ಕೊಪ್ಪಳ, ಮಾರ್ಚ್ 15: ಎಲ್‌ಪಿಜಿ ಬಿಕ್ಕಟ್ಟು ಇಡೀ ರಾಜ್ಯವನ್ನು ಕಾಡುತ್ತಿರುವ ಮಧ್ಯೆ ಕೊಪ್ಪಳದ ಗವಿಮಠ ಒಂದು ವಿಶಿಷ್ಟ ಪರಿಹಾರದೊಂದಿಗೆ ಮಾದರಿಯಾಗಿ ನಿಂತಿದೆ. ಗವಿಮಠದಲ್ಲಿ ಎಂದಿನಂತೆ ಅನ್ನಪ್ರಸಾದ ಸೇವೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಇಲ್ಲಿ ಶೇಕಡ 90ರಷ್ಟು ಅಡುಗೆಯನ್ನು ಸೌದೆ ಒಲೆಯಲ್ಲೇ ತಯಾರಿಸಲಾಗುತ್ತದೆ. ಪ್ರತಿದಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸೌದೆ ಒಲೆಯಲ್ಲಿಯೇ ಸಿದ್ಧಪಡಿಸಲಾಗುತ್ತದೆ. ಮಠದಲ್ಲಿ ಪ್ರತಿ ತಿಂಗಳು ಸುಮಾರು 10 ರಿಂದ 12 ಟ್ರ್ಯಾಕ್ಟರ್ ಸೌದೆಯನ್ನು ಅಡುಗೆಗಾಗಿ ಬಳಸಲಾಗುತ್ತದೆ. ಇದರಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಅಥವಾ ಬೆಲೆ ಏರಿಕೆ ಮಠದ ದಾಸೋಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಕ್ತರಿಗೆ ನಿತ್ಯ ಅನ್ನಪ್ರಸಾದ ಸೇವೆ ಲಭ್ಯವಿದೆ.
ಕೋಲಾರ, ಮಾರ್ಚ್ 15: ಗ್ಯಾಸ್ ಸಿಲಿಂಡರ್ (LPG Cylinder) ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಖಾಲಿ ಗ್ಯಾಸ್ ಹಿಡಿದು ಜನರು ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ಗಳನ್ನು ಪೂರೈಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಈ ಮಧ್ಯೆ ನಗದರಲ್ಲಿ ಹೋಟೆಲ್, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್ಗಳನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ.
ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. 2 ಬೇಕರಿ ಮತ್ತು 5ಕ್ಕೂ ಹೆಚ್ಚು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಮಾಲೀಕರು ವಾಣಿಜ್ಯ ಸಿಲಿಂಡರ್ ಬದಲು ಗೃಹಬಳಕೆ ಸಿಲಿಂಡರ್ ಬಳಸುತ್ತಿರುವುದು ಪತ್ತೆ ಆಗಿದೆ.
