ಟೆಹ್ರಾನ್, ಮಾರ್ಚ್ 20: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ (Iran War) ಪ್ರಮುಖ ನಗರಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕ ವೈಮಾನಿಕ ದಾಳಿ ನಡೆಸುತ್ತಿದೆ. ಒಂದೊಂದಾಗಿ ಕಮಾಂಡ್‌ನ ಸೇನೆಯ ಪ್ರಮುಖ ನಾಯಕರನ್ನು ಹತ್ಯೆ ಮಾಡುತ್ತಿದೆ. ಇತ್ತೀಚೆಗೆ, ಇಸ್ರೇಲ್ ಮತ್ತೊಮ್ಮೆ ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ಕೂಡ ಅಲಿ ಮೊಹಮ್ಮದ್ ನೈನಿಯವರ ಸಾವನ್ನು ದೃಢಪಡಿಸಿದೆ.
ಅಲಿ ಮೊಹಮ್ಮದ್ ನೈನಿ ಸೇರಿದಂತೆ ತನ್ನ ನಾಯಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿದೆ. ಅಲಿ ಮೊಹಮ್ಮದ್ ನೈನಿ ಅವರ ಸಾವಿನಿಂದ ತನ್ನ ಪಡೆಗಳ ನೈತಿಕತೆ ದುರ್ಬಲಗೊಳ್ಳುವುದಿಲ್ಲ ಎಂದು ಇರಾನ್ ಹೇಳಿದೆ. ಇರಾನ್ ಕೂಡ ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ ಅವುಗಳ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ಮುಂದುವರಿಸಿದೆ.
ಇರಾನ್ ಯುಎಇ, ಕತಾರ್ ಮತ್ತು ಅಬುಧಾಬಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿಗಳನ್ನು ನಾಶ ಮಾಡುತ್ತಿದೆ. ಇರಾನ್ ವಿಶೇಷವಾಗಿ ತೈಲ ಮತ್ತು ಅನಿಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡಿದೆ. ಇರಾನ್ ಮತ್ತೊಮ್ಮೆ ದುಬೈ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನಿನ ಕ್ಷಿಪಣಿ ಇಸ್ರೇಲ್‌ನಲ್ಲಿರುವ IIFA ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದೆ. ಇದರಿಂದ ಎಚ್ಚೆತ್ತ ಇಸ್ರೇಲ್ ತಕ್ಷಣವೇ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಿತು. ಇರಾನ್ ದುಬೈನಲ್ಲಿರುವ ಕುವೈತ್‌ನಲ್ಲಿರುವ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ಮಿನಾ ಅಲ್ ಅಹ್ಮದಿ ಮೇಲೆಯೂ ದಾಳಿ ಮಾಡಿದೆ.
ಪಶ್ಚಿಮ ಏಷ್ಯಾ ಯುದ್ಧವು ಪ್ರಪಂಚದಾದ್ಯಂತ ಸುಮಾರು 85 ದೇಶಗಳ ಮೇಲೆ ಪರಿಣಾಮ ಬೀರಿತು. ಈ ಯುದ್ಧದ ನಂತರ ಗಲ್ಫ್ ದೇಶಗಳಿಂದ ಜಗತ್ತಿಗೆ ತೈಲ ಪೂರೈಕೆ ನಿಂತುಹೋಯಿತು. ಇದರ ಪರಿಣಾಮವಾಗಿ ಸುಮಾರು 85 ಪೆಟ್ರೋಲಿಯಂ ಮತ್ತು ಅನಿಲದ ಕೊರತೆ ಉಂಟಾಯಿತು. ಇದರಿಂದಾಗಿ ಅನೇಕ ದೇಶಗಳಲ್ಲಿ ಅವುಗಳ ಬೆಲೆಗಳು ಹೆಚ್ಚಾಯಿತು. ಭಾರತದಲ್ಲಿ ವಿದ್ಯುತ್ ಪೆಟ್ರೋಲ್ ಮತ್ತು ಕೈಗಾರಿಕಾ ಡೀಸೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಈ ಯುದ್ಧವು ಇರಾನ್ ಮತ್ತು ಇಸ್ರೇಲ್‌ಗೆ ಹಾಗೂ ಅಮೆರಿಕಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ. ಇರಾನಿನ ದಾಳಿಯಿಂದಾಗಿ ಅಮೆರಿಕ ಇಲ್ಲಿಯವರೆಗೆ ಸುಮಾರು 16 ಯುದ್ಧವಿಮಾನಗಳನ್ನು ಕಳೆದುಕೊಂಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರು ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಮಣಿರತ್ನಂ ಅವರು. ಈ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ. ಈ ಚಿತ್ರ ಇನ್ನು ಕೆಲವೇ ವಾರಗಳಲ್ಲಿ ಶೂಟಿಂಗ್ ಆರಂಭಿಸಲಿದೆ.
ಮಣಿರತ್ನಂ ಅವರು ‘ಥಗ್ ಲೈಫ್’ ಹೆಸರಿನ ಸಿನಿಮಾ ಮಾಡಿದರು. ಕಮಲ್ ಹಾಸನ್ ಜೊತೆ ಮಾಡಿದ ಈ ಚಿತ್ರ ಅಟ್ಟರ್ ಫ್ಲಾಪ್ ಆಯಿತು. ಕರ್ನಾಟಕದಲ್ಲಿ ಈ ಚಿತ್ರ ಬಿಡುಗಡೆಯನ್ನೇ ಕಂಡಿಲ್ಲ. ಅದಕ್ಕೂ ಮೊದಲು ಬಂದ ‘ಪೊನ್ನಿಯೆನ್ ಸೆಲ್ವನ್’ ಹಾಗೂ ‘ಪೊನ್ನಿಯೆನ್ ಸೆಲ್ವನ್ 2’ ಸಿನಿಮಾಗಳು ತಮಿಳುನಾಡಿನಲ್ಲಿ ಮೆಚ್ಚುಗೆ ಪಡೆಯಿತು. ಈಗ ಅವರು ಗೆಲ್ಲುವ ಕನಸಿನೊಂದಿಗೆ ಹೊಸ ಚಿತ್ರ ಘೋಷಣೆ ಮಾಡಿರೋದು ವಿಶೇಷ.
