ಕೊಲ್ಲಂ, ಮಾರ್ಚ್ 15: ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಲ್ಲಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್‌ಸ್ಟರ್ ಅಲುವಾ ಅತುಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯ ಬಗ್ಗೆ ಹೊಸ ಕಳವಳ ವ್ಯಕ್ತವಾಗಿದೆ.2025 ರಲ್ಲಿ ನಡೆದ ಗ್ಯಾಂಗ್ ಲೀಡರ್ ಜಿಮ್ ಸಂತೋಷ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಅಲುವಾ ಅತುಲ್ ಇತ್ತೀಚೆಗೆ ಜಾಮೀನು ಪಡೆದಿದ್ದ.ಅತುಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಐದು ಜನರ ಗುಂಪು ಉದ್ದೇಶಪೂರ್ವಕವಾಗಿ ಆತನ ವಾಹನಕ್ಕೆ ತಮ್ಮ ವಾಹನ ಡಿಕ್ಕಿ ಹೊಡೆಸಿ, ಅಪಘಾತ ಮಾಡಿದಿ, ಬಳಿಕ ಕಾರನ್ನು ಸುತ್ತುವರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಗದಗ, ಮಾರ್ಚ್ 15: ಮನೆ ಮಗಳ ಮದುವೆಅಂದ್ರೆ ದೊಡ್ಡಪ್ಪ-ಚಿಕ್ಕಪ್ಪಂದಿರ ಸಮೇತ ಕುಟುಂಬಸ್ಥರೆಲ್ಲ ಸಂಭ್ರಮಿಸ್ತಾರೆ. ಪ್ರತಿಯೊಂದು ಕೆಲಸವನ್ನು ಖುದ್ದಾಗಿ ತಾವೇ ನಿಂತು ನಿಭಾಯಿಸುತ್ತಾರೆ. ಮನೆ ಮಗಳು ಹೋದ ಮನೆಯಲ್ಲಿಯೂ ಚೆನ್ನಾಗಿರಬೇಕೆಂಬ ಕಾರಣಕ್ಕೆ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆದರೆ ಗದಗದಲ್ಲಿ ಇವೆಲ್ಲದಕ್ಕೂ ತದ್ವಿರುದ್ಧ ಎಂಬ ಘಟನೆಯೊಂದು ನಡೆದಿದೆ. ಮಗಳ ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರರಿಂದಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.
ಹೌದು, ಗಿರೀಶಪ್ಪ ಆಲೂರು(47) ಮೃತ ದುರ್ದೈವಿ. ಮಗಳ ಮದುವೆ ವಿಚಾರವಾಗಿ ಫೆ.27ರಂದು ಸಹೋದರರಿಂದಲೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಇವರು ಚಿಕಿತ್ಸೆ ಫಲಿಸದೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಗಿರೀಶಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗಳಾದ ಪವಿತ್ರಾಳನ್ನು ಇತ್ತೀಚೆಗಷ್ಟೇ ಸಂಬಂಧದಲ್ಲಿಯೇ ಹುಡುಗನ ನೋಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಈ ಮದುವೆಗೆ ಗಿರೀಶಪ್ಪ ಸಹೋದರರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ತಮ್ಮನ ಮನೆಯಲ್ಲಿದ್ದ ತಂದೆ ತಾಯಿ ಆಶೀರ್ವಾದ ಪಡೆದು ಬಾರಮ್ಮ ಎಂದು ಗಿರೀಶಪ್ಪ ಮಗಳನ್ನು ಕಳುಹಿಸಿದ್ದ. ಮದುವೆ ವಿಷಯವಾಗಿ ನಮ್ಮನ್ನ ಕೇಳದವರು ಈಗ ಯಾಕೆ ಬಂದಿದ್ದು ಎಂದು ಈ ವೇಳೆ ಸಹೋದರರಾದ ಈರಣ್ಣ ಮತ್ತು ಶಿವಕುಮಾರ್ ಗಲಾಟೆ ತೆಗೆದಿದ್ದರು ಎನ್ನಲಾಗಿದೆ.
ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿಗಳು ಗಿರೀಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶಪ್ಪ ಮೇಲೆ ಬಾರುಕೋಲು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹೊಡೆತ ಏಟಿಗೆ ತಲೆ, ಕೈ, ಎದೆ, ಹೊಟ್ಟೆ ಸೇರಿ ಮೈತುಂಬ ಬಾಸುಂಡೆ ಬಂದಿತ್ತು. ಶಿವಕುಮಾರ್ ಆಲೂರು, ರತ್ನವ್ವ ಆಲೂರು, ಈರಣ್ಣ ಆಲೂರು ಮತ್ತು ಗೀತಾ ಆಲೂರು ಹಲ್ಲೆ ನಡೆಸಿರುವ ಆರೋಪಿಗಳು ಎನ್ನಲಾಗಿದ್ದು, ಘಟನೆಯಲ್ಲಿ ಗಿರೀಶಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಕೆಲಸ ಇರುವ ಹುಡುಗನಿಗೇ ಮಗಳನ್ನ ಕೊಟ್ಟು ಮದ್ವೆ ಮಾಡು ಎಂದು ಶಿವಕುಮಾರ್ ತಿಳಿಸಿದ್ದರೂ, ಸರ್ಕಾರಿ ಕೆಲಸದ ಹುಡುಗನಾದ್ರೆ ನಮ್ಮನ್ನ ನೋಡಲುಬರೋದಿಲ್ಲ ಎಂದು ಗಿರೀಶಪ್ಪ ವಾದಿಸಿದ್ದರು. ಕೊನೆಗೆ ತನ್ನಾಸೆಯಂತೆ ಸಂಬಂಧಿಕರಲ್ಲೇ ಮಗಳನ್ನ ಕೊಟ್ಟು ಮದುವೆ ಮಾಡಿದ್ದರು. ಆದರೆ ಅಂತಿಮವಾಗಿ ಅಣ್ಣ ಮಾತು ಕೇಳಲಿಲ್ಲ ಎಂಬ ಸಹೋದರ ಸಿಟ್ಟಿಗೆ ಗಿರೀಶಪ್ಪ ಅವರ ಪ್ರಾಣ ಪಕ್ಷಿಯೇ ಈಗ ಹಾರಿಹೋಗಿದೆ.
ಚಾಮರಾಜನಗರ, ಮಾರ್ಚ್ 15: ಒಂಟಿ ದಂತದ ಆನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಒಂಟಿ ಸಲಗನ ಏಟಿಗೆ ಕಬ್ಬಿಣದ ಗೇಟ್ ಛಿದ್ರವಾದ ಘಟನೆ ಚಾಮರಾಜನಗರದ ಗಡಿಗ್ರಾಮ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ. ವಾಹನವೊಂದು ಬರುತ್ತಿದ್ದನ್ನು ಕಂಡ ಒಂಟಿದಂತದ ಕಾಡಾನೆ ಸಲೀಸಾಗಿ ಗೇಟ್ ಮುರಿದು ತೋಟಕ್ಕೆ ನುಗ್ಗಿ ಬೆಳೆ ಮೇಯ್ದಿದೆ. ಕಾಡಾನೆ ಗೇಟ್ ಮುರಿದು ಒಳನುಗ್ಗುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ಕಾಡಾನೆ ತಲೆನೋವಾಗಿದೆ.