ಸದ್ಯ 21 ಸಿಲಿಂಡರ್ಗಳನ್ನು ವಶಕ್ಕೆ ಪಡೆದ ತಹಶೀಲ್ದಾರ್ ಸುಜಾತಾ ಎಚ್ಚರಿಕೆ ಕೂಡ ನೀಡಿದ್ದಾರೆ. ಇನ್ನು ದಾಳಿ ವೇಳೆ ಕೆಲವು ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಪತ್ತೆ ಆಗಿದೆ. ಹೀಗಾಗಿ ಸುರಭಿ ಹೋಟೆಲ್‌ನಲ್ಲಿ ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಹೋಟೆಲ್ಗಳು ಬಂದ್: ಆಲೂಗಡ್ಡೆ ಸೇಲ್ ಆಗದೇ ರೈತ ಕಂಗಾಲು
ಜಿಲ್ಲೆಯಲ್ಲಿ ರೈತರಿಗೆ ಯುದ್ಧ ಬಿಸಿ ಮುಟ್ಟಿಸಿದೆ. ಸಿಲಿಂಡರ್ ಅಭಾವದಿಂದ ಹೋಟೆಲ್ಗಳು ಬಂದ್ ಆಗಿರೋದ್ರಿಂದ, ತರಕಾರಿಗಳನ್ನ ತೆಗೆದುಕೊಳ್ಳೋರೇ ಇಲ್ಲ. 1,200 ರಿಂದ 1,300 ರೂ. ಇದ್ದ ಮೂಟೆ ಆಲೂಗಡ್ಡೆ, 500 ರಿಂದ 600 ರೂಪಾಯಿಗೆ ಕುಸಿತ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟಿನ್ ಮಹಿಳೆಯರು
ವಾಣಿಜ್ಯ ಸಿಲಿಂಡರ್ ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ. ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳೆಯರನ್ನ ಕೆಲಸಕ್ಕೆ ಬರಬೇಡಿ ಅಂತ ಗುತ್ತಿಗೆದಾರರು ಹೇಳಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಆಟೋ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಆಗಿದೆ. ಪ್ರತಿ ಲೀಟರ್ಗೆ 23 ರೂ. ಹೆಚ್ಚಳ ಮಾಡಿದ್ದು, 52 ರೂ. ಇದ್ದ ಲೀಟರ್ ಎಲ್‌ಪಿಜಿ, 75 ರೂಪಾಯಿ ಆಗಿದೆ. ಎಲ್‌ಪಿಜಿ ಹೆಚ್ಚಳ ಮಾಡಿದೆಎ ಪ್ರಯಾಣಿಕರು ಹೆಚ್ಚುವರಿ ಹಣ ಕೊಡ್ತಾರಾ ಅಂತ ಚಾಲಕರು ಕಿಡಿಕಾರುತ್ತಿದ್ದಾರೆ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ. ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ 81 ‘ಟ್ರೈನಿ ಎಂಜಿನಿಯರ್’ (Trainee Engineer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಏಪ್ರಿಲ್ 06 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ BE, B.Tech ಅಥವಾ B.Sc ಪದವಿ ಪೂರೈಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷದೊಳಗಿರಬೇಕು ಮತ್ತು ಆಯ್ಕೆಯಾದವರಿಗೆ ತಿಂಗಳಿಗೆ 50,000 ರಿಂದ 1,60,000 ರೂಪಾಯಿಗಳವರೆಗೂ ವೇತನ ದೊರೆಯಲಿದೆ.
ಅಭ್ಯರ್ಥಿಗಳ ಆಯ್ಕೆಯು ಮುಖ್ಯವಾಗಿ GATE-2024 ಅಥವಾ 2025 ರ ಅಂಕಗಳು, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. SC, ST, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ, ಆದರೆ ಇತರ ಅಭ್ಯರ್ಥಿಗಳು 708 ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
ಆಸಕ್ತರು ಏಪ್ರಿಲ್ 06 ರೊಳಗೆ NHPC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 15: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ 29ರವರೆಗೂ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಚುನಾವಣೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ದಿನಾಂಕಗಳನ್ನು ಪ್ರಕಟಿಸಿದರು. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರುತ್ತದೆ.
ಅಸ್ಸಾಮ್, ಕೇರಳ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ.
ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿ 17.4 ಕೋಟಿ ಮತದಾರರಿದ್ದಾರೆ. 2.19 ಲಕ್ಷ ಪೋಲಿಂಗ್ ಸ್ಟೇಷನ್ಗಳಿವೆ. 25 ಲಕ್ಷ ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 15: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕಿಮ್ಸ್ ಸಿಬ್ಬಂದಿ ಬೇಜವಾಬ್ದಾರಿ ತೋರಿರುವ ಕಾರಣ ಆತ ಬ್ರೈನ್ ಡೆಡ್ ಆಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಧಾರವಾಡದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಪ್ರಕಾಶ್ (25) ಮೃತರಾಗಿದ್ದು, ಜೆಸಿಬಿ ಚಾಲಕನಾಗಿ ಇವರು ಕೆಲಸಮಾಡಿಕೊಂಡಿದ್ದರು. ಮಾರ್ಚ್ 13ರಂದು ಕೆಲಸ ಮುಗಿಸಿ ಬೈಕ್ನಲ್ಲಿ ತಮ್ಮೂರಿಗೆ ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತವಾಹನ ಡಿಕ್ಕಿಯಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಕೂಡಲೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ ರಾತ್ರಿಯೇ ಪ್ರಕಾಶ್ರನ್ನು ಕಿಮ್ಸ್ಗೆ ಕರೆತರಲಾಗಿತ್ತು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರೂ ಕನಿಷ್ಠ ಚಿಕಿತ್ಸೆಯನ್ನೂ ನೀಡಿಲ್ಲ. ಬೆಡ್ ಇಲ್ಲವೆಂಬ ಕಾರಣ ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ.
ಆ್ಯಂಬುಲೆನ್ಸ್ನಿಂದ ಗಾಯಾಳುವನ್ನು ಕೆಳಗಿಳಿಸಲೂ ಸಿಬ್ಬಂದಿ ಬಾರದ ಕಾರಣ, ಅರ್ಧಗಂಟೆಗೂ ಹೆಚ್ಚು ಕಾದು ಬಳಿಕ ಅನಿವಾರ್ಯವಾಗಿ ಪ್ರಕಾಶ್ರನ್ನು ಮತ್ತೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅಷ್ಟರೊಳಗಾಗಿ ಅವರ ಬ್ರೈನ್ ಡೆಡ್ ಆಗಿದೆ. ಹೀಗಾಗಿ ಮರಳಿ ಮತ್ತೆ ಕಿಮ್ಸ್ಗೆ ಕರೆತರಲಾಗಿತ್ತಾದರೂ ಗಾಯಾಳು ಮಾತ್ರ ಬದುಕುಳಿಯಲಿಲ್ಲ. ಧಾರವಾಡ ಜಿಲ್ಲಾ ಆಸ್ಪತ್ರೆಯಿದ ಹುಬ್ಬಳ್ಳಿ ಕಿಮ್ಸ್, ಹುಬ್ಬಳ್ಳಿ ಕಿಮ್ಸ್ನಿಂದ ಧಾರವಾಡ ಖಾಸಗಿ ಆಸ್ಪತ್ರೆ ಓಡಾಟದಲ್ಲಿಯೇ ಎರಡು ಗಂಟೆಗೂ ಹೆಚ್ಚು ಸಮಯ ಹೋಗಿದ್ದರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪ್ರಕಾಶ್ ಬಾರದ ಲೋಕಕ್ಕೆ ಹೋಗಿದ್ದಾರೆ. ಹುಬ್ಬಳ್ಳಿ ಕಿಮ್ಸ್ನಲ್ಲಿಯೇ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಪ್ರಕಾಶ್ ಬದುಕುಳಿಯುತ್ತಿದ್ದರು. ಇಲ್ಲಿನ ಸಿಬ್ಬಂದಿ ಆತನನ್ನು ಬಲಿ ಪಡೆದಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಇತ್ತೀಚೆಗೆ ಕೆಲ ಡಿ ಗ್ರೂಪ್ ಸಿಬ್ಬಂದಿ ಹಾಗೂ ವೈದ್ಯರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತವರ ವಿರುದ್ದ ಮೇಲಾಧಿಕಾರಿಗಳು ಕಠೀಣ ಕ್ರಮ ಕೈಗೊಳ್ಳಬೇಕಿದ್ದು, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಜನರು ಕಿಮ್ಸ್ನ ಬಡವರ ಸಂಜೀವಿನಿ ಎಂದೇ ನಂಬಿರುವ ಕಾರಣ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ವಿಜಯಪುರ, ಮಾರ್ಚ್ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು.