ಮಣಿರತ್ನಂ ಅವರು ಹಲವು ಅದ್ಭುತ ಚಿತ್ರಗಳನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಅವರು ಇತ್ತೀಚೆಗೆ ಕೊಂಚ ಚಾರ್ಮ್ ಕಳೆದುಕೊಂಡಿದ್ದಾರೆ. ಆದರೆ, ಈ ಹೊಸ ಸಿನಿಮಾ ಮೂಲಕ ಅವರಿಗೆ ಗೆಲುವು ಸಿಗುವ ನಿರೀಕ್ಷೆ ಇದೆ.
‘ಮದ್ರಾಸ್ ಟಾಕೀಸ್’ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದು ಸಂಸ್ಥೆಯ 23ನೇ ಸಿನಿಮಾ. ಸಾಯಿ ಪಲ್ಲವಿ ಅವರು ಸದ್ಯ ‘ರಾಮಾಯಣ’ ಸಿನಿಮಾ ಶೂಟ್ ಅಲ್ಲಿ ಬ್ಯುಸಿ ಇದ್ದು, ಶೀಘ್ರವೇ ಮರಳಲಿದ್ದಾರೆ. ವಿಜಯ್ ಸೇತುಪತಿ ಅವರು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲು ವಿಜಯ್ ಹಾಗೂ ಮಣಿರತ್ನಂ ಅವರು ‘ಚೆಕ್ಕ ಚಿವಂತ ವಾನಮ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.
ಸಾಯಿ ಪಲ್ಲವಿ ಅವರನ್ನು ಮಣಿರತ್ನಂ ಅವರು ಈ ಮೊದಲು ಹೊಗಳಿದ್ದರು. ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡುತ್ತೇನೆ ಎಂದು ಮಣಿರತ್ನಂ ಹೇಳಿದ್ದರು. ಈಗ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಓರ್ವ ಅದ್ಭುತ ನಟಿ. ಅವರು ಓರ್ವ ಅದ್ಭುತ ನಿರ್ದೇಶಕನ ಜೊತೆ ಸೇರುತ್ತಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚುತ್ತದೆ.
ತೆಲಂಗಾಣ ಸರ್ಕಾರವು ನಿನ್ನೆಯಷ್ಟೆ (ಮಾರ್ಚ್ 19) ‘ಗದ್ದರ್ ಚಲನಚಿತ್ರ ಪ್ರಶಸ್ತಿ’ (Gaddar) ಎರಡನೇ ಆವೃತ್ತಿಯ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಯ್ತು. ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಇನ್ನೂ ಕೆಲವು ಗಣ್ಯರುಗಳು ಅತ್ಯುತ್ತಮ ನಟ, ನಟಿ ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯ್ತು. ಕಾರ್ಯಕ್ರಮ ಚೆನ್ನಾಗಿ ನಡೆಯಿತಾದರೂ ಎರಡು ಪ್ರಮುಖ ವಿಷಯಗಳು ತುಸು ತಡವಾಗಿ ವರದಿ ಆಗಿವೆ. ಕಾರ್ಯಕ್ರದ ವೇಳೆ ರಶ್ಮಿಕಾ ಮಂದಣ್ಣ ಅವರ ಬೌನ್ಸರ್ ಕಿರಿಕ್ ಮಾಡಿಕೊಂಡಿದ್ದಾರೆ ಹಾಗೂ ರಾಜಮೌಳಿ ಅವರ ತಂದೆ ಖ್ಯಾತ ಕತೆಗಾರ ವಿಯೇಂದ್ರ ಪ್ರಸಾದ್ ಅವರಿಗೆ ಅಪಮಾನ ನಡೆದಿದೆ ಎಂದು ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನಟಿ ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ಬೌನ್ಸರ್ ಒಬ್ಬರು ತೆಲಂಗಾಣದ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (FDC) ಅಧ್ಯಕ್ಷ ದಿಲ್ ರಾಜು ಅವರ ಆಪ್ತ ಸಹಾಯಕರೊಂದಿಗೆ ಜಗಳ ಮಾಡಿದ್ದಾರೆಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ದಿಲ್ ರಾಜು ಅಕ್ಕ-ಪಕ್ಕ ಕೂತಿದ್ದರು. ಆದರೆ ದಿಲ್ ರಾಜು ಅವರ ಆಪ್ತರನ್ನು ಅಭಿಮಾನಿಯೆಂದು ತಪ್ಪಾಗಿ ಭಾವಿಸಿ ರಶ್ಮಿಕಾರ ಬೌನ್ಸರ್ ಕಿರಿಕ್ ಮಾಡಿದ್ದಾರೆ ಎನ್ನಲಾಗಿದ್ದು, ಬೌನ್ಸರ್ ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ಅಲ್ಲಿನ ಗಣ್ಯರ ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿರಲಿಲ್ಲ ಎನ್ನಲಾಗಿದೆ. ಮಾಧ್ಯಮದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವವರೆಗೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಖ್ಯಾತ ಚಿತ್ರಕಥೆಗಾರರೂ ಆಗಿರುವ ಹಾಗೂ ರಾಜಮೌಳಿ ಅವರ ತಂದೆಯೂ ಆಗಿರುವ ಸಂಸದ ವಿಜಯೇಂದ್ರ ಪ್ರಸಾದ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಎಡವಟ್ಟಿನಿಂದಾಗಿ ಸಮಾರಂಭದಿಂದ ಅರ್ಧಕ್ಕೇ ಹೊರನಡೆದರು. ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದ ಮುಂಬೈ ಮೂಲದ ಕಂಪನಿಗೆ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅವರು ವಿಜಯೇಂದ್ರ ಪ್ರಸಾದ್ ಅವರನ್ನು ನಟ ಆರ್ ನಾರಾಯಣ ಮೂರ್ತಿ ಎಂದು ತಪ್ಪಾಗಿ ಭಾವಿಸಿ, ಅದೇ ಹೆಸರಿನಿಂದ ಕರೆದರು. ಇದರಿಂದ ಬೇಸರಗೊಂಡ ವಿಜಯೇಂದ್ರ ಪ್ರಸಾದ್ ಅವರು ವೇದಿಕೆಯಿಂದ ಕೋಪದಿಂದಲೇ ನಿರ್ಗಮಿಸಿದರು ಎನ್ನಲಾಗಿದೆ.
