕಿ ಯಾಕೆ ಕೊಟ್ಟೆ ಅಂದರೆ ನಮ್ಮ ಮನೆಯ ಪಕ್ಕದಲ್ಲಿ ಸವಿತಾ ಸಮಾಜ ಕುಟುಂಬ ಇತ್ತು. ಅವರು ಒಂದು ತುತ್ತು ಅನ್ನಕ್ಕೆ ನಮ್ಮ ಮನೆ ಬಳಿಗೆ ಬಂದು ನಿಲ್ಲೋರು. ನಮ್ಮ ಅವ್ವ ಗೊಣಕಿಕೊಂಡು ಕೊಡೋರು. ಯಾರು ಕೂಡ ಯಾರ ಮನೆ ಬಾಗಿಲಿಗೆ ಅನ್ನಕ್ಕಾಗಿ ನಿಲ್ಲಬಾರದು ಅಂತ ಅನಿಸಿತು ಅಂತ ಸಿದ್ದರಾಮಯ್ಯ ಬಾಲ್ಯದ ಆ ನೆನಪು ಬಿಚ್ಚಿಟ್ಟಿದ್ದರು.

ಇದು ವಿದಾಯದ ಸುಳಿವೇ?

ರಾಜೀನಾಮೆ ಚರ್ಚೆ ನಡುವೆ ತಮ್ಮ 3 ವರ್ಷಗಳ ಅಧಿಕಾರವಧಿಯ ಸಾಧನೆಯ ಪೋಸ್ಟ್‌ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ? ಎಂದು ಪ್ರಶ್ನೆ, ಚರ್ಚೆಗಳು ಶುರುವಾಗಿವೆ. ಹೌದು…ಸಿಎಂ ಸಿದ್ದರಾಮಯ್ಯ ಅವರು ಗುರುವಾರ(ಮೇ.28ರಂದು) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಸದ್ಯ ಇದಕ್ಕೆ ಪೂರಕವೆಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ X ಖಾತೆಯ ಮೂಲಕ ತಮ್ಮ 3 ವರ್ಷಗಳ ಸಾಧನೆಯ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ತಮ್ಮ ಮಹತ್ವಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಸಾರ್ಥಕ ಆಡಳಿತ ನಡೆಸಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿದಂತಿದೆ.

ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಇಂದು (ಮೇ 27) ಬೆಳಗ್ಗೆ ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿದ್ದ ದಿವಂಗತ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು,ಜವಾಹರಲಾಲ್ ನೆಹರೂ ಅವರ ಬಗ್ಗೆ ಒಂದಿಷ್ಟು ಮಾತುಳನ್ನಾಡಿದರು. ಇದೇ ವೇಳೆ ರಾಜೀನಾಮೆ ವಿಷಯದ ಕುರಿತು ಮಾಧ್ಯಮಗಳ ಪ್ರಶ್ನೆಗೆ ನಾಳೆ ಮಾತನಾಡುವುದಾಗಿ ಅಲ್ಲಿಂದ ತೆರಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​: ಜಾತಿ ಸಮೀಕರಣದ ಆಧಾರದಲ್ಲಿ ತಂತ್ರ

ಕಾಂಗ್ರೆಸ್​​ ನಾಯಕರಿಂದ ತಂತ್ರImage Credit source: PTI

ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅವರಿಂದ ರಾಜೀನಾಮೆ ಪಡೆದು ನೂತನ ಮುಖ್ಯಮಂತ್ರಿಯ ಆಯ್ಕೆಯ ಬಳಿಕವೂ ವೋಟ್​​ ಬ್ಯಾಂಕ್​​ ಕಳೆದುಕೊಳ್ಳದಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್​​ ವರಿಷ್ಠರು ಹತ್ತು ಹಲವು ತಂತ್ರಗಳನ್ನು ಹೆಣೆದಿದ್ದಾರೆ. ಜಾತಿ ಸಮೀಕರಣ ಆಧರಿಸಿ ಲೆಕ್ಕಾಚಾರ ಹಾಕಲಾಗಿದ್ದು, ಕೇವಲ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೆ ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿ ಕೆಲ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಸಿಎಂ ಬದಲಾವಣೆಯಿಂದ ಯಾವುದೇ ಸಮುದಾಯಗಳಿಗೂ ನೋವಾಗಂತೆ ನೋಡಿಕೊಳ್ಳುವ ಬಗ್ಗೆಯೂ ಹೈಕಮಾಂಡ್​​ ಪ್ಲ್ಯಾನ್​​ ರೂಪಿಸಿರುವ ಮಾಹಿತಿ ಸಿಕ್ಕಿದೆ.