ರಾಮನಗರ, ಮಾರ್ಚ್ 15: ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆ ಅಡ್ಡಮತದಾನ ಭೀತಿ ನಡುವೆ ರಾಮನಗರ (Ramnagar)ಜಿಲ್ಲೆಯ ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಡಿಶಾ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಪಕ್ಷದ ನಾಯಕರು ಬೆಂಗಳೂರಿಗೆ ಕರೆತರಿದ್ದು, ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಇದೇ ವೇಳೆ ಶಾಸಕರನ್ನು ಖರೀದಿಸಲು ಅಪರಿಚಿತ ವ್ಯಕ್ತಿಗಳು ರೆಸಾರ್ಟ್‌ಗೆ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆ
ಬೆಳಗ್ಗೆ ವೇಳೆ ನಾಲ್ವರು ವ್ಯಕ್ತಿಗಳು ರೆಸಾರ್ಟ್‌ಗೆ ಬಂದು ಒಡಿಶಾದ ಒಬ್ಬ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಹಿಡಿದು ಇಟ್ಟಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಬಿರೇಂದ್ರ ಪ್ರಸಾದ್ ಎಂಬುವವರ ಹೆಸರಿರುವ ಚೆಕ್ ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಾಗಿ ಬಿರೇಂದ್ರ ಪ್ರಸಾದ್, ಅಜಿತ್ ಕುಮಾರ್ ಸಾಹು ಮತ್ತು ಸುಮಾಚಲ್ ಮಹಾಕೂದ ಎಂಬ ಹೆಸರುಗಳು ಕೇಳಿಬಂದಿವೆ.
ಘಟನೆಯ ಮಾಹಿತಿ ತಿಳಿದು ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ, ಮಾರ್ಚ್ 15: ಅಡ್ಡಬಂದ ಕಾರು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಬೆಳಗಾವಿಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್ನಲ್ಲಿದ್ದ 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಆಸ್ಪತ್ರೆಯ ಮುಂಭಾಗವೇ ಬಸ್ ಅಪಘಾತಕ್ಕೀಡಾಗಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿ20 ವಿಶ್ವಕಪ್ನ ರನ್ನರ್ ಅಪ್ ನ್ಯೂಝಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾಗಿದ್ದರು.
ಪರಿಣಾಮ 35 ರನ್ಗಳಿಸುವಷ್ಟರಲ್ಲಿ ನ್ಯೂಝಿಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೇಮ್ಸ್ ನೀಶಮ್ 26 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅತ್ತ ಅದಾಗಲೇ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಸೌತ್ ಆಫ್ರಿಕಾ ಬೌಲರ್ಗಳು ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಬೇಗನೆ ಪೆವಿಲಿಯನ್ಗಟ್ಟಿದರು.
ಈ ಮೂಲಕ ನ್ಯೂಝಿಲೆಂಡ್ ತಂಡವನ್ನು 14.3 ಓವರ್ಗಳಲ್ಲಿ 91 ರನ್ಗಳಿಗೆ ಆಲೌಟ್ ಮಾಡಿದರು. ಸೌತ್ ಆಫ್ರಿಕಾ ನ್ಕೊಬಾನಿ ಮೊಕೊಯೆನಾ 3.3 ಓವರ್ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರೆ, ಜೆರಾಲ್ಡ್ ಕೋಟ್ಝಿ 2 ವಿಕೆಟ್ ಕಬಳಿಸಿದರು. ಇನ್ನು ಕೇಶವ್ ಮಹಾರಾಜ್ ಹಾಗೂ ಒರ್ಟ್ನಿಲ್ ಬಾರ್ಟ್ಮನ್ ತಲಾ ಎರಡು ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.