ಈ ಸುಡು ಬೇಸಿಗೆಯಲ್ಲಿ (summer) ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಆಯಾಸ, ಸುಸ್ತು, ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿದರೂ ಬಿರು ಬೇಸಿಗೆಯಲ್ಲಿ ದೇಹ ಹೆಚ್ಚು ಬೆವರುವ ಕಾರಣ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಗಟ್ಟಲು ಈ ಕೆಲವು ಆಹಾರಗಳನ್ನು ಕೂಡ ತಪ್ಪದೆ ಸೇವನೆ ಮಾಡಬೇಕು.
ನಿರ್ಜಲೀಕರಣವನ್ನು ತಡೆಗಟ್ಟಲು ಸೇವಿಸಬೇಕಾದ ಆಹಾರಗಳು:
ನೀರನ್ನು ಮಾತ್ರ ಅವಲಂಬಿಸುವುದು ಅಪಾಯಕಾರಿ.
ಹಗುರವಾದ ಆಹಾರವನ್ನು ಸೇವಿಸಿ: ಬೇಸಿಗೆಯಲ್ಲಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಇವು ದೇಹದ ಉಷ್ಣತೆ ಮತ್ತು ಆಮ್ಲೀಯತೆಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ಬೆವರು ಹೆಚ್ಚಾಗುತ್ತದೆ. ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಹಸಿರು ತರಕಾರಿಗಳು, ಬೇಳೆಕಾಳುಗಳು, ಮಜ್ಜಿಗೆ ಮತ್ತು ಮೊಸರು ಇತ್ಯಾದಿ ಹಗುರ ಆಹಾರಗಳನ್ನು ಸೇವಿಸಿ.
ನಿಂಬೆ ನೀರು ಮತ್ತು ಎಳನೀರು: ನಿಂಬೆ ನೀರು ಮತ್ತು ಎಳ ನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದಲ್ಲದೆ, ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ. ಅವುಗಳ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಂಬೆ ನೀರು ಅಥವಾ ಎಳನೀರನ್ನು ಸೇವನೆ ಮಾಡಿ.
ಮೊಸರು: ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಸಲು ಮತ್ತು ನಿರ್ಜಲೀಕರಣವನ್ನು ತಪ್ಪಿಸಲು ನೀವು ಮೊಸರನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಲ್ಲದೆ ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿ ಸೇವಿಸುವುದರಿಂದಲೂ ದೇಹವು ತಂಪಾಗಿರುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.
ಹಣ್ಣುಗಳನ್ನು ಸೇವಿಸಿ: ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಮತ್ತು ಅನಾನಸ್‌ನಂತಹ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ತಾಜಾ ಹಣ್ಣಿನ ರಸವು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಪುದೀನ: ಪುದೀನವು ತನ್ನ ತ್ವರಿತ ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ಪುದೀನ ಜ್ಯೂಸ್, ಚಟ್ನಿ ಅಥವಾ ಡಿಟಾಕ್ಸ್ ಪಾನೀಯಗಳು ಬೇಸಿಗೆಯಲ್ಲಿ ಬಹಳ ಪ್ರಯೋಜನಕಾರಿ. ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ರಿಫ್ರೆಶ್ ಮಾಡುತ್ತದೆ.
ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ: ಚಹಾ, ಕಾಫಿ ಮತ್ತು ಆಲ್ಕೋಹಾಲ್ ದೇಹದ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಇವುಗಳ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ನವದೆಹಲಿ, ಮಾರ್ಚ್ 15: ಏಳನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಗಿದಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುತ್ತಿದೆ. ಎಂಟನೇ ವೇತನ ಆಯೋಗವು ಕೋಟ್ಯಂತರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂಬಳ, ಪಿಂಚಣಿ, ಭತ್ಯೆಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ. ಅಧಿಸೂಚನೆಯಾಗಿ 18 ತಿಂಗಳೊಳಗೆ ಆಯೋಗವು ತನ್ನ ಈ ಜವಾಬ್ದಾರಿಯನ್ನು ಮುಗಿಸಬೇಕಿದೆ. ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆ ಕುರಿದಂತೆ ಉದ್ಯೋಗಿಗಳು, ಪಿಂಚಣಿದಾರು, ಉದ್ಯೋಗಿಗಳ ಒಕ್ಕೂಟಗಳು ಮತ್ತಿತರ ಭಾಗೀದಾರರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. 2026ರ ಏಪ್ರಿಲ್ 30ರವರೆಗೂ ಆನ್ಲೈನ್ ಪೋರ್ಟಲ್ನಲ್ಲಿ ಈ ಸಲಹೆಗಳನ್ನು ಕಳುಹಿಸುವ ಅವಕಾಶ ಇರುತ್ತದೆ.
ಎಂಟನೇ ವೇತನ ಆಯೋಗದ ಕಾರ್ಯಾಚರಣೆ ನಿಯಮ ಅಥವಾ ಟರ್ಮ್ಸ್ ಆಫ್ ರೆಫರೆನ್ಸ್ಗೆ 2025ರ ನವೆಂಬರ್ 3ರಂದು ಅಧಿಸೂಚನೆ ಕೊಡಲಾಗಿದೆ. ಇದಾಗಿ 18 ತಿಂಗಳು ಎಂದರೆ 2027ರ ಏಪ್ರಿಲ್-ಮೇ ತಿಂಗಳೊಳಗೆ ಆಯೋಗವು ವೇತನ ನಿಗದಿಗೆ ಅಂತಿಮ ಸೂತ್ರಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
ದೇಶದಲ್ಲಿ ಸದ್ಯ ಸಕ್ರಿಯವಾಗಿರುವ 50 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿದ್ದಾರೆ. 69 ಲಕ್ಷ ಪಿಂಚಣಿದಾರರಿದ್ದಾರೆ. ಫಲಾನುಭವಿಗಳ ಸಂಖ್ಯೆ ಒಟ್ಟು 1.2 ಕೋಟಿಯಷ್ಟು ಆಗಬಹುದು.
ಎಂಟನೇ ವೇತನ ಆಯೋಗವು ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಬಹುದು?
ಎಂಟನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ಮಾಡಬಹುದಾದ ವೇತನ ಏರಿಕೆ ಶೇ. 20-35ರಷ್ಟು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ವೇತನ ಪರಿಷ್ಕರಣೆಯಲ್ಲಿ ಮುಖ್ಯ ಭಾಗವಾಗಿರುವುದು ಫಿಟ್ಮೆಂಟ್ ಫ್ಯಾಕ್ಟರ್. ಇದು 2.4ರಿಂದ 3.0 ಶ್ರೇಣಿಯಲ್ಲಿ ಇರಬಹುದು. ಮೂಲವೇತನ ಪರಿಷ್ಕರಣೆಗೆ ಆಧಾರವಾಗುವ ಈ ಫಿಟ್ಮೆಂಟ್ ಫ್ಯಾಕ್ಟರ್ ಹಲವು ಆರ್ಥಿಕ ಅಂಶಗಳನ್ನು ಆಧರಿಸಿರುತ್ತದೆ.
ಮುಂದಿನ 12-18 ತಿಂಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎಂಬಿತ್ಯಾದಿ ಆರ್ಥಿಕ ಅಂಶಗಳು ಎಂಟನೇ ವೇತನ ಆಯೋಗದ ಶಿಫಾರಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಬಾರಿ ಒಟ್ಟಾರೆ ವೇತನ ಹೆಚ್ಚಳ ಸುಮಾರು ಶೇ. 20-35ರಷ್ಟಿರಬಹುದು. 7ನೇ ವೇತನ ಆಯೋಗದಿಂದ ಶೇ. 23-25ರಷ್ಟು ಸಂಬಳ ಹೆಚ್ಚಳ ಆಗಿತ್ತು. ಅದಕ್ಕೂ ಹಿಂದಿನ 6ನೇ ವೇತನ ಆಯೋಗವು ಶೇ. 40ರಷ್ಟು ವೇತನ ಏರಿಕೆಗೆ ಶಿಫರಸು ಮಾಡಿತ್ತು.