ನಾಲ್ವರಿಗೆ ಡಿಸಿಎಂ ಸ್ಥಾನ?

ನೂತನ ಮುಖ್ಯಮಂತ್ರಿಯ ಆಯ್ಕೆ ಜೊತೆಗೆ ನಾಲ್ವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್​​ನಲ್ಲಿ ಚರ್ಚೆ ನಡೆದಿದೆ. ಜಾತಿ ಸಮೀಕರಣ ಆಧರಿಸಿ ನಾಲ್ವರಿಗೆ ಪ್ರಾತಿನಿಧ್ಯ ನೀಡುವ ಮಾತುಗಳು ಕೇಳಿಬಂದಿವೆ. ಒಬಿಸಿ, ದಲಿತ, ಮುಸ್ಲಿಂ ಅಥವಾ ಅಲ್ಪಸಂಖ್ಯಾತ ಮತ್ತು ಲಿಂಗಾಯತ ಕೋಟಾದಡಿಯಲ್ಲಿ ನಾಲ್ವರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ವರಿಷ್ಠರು ಒಲವು ತೋರಿದ್ದಾರಂತೆ.

ಇದನ್ನೂ ಓದಿ: ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

ಡಿಸಿಎಂ ರೇಸ್​​ನಲ್ಲಿ ಯಾರ್ಯಾರು?

ದಲಿತ ಕೋಟಾದಲ್ಲಿ ಹಾಲಿ ಗೃಹ ಸಚಿವರಾಗಿರುವ ಪರಮೇಶ್ವರ್ ಅಥವಾ ಸಚಿವ ಪ್ರಿಯಾಂಕ್​​ ಖರ್ಗೆ ಡಿಸಿಎಂ ಆಗುವ ಸಾಧ್ಯತೆ ಇದ್ದರೆ, ಒಬಿಸಿ ಕೋಟಾದಲ್ಲಿ ಯತೀಂದ್ರಗೆ ಡಿಸಿಎಂ ಸ್ಥಾನ ಸಿಗಬಹುದು ಎನ್ನಲಾಗಿದೆ. ಇನ್ನು ಮುಸ್ಲಿಂ ಕೋಟಾದಲ್ಲಿ ಹಾಲಿ ಸಚಿವ ಜಮೀರ್ ಅಥವಾ ಸದ್ಯ ವಿಧಾನ ಸಭೆ ಸ್ಪೀಕರ್​​ ಆಗಿರುವ ಯು.ಟಿ. ಖಾದರ್​ಗೆ ಹೈಕಮಾಂಡ್​​ ಮಣೆ ಹಾಕುವ ಸಾಧ್ಯತೆ ಇದೆ. ಲಿಂಗಾಯತ ಕೋಟಾದಲ್ಲಿ ಈಶ್ವರ್ ಖಂಡ್ರೆ ಮತ್ತು ಎಂ.ಬಿ.ಪಾಟೀಲ್ ರೇಸ್​​ನಲ್ಲಿದ್ದರೆ, ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ.ಜಾರ್ಜ್​ಗೆ ಡಿಸಿಎಂ ಸ್ಥಾನ ಸಿಗುವ ಬಗ್ಗೆ ಅಂದಾಜಿಸಲಾಗಿದೆ.

ನೂತನ ಸಿಎಂ ಬೆನ್ನಲ್ಲೇ ಕೆಪಿಸಿಸಿಗೂ ಹೊಸ ಸಾರಥಿ

ಇನ್ನು ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಅವರ ಆಯ್ಕೆ ಬಹುತೇಕ ಖಚಿತವಾಗಿರುವ ಹಿನ್ನೆಲೆ ಕೆಪಿಸಿಸಿಗೂ ಹೊಸ ಸಾರಥಿಯ ನೇಮಕವಾಗಲಿದೆ. ಸಿಎಂ ಘೋಷಣೆಯ ಜೊತೆಬಜೊತೆಗೆ ಕೆಪಿಸಿಸಿಗೂ ನೂತನ ಅಧ್ಯಕ್ಷರನ್ನು ಹೈಕಮಾಂಡ್ ಘೋಷಿಸಲಿದ್ದು, ಸಿಎಂ ಮತ್ತು ಡಿಸಿಎಂ ಆಯ್ಕೆ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ದಕ್ಕಲಿದೆ ಎಂಬುದು ನಿರ್ಧಾರವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಈಗಾಗಲೇ ಸಚಿವ ಸತೀಶ್​​ ಜಾರಕಿಹೊಳಿ ಕಣ್ಣಿಟ್ಟಿದ್ದು, ಈ ಸಂಬಂಧ ಕೆಲ ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್​​ ಮಣೆ ಯಾರಿಗೆ ಅನ್ನೋದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:17 pm, Wed, 27 May 26