‘ಎನ್.ಟಿ.ಆರ್ ಜೀವಮಾನ ಸಾಧನೆ’ಯನ್ನು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ನೀಡಲಾಯ್ತು. ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ ಅವರು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರವನ್ನು ಶ್ಲಾಘಿಸಿದರು. ಚಲನಚಿತ್ರ ರಂಗಕ್ಕೆ ಸರ್ಕಾರ ನೀಡುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಾವಿದರನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ಆಂಧ್ರಪ್ರದೇಶ ಸರ್ಕಾರವು ತೆಲಂಗಾಣವನ್ನು ನೋಡಿ ಕಲಿಯಬೇಕು ಎಂದು ಸಹ ಅಭಿಪ್ರಾಯಪಟ್ಟರು.
ಮುಂಬೈ, ಮಾರ್ಚ್ 20: ಮಹಾರಾಷ್ಟ್ರದ ನಾಸಿಕ್‌ನಲ್ಲಿ (Nasik) ಆಧ್ಯಾತ್ಮಿಕತೆಯ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಭಾವಿ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ನೌಕಾ ಅಧಿಕಾರಿಯಾಗಿರುವ 67 ವರ್ಷದ ಅಶೋಕ್ ಖರತ್ ತನಗೆ ಮಾದಕ ದ್ರವ್ಯ ನೀಡಿ, ವಶಪಡಿಸಿಕೊಂಡು, ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದಾಗ ಶಾಕಿಂಗ್ ಸತ್ಯಗಳು ಬೆಳಕಿಗೆ ಬಂದಿವೆ.
ಲೈಂಗಿಕ ಶೋಷಣೆ ಕೇವಲ ಒಬ್ಬ ಮಹಿಳೆಗೆ ಸೀಮಿತವಾಗಿಲ್ಲ ಎಂಬ ಸಂಗತಿ ಪೊಲೀಸ್ ತನಿಖೆ ಬಹಿರಂಗಪಡಿಸಿದೆ. ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವುದರಿಂದ ತನ್ನನ್ನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುವ ಅಶೋಕ್ ಖರತ್, ಮಹಿಳೆಯರಿಗೆ ಅವರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ತನ್ನ ಕಚೇರಿಗೆ ಕರೆಸುತ್ತಿದ್ದರು. ಅಲ್ಲಿಗೆ ಬಂದ ನಂತರ ಮಾದಕ ದ್ರವ್ಯವನ್ನು ನೀಡುವ ಮೂಲಕ ಅವರನ್ನು ಸಮ್ಮೋಹನಗೊಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ನಂತರ ಆ ಮಹಿಳೆಯರಲ್ಲಿ ಭಯವನ್ನು ಹುಟ್ಟುಹಾಕುವ ಮೂಲಕ, ಅವರ ಗಂಡಂದಿರ ಸಾವಿನ ಬಗ್ಗೆ ಬೆದರಿಕೆ ಹಾಕುವ ಮೂಲಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು. ಇದಿಷ್ಟೇ ಅಲ್ಲ, ಅಶೋಕ್ ಖರತ್ ತನ್ನ ಕಚೇರಿಯೊಳಗೆ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅವರ ಮೇಲೆ ದಾಳಿ ನಡೆದ ವೇಳೆ ಆತ ಚಿತ್ರೀಕರಿಸಿದ 58 ಮಹಿಳೆಯರನ್ನು ಒಳಗೊಂಡ ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ವಿಷಯದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಈ ಆಶೋಕ್ ಖರತ್ ದೆಹಲಿಯಿಂದ ಮಹಾರಾಷ್ಟ್ರದ ಸರ್ಕಾರದವರೆಗೆ ಅನೇಕ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆಂದು ವದಂತಿಗಳಿವೆ. ಉದ್ಯಮಿಗಳು, ರಾಜಕಾರಣಿಗಳು, ಸೆಲಬ್ರಿಟಿಗಳಿಗೆ ಸಂಖ್ಯಾಶಾಸ್ತ್ರ ಹೇಳುವ ಜ್ಯೋತಿಷಿಯೆಂದು ಪರಿಚಿತರಾಗಿದ್ದ ಅಶೋಕ್ ಖರತ್ ದೊಡ್ಡ ಜಾಲವನ್ನೇ ಹೊಂದಿದ್ದರು. ನಾಸಿಕ್‌ನ ಸಿನ್ನಾರ್‌ನಲ್ಲಿರುವ ಶ್ರೀ ಈಶಾನ್ಯೇಶ್ವರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರಾಗಿ, ಖರತ್ ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ವ್ಯಾಪಾರ ಉದ್ಯಮಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಗುರುತಿಸಲ್ಪಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ಅಪ್ರೆಂಟಿಸ್ ಹುದ್ದೆಗಳಿಗೆ ದೊಡ್ಡ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನವು ಒಟ್ಟು 1,600 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಎಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅವಕಾಶಗಳನ್ನು ನೀಡುತ್ತದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಪ್ರತಿಷ್ಠಿತ PSU ನಲ್ಲಿ ಕೆಲಸದ ಅನುಭವವನ್ನು ಪಡೆಯಬಹುದು.
ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ಪ್ರತ್ಯೇಕ ಹುದ್ದೆಗಳು:
ಈ ನೇಮಕಾತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಪದವೀಧರ ಅಪ್ರೆಂಟಿಸ್‌ಗಳಿಗೆ ಆಗಿದ್ದು, ಗಣಿಗಾರಿಕೆ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್‌ನಂತಹ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಎರಡನೇ ವರ್ಗವು ತಂತ್ರಜ್ಞ ಅಪ್ರೆಂಟಿಸ್‌ಗಳಿಗೆ ಆಗಿದ್ದು, ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಒಟ್ಟು ಹುದ್ದೆಗಳಲ್ಲಿ ಗಣಿಗಾರಿಕೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಪಾಲನ್ನು ಹೊಂದಿದ್ದಾರೆ.