ಇನ್ನು ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 16.4 ಓವರ್ಗಳಲ್ಲಿ 93 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
ಖ್ಯಾತ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ (Badshah) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದ್ದರೆ, ಮತ್ತೊಂದೆಡೆ ಕಾನೂನು ಕ್ರಮಗಳ ಅಡಿಯಲ್ಲಿ ಅವರ ಬಂಧನಕ್ಕೆ ಸಿದ್ಧತೆ ನಡೆಯುತ್ತಿದೆ. ಬಾದ್‌ಶಾ ಅವರ ಇತ್ತೀಚಿನ ‘ಟಟೀರಿ’ (Tateeree) ಹಾಡು ಈಗ ಅವರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ಹಾಡಿನಲ್ಲಿ ಹರಿಯಾಣದ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಅವರಿಗೆ ಪ್ರಾಣ ಬೆದರಿಕೆ (Death Threat) ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾದ ವ್ಯಕ್ತಿಯೊಬ್ಬ ಬಾದ್‌ಶಾಗೆ ಎಚ್ಚರಿಕೆ ನೀಡಿದ್ದಾನೆ. ‘ಗಾಯಕ ಬಾದ್‌ಶಾ, ನೀನು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಯತ್ನಿಸಿದೆ. 2024ರಲ್ಲಿ ನಿನ್ನ ಕ್ಲಬ್‌ನಲ್ಲಿ ನಾವು ಕೇವಲ ಟ್ರೈಲರ್ ತೋರಿಸಿದ್ದೆವು. ಆದರೆ ಈ ಬಾರಿ ನೇರವಾಗಿ ನಿನ್ನ ಹಣೆಗೆ ಗುಂಡಿಡುತ್ತೇವೆ’ ಎಂದು ಭಯಾನಕ ಸಂದೇಶ ರವಾನಿಸಲಾಗಿದೆ. ಈ ಪೋಸ್ಟ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ ಬಾದ್‌ಶಾ ಅವರಿಗೆ ಬಂಧನದ ಭೀತಿ ಎದುರಾಗಿದೆ. ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಕಠಿಣ ನಿಲುವು ತಳೆದಿದೆ. ಮಾರ್ಚ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೂ ಬಾದ್‌ಶಾ ಗೈರುಹಾಜರಾಗಿದ್ದರು. ಇದರಿಂದ ಕೆರಳಿದ ಮಹಿಳಾ ಆಯೋಗವು ಬಾದ್‌ಶಾ ಅವರ ಪಾಸ್‌ಪೋರ್ಟ್ ಜಪ್ತಿ ಮಾಡಲು ಪೊಲೀಸರಿಗೆ ಸೂಚಿಸಿದೆ.
ಅಲ್ಲದೇ, ಬಾದ್‌ಶಾ ಅವರನ್ನು ಕೂಡಲೇ ಬಂಧಿಸಲು ಹರಿಯಾಣ ಪೊಲೀಸರಿಗೆ ಮಹಿಳಾ ಆಯೋಗವು ನಿರ್ದೇಶನ ನೀಡಿದೆ. ಹರಿಯಾಣದ ಹೆಣ್ಣುಮಕ್ಕಳನ್ನು ಹಾಡಿನ ಮೂಲಕ ಅವಮಾನಿಸಲಾಗಿದೆ ಎಂದು ಆಯೋಗ ಕಿಡಿಕಾರಿದೆ. ಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಬಾದ್‌ಶಾ ಅವರ ಸುತ್ತ ಸಂಕಷ್ಟದ ಸುಳಿ ಸುತ್ತಿಕೊಂಡಿದೆ.
‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಹರಿಯಾಣದ ವಿದ್ಯಾರ್ಥಿನಿಯರು ಆಕ್ಷೇಪಾರ್ಹವಾಗಿ ಡ್ಯಾನ್ಸ್ ಮಾಡಿದ್ದಾರೆ ಹಾಗೂ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂತು. ಇದು ಹರಿಯಾಣದ ಸಂಸ್ಕೃತಿ ಹಾಗೂ ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಅನೇಕರು ದೂರಿದರು. ಈ ಹಾಡಿನ ಸಾಹಿತ್ಯ ಅಸಭ್ಯವಾಗಿದೆ ಎಂದು ಹಲವರು ದೂರು ನೀಡಿದ್ದರು. ಆ ಬಳಿಕ ಹಾಡನ್ನು ರಿಲೀಟ್ ಮಾಡಿದ ಬಾದ್‌ಶಾ ಅವರು ಕ್ಷಮೆ ಕೇಳಿದ್ದರು.