Source link

ಕರ್ನಾಟಕದಲ್ಲಿ ಹಾವು ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಳ:​ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ​ ಸೂಚನೆ

ಹಾವು (ಸಂಗ್ರಹ ಚಿತ್ರ)Image Credit source: Gettyimages.in

ಬೆಂಗಳೂರು, ಮೇ 27: ಒಂದು ಕಡೆ ಬೀದಿನಾಯಿಗಳ ಕಾಟ ಹೆಚ್ಚುತ್ತಿದ್ದರೆ, ಮತ್ತೊಂದಡೆ ಹಾವುಗಳು ಸೈಲೆಂಟ್ ಕಿಲ್ಲರ್ ಆಗುತ್ತಿವೆ. ಏಕೆಂದರೆ ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿ (Karnataka) ಕಳೆದ 5 ತಿಂಗಳಲ್ಲಿ 5597 ಜನರು ಹಾವು ಕಡಿತಗೊಳಗಾಗಿದ್ದು, 56 ಜನರು ಬಲಿ ಆಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸ್ನೇಕ್ ಬೈಟ್ (snake bites) ಹಾಗೂ ಡೆತ್ ರೇಟ್​​​​ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಸ್ನೇಕ್ ಬೈಟ್ ಹಾಗೂ ಡೆತ್​​
  • ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ
  • ಹಾವು ಕಡಿವಾದರೆ ನಿರ್ಲಕ್ಷ್ಯವಹಿಸದ್ದಂತೆ ಜನರಿಗೆ ಸೂಚನೆ

ಸದ್ಯ ರಾಜ್ಯದಲ್ಲಿ ಬೀದಿನಾಯಿಗಳ ಕಾಟ ಬೆನ್ನಲ್ಲೇ ಇದೀಗ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾವು ಕಡಿತ ಪ್ರಕರಣಗಳು ಕಂಡುಬಂದಿವೆ.

ಹಾವಿನಿಂದ ಕಡಿತಕ್ಕೊಳಗಾದವರ ಮತ್ತು ಮೃತರ ಅಂಕಿ-ಅಂಶ

ಇನ್ನು ಹಾವಿನ ಕಡಿತದಿಂದ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. 2026 ಜನವರಿಯಿಂದ ಮೇ 17ರವರೆಗೆ ಹಾವು ಕಡಿತಕ್ಕೆ 56 ಜನರು ಮೃತಪಟ್ಟಿದ್ದು, 5597 ಜನರು ಹಾವು ಕಚ್ಚಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ 2000ಕ್ಕೂ ಹೆಚ್ಚು ಜನರಿಗೆ ಹಾವು ಕಡಿತ ಹಾಗೂ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ ಒಂದೇ ವಾರದಲ್ಲಿ 545 ಜನರು ಹಾವು ಕಡಿತಕ್ಕೊಳಗಾಗಿದ್ದು, 4 ಜನರು ಬಲಿಯಾಗಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆಗೆ ಮುಂದಾದ ಆರೋಗ್ಯ ಇಲಾಖೆ 

ಸದ್ಯ ಹೆಚ್ಚುತ್ತಿವರು ಸ್ನೇಕ್ ಬೈಟ್ ಹಾಗೂ ಡೆತ್​​ ಹಿನ್ನೆಲೆ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದೆ. ರಾಜಧಾನಿ ಬೆಂಗಳೂರಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲ್ಲೂಕಾಸ್ಪತ್ರೆಗಳಲ್ಲಿ ಆ್ಯಂಟಿ ಸ್ನೇಕ್‌ ವೀನೋಮ್ ಅನ್ನು ಬೇಡಿಕೆಯಷ್ಟು ಸ್ಟಾಕ್ ಇರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?