ಅರ್ಹತೆಗಳ ವಿವರ:
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ವ್ಯಾಪಾರದಲ್ಲಿ ಬಿಇ/ಬಿ.ಟೆಕ್ ಅಥವಾ ಡಿಪ್ಲೊಮಾ ಹೊಂದಿರಬೇಕು. NATS ಪೋರ್ಟಲ್‌ನಲ್ಲಿ ನೋಂದಣಿ ಕೂಡ ಕಡ್ಡಾಯವಾಗಿದೆ. 2023, 2024, ಅಥವಾ 2025 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಈ ಹಿಂದೆ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದವರು ಅಥವಾ ಒಂದು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವವರು ಅರ್ಹರಾಗಿರುವುದಿಲ್ಲ.
ವಿದ್ಯಾರ್ಥಿವೇತನ ಮತ್ತು ಸೌಲಭ್ಯಗಳು:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಸಮಯದಲ್ಲಿ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಪದವೀಧರ ಅಪ್ರೆಂಟಿಸ್‌ಗಳು ಸುಮಾರು 9,000ರೂ. ಮತ್ತು ಡಿಪ್ಲೊಮಾ ಪಡೆದವರಿಗೆ ತಿಂಗಳಿಗೆ 8,000ರೂ. ನೀಡಲಾಗುತ್ತದೆ. ಈ ಮೊತ್ತವನ್ನು ಭಾರತ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ.
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯಿಂದ ಆಯ್ಕೆ ಮಾಡಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಗಳಿಸಿದರೆ, ಹಿರಿಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲು NATS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ, ಅಧಿಕೃತ SECL ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅಂತಿಮವಾಗಿ, ಫಾರ್ಮ್ ಅನ್ನು ಸಲ್ಲಿಸಿ ಮತ್ತು ಪ್ರಿಂಟ್ ಕಾಪಿ ತೆಗೆದಿಟ್ಟಯಕೊಳ್ಳಿ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಬ್ಯಾಂಕಿನಲ್ಲಿ ಕೆಲಸಪಡೆಯುವುದು ಸುಲಭದ ಮಾತಲ್ಲ. ಇದುವರೆಗೆ ಅಭ್ಯರ್ಥಿಗಳು ಕೇವಲ ಕಠಿಣ ಅಧ್ಯಯನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಈಗ ಬ್ಯಾಂಕಿಂಗ್ ವಲಯವು ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಪರಿಶೀಲಿಸುವುದು ಈಗ ಕಡ್ಡಾಯವಾಗಿದೆ.
ಹಣಕಾಸಿನ ಶಿಸ್ತಿಗೆ ಆದ್ಯತೆ:
ಸಾರ್ವಜನಿಕರ ಹಣ ಮತ್ತು ಬ್ಯಾಂಕಿನ ಆರ್ಥಿಕ ವಹಿವಾಟುಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಸ್ಥಾನಕ್ಕೆ ಬರುವವರು ಸ್ವಚ್ಛವಾದ ಹಣಕಾಸಿನ ದಾಖಲೆಯನ್ನು ಹೊಂದಿರಬೇಕು ಎಂಬುದು ಬ್ಯಾಂಕುಗಳ ಆಶಯವಾಗಿದೆ. ಒಬ್ಬ ಅಭ್ಯರ್ಥಿಯು ಈ ಹಿಂದೆ ಪಡೆದ ಸಾಲವನ್ನು ಮರುಪಾವತಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ, ಅಂತಹವರ ವಿಶ್ವಾಸಾರ್ಹತೆಯ ಮೇಲೆ ಬ್ಯಾಂಕುಗಳು ಸಂಶಯ ವ್ಯಕ್ತಪಡಿಸುತ್ತವೆ. ಕಳಪೆ ಸಾಲದ ದಾಖಲೆ ಹೊಂದಿರುವವರಿಗೆ ಕೆಲಸ ನೀಡುವುದು ಬ್ಯಾಂಕಿನ ದೃಷ್ಟಿಯಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಯಾರ ಮೇಲೆ ಈ ನಿಯಮದ ಪರಿಣಾಮ?
ಈ ಹೊಸ ಬದಲಾವಣೆಯು ಬ್ಯಾಂಕಿಂಗ್ ಪರೀಕ್ಷೆಗಳ ಮೂಲಕ ಉದ್ಯೋಗ ಪಡೆಯಲು ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ. ವಿಶೇಷವಾಗಿ ಈ ಹಿಂದೆ ಸಾಲ ಪಡೆದು ಇಎಂಐ (EMI) ಪಾವತಿಸದವರು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಉಳಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕಬಹುದು. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಸಿಬಿಲ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಥವಾ ತೃಪ್ತಿದಾಯಕ ವಿವರಣೆ ನೀಡಲು ವಿಫಲರಾದಲ್ಲಿ, ಅಂತಿಮವಾಗಿ ಆಯ್ಕೆಯಾಗಿದ್ದರೂ ಸಹ ಉದ್ಯೋಗದ ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು.
ಆದರೆ, ಶಿಕ್ಷಣಕ್ಕಾಗಿ ಸಾಲ (Education Loan) ಪಡೆದ ವಿದ್ಯಾರ್ಥಿಗಳಿಗೆ ಬ್ಯಾಂಕುಗಳು ಸ್ವಲ್ಪ ಮಟ್ಟಿನ ರಿಯಾಯಿತಿಯನ್ನು ನೀಡಿವೆ. ಕೇವಲ ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣ ಸಾಲದ ಮರುಪಾವತಿ ವಿಳಂಬವಾಗಿದ್ದರೆ ಮತ್ತು ಅಭ್ಯರ್ಥಿಯು ಉದ್ದೇಶಪೂರ್ವಕವಾಗಿ ಸಾಲಗಾರನಾಗಿ ಉಳಿದಿಲ್ಲದಿದ್ದರೆ, ಅಂತಹ ಸಂದರ್ಭಗಳನ್ನು ಮಾನವೀಯ ನೆಲೆಯಲ್ಲಿ ಪರಿಶೀಲಿಸಲಾಗುತ್ತದೆ. ಶಿಕ್ಷಣ ಸಾಲದ ವಿಷಯದಲ್ಲಿ ಬ್ಯಾಂಕುಗಳು ಮೃದು ಧೋರಣೆ ತಳೆಯುವುದಾಗಿ ತಿಳಿಸಿವೆ.