ಹೆತ್ತವರಿಗೆ (parents) ಮಕ್ಕಳೇ ಪ್ರಪಂಚ. ಹೀಗಾಗಿ ಮಕ್ಕಳ ಸಂತೋಷಕ್ಕಾಗಿ ತಂದೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಇತ್ತ ಮಕ್ಕಳಿಗೂ ಕೂಡ ತಮ್ಮ ಹೆತ್ತವರ ಮೊಗದಲ್ಲಿನ ಖುಷಿ, ಸಂತೋಷ ಕಂಡು ಖುಷಿ ಪಡುತ್ತಾರೆ. ಇಲ್ಲೊಬ್ಬಳು ಮಗಳು ತನ್ನ ತಾಯಿಯ (mother) ಖುಷಿಯನ್ನು ಕಣ್ತುಂಬಿಸಿಕೊಂಡಿದ್ದಾಳೆ. ಮಹಿಳೆಯೊಬ್ಬಳು ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ಆಕೆಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಮಗಳ ಮುಂದೆ ತನ್ನ ಖುಷಿಯನ್ನು ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@venus_mathur ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಮಗಳು ವೀನಸ್ ಮಾಥುರ್, ನನಗೆ ಎಲ್ಲವನ್ನೂ ಕಲಿಸಿದ ಮಹಿಳೆ. ಇಂದು, ನನ್ನಿಂದ ಹೊಸದನ್ನು ಕಲಿತಳು. ಅವಳ ಮೊದಲ ಆನ್‌ಲೈನ್ ಪಾವತಿ ಎಂಬ ಶೀರ್ಷಿಕೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಬಳಿ, ತಾನು ಮೊದಲ ಬಾರಿಗೆ ಡಿಜಿಟಲ್ ಮೂಲಕ ಹಣವನ್ನು ಹೇಗೆ ಕಳುಹಿಸುವಲ್ಲಿ ಯಶಸ್ವಿಯಾದೆ. ತನ್ನನ್ನುಆ ಕ್ಷಣವೂ ಹೇಗೆ ಹೆಮ್ಮೆ ಪಡಿಸುವಂತೆ ಮಾಡಿತು ಎಂದು ವಿವರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ತಾನು ನಂಬರ್ ನಮೂದಿಸಿ ಯಶಸ್ವಿಯಾಗಿ ಪಾವತಿ ಮಾಡಿದ್ದೇನೆ ಎನ್ನುತ್ತಿದ್ದಂತೆ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿರುವ ಆಕೆಯ ಮಗಳು ಆಶ್ಚರ್ಯದಿಂದ ಪ್ರತಿಕ್ರಿಯಿಸುತ್ತಾ, “ಅರೆ ವಾಹ್” ಎಂದು ಹೇಳುತ್ತಾಳೆ. ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು ಎಂದು ತಾಯಿ ಹೇಳುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಮಗಳು ವಾವ್ ಸೂಪರ್ ಅಮ್ಮ ಎನ್ನುತ್ತಾಳೆ. ಇತ್ತೀಚಿನ ದಿನಗಳಲ್ಲಿ ತಾನು ಹೊಸ ಅನುಭವಗಳನ್ನು ಆನಂದಿಸಲು ಪ್ರಾರಂಭಿಸಿದ್ದೇನೆ. ಹೊಸದನ್ನು ಕಲಿಯುವುದರ ಬಗ್ಗೆ ತನಗೆ ಎಷ್ಟು ಹೆಮ್ಮೆ ಇದೆ ಎಂಬುದನ್ನು ಮಹಿಳೆ ಹೇಳುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ತಾಯಿ ಸ್ವತಂತ್ರರಾಗುವುದನ್ನು ನೋಡುವುದು ಅದೆಂತಹ ಅನುಭವ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅವಳ ಮುಖದಲ್ಲಿರುವ ಸಂತೋಷವನ್ನು ನೋಡಿ ಎಂದಿದ್ದಾರೆ. ಮತ್ತೊಬ್ಬರು, ಏನೋ ಸಾಧಿಸಿದೆ ಎನ್ನುವ ಭಾವ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವೆಂಕಟೇಶ್ವರನ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮತ್ತೊಂದು ಸಂತಸದ ಸುದ್ದಿ ನೀಡಿದೆ. ತಿರುಮಲದಲ್ಲಿ ಈಗಾಗಲೇ ಇರುವ ಅನ್ನಪ್ರಸಾದ ಕೇಂದ್ರಗಳ ಜೊತೆಗೆ, ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತೊಂದು ಬೃಹತ್ ಊಟದ ಹಾಲ್ ಮತ್ತು ಅಡುಗೆಮನೆ ಭಕ್ತರ ಸೇವೆಗೆ ಲಭ್ಯವಾಗಲಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶಯದಂತೆ, ಅನ್ನಪ್ರಸಾದ ವಿತರಣೆಯಲ್ಲಿ ಸಂಪೂರ್ಣ ಯಾಂತ್ರೀಕರಣ ಮತ್ತು ಆಧುನಿಕತೆಯನ್ನು ತರಲು ಟಿಟಿಡಿ ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಪ್ರತಿಷ್ಠಿತ ರಿಲಯನ್ಸ್ ಸಂಸ್ಥೆಯು ಸುಮಾರು 120 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ಘೋಷಿಸಿದ್ದು, ಈ ಮೂಲಕ ತಿರುಮಲದ ಅನ್ನದಾನ ಸೇವೆ ಹೊಸ ರೂಪ ಪಡೆಯಲಿದೆ.
ಕಳೆದ ವರ್ಷ ತಿರುಮಲಕ್ಕೆ ಭೇಟಿ ನೀಡಿದ್ದ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಭಕ್ತರ ಅನುಕೂಲಕ್ಕಾಗಿ ಈ ದೇಣಿಗೆಯನ್ನು ನೀಡುವ ಭರವಸೆ ನೀಡಿದ್ದರು. ಅದರಂತೆ ಈಗ 120 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ‘ಮೆಡ್ರಾನ್’ ಅಡುಗೆಮನೆ ಮತ್ತು ಅನ್ನಪ್ರಸಾದ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ತಾರಿಗೊಂಡ ವೆಂಕಮಾಂಬ ಅನ್ನಪ್ರಸಾದ ಕೇಂದ್ರವನ್ನು ಕೂಡ ಆಧುನೀಕರಿಸಲಾಗುತ್ತಿದ್ದು, ಏಕಕಾಲದಲ್ಲಿ 4 ಸಾವಿರ ಭಕ್ತರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸುತ್ತಿದೆ. ಆಧುನಿಕ ಅಡುಗೆಮನೆಯು ಆಹಾರ ತಯಾರಿಕೆಯಲ್ಲಿ ಗರಿಷ್ಠ ಶುಚಿತ್ವ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.
ಇತ್ತೀಚೆಗೆ ನಡೆದ ಟಿಟಿಡಿ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ಯೋಜನೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಈ ಹೊಸ ಕೇಂದ್ರದ ಸ್ಥಾಪನೆಯಿಂದಾಗಿ ತಿರುಮಲಕ್ಕೆ ಬರುವ ಭಕ್ತರು ಸಾಲಿನಲ್ಲಿ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲದೆ, ಅತ್ಯಂತ ಸುಸಜ್ಜಿತ ಪರಿಸರದಲ್ಲಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