ಇನ್ನು ಜನರು ಮಾತ್ರ ಹಾವು ಕಡಿತಕ್ಕೆ ದಿವ್ಯನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರು ತುರ್ತು ಚಿಕಿತ್ಸೆ ಪಡೆಯದೆ ನಾಟಿ ಔಷಧಗಳತ್ತ ಮುಖ ಮಾಡಿ, ಕೊನೆಯ ಹಂತದಲ್ಲಿ ಆಸ್ಪತ್ರೆಗಳತ್ತ ಬರುತ್ತಿರುವುದು ಸಾವಿಗೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಯಾವುದೇ ಜಾತಿಯ ಹಾವು ಕಡಿವಾದರೆ ನಿರ್ಲಕ್ಷ್ಯವಹಿಸದ್ದಂತೆ ಜನರಿಗೆ ಆರೋಗ್ಯ ಇಲಾಖೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಜೈಲಿನಿಂದ ಹೊರಬರುತ್ತಿದ್ದಂತೆ ಭರ್ಜರಿ ಪಾರ್ಟಿ! ನೋಟಿನ ಹಾರ ಹಾಕಿಕೊಂಡು ಪತ್ನಿಯೊಂದಿಗೆ ಡಾನ್ಸ್

ಪುಣೆ, ಮೇ.27 : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮಹಾರಾಷ್ಟ್ರದ ಪುಣೆಯ ಕಲ್ಯಾಣಿನಗರದ ಪೋರ್ಷೆ (Porsche) ಕಾರು ಭೀಕರ ಅಪಘಾತ ಪ್ರಕರಣದ ಪ್ರಮುಖ ಆರೋಪಿ, ಬಿಲ್ಡರ್ ವಿಶಾಲ್ ಅಗರ್ವಾಲ್ (Vishal Agarwal) ಜೈಲಿನಿಂದ ಹೊರಬಂದ ಬೆನ್ನಲ್ಲೇ ಮತ್ತೊಂದು ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ವಿಶಾಲ್ ಅಗರ್ವಾಲ್, ತಮ್ಮ ಕುಟುಂಬದೊಂದಿಗೆ ಪಾರ್ಟಿ ಮಾಡಿದ್ದಾರೆ. ನೋಟುಗಳ ಹಾರ ಧರಿಸಿ ಅಸಭ್ಯವಾಗಿ ಡಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 2024ರ ಮೇ ತಿಂಗಳಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವ ಐಟಿ ಇಂಜಿನಿಯರ್‌ಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಪ್ರಕರಣದಲ್ಲಿ ತನ್ನ ಅಪ್ರಾಪ್ತ ಮಗನನ್ನು ಬಚಾವ್ ಮಾಡಲು ರಕ್ತದ ಮಾದರಿಯನ್ನು ಅದಲುಬದಲು (Blood Sample Swapping) ಮಾಡಿದ ಆರೋಪದ ಮೇಲೆ ವಿಶಾಲ್ ಅಗರ್ವಾಲ್ ಸುದೀರ್ಘ 22 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಜೈಲಿನಿಂದ ಹೊರಬರುತ್ತಿದ್ದಂತೆ ಇಬ್ಬರು ಅಮಾಯಕರ ಜೀವ ಬಲಿಪಡೆದ ಎಂಬ ಪಾಪಪ್ರಜ್ಞೆ ಇಲ್ಲದೆ ನೋಟಿನ ಹಾರಗಳನ್ನು ಹಾಕಿಕೊಂಡು ಪತ್ನಿಯೊಂದಿಗೆ ಕುಣಿದು ಕುಪ್ಪಳಿಸಿರುವುದು ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಂತ್ರಿಕ ದೋಷ: 8 ಗಂಟೆ ಹಾರಾಡಿ ದೆಹಲಿಗೆ ವಾಪಸಾದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ

ನವದೆಹಲಿ, ಮೇ 27: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ 230 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ದೆಹಲಿಗೆ ವಾಪಸಾಗಿದೆ. ತಾಂತ್ರಿಕ ದೋಷದ ಕಾರಣದಿಂದಾಗಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿ ಮತ್ತೆ ದೆಹಲಿಗೆ ಬಂದಿದೆ. ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಚೀನಾ ವಾಯುಪ್ರದೇಶದಿಂದ ವಾಪಸ್
ಮಾಹಿತಿಯ ಪ್ರಕಾರ, ಮೇ 27 ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ‘AI173’ ವಿಮಾನವು ನಿಗದಿತ ಸಮಯಕ್ಕೆ ಟೇಕ್ ಆಫ್ ಆಗಿತ್ತು. ಆದರೆ, ಚೀನಾದ ವಾಯುಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ. ನಿಗದಿತ ತುರ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ, ತಕ್ಷಣವೇ ವಿಮಾನವನ್ನು ದೆಹಲಿಯ ಕಡೆಗೆ ತಿರುಗಿಸಲು ನಿರ್ಧರಿಸಲಾಯಿತು. ಸುಮಾರು 8 ಗಂಟೆಗಳ ದೀರ್ಘ ಹಾರಾಟದ ನಂತರ ವಿಮಾನವು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯೇ ತನಗೆ ಅತ್ಯುನ್ನತ ಆದ್ಯತೆ ಎಂದು ಒತ್ತಿಹೇಳಿದೆ. ಹಠಾತ್ ಆದ ಈ ಬದಲಾವಣೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಏರ್ ಇಂಡಿಯಾ, ತಕ್ಷಣವೇ ಕಾರ್ಯಪ್ರವೃತ್ತವಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ. ದೆಹಲಿಯಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಹೋಟೆಲ್ ವಸತಿ, ಉಪಾಹಾರ ಹಾಗೂ ಅವರ ಇಷ್ಟದಂತೆ ಮುಂದಿನ ವಿಮಾನ ವೇಳಾಪಟ್ಟಿಯನ್ನು ಬದಲಾಯಿಸಲು ಅಗತ್ಯವಿರುವ ಎಲ್ಲಾ ನೆರವನ್ನು ಏರ್ ಇಂಡಿಯಾದ ನೆಲದ ಸಿಬ್ಬಂದಿ ಒದಗಿಸುತ್ತಿದ್ದಾರೆ. ಪ್ರಸ್ತುತ ವಿಮಾನವನ್ನು ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ.