ಸಂಬಲ್ಪುರ, ಮಾರ್ಚ್ 15: ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟಮೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜಿಲ್ಲೆಯ ಬಮ್ರಾ ಬ್ಲಾಕ್‌ನ ಮಹುಲಿಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಗಿದಿಹಿ ಗ್ರಾಮದ ನಿವಾಸಿ ಸಂಜು ಮಡ್ಕಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸಂಜು ಮಡ್ಕಿ ಶುಕ್ರವಾರ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಬಾವಿಗೆ ಎಸೆದು ಕೊಂದಿದ್ದಾಳೆ ಎನ್ನಲಾಗಿದೆ. ನಂತರ ಪೊಲೀಸರು ಈ ಅಪರಾಧವನ್ನು ಮಕ್ಕಳ ತಾಯಿಯೇ ಮಾಡಿದ್ದಾರೆ ದೃಢಪಡಿಸಿದ್ದಾರೆ.
ಘಟನೆಯ ನಂತರ, ಮಹಿಳೆ ಗ್ರಾಮದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ, ಇದರಿಂದಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮಹಿಳೆಯ ಪತಿ ಮಹುಲಿಪಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು.
ಘಟನೆಯ ಕುರಿತು ಮಾತನಾಡಿದ ಕುಚಿಂಡಾದ ಎಸ್‌ಡಿಪಿಒ ಪ್ರದೀಪ್ ಕುಮಾರ್ ದಾಶ್, ದೂರು ದಾಖಲಾದ ಕೂಡಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು ಎಂದು ಹೇಳಿದರು. ಶನಿವಾರ ಬೆಳಗ್ಗೆ, ಸಂಜು ಮಡ್ಕಿ ಮತ್ತೊಂದು ಹಳ್ಳಿಯ ಒಂದು ನುಲ್ಲಾ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡರು ಮತ್ತು ದುರಂತ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ನಗರದ ರೆಸಾರ್ಟ್‌ನಲ್ಲಿ ತಂಗಿರುವ ಒಡಿಶಾ ಶಾಸಕರನ್ನು ಅಪರಿಚಿತ ವ್ಯಕ್ತಿಗಳು ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ನಡೆದ ಈ ಘಟನೆಯಲ್ಲಿ ಶಾಸಕರಿಗೆ ಐದು ಕೋಟಿ ರೂಪಾಯಿ ಮತ್ತು ಖಾಲಿ ಚೆಕ್‌ಗಳ ಆಮಿಷ ಒಡ್ಡಲಾಗಿತ್ತು. ಬೈತರಾಯನಪುರದ ಸುರೇಶ್ ಎಂಬುವರ ಸಹಾಯದಿಂದ ಆನ್‌ಲೈನ್‌ನಲ್ಲಿ ರೆಸಾರ್ಟ್‌ನಲ್ಲಿ ಕೊಠಡಿ ಕಾಯ್ದಿರಿಸಿ ಈ ವ್ಯಕ್ತಿಗಳು ಶಾಸಕರನ್ನು ಭೇಟಿ ಮಾಡಿದ್ದರು. ಶಾಸಕರು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ಮುಖಂಡರು ನಾಲ್ವರಲ್ಲಿ ಇಬ್ಬರನ್ನು ಹಿಡಿದಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳು ತಮ್ಮ ಉದ್ದೇಶವನ್ನು ಒಪ್ಪಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ದಾಖಲಿಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ದಾವಣಗೆರೆ, ಮಾರ್ಚ್ 15: ದಾವಣಗೆರೆಯಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳು ಪರಸ್ಪರ ಹಾರ ಬದಲಿಸಿಕೊಂಡು ಮತ್ತೆ ಒಂದಾಗಿ ಬಾಳಲು ನಿರ್ಧಾರ ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾದ ಈ ಮಹತ್ವದ ವಿದ್ಯಮಾನಕ್ಕೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ.ವೇಲಾ ಅವರು ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಂಗ ಅಧಿಕಾರಿಯೊಬ್ಬರು, ಈ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ರಾಷ್ಟ್ರೀಯ ಲೋಕ ಅದಾಲತ್‌ಗಳ ಜವಾಬ್ದಾರಿಯನ್ನು ನಿಭಾಯಿಸಿ, ಅಂದಾಜು 500 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