ಅಭ್ಯರ್ಥಿಗಳಿಗೆ ತಜ್ಞರ ಕಿವಿಮಾತು:
ಬ್ಯಾಂಕಿಂಗ್ ವಲಯದ ಉದ್ಯೋಗಾಕಾಂಕ್ಷಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ತಮ್ಮ ಹಣಕಾಸಿನ ಶಿಸ್ತಿನ ಬಗ್ಗೆಯೂ ಜಾಗರೂಕರಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಭ್ಯರ್ಥಿಗಳು ನಿಯಮಿತವಾಗಿ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಹಳೆಯ ಸಾಲದ ಬಾಕಿಗಳಿದ್ದರೆ ತಕ್ಷಣ ಪಾವತಿಸಿ ಬ್ಯಾಂಕಿನಿಂದ ‘ಬಾಕಿ ಇಲ್ಲದ ಪ್ರಮಾಣಪತ್ರ’ (NOC) ಪಡೆಯುವುದು ಸೂಕ್ತ. ಇದರಿಂದ ಭವಿಷ್ಯದಲ್ಲಿ ಉದ್ಯೋಗದ ಹಂತದಲ್ಲಿ ಎದುರಾಗಬಹುದಾದ ತಾಂತ್ರಿಕ ಅಡೆತಡೆಗಳನ್ನು ತಪ್ಪಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರೇಕ್ಷಕರ ನೆಚ್ಚಿನ ‘ಉದಯ’ ಟಿವಿ ಈಗ ‘ಸನ್ ಉದಯ’ (Sun Udaya) ಎಂಬ ಹೊಸ ಹೆಸರಿನೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆರಂಭ. ಉದಯ ಟಿವಿಯು ಯುಗಾದಿಯ ದಿನವೇ ‘ಸನ್ ಉದಯ’ವಾಗಿ ಬದಲಾಗಿದೆ. ಕಳೆದ ಮೂರು ದಶಕಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಈ ವಾಹಿನಿಯಲ್ಲಿ ಈಗ ಸಾಕಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ. ಅದರ ಮೊದಲ ಹಂತವಾಗಿ ಸೋಮವಾರದಿಂದ (ಮಾರ್ಚ್ 23) ಹೊಸ ಸೀರಿಯಲ್ ‘ಮೂಗುತಿ ಮಲ್ಲಿ’ (Muguthi Malli) ಪ್ರಸಾರ ಆರಂಭ ಆಗುತ್ತಿದೆ.
ಹೌದು, ಮಾರ್ಚ್ 23ರಿಂದ ಸೋಮವಾರದಿಂದ ಶನಿವಾರ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ಬರಲಿದೆ. ಇದೊಂದು ಲವ್ ಸ್ಟೋರಿ ಹೊಂದಿರುವ ಧಾರಾವಾಹಿ. ಶ್ರೀಮಂತರು ಎಂದರೆ ದೂರ ಓಡಿ ಹೋಗುವ ಹುಡುಗಿಯ ಕಥೆ ಇದು. ಕಷ್ಟದಲ್ಲಿ ಬೆಳೆದ ಮಲ್ಲಿ ಎಂಬ ಹುಡುಗಿ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ. ಆಕೆಯ ಮೇಲೆ ಶ್ರೀಮಂತ ಹುಡುಗನಿಗೆ ಲವ್ ಆದರೆ? ಅದೇ ಈ ಧಾರಾವಾಹಿಯ ಕಹಾನಿ.
ಮಲ್ಲಿಯ ಅಣ್ಣ ಉಂಡಾಡಿ ಗುಂಡ ಆದ್ದರಿಂದ ಮನೆ ಹೊಣೆಗಾರಿಕೆ ಆಕೆ ಹೆಗಲ ಮೇಲಿದೆ. ಅಪ್ಪನಿಂದ ಬಳುವಳಿಯಾಗಿ ಬಂದ ಅಡುಗೆ ಕೆಲಸವೇ ಈಕೆಯ ಕೈಹಿಡಿದಿದೆ. ಮನೆ ಮನೆಗೆ ಹೋಗಿ ಅಡುಗೆ ಮಾಡುವ ಮಲ್ಲಿಯ ಕೈಯಲ್ಲಿ ಅದೇನೋ ಜಾದೂ ಇದೆ. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿರೋದು ಎಂಬುದು ಅವಳ ನಂಬಿಕೆ. ಆದರೆ ಬಡವರನ್ನು ಕಣ್ಣೆತ್ತೆಯೂ ನೋಡದ ಶ್ರೀಮಂತ ಕುಟುಂಬದ ವಿರಾಜ್ಗೆ ಮಲ್ಲಿ ಮೇಲೆ ಪ್ರೀತಿ ಚಿಗುರುತ್ತದೆ.
ಮಸಾಲೆ ಕಂಪನಿ ನಡೆಸುವ, ಹಸಿವನ್ನೇ ಕಂಡಿದರ ಕುಟುಂಬದ ಹುಡುಗನೇ ಕಥಾನಾಯಕ ವಿರಾಜ್. ಮಲ್ಲಿಯನ್ನು ನೋಡಿದ ತಕ್ಷಣ ಅವನಿಗೆ ಪ್ರೀತಿ ಹುಟ್ಟುತ್ತದೆ. ಆದರೆ ಆಕೆಗೆ ಶ್ರೀಮಂತರನ್ನು ಕಂಡರೆ ಆಗುವುದಿಲ್ಲ. ಹೀಗಿರುವಾಗ ಮಲ್ಲಿ ಮತ್ತು ವಿರಾಜ್ ಲವ್ ಸ್ಟೋರಿ ಎತ್ತ ಸಾಗುತ್ತದೆ ಎಂಬುದನ್ನು ತಿಳಿಯಲು ಮಾರ್ಚ್ 23ರಿಂದ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ನೋಡಬೇಕು.
‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ಅಭಿನಯಿಸಿದ್ದ ತನುಜಾ ವೆಂಕಟೇಶ್ ಅವರು ‘ಮೂಗುತಿ ಮಲ್ಲಿ’ ಧಾರಾವಾಹಿಗೆ ನಾಯಕಿ ಆಗಿದ್ದಾರೆ. ‘ಅಂತರಪಟ’ ಖ್ಯಾತಿಯ ಚಂದನ್ ಗೌಡ ಅವರು ಹೀರೋ ಆಗಿದ್ದಾರೆ. ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್‌ಬಾಸ್ ಖ್ಯಾತಿಯ ಕನ್ನಡದ ನಟಿ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಮರೀನಾ, ಪುನೀತ್ ಮುಂತಾದವರು ಈ ಧಾರಾವಾಹಿಯ ಪಾತ್ರವರ್ಗದಲ್ಲಿ ಇದ್ದಾರೆ. ಆರವ್ ಕಾರ್ತಿಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಜಯ್ ರವಿ ಅವರು ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 20: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda Airport) ಮತ್ತೊಂದು ಗರಿಮೆಯನ್ನು ಮುಡಿಗೇರಿಸಿಕೊಂಡಿದೆ. ಕೆಂಪೇಗೌಡ ಏರ್ಪೋರ್ಟ್ ಬೆಂಗಳೂರು ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026ರಲ್ಲಿ ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ.
ಈ ಮನ್ನಣೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಮುಖ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವುದನ್ನು ಪುನರುಚ್ಚರಿಸುತ್ತದೆ. ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಶ್ವ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನ ಪಡೆದಿದೆ. ಆ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ, ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಬದ್ಧತೆಯನ್ನು ಎತ್ತಿಹಿಡಿದಿದೆ.
ಕೆಂಪೇಗೌಡ ಏರ್ಪೋರ್ಟ್ ಟ್ವೀಟ್
We’re happy to announce that BLR Airport has been recognised as the Best Regional Airport in India and South Asia for the third consecutive year at the Skytrax World Airport Awards 2026 held in London.
ವಿಮಾನ ನಿಲ್ದಾಣದ ಶ್ರೇಷ್ಠತೆಗೆ ಜಾಗತಿಕ ಮಾನದಂಡವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ‘ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್’, ಚೆಕ್-ಇನ್, ಆಗಮನ, ವರ್ಗಾವಣೆ, ಚಿಲ್ಲರೆ ವ್ಯಾಪಾರ, ಭದ್ರತೆ, ವಲಸೆ ಮತ್ತು ನಿರ್ಗಮನ ಸೇರಿದಂತೆ ಪ್ರಮುಖ ಅಂಶಗಳಲ್ಲಿ ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡುವ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಿರವಾದ ಕಾರ್ಯಕ್ಷಮತೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೆಂಪೇಗೌಡ ಏರ್ಪೋರ್ಟ್ ಇತ್ತೀಚಿನ ದಿನಗಳಲ್ಲಿ ಸತತವಾಗಿ ಜಾಗತಿಕ ಮನ್ನಣೆಗಳನ್ನು ಪಡೆಯುತ್ತಿದ್ದು, ನಾಲ್ಕನೇ ಬಾರಿಗೆ ‘ವಿಶ್ವದ ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ, ಟರ್ಮಿನಲ್ 2 ಸ್ಕೈಟ್ರಾಕ್ಸ್‌ನಿಂದ ‘5-ಸ್ಟಾರ್’ ರೇಟಿಂಗ್ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ದಾಖಲೆ ಬರೆದಿದೆ. ಹಾಗೆಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯಿಂದ ವಿಮಾನ ನಿಲ್ದಾಣ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ ಅತ್ಯುನ್ನತ ಮಟ್ಟದ 5ನೇ ಹಂತವನ್ನು ಮತ್ತು ಪ್ರವೇಶ ಸಾಧ್ಯತೆ ಮಾನ್ಯತೆಯ ಅಡಿಯಲ್ಲಿ 3ನೇ ಹಂತವನ್ನು ಸಾಧಿಸಿದೆ.
ಕೆಂಪೇಗೌಡ ಏರ್ಪೋರ್ಟ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಹೇಳಿದ್ದಿಷ್ಟು
ಇನ್ನು ಈ ಕುರಿತು ಕೆಂಪೇಗೌಡ ಏರ್ಪೋರ್ಟ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮಾತನಾಡಿದ್ದು, ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್‌ನಲ್ಲಿ ನಮಗೆ ಸತತವಾಗಿ ಸಂದ ಈ ಮಾನ್ಯತೆಯು ನಮ್ಮ ದೀರ್ಘಕಾಲೀನ ದೃಷ್ಟಿಕೋನ ಮತ್ತು ಪ್ರಯಾಣಿಕರ ಅನುಭವದ ಮೇಲೆ ನಾವು ಹೊಂದಿರುವ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ತಂಡ ಮತ್ತು ಸಹಭಾಗಿ ಸಂಸ್ಥೆಗಳ ಸಾಮೂಹಿಕ ಪ್ರಯತ್ನಕ್ಕೆ ಸಂದ ಜಯ ಎಂದರು.