ಮತ್ತಷ್ಟು ಓದಿ: ದುಬಾರಿ ಇಂಧನದ ಎಫೆಕ್ಟ್; ಕೆಲ ಅಂತಾರಾಷ್ಟ್ರೀಯ ಫ್ಲೈಟ್​ಗಳನ್ನು ನಿಲ್ಲಿಸಿದ ಏರ್ ಇಂಡಿಯಾ

ಮೇ 21 ರಂದೂ ನಡೆದಿತ್ತು ಮತ್ತೊಂದು ಘಟನೆ
ಇದೇ ತಿಂಗಳ ಮೇ 21 ರಂದು ಬೆಂಗಳೂರಿನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾದ ‘AI2802’ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಅದರ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾಕ್‌ಪಿಟ್ ಸಿಬ್ಬಂದಿಗೆ ಬೆಂಕಿಯ ಮುನ್ಸೂಚನೆ ಸಿಗುತ್ತಿದ್ದಂತೆ ಎಲ್ಲಾ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಷ್ಟ ಮಾಡಿ ಡಿಸ್ಕೌಂಟ್ ಕೇಳಿದ ರಣವೀರ್ ಸಿಂಗ್; ಸಂಧಾನ ಸಭೆಯಲ್ಲಿ ನಡೆದಿದ್ದೇನು?

ಬಾಲಿವುಡ್‌ನ ‘ಡಾನ್ 3’ ಸಿನಿಮಾ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ರಣವೀರ್ ಸಿಂಗ್ ಮತ್ತು ‘ಎಕ್ಸೆಲ್ ಎಂಟರ್‌ಟೇನ್‌ಮೆಂಟ್’ ನಿರ್ಮಾಣ ಸಂಸ್ಥೆ ನಡುವಿನ ಮುನಿಸು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಯೊಂದರ ಆಸಕ್ತಿದಾಯಕ ಮಾಹಿತಿ ಈಗ ಹೊರಬಿದ್ದಿದೆ. ಚಿತ್ರದಿಂದ ಹೊರನಡೆದ ಕಾರಣ ಎಕ್ಸೆಲ್ ಸಂಸ್ಥೆಗೆ ಉಂಟಾಗಿದ್ದ 45 ಕೋಟಿ ರೂಪಾಯಿ ನಷ್ಟಕ್ಕೆ ಪರಿಹಾರವಾಗಿ ರಣವೀರ್ ಸಿಂಗ್ 10 ಕೋಟಿ ರೂಪಾಯಿ ನೀಡಲು ಒಪ್ಪಿದ್ದರು ಮತ್ತು ಬಾಕಿ ಹಣದಲ್ಲಿ ಡಿಸ್ಕೌಂಟ್ ಕೇಳಿದ್ದರು ಎಂದು ವರದಿಯಾಗಿದೆ.

ವಿಷಯ ಗಂಭೀರ ಸ್ವರೂಪ ಪಡೆಯುವ ಮುನ್ನವೇ, ಮಾರ್ಚ್ ಮೊದಲ ವಾರದಲ್ಲಿ ಬಾಲಿವುಡ್​ನ ಪ್ರಮುಖರಾದ ಆಮಿರ್ ಖಾನ್, ಕರಣ್ ಜೋಹರ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಸಮ್ಮುಖದಲ್ಲಿ ಒಂದು ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ರಣವೀರ್ ಸಿಂಗ್ ತಂಡವು ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರಿಗೆ ಒಂದು ವಿಶೇಷ ಆಫರ್ ನೀಡಿತ್ತು.

ರಣವೀರ್ ನೀಡಿದ್ದ ಆಫರ್ ಏನು?

45 ಕೋಟಿ ರೂಪಾಯಿ ಪರಿಹಾರ ಮೊತ್ತದಲ್ಲಿ ಎಕ್ಸೆಲ್ ಸಂಸ್ಥೆಗೆ ತಕ್ಷಣವೇ 10 ಕೋಟಿ ರೂಪಾಯಿ ನಗದು ಪರಿಹಾರ ನೀಡಲು ರಣವೀರ್ ಒಪ್ಪಿದ್ದರು. ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಎಕ್ಸೆಲ್ ಸಂಸ್ಥೆ ಮಾಡುವ ಯಾವುದಾದರೂ ಹೊಸ ಸಿನಿಮಾದಲ್ಲಿ ರಣವೀರ್ ನಟಿಸುವ ಭರವಸೆ ನೀಡಿದ್ದರು. ತಮ್ಮ ಸಂಭಾವನೆಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಡಿಸ್ಕೌಂಟ್ ನೀಡೋದಾಗಿ ಹೇಳಿದ್ದರು. ಈ ಮೂಲಕ ಒಟ್ಟು 35 ಕೋಟಿ ರೂಪಾಯಿ ಹಂತ-ಹಂತವಾಗಿ ಸರಿದೂಗಿಸಿ, ವೃತ್ತಿಪರ ಬಾಂಧವ್ಯವನ್ನು ಮುಂದುವರಿಸುವುದು ರಣವೀರ್ ಅವರ ಆಲೋಚನೆಯಾಗಿತ್ತು.

ಆಫರ್ ತಿರಸ್ಕರಿಸಿದ ಫರ್ಹಾನ್ ಅಖ್ತರ್ ತಂಡ:

ಆದರೆ ರಣವೀರ್ ಸಿಂಗ್ ಅವರ ಈ ಡಿಸ್ಕೌಂಟ್ ಆಫರ್ ಅನ್ನು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನೇರವಾಗಿ ತಿರಸ್ಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿನಿಮಾದ ಡೇಟ್ಸ್ ಮತ್ತು ಗೊಂದಲಗಳಿಂದಾಗಿ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಅವರು ವಾದಿಸಿದ್ದಾರೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ರಣವೀರ್ ಜೊತೆ ಮತ್ತೆ ಕೆಲಸ ಮಾಡುವ ಯಾವುದೇ ಉದ್ದೇಶ ತಮಗಿಲ್ಲದ ಕಾರಣ, ಮುಂದಿನ ಚಿತ್ರದಲ್ಲಿ ಡಿಸ್ಕೌಂಟ್ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅವರ ವಾದ ಆಗಿತ್ತು. ಏನೇ ಇದ್ದರೂ ತಮಗೆ ತಕ್ಷಣವೇ ಸಂಪೂರ್ಣ ನಗದು ಪರಿಹಾರ ಸಿಗಬೇಕು ಎಂದು ಎಕ್ಸೆಲ್ ಸಂಸ್ಥೆ ಪಟ್ಟು ಹಿಡಿದಿತ್ತು.

ರಣವೀರ್ ಸಿಂಗ್ ಅಸಮಾಧಾನಕ್ಕೆ ಕಾರಣವೇನು?

ಮತ್ತೊಂದೆಡೆ, ರಣವೀರ್ ಸಿಂಗ್ ಆಪ್ತರ ಪ್ರಕಾರ ಅವರದ್ದೇ ಆದ ಬೇರೆ ವಾದವಿದೆ. ರಣವೀರ್ ಅವರ ಕೆರಿಯರ್ ಕೊಂಚ ಡಲ್ ಆಗಿದ್ದ ಸಮಯದಲ್ಲಿ ಎಕ್ಸೆಲ್ ಸಂಸ್ಥೆಯು ಅವರ ಬದಲಿಗೆ ಹೃತಿಕ್ ರೋಷನ್ ಸೇರಿದಂತೆ ಇತರ ನಟರನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು, ಇದು ರಣವೀರ್‌ಗೆ ಬೇಸರ ತರಿಸಿತ್ತು. ನಿರ್ಮಾಣ ಸಂಸ್ಥೆಗೆ ತಮ್ಮ ಮೇಲೆ ಸಂಪೂರ್ಣ ಭರವಸೆ ಇಲ್ಲ ಮತ್ತು ಚಿತ್ರದ ಸ್ಕ್ರಿಪ್ಟ್ ಕೂಡ ಅಷ್ಟೊಂದು ಬಲಿಷ್ಠವಾಗಿಲ್ಲದ ಕಾರಣ ಅವರು ಚಿತ್ರದಿಂದ ಹೊರನಡೆಯುವ ತೀರ್ಮಾನ ತಗೆದುಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು?