ಆಧುನಿಕ ವಿಮಾನ ನಿಲ್ದಾಣದ ಅನುಭವ ಹೇಗಿರಬೇಕೆಂಬುದರ ಮಿತಿಯನ್ನು ಇವೆರೆಲ್ಲರೂ ಸದಾ ವಿಸ್ತರಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿನ್ಯಾಸ, ತಂತ್ರಜ್ಞಾನ ಮತ್ತು ಸುಸ್ಥಿರತೆಗಳನ್ನು ಒಗ್ಗೂಡಿಸಿ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಒದಗಿಸುವ ಭವಿಷ್ಯದ ನಿರ್ಮಾಣದತ್ತ ನಮ್ಮ ಗಮನವಿದೆ. ಈ ಪ್ರದೇಶದ ಪ್ರಮುಖ ಪ್ರಯಾಣ ಕೇಂದ್ರವಾಗಿ ಬೆಳೆಯುತ್ತಾ ನಮ್ಮ ಸ್ಥಾನವನ್ನು ಬಲಪಡಿಸುತ್ತಿರುವ ಈ ಸಂದರ್ಭದಲ್ಲಿ, ಸೇವೆ ಮತ್ತು ಅನುಭವದ ಗುಣಮಟ್ಟವನ್ನು ಸದಾ ಉನ್ನತ ಮಟ್ಟಕ್ಕೇರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಅವರು ಮಾತನಾಡಿ, ಸತತ ಮೂರನೇ ವರ್ಷ ಈ ಪ್ರಶಸ್ತಿಯನ್ನು ಗೆದ್ದಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನದ ಅದ್ಭುತ ಸಾಧನೆ. ಪ್ರಯಾಣಿಕರು ತೋರಿದ ಮೆಚ್ಚುಗೆಯನ್ನು ಎತ್ತಿತೋರಿಸುತ್ತದೆ. ಜೊತೆಗೆ, ಟರ್ಮಿನಲ್ 2 ವಿಮಾನ ನಿಲ್ದಾಣದ ಖ್ಯಾತಿಯನ್ನು ಬಲಪಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸ್ತುತ ಈ ಪ್ರದೇಶದ ಅತ್ಯಂತ ಗುರುತಿಸಬಹುದಾದ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳಲ್ಲಿ ಬಲವಾದ ಬೆಳವಣಿಗೆಯನ್ನು ಹೊಂದುತ್ತಿದೆ. 2025 ರಲ್ಲಿ 43.82 ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿ 520,985 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಿದೆ. ಸಂಪರ್ಕ ಜಾಲದ ವಿಸ್ತರಣೆ ಮತ್ತು ಮೂಲಸೌಕರ್ಯ ವರ್ಧನೆಗಳಿಂದ ಬೆಂಬಲಿತವಾಗಿರುವ ಈ ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಪ್ರಮುಖ ವರ್ಗಾವಣೆ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ಪ್ರಯಾಣಿಕರ ನಿರೀಕ್ಷೆಗಳೊಂದಿಗೆ ವಿಕಸನಗೊಳ್ಳುವ ವಿಭಿನ್ನ ವಿಮಾನ ನಿಲ್ದಾಣ ಅನುಭವವನ್ನು ಒದಗಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಬಿಐಎಎಲ್ ಕುರಿತು:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ಮೆಟ್ರಿಕ್‌ಗಳಲ್ಲಿ ಉತ್ತಮ ಕಾರ್ಯಕ್ಷಮತೆಯೊಂದಿಗೆ 2025ರ ಹಣಕಾಸು ವರ್ಷವನ್ನು ಪೂರ್ಣಗೊಳಿಸಿದೆ. ಈ ವಿಮಾನ ನಿಲ್ದಾಣವು 43.82 ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದ ದಕ್ಷಿಣ ಭಾರತದ ಮೊದಲ ಸಂಸ್ಥೆ.
ಎಸಿಐ ದೊಡ್ಡ ವಿಮಾನ ನಿಲ್ದಾಣ ವಿಭಾಗದಲ್ಲಿ ಸ್ಥಾನ ಗಳಿಸಿದ್ದು. 520,985 ಮೆಟ್ರಿಕ್ ಟನ್ ಸರಕುಗಳನ್ನು ಸಾಗಣೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನನಿಬಿಡ ಮತ್ತು ದೇಶದಲ್ಲಿ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಫೆಬ್ರವರಿ 2025 ರಲ್ಲಿ ಗಮನಾರ್ಹ ಮೈಲಿಗಲ್ಲನ್ನು ತಲುಪಿತ್ತು. ಇದು ಪ್ರಾರಂಭವಾದಾಗಿನಿಂದ 390 ದಶಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.
ಸರಕು ಸಾಗಣೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ ನಾಲ್ಕನೇ ವರ್ಷವೂ ಭಾರತದಲ್ಲಿ ಕೊಳೆಯುವ ಸರಕುಗಳನ್ನು ಸಂಸ್ಕರಿಸುವಲ್ಲಿ ನಂ. 1 ವಿಮಾನ ನಿಲ್ದಾಣವಾಗಿದೆ. ಬಿಐಎಎಲ್‌ನ ಬೆಳವಣಿಗೆಗೆ ಅದರ ಬಹುಪಾಲು ಖಾಸಗಿ ಪ್ರವರ್ತಕರಾದ ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಷನ್ ಶಕ್ತಿ ನೀಡುತ್ತಿದೆ. ಗಮನಾರ್ಹ ಹೂಡಿಕೆಯ ಮೂಲಕ, ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ರೂಪಾಂತರವನ್ನು ವೇಗಗೊಳಿಸುವಲ್ಲಿ ಫೇರ್‌ಫ್ಯಾಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ.
ಕಳೆದ ಮೂರು ವರ್ಷಗಳಲ್ಲಿ ಹ್ಯಾಟ್ರಿಕ್ ಐಸಿಸಿ (ICC) ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ (Team India) ಇದೀಗ ಸತತ 4ನೇ ಐಸಿಸಿ ಪ್ರಶಸ್ತಿ ಗೆಲುವಿನತ್ತ ಮಹತ್ವದ ಹೆಜ್ಜೆ ಇಟ್ಟಿದೆ. 2024 ರಲ್ಲಿ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದ ಭಾರತ, ಆ ಬಳಿಕ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ 2026 ರಲ್ಲಿ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಇನ್ನು ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಆ ಟ್ರೋಫಿಯನ್ನು ಬಾಚಿಕೊಳ್ಳಲು ಬಿಸಿಸಿಐ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವಕಪ್ ನಡೆಯಲು ಇನ್ನು ಒಂದು ವರ್ಷ ಇರುವಾಗಲೇ ಈ ಪಂದ್ಯಾವಳಿಗೆ ಬಿಸಿಸಿಐ, 20 ಆಟಗಾರರ ಪಟ್ಟಿಯನನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ 2027 ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಆತಿಥ್ಯದಲ್ಲಿ ನಡೆಯಲಿದೆ. ಹೀಗಾಗಿ 2023 ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಸೋತು ಟ್ರೋಫಿಯಿಂದ ವಂಚಿತವಾಗಿದ್ದ ಟೀಂ ಇಂಡಿಯಾ ಈ ಬಾರಿ ಶತಾಯಗತಾಯ ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿದೆ. ಹೀಗಾಗಿ ಈ ವರ್ಷ ಉಳಿದೆರಡು ಮಾದರಿಗಳಿಗಿಂತ ಏಕದಿನ ಮಾದರಿಯ ಮೇಲೆ ಬಿಸಿಸಿಐ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಏಕದಿನ ಸರಣಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ಲಾನ್ ರೂಪಿಸಿದೆ.
20 ಆಟಗಾರರ ಅಂತಿಮ ಪಟ್ಟಿ
ಇದೆಲ್ಲದರ ನಡುವೆ ಬಿಸಿಸಿಐ, ಮುಂಬರುವ ಏಕದಿನ ವಿಶ್ವಕಪ್ಗೆ 20 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಟೀಂ ಇಂಡಿಯಾದ ಆಯ್ಕೆ ಮಂಡಳಿ ಈಗಾಗಲೇ ಅಳೆದು ತೂಗಿ ಏಕದಿನ ವಿಶ್ವಕಪ್ಗೆ ತಂಡವನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ. ಇದರರ್ಥ, ಆಯ್ಕೆದಾರರು ಈಗಾಗಲೇ ಆಯ್ಕೆ ಮಾಡಿರುವ 20 ಆಟಗಾರರ ಮೇಲೆ ಮಾತ್ರ ಕಣ್ಣಿಡಲಿದ್ದಾರೆ. ಈ 20 ಆಟಗಾರರು ಆಡುವ ಐಪಿಎಲ್ ಆಗಲಿ, ಟಿ20 ಆಗಲಿ ಅಥವಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಾಗಲಿ ಅವುಗಳು ನಡೆಯುವ ಸಮಯದಲ್ಲಿ ಆಯ್ಕೆ ಮಂಡಳಿಯ ಸದಸ್ಯರು ಅಲ್ಲಿ ಹಾಜರಿದ್ದು, ಆ ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.
ಆಯ್ಕೆ ಮಂಡಳಿಗೆ ಮಹತ್ವದ ಜವಾಬ್ದಾರಿ
ಇದಕ್ಕೆ ಪೂರಕವೆಂಬಂತೆ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಈ ಲೀಗ್ ನಡೆಯುವ ಸಮಯದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಸದಸ್ಯರಾದ ಎಸ್ಎಸ್ ದಾಸ್, ಆರ್ ಪಿ ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ಈ 20 ಆಟಗಾರರನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ 20 ಆಟಗಾರರ ಪಂದ್ಯಗಳ ಸಮಯದಲ್ಲಿ ಈ ಆಯ್ಕೆದಾರರು ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ. ಕ್ರೀಡಾಂಗಣದಲ್ಲಿ ಮತ್ತು ಟಿವಿಯಲ್ಲಿ ಪಂದ್ಯಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಇವರಿಹಗೆ ವಹಿಸಲಾಗಿದೆ.
ವರದಿಯ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮುಂಬೈನಲ್ಲಿ ನಡೆಯುವ ಪಂದ್ಯಗಳ ಮೇಲೆ ಕಣ್ಣಿಟ್ಟರೆ, ಶಿವಸುಂದರ್ ದಾಸ್ ಕೋಲ್ಕತ್ತಾ, ಆರ್.ಪಿ. ಸಿಂಗ್ ಮತ್ತು ಅಜಯ್ ರಾತ್ರ ದೆಹಲಿಯಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಉಳಿದಂತೆ ಪ್ರಗ್ಯಾನ್ ಓಜಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಕೆಲವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ.
ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯವನ್ನು ವೀಕ್ಷಿಸಬೇಕೆಂದು ಬಿಸಿಸಿಐ ಆದೇಶಿಸಿದೆ ಎಂದು ವರದಿಯಾಗಿದೆ. ಹಾಗೆಯೇ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದರರ್ಥ ಈ ಐಪಿಎಲ್‌ನಲ್ಲಿ ಅಬ್ಬರಿಸುವ ಯಾವುದೇ ಆಟಗಾರನಿಗೆ (ಬಿಸಿಸಿಐ ಆಯ್ಕೆ ಮಾಡಿರುವ 20 ಆಟಗಾರರನ್ನು ಹೊರತುಪಡಿಸಿ) ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂಬುದು ಖಚಿತವಾದಂತ್ತಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು/ ರಾಯಚೂರು, ಮಾರ್ಚ್ 20:ಕೋತಿಯೊಂದು ಮಾಡಿದ ಕಿತಾಪತಿಗೆ ಓರ್ವ ಮೃತಪಟ್ಟಿದ್ದು ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್(65) ಘಟನೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದು, ಕೆಲಸ ಮುಗಿಸಿ ನಿನ್ನೆ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಹಲವರ ಜೊತೆ ಇವರ ಮೇಲೂ ದಾಳಿ ನಡೆಸಿತ್ತು.
ಬೈಕ್ನಲ್ಲಿ ಬರುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಲು ಆರಂಭಿಸಿದ ಕಾರಣ ಅವುಗಳಿಂದ ತಪ್ಪಿಸಿಕೊಳ್ಳಲು ವಿಜಯ್ ಪ್ರಕಾಶ್ ಹರಸಾಹಸ ಪಟ್ಟಿದ್ದರು. ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಐವತ್ತಕ್ಕೂ ಅಧಿಕ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆಯ ಸಾವಿಗೆ ಕಂಗಾಲಾಗಿರುವ ಮಗಳು ಕಣ್ಣೀರಿಟ್ಟಿದ್ದಾರೆ. ನಮ್ಮ ಅಪ್ಪನಿಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬಾರದಿರಲಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಳೆಗೆ ಮನೆ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ 14ನೇ ವಾರ್ಡ್ನಲ್ಲಿ ಮಹಿಳೆಯೋರ್ವರು ಮೃತಪಟ್ಟಿರುವ ಅಘಾತಕಾರಿ ಘಟನೆ ನಡೆದಿದೆ. ಈಶಮ್ಮ(60) ಮೃತಳಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಈಶಮ್ಮ ಮಸ್ಕಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.