ಸದ್ಯ’ಎಫ್‌ಡಬ್ಲ್ಯೂಐಸಿಇ’ ಒಕ್ಕೂಟವು ರಣವೀರ್ ವಿರುದ್ಧ ಅಸಹಕಾರ ಆದೇಶ ಹೊರಡಿಸಿರುವುದರಿಂದ ಈ ವಿವಾದ ಮತ್ತಷ್ಟು ಕಠಿಣ ಸ್ವರೂಪ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Trupti Bhatt IPS: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅನೇಕರ ಕನಸಾದ ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ವರ್ಷಗಳ ಕಾಲ ಸತತ ಪರಿಶ್ರಮ ಪಟ್ಟರೂ ಹಲವರಿಗೆ ಈ ಕನಸು ಕೈಗೂಡುವುದಿಲ್ಲ. ಆದರೆ ಉತ್ತರಾಖಂಡದ ಅಲ್ಮೋರಾ ಮೂಲದ ತೃಪ್ತಿ ಭಟ್ ತಮ್ಮ ಅಸಾಧಾರಣ ಪ್ರತಿಭೆ, ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಮೂಲಕ ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IPS ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇನ್ನೂ ವಿಶೇಷವೆಂದರೆ, ನಾಗರಿಕ ಸೇವೆಯ ಗುರಿಗಾಗಿ ಅವರು ISRO ಸೇರಿ ಒಟ್ಟು 16 ಸರ್ಕಾರಿ ಉದ್ಯೋಗಗಳ ಆಫರ್‌ಗಳನ್ನು ತಿರಸ್ಕರಿಸಿದ್ದರು.

ಶಿಕ್ಷಕರ ಕುಟುಂಬದಿಂದ ಬಂದ ಪ್ರತಿಭಾವಂತ ಯುವತಿ:

ತೃಪ್ತಿ ಭಟ್ ಶಿಕ್ಷಕರ ಕುಟುಂಬದಲ್ಲಿ ಜನಿಸಿ ಬೆಳೆದವರು. ತಂದೆ-ತಾಯಿ ಇಬ್ಬರೂ ಶಿಕ್ಷಣ ಕ್ಷೇತ್ರದಲ್ಲಿದ್ದ ಕಾರಣ ಬಾಲ್ಯದಿಂದಲೇ ಮನೆಯಲ್ಲಿ ಓದಿನ ವಾತಾವರಣವಿತ್ತು. ನಾಲ್ಕು ಸಹೋದರ-ಸಹೋದರಿಯರಲ್ಲಿ ಹಿರಿಯರಾದ ತೃಪ್ತಿ, ಅಲ್ಮೋರಾದ ಬಿರ್ಶೆಬಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಕೇಂದ್ರೀಯ ವಿದ್ಯಾಲಯದಲ್ಲಿ ಪಿಯುಸಿ ಮುಗಿಸಿ, ಪ್ರತಿಷ್ಠಿತ ಪಂತನಗರ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಇಂಜಿನಿಯರಿಂಗ್ ನಂತರ ಅವರು ಎನ್‌ಟಿಪಿಸಿ (NTPC) ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು.

ಡಾ. ಎಪಿಜೆ ಅಬ್ದುಲ್ ಕಲಾಂ ಭೇಟಿಯಿಂದ ಬದಲಾದ ಬದುಕು:

ತೃಪ್ತಿ ಭಟ್ ಅವರ ಜೀವನದಲ್ಲಿ ಮಹತ್ವದ ತಿರುವು ತಂದದ್ದು ಭಾರತದ ಮಾಜಿ ರಾಷ್ಟ್ರಪತಿ ಹಾಗೂ “ಮಿಸೈಲ್ ಮ್ಯಾನ್” ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭೇಟಿ. 9ನೇ ತರಗತಿಯಲ್ಲಿ ಇದ್ದಾಗ ತೃಪ್ತಿಗೆ ಡಾ. ಕಲಾಂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆ ವೇಳೆ ಅವರು ನೀಡಿದ ಕೈಬರಹದ ಪ್ರೇರಣಾದಾಯಕ ಪತ್ರ ತೃಪ್ತಿ ಅವರ ಮನಸ್ಸಿನಲ್ಲಿ ದೇಶಸೇವೆಯ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿತು. ಆ ಕ್ಷಣದಿಂದಲೇ ಅವರು ದೇಶಕ್ಕೆ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿದರು.

ISRO ಸೇರಿ 16 ಸರ್ಕಾರಿ ಉದ್ಯೋಗ ತಿರಸ್ಕಾರ:

ನಾಗರಿಕ ಸೇವೆಗೆ ಸೇರುವ ಕನಸನ್ನು ಸಾಕಾರಗೊಳಿಸಲು ತೃಪ್ತಿ ಭಟ್ ಹಲವು ಆಕರ್ಷಕ ಸರ್ಕಾರಿ ಉದ್ಯೋಗಗಳನ್ನು ತಿರಸ್ಕರಿಸಿದರು. ವರದಿಗಳ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ಅವರಿಗೆ 16 ಸರ್ಕಾರಿ ಉದ್ಯೋಗಗಳ ಆಫರ್ ಬಂದಿದ್ದವು. ಆದರೆ IPS ಅಧಿಕಾರಿಯಾಗಬೇಕೆಂಬ ಏಕೈಕ ಗುರಿ ಹೊಂದಿದ್ದ ತೃಪ್ತಿ, ಎಲ್ಲ ಅವಕಾಶಗಳನ್ನು ಬದಿಗಿಟ್ಟು UPSC ತಯಾರಿಯತ್ತ ಸಂಪೂರ್ಣ ಗಮನ ಹರಿಸಿದರು.

ಮೊದಲ ಪ್ರಯತ್ನದಲ್ಲೇ UPSC ಕ್ಲಿಯರ್:

ತಮ್ಮ ಕಠಿಣ ಪರಿಶ್ರಮದ ಫಲವಾಗಿ, ತೃಪ್ತಿ ಭಟ್ 2013ರ UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಾದ್ಯಂತ 165ನೇ ರ‍್ಯಾಂಕ್ ಪಡೆದು ಭಾರತೀಯ ಪೊಲೀಸ್ ಸೇವೆಗೆ (IPS) ಆಯ್ಕೆಯಾದರು. ವಿಶೇಷವೆಂದರೆ, ಅವರಿಗೆ ತಮ್ಮದೇ ತವರು ರಾಜ್ಯವಾದ ಉತ್ತರಾಖಂಡ ಕೇಡರ್ ದೊರಕಿತು. ಮೊದಲ ಪ್ರಯತ್ನದಲ್ಲೇ ಸಾಧಿಸಿದ ಈ ಯಶಸ್ಸು ಅನೇಕ ಯುವಕರಿಗೆ ಪ್ರೇರಣೆಯಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಮುಖ ಹುದ್ದೆಗಳಲ್ಲಿ ಸೇವೆ:

IPS ಅಧಿಕಾರಿಯಾದ ಬಳಿಕ ತೃಪ್ತಿ ಭಟ್ ಉತ್ತರಾಖಂಡದಲ್ಲಿ ಹಲವು ಪ್ರಮುಖ ಮತ್ತು ಸವಾಲಿನ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರು ವಹಿಸಿದ್ದ ಪ್ರಮುಖ ಹುದ್ದೆಗಳು:

  • ಡೆಹ್ರಾಡೂನ್ ಪೊಲೀಸ್ ಸೂಪರಿಂಟೆಂಡೆಂಟ್ (SP)
  • ಚಮೋಲಿ ಪೊಲೀಸ್ ಸೂಪರಿಂಟೆಂಡೆಂಟ್ (SP)
  • ತೆಹ್ರಿ ಗರ್ವಾಲ್ SDRF ಕಮಾಂಡೆಂಟ್
  • ಡೆಹ್ರಾಡೂನ್ ಗುಪ್ತಚರ ಮತ್ತು ಭದ್ರತಾ ವಿಭಾಗದ SP

ಯುವ ಪೀಳಿಗೆಗೆ ಪ್ರೇರಣೆ:

ತೃಪ್ತಿ ಭಟ್ ಅವರ ಯಶೋಗಾಥೆ ಇಂದಿನ ಯುವ ಪೀಳಿಗೆಗೆ, ವಿಶೇಷವಾಗಿ ಮಹಿಳೆಯರಿಗೆ ದೊಡ್ಡ ಪ್ರೇರಣೆ. ಸ್ಪಷ್ಟ ಗುರಿ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಯಾವುದೇ ಕನಸನ್ನಾದರೂ ನನಸಾಗಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